ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ನವ ತಲ್ಲಣದ ಕಾವ್ಯಜಹಜು

Last Updated 24 ಜುಲೈ 2021, 19:30 IST
ಅಕ್ಷರ ಗಾತ್ರ

ಆಧುನಿಕ ಕನ್ನಡದ ಕಾವ್ಯಕ್ಕೆ ಒಂದು ವಿಶಿಷ್ಟ ದಿಕ್ಕನ್ನು ಸೂಚಿಸಿದ ಕವಿಗಳಲ್ಲಿ ಶಿವಪ್ರಕಾಶರೂ ಒಬ್ಬರು. ಅವರು ಬರೆಯಲು ಪ್ರಾರಂಭ ಮಾಡಿದ ವೇಳೆಯಲ್ಲಿ ಒಂದು ಕಡೆಗೆ ಅಡಿಗರು, ಲಂಕೇಶ್, ಅನಂತಮೂರ್ತಿಯವರು ಇದ್ದರು. ಮತ್ತೊಂದು ಕಡೆಯಲ್ಲಿ ದಲಿತ ಲೇಖಕರು ತಮ್ಮ ನಿಲುವನ್ನು ಹೇಳಿದ್ದರು. ಎಡ ಮತ್ತು ಬಲ ಎನ್ನುವ ವರ್ಗೀಕರಣವೂ ಇತ್ತು. ವಸಾಹತುಶಾಹಿಯ ಪ್ರಭಾವವನ್ನು ಹೇಗೆ ಮೀರುವುದು ಎನ್ನುವ ಪ್ರಶ್ನೆಯು ವೈಚಾರಿಕರನ್ನು ಕಾಡಲು ತೊಡಗಿತ್ತು. ಪುರಾಣ, ಐತಿಹ್ಯ, ನಂಬಿಕೆಗಳು ಆಧುನಿಕ ವಿಚಾರವಾದಿಗಳಿಗೆ ಪಥ್ಯವಾಗಲಿಲ್ಲ. ಇನ್ನೊಂದೆಡೆ, ಇವುಗಳಲ್ಲಿ ಸ್ಥಳೀಯತೆಯ ನೋಟದ ಹುಡುಕಾಟವೂ ಆರಂಭ
ವಾದ ಹೊತ್ತಿನಲ್ಲಿ ಶಿವಪ್ರಕಾಶರು ‘ಸಮಗಾರ ಭೀಮವ್ವ’
ಕವಿತೆಯನ್ನು ಬರೆದರು. ಸಿದ್ಧ ಜಾಡಿನಲ್ಲಿ ಹೋಗುತ್ತಿದ್ದ ಕನ್ನಡ ಕಾವ್ಯಕ್ಕೆ ಹೊಸ ಲಯವನ್ನು ನೀಡಿದ ಕವಿತೆಯಿದು. ಈ ಮೂಲಕ ಹೊಸದಾದ ತಾತ್ವಿಕ ಆಯಾಮವನ್ನೂ ಸೂಚಿಸಿದವರು ಅವರು. ಪರಂಪರೆಯ ಜೊತೆಗಿನ ಭಿನ್ನ ಒಡನಾಟದ ದಾರಿ ಅವರದು.

‘ಯಾವ ಶಹರು ಯಾವ ಬೆಳಕು’ ಎಂಬ ಅವರ ಹೊಸ ಕವನ ಸಂಕಲನದಲ್ಲಿ ನಾವು ಕಾಯುತ್ತಿದ್ದ ಶಿವಪ್ರಕಾಶ್ ಮತ್ತೆ ಬಂದಿದ್ದಾರೆ:

ಎಲ್ಲಾ ಕಾಣಿಸುತ್ತಿದೆ ನನಗೆ

ನೀವು ಕೇಳುತ್ತೀರಿ ನನ್ನನ್ನು

ಯಾವ ಪಾಪಿಯ ಪಾಪ

ಈ ರೋಗ, ರುಜಿನ, ಕ್ಷಾಮ, ಡಾಮರದ ಶಾಪ ಕೊಟ್ಟಿದೆ

ಈ ನೆಲಕ್ಕೆ ಜನ- ಜಾನುವಾರುಗಳಿಗೆ, ಮರ, ಗಿಡ, ಸಸಿಗಳಿಗೆ (ಥೀಬ್ಸ್ ನಗರಸ್ಥರಿಗೆ ತೈರ್ಸಿಯೆಸ್ ನೀಡಿದ ಎಚ್ಚರಿಕೆ)

‘ಮಲಗು ಮಲಗವ್ವ ನನ ಮನಸೆ ಮಲಗು’
(ಜೋಗುಳ), ‘ಜೀವ ಜೀವ ತಬ್ಬಲಿ ಇನ್ನಿರದ ಹಾಗೆ ತಬ್ಬಲಿ’ (ಸೋಕು) ಎನ್ನುವಲ್ಲಿ ಕವಿತೆಯ ಆಶಯವೇ ಕವಿತೆಯ ಲಯವೂ ಆಗಿ ಹೊಮ್ಮುತ್ತದೆ. ಇಂದು ಇರುವುದೇನು? ಮತ್ತು ನಾವು ಜಗತ್ತನ್ನು ನೋಡಬೇಕಿರುವುದು ಹೇಗೆ ಎಂಬ ತಲ್ಲಣ ಇಲ್ಲಿದೆ. ಉದ್ವಿಗ್ನತೆ (ಕಾಡಿಗೋದ ಪುಟ್ಟಿ), ವಿಷಾದ (ತವರು), ಅಗಲುವಿಕೆ(ಯಾವ್ಯಾವ ರೂಪವನ್ನು ನಾನು ತಾಳಿದ್ದರೆ), ನೋವು (ಕಪ್ಪು ನದಿ) ಮುಂತಾದ ಬಹುಮುಖ್ಯ ಕವಿತೆಗಳು ಇಲ್ಲಿವೆ. ನಾವು ಮತ್ತೆ ಮತ್ತೆ ಶಿವಪ್ರಕಾಶರ ಕವಿತೆಗಳಿಗೆ ಕಾಯುತ್ತೇವೆ. ಕವಿತೆಗಳಿಗೆ ಕಾಯುವಂತೆ ಮಾಡುವ ಕವಿಗಳು ತುಂಬಾ ಕಡಿಮೆ.

ಈ ಸಂಕಲನದಲ್ಲಿ ಅವರು ನಡೆಸುತ್ತಿರುವ ಒಂದು ಅಪೂರ್ವ ಹುಡುಕಾಟವು ಕೂಡಾ ಗಮನ ಸೆಳೆಯುವ ಮಾದರಿಯಲ್ಲಿ ಇದೆ. ಈ ಹುಡುಕಾಟದಲ್ಲಿ ಪರಂಪರೆ ಇದೆ. ಪೂರ್ವ ಮತ್ತು ಪಶ್ಚಿಮದ ಚಿಂತನೆಗಳ ಸಮನಾದ ಒಂದು ಎರಕವೂ ಇದೆ. ಆದ್ದರಿಂದಲೇ ಇಲ್ಲಿನ ಕವಿತೆಗಳಿಗೆ ಸ್ಥಳದ ಹಂಗುಗಳು ಇಲ್ಲ. ಕಾಲವೂ ಮುಖ್ಯವಲ್ಲ. ಅವುಗಳನ್ನಿವು ಮೀರಿವೆ. ಅವರ ಈ ಹಿಂದಿನಸಂಕಲನಗಳಲ್ಲಿ ಸ್ಥಳ, ಕಾಲವು ಅತ್ಯಂತ ಮುಖ್ಯವಾಗಿದ್ದವು. ಜಾತಿ, ಮತ, ಸ್ಥಳ ಅವರಿಗೆ ಮುಖ್ಯವಲ್ಲ. ಈ ಹೊತ್ತು ಚರಿತ್ರೆಯ ಗತಿ ಬದಲಾಗಿದೆ. ಆದ್ದರಿಂದಈ ಹೊತ್ತು ನಮ್ಮ ಆಯ್ಕೆಗಳಲ್ಲಿ ವ್ಯತ್ಯಾಸಗಳಾಗಿವೆ. ವಸಾಹತೋತ್ತರ ಕಾಲದ ಅಭಿವ್ಯಕ್ತಿಯು ಇನ್ನೂ ಭಿನ್ನವಾಗಿದೆ. ‘ಕಳಚಿಡು ನಿನ್ನ ಜೋಡು’ಗಳನ್ನು ಈ ದೃಷ್ಟಿಯಿಂದ ಅತ್ಯಂತ ಮಹತ್ವದ ಕವಿತೆಯೂ ಹೌದು. ವರ್ತಮಾನವು ಹೇಗೆ ಇದೆ ಎಂದು ಹೇಳುವುದು ಮತ್ತು ಭೂತಕಾಲವನ್ನು ನಿರೂಪಿಸುವುದು ಇಲ್ಲಿ ಜೊತೆಯಾಗಿವೆ. ಅದರ ಜೊತೆಗೆ ಆಧುನಿಕ ಸಾಂಸ್ಕೃತಿಕ ವಲಯವು ಕೆಲವನ್ನು ಖಾಲಿಯಾಗಿಯೂ ಬಿಟ್ಟಿದೆ. ಖಾಲಿಯಾದ ಜಾಗವನ್ನು ಶಿವಪ್ರಕಾಶರು ಹೊಸ ನುಡಿಗಳ ಮೂಲಕ ಕಟ್ಟಿಕೊಡುತ್ತಿದ್ದಾರೆ. ಇದನ್ನೇ ಕೆಲವು ವಿಮರ್ಶಕರು ಮೂರನೆಯ ಜಾಗ ಎಂದು ಹೇಳುತ್ತಾರೆ. ಅಲ್ಲಿ ನಿಂತು ಜಗತ್ತನ್ನು ನೋಡುತ್ತಿದ್ದಾರೆ. ಆ ಮೂಲಕ ಅವರು ಸದ್ಯವನ್ನು ದಾಟಿದ್ದಾರೆ ಎನ್ನುವುದಕ್ಕೆ ‘ಎಷ್ಟು ದೂರ ಹೋಗಬೇಕು ನಿನ್ನ ತೀರದಿಂದ’ ಒಂದು ಸಾಕ್ಷಿ ಮಾತ್ರ. ಅವರ ‘ಗಡಂಗು’ ಪದ್ಯವು ಲೌಕಿಕವನ್ನು ಅತ್ಯಂತ ಸಮರ್ಥವಾಗಿ ಮಂಡಿಸುತ್ತದೆ. ಈ ಮಾದರಿಯ ಪದ್ಯಗಳು ಶಿವಪ್ರಕಾಶರಲ್ಲಿ ಲೌಕಿಕವನ್ನು ನೋಡುವ ಮಾರ್ಗವಾಗುತ್ತವೆ.

‘ಮಗಳಿಗೆ ಪಾಠ1’ರ ಆಪ್ತವಾದ ನಿಲುವು ಈ ಸನ್ನಿವೇಶಕ್ಕೆ ಹೊಂದುವಂತಹುದು. ಸಮಾಜವು ಅನೇಕ ವೈರುದ್ಧ್ಯಗಳನ್ನು ಒಳಗೊಂಡಿದೆ. ಅದು ಕವಿಗೆ ಗೊತ್ತು. ಈ ಸಂಕಲನದ ವಿವಿಧ ಕವಿತೆಗಳು ವಿವಿಧ ಸಾಮಾಜಿಕ ಸಂಗತಿಗಳನ್ನು ಹೇಳುತ್ತವೆ. ‘ಬುದ್ಧ’, ‘ಅಂಬೇಡ್ಕರರ ನೆನಪುಗಳು’, ‘ಎಲ್ಲಿ ಬೇಕಾದರೂ ಆಗಬಹುದು’ ಎನ್ನುವ ವಾಸ್ತವದ ಸ್ಥಿತಿ, ಥೀಬ್ಸ್ ನಗರ, ಗ್ರೀಕ್ ಪ್ರೇಮ ಕವಿತೆ ಮುಂತಾದವು ಭೂಗೋಲದ ಪರಿವರ್ತನೆಗಳನ್ನು ಹೇಳುತ್ತವೆ. ಅದರ ಜೊತೆಗೆ ‘ಹೋಗಲು ಬಿಡು’ ವಿಷಾದವನ್ನು ಸೂಚಿಸುತ್ತದೆ. ‘ಗೊತ್ತಾಗಿದೆ ಈಗ ನನಗೆ’ ಮನುಷ್ಯನು ನಡೆಯಬೇಕಾದ ದಾರಿಯನ್ನು ನಿರೂಪಿಸುತ್ತದೆ.

ಇವೆಲ್ಲ ಒಂದು ಬಗೆಯಲ್ಲಿ ಇದ್ದರೆ ಮತ್ತೊಂದು ಕಡೆಯಿಂದ ಇವತ್ತಿನ ಸೃಜನಶೀಲ ಬಿಕ್ಕಟ್ಟುಗಳು ಶಿವಪ್ರಕಾಶರಿಗೆ ಅತ್ಯಂತ ಮುಖ್ಯವಾದದ್ದು ಎಂದು ಅನಿಸಿದೆ. ‘ಏಳು ಶಿವಪ್ರಕಾಶ ಏಳು’ (ಇದು ಸ್ವಲ್ಪ ದುರ್ಬಲವಾದ ಕವಿತೆಯೂ ಹೌದು), ‘ಯಾಕೆ ಕವಿತೆ ಬರೆಯುವೆ’ ಮತ್ತೊಂದು ಬಗೆಯವು. ಕಾವ್ಯ ಎನ್ನುವುದು ಒಂದು ತಾತ್ವಿಕ ಆಯ್ಕೆ. ‘ಬರುತ್ತೇನೆ ನಗರವೇ’ ಎನ್ನುವ ಕವಿತೆಯು ಇದನ್ನು ಹೇಳುತ್ತದೆ. ಈ ಸಂಕಲನದಲ್ಲಿ ನಗರವನ್ನು ಕೇಂದ್ರ ಮಾಡಿದ್ದು, ನಗರ ಎನ್ನುವುದು ಹೇಗೆ ಒಂದು ಮಾಯಕದ ಲೋಕವನ್ನು ಹೇಳುತ್ತದೆ, ಅದರಿಂದ ನಾನು ಹೇಗೆ ಬಿಡಿಸಿಕೊಳ್ಳುತ್ತೇನೆ ಎನ್ನುವುದು ‘ವಿದಾಯ’ಕ್ಕೆ ವಿಶಿಷ್ಟ ಅರ್ಥವನ್ನು ಕೊಡುತ್ತದೆ. ಲೌಕಿಕ ಮತ್ತು ಆಗಮಿಕದ ನಡುವೆ ಸುತ್ತಾಟ, ಅಲ್ಲಮ ಮತ್ತು ಬುದ್ಧರೆಡೆಗಿನ ಪ್ರೀತಿ ಹಾಗೂ ಈ ನೆಲದ ತಿಳಿವಳಿಕೆಗಳ ಒಡನಾಟಗಳಿಂದ ಹುಟ್ಟಿಕೊಳ್ಳುವ ಅವರ ಕವಿತೆಗಳ ಸಾಂಸ್ಕೃತಿಕ ಆಯಾಮವು ಎಲ್ಲ ಕಾಲಕ್ಕೂ ಮಹತ್ವದ್ದೇ ಆಗಿದೆ.

ಯಾವ ಶಹರು ಯಾವ ಬೆಳಕು

ಲೇ: ಎಚ್‍.ಎಸ್. ಶಿವಪ್ರಕಾಶ್‌

ಪ್ರ: ಅಂಕಿತ ಪುಸ್ತಕ

ಸಂ: 080–26617100

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT