ಬುಧವಾರ, ಆಗಸ್ಟ್ 17, 2022
25 °C
ಸಂದರ್ಶನ

ಸಂಗೀತದ ಸಂಗ್ತಿ... ಇವೋ ನಾಕುತಂತಿ

ಶ್ರೀದೇವಿ ಕಳಸದ Updated:

ಅಕ್ಷರ ಗಾತ್ರ : | |

Prajavani

ಅಂತರ್ಜಾಲಮಯವಾಗಿರುವ ಜಗತ್ತಿನಲ್ಲಿ ಸಂಗೀತದ ಧಾರೆ ಈಗ ಎತ್ತ ಹರಿಯುತ್ತಿದೆ? ಗುರು–ಶಿಷ್ಯರ ಸಂಬಂಧಗಳಲ್ಲಿ ಆಗಿರುವ ಬದಲಾವಣೆಗಳೇನು? ಶಾಸ್ತ್ರೀಯ ಸಂಗೀತದ ಭವಿಷ್ಯದ ನೆಲೆ ಯಾವುದು? ಇವೇ ಮೊದಲಾದ ಸಂಗತಿಗಳ ಕುರಿತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಎರಡು ತಲೆಮಾರುಗಳ ಪ್ರಮುಖ ಕೊಂಡಿಯಂತಿರುವ ಪಂ. ರಾಜೀವ್‌ ತಾರಾನಾಥ್‌ ಮತ್ತು ಪಂ. ಕೈವಲ್ಯಕುಮಾರ್ ಗುರುವ ಅವರೊಂದಿಗೆ ನಡೆಸಿದ ಒಂದು ಆತ್ಮೀಯ ಸಂವಾದ...

***
ಸಂಗೀತವೆಂದರೆ ಆಕಾಶ ಇದ್ದ ಹಾಗೆ: ರಾಜೀವ್‌ ತಾರಾನಾಥ್‌

ಅಂತರ್ಜಾಲಮಯ ಜಗತ್ತಿನಲ್ಲಿ ಶಾಸ್ತ್ರೀಯ ಸಂಗೀತದ ಆನ್‍ಲೈನ್ ಕಲಿಕೆ, ಪ್ರಸ್ತುತಿಯ ಬಗ್ಗೆ ನಿಮ್ಮ ಅನುಭವ-ಅಭಿಪ್ರಾಯವೇನು?

ಆನ್‍ಲೈನ್ ಸಂಗೀತ ಕಲಿಕೆ, ಕಛೇರಿ ಪ್ರಸ್ತುತಿಯನ್ನು ನಾನು ಖಂಡಿತ ಒಪ್ಪುವುದಿಲ್ಲ. ಆದರೆ ನಿರ್ವಾಹವಿಲ್ಲದಿದ್ದರೆ ‘ಇದಾದರೂ’ ಎಂದು ದೀರ್ಘ ಹಚ್ಚಿಕೊಳ್ಳಬಹುದು. ಸದ್ಯಕ್ಕೆ ಐದು ಜನ ವಿದೇಶಿ ಕಲಾವಿದರು ಆನ್‍ಲೈನಿನಲ್ಲಿ ಕಲಿಯುತ್ತಿದ್ದಾರೆ. ಇವರೆಲ್ಲರೂ ನನ್ನ ಗುರುಗಳ ಬಳಿ ಸುಮಾರು ಮೂವತ್ತು ವರ್ಷಗಳ ಕಾಲ ಕಲಿತು ಸಾಧನೆಯಲ್ಲಿ ಗಂಭೀರವಾಗಿ ತೊಡಗಿಕೊಂಡಿದ್ದಾರೆ ಎನ್ನುವ ಶ್ರದ್ಧೆಯಿಂದಾಗಿ ಕಲಿಸುತ್ತಿದ್ದೇನೆ. ಇನ್ನು, ಕಛೇರಿಗಳಲ್ಲಿ ನನಗೆ ನಾನೇ ನುಡಿಸಿಕೊಂಡು ಹಿತಪಡುತ್ತಿರುತ್ತೇನೆ. ನಾನೂ ಒಬ್ಬ ಮನುಷ್ಯ ಅಲ್ಲಿ ಕೇಳುತ್ತಿರುವವರೂ ಮನುಷ್ಯರು ಅನ್ನುವ ನಂಟು ಇದ್ದೇ ಇರುತ್ತದೆ. ತಲೆದೂಗುತ್ತಿದ್ದರೆ ಆ ಖುಷಿಯನ್ನೂ ಹಂಚಿಕೊಳ್ಳುತ್ತೇನೆ. ಮೊನ್ನೆ ‘ಪ್ರಜಾವಾಣಿ’ಯ ಆನ್‍ಲೈನ್ ದಸರಾ ಸಂಗೀತೋತ್ಸವದಲ್ಲಿ ನುಡಿಸಿದೆ. ಆನ್‍ಲೈನಿನಲ್ಲಿ ಜನ ನನ್ನನ್ನು ನೋಡುತ್ತಿರುತ್ತಾರೆ ನಾನು ಅವರನ್ನು ನೋಡುವ ಹಾಗಿರುವುದಿಲ್ಲ. ಇದೊಂಥರಾ ರೇಡಿಯೋ ಪರ್ಫಾರ್ಮನ್ಸ್, ಗಂಭೀರ ರೀತಿಯಲ್ಲಿ. 

ಬೆರಳತುದಿಯಲ್ಲೇ ಇಷ್ಟೊಂದು ಆಕರಗಳು ಪರಿಕರಗಳು ಲಭ್ಯವಾಗುತ್ತಿವೆ. ಆದರೂ ಗುರು ಯಾಕೆ ಮುಖ್ಯ?
ಪ್ರದರ್ಶನ ಕಲೆಯಲ್ಲಿ ಬಹಳೇ ಮುಖ್ಯವಾಗಿರುವುದು ಮನಸ್ಸು, ಎರಡು ಎರಡು ನಾಲ್ಕು ಆಗುವುದಿಲ್ಲ ಇಲ್ಲಿ. ಮಗ್ಗಿಯನ್ನು ಹೇಳುವಾಗ ಯಾವಾಗಲಾದರೂ ಕಣ್ಣೀರು ಬಂದಿದ್ದಿದೆಯೇ? ಏನನ್ನೋ ನೋಡಿ ಖುಷಿಯಾಗುತ್ತದೆ ಅದನ್ನು ಲೆಕ್ಕದಲ್ಲಿ ಇಳಿಸುವುದಕ್ಕಾಗುತ್ತದೆಯೇ? ಸಂಗೀತದಲ್ಲಿ ಕೇಳ್ಮೆಯ ಅನುಭವ ಎಷ್ಟು ಪುಷ್ಕಳವಾಗಿ ಬರುತ್ತದೆ ಅನ್ನುವುದೇ ಮುಖ್ಯ.. ನಮ್ಮ ಶಾಸ್ತ್ರೀಯ ಸಂಗೀತಕ್ಕೆ ಕಲ್ಚರ್ ಬೌಂಡ್ ಇದೆ ಹಾಗಾಗಿ ರಾಗವು ಅದರದೇ ಆದ ಕಲ್ಚರಲ್ ಕಾಂಟೆಕ್ಸ್ಟ್ ನಲ್ಲಿ ಅರಳುತ್ತಿರುತ್ತದೆ. ಈ ಮೂಲಕ ನಾವು ನಮ್ಮ ಸಂಸ್ಕೃತಿಯನ್ನು ವರ್ಗಾಯಿಸುತ್ತಿರುತ್ತೇವೆ. ಇನ್ನೊಬ್ಬ ಸಂಗೀತಗಾರನನ್ನು ತಯಾರು ಮಾಡುವುದೆಂದರೆ ಎದುರಾಬದುರು ಕುಳಿತು ಮಾಡುವ ಮೆಹನತ್. ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದಲ್ಲಿ ಕಲಿಯುವವರ, ಕಲಿಸುವವರ ಮಧ್ಯೆ ಮೂರನೇ ಎಂಟಿಟಿ- ಮೊಝಾರ್ಟ್, ಬಿಠೋವನ್ ಮುಂತಾದವರ ಸ್ಕ್ರಿಪ್ಟ್ ಎದುರಿಗಿರುತ್ತವೆ. ಹಾಗಾಗಿ ಕಣ್ಣಿನದು ಇಲ್ಲಿ ಮುಖ್ಯ ಪಾತ್ರ. ನಮ್ಮ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಕ್ಕೂ ಬರಹದ ಶಿಕ್ಷಣ ಪದ್ಧತಿ ಇದೆ. ಆದರೂ ಗುರು-ಶಿಷ್ಯ ಸಂಬಂಧ ಬೇಕು. ಒಳ್ಳೆಯ ಗುರು ಆಗಿಂದಾಗಲೇ ಸರ್ವ್ ಮಾಡುತ್ತಾ ಹೋಗುತ್ತಾನೆ, ಸಾರಾಸಗಟಾಗಿ ಹೇಳುವುದಿಲ್ಲ. ಹೇಳಿದರೂ ಒಂದೆರಡು ಸಲ ರಾಗದ ರೂಪ ಗೋಚರವಾಗುವುದಕ್ಕೆ ಮಾತ್ರ. ಹಾಡುವಾಗ, ನುಡಿಸುವಾಗ ಸಮಂಜಸವಾದುದು ಹೊಮ್ಮುತ್ತಿದ್ದಂತೆ ಅದನ್ನು ತೀಡಿತೀಡಿ ಸರಿ ಮಾಡುವ ಪ್ರಯತ್ನವನ್ನು ಗುರು ಮಾಡುತ್ತಿರುತ್ತಾನೆ. ಸ್ವರಲಿಪಿ ಅನುಕರಿಸಿದರೂ ಸಂಗೀತ ಬರುತ್ತದೆ ಒಳ್ಳೆಯದೇ. ಆದರೆ ಸಂಗೀತದ ಸೂಕ್ಷ್ಮ, ಮತ್ತದರ ಗುರುತ?

ರಾಗಸುಖ, ಲೀನವಾಗುವಿಕೆ, ಗುರು-ಶಿಷ್ಯ ಸಂಬಂಧವೆಂಬ ಅಪರೂಪದ ಅನುಬಂಧದ ಬಗ್ಗೆ.
ಕಲಾವಿದರಿಗೆ ಎಲ್ಲ ರಾಗಗಳೂ ಸುಖ ಕೊಡುತ್ತವೆ. ಆದರೆ ಸುಖವನ್ನೇ ಕೊಡುತ್ತವೆ ಅಂತ ಹೇಳುವುದು ಬಾಲಿಶ. ಪ್ರತಿಯೊಂದು ರಾಗಕ್ಕೂ ಅದರದೇ ಆದ ದೇವತೆ ಇದೆ. ಅದರದರ ಗುರುತ ಅದರದರ ತೂಕ ಇದ್ದೇ ಇರುತ್ತದೆ. ಅದನ್ನು ಹೇಗೆ ಮುಟ್ಟಬೇಕೋ ಹಾಗೆ ಮುಟ್ಟಬೇಕು. ಪ್ರಾಮಾಣಿಕವಾಗಿ ಅದರೊಂದಿಗೆ ಒಂದಾಗಬೇಕು. ಮನಸ್ಸು ಕೊಟ್ಟು ಹಾಡಿದರೆ, ನುಡಿಸಿದರೆ ನಾನು ಯಾರು ಅನ್ನೋ ಅರಿವಿರಬಾರದು. ನಾನು ಮತ್ತು ನನ್ನ ಸಂಗೀತ ಒಂದೇ ಆಗಿರಬೇಕು. ಇದು ಎಲ್ಲಾ ಒಳ್ಳೆಯ ಸಂಗೀತಗಾರರ ಅನುಭವ. ಸಂಪೂರ್ಣ ಮನಸ್ಸು ಹೃದಯ ಕೊಟ್ಟು ಹಾಡುವುದು. ಇಡೀ ಅಸ್ತಿತ್ವದಿಂದ ಹಾಡುವುದು. ತನ್ನ ಮನೆಯಲ್ಲಿ ಅಕ್ಕಿ ಇದೆಯೋ ಬೇಳೆ ಇದೆಯೋ ಅನ್ನುವ ಅರಿವೂ ಇಲ್ಲದೆ. ಅವತ್ತಿಡೀ ಅದೇ ರಾಗ. You are the music, while the music last - T.S. Eliot. ಆಗಲೇ ಸಂಗೀತ ಉದ್ಭವ ಆಗೋದು. ಇಲ್ಲವಾದರೆ ಲೆಕ್ಕಕ್ಕೆ ಪಾಠ ಹೇಳುವ ಟ್ಯೂಷನ್ ಸಂಗೀತ. ಸಂಗೀತ ಒಂದು ಧ್ಯಾನ. ಸಂಗೀತ ಒಂದು ಯೋಗ. ಒಂದೊಂದು ರಾಗದ ರಸ, ಮೂಡ್ ಬೇರೆಯೇ. ಕೇಳಿದಾಗ ಹಾಡಿದಾಗ ಆಗುವ ಪರಿಣಾಮಗಳೂ ಬೇರೆಯೇ. ಆ ಅನುಭವ ತೂಕದ್ದು. ಸುಮ್ಮನೇ ಕೇಳಿಸಿಕೊಳ್ಳಬೇಕು. ಮನದಟ್ಟು ಮಾಡಿಕೊಳ್ಳಬೇಕು ಮೈಗೂಡಿಸಿಕೊಳ್ಳಬೇಕು.

ಬಹಳಷ್ಟು ಜನ ಬಹಳಷ್ಟು ಶಿಷ್ಯರನ್ನು ಬೆಳೆಸಿದರು, ಬೆಳೆಸುತ್ತಿದ್ದಾರೆ. ಆದರೆ ಈ ವಿಷಯದಲ್ಲಿ ನನ್ನದು ಸೋಲು. ನನ್ನ ಕಟ್ಟುನಿಟ್ಟನ್ನು ಸಹಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ ನನಗೆ ಒಬ್ಬರೇ ಶಿಷ್ಯ ಇರುವುದು. ಗುರು ಶಿಷ್ಯ ಸಂಬಂಧ ಬಹಳ ಮುಕ್ತವಾದುದು ತೂಕವಾದುದು ಅಪರೂಪವಾದುದು ಮತ್ತು ಕಷ್ಟಕರವಾದುದು. ವಿದ್ಯಾರ್ಥಿಗೂ ಶಿಷ್ಯನಿಗೂ ಇರುವ ವ್ಯತ್ಯಾಸ ನಿಮಗೆ ಗೊತ್ತೇ ಇದೆ. ವಿದ್ಯಾರ್ಥಿ-ಉಪಾಧ್ಯಾಯರ ವಿಷಯದಲ್ಲಿ ಫೀಸ್ ಕೊಟ್ಟರೆ ಮುಗಿಯಿತು. ಆದರೆ ನನ್ನ ಮೂವರೂ ಗುರುಗಳಿಗೆ ಒಂದು ರೂಪಾಯಿಯನ್ನೂ ಕೊಡಲಿಲ್ಲ. ಕಲಿಯಬೇಕೆನ್ನುವ ಇಚ್ಛಾಶಕ್ತಿ, ಒಳಗಿನ ಸ್ಫುರಣೆ ಎಷ್ಟಿದೆ ಅನ್ನುವುದನ್ನು ಗುರು ಬೇರೆ ಬೇರೆ ಸನ್ನಿವೇಶಗಳಲ್ಲಿ ಗಮನಿಸುತ್ತಾನೆ. ಎಲ್ಲಾ ರೀತಿಯಲ್ಲಿ ಬೆವರು ಸುರಿಸಬಲ್ಲ ಅಂತಾದರೆ ಮಾತ್ರ ಹೇಳಿಕೊಡುತ್ತಾನೆ. ಅಲ್ಲಿ ಸಂಬಂಧ ಮುಖ್ಯ ಸಂಗೀತ ಮುಖ್ಯ. ನುರಿತ ಸಂಗೀತಗಾರನಿಗೆ ರುಚಿ, ಸಂವೇದನೆ, ಅನುಭವ ಇರುತ್ತದೆಯಾದ್ದರಿಂದ ಕೇಳಿದ ಕೂಡಲೆ ಅರಿವಿಗೆ ಬರುತ್ತದೆ. ಆಗ ಗುರು ಎನ್ನಿಸಿಕೊಂಡವನು ವಿದ್ಯೆ ಕೊಡಬೇಕು. ಕೊಟ್ಟಷ್ಟೂ ಅವನ ವಿದ್ಯೆಯೇ ಮಾಗುತ್ತದೆ. 

ನನ್ನ ಗುರು ನುಡಿಸಬೇಕಾದರೆ ನನ್ನ ಬೆರಳಿನಲ್ಲಿಯೂ ಇರುತ್ತಾನೆ. ಗುರು ತಂದೆ-ತಾಯಿ ಇದ್ದ ಹಾಗೆ. ನಮ್ಮ ದೇವರು ಮತ್ತೆಲ್ಲವೂ ಆತನೇ. ಇಂಥ ನಿಕಟ ಭಾವ ಬರದೇ ಇದ್ದರೆ ಸಂಗೀತ ಬರುವುದೇ ಇಲ್ಲ. ನಾನು ಬದುಕಿರುವುದು ಅನುಭವಿಸುತ್ತಾ ಇರುವುದು ಆ ಗುಣಮಟ್ಟದ ಸಂಗೀತ ಎಲ್ಲವೂ ಅವನ ಆಶೀರ್ವಾದದ ನೆರಳಿನಲ್ಲಿ. ಆತ ಸಂಗೀತದ ಗೂಂಝ್. ನುಡಿಸಾಣಿಕೆಯೊಳಗೆ ಆಕಾಶದ ಒಂದು ಸಣ್ಣ ಅಂಶವನ್ನು ತರುವುದರ ಪ್ರಯತ್ನ ನಡೆಯುತ್ತಿರುತ್ತದೆ. ಒಮ್ಮೊಮ್ಮೆ ಬರುತ್ತದೆ ಒಮ್ಮೊಮ್ಮೆ ಇಲ್ಲ. ಅದಕ್ಕೇ ಸಂಗೀತ ಆಕಾಶ ಇದ್ದ ಹಾಗೆ.

ನಮ್ಮ ರಾಜ್ಯದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಕ್ಕೆ ಬೇಕಾದ ಪರಿಸರ ನಿರ್ಮಾಣ ಮಾಡುವಲ್ಲಿ ನಾವು ಸೋಲುತ್ತಿರುವುದೆಲ್ಲಿ?

ಪ್ರದರ್ಶನ ಕಲೆ ಪ್ರಾಮಾಣಿಕತೆಯ ಪರೀಕ್ಷೆ. ದೇವರ ದೇಣಗಿ ಕೇವಲ ಹತ್ತು ಪರ್ಸೆಂಟ್, ತೊಂಬತ್ತು ಪರ್ಸೆಂಟ್ ನಮ್ಮ ಪ್ರಯತ್ನ. ನಮ್ಮ ದೇಶ ಕಳ್ಳರ ಸಂತೆ, ಈವತ್ತು ಹತ್ತು ಲಕ್ಷ ಕೊಟ್ಟರೆ ಸಾಹಿತ್ಯದಲ್ಲಿಯೂ ಡಾಕ್ಟರೇಟ್ ತಗೋಬಹುದು. ನಮ್ಮ ಸಂಗೀತ ವಿಶ್ವವಿದ್ಯಾಲಯಗಳಿಂದ ಎಷ್ಟು ಒಳ್ಳೆಯ ಕಲಾವಿದರು ಹೊರಬಂದಿದ್ದಾರೆ. ಬರದಿದ್ದರೆ ಯಾಕೆ ಬಂದಿಲ್ಲ? ಮುಂಬೈ, ಕೊಲ್ಕೊತ್ತಾ, ಪುಣೆ, ಚೆನ್ನೈಯಲ್ಲಿರುವ ಸಶಕ್ತ ಸಂಗೀತ ವಾತಾವರಣ ನಮ್ಮಲ್ಲಿ ಯಾಕಿಲ್ಲ? ನಮಗೆ ಇಂಥವುಗಳ ಬಗ್ಗೆ ಆಳ ಆಲೋಚನೆ ಬೇಕಲ್ಲವೆ?

ನಮ್ಮಲ್ಲಿ ಇಚ್ಛಾಶಕ್ತಿ, ಗಟ್ಟಿತನ ಇತ್ತು. ಈಗ ಯಾಕಿಲ್ಲ? ಲಂಚ ಕೊಟ್ಟರೆ ಎಲ್ಲವೂ ಆಗುತ್ತದೆ ಎನ್ನುವ ಮನೋಭಾವ, ಇದು ನಮ್ಮೊಳಗನ್ನು ಟೊಳ್ಳಾಗಿಸುತ್ತದೆ. ಆದರೆ ಸಂಗೀತ, ಬಾಯಿ ತೆರೆದು ಹಾಡು ಅನ್ನುತ್ತದೆ. Performing art is test of honesty, highest test of honesty.

ಇನ್ನು ಕಲಾವಿದ ಯಾವ ಪದವಿ ಪಡೆದ, ಪ್ರಶಸ್ತಿ ಪಡೆದ, ಯಾವ ರಾಗ ಹಾಡಿದ ಯಾವ ತಾಳ ನುಡಿಸಿದ ಅದಲ್ಲ, ರಾಗದಲ್ಲಿ ಏನಾಯಿತು? ಅದನ್ನು ಶಬ್ದಗಳಲ್ಲಿ, ಬರಹದಲ್ಲಿ ತರಬಲ್ಲಿರಾ? How to look, how to listen. What to look for what to listen. ಸಂಗೀತದ ಬಗ್ಗೆ ಬರೆಯುವವರಿಗೆ ಕೇಳ್ಮೆಯ ಸಂಸ್ಕಾರವೂ ಬೇಕು. 

ಸಂಗೀತದ ಮುಂದೆ ಯಾವ ಲಿಂಗವೂ ಒಂದೇ. ನಮ್ಮಲ್ಲಿ ಇಷ್ಟು ಪ್ರತಿಭಾವಂತ ಕಲಾವಿದೆಯರಿದ್ದರೂ ಮುನ್ನೆಲೆಗೆ ಬರುವಲ್ಲಿ ತೊಡಕಾಗುತ್ತಿರುವ ಸಂಗತಿಗಳು ಯಾವುವು?

ನಾವು ಮಧ್ಯವರ್ಗೀಯ ಕುಟುಂಬಗಳಲ್ಲಿ, ಮೇಲ್‍ಜಾತೀಯ ಕುಟುಂಬಗಳಲ್ಲಿ ಹೆಣ್ಣುಮಕ್ಕಳಿಗೆ ಸಂಗೀತ ಕಲಿಸಿದೆವು. ನೋಡಲು ಬಂದಾಗ ಹುಡುಗಿ ಮಾತನಾಡುತ್ತಾಳೋ ಹಾಡುತ್ತಾಳೋ ಅಂತ ತಿಳಿದುಕೊಳ್ಳಲು. ಎಂಥ ಅಸಂಬದ್ಧ! ಹಾಡನ್ನು ಒಪ್ಪಿದರೆ ಮದುವೆಯಾಗುತ್ತದೆ. ಅಡುಗೆ ಮಾಡುತ್ತ ಮಕ್ಕಳಾಗುತ್ತವೆ. ಮಕ್ಕಳಾಗುತ್ತಿದ್ದಂತೆ ರಿಯಾಝು ಒಂದು ತಾಸಿಗೆ ಬಂದು ನಿಲ್ಲುತ್ತದೆ. ಇದಕ್ಕಿಂತ ದುಃಖದ ಮಾತು ಬೇಕಾ? ಸಂಗೀತವನ್ನು ಬೆಳೆಸಿಕೊಂಡು ಬಂದ ಹೆಣ್ಣುಮಕ್ಕಳಿಗೆ ನಾವು ಕೆಟ್ಟ ಹೆಸರು ಕೊಡುತ್ತೇವೆ. ಅವರ ಜಾತಿಯೇ ಹಾಗೆ ಅಂತೆಲ್ಲ. ಹೇಗೆ ಬೆಳೆಯುತ್ತೆ ಸಂಗೀತ? ಇಲ್ಲದಿದ್ದರೆ ಕ್ಷಮಿಸೋ ಹಾಗೆ ಹೇಳುವುದು, ನೋಡಿ ಇಂಥ ಜಾತಿಯಲ್ಲಿ ಹುಟ್ಟಿದರೂ ಉತ್ತಮ ಸಂಗೀತಗಾರರು ಆಗಿಬಿಟ್ಟರು ಅಂತ. ನಾವ್ಯಾರು ಹೇಳೋದಕ್ಕೆ? ಸಂಗೀತ ದೇವತೆ ಎದುರು ನಾನು ಇಂಥಾ ತಲೆಹರಟೆ ಮಾತುಗಳನ್ನು ಆಡಬಹುದೆ? ನಮ್ಮ ಹೆಣ್ಣುಮಕ್ಕಳಲ್ಲಿ ಒಳ್ಳೆಯ ಧ್ವನಿ ಇರುವವರು ಎಷ್ಟು ಜನರಿದ್ದಾರೆ. ಅವರನ್ನು ಬೆಳೆಸುವುದಕ್ಕೆ ಸಮರ್ಥನೆ, ಸ್ಫುರಣೆ, ಸಹಾಯ ಮೊದಲನೇದಾಗಿ ನಾವು ಮಾಡುವುದಿಲ್ಲ. ಎರಡನೇದಾಗಿ ದಾನ ಮಾಡಿದ ಹಾಗೆಯೋ ಭಿಕ್ಷೆ ಎತ್ತಿದ ಹಾಗೆಯೋ ಮಾಡಿಬಿಡುತ್ತೇವೆ. ಇದಕ್ಕಿಂತ ನೋವಿನ ವಿಷಯ ಮತ್ತೊಂದಿದೆಯಾ? ಎಲ್ಲದಕ್ಕೂ ದೀರ್ಘ ಹಚ್ಚೋದು, ‘ಈಕೆ ಇಂಥಾ ಮನೆತನದಲ್ಲಿ ಹುಟ್ಟಿದರೂ… ಪಾಪ ಏನೋ ಮಾಡಿಕೊಂಡುಬಂದಿದ್ದಾಳೆ!’ ಇದರ ಇಂಗಿತ ನಿಮಗರ್ಥವಾಗುತ್ತದೆ. ಹೇಗೆ ಬೆಳೆಯುತ್ತೆ ನಮ್ಮಲ್ಲಿ ಸಂಗೀತ?

ಈ ಕಾಲದಲ್ಲಿಯೂ ಗುರುಕುಲ ಪದ್ಧತಿಯನ್ನೇ ನೆಚ್ಚಿಕೊಂಡು ಸಾಧನೆ ಮಾಡಬೇಕೆ?

ಯಾವ ಕಾಲದಲ್ಲೂ ಅಷ್ಟೇ. ನಮಗೆ ಬೇಕೆಂದರೆ ಯಾವ ಹೊತ್ತಿನಲ್ಲಿಯೂ ರಿಯಾಝಿಗೆ ಕೂರುತ್ತೇವೆ. ಭೀಮಸೇನ್ ಜೋಶಿ ದಿನಕ್ಕೆ ನಲವತ್ತರಿಂದ ಐವತ್ತು ಕೊಡ ಹೊತ್ತುತಂದು ಸಾಧನೆ ಮಾಡಲಿಲ್ಲವಾ? ಅರ್ಥವಿಲ್ಲದ ನೂರೆಂಟು ಸಾಂಸಾರಿಕ ನೆಪಗಳನ್ನು ಬದಿಗಿರಿಸಬೇಕು. ಸಂಗೀತ ಕಲಿತ ಯಾರೂ ಸುಪ್ಪತ್ತಿಗೆ ಮೇಲೆ ಕುಳಿತು ಕಲಿಯಲಿಲ್ಲ. ನನ್ನ ಕಲಿಕೆಯ ಕಾಲದಲ್ಲಿ ನಾನೂ ಕಷ್ಟಪಟ್ಟಿದ್ದೇನೆ ಬಡತನ, ಅವಮಾನ, ಬೈಗುಳ, ರೋಗ ಎಲ್ಲವನ್ನೂ ಅನುಭವಿಸಿ. ಕೆಲವರು ಮಾತ್ರ ಪಡೆದುಕೊಂಡು ಬಂದಿರುತ್ತಾರೆ, ಪ್ರಶಸ್ತ ಮನೆತನ, ಒಳ್ಳೆಯ ಊಟ, ವಾಸ, ಸಂಗೀತ ಕಲಿಕೆಗೆ ಪೂರಕ ವಾತಾವರಣ. ಸಂಗೀತ ಬೇಕು ಅಂದರೆ ಗುರುವಿನ ಬಳಿ ಹೋಗುತ್ತೀರಿ. ಊಟ ಮಾಡಬೇಕೆಂದರೆ ಬಿದ್ದಿದ್ದನ್ನೂ ತೊಳೆದು ತಿನ್ನುತ್ತೀರಿ. ಮುಂದೆ ಯಾಕೆ ಕಛೇರಿ ಕೊಡುತ್ತೀರಿ? ಅದು ಕೊಡೋ ಖುಷಿಗೆ. ಆ ಖುಷಿಯಲ್ಲಿ ರಿಸ್ಕ್ ತೆಗೆದುಕೊಳ್ಳುತ್ತೀರಿ. ಈವತ್ತು ಹೂವಿನ ಹಾರ ಬರಬಹುದು ನಾಳೆ ತಗಣಿ ಹುಳುವೂ. ಒಮ್ಮೆ ಬೆಂಗಳೂರಿನ ಗಾಯನ ಸಮಾಜದೊಳಗ ಹನ್ನೊಂದಸಲ ತಂತಿ ಹರಿದು ಹೋಯ್ತು. ಸಭಿಕರಲ್ಲಿ ಕ್ಷಮೆ ಕೇಳಿ ಹೊರಟೆ. ಸೌಖ್ಯ ಇರುವಲ್ಲಿ ದುಃಖವೂ ಇರುತ್ತದೆ.

ಕಲಾವಿದರೆಂದರೆ ಹೀಗೇ ಇರಬೇಕು ಎನ್ನುವ ನಮ್ಮ ಸಮಾಜದ ಪರಿಕಲ್ಪನೆಯ ಬಗ್ಗೆ ಏನು ಹೇಳುತ್ತೀರಿ?

ನಮ್ಮ ಸಮಾಜದ ಬಗ್ಗೆ ದಯವಿಟ್ಟು ಮಾತನಾಡಬೇಡಿ! ಉದರ ನಿಮಿತ್ತಂ ಏನೋ ಒಂದು. ಜಗತ್ತಿನಲ್ಲಿ ಹೊಟ್ಟೆಗಾಗಿ ಮಂದಿ ಏನೇನೋ ಮಾಡುತ್ತ ಬಂದಿದ್ದಾರೆ. ನಮ್ಮಲ್ಲಿ ಹಾಗಿಲ್ಲ. ಇಂಥವರು ಇಂಥದನ್ನೇ ಮಾಡಬೇಕು. ‘ಚಾತುರ್ವರ್ಣಂ ಮಯಾಸೃಷ್ಟಾ ಗುಣಕರ್ಮ ವಿಭಾಗಶಃ’ ಅಂತ ಹೇಳಿದವರು ನಾವು. ಚೀನಿಯರು ಜಪಾನಿಗರಿಂದ ಏಟು ತಿಂದು ಭಾರತಕ್ಕೆ ಬಂದರು. ಸೈಕಲ್ ಮೇಲೆ ಬಟ್ಟೆ ಮಾರಿಕೊಂಡೋ ಇನ್ನೊಂದೇನೋ ಮಾಡಿಕೊಂಡು ಹೊಟ್ಟೆ ಹೊರೆಯುತ್ತಿದ್ದರು. ಈವತ್ತು ಚೀನಾ ಶಕ್ತಿಯುತ ರಾಷ್ಟ್ರ. ನಮ್ಮದು ಕೇವಲ ಗರ್ಜನೆ. ಎಲ್ಲ ಕೆಲಸಗಳನ್ನು ಎಲ್ಲರೂ ಕಲಿಯಬಹುದು ಮಾಡಬಹುದು ಅದಕ್ಕೆ ಸ್ಥೈರ್ಯ ಬೇಕು. ಶಿಷ್ಟ ಸಮಾಜದಲ್ಲಿ ಶಿಷ್ಟ ಸಂಘದಲ್ಲಿ ಇಂಥ ಮಾತುಗಳನ್ನು ಸಹಜವಾಗಿ ಆಡಿದರೆ ಅದು ಅಪರಾಧ! ಮಕ್ಕಳು ಕಂಪ್ಯೂಟರ್ ಸೈನ್ಸೇ ಓದಬೇಕು ಎನ್ನುವ ಧಾಟಿ ಬದಲಾಗಬೇಕು. ಬದಲಾವಣೆಗೆ ಬೇಕಾದ ಪೂರಕ ವಾತಾವರಣ ಮಾಧ್ಯಮಗಳಿಂದ ಸೃಷ್ಟಿಯಾಗಬೇಕು.

ಕಲೆಯು ಹೇಗೆ ಸಾಮಾಜಿಕ ಸ್ವರೂಪವನ್ನು ಪಡೆದುಕೊಳ್ಳುತ್ತದೆ?

ಅಭಿಜಾತ ಸಂಗೀತಕ್ಕೆ ಕ್ರಮಬದ್ಧತೆ ಇದೆ. ಅದು ನಿಬಂಧನೆಗಳ ಚೌಕಟ್ಟಿನಲ್ಲೇ ಸ್ವಾತಂತ್ರ್ಯ ತಂದುಕೊಳ್ಳುವಂಥದ್ದು. ಇಂಥ ಸ್ವಾತಂತ್ರ್ಯ ನಿರ್ಮಾಣ ಮಾಡಿ ತಾನೂ ಸ್ವತಂತ್ರನಾಗಿ ಕೇಳುಗರಿಗೂ ಆ ಅನುಭವ ಕೊಡುವುದು ದೊಡ್ಡ ಸಂಗೀತಗಾರನ ಲಕ್ಷಣ. ಸಂಗೀತದ ಬೇಸಿಕ್ ಗೊತ್ತಿರುತ್ತದೆ ಆದರೆ ಅಲ್ಲಿಂದ ಮುಂದೆ? ಸಂಗೀತದಲ್ಲಿ ಔನತ್ಯ ಒಂದು ಪ್ರಕ್ರಿಯೆ. It is not an end product. ಹೋಗುತ್ತಲೇ ಇರಬೇಕು. ಊಟ ಮಾಡಿದ ಮೇಲೆ, ನಿದ್ದೆ ಮಾಡಿದ ಮೇಲೆ, ಸೆಕ್ಸ್ ಮಾಡಿದ ಮೇಲೆ ಅದಕ್ಕೆ ಏನೆನ್ನುತ್ತೀರಿ? ತೃಪ್ತಿ ಅಂತಲೇ, ನನಗೆ ಸಂಸ್ಕೃತವೇ ಗೊತ್ತಿಲ್ಲ. ಈ ಹೆಸರಿಡುವ ದುರಭ‍್ಯಾಸ ಬಿಡಬೇಕು. ಆಗ ಆಕಾಶ ಚೆನ್ನಾಗಿ ಕಾಣುತ್ತದೆ. ಕಲಾವಿದರಿಗೂ ಕೇಳುಗರಿಗೂ ಒಂದು ಒಪ್ಪಂದ ಬೇಕು. ಈಗ ನಾನು ಮಾತನಾಡುತ್ತಿದ್ದೀನಿ ನೀವು ಕೇಳುತ್ತಿದ್ದೀರಿ. ಇದು ನಮ್ಮ ನಡುವಿನ ಒಪ್ಪಂದ. ಆದ್ದರಿಂದಲೇ ಇದು ಸಾಗುತ್ತಿದೆ. ನಾನೇನೋ ಸೌಂಡ್ ಮಾಡುತ್ತಿದ್ದರೆ ನಿಮಗೇನು ಅರ್ಥವಾಗುತ್ತದೆ? ಹಾಗಾಗಿ ಒಪ್ಪಂದ ಬಹಳ ಮುಖ್ಯ. ಮಾತನಾಡುವವನಿಗೂ ಕೇಳುವವನಿಗೂ, ಸಂಗೀತ ನುಡಿಸುವವನಿಗೂ ಕೇಳುವವನಿಗೂ. ಇದು ಕಲೆಯ ಸಾಮಾಜಿಕ ಸ್ವರೂಪ. 

ಕಲಾವಿದರಿಗೆ ರಾಜಕೀಯ ನಿಲುವು ಇರಬೇಕಾ, ಯಾಕಿರಬೇಕು?

ನನಗೆ ರಾಜಕೀಯದ ಅರಿವಿರೋದು ಅಡ್ವಾಂಟೇಜ್, ಆ್ಯಕ್ಸಿಡೆಂಟ್ ಅಲ್ಲ. ನಾನು ಸಂಗೀತದಲ್ಲಿಯೇ ಹುಟ್ಟಿ ಬೆಳೆದಿಲ್ಲ, ನಿಮ್ಮ ನಮ್ಮ ಹಾಗೆ ಹುಟ್ಟಿದೆ. ಪ್ರಪಂಚದಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳಲು ಪತ್ರಿಕೆಗಳನ್ನು ಓದಬೇಕು ಅಂತ ನನ್ನ ತಂದೆ-ತಾಯಿ ಕಲಿಸಿಕೊಟ್ಟರು. ಹೇಗೆ ಓದಬೇಕು ಎನ್ನುವುದನ್ನೂ ಹೇಳಿಕೊಟ್ಟರು. ಹೀಗಾಗಿ ದೇಶದ ಆಗುಹೋಗುಗಳ ಬಗ್ಗೆ ಅರಿವು ಉಂಟಾಗಹತ್ತಿತು. ಸ್ವಲ್ಪಮಟ್ಟಿಗೆ ದೇಶದಲ್ಲಿ ಏನು ನಡೆಯುತ್ತಿದೆ ಅನ್ನುವ ಅರಿವು ಕಲಾಕಾರನಿಗೆ ಇದ್ದರೆ ಒಳ್ಳೆಯದು. ಕಲಾಕಾರ ನಿಲುವು ತಳೆಯೋ ಹಾಗಿಲ್ಲ, ಜೀವನೋಪಾಯಕ್ಕಾಗಿ ಅವನು ಅವಕಾಶಕ್ಕಾಗಿ ಎಲ್ಲರ ಮೇಲೂ ಅವಲಂಬಿತ. ಹಾಗಂತ ಅವನಿಗೆ ತನ್ನ ಅಭಿಪ್ರಾಯಗಳು ನಿಲುವುಗಳು ಇರಬಾರದು ಅಂತೇನಿಲ್ಲ. ಜಾಗೃತವಾಗಿರುವ ಒಬ್ಬ ಮನುಷ್ಯ ಮನುಷ್ಯನ ರೂಪದೊಳಗೇ ಇರಬೇಕು. ಚರಿತ್ರೆಯ ಅರಿವು, ಈಗಿನ ರಾಜಕೀಯ ನಿಲುವುಗಳ ಅರಿವು ಕೆಲವೊಬ್ಬರಿಗೆ ಇರುತ್ತದೆ ಕೆಲವೊಬ್ಬರಿಗೆ ಇರಲಿಕ್ಕಿಲ್ಲ ಅಷ್ಟೇ. ಇದು ಅಡ್ವಾಂಟೇಜ್ ಹೌದೋ ಅಲ್ಲವೋ ಅಂತ ನಾ ಹೇಳಲಾರೆ.

ಒಬ್ಬ ಮನುಷ್ಯ ಆಯಾ ಕಾಲಕ್ಕೆ ಸ್ಪಂದಿಸದೆ ನಿರ್ವಾಹವೇ ಇಲ್ಲ. ಕೆಲವರು ಸೌಮ್ಯ ರೀತಿಯಲ್ಲಿ ಸ್ಪಂದಿಸುತ್ತಾ ಹೋದಾಗ ಅದು ಬೇರೆ ಬೇರೆ ರೀತಿಯಲ್ಲಿ ನವಿರಾಗುತ್ತಾ ಹೋಗಬಹುದು. ಆಗ ಕಂದೀಲಿನ ಕೆಳಗೆ ಕೂರುತ್ತಿದ್ದೆ ಈಗ ಲೈಟಿನ ಕೆಳಗೆ. ಆದರೆ ಯಾವ ನ್ಯೂನತೆಯೂ ಕಾಣಲೇ ಇಲ್ಲ. ನಮ್ಮ ಜೀವನದ ಯಾವ ಬಾಳಿನಲ್ಲಿ ಗಳಿಗೆಯಲ್ಲಿ ಪೂರ್ಣತೆ ಇದೆಯೋ ಅದೇ ಮನುಷ್ಯನ ಸ್ವಭಾವ. ಮನುಷ್ಯ ಎಂದಿಗೂ ಅರ್ಧಂಬರ್ಧ ಬದುಕುವುದಿಲ್ಲ. ಕಲೆ ಸುಂದರವಾಗಿದ್ದರೆ ಸೌಂದರ್ಯದ ಸ್ಪೆಲ್ಲಿಂಗ್ ಏನು ಅಂತ ಹುಡುಕುವುದು ತಪ್ಪು. ಆಹಾ ಅಷ್ಟೇ ಅದು.

ಈ ಆಹಾದ ನಂತರ?

ಮತ್ತೆ ನಾನು ನನ್ನೊಳಗೆ ಒಬ್ಬನೇ. ಎಷ್ಟೋ ವಿಷಯಗಳಲ್ಲಿ ಅಂದುಕೊಂಡಿದ್ದನ್ನು ಮಾಡಲಾಗದೆ ಕೈತಪ್ಪಿಹೋಗುತ್ತವೆ, ಇನ್ನೇನೋ ಆಗುತ್ತವೆ. ಯಾರನ್ನು ಬಹಳ ಹಚ್ಚಿಕೊಂಡಿರುತ್ತೇವೋ ಅವರೇ ತಿರುಗೇಟು ಕೊಡುತ್ತಾರೆ. ವಿಹ್ವಲಗೊಳ್ಳುತ್ತೇವೆ. ಹಾಗೇ ಉಳಿಯುತ್ತೇವಾ? ಇಲ್ಲ, ಚೇತರಿಸಿಕೊಳ್ಳುತ್ತೇವೆ. ಬದುಕು ಸಾಗುತ್ತದೆ, ಕಷ್ಟಗಳು ಬರುತ್ತವೆ. ಬದುಕುವುದೇ ಸಾಧ್ಯವಿಲ್ಲ ಅನ್ನಿಸುತ್ತದೆ ಆದರೆ ಜೊತೆಜೊತೆಗೇ ಬೆಳೆದಿರುತ್ತೇವೆ.

ರುಚಿ, ಸಾಧನೆ, ರಿಯಾಝ್ ಅನಿವಾರ್ಯ. ನೀವು ಕಲೆಗೆ ಪೂರ್ತಿ ಅರ್ಪಿಸಿಕೊಂಡಾಗಲೂ ಅದು ಜುಗ್ಗತನದಲ್ಲಿ ಇಷ್ಟಿಷ್ಟೇ ಕೊಡುತ್ತಿರುತ್ತದೆ. ಅದರ ಬೆನ್ನು ಹತ್ತಬೇಕು. ಅದನ್ನು ಮೈಗೂಡಿಸಿಕೊಳ್ಳಬೇಕು. ಮನಸುಗೂಡಿಸಿಕೊಳ್ಳುವುದಲ್ಲ! ಮನಸ್ಸು ಕೂಡಿರುವುದು ಎಷ್ಟು ಸುಲಭವಾಗಿ ಬರುತ್ತದೋ ಅಷ್ಟು ಸುಲಭವಾಗಿ ಹೊರಟೂಹೋಗುತ್ತದೆ. ಅಂದರೆ ಮೈಗೂಡಿರುವುದು ಈ ಬೆರಳುಗಳು, ಈ ಕೈಗಳು. ಇಲ್ಲಿ ಧ್ವನಿ ಶಾಶ್ವತವಾಗಿರುವ ಸಾಧ್ಯತೆ ಇದೆ. ಮೈಗೂಡಿಸಿಕೊಳ್ಳುವಾಗ ಅದು ಕಷ್ಟಗಳನ್ನು ಕೊಡುತ್ತಾ ಇರುತ್ತದೆ.

ಸೃಷ್ಟಿ; ದೊಡ್ಡದನ್ನು ಹಿಡಿಯಲು ಹೋದರೆ ಅದರ ಹಿಂದೆ ಕಷ್ಟ ಅಷ್ಟೇ ದೊಡ್ಡದಾಗಿರುತ್ತದೆ. 

******


ಕೈವಲ್ಯಕುಮಾರ್‌

ಅನುಭವಕ್ಕೆ ತೆರೆದುಕೊಳ್ಳದೆ ಧ್ವನಿ ಹುಟ್ಟಲ್ಲ: ಕೈವಲ್ಯಕುಮಾರ್‌

ಹೇಗಿತ್ತು, ಹೇಗಿದೆ ಈ ಒಂಬತ್ತು ತಿಂಗಳ ಆನ್‍ಲೈನ್‍ಮಯ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಜಗತ್ತು?

ಒಂಬತ್ತು ತಿಂಗಳುಗಳಿಂದ ಕಲಾವಿದರಷ್ಟೇ ಅಲ್ಲ ಯಾರ ಪರಿಸ್ಥಿತಿಯನ್ನೂ ಕೇಳುವ ಹಾಗಿಲ್ಲ. ದೇಶಾದ್ಯಂತ ಸಾವಿರಾರು ವೃತ್ತಿಪರ ಸಂಗೀತ ಕಲಾವಿದರು ಬೇರೆ ಬೇರೆ ಕೆಲಸಗಳನ್ನು ಮಾಡುತ್ತಿದ್ದಾರೆ. ನಾನು ಆನ್‍ಲೈನ್‍ನಲ್ಲಿ ಸಂಗೀತ ಪಾಠ ಮಾಡುತ್ತಿರುವುದು ಜೀವನೋಪಾಯಕ್ಕೆ. ಆದರೆ ಇಲ್ಲಿ ಗುರು-ಶಿಷ್ಯ ಸಂಬಂಧದೊಳಗೆ ಪರಸ್ಪರ ಚೈತನ್ಯಶಕ್ತಿ ಪ್ರವಹಿಸುವುದೇ ಇಲ್ಲ.

ಈ ತನಕ ಮೂರು ಆನ್‍ಲೈನ್‍ ಕಛೇರಿ ಕೊಟ್ಟೆ. ಕ್ಯಾಮೆರಾನೇ ಶ‍್ರೋತೃವರ್ಗ. ಸಭಿಕರನ್ನು ನೋಡುತ್ತಿರುವಂತೆ ನಟಿಸಬೇಕು. ಕಣ್ಣುಮುಚ್ಚಿ ಹಾಡುವ ಹಾಗಿಲ್ಲ, ಸಮಯದ ಗಂಟೆ ಎದುರಿಗಿರುತ್ತದೆ. ಹೀಗಿದ್ದಾಗ ಸಮಾಧಾನ, ಸುಖ, ಉತ್ಸಾಹದ ಅನುಭವವಾಗುವುದಾದರೂ ಹೇಗೆ? ಒಟ್ಟಿನಲ್ಲಿ ಆತ್ಮವೇ ಇರುವುದಿಲ್ಲ ಇಲ್ಲಿ. ಇರಲಿ ಇನ್ನೊಂದು ಆರು ತಿಂಗಳಿಗೆ ಈ ಪರಿಸ್ಥಿತಿ ತಿಳಿಯಾದೀತು.

ನಷ್ಟ-ಕಷ್ಟ-ನೋವು ಎಲ್ಲರಿಗೂ ಒಂದೇ. ಆದರೆ ಕಲಾವಿದರಿಗೆ ಇದು ಹೆಚ್ಚು ಅನ್ನಿಸುವುದಿಲ್ಲವೆ?

ಡಾರ್ಕ್ ಶೇಡ್ ಆಫ್ ಲೈಫ್. ಮೊದಲೇ ಕಲಾವಿದರದು ಅಪಾಯದ ಜೀವನ. ಯಾವ ಹೊತ್ತಿನಲ್ಲಿ ಏನಾಗುತ್ತದೆ ಎಂಬ ಆತಂಕದಲ್ಲೇ ಇರುತ್ತಾರೆ. ಸಾಕಷ್ಟು ಸಲ ಸಾಮಾನ್ಯರಂತೆ ಅವರಿಗೆ ಬದುಕು ಸಾಗಿಸಲು ಆಗದು. ಆದರೆ, ಪ್ರತಿಯೊಬ್ಬರಿಗೂ ಒಳ್ಳೆಯ ಕಾಲ ಬಂದೇ ಬರುತ್ತದೆ. ಆಗ ಹಣದ ಉಳಿತಾಯಕ್ಕೆ ಗಮನ ಕೊಡಬೇಕು. ಆದರೆ ನಮ್ಮ ಬಹುಪಾಲು ಕಲಾವಿದರದು ಲ್ಯಾವಿಷ್ ಲೈಫ್‍ಸ್ಟೈಲ್. ಇಂಥ ಪರಿಸ್ಥಿತಿ ಬಂದರೆ… ಎನ್ನುವ ಪ್ರಜ್ಞೆ ಇರಬೇಕಾಗುತ್ತದೆ.

ಚಟ ದೂರವಿಟ್ಟು ಶಿಸ್ತು ರೂಢಿಸಿಕೊಳ್ಳಬೇಕು. ಯಾವ ಸುಖಕ್ಕೂ ಮಿತಿ ಇರಬೇಕು. ನಾವು ಹೀಗೆ ನಮ್ಮೊಳಗೇ ಒಂದು ಗೆರೆ ಎಳೆದುಕೊಳ್ಳದಿದ್ದರೆ ಯಶಸ್ಸು ಗಳಿಸುವುದಾದರೂ ಹೇಗೆ? ಎಷ್ಟು ಬೇಗ ಮೇಲೇರುತ್ತೇವೋ ಉಳಿದ ವಿಷಯಗಳಿಂದಾಗಿ ಬೇಗ ಕೆಳಗಿಳಿದುಬಿಡುತ್ತೇವೆ. ಆಗ ನಿತ್ಯಜೀವನ ನೀಗಿಸುವುದೇ ಒಂದು ಶಾಪದಂತಾಗಿಬಿಡುತ್ತದೆ. ನಮ್ಮ ಪರಿಸ್ಥಿತಿಗೆ ನಾವೇ ಹೊಣೆ. ದೇವರು ಕೊಟ್ಟ ದೇಣಿಗೆಗೆ ಸರಿಯಾಗಿ ನಾವು ನಮ್ಮ ಕರ್ತವ್ಯ ಮಾಡುತ್ತಿದ್ದೇವಾ? ಇದೆಲ್ಲ ನಮಗೆ ನಾವೇ ಕೇಳಿಕೊಳ್ಳುವಂಥದ್ದು. ಇಲ್ಲವಾದರೆ ಈಗ ಹೀಗೆ ಪ್ರಕೃತಿಯೇ ನಮ್ಮನ್ನು ಪ್ರಶ್ನಿಸುತ್ತದೆ.

ಇಂಥ ಬ್ಯಾಡ್ ಪ್ಯಾಚ್ ನಲ್ಲಿ ಕಲಾವಿದರು ತಮ್ಮನ್ನು ತಾವು ಖುಷಿಯಾಗಿಟ್ಟುಕೊಳ್ಳಲು ಸಾಧ್ಯವೇ?

ಕಲಾವಿದ ಸಾಧ್ಯವಾದಷ್ಟು ಸಂತೋಷದಿಂದ ಇರಬೇಕು. ಅಸಂತೋಷ ಇದೆಯೆಂದರೆ ಅದಕ್ಕೆ ಅವರ ಮನಸ್ಥಿತಿಯೇ ಕಾರಣ. ಯಾವತ್ತೂ ಸಂಗೀತದೊಳಗೆ ಇದ್ದುಬಿಟ್ಟರೆ ಅಸಂತೋಷ ಕಾಡುವುದೇ ಇಲ್ಲ. ಈ ಒಂಬತ್ತು ತಿಂಗಳು ನಾನು ಧ್ಯಾನ, ಯೋಗ, ಸಂಗೀತದಲ್ಲಿ ನಿರಂತರವಾಗಿ ತೊಡಗಿಕೊಂಡಿರುವುದರಿಂದ ಸಂತೋಷವಾಗಿಯೇ ಇದ್ದೇನೆ. ಜೀವನದಲ್ಲಿ ಎಲ್ಲಾ ಹಂತಗಳೂ ಬರುತ್ತವೆ. ಆದರೆ ಅದನ್ನೂ ಹೇಗೆ ಸಮಚಿತ್ತದಿಂದ ಸ್ವೀಕರಿಸಬೇಕು ಅನ್ನುವುದು ಗೊತ್ತಿರಬೇಕು. ಕಛೇರಿಗಳಿರದಿದ್ದರೆ ಕುಸಿಯುತ್ತೇವೆ ನಿಜ. ಆದರೆ ಆಗಲೂ ನನ್ನನ್ನು ನಾನು ಸಮತೋಲನಗೊಳಿಸಿಕೊಳ್ಳುವ ಬಗೆ ಹೇಗೆ ಅನ್ನುವುದು ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ.

ಮಲ್ಲಿಕಾರ್ಜುನ ಮನ್ಸೂರರು ಇದಕ್ಕೆ ಒಳ್ಳೆಯ ಉದಾಹರಣೆ. ಹಿರಿಯರಿಂದ ಒಳ್ಳೆಯ ಆದರ್ಶಗಳನ್ನು ರೂಢಿಸಿಕೊಳ್ಳಬೇಕು. ಅವರಿಗೆ ಬೆಂಗಳೂರಿನಲ್ಲಿ ಡಯಾಲಿಸಿಸ್ ಮಾಡಿದ ನಂತರ, ಹದಿನೈದು ದಿನ ಪೂರ್ಣವಿಶ್ರಾಂತಿ ಬೇಕು ಅಂತ ಡಾಕ್ಟರ್ ಹೇಳಿದರು. ಆದರೆ ತಾಸಿನ ನಂತರ ಎರಡು ತಾಸುಗಟ್ಟಲೆ ಹಾಡಿದರು. ಎಲ್ಲಾ ಡಾಕ್ಟರುಗಳು ಎದ್ದು ನಿಂತು ಕೇಳಿದರು. ನಂತರ ಬೆಂಗಳೂರು ಕಿಡ್ನಿ ಫೌಂಡೇಶನ್ ಶುರು ಆಯ್ತು. ಇದು ಆತ್ಮವಿಮರ್ಶೆಯ ಕಾಲ. ಧೈರ್ಯವಾಗಿ ನಿಂತರೆ ಏನೂ ಆಗುವುದಿಲ್ಲ.

ಅಷ್ಟಕ್ಕೂ ವೇದಿಕೆಯ ಮೇಲೆ ಮಾತ್ರ ಕಲಾವಿದರು. ರಸ್ತೆಗೆ ಬಂದರೆ ಅವರೂ ಒಬ್ಬ ಸಾಮಾನ್ಯ ಮನುಷ್ಯರು. ಯಾರೊಂದಿಗೂ ನಗಬಹುದು ಮಾತನಾಡಬಹುದು ಅವರವರ ಕ್ಷೇತ್ರದ ಹೊರತಾಗಿಯೂ! ಬಹಳಷ್ಟು ಕಲಾವಿದರು ಮಾಡುವ ತಪ್ಪು ಇಲ್ಲಿಯೇ. ನಾನು ಎಲ್ಲರಿಗಿಂತ ಭಿನ್ನ ನನ್ನ ದಾರಿ ಬೇರೆ ಎಂದು ತೋರಿಸಲು ಹೋಗುತ್ತಾರೆ. ಹೀಗಿದ್ದರೆ ಯಾರು ಕೇರ್ ಮಾಡುತ್ತಾರೆ? ಸರಳವಾಗಿ ಇರ್ರಿ. ಖುಷಿಯಾಗಿ ಇರ್ರಿ, ನೀವು ಕಟ್ಟಿಕೊಂಡ ದಂತಗೋಪುರದಿಂದ ಆಚೆ ಬನ್ನಿ. ಇಲ್ಲಾ, ನಾನು ಇರುವುದೇ ಹೀಗೆ ಅಂದುಕೊಂಡರೆ ಕಷ್ಟಗಳು ಶುರುವಾಗುತ್ತವೆ; ಎದುರಿಸೋಕೆ ತಯಾರಾಗಿ. ಪ್ರತೀ ವ್ಯಕ್ತಿತ್ವಕ್ಕೂ ಅವರವರ ಆಯ್ಕೆ ಇದ್ದೇ ಇರುತ್ತದೆ. ಆದರೆ ಯಾರಿಗೂ ಯಾರನ್ನೂ ದೂರುವ ಹಕ್ಕಿಲ್ಲ. 

ಯುವಜನರಲ್ಲಿ ಶಾಸ್ತ್ರೀಯ ಸಂಗೀತದ ಬಗ್ಗೆ ಆಸಕ್ತಿ ಮೊಳೆಯಿಸಲು ಗುರುಬಂಧುಗಳು ಈವತ್ತು ಅವಶ್ಯವಾಗಿ ಬದಲಾವಣೆ ಮಾಡಿಕೊಳ್ಳಬೇಕಾದ ಅಂಶಗಳು ಯಾವುವು?

ಮಕ್ಕಳಿಗೆ ಹಾಲುಡಿಸುವಾಗ, ಉಣ್ಣಿಸುವಾಗ ಭಕ್ತಿಗೀತೆ ಭಾವಗೀತೆಯನ್ನು ನಾವು ಕೇಳಿಸಿದ್ದೆವೆಯೇ? ಹೋಗಲಿ, ಹತ್ತು ತಾಸು ಕೇಳಲು, ಹತ್ತುತಾಸು ರಿಯಾಝ್ ಮಾಡಲು ಯಾರಿಗೆ ಪುರಸೊತ್ತಿದೆ? ಅದರಲ್ಲೂ ಕಡಿಮೆ ಸಮಯದಲ್ಲಿ ಯಶಸ್ಸು ಬೇಕು. ಸಂಗೀತ ಕ್ಷೇತ್ರದಲ್ಲಿ ಇದು ಸಾಧ್ಯವಿಲ್ಲ. ಹಾಗಾಗಿಯೇ ನಾನು ‘ಧ್ವನಿ ಸಂಸ್ಕಾರ’ ತಂತ್ರವನ್ನು ಕಂಡುಹಿಡಿದಿದ್ದು. ನೀವು ಸಂಗೀತ ಕಲಾವಿದರಾಗಬೇಕೆಂಬ ದೃಢ ಸಂಕಲ್ಪ ಮಾಡಿದ್ದರೆ, ನಿಮ್ಮ ಜೀವನದ ಐದು ವರ್ಷಗಳನ್ನು ನನಗೆ ಕೊಡಿ, ಅಷ್ಟರೊಳಗೆ ನಿಮ್ಮನ್ನು ಒಳ್ಳೆಯ ಪ್ರದರ್ಶನ ಕಲಾವಿದರನ್ನಾಗಿ ರೂಪಿಸುತ್ತೇನೆ. ಯೋಗ-ಪ್ರಾಣಾಯಾಮದ ತಳಹದಿಯ ಮೇಲೆಯೇ ಈ ತಂತ್ರ ನಿಂತಿರುವುದು. ಆದರೆ ಎಷ್ಟು ಜನ ನನ್ನ ಬಳಿ ಬರಲು ಸಾಧ್ಯ?

ಕಲೆಯಲ್ಲಿ ಆಸಕ್ತಿ ಇದ್ದರೆ ಶರಣಾಗುತ್ತೀರಿ. ಶರಣಾಗದಿದ್ದರೆ ಅದರ ಆಳ ಗೊತ್ತೇ ಆಗುವುದಿಲ್ಲ, ಕಲ್ಪನೆಗೂ ಬರುವುದಿಲ್ಲ. ಬಹಳಷ್ಟು ಜನರಿಗೆ ಪ್ರತಿಭೆ ಇದೆ. ಆದರೆ ಬೆರಳೆಣಿಕೆಯಷ್ಟು ಜನ ಆಳವಾಗಿ ಸಾಧಿಸಿಕೊಂಡಿದ್ದಾರೆ. ಉಳಿದವರದು ಬರೀ ಗಿಮಿಕ್. ಹಣಬಲದಿಂದ ಕಛೇರಿ ಗಿಟ್ಟಿಸಿಕೊಳ್ಳುವುದು, ಸಿ.ಡಿ ಮಾಡುವುದು, ಪದವಿ ಪಡೆದುಕೊಳ್ಳವುದು, ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನೂ ಗಳಿಸಿಕೊಳ್ಳುವುದು. ಹಣಬಲದಿಂದ ಬಂದಿದ್ದು ಕಲೆಯೆ?

ನಮ್ಮ ಶಾಸ್ತ್ರೀಯ ಸಂಗೀತವನ್ನು ಕಲಿಸುವ ವಿಧಾನದಲ್ಲೇ ತಪ್ಪುಗಳಿವೆ. ರಾಗವನ್ನು ಕಲಿಸುತ್ತೇವೆ ಆದರೆ ಅದನ್ನು ಹೇಗೆ ಪ್ರಸನ್ನ ಮಾಡಿಕೊಳ್ಳಬೇಕು, ಯಾವ ಯಾವ ಕೋನಗಳಿಂದ ಅದನ್ನು ಸ್ಪರ್ಶಿಸಬೇಕು ಎನ್ನುವ ಹೊಳಹುಗಳನ್ನೇ ಹೇಳಿಕೊಡುವುದಿಲ್ಲ. ಸುಮ್ಮನೇ ನೀ ನನ್ನನ್ನು ಹಿಂಬಾಲಿಸು ಅಂದರೆ ಹೇಗೆ? ಅನುಕರಿಸಿದ್ದು ಕಲೆಯೇ ಅಲ್ಲ. ಶಿಷ್ಯರ ಪ್ರತಿಭೆ ಹೊಮ್ಮಲು ಕೇವಲ ಸಹಕರಿಸುತ್ತಿರಬೇಕು, ಹೀಗೇ ಮಾಡು ಅಂತ ಹೇಳುವಹಾಗಿಲ್ಲ. ಬಂದಿಶ್ ಹೇಳಿಕೊಡಿ, ರಾಗದ ಸ್ವರೂಪ ಹೇಳಿಕೊಡಿ. ಮುಂದೆ ಅವರ ಹಾದಿಯಲ್ಲೇ ಅವರನ್ನು ಹೋಗಲು ಬಿಡಿ. ಗೊಂದಲವೆನ್ನಿಸಿದಾಗ ಬಂದು ಕೇಳಿಯೇ ಕೇಳುತ್ತಾರೆ. ನಮ್ಮಲ್ಲಿ ಹಾಗಿಲ್ಲ, ತಾಸುಗಟ್ಟಲೇ ಗುರು ಹೇಳಿದ್ದನ್ನೇ ಪುನರುಚ್ಚರಿಸುತ್ತಿರಬೇಕು. ಇಂಥ ಮುಂತಾದ ನಕಾರಾತ್ಮಕ ವಿಚಾರಗಳು ಶಿಷ್ಯನಿಗೂ ವರ್ಗಾಯಿಸಲ್ಪಡುತ್ತವೆ. ಇದರ ಬಗ್ಗೆ ಗುರುವಿಗೆ ಅರಿವಿರುತ್ತದೆ ಆದರೆ ಶಿಷ್ಯನಿಗೆ ಈ ಪ್ರಕ್ರಿಯೆಯ ಬಗ್ಗೆ ಗೊತ್ತೇ ಆಗುವುದಿಲ್ಲ. ಶಿಷ್ಯನೊಳಗಿರುವ ಶೈಲಿ ಗುರುತಿಸಿ ಹೇಳಬೇಕು. ಆಗ ಅವನ ವ್ಯಕ್ತಿತ್ವ ಹೊರಹೊಮ್ಮುತ್ತದೆ.

ಗುರುವಾದವನು ಉನ್ನತ ಮಟ್ಟದಲ್ಲಿ ಯೋಚಿಸಬೇಕು. ಶಿಷ್ಯನಿಗೆ ಸ್ವಲ್ಪ ಯಶಸ್ಸು ಸಿಗುತ್ತಿದ್ದಂತೆಯೇ ಅಭದ್ರತೆಗೆ ಬೀಳುವ ಗುರು ಅನ್ಯಾಯದ ಮಾರ್ಗವನ್ನು ಹಿಡಿಯುತ್ತಾನೆ; ತಪ್ಪಾಗಿ ಕಲಿಸುವುದು, ತಪ್ಪು ದಾರಿ ಹಿಡಿಸುವುದು ಹೀಗೆ. ವಿದ್ಯೆಯನ್ನು ಮುಕ್ತವಾಗಿ ದಾನ ಮಾಡುವುದನ್ನು ಕಲಿಯಬೇಕು. ಇದನ್ನು ಯಾವ ವಿಶ್ವವಿದ್ಯಾಲಯಗಳು, ಸಂಘ-ಸಂಸ್ಥೆಗಳೂ ಕಲಿಸುವುದಿಲ್ಲ.

ಮನಸಿನ ಮಾತು ಕೇಳುವುದೆಂದರೇನು, ಕಲಾವಿದರಿಗೆ ಸದ್ಯದ ಪರಿಸ್ಥಿತಿಯಲ್ಲಿ ಇದು ಎಷ್ಟು ಮುಖ್ಯ?

ಕಲಾವಿದರ ಮನಸ್ಸಿಗೆ ಹೆಚ್ಚು ನೆಮ್ಮದಿ, ಶಾಂತಿ, ತೃಪ್ತಿ ಬೇಕು. ಅದು ಬೇಕೆಂದರೆ ಹೊರಜಗತ್ತಿನ ಆಕರ್ಷಣೆಗಳಿಗೆ ಶರಣಾಗುವುದನ್ನು ಕಡಿಮೆ ಮಾಡಬೇಕು. ಈ ಕುರಿತಾಗಿ ನಮ್ಮ ಒಳಮನಸ್ಸಿನ ಪ್ರಜ್ಞೆ ಎಚ್ಚರಿಸುತ್ತಲೇ ಇರುತ್ತದೆ. ಆದರೆ ನಾವು ಅದರ ಮಾತು ಕೇಳುವುದಿಲ್ಲ! ಉತ್ತುಂಗದಲ್ಲಿದ್ದಾಗ ಮನಬಂದಂತೆ ವರ್ತಿಸುತ್ತೇವೆ. ಮರುಕ್ಷಣವೇ ಅದರ ಫಲಾಫಲವನ್ನೂ ಅನುಭವಿಸುತ್ತೇವೆ. ಆದರೆ ದೇವರು ಬುದ್ಧಿವಂತ, ಹೆಜ್ಜೆಹೆಜ್ಜೆಗೂ ವಿಧವಿಧವಾಗಿ ಎಚ್ಚರಿಸುತ್ತಿರುತ್ತಾನೆ. ಕಿವಿಗೊಡಬೇಕು. ಇಲ್ಲಿ ನಸೀಬಿನ ಆಟ ಏನೂ ಇಲ್ಲ. ಎಲ್ಲವನ್ನೂ ನಾವೇ ಸೃಷ್ಟಿಸಿಕೊಳ್ಳುವುದು.

ಗುರುವಾದವನು ಇಂಥ ಸೂಕ್ಷ್ಮಗಳೊಂದಿಗೆ ಜೀವನ ನಿರ್ವಹಣೆಯ ಕಲೆಯ ಬಗ್ಗೆಯೂ ಆಗಾಗ ಕಲ್ಪನೆ ಕೊಡುತ್ತಿರಬೇಕು. ಅದು ಅವನ ಜವಾಬ್ದಾರಿ.

ಶಾಸ್ತ್ರೀಯ ಸಂಗೀತ ಸೀಮಿತ ವರ್ಗದವರಿಗೆ ಮಾತ್ರ ಎಂದು ನಿರ್ಧರಿಸಿರುವಲ್ಲಿ ಯಾರ ಪಾತ್ರ ಹೆಚ್ಚು?

ಮೂವತ್ತು ವರ್ಷ ದೇಶ-ವಿದೇಶ ಸುತ್ತಿ ಬಂದೆ. ನಮ್ಮ ಶಾಸ್ತ್ರೀಯ ಸಂಗೀತ ಕಲಾವಿದರನ್ನು ನೋಡುವ ದೃಷ್ಟಿ ಬದಲಾಗಬೇಕೆಂದರೆ, ಗುರುವಾದವನು ಸಂಗೀತ ಕಲಿಕೆಯ ವಿಧಾನವನ್ನು ಸರಳಗೊಳಿಸಿ ಕಲಿಸಬೇಕಿದೆ. ಅದಕ್ಕಾಗಿ ಸ್ವಂತ ವಿಚಾರ ಮಾಡಬೇಕು. ಶಬ್ದೋಚ್ಛಾರ, ಆಲಾಪದ ವಿಧಾನ, ತಾನ್ ವಿನ್ಯಾಸ, ಮುಖಭಾವ ಎಲ್ಲವೂ ಬದಲಾಗಬೇಕು. ಬದಲಾವಣೆಗೆ ಒಗ್ಗಟ್ಟು ಬೇಕು. ನಮ್ಮದೇ ಶ್ರೇಷ್ಠ ಘರಾಣಾ ಅಂತ ಕುಳಿತರೆ ಈಗಿನ ಹುಡುಗರು ಯಾವ ಘರಾಣೆಯೂ ಬೇಡ ಅನ್ನುತ್ತಾರೆ.

ನಮ್ಮಲ್ಲಿ ಶಿಸ್ತಿಲ್ಲ. ಅದಕ್ಕೇ ಹಿಂದೆ ಬಿದ್ದಿದ್ದೇವೆ. ಶಾಸ್ತ್ರೀಯ ಸಂಗೀತ ಜನಸಾಮಾನ್ಯರಿಗೆ ತಿಳಿಯುವುದಿಲ್ಲ ಅಂತೇನಿಲ್ಲ, ನಮಗೆ ಮನಸೆಳೆಯುವಂತೆ ಹಾಡಲು ಬರುವುದಿಲ್ಲ ಅದಕ್ಕೆ ಜನ ಸೇರುವುದಿಲ್ಲ ಹೀಗೆಂದು ಒಬ್ಬ ಕಲಾವಿದರಾದರೂ ಧೈರ್ಯದಿಂದ ಹೇಳಲಿ? ನಮ್ಮ ಗುಂಗಿನೊಳಗೆ ನಾವು ಹಾಡುತ್ತೇವೆ ಬೇಕಾದರೆ ಕೇಳಿ, ಬೇಡವಾದರೆ ಬಿಡಿ ಅನ್ನುವ ಧೋರಣೆಯನ್ನು ಶಾಸ್ತ್ರೀಯ ಸಂಗೀತ ಕಲಾವಿದರು ಇನ್ನಾದರೂ ಬದಲಾಯಿಸಿಕೊಳ್ಳಬೇಕು. ಒಂದು ವೇದಿಕೆಯ ಶಿಸ್ತನ್ನು ಪಾಲಿಸಬೇಕು. ಸಂಗೀತದೊಂದಿಗೆ ನಿಮ್ಮ ವ್ಯಕ್ತಿತ್ವವನ್ನೂ ಹೇಗೆ ಬಿಂಬಿಸಿಕೊಳ್ಳುತ್ತೀರಿ ಅನ್ನುವುದನ್ನು ಯೋಚಿಸಬೇಕು. ಧ್ಯಾನಿಸಿ ನಿಮ್ಮೊಳಗಿನ ಚೈತನ್ಯವನ್ನು ಹೇಗೆ ಕಾಪಾಡಿಕೊಳ್ಳುತ್ತೀರಿ? ಸಭಿಕರಲ್ಲಿ ಯಾರಿಗೆ ಏನು ಬೇಕು? ಕಣ್ಣು ಹಾಯಿಸಿದ ತಕ್ಷಣ ನಿಮಗದು ಗೊತ್ತಾಗುವಂತಿರಬೇಕು. ನಮ್ಮ ಪ್ರಸ್ತುತಿ ಕೇಳುಗರನ್ನು ತಣಿಸುತ್ತಿದೆಯೋ ಇಲ್ಲವೋ ಅದಕ್ಕಾಗಿ ಹೇಗೆ ವಿನ್ಯಾಸ, ಶೈಲಿಯನ್ನು ಬದಲಾಯಿಸಿಕೊಳ್ಳಬೇಕು ಅನ್ನುವ ಪ್ರಜ್ಞೆ ಇರಬೇಕು. ಇದು ಹೊರಗೂ ಒಳಗೂ ಏಕಕಾಲಕ್ಕೆ ನಡೆಯುವ ಪ್ರಕ್ರಿಯೆ.  

ನಮ್ಮೊಳಗಿನ ದೇವರು ಮೆಚ್ಚುವುದೇ ಪ್ರೋತ್ಸಾಹವಲ್ಲವೆ? ಕಲಾವಿದರಿಗೆ ಯಾಕೆ ಪ್ರಶಸ್ತಿ-ಪುರಸ್ಕಾರಗಳು ಬೇಕು, ಅದರಲ್ಲೂ ಅರ್ಜಿ ಹಾಕುವುದು ಇತ್ಯಾದಿ…

ಐವತ್ತು ವರ್ಷಗಳ ತನಕ ತಯಾರಿಯೊಳಗೆ ಕಲಾವಿದನ ವಯಸ್ಸು ಕಳೆಯುತ್ತದೆ. ಐವತ್ತರ ನಂತರ ಸಂಗೀತದ ಪ್ರತಿಯೊಂದು ಅಂಶಗಳೂ ಅವನಿಗೆ ಅರ್ಥವಾಗುತ್ತಾ ಹೋಗುತ್ತವೆ. ಅರವತ್ತರಿಂದ ಎಪ್ಪತ್ತರೊಳಗೆ ಅವನ ಪ್ರಸ್ತುತಿಯಲ್ಲಿ ಪ್ರಬುದ್ಧತೆ ಪ್ರಜ್ವಲಿಸುತ್ತಿರುತ್ತದೆ. ಕಲಾವಿದ ತನ್ನ ಮಾನಸಿಕ, ದೈಹಿಕ ಆರೋಗ್ಯ, ಮಾನಸಿಕ ಸ್ಥಿರತೆ, ಶಕ್ತಿಯನ್ನು ಕಾಪಾಡಿಕೊಂಡಿದ್ದರೆ ಐವತ್ತರಿಂದ-ಅರವತ್ತು ಉಚ್ರಾಯ ಕಾಲ. ಈ ಹಂತದಲ್ಲಿ ಪ್ರೋತ್ಸಾಹ ಕೊಟ್ಟರೆ ಇನ್ನೂ ಕೊಡುಗೆ ಕೊಡಬಹುದು. ಪ್ರಶಸ್ತಿ ವಿಚಾರಗಳಲ್ಲಿ ತಜ್ಞರ ಕಮೀಟಿ ಮಾಡಿ, ಮಾನದಂಡಗಳಲ್ಲಿ ತಿದ್ದುಪಡಿ ತರಬೇಕು. ಕ್ರಿಡೆ, ಸಿನೆಮಾ ಮುಂತಾದ ಕ್ಷೇತ್ರಗಳವರಿಗೆ ಮೂವತ್ತು ತಲುಪುವುದರೊಳಗೆ ಭಾರತರತ್ನ, ಪದ್ಮಶ್ರೀ. ಭೀಮಸೇನ ಜೋಶಿಯವರಿಗೆ ಭಾರತರತ್ನ ಸಂದ ಸಂದರ್ಭವನ್ನು ನೆನಪಿಸಿಕೊಳ್ಳಿ.

ಶಾಸ್ತ್ರೀಯ ಸಂಗೀತ ಕಲಾವಿದರು ಹಗಲೂ ರಾತ್ರಿ ಸಾಧನೆ ಮಾಡಿರುವುದಕ್ಕೆ ಬೆಲೆ ಇಲ್ಲವಾ? ಸಮಯಕ್ಕೆ ತಕ್ಕಂತೆ ನಮಗೂ ಮೆಚ್ಚುಗೆ ಬೇಕು. ಸಿನೆಮಾ ಸಂಗೀತ ಕ್ಷೇತ್ರದವರು ನಮ್ಮ ಮೇಲೆ ಬದುಕುತ್ತಿದ್ದಾರೆ. ನಮ್ಮ ಬಳಿ ಪಾಠ ಹೇಳಿಸಿಕೊಂಡು ಅದನ್ನೇ ರೀಪ್ರೊಡ್ಯೂಸ್ ಮಾಡಿ ಒಂದು ಹಾಡಿಗೆ ಒಂದು ಕೋಟಿ ಸಂಭಾವನೆ ಪಡೆಯುತ್ತಾರೆಂದರೆ…

ನಮ್ಮ ಸರ್ಕಾರ ಕೊಡುವಷ್ಟು ಪ್ರಶಸ್ತಿಗಳನ್ನು ಯಾವ ರಾಜ್ಯದ ಸರ್ಕಾರಗಳೂ ಕೊಡುವುದಿಲ್ಲ. ಮೊದಲ ಸ್ಥಾನದಲ್ಲಿ ನಾವಿದ್ದೇವೆ ನಂತರ ಮಧ್ಯಪ್ರದೇಶ. ನಮ್ಮಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ ಆದರೆ ಸ್ಕೋಪ್ ಇಲ್ಲ. ದುರ್ದೈವವೆಂದರೆ ಕಲಾವಿದ ಕೊನೇದಿನಗಳನ್ನು ಎಣಿಸುತ್ತಿರುವಾಗ ಪ್ರಶಸ್ತಿ ಕೊಡುತ್ತೇವೆ. ಆಗ ಯಾಕೆ ಬೇಕು?

ಬರೀ ಕಲಾರಾಧನೆ ಮಾಡಿಕೊಂಡು ಬೆಳೆಯಲು ನಮ್ಮ ದೇಶದಲ್ಲಿ ಯಾಕೆ ಸಾಧ್ಯವಾಗುವುದಿಲ್ಲ?

ನಮ್ಮ ದೇಶದಲ್ಲಿ ಎಲ್ಲವೂ ಪ್ರತಿಷ್ಠೆ ಹೆಸರಲ್ಲಿ! ಬೇರೆ ದೇಶದಲ್ಲಿ ಯಾವ ಕೆಲಸ ಮಾಡಿಕೊಂಡೂ ಅವನು ಕಲೆಯಲ್ಲಿ ಸಾಧನೆ ಮಾಡಬಹುದು. ಈ ಸಂದರ್ಭದಿಂದಲಾದರೂ ನಾವು ಸಮಾಜವನ್ನು ನಿರ್ಲಕ್ಷಿಸುವುದನ್ನು ಕಲಿಯಬೇಕು. ಎಸ್‍ಎಸ್‍ಎಲ್‍ಸಿ ನಂತರ ನಮ್ಮ ಬದುಕು ನಮ್ಮದು. ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಎಷ್ಟೋ ಜನರು ಹಾಲು ಹಾಕಿ, ಪೇಪರ್ ಹಾಕಿ ಜೀವನ ಮಾಡಿದ ಉದಾಹರಣೆಗಳಿಲ್ಲವಾ? ಈ ‘ಮಾನ’ ಬಿಡಲೇಬೇಕು ಯಶಸ್ಸು ಬೇಕೆಂದರೆ. ಜನ ಮೂರು ದಿನ ಮಾತ್ರ ಮಾತನಾಡುತ್ತಾರೆ. ಐದನೇ ದಿನ ಎಲ್ಲರೂ ಮರೀತಾರೆ. ಬೇಕಾದಷ್ಟು ಒಳ್ಳೆಯದಿರಲಿ ಕೆಟ್ಟದಿರಲಿ. ಇದು ಸಮಾಜದ ರೀತಿನೀತಿ!

ಮನೆತನದ ಮರ್ಯಾದೆಯ ಬಗ್ಗೆ ಎಂದೂ ತಲೆಕೆಡಿಸಿಕೊಳ್ಳಬೇಡಿ. ಸಣ್ಣಪುಟ್ಟ ಕೆಲಸ ಮಾಡಿ ಸಂಗೀತ ಸಾಧನೆಗೆ ಸಮಯ ಕೊಟ್ಟುಕೊಳ್ಳಿ. ಇನ್ನಾದರೂ ನಿಮ್ಮ ಸಲುವಾಗಿ ಬದುಕುವುದನ್ನು ರೂಢಿಸಿಕೊಳ್ಳಿ. ಮರ್ಯಾದೆ ಬಿಡಲೇಬೇಕು. ಈಗ ಎಲ್ಲಿಯೂ ಆನ್‍ಲೈನ್‍ ಶಿಕ್ಷಣ ಲಭ್ಯ. ಜೀವನೋಪಾಯಕ್ಕೆ ನಿಮಗೆ ಬೇಕಾದ ಕೋರ್ಸ್ ಮಾಡಲು ಮನಸ್ಸು ಮಾಡಿ.

ಗಂಡಾಗಲಿ ಹೆಣ್ಣಾಗಲಿ ಕಲೆಯ ನಿಯಮಗಳು ಒಂದೇ. ಆದರೂ …

ಆತ್ಮವಿಶ್ವಾಸ, ಸ್ವಯಂ ನಿಯಂತ್ರಣ ಕಲೆಯ ಕ್ಷೇತ್ರದಲ್ಲಿ ವಿಶೇಷವಾಗಿ ಬೇಕು. ನಿಧಾನ ಚಲಿಸುವವರೇ ಇಲ್ಲಿ ಗೆಲ್ಲುವವರು. ಕಲೆಯ ವಿಷಯದಲ್ಲಿ ಗಂಡೂ ಹೆಣ್ಣೂ ಒಂದೇ. ತನಗೆ ಬೇಕಾದಂಥ ಸ್ವಾತಂತ್ರ್ಯವನ್ನು ರೂಢಿಸಿಕೊಳ್ಳುವ ವಿಷಯದಲ್ಲಿಯೂ, ಸಂಗಾತಿಗಳ ಆಯ್ಕೆಯ ವಿಷಯದಲ್ಲಿಯೂ.  ಆದರೂ ಕೌಟುಂಬಿಕ ಚೌಕಟ್ಟಿನಲ್ಲಿ ನಿರೀಕ್ಷೆಗಳು ಸಮಸ್ಯೆಗಳು ಉದ್ಭವಿಸುತ್ತವೆ. ಅದನ್ನು ಸರಿದೂಗಿಸಿಕೊಂಡು ಹೋಗುವ ಸ್ಥೈರ್ಯ ಬೆಳೆಸಿಕೊಳ್ಳಬೇಕು. ಅಪಾಯಕ್ಕೆ ಒಡ್ಡಿಕೊಳ್ಳಬೇಕು, ದೃಢ ಮನಸ್ಸು ಬೇಕು ಕುಟುಂಬ, ಸಮಾಜಕ್ಕಿಂತ ಕಲೆ ಮುಖ್ಯ. ಚೌಕಟ್ಟು ಎಲ್ಲರಿಗೂ ಅನ್ವಯ. ಅದೇ ಚೌಕಟ್ಟಿನಿಂದ ಹೊರಗೆ ಹೋಗಲೂ ಬರುತ್ತದೆ ಹಾಗೇ ಒಳಗೆ ಬರಲೂ. ಸಂದರ್ಭಕ್ಕೆ ತಕ್ಕಂತೆ ಹೊರಗೆ ಹೋದಹಾಗೆ ಮಾಡಬೇಕು, ಮತ್ತೆ ಒಳಗೆ ಬಂದಿರಬೇಕು. ಎಲ್ಲಾ ಸ್ವಂತದ ಮೇಲಿದೆ. ನಾನು ಕಲೆಯನ್ನೂ ಸಂಸಾರವನ್ನೂ ಸರಿದೂಗಿಸಿಕೊಳ್ಳುತ್ತೇನೆ ಎನ್ನುವ ದೃಢಮನಸ್ಸು ಬೇಕು. ಆದರೆ ನಾವು ಯಾವ ವರ್ಗದಲ್ಲಿ ಬದುಕುತ್ತಿದ್ದೇವೆ ಅನ್ನುವುದು ಮುಖ್ಯ. ಕೆಲವೊಮ್ಮೆ ಆ ವರ್ಗದಿಂದ ಹೊರಗೆ ಬರಬೇಕಾಗುತ್ತದೆ. ನಿಮ್ಮ ಕುಟುಂಬ ಅಥವಾ ಸಮಾಜದ ಆಲೋಚನೆಗಳು ಕೆಳಸ್ಥರದಲ್ಲಿದ್ದಾಗ ನಿಮ್ಮ ಕಲೆಗೆ ಪ್ರಾಧಾನ್ಯ ಎಲ್ಲಿ ಸಿಗುತ್ತದೆ? ಆಗ ಆ ವಾರಾವರಣದಿಂದ ಹೊರಬರಲೇಬೇಕಾಗುತ್ತೆ.  ಸಮಾಜದಿಂದ ಹೊರಬಂದರೆ ನಮಗೆ ಮಾನ್ಯತೆ ಇಲ್ಲ ಎನ್ನುವುದನ್ನೆಲ್ಲ ಬಿಡಿ. ನೀವು ಸಂಗೀತದೊಂದಿಗೆ ಬದುಕಬೇಕು ಅಂತ ನಿರ್ಧಾರ ಮಾಡಿದ್ದೀರಿ ಅಂದ ಮೇಲೆ ಅದು ಒಳ್ಳೆಯದೇ. ನಿಮ್ಮ ಅಸ್ತಿತ್ವ ಯಾವುದರಲ್ಲಿದೆ ಅನ್ನುವ ಸ್ಪಷ್ಟತೆ ಇರಬೇಕು. ಅದಕ್ಕೆ ತಕ್ಕಂತೆ ಒಮ್ಮೆ ನೀವು ರಿಸ್ಕ್ ತೆಗೆದುಕೊಂಡರೆ ಬದುಕು ಸರಳವಾಗುತ್ತದೆ. ಆಗ ನಿಮ್ಮ ಸಾಧನೆಗೆ ಸಮಾಜವೇ ತಲೆಬಾಗುತ್ತೆ. ಬಯ್ಯುವ ಸಮಾಜವೇ ನಿಮ್ಮನ್ನು ಎತ್ತಿ ಹಿಡಿಯುತ್ತದೆ. ಸಮಾಜಕ್ಕೆ ಒಂದೇ ಮುಖ ಇಲ್ಲ ಹಲವಾರು ಮುಖಗಳಿವೆ. ಸಮಯಕ್ಕೆ ತಕ್ಕಂತೆ ಅದರ ಮುಖಗಳು ಬದಲಾಗುತ್ತಿರುತ್ತವೆ. ಆದ್ದರಿಂದ ಸಮಾಜ ಹೀಗೇ ಇದೆ ಅಂತ ಹೇಳೋದಕ್ಕೂ ಸಾಧ‍್ಯವಿಲ್ಲ. ನೀವು ಏನಾಗಬೇಕು ಅನ್ನೋದರ ಬಗ್ಗೆ ಮಾತ್ರ ಗಮನ ಇರಬೇಕು. ಧೈರ್ಯಕ್ಕೆ ಲಕ್ಷ್ಮೀ ಮಾಲೆ ಹಾಕುತ್ತಾಳೆ ಹೊರತು ಅಧೈರ್ಯಕ್ಕೆ ಎಂದೂ ಹಾಕುವುದಿಲ್ಲ.

ಅನುಭವಕ್ಕೆ ತೆರೆದುಕೊಳ್ಳದೆ ಧ್ವನಿ ಹುಟ್ಟುವುದಾದರೂ ಹೇಗೆ? ಕಲಾವಿದರು ಮುಕ್ತವಾಗಿ ವಿಚಾರ ಮಾಡುವುದನ್ನು ರೂಢಿಸಿಕೊಳ್ಳಬೇಕು. ಆಗಲೇ ನಮ್ಮ ಧ್ವನಿಯಲ್ಲಿ ಸ್ಪಷ್ಟತೆ ಬರೋದಕ್ಕೆ ಸಾಧ್ಯ.

ಕೇಳಿದ ಪ್ರಶ್ನೆಗಳು

1  ಅಂತರ್ಜಾಲಮಯ ಜಗತ್ತಿನಲ್ಲಿ ಶಾಸ್ತ್ರೀಯ ಸಂಗೀತದ ಆನ್‍ಲೈನ್ ಕಲಿಕೆ, ಪ್ರಸ್ತುತಿಯ ಬಗ್ಗೆ ನಿಮ್ಮ ಅನುಭವ-ಅಭಿಪ್ರಾಯವೇನು?

2 ಸಂಗೀತದಲ್ಲಿ ಗುರು–ಶಿಷ್ಯ ಸಂಬಂಧದ ಮಹತ್ವವೇನು? ಯುವಜನರಲ್ಲಿ ಶಾಸ್ತ್ರೀಯ ಸಂಗೀತದ ಬಗ್ಗೆ ಆಸಕ್ತಿ ಮೊಳೆಯಿಸಲು ಏನು ಮಾಡಬೇಕು?

3 ಸಂಗೀತದ ಮುಂದೆ ಯಾವ ಲಿಂಗವೂ ಒಂದೇ. ನಮ್ಮಲ್ಲಿ ಇಷ್ಟು ಪ್ರತಿಭಾವಂತ ಕಲಾವಿದೆಯರಿದ್ದರೂ ಮುನ್ನೆಲೆಗೆ ಬರುವಲ್ಲಿ ತೊಡಕಾಗುತ್ತಿರುವ ಸಂಗತಿಗಳು ಯಾವುವು?

4 ನಮ್ಮ ರಾಜ್ಯದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಕ್ಕೆ ಬೇಕಾದ ಪರಿಸರ ನಿರ್ಮಾಣ ಮಾಡುವಲ್ಲಿ ನಾವು ಸೋಲುತ್ತಿರುವುದೆಲ್ಲಿ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು