ಬುಧವಾರ, ಫೆಬ್ರವರಿ 26, 2020
19 °C

ಮಾವು ಕೀಳುವ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾರುಕಟ್ಟೆಗಳಲ್ಲಿ ರಾರಾಜಿಸುವ ಮಾವಿನ ರುಚಿ ಸವಿಯಲು ಯಾಕೋ ಕೊಂಚ ಹಿಂಜರಿಕೆ. ರಾಸಾಯನಿಕ ಬೆರೆಸಿದ್ದಾರೆಯೇ ಎಂಬ ಅಂಜಿಕೆ ಕಾಡುತ್ತದೆ. ಈ ಅಂಜಿಕೆ ದೂರ ಸರಿದು ಮನಸೋಯಿಚ್ಛೆ ಮಾವನ್ನು ತಿಂದು ಆನಂದಿಸುವ ಅವಕಾಶವಿದೆ.

‘ಮಣ್ಮಯಿ’ ಸುಸ್ಥಿರ ಕೃಷಿ ಬಳಗ ಕಳೆದ ಮೂರು ವರ್ಷಗಳಿಂದ ಸತತವಾಗಿ ‘ಮಾವು ಕೀಳುವ ಹಬ್ಬ‘ವನ್ನು ಆಯೋಜಿಸಿಕೊಂಡು ಬಂದಿದೆ. ರೈತರ ತೋಟಗಳಿಗೆ ಹೋಗಿ ನಾವೇ ಸ್ವತಃ ಹಣ್ಣನ್ನು ಸವಿದು ರುಚಿ ನೋಡಿ ನಮಗೆ ಬೇಕಾದ ಹಣ್ಣು ಆರಿಸಿ ತರುವ ಅವಕಾಶ ಕಲ್ಪಿಸುವುದು ಈ ಬಳಗದ ವಿಶೇಷ.

ಯುವಜನರೇ ರೈತರು

ಮಣ್ಮಯಿ ಸುಸ್ಥಿರ ಕೃಷಿ ಬಳಗ ಒಂದು ಯುವ ರೈತ ಸಮೂಹ. ಕೃಷಿಯನ್ನು ಜೀವನಾಧಾರವಾಗಿ ರೂಪಿಸಿಕೊಳ್ಳಲು ಹಾಗೂ ಇತರರಿಗೆ ಮಾರ್ಗದರ್ಶನ ನೀಡುವಲ್ಲಿ ಯಶಸ್ವಿ ಹೆಜ್ಜೆಯನ್ನಿಡುತ್ತಿದೆ. ಬದುಕು ಕಮ್ಯೂನಿಟಿ ಕಾಲೇಜಿನ ಸುಸ್ಥಿರ ಕೃಷಿ ಕಾರ್ಯಗಾರದಲ್ಲಿ ಮಾರ್ಗದರ್ಶನ ಪಡೆದು ಕೃಷಿಯಲ್ಲಿ ತೊಡಗಿಸಿಕೊಂಡವರು. ತಮ್ಮ ಪ್ರಯೋಗಗಳು, ಕಲಿಕೆ ಮತ್ತು ಕೃಷಿ ಬದುಕಿನ ಸಂಭ್ರಮಗಳನ್ನು ಪ್ರತಿಯೊಬ್ಬರಿಗೂ ಸತತವಾಗಿ ಹಂಚಿಕೊಂಡು ಬಂದಿದ್ದಾರೆ.

ಹಬ್ಬದ ಉದ್ದೇಶ

ನಗರವಾಸಿಗಳು ಮತ್ತು ಗ್ರಾಮೀಣ ಸಮುದಾಯವನ್ನು ಬೆಸೆಯುವ ಪ್ರಯತ್ನ ಇದರ ಮುಖ್ಯ ಧ್ಯೇಯ. ಮಾವು ಪ್ರಿಯರಿಗೆ ಮತ್ತು ಹಳ್ಳಿಯ ಸೊಗಡನ್ನು ತಮ್ಮ ಕುಟುಂಬದೊಂದಿಗೆ ಸಂಭ್ರಮಿಸಿ ಅನುಭವಿಸಲು ನಗರವಾಸಿಗಳಿಗೆ ಇದೊಂದು ಅವಕಾಶ.

ರಾಮನಗರದಲ್ಲಿ ಮಾವು ಸುಗ್ಗಿ

ರಾಮನಗರದಿಂದ ಸುಮಾರು 10 ಕಿಲೋ ಮೀಟರ್‌ ದೂರದಲ್ಲಿರುವ ಅಂಕನಹಳ್ಳಿಯಲ್ಲಿ ಮೂರು ವರ್ಷಗಳಿಂದ ಮಾವಿನ ಸುಗ್ಗಿಯನ್ನು ಆಚರಿಸಲಾಗುತ್ತಿದೆ. ಸ್ಥಳೀಯರಾದ ಕಾಂತರಾಜು ಅವರ ತೋಟ ಇದೀಗ ಮಾವಿನ ಹಬ್ಬಕ್ಕೆ ಅಣಿಯಾಗುತ್ತಿದೆ. ಸುಮಾರು 3 ಎಕರೆ ಮಾವಿನ ತೋಟದಲ್ಲಿ ಬಾದಾಮಿ, ಸೆಂದುರಾ, ಮಲಗೋವಾ, ಬೈಂಗನ್‌ಪಲ್ಲಿ ಸೇರಿದಂತೆ ಹಲವು ಬಗೆಯ ಮಾವು ಸವಿಯಲು ಸಿಗುತ್ತವೆ.

ಹಬ್ಬದ ವಿಶೇಷತೆ

ಹಬ್ಬಕ್ಕೆ ಬಂದವರಿಗೆ ಗ್ರಾಮೀಣ ಬದುಕಿನ ಅನುಭವ ಕಟ್ಟಿಕೊಡಲು ಎತ್ತಿನ ಗಾಡಿ ಸುತ್ತಾಟ, ರೇಷ್ಮೆ ಸಾಕಾಣಿಕೆ, ಹಸು ಸಾಕಾಣಿಕೆ, ಕೋಳಿ, ಕುರಿ ಹೀಗೆ ಹಳ್ಳಿಯ ವಾತಾವರಣವನ್ನೇ ಕಾಣಬಹುದು. ದೊಡ್ಡವರು ಮಕ್ಕಳೊಂದಿಗೆ ಆಡಿ ನಲಿಯುತ್ತಾರೆ. ಗೋಲಿ, ಬುಗುರಿ, ಹಗ್ಗ ಜಗ್ಗಾಟ ಹಲವು ಬಗೆಯ ಗ್ರಾಮಿಣ ಆಟಗಳನ್ನು ಆಡುವುದಕ್ಕೂ ಇಲ್ಲಿ ಅವಕಾಶವಿದೆ. ಆಟವಾಡಿ ದಣಿದವರಿಗೆ ರಾಗಿ ಅಂಬಲಿ, ಮಜ್ಜಿಗೆ ವ್ಯವಸ್ಥೆ ಇರುತ್ತದೆ. ಮಾವು ಮತ್ತು ಸಿರಿಧಾನ್ಯಗಳನ್ನೊಳಗೊಂಡ ಸಾವಯವ ಊಟದ ಆತಿಥ್ಯವೂ ಇರುತ್ತದೆ. ಇಡೀ ದಿನ ಸಂಭ್ರಮಿಸಿ ಮನೆಗೆ ತೆರಳುವಾಗ ಮರದಿಂದ ಒಂದಷ್ಟು ಮಾವನ್ನು ಕಿತ್ತು ಕೊಂಡೊಯ್ಯುವ ಅವಕಾಶವೂ ಇದೆ.

‘ಕಳೆದ ವರ್ಷ ಹಬ್ಬಕ್ಕೆ ಬಂದ ಮಾವಿನ ಮರದ ಪರಿಚಯವೇ ಇಲ್ಲದ ನಗರವಾಸಿಗಳು ಇಲ್ಲಿ ಸಂಭ್ರಮಿಸಿ ಹೋಗಿದ್ದಾರೆ. ತಮಗೆ ಬೇಕಾದ ಹಣ್ಣನ್ನು ಆರಿಸಿ ಕೊಂಡೊಯ್ಯುವಾಗ ಸಂತಸ ವ್ಯಕ್ತಪಡಿಸಿದ್ದಾರೆ. ಸ್ಥಳೀಯರೊಂದಿಗೆ ಪರಸ್ಪರ ಸಮನ್ವಯತೆಯಿಂದ ಬದುಕಲು ಬೇಕಾದ ಒಂದಷ್ಟು ಮೌಲ್ಯಗಳನ್ನು ಕಲಿತು, ಕಲಿಸಿ ಹೋಗಿದ್ದಾರೆ’ ಎನ್ನುತ್ತಾರೆ ಸುಸ್ಥಿರ ಅಭಿವೃದ್ಧಿ ವಿಭಾಗದ ಸಂಯೋಜಕರಾದ ರಮೇಶ್‌ ಚೀಮಾಚನಹಳ್ಳಿ.

ಪ್ರತಿ ವರ್ಷದಂತೆ ಈ ವರ್ಷವೂ ಮೇ26 ರಂದು ‘ಮಾವು ಕೀಳುವ ಹಬ್ಬ’ವನ್ನು ಆಚರಿಸಲಾಗುತ್ತಿದೆ. ಆಸಕ್ತರು ನೊಂದಾಯಿಸಿಕೊಳ್ಳಲು 9611105029 ಅಥವಾ 7899877940 ಗೆ ಕರೆಮಾಡಿ.

**

ಪಟ್ಟಣದವರು ಹಳ್ಳಿಗೆ ಬಂದು ಸಂಭ್ರಮಿಸುವುದು ನಮಗೆ ಹೆಮ್ಮೆ ಎನಿಸುತ್ತದೆ. ಅವರಿಗೆ ಬೇಕಾದ ಅನುಕೂಲಗಳನ್ನು ಹಳ್ಳಿಯವರೆಲ್ಲ ಸೇರಿ ಮಾಡಿಕೊಡುತ್ತೇವೆ.

-ನಂಜುಂಡ ಸ್ವಾಮಿ,ರೈತ

**

ಮಾವಿನ ಸುಗ್ಗಿ ಆಚರಿಸುವಾಗೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ನಗರವಾಸಿಗಳು ಸೇರುತ್ತಾರೆ. ಎಲ್ಲಿಂದಲೋ ಬಂದು ನಮ್ಮ ಹಳ್ಳಿಯಲ್ಲಿ ಈ ರೀತಿ ಹಬ್ಬ ಆಚರಣೆ ಮಾಡುವುದು ನಮಗೆ ಸಂತಸದ ವಿಷಯ. ನಮ್ಮ ಗ್ರಾಮೀಣ ಆಟಗಳನ್ನು ಅವರಿಗೆ ಹೇಳಿಕೊಡುತ್ತೇವೆ. ಅವರು ಸಂಭ್ರಮಿಸುತ್ತಾರೆ.

-ಮೂರ್ತಿ, ರೈತ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)