ಭಾನುವಾರ, ಮೇ 31, 2020
27 °C

ಮತ್ತೆ ಅಸ್ಮಿತೆಯಹುಡುಕುತ್ತ..

ರಶ್ಮಿ ಎಸ್‌. Updated:

ಅಕ್ಷರ ಗಾತ್ರ : | |

Prajavani

ಒಂದು ಕಾಲವಿತ್ತು, ಮದುವೆಯ ನಂತರ ಮಹಿಳೆಯರ ಕೆರಿಯರ್ ಮುಗಿಯಿತು ಎಂಬಂತೆ. ಇದಕ್ಕೆ ಸೆಡ್ಡು ಹೊಡೆದಂತೆ ಕೆರಿಯರ್‌ನ ನಂತರವೇ ಮದುವೆ ಎಂದು ವಿಳಂಬ ಮದುವೆಗಳಾಗತೊಡಗಿದವು. ಇದೀಗ ಹೊಸತೊಂದು ಯುಗ. ಒಂದು ಬ್ರೇಕ್‌ ತೊಗೊಂಡು, ಮತ್ತೆ ಕೆರಿಯರ್‌ನ ಓಟಕ್ಕೆ ಸಿದ್ಧರಾಗಿದ್ದಾರೆ. ನಿಧಾನವೇ ಪ್ರಧಾನವೆಂಬಂತೆ ಯಶಸ್ಸು ಇವರಿಗೆ ಒಲಿಯುತ್ತಿದೆ.

ಶೈಲಶ್ರೀ ‌ಶ್ರೀವತ್ಸ ಭರತನಾಟ್ಯ ಕಲಾವಿದೆ. ಮೈಸೂರು ಶೈಲಿಯಲ್ಲಿ ಕಲಿತು ವಿದುಷಿಯಾದವರು. ಮದುವೆಯ ನಂತರ ಮನೆಯಲ್ಲಿ ಕಲೆಗೆ ಪ್ರೋತ್ಸಾಹವಿತ್ತು. ಆದರೆ ಮಗು, ಮಗುವಿನ ಲಾಲನೆ ಪಾಲನೆ, ಶಾಲೆ ಹೀಗೆ ಒಂದೇಳು ವರ್ಷಗಳು ಉರುಳಿ ಹೋಗಿದ್ದವು. ನಂತರ ಒಂದು ದಿನ ಮತ್ತೆ ಈ ಹುಕಿ ಹುಟ್ಟಿತು. ಹೆಜ್ಜೆಗಳು ಮಾತಾಡತೊಡಗಿದವು. ಮನಸು ಮುಂದೋಡತೊಡಗಿತ್ತು. ದೇಹ ಅಸಹಕಾರ ತೋರುತ್ತಿತ್ತು. ಆಗಲೇ ಅವರಿಗದು ಅರಿವಾಯ್ತು. ಇನ್ನು ಮುಂದೂಡಿದರೆ ನೃತ್ಯವೆಂಬುದು ಭೂತಕಾಲವಾಗಲಿದೆ ಎಂದೆನಿಸಿದ್ದೇ ತಡ, ಮೈಕೊಡವಿಕೊಂಡು ಎದ್ದರು. ಮತ್ತೆ ತರಗತಿಗೆ ಹೋಗಲಾರಂಭಿಸಿದರು.

ಹೋಮಿಯೊಪಥಿ ವೈದ್ಯೆಯಾಗಿರುವ ಶೈಲಶ್ರೀಗೆ ನೃತ್ಯವೆಂಬುದು ನರನಾಡಿಗಳಲ್ಲಿ ಹರಿದಾಡುತ್ತಿದೆಯೆಂದೆನಿಸಿದ್ದೇ ವಿದ್ವತ್‌ ಪರೀಕ್ಷೆಗೆ ತಯಾರಿ ಆರಂಭಿಸಿದರು. ದಿನಕ್ಕೆ ನಾಲ್ಕಾರು ಗಂಟೆಗಳ ಅಭ್ಯಾಸ, ಅಧ್ಯಯನ ಇವೆಲ್ಲವೂ ವಿದುಷಿ ಎಂಬ ಪದವಿ ಅವರ ಹೆಸರನ್ನು ಅಲಂಕರಿಸಿತು.

2011ರಲ್ಲಿ ನಾಟ್ಯಶೈಲಿ ನೃತ್ಯ ಶಾಲೆ ಆರಂಭಿಸಿದರು. ಇವರಿಗೆ ಜೊತೆಯಾದವರು ವಿದುಷಿ ಲೀಲಾಂಬ. ಅವರದ್ದೂ ಹೆಚ್ಚೂ ಕಡಿಮೆ ಇದೇ ಕಥೆ.  ಇನ್ನೇನು ಸಪ್ತಸಾಗರದಾಚೆ ಹೆಜ್ಜೆ ಹಾಕಿ ಬರಬೇಕೆನ್ನುವಾಗಲೇ ಜೀವಾಂಕುರದ ಸಂಭ್ರಮ ಅವರ ಪಾಲಿಗಿತ್ತು. ನಂತರ 10–12 ವರ್ಷ ಮನೆ, ಮಗು ಇವುಗಳಲ್ಲಿ ಕಳೆದೇಹೋದರು. ಎಲ್ಲಿಯಾದರೂ ನೃತ್ಯ ಕಾರ್ಯಕ್ರಮಗಳನ್ನು ನೋಡಿದಾಗ, ನೃತ್ಯಾಂಗನೆಯರನ್ನು ಕಂಡಾಗ, ಅವರನ್ನೇ ಹುಡುಕುವಂತಾಗುತ್ತಿತ್ತು. ಆಸಕ್ತಿ, ಆಕಾಂಕ್ಷೆಯಾಗತೊಡಗಿತ್ತು. ಕಲಿತ ವಿದ್ಯೆಯ ಋಣ ಕಲಿಸಿ ತೀರಿಸುವ ಎಂದೆನಿಸಿದಾಗ ಅವರೂ ಇದೇ ಶಾಲೆಯನ್ನು ಸೇರಿದರು.

ಕೇವಲ ಇಬ್ಬರು ವಿದ್ಯಾರ್ಥಿನಿಯರಿಂದ ಆರಂಭವಾದ ನಾಟ್ಯಶೈಲಿ ಶಾಲೆಯಲ್ಲಿ ಇದೀಗ 100 ಜನ ವಿದ್ಯಾರ್ಥಿನಿಯರಿದ್ದಾರೆ. ಜೂನಿಯರ್‌, ಹಾಗೂ ಸೀನಿಯರ್ ಪರೀಕ್ಷೆ ಬರೆಯುತ್ತಾರೆ. ಇವರಂತೆಯೇ ಬಿಡುವು ತೆಗೆದುಕೊಂಡವರು, ಇವರನ್ನು ಕಂಡು ಮತ್ತೆ ತಮ್ಮ ಆಸಕ್ತಿ, ಅಭಿರುಚಿಯಲ್ಲಿಯೇ ಅಸ್ಮಿತೆಯನ್ನು ಹುಡುಕಿಕೊಂಡು ಬರುತ್ತಿದ್ದಾರೆ. ತಮ್ಮನ್ನೇ ತಾವು ಅದರಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

ಮೈಸೂರು ದಸರಾ, ತಿರುಪತಿ ದೇವಸ್ಥಾನ, ಗುರುವಾಯೂರು ಮುಂತಾದ ಪ್ರತಿಷ್ಠಿತ ವೇದಿಕೆಗಳಲ್ಲಿ ತಮ್ಮ ಶಿಷ್ಯವೃಂದದೊಡನೆ ಇವರು ನೃತ್ಯ ಪ್ರಸ್ತುತಪಡಿಸಿದ್ದಾರೆ.

ಯಾವುದೇ ಕಲೆಯಾಗಲಿ, ಮನುಷ್ಯರನ್ನು ಮಾನವರನ್ನಾಗಿ ಪರಿವರ್ತಿಸುತ್ತದೆ. ಅಪಾರವಾದ ಸೈರಣೆ ತಂದು ಕೊಡುತ್ತದೆ. ಮಕ್ಕಳೊಟ್ಟಿಗೆ ಬೆರೆತು ಕಲಿಸುವಾಗ ನಮ್ಮನ್ನು, ನಮ್ಮ ಕಷ್ಟಗಳನ್ನು, ಮತ್ತೆಲ್ಲ ಚಿಂತೆಗಳನ್ನೂ ಮರೆಯುತ್ತೇವೆ. ಹೆಜ್ಜೆಗಳೇ ನಾವಾಗುತ್ತೇವೆ. ಅದೊಂದು ಧ್ಯಾನಸ್ಥ  ಸ್ಥಿತಿ. ಆ ಸ್ಥಿತಿಯಲ್ಲಿ ನಾವೇ ನಾಟ್ಯವಾಗುತ್ತೇವೆ. ನಮ್ಮ ಅಸ್ಮಿತೆ ಅಲ್ಲಿ ಅರಳುತ್ತದೆ. ಹಾಗಾಗಿ ಮಹಿಳೆಯರು ಮನೆ, ಮಕ್ಕಳು ಮುಂತಾದ ಜವಾಬ್ದಾರಿಗಳನ್ನು ನಿಭಾಯಿಸುತ್ತಲೂ, ನಿಭಾಯಿಸಿದ ನಂತರವೂ ತಮ್ಮ ಕೆರಿಯರ್‌ ಮುಂದುವರಿಸಬೇಕು. ಇಷ್ಟಕ್ಕೂ ನಾವು ನಾವಾಗಿಯೇ ಜೀವನ ಸಂಭ್ರಮಿಸುವುದು ಮುಖ್ಯ ಅಲ್ಲವೇ ಎನ್ನುವುದು ಇವರ ವಾದವಾಗಿದೆ.

ಸೃಜನಾತ್ಮಕ ಮನಸು ನಿಮ್ಮದಾಗಿದ್ದು, ಕ್ರಿಯಾಶೀಲರಾಗಿದ್ದರೆ ಮನೆಯವರೂ ಸದಾ ಬೆಂಬಲಿಸುತ್ತಾರೆ. ಈ ತೊಡಗುವಿಕೆಯಿಂದಾಗಿ ಸಮಾಧಾನ ಸಂತಸಗಳು ನಿಮ್ಮಲ್ಲಿ ಕಂಡು ಬಂದಾಗ ಕುಟುಂಬವೂ ಸದಾ ಬೆಂಬಲಕ್ಕೆ ನಿಲ್ಲುತ್ತದೆ ಎನ್ನುವುದು ಇವರಿಬ್ಬರ ಅಭಿಪ್ರಾಯವಾಗಿದೆ. ಇನ್ನೇಕೆ ತಡ, ನೀವೂ ಬ್ರೇಕ್‌ ತೆಗೆದುಕೊಂಡಿದ್ದಲ್ಲಿ, ಮೈಕೊಡವಿಕೊಂಡು ಎದ್ದೇಳಿ ಎನ್ನುತ್ತಾರೆ ಅವರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.