ಸೋಮವಾರ, ನವೆಂಬರ್ 30, 2020
26 °C
ಪ್ರಜಾವಾಣಿ ಕನ್ನಡ ನಾಡು ನುಡಿ ಹಬ್ಬ

ಪ್ರಜಾವಾಣಿ ಫೇಸ್‌ಬುಕ್‌ ಲೈವ್‌: ಹೆಜ್ಜೆ ಗೆಜ್ಜೆಗಳಲ್ಲಿ ರಿಂಗಣಿಸಿದ ಕನ್ನಡದ ಕಾವ್ಯ

ಉಮಾ ಅನಂತ್ Updated:

ಅಕ್ಷರ ಗಾತ್ರ : | |

Prajavani

ಕನ್ನಡ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ‘ಪ್ರಜಾವಾಣಿ‘ಯು ‘ಕನ್ನಡ ನಾಡು ನುಡಿ ಹಬ್ಬ’ ಆಚರಿಸುವ ಮೂಲಕ ಕನ್ನಡ ಕಾವ್ಯ ಕಂಪನ್ನು ಜಗತ್ತಿಗೇ ತೋರಿಸುವ ವಿಶಿಷ್ಟ ಕಾರ್ಯಕ್ರಮಗಳ ಗುಚ್ಛವನ್ನು ಫೇಸ್‌ಬುಕ್‌ ಲೈವ್‌ ಸರಣಿಯಲ್ಲಿ ಪ್ರಸ್ತುತಪಡಿಸಿದೆ.

***

‘ಕನ್ನಡ ಎಂದರೆ ಸಂಗೀತದಂತೆ; ಕನ್ನಡ ಎಂದರೆ ಸಪ್ತಸ್ವರಗಳಂತೆ...’ ಕನ್ನಡದ ಬಗ್ಗೆ ಇಂಥ ಎಷ್ಟೇ ನುಡಿಗಳನ್ನು ಬರೆದು ಹಾಡಿ ಹೊಗಳಿದರೂ ಕನ್ನಡದ ರಸದ ಸೊಗಸನ್ನು  ಪದಗಳಲ್ಲಿ ಹಿಡಿದಿಡಲಾಗದು. ಕನ್ನಡ ಕವಿಗಳು ಕನ್ನಡ ಭಾಷೆ, ನಾಡು ನುಡಿಯ ಬಗ್ಗೆ ಮನತಣಿಯೆ ಬರೆದರು.

ಕನ್ನಡ ರಾಜ್ಯೋತ್ಸವ ಆಚರಣೆಯ ಶುಭ ಸಂದರ್ಭದಲ್ಲಿ ಇಡೀ ನವೆಂಬರ್‌ ಮಾಸ ಕನ್ನಡ ನುಡಿತೇರು ಎಳೆಯುವ ಸಮಯ. ಕನ್ನಡ ಗೀತೆ ಹಾಡುವ, ನೃತ್ಯ ನಮನ ಸಲ್ಲಿಸುವ ಸಂದರ್ಭ. ಇಂಥ ಗಳಿಗೆಯಲ್ಲಿ ಸದಾ ಹೊಸತನಕ್ಕೆ ತುಡಿಯುವ, ಪ್ರಯೋಗಶೀಲ ಮನಸ್ಸುಗಳಿಗೆ ತನ್ನನ್ನು ಒಡ್ಡಿಕೊಳ್ಳುವ ನಾಡಿನ ಹೆಮ್ಮೆಯ ಪತ್ರಿಕೆ ‘ಪ್ರಜಾವಾಣಿ‘ಯು ‘ಕನ್ನಡ ನಾಡು ನುಡಿ ಹಬ್ಬ’ ಆಚರಿಸುವ ಮೂಲಕ ಮತ್ತೊಂದು ಹೊಸ ಮೈಲಿಗಲ್ಲು ಸೃಷ್ಟಿಸಿದೆ. ಕನ್ನಡ ಕಾವ್ಯ ಕಂಪನ್ನು ಜಗತ್ತಿಗೇ ತೋರಿಸುವ ವಿಶಿಷ್ಟ ಕಾರ್ಯಕ್ರಮಗಳ ಗುಚ್ಛವನ್ನು ಫೇಸ್‌ಬುಕ್‌ ಲೈವ್‌ ಸರಣಿಯಲ್ಲಿ ಪ್ರಸ್ತುತಪಡಿಸಿದೆ.

ನೃತ್ಯ ಸರಣಿ ಆರಂಭಗೊಂಡಿದ್ದು ನವೆಂಬರ್‌ 2ರಂದು. ಬೆಂಗಳೂರಿನ ಸಮನ್ವಯ ಡ್ಯಾನ್ಸ್‌ ಕಂಪನಿ ಕನ್ನಡ ನೃತ್ಯ ನಮನ ಸಲ್ಲಿಸಿದ್ದು ವಿದುಷಿ ವೀಣಾ ಮೂರ್ತಿ ವಿಜಯ್‌ ತಂಡ ಗಣೇಶನ ಮೇಲಿನ ‘ಪುಷ್ಪಾಂಜಲಿ’ಯೊಡನೆ ಕಾರ್ಯಕ್ರಮ ಆರಂಭಿಸಿತು. ಕನಕದಾಸರ ರಚನೆ ‘ಏನೀ ಮಹಾನಂದವೇ..’ ಭಾವಪೂರ್ಣ ಅಭಿನಯ ಗಮನಸೆಳೆಯಿತು. ಮುಂದೆ ಕನಕದಾಸರ ಬಾರೊ ಕೃಷ್ಣಯ್ಯ ರಾಗಮಾಲಿಕೆ ಕೂಡ ಸೊಗಸಾದ ಆಯ್ಕೆಯೇ ಆಗಿತ್ತು.


ಬೆಂಗಳೂರಿನ ಭ್ರಮರಿ ನೃತ್ಯ ರೆಪರ್ಟರಿಯ ಸ್ನೇಹಾ ಕಪ್ಪಣ್ಣ ನೃತ್ಯತಂಡ

ಬೆಂಗಳೂರಿನ ‘ನಾಟ್ಯಾಂತರಂಗ’ ನೃತ್ಯತಂಡ ಶುಭಾ ಧನಂಜಯ ನೇತೃತ್ವದ ತಂಡ. ಅವರ ಮುಂದಾಳತ್ವದಲ್ಲಿ ಡಿವಿಜಿ ಅವರ ರಚನೆಯೊಂದಿಗೆ ಆರಂಭವಾಗಿ ಕನ್ನಡ ಗೀತೆಗಳ ಸೊಬಗನ್ನು ನೃತ್ಯದಲ್ಲಿ ಅಭಿವ್ಯಕ್ತಿಸಿದ್ದು ಹೊಸ ಅನುಭವ ನೀಡಿತು.

ಶಿವಮೊಗ್ಗದ ಸಹಚೇತನ ನಾಟ್ಯಾಲಯ ವತಿಯಿಂದ ವಿದುಷಿ ಸಹನಾ ಚೇತನ್‌ ಸಂಯೋಜನೆಯ ‘ಭಾವ ನರ್ತನ ಯಾನ’ದಲ್ಲಿ ಹಿರಿಯ ಕವಿಗಳಾದ ಎನ್‌.ಎಸ್‌. ಲಕ್ಷ್ಮೀನಾರಾಯಣ ಭಟ್ಟ ಹಾಗೂ ಎಚ್‌.ಎಸ್‌. ವೆಂಕಟೇಶ್‌ಮೂರ್ತಿ ಅವರ ಕವನಗಳು ‘ಕಾವ್ಯನರ್ತನ’ ಮಾಡಿದವು.

ನಿತ್ಯೋತ್ಸವ ಕವಿ ಕೆ.ಎಸ್‌. ನಿಸಾರ್‌ ಅಹಮದ್‌ ಅವರ ಕಾವ್ಯದ ಅಭಿವ್ಯಕ್ತಿ ನಡೆದದ್ದು ಓಂಕಾರ ನೃತ್ಯ ಮೂಲಕ. ಕಲಬುರಗಿಯ ವಿದುಷಿ ಶುಭಾಂಗಿ ಸುಧೇಂದ್ರ ಅವರ ನೃತ್ಯ ನಿರ್ದೇಶನದಲ್ಲಿ ‘ನಿಸಾರ್‌ ಕಾವ್ಯಾಭಿಷೇಕ’ ಮೈಮನಕ್ಕೆ ಆಹ್ಲಾದದ ಸಿಂಚನ ನೀಡಿತ್ತು.

ನೂಪುರ ಕಲಾವಿದರು ಪ್ರಸ್ತುತಪಡಿಸಿದ ‘ನಾಡು ನುಡಿಹಬ್ಬ’ವೂ ನೃತ್ಯದ ಪರಿಭಾಷೆಯಲ್ಲಿ ಕನ್ನಡದ ಸೊಬಗನ್ನು ಸೊಗಸಾಗಿ ವರ್ಣಿಸಿತು. ಬೀದರ್‌ನ ನೂಪುರ ನೃತ್ಯ ಅಕಾಡೆಮಿ ನಿರ್ದೇಶಕಿ ಉಷಾ ಪ್ರಭಾಕರ್‌ ನೇತೃತ್ವದಲ್ಲಿ ‘ವಚನಾನಂದದಿಂದ ಕುಣಿಕುಣಿದಾಡುವೆ’ ನೃತ್ಯದ ಮೂಲಕ ಹೆಜ್ಜೆ ಗೆಜ್ಜೆಗಳ ರಿಂಗಣದಲ್ಲಿ ಕನ್ನಡದ ಕಂಪು ಸ್ವಚ್ಛಂದವಾಗಿ ವಿಹರಿಸಿತು.

ವಿದುಷಿ ಸ್ನೇಹಾ ಕಪ್ಪಣ್ಣ ಸಂಯೋಜನೆಯಲ್ಲಿ ರಾಷ್ಟ್ರಕವಿ ಕುವೆಂಪು ಗೀತೆಗಳು ನೃತ್ಯದ ಮೂಲಕ ಅರಳಿತು. ಭ್ರಮರಿ ಡಾನ್ಸ್‌ ರೆಪರ್ಟರಿಯ ಸದಸ್ಯೆಯರು ‘ಮನುಜಮತ ವಿಶ್ವಪಥ’ ನೃತ್ಯರೂಪಕವನ್ನು ನಡೆಸಿಕೊಟ್ಟದ್ದು ಅತ್ಯಂತ ಆಪ್ಯಾಯಮಾನವಾಗಿತ್ತು.

ಪವಿತ್ರ ವಿಷುವಲ್‌ ಆರ್ಟ್ಸ್‌ ಇನ್ಸ್‌ಟಿಟ್ಯೂಟ್‌ ಮುಂಬಯಿ ನಡೆಸಿಕೊಟ್ಟ ನೃತ್ಯಪ್ರದರ್ಶನ ಅಮೋಘವಾಗಿ ಮೂಡಿಬಂತು. ಪವಿತ್ರ ಕೃಷ್ಣ ಭಟ್‌ ಪುರಂದರ ದಾಸರ ಕೃತಿ ‘ಸತತ ಗಣನಾಥ..’ ರಾಗಮಾಲಿಕೆ, ಆದಿತಾಳದಲ್ಲಿ ಗಣಪ, ಸರಸ್ವತಿ, ಲಕ್ಷ್ಮಿ, ಹನುಮಂತನ ಕುರಿತ ಕೃತಿ ಭಕ್ತಿಭಾವದಿಂದ ಪುಳಕಗೊಳ್ಳುವಂತೆ ಮಾಡಿತು. ದ.ರಾ. ಬೇಂದ್ರೆಯವರ ‘ಮುಗಿಲ ಮಾರಿಗೆ ರಾಗ ರತಿಯ..’ ಹಾಡು ನೃತ್ಯದಲ್ಲಿ ಸೊಗಸಾಗಿ ಅಭಿವ್ಯಕ್ತಗೊಂಡಿತು.

ಬೆಂಗಳೂರಿನ ಅಚ್ಚೀ ಶಾಸ್ತ್ರೀಯ ನೃತ್ಯಕೇಂದ್ರ ಪ್ರಸ್ತುತಪಡಿಸಿದ ಸಾಹಿತಿ ದೊಡ್ಡರಂಗೇಗೌಡ ಅವರ ಸಾಹಿತ್ಯವನ್ನೊಳಗೊಂಡ ‘ನಮ್ಮೂರ ಮಂದಾರ ಹೂವೆ..’ ನೃತ್ಯರೂಪಕವೂ ಹೊಸ ಅನುಭೂತಿ ಸೃಷ್ಟಿಸುವಲ್ಲಿ ಯಶಸ್ವಿಯಾಯಿತು.

ಬೆಳಗಾವಿಯ ಶಾಂತಲಾ ನಾಟ್ಯಾಲಯ ವಿದುಷಿ ರೇಖಾ ಅಶೋಕ ಹೆಗಡೆ ಅವರ ನೇತೃತ್ವದಲ್ಲಿ ದಾಸರಪದಗಳನ್ನು ಸೊಗಸಾಗಿ ಪ್ರಸ್ತುತಪಡಿಸಿತು. ‘ಜಗನ್ಮೋಹನ ಕೃಷ್ಣ’ ಎಂಬ ಕೃಷ್ಣನ ಮೇಲಿನ ರಚನೆಯನ್ನು ಮನಮುಟ್ಟುವಂತೆ ಪ್ರಸ್ತುತಪಡಿಸಿದರು.

ಭರತಾಂಜಲಿ ಕೊಟ್ಟಾರ, ಮಂಗಳೂರು ಗುರು ಪ್ರತಿಮಾ ಶ್ರೀಧರ್‌, ‘ಹರಸೆಮ್ಮ ತಾಯಿ ಭುವನೇಶ್ವರಿ’ ಎನ್ನುತ್ತಾ ಕನ್ನಡ ತಾಯಿಯ ಸ್ತುತಿಯನ್ನು ಭಕ್ತಿಭಾವದಿಂದ ಮಾಡಿದರು. ‘ಕೇಳುತಿಹುದು ಮುರಳಿ ನಾದ ಕಾಲದೇಶಗಳನು ಕಳೆದು...’ ನಾದಮಯ, ನೃತ್ಯಮಯ ಗಮನಸೆಳೆಯಿತು.

PV Facebook Live: ಜ್ಞಾನಪೀಠ ಪ್ರಶಸ್ತಿ ವಿಜೇತರ ಕುರಿತ ‘ಅಷ್ಟರತ್ನ ನೃತ್ಯ ರೂಪಕ’ #KannadaRajyotsava #Kannada #FacebookLive

Posted by Prajavani on Sunday, 15 November 2020

ನವದೆಹಲಿಯ ಕರ್ನಾಟಕ ಸಂಘ ವಸಂತ ಶೆಟ್ಟಿ ಬೆಳ್ಳಾರೆ ಅವರ ನೇತೃತ್ವದಲ್ಲಿ ಅನೇಕ ಕನ್ನಡಪರ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಪ್ರಜಾವಾಣಿಗಾಗಿಯೇ ‘ಕವಿ ನಮನ–ಕಾವ್ಯ ನೃತ್ಯ’ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬಂತು. ಇಲ್ಲಿ ಪುರಂದರ ದಾಸರ, ಕನಕದಾಸರ, ಡಿವಿಜಿ, ನಿಸಾರ್‌ ಅಹಮದ್‌ ಅವರ ಕಾವ್ಯನೃತ್ಯ ಮನಸ್ಸಿಗೆ ಮುದನೀಡಿದವು. ವಿಘ್ನವಿನಾಶಕ ಗಣಪನ ಸ್ಮರಣೆಯೊಂದಿಗೆ ನೃತ್ಯ ಹಬ್ಬ ಉತ್ತಮ ಮುನ್ನುಡಿ ಬರೆಯಿತು. ಗುರು ಶಾಲಿನಿ ಪ್ರತಾಪ್‌, ಅಕ್ಷತಾ ರಾವ್‌, ಸ್ವಪ್ನಾ ಅತ್ತಾವರ ರಾಧಾ ಭಟ್‌ ಮುಂತಾದ ಕಲಾವಿದೆಯರು ಸುಮಾರು 45 ನಿಮಿಷಗಳ ಕಾಲ ಕನ್ನಡ ಹಾಗೂ ಭಕ್ತಿಯ ಸಿಂಚನಗೈದರು.

ನೀಲಾಲಯ ನೃತ್ಯಕೇಂದ್ರ ತುಮಕೂರು ಗುರು ಬಾಲಾ ವಿಶ್ವನಾಥ್‌ ಸಂಯೋಜನೆಯ ಅಕೋ ಶ್ಯಾಮ ಪುತಿನ ಕಾವ್ಯ ನರ್ತನ ಮಾಡಿದ್ದು ಕೂಡ ನೃತ್ಯತಂಡದ ಆಳವಾದ ಜ್ಞಾನ ಹಾಗೂ ಪರಿಶ್ರಮವನ್ನು ಎತ್ತಿ ತೋರಿಸುವಂತಿತ್ತು.

ಅಮೆರಿಕದ ಅನಿವಾಸಿ ಕನ್ನಡಿಗರೂ ಸೇರಿದಂತೆ, ರಾಜಧಾನಿ ದೆಹಲಿಯಿಂದ ಹಿಡಿದು ಕರ್ನಾಟಕದ ಹಲವು ಜಿಲ್ಲೆಗಳ ನೃತ್ಯ ಕಲಾವಿದರು ನಾಟ್ಯದ ಮೂಲಕ ಕನ್ನಡದ ವೈಭವವನ್ನು ಸಾರಿದವು. ಈ ಮೂಲಕ ನೃತ್ಯದಲ್ಲಿ ಭಾಗವಹಿಸಿದ ಎಲ್ಲ ತಂಡಗಳು ಕಿವಿಗಳಿಗೆ, ಕಣ್ಣುಗಳಿಗೆ ಅಕ್ಷರಶಃ ಹಬ್ಬವನ್ನುಂಟು ಮಾಡಿದ್ದು ಕೂಡ ನೆನಪಿನಂಗಳದಲ್ಲಿ ಉಳಿಯುವಂತಿದ್ದವು.

ಕವಿಗಳಿಗೆ ನೃತ್ಯ ನಮನ
ಕನ್ನಡ ಕವಿಗಳಿಗೆ ಅಮೆರಿಕನ್ನಡಿಗರ ನೃತ್ಯನಮನ ಮಕ್ಕಳ ದಿನಾಚರಣೆ ದಿನ ನಡೆಯಿತು. ‘ಗುರುವಂದನಾ ಆರ್ಟ್ಸ್‌ ಅಕಾಡೆಮಿ ಲೂಯಿಸ್‌ ವಿಲ್ಲೆ ಕೆಂಟುಕಿ, ಅಮೆರಿಕ ಅರ್ಪಿಸಿದ ಅಖಿಲಾ ಅಯ್ಯರ್‌ ಸಂಯೋಜನೆಯ ‘ಪರಿಮಳದ ಪಯಣ’ ನೃತ್ಯ ಕಾರ್ಯಕ್ರಮ ಇಡೀ ಸರಣಿಗೆ ಅತ್ಯಂತ ಸೊಗಸಾಗಿ ಮಂಗಳ ಹಾಡಿತು. ಕನ್ನಡ ಗೀತೆಗಳಿಗೆ ಅನಿವಾಸಿ ಭಾರತೀಯರು ನಡೆಸಿಕೊಟ್ಟ ಭರತನಾಟ್ಯ ವಿಭಿನ್ನ ಅನುಭವ ನೀಡಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು