ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೆಂಚ್ ಸ್ತ್ರೀಯರ ಖುಷಿಯ ಕಾರಣ...

ಬದುಕು
Last Updated 30 ಮಾರ್ಚ್ 2019, 19:31 IST
ಅಕ್ಷರ ಗಾತ್ರ

‘ಜೋಯುಸ್ ಜೂನಿ ಡಿ ಲಾ ಫೆಮ್’ ಎಂದು ಫ್ರೆಂಚ್ ಸ್ನೇಹಿತೆ ನತಾಲಿ ಪ್ಯಾರಿಸ್ ಸಮ್ಮೇಳನದಲ್ಲಿ ಬಂದು ನಮಗೆ ನಗುತ್ತಾ ಶುಭ ಕೋರಿದಾಗ ನಾವು- ಬ್ರಿಟಿಷ್ ಇಂಗ್ಲಿಷ್ ಕಲಿತ ಭಾರತೀಯ ವೈದ್ಯೆಯರು ಕಣ್ಣು ಕಣ್ಣು ಬಿಟ್ಟಿದ್ದೆವು. ತತ್‌ಕ್ಷಣ ಮೊಬೈಲ್‌ನಲ್ಲಿ ಗೂಗ್ಲಿಸಿ ನೋಡೋಣವೆಂದರೆ ಫ್ರೆಂಚ್‌ನಲ್ಲಿ ಹೇಳುವುದಕ್ಕೂ- ಬರೆಯುವುದಕ್ಕೂ ಸಂಬಂಧವೇ ಇಲ್ಲ! ನತಾಲಿಯನ್ನೇ ಕೇಳಿದ ಮೇಲೆ ತಿಳಿದು ಬಂದದ್ದು, ಹಾಗೆಂದರೆ ‘ಮಹಿಳಾ ದಿನದ ಶುಭಾಶಯಗಳು’ ಎಂದು!

ಅಂತರರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಜಾಗತಿಕ ಮಹಿಳಾ ಮಾನಸಿಕ ಆರೋಗ್ಯದ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಜಗತ್ತಿನ 52 ರಾಷ್ಟ್ರಗಳಿಂದ ಸುಮಾರು 600 ಪ್ರತಿನಿಧಿಗಳು ಅಲ್ಲಿ ಸೇರಿದ್ದರು. ಇಷ್ಟು ದೊಡ್ಡ ಸಮ್ಮೇಳನ ಎಂದು ಹೊರಗಿನಿಂದ ಗೊತ್ತೇ ಆಗದಷ್ಟು, ಆದರೆ ಒಳಗೆ ಎಲ್ಲಾ ಸೌಲಭ್ಯಗಳೂ ಇರುವ ದೊಡ್ಡ ವಿಶ್ವವಿದ್ಯಾಲಯದ ಕ್ಯಾಂಪಸ್. ಕೊರೆವ ಚಳಿಯ ವಾತಾವರಣ. ಔಪಚಾರಿಕತೆಯೆಲ್ಲವನ್ನೂ ಬದಿಗೊತ್ತಿ ತಮ್ಮ ಕುರ್ಚಿಗಳನ್ನು ತಾವೇ ಎತ್ತಿಕೊಂಡು ವೇದಿಕೆಯ ಮೇಲೆ ಕುಳಿತುಕೊಳ್ಳುವ ಸರಳ ಅಧ್ಯಕ್ಷರು- ಕಾರ್ಯದರ್ಶಿಗಳು! ಸಮ್ಮೇಳನದ ಅಧಿಕೃತ ಭಾಷೆ ಇಂಗ್ಲಿಷ್ ಆದರೂ, ಎಲ್ಲವನ್ನೂ ಫ್ರೆಂಚ್‌ಗೆ ಭಾಷಾಂತರಿಸಲಾಗುತ್ತಿತ್ತು. ಸಮ್ಮೇಳನ ಉದ್ಘಾಟಿಸಿದ ಫ್ರಾನ್ಸ್‌ನ ಲಿಂಗ ಸಮಾನತೆಯ ಮಂತ್ರಿಗೂ ಭಾಷಣ ಮಾಡುವಾಗ, ಅಧ್ಯಕ್ಷೆ ಇನ್ನು ನಿಮಗೆ ಮಾತನಾಡಲು ಐದು ನಿಮಿಷ ಸಮಯವಿದೆ ಎಂದಿದ್ದು ನೋಡಿ ನಾವು ಬೆರಗಾದೆವು.

ಪಕ್ಕ ಕುಳಿತಿದ್ದ ನತಾಲಿಯ ಹತ್ತಿರ ಹಾಗೇ ಮಾತನಾಡುತ್ತ ಇದ್ದೆ. ಮಕ್ಕಳ ಬಗ್ಗೆ ಕೇಳಿದರೆ ಅವಳಿಗೆ ನಾಲ್ಕು ಮಕ್ಕಳು! ಅವಳ ಕೆಳಗೆ ಕೆಲಸ ಮಾಡುವ ಇಬ್ಬರು ಸಹಾಯಕಿಯರಿಗೂ ಅಷ್ಟೆ. ಒಬ್ಬರಿಗೆ ಮೂವರು, ಇನ್ನೊಬ್ಬಳಿಗೆ ನಾಲ್ಕು! ನಮಗೆ ಆಶ್ಚರ್ಯವೋ ಆಶ್ಚರ್ಯ! ಈ ಮೂವರು ಅಮ್ಮಂದಿರೂ ಹುಡುಗಿಯರಂತೆ ಬಳುಕುತ್ತಾ, ಗಿಡ್ಡದ ಸ್ಕರ್ಟ್ ಹಾಕಿಕೊಂಡು ಓಡಾಡುತ್ತಿದ್ದರು. ಫ್ರೆಂಚ್ ಮಹಿಳೆಯರ ಬಗೆಗೆ ನನ್ನ ಕುತೂಹಲ ಆರಂಭವಾಯಿತು.

ಮಿರಿಯೆಲ್ ಗಿಲಿಯಾನೋ ಎಂಬ ಫ್ರೆಂಚ್ ಮಹಿಳೆ ಬರೆದ ‘French women don't get fat’ ಎಂಬ ಪುಸ್ತಕದ ಬಗ್ಗೆ ಓದಿದ್ದೆ. ನಾವು ಮಹಿಳೆಯರು ಸಾಮಾನ್ಯವಾಗಿ ಅನುಭವಿಸುವ ನಮ್ಮ ತೂಕದ ಬಗೆಗಿನ ಎಚ್ಚರ, ವೇಷಭೂಷಣದ ಬಗೆಗಿನ ಕಾಳಜಿ, ಅಡಿಗೆ ಚೆನ್ನಾಗೇ ಮಾಡಿದರೂ ಸರಿಯಾಗಿ ತಿನ್ನಲು ಹೆದರುವುದು, ಬೇರೆಯವರಿಗಾಗೇ ನಮ್ಮ ಜೀವನ ಎಂಬ ರೀತಿಯಲ್ಲಿ ನಮ್ಮ ದಿನದಲ್ಲಿ ನಮಗಾಗಿ ಸ್ವಲ್ಪ ಸಮಯವನ್ನೂ ಇಟ್ಟುಕೊಳ್ಳುವಲ್ಲಿ ಸೋಲುವುದು ಇವುಗಳಿಗೆ ಮಿರಿಯಲ್ ಗಿಲಿಯಾನೋ ಈ ಪುಸ್ತಕದಲ್ಲಿ ಕೊಡುವ ಪರಿಹಾರ ಏನು ಗೊತ್ತೆ? ಫ್ರೆಂಚ್ ಮಹಿಳೆಯ ಜೀವನಶೈಲಿ! ’'art de vivre - ಬದುಕುವ ಕಲೆ, bien dans sa peau- ನಮಗಿರುವುದರಲ್ಲಿ ನಾವು ಆರಾಮವಾಗಿರುವುದು! ನತಾಲಿ ಹೇಳಿದ ಹಾಗೆ ಜೀವನದ ಚಿಕ್ಕ ಸಂತೋಷಗಳ ಬಗ್ಗೆ ಕಾಳಜಿ ವಹಿಸಿ ಸಂಭ್ರಮಿಸುವುದು, ಉದಾಹರಣೆಗೆ ಶಾಂಪೇನ್ ಬಾಟಲಿಯ ಕಾರ್ಕ್ ಅನ್ನು ಸರಿಯಾಗಿ, ಆಕರ್ಷಕವಾಗಿ ‘ಪಾಪ್’ (pop) ಮಾಡುವುದು!

ಕುತೂಹಲದಿಂದ ಫ್ರೆಂಚ್ ಮಹಿಳೆಯರ ಊಟ ಗಮನಿಸಿದರೆ ಅವರ ಜೀವನಶೈಲಿಯಲ್ಲಿ ಆಹಾರಕ್ಕೆ-ವೈನ್‌ಗೆ ಇರುವ ಪ್ರಾಮುಖ್ಯ ಅರಿವಿಗೆ ಬರುತ್ತದೆ. ಆಹಾರದ ವೈವಿಧ್ಯ, ಆಹಾರಕ್ಕಾಗಿ ಶಾಪಿಂಗ್ ಮಾಡುವುದು, ಬಣ್ಣ ಬಣ್ಣಗಳಲ್ಲಿ ಆಹಾರ ಅಲಂಕರಿಸುವುದು, ಇವು ಫ್ರೆಂಚ್ ಮಹಿಳೆಯರಿಗೆ ತಮ್ಮ ಜೀವನದ ಅವಿಭಾಜ್ಯ ಅಂಗ. ಹಾಗಾಗಿಯೇ ಪ್ಯಾರಿಸ್‌ನ ಸುತ್ತಮುತ್ತಲಲ್ಲಿ ಯಾವುದೇ ಬೀದಿಯಲ್ಲಿ ಸುತ್ತಾಡಿದರೂ ಕನಿಷ್ಠ ನಾಲ್ಕು ತಾಜಾ ಹಣ್ಣು- ತರಕಾರಿ- ಚೀಸ್‌ಗಳ ಮಾರುಕಟ್ಟೆ ಸಿಕ್ಕುತ್ತದೆ. ಫ್ರೆಂಚ್ ಮಹಿಳೆಯರು ತಾವು ಏನೇ ಕೆಲಸ ಮಾಡುತ್ತಿದ್ದರೂ, ಎಷ್ಟೇ ‘ಬ್ಯುಸಿ’ ಎನಿಸಿದರೂ ವಾರಕ್ಕೆ ಬೇಕಾಗುವಷ್ಟು ತರಕಾರಿ-ಅಡುಗೆ ಪದಾರ್ಥ ಖರೀದಿಸುವುದಿಲ್ಲ. ಅವರು ಕೊಳ್ಳುವುದು ನಾಳೆ ಅಥವಾ ಹೆಚ್ಚೆಂದರೆ ಎರಡು ದಿನಕ್ಕೆ ಬೇಕಾದಷ್ಟೇ ತರಕಾರಿ- ಹಣ್ಣು- ಪದಾರ್ಥವನ್ನು! ಅಷ್ಟೇ ಅಲ್ಲ, ಈ ಮಹಿಳೆಯರು ತಮ್ಮ ಊಟದ ಪ್ರತಿ ತುತ್ತನ್ನು ಅಕ್ಷರಶಃ ಸವಿಯುತ್ತಾರೆ! ವೈನ್ ಹೇಗೆ ಕುಡಿಯಬೇಕು, ನಾಲಿಗೆಯ ಮೇಲೆ ಹೇಗೆ ಆಹಾರದ ರುಚಿ ಸ್ವಲ್ಪ ಹೊತ್ತು ನಿಲ್ಲುವಂತೆ ಕೇಂದ್ರೀಕರಿಸಬೇಕು ಎಂಬುದನ್ನು ಫ್ರೆಂಚ್ ಅಮ್ಮಂದಿರು ತಮ್ಮ ಮಕ್ಕಳಿಗೆ ವಿವರಿಸುತ್ತಾರೆ! ಅಮೆರಿಕ- ಇಂಗ್ಲೆಂಡ್‌ಗಳಲ್ಲಿ ಯಾರಾದರೂ ನಿಧಾನವಾಗಿ, ಮಧ್ಯೆ ಮಧ್ಯೆ ಚಮಚ ಕೆಳಗಿಟ್ಟು ಬ್ರೇಕ್ ತೆಗೆದುಕೊಳ್ಳುತ್ತಾ ಊಟ ಮಾಡಿದರೆ, ‘ಏನು ಫ್ರೆಂಚ್ ಮಹಿಳೆಯ ಹಾಗೆ ಆಡ್ತಿದ್ದೀಯಾ?’ ಎಂದು ಗೇಲಿ ಮಾಡುತ್ತಾರೆ! ಆದರೆ ಫ್ರೆಂಚ್ ಮಹಿಳೆಯರು ಹೇಳುವುದೇನು?’ ಆಹಾರದ ಬಗ್ಗೆ ತಲೆ ಕೆಡಿಸಿಕೊಳ್ಳದ, ತಿನ್ನುವ ಬಗ್ಗೆ ಆಸಕ್ತಿ ತೋರಿಸದ, ಊಟ ಹಂಚಿಕೊಳ್ಳದ ವ್ಯಕ್ತಿಗಳೊಡನೆ ಜೀವಿಸಲು ಸಾಧ್ಯವಿಲ್ಲ. ಅದು ‘ಬೋರಿಂಗ್!’. ಅವರರು ಆಸಕ್ತಿಯಿಂದ, ಇಷ್ಟವಾದದ್ದನ್ನು ತಿನ್ನುತ್ತಲೇ, ಆರೋಗ್ಯವಂತರಾಗಿ ಸದೃಢ ‘ಬಳ್ಳಿ’ಗಳಾಗಿ ಬದುಕುವುದೇ ಬೆರಗು ಮೂಡಿಸುತ್ತದೆ!

ಯೂರೋಪಿನ ಬೇರೆ ದೇಶಗಳಲ್ಲೆಲ್ಲಾ ಮಕ್ಕಳು ಕಡಿಮೆಯಾಗಿ ಒದ್ದಾಡುತ್ತಿದ್ದರೆ, ಫ್ರೆಂಚ್ ಮಹಿಳೆಯರು ಮಕ್ಕಳು ಮಾಡಿಕೊಳ್ಳುತ್ತಲೇ ಇದ್ದಾರೆ! ಅಷ್ಟೇ ಅಲ್ಲ ಮಕ್ಕಳೊಡನೆ ಸಂತೋಷವಾಗಿ ಸಮಯ ಕಳೆಯುತ್ತಿದ್ದಾರೆ! ಭಾವನಾತ್ಮಕವಾಗಿ ಯಾವುದೇ ದೇಶದ ‘ಅಮ್ಮ’ನಿಗೂ ಮಕ್ಕಳೆಂದರೆ ಪ್ರೀತಿಯೇ ಆದರೂ, ಫ್ರೆಂಚ್ ಮಹಿಳೆಯರ ಹಾಗೆ ಮೂರು- ನಾಲ್ಕು ಮಕ್ಕಳನ್ನು ಬೆಳೆಸುವುದು ಸುಲಭವಲ್ಲ! ನಮ್ಮೊಂದಿಗೆ ಸಮ್ಮೇಳನದಲ್ಲಿದ್ದ ಫ್ರೆಂಚ್ ವೈದ್ಯೆಯರಲ್ಲಿ ಹೆಚ್ಚಿನವರು ಎರಡಕ್ಕೂ ಹೆಚ್ಚು ಮಕ್ಕಳನ್ನು ಹೊಂದಿದ್ದವರೇ. ಕೆಲವೇ ತಿಂಗಳುಗಳ ಮಕ್ಕಳನ್ನು ಮನೆಯಲ್ಲಿಟ್ಟುಕೊಂಡೇ, ತಮ್ಮ ಕೆಲಸ ಮುಂದುವರಿಸಲು ಫ್ರಾನ್ಸ್‌ನಲ್ಲಿ ಸಾಧ್ಯವಂತೆ. ಕೆಲಕಾಲ ಕೆಲಸ ಬಿಟ್ಟು ಮನೆಯಲ್ಲಿ ಮಗು ನೋಡಿಕೊಳ್ಳುವುದೇ ಒಳ್ಳೆಯದಲ್ಲವೆ ಎಂಬ ನಮ್ಮ ಪ್ರಶ್ನೆಗೆ ಅವರು ಹೇಳಿದ್ದು ‘ನಮ್ಮ ಕೆಲಸ ನಮಗೆ ಮುಖ್ಯ. ನಮಗೆ ನಮ್ಮ ದಾಂಪತ್ಯದ -ಕುಟುಂಬದ ಹೊರಗೆ ಒಂದು ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಅದು ಸಾಧ್ಯ ಮಾಡುತ್ತದೆ’. ಇದು ಫ್ರೆಂಚ್ ವ್ಯಕ್ತಿತ್ವದ ಒಂದು ಅಂಶ ಎಂದು ದೇಶವೂ ಒಪ್ಪಿಕೊಂಡಂತಿದೆ. ಏಕೆಂದರೆ ತಮ್ಮತನವನ್ನು ರೂಪಿಸಿಕೊಳ್ಳುವ ಆಸೆ ಎಲ್ಲರಿಗೂ ಇರುತ್ತದಷ್ಟೆ! ಆದರೆ ಫ್ರೆಂಚ್ ಮಹಿಳೆಯರಿಗೆ ಸರ್ಕಾರ ಮಕ್ಕಳ ಆರೈಕೆಗೆ ನೀಡಿರುವ ಸವಲತ್ತುಗಳು ಒಂದೆರಡಲ್ಲ. ಎರಡು ಮಕ್ಕಳು ಹುಟ್ಟಿದ ನಂತರ ಆರಂಭವಾಗುವ ಈ ಸವಲತ್ತುಗಳು (ಪ್ರತಿ ತಿಂಗಳು ದುಡ್ಡೂ, ತೆರಿಗೆಯಲ್ಲಿ ಕಡಿತ ಸೇರಿದಂತೆ) ಮಕ್ಕಳ ಸಂಖ್ಯೆ ಹೆಚ್ಚಿದಂತೆ ಹೆಚ್ಚುತ್ತಾ ಹೋಗುತ್ತವೆ! ಈ ಪಾಲಿಸಿಗಳೇ ಮಹಿಳೆಯರು ಕುಟುಂಬ- ಕೆಲಸವನ್ನು ಸರಿದೂಗಿಸಿಕೊಂಡು, ಎರಡೂ ಸಂತೋಷಗಳನ್ನು ತಮ್ಮದಾಗಿಸಿಕೊಳ್ಳಲು ಕಾರಣವೆನಿಸುತ್ತವೆ. ಯೂರೋಪಿನ ಇತರ ದೇಶಗಳು ವೃದ್ಧ- ಕ್ಷೀಣವಾಗುತ್ತಿರುವ ಜನಸಂಖ್ಯೆಯಿಂದ ಚಿಂತೆಗೀಡಾಗಿದ್ದರೆ, ಫ್ರಾನ್ಸ್ ಮಾತ್ರ ತನ್ನ ಮಹಿಳೆಯರು ಕುಟುಂಬಗಳನ್ನು ಕಟ್ಟಿಕೊಳ್ಳುತ್ತಲೇ, ಹೊರಗೆ ತಮ್ಮ ಉದ್ಯೋಗದಲ್ಲೂ ಮುಂದುವರಿಯಲು ವ್ಯವಸ್ಥೆ ಮಾಡಿಟ್ಟಿದೆ.

ಇವೆಲ್ಲ ಬೆಳವಣಿಗೆಗಳೂ ಇಂದಿನ ದಿನಗಳಲ್ಲಿ ಜೋರಾಗಿಯೇ ಕಣ್ಣಿಗೆ ಬೀಳುವುದಾದರೂ, ಫ್ರಾನ್ಸ್‌ನ ಇತಿಹಾಸದಲ್ಲಿ ಮಹಿಳೆಯರ ಸ್ಥಾನಮಾನ- ಆಕೆಗೆ ದೊರೆಯುತ್ತಿದ್ದ ಬೆಂಬಲಗಳ ಬಗೆಗೆ ಪುಟಗಳನ್ನು ತಿರುಗಿಸಿದರೆ ‘ಫ್ರೆಂಚ್ ಮಹಿಳೆ’ಯರ ಕಷ್ಟಗಳು ತಿಳಿಯುತ್ತವೆ. ಹೆಣ್ಣು ಮಕ್ಕಳ ವಿದ್ಯಾಭ್ಯಾಸವಾಗಲೀ, ಇತರ ತರಬೇತಿಗಳಾಗಲೀ ನಡೆಯುತ್ತಿದ್ದದ್ದು ಮನೆಗಳಲ್ಲಿ. ಅವರ ವಿದ್ಯಾಭ್ಯಾಸಕ್ಕೆ ಖರ್ಚು ಮಾಡಲು ಕುಟುಂಬಗಳು ಸಿದ್ಧವಿರಲಿಲ್ಲ! ವಿದ್ಯಾಭ್ಯಾಸದ ಪರಮೋದ್ದೇಶವೇ ಗಂಡನನ್ನು ಹಿಡಿಯುವುದು! ಅವರಿಗೆ ಲಭ್ಯವಿದ್ದ ಉದ್ಯೋಗಗಳೆಂದರೆ ಮಕ್ಕಳನ್ನು ನೋಡಿಕೊಳ್ಳುವ ದಾದಿಯರದ್ದು ಅಥವಾ ಶಿಕ್ಷಕಿಯರದ್ದು. ವ್ಯಾಪಾರಿ ಮಹಿಳೆಯರಿದ್ದರೆ ಸಾಮಾನ್ಯವಾಗಿ ಅವರು ವಿಧವೆಯರಾಗಿರುತ್ತಿದ್ದರು. ಮರಣ ಹೊಂದಿದ ಪತಿಯ ವ್ಯಾಪಾರವನ್ನು ಮುಂದುವರೆಸುತ್ತಿದ್ದರು. ಕ್ರಮೇಣ ಬದಲಾವಣೆಗಳಿಗೆ ಸಮಾಜ ತೆರೆದುಕೊಂಡಿತು. ಪಕ್ಕದ ಅಮೆರಿಕದಿಂದ ಹಲವು ಅಂಶಗಳನ್ನು ಎರವಲು ತೆಗೆದುಕೊಂಡರೂ, ಫ್ರೆಂಚ್ ಮಹಿಳೆ ತಾನು ತಾಯಿ- ಅಜ್ಜಿಯರಿಂದ ಕಲಿತ ಹೊಲಿಗೆ- ಫ್ಯಾಷನ್- ಆಹಾರ ಕ್ರಮ- ಜೀವನ ಕಲೆಯನ್ನು ಉಳಿಸಿಕೊಂಡೇ ಹೊರಗೆ ಬಂದಳು! ಒಳಗೂ ಉಳಿದಳು.

ಫ್ರೆಂಚ್ ಮಹಿಳೆಯರು ಜಗತ್ತಿನ ಇತರ ಮಹಿಳೆಯರಂತೆ ಎದುರಿಸಿದ ವಿವಿಧ ರೀತಿಯ ಶೋಷಣೆಗಳಿಗೇನೂ ಕಡಿಮೆಯಿಲ್ಲ. ಫ್ರೆಂಚ್ ಭಾಷೆಯನ್ನು ಉಪಯೋಗಿಸುವ ರೀತಿಯಲ್ಲಿಯೇ ಪುರುಷನಿಗಿದ್ದಷ್ಟು ಸ್ವಾತಂತ್ರ್ಯ, ಮೇಲರಿಮೆ ಮಹಿಳೆಗಿಲ್ಲ ಎಂದು ಫ್ರೆಂಚ್ ಸ್ತ್ರೀವಾದಿಗಳು ಗಲಾಟೆ ಮಾಡಿದ್ದಾರೆ. ಇದೀಗ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕರೋನ್ 35 ವರ್ಷದ ಮಾರಿಲೀನ್ ಶಿಯಾಪ್ಪಾ ಎಂಬ ಮಹಿಳೆಯನ್ನು ‘ಲಿಂಗ ಸಮಾನತೆ’ ಯ ಮಂತ್ರಿ ಮಾಡಿದ್ದಾರೆ! 1970ರ ದಶಕದಲ್ಲಿಯೇ ಮಂತ್ರಿಯಾಗಿ ರಾಜ್ಯಾಡಳಿತವನ್ನೂ, ‘ಚರ್ಚ್’ ಅನ್ನೂ ಪ್ರತ್ಯೇಕಿಸಿದ, ಫ್ರಾನ್ಸ್‌ನಲ್ಲಿ ಗರ್ಭಪಾತಕ್ಕೆ ಕಾನೂನು ಪರವಾನಗಿ ನೀಡುವಂತೆ ಮಾಡಿದ ಸಾಧನೆಯೂ ಫ್ರಾನ್ಸ್‌ನಲ್ಲಿ ಸೈಮೋನ್ ವೈಲ್ ಎಂಬ ಮಹಿಳಾ ರಾಜಕಾರಣಿಯದ್ದೇ. ಆಕೆಯನ್ನು ಫ್ರಾನ್ಸ್‌ನ ಮಹಿಳೆಯರು ಈಗಲೂ ನೆನೆಸುತ್ತಾರೆ.

‘ಗರ್ಭಕೋಶಕ್ಕೆ ಪತ್ರಗಳು’ ಎಂಬ ಪುಸ್ತಕ ಬರೆದಿರುವ ‘ಲಿಂಗ ಸಮಾನತೆಯ’ ಮಂತ್ರಿ ಶಿಯಾಪ್ಪಾ ಮಾಡಿದ ಭಾಷಣದ ಸಾಲುಗಳು ನಮ್ಮ ಗಮನ ಸೆಳೆದವು. ‘ಕೆಲಸದಲ್ಲಿ ಲಿಂಗ ಸಮಾನತೆ ಜಗತ್ತಿನಲ್ಲಿ 2234ರ ವೇಳೆಗೆ ಸಾಧ್ಯವೆಂದು ಅಧ್ಯಯನಗಳು ಹೇಳಿವೆ. ಆದರೆ ನಮಗೆ ಇನ್ನೆರಡು ಶತಮಾನಗಳವರೆಗೆ ಕಾಯಲು ಸಾಧ್ಯವಿಲ್ಲ! ಆ ದಿನಾಂಕವನ್ನು ನಾವು ನಮಗೆ ಹತ್ತಿರ ಬರುವಂತೆ ದುಡಿಯಬೇಕು. ‘ಆಯ್ಕೆ’ ಎನ್ನುವುದು ಒಂದು ಪ್ರಮುಖ ಹಕ್ಕು. ಮದುವೆಯಾಗುವ, ಬೇರೆಯಾಗುವ, ವಿದ್ಯಾಭ್ಯಾಸದ ಮಕ್ಕಳನ್ನು ಪಡೆಯುವ, ವ್ಯಾಪಾರ ಆರಂಭಿಸುವ ಅಥವಾ ಚುನಾವಣೆಗೆ ನಿಲ್ಲುವ- ಗೆಲ್ಲುವ ಆಯ್ಕೆ! ಪಯಣಿಸುವ- ಕಾರು ಓಡಿಸುವ ಅಥವಾ ಏನೂ ಮಾಡದೆ ಸರಳವಾಗಿ ಬದುಕುವ ಆಯ್ಕೆ! ಇವ್ಯಾವುವೂ ‘ಭಾಗ್ಯ’ (privilege) ಗಳಲ್ಲ. ಇದು ಫ್ರೆಂಚ್ ಮಹಿಳಾ ರಾಜತಂತ್ರ!’ ಅಬ್ಬಾ ಎನಿಸಿತು! ಮನೋವೈದ್ಯೆಯಾಗಿ ಕೆಲವು ಕ್ಷಣ ಯೋಚಿಸಿದಾಗ ನನಗನ್ನಿಸಿದ್ದು ಫ್ರೆಂಚ್ ಮಹಿಳೆಯರ ಆತ್ಮವಿಶ್ವಾಸಕ್ಕೆ, ಸಂತೋಷದ ಜೀವನಕ್ಕೆ ಕಾರಣ ಅವರು ತೆಳ್ಳಗಿರುವುದಾಗಲೀ, ಸರ್ಕಾರದ ಸೌಲಭ್ಯಗಳಾಗಲೀ ಅಲ್ಲ, ಅವರು ದೃಢವಾಗಿ ನಂಬಿರುವ, ನಿಷ್ಠೆಯಿಂದ ಪಾಲಿಸುವ ಪ್ರೀತಿ ತುಂಬಿದ ಜೀವನಶೈಲಿ. ಆಹಾರ-ನಿದ್ರೆ- ಕುಟುಂಬ- ತನ್ನ ವೇಷಭೂಷಣ ಎಲ್ಲದರ ಬಗೆಗೆ ಅಪಾರ ಪ್ರೀತಿ. ಆದ್ದರಿಂದಲೇ ಅವರು ಯಾರ ಬೆಂಬಲವನ್ನೂ ಪಡೆಯಬಲ್ಲರು! ಸರ್ಕಾರದ ಬೆಂಬಲವನ್ನೂ!

ಅಂತರರಾಷ್ಟ್ರೀಯ ಮಹಿಳಾ ದಿನದಂದು ಫ್ರೆಂಚ್ ಮಹಿಳೆಯಿಂದ ಜೀವನ ಪ್ರೀತಿಯ ಪಾಠ ಕಲಿತೆವು ಎಂದುಕೊಂಡೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT