ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಂತ ನಮನದಲ್ಲಿ ಸುನೀತಾ ಗಾಯನ

Last Updated 19 ಜೂನ್ 2020, 15:30 IST
ಅಕ್ಷರ ಗಾತ್ರ

‘ಕವಿ ಬರೆದದ್ದನ್ನು ಜನರ ಮನಗಳಿಗೆ ತಲುಪಿಸುವುದು ನನ್ನ ಕರ್ತವ್ಯ ಎಂದು ನನ್ನ ತಂದೆ ನಂಬಿದ್ದರು‘
– ಸುನೀತಾ ಅನಂತಸ್ವಾಮಿ

ಭಾವಗೀತೆಗಳ ಮೂಲಕ ಅಮೆರಿಕದಲ್ಲೂ ಕನ್ನಡದ ಕಂಪನ್ನು ಪಸರಿಸುತ್ತಿರುವ ಖ್ಯಾತ ಗಾಯಕಿ, ಸಂಗೀತ ಸಂಯೋಜಕಿ ಸುನೀತಾ ಅನಂತಸ್ವಾಮಿ, ಬುಧವಾರ ‘ಪ್ರಜಾವಾಣಿ‘ ಆಯೋಜಿಸಿದ್ದ ‘ವಿಶೇಷ ಫೇಸ್‌ಬುಕ್‌ ಲೈವ್‌‘ ಕಾರ್ಯಕ್ರಮದಲ್ಲಿ ಅರ್ಧಗಂಟೆಗಳ ಕಾಲ ಜನಪ್ರಿಯ ಭಾವಗೀತೆಗಳನ್ನು ಪ್ರಸ್ತುತಪಡಿಸಿ, ವೀಕ್ಷಕರನ್ನು ರಂಜಿಸಿದರು.

ಅಮೆರಿಕದ ತಮ್ಮ ಮನೆಯಿಂದಲೇ ಫೇಸ್‌ಬುಕ್‌ ಲೈವ್‌ ಮೂಲಕ ಅವರು ನಡೆಸಿಕೊಟ್ಟ ಈ ಗೀತ ಗಾಯನ ಕಾರ್ಯಕ್ರಮಕ್ಕೆ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಮೊದಲೇ ‘ಫೇಸ್‌ಬುಕ್‌ ಲೈವ್‌‘ ಕಾರ್ಯಕ್ರಮದ ಮಾಹಿತಿ ತಿಳಿದಿದ್ದ ಅನೇಕ ಅಭಿಮಾನಿಗಳು, ಇಂತಿಂಥ ಹಾಡುಗಳನ್ನು ಹಾಡಿ ಎಂದು ಸುನೀತಾ ಅವರಿಗೆ ಮನವಿ ಸಲ್ಲಿಸಿದ್ದರು. ‘ಸಮಯದ ಕೊರತೆಯಿಂದ, ಎಲ್ಲರೂ ಕೇಳಿದ ಹಾಡುಗಳನ್ನು ಹಾಡಲು ಆಗುತ್ತಿಲ್ಲ. ಹೆಚ್ಚು ಕೋರಿಕೆಯ ಗೀತೆಗಳನ್ನು ಪಟ್ಟಿ ಮಾಡಿ ಹಾಡುತ್ತಿದ್ದೇನೆ. ನಿಮ್ಮ ಹಾಡು ಹಾಡದಿದ್ದರೆ ಕ್ಷಮಿಸಿ‘ ಎಂದು ಸುನಿತಾ ಮನವಿ ಮಾಡಿದರು.

ಕಾರ್ಯಕ್ರಮದ ಆರಂಭದಲ್ಲಿ ‘ಬನ್ನಿ ಹರಸಿರಿ ತಂದೆಯೇ.. ಆಸೀನರಾಗಿರಿ ಮುಂದೆಯೇ, ನಿಮ್ಮ ಪ್ರೀತಿಗೆ ಹಾಡುವೆ.. ನಿಮ್ಮ ಆಶೀರ್ವಾದವ ಬೇಡುವೆ..‘ ಎಂಬ ಗೀತೆ ಮೂಲಕ, ತಂದೆ ಮೈಸೂರು ಅನಂತಸ್ವಾಮಿಯವರಿಗೆ ‘ಗೀತ ನಮನ‘ ಸಲ್ಲಿಸಿದರು. ಕವಿ ಎನ್‌.ಎಸ್‌.ಲಕ್ಷ್ಮಿನಾರಾಯಣ ಭಟ್ಟರ ರಚನೆಯ ಈ ಗೀತೆಗೆ ಸುನೀತಾ ಅವರ ಸಹೋದರ ರಾಜು ಅನಂತಸ್ವಾಮಿ ರಾಗಸಂಯೋಜನೆ ಮಾಡಿದ್ದಾರೆ. ಈ ಹಾಡು ಕೇಳುತ್ತಲೇ ಹಲವು ವೀಕ್ಷಕರು ಮೈಸೂರು ಅನಂತಸ್ವಾಮಿಯವರ ಗಾಯನವನ್ನು ಮೆಲುಕು ಹಾಕುತ್ತಲೇ, ‘ಗಾಯನದ ಮೂಲಕ ಅನಂತರ ದರ್ಶನವಾಯಿತು‘ ಎಂದು ಪ್ರತಿಕ್ರಿಯಿಸಿದರು.

ಮೈಸೂರು ಅನಂತಸ್ವಾಮಿಯವರ ಜನಪ್ರಿಯ ಗೀತೆಗಳಲ್ಲೊಂದಾದ ಕುವೆಂಪು ಅವರ ರಚನೆಯ ‘ಓ ನನ್ನ ಚೇತನ.. ಆಗು ನೀ ಅನಿಕೇತನ..‘ ಹಾಡನ್ನು ಹಾಡಿದ ಸುನೀತಾ ಅವರು, ‘ಈ ಗೀತೆಯನ್ನು ದೇಶಕ್ಕಾಗಿ ದುಡಿಯುತ್ತಿರುವ ಎಲ್ಲ ಯೋಧರಿಗೂ ಸಮರ್ಪಿಸುತ್ತಿದ್ದೇನೆ‘ ಎಂದರು. ಮಂಕುತಿಮ್ಮನ ಕಗ್ಗಗಳಿಗೆ ರಾಗಸಂಯೋಜನೆ ಮಾಡಿ ಹಾಡಿದ್ದರು ಅನಂತಸ್ವಾಮಿ. ಅದೇ ರಾಗದಲ್ಲಿ, ಸುನೀತಾ ಅವರು ‘ಬದುಕು ಜಟಕಾ ಬಂಡಿ...‘, ‘ಅಕ್ಕಿಯೊಳಗನ್ನವನು ಮೊದಲಾರು ಕಂಡವರು...‘, ‘ಇಳೆಯಿಂದ ಮೊಳಕೆಯೊಗವೊಂದು ತಮಟೆಗಳಿಲ್ಲ..‘ ‘ಹುಲ್ಲಾಗು ಬೆಟ್ಟದಡಿ..‘ ಹಾಗೂ ‘ನಗುವು ಸಹಜದ ಧರ್ಮ..‘ – ಈ ಕಗ್ಗಗಳನ್ನು ಹಾಡಿದರು. ಗೋಪಾಲಕೃಷ್ಣ ಅಡಿಗರ ‘ಇಂದು ಕೆಂದಾವರೆ...‘, ಎಚ್‌.ಎಸ್‌.ವೆಂಕಟೇಶ ಮೂರ್ತಿಯ ರಚನೆಯ ‘ಲೋಕದ ಕಣ್ಣಿಗೆ ರಾಧೆಯು ಕೂಡ ..‘, ಜಿ.ಪಿ. ರಾಜರತ್ನಂ ರಚನೆಯ ‘ಭೂಮಿ ತಬ್ಬಿದ್ ಮೋಡಿದ್ದಂಗೆ... ಮಡಕೇರಿ ಮೇಲ್ ಮಂಜು‘ ಹಾಡುಗಳಿಗೆ ವೀಕ್ಷಕರಿಗೆ ಮೆಚ್ಚುಗೆ ವ್ಯಕ್ತವಾಯಿತು.

ಕಾರ್ಯಕ್ರಮದ ಕೊನೆಯಲ್ಲಿ ಇತ್ತೀಚೆಗಷ್ಟೆ ನಮ್ಮನ್ನು ಅಗಲಿದ ಖ್ಯಾತ ಸಾಹಿತಿ ನಿಸಾರ್ ಅಹಮದ್ ಅವರ ಜನಪ್ರಿಯ ಗೀತೆ ‘ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ...‘ ಗೀತೆಯನ್ನು ಪ್ರಸ್ತುಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT