ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋನು–ರಾಜೇಶ್ ರಾಗ ಅನುರಾಗ

Last Updated 14 ಮಾರ್ಚ್ 2021, 5:12 IST
ಅಕ್ಷರ ಗಾತ್ರ

ಪಂಡಿತ್ ರೋನು ಮಜುಂದಾರ್ ಭಾರತೀಯ ಸಂಗೀತ ಲೋಕದ ದೊಡ್ಡತಾರೆ. ಕೈಯಲ್ಲಿ ಕೊಳಲು ಹಿಡಿದುಕೊಂಡು ದೇಶ ವಿದೇಶ ಸುತ್ತುತ್ತಲೇ ಇರುತ್ತಾರೆ. ಹುಟ್ಟಿದ್ದು ವಾರಾಣಸಿಯಲ್ಲಿಯಾದರೂ ಬದುಕು ಕಂಡುಕೊಂಡಿದ್ದು ಮುಂಬೈಯಲ್ಲಿ. ತಂದೆಯಿಂದ ಸಂಗೀತದ ಓಂಕಾರ ಹೇಳಿಸಿಕೊಂಡರೂ ಪಂಡಿತ್ ರವಿಶಂಕರ್ ಶಿಷ್ಯತ್ವ ಪಡೆದ ಅದೃಷ್ಟವಂತ. ಹಾಲಿವುಡ್, ಬಾಲಿವುಡ್‌ಗಳಲ್ಲಿಯೂ ಕೊಳಲಿನ ನಿನಾದ ಹರಿಸಿದ ಗಟ್ಟಿಗ. ಹಾಡುಗಾರಿಕೆಯಿಂದ ಕೊಳಲು ವಾದನಕ್ಕೆ, ಹಿಂದೂಸ್ತಾನಿಯಿಂದ ಕರ್ನಾಟಕಿ ಸಂಗೀತಕ್ಕೆ, ಮತ್ತೆ ಹಿಂದೂಸ್ತಾನಿಗೆ ಜಿಗಿಯುತ್ತ ಎತ್ತರಕ್ಕೆ ಬೆಳೆದವರು. ಕೊರಳಿನ ನರಗಳನ್ನು ಉಬ್ಬಿಸಿ ಕೊಳಲು ನುಡಿಸಿದರೆ ಕೇಳುಗರ ಮನದಲ್ಲಿ ಆನಂದದ ಅಲೆ. ತಮ್ಮ ಕೊಳಲಿನ ಜೊತೆಗೆ ಇತರ ಎಲ್ಲ ವಾದನಗಳ ಜುಗಲ್ಬಂದಿಗೆ ಸದಾ ಮುಂದು. ಕೇಳುಗರಿಗೆ ಕರ್ನಾಟಕಿ, ಸಿನೆಮಾ ಸಂಗೀತದ ರುಚಿಯನ್ನೂ ಹತ್ತಿಸಿ ತಾವೂ ಖುಷಿಪಡುವವರು.

ರೋನು ಕೊಳಲಿನಲ್ಲಿ ಆಟವಾಡಿದರೆ ವಿದ್ವಾನ್ ಯು.ರಾಜೇಶ್ ಬೆರಳಿನಲ್ಲಿ ಆಟವಾಡುತ್ತಾರೆ. ಅವರದ್ದು ಕೊಳಲಾದರೆ ಇವರದ್ದು ಮ್ಯಾಂಡೊಲಿನ್. ಅವರು ರಾಗ, ಇವರು ಅನುರಾಗ. ರಾಜೇಶ್ ಮೂಲತಃ ಆಂಧ್ರಪ್ರದೇಶದವರಾದರೂ ಈಗ ಚೆನ್ನೈ ನಿವಾಸಿ. ಅಣ್ಣ ಯು.ಶ್ರೀನಿವಾಸ್ ಅವರಿಂದ ಸಂಗೀತ ಕಲಿತವರು. ಸಂಗೀತದಲ್ಲೂ, ಬದುಕಿನಲ್ಲೂ ರಾಜೇಶ್ ಅವರಿಗೆ ಅಣ್ಣನೇ ಮಾರ್ಗದರ್ಶಿ. ಶಾಸ್ತ್ರೀಯ ಸಂಗೀತದಿಂದ ಹಿಡಿದು ಸಿನೆಮಾ ಸಂಗೀತದವರೆಗೆ ಎಲ್ಲ ಕಡೆ ವಿಜಯ ಸಾಧಿಸಿದ್ದಾರೆ. ಚೆನ್ನೈಯಲ್ಲಿ ಸಂಗೀತ ಶಾಲೆ ನಡೆಸುತ್ತಾ ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ಕಛೇರಿ ನೀಡುತ್ತಾ ಬೆಳೆದವರು.

ವಿವಿಡ್‌ ಆರ್ಟ್ಸ್ ಅಂಡ್ ಎಂಟರ್‌ಟೇ‌ನ್‌ಮೆಂಟ್ ಹಾಗೂ ದಿ ಪಯನೀರ್ ಆರ್ಟ್ಸ್ ಎಜುಕೇಷನ್ ಸೊಸೈಟಿ ನಡೆಸುತ್ತಿರುವ ‘ಉತ್ತರ ದಕ್ಷಿಣ’ ಜುಗಲ್ಬಂದಿ ಸರಣಿಯ ಕಾರ್ಯಕ್ರಮದಲ್ಲಿ ಪಂಡಿತ್ ರೋನು ಮಜುಂದಾರ್ ಮತ್ತು ವಿದ್ವಾನ್ ರಾಜೇಶ್ ಅವರು ಬೆಂಗಳೂರಿನಲ್ಲಿ ಕಳೆದ ವಾರ ಕೊಳಲು–ಮ್ಯಾಂಡೊಲಿನ್ ಜುಗಲ್ಬಂದಿ ನಡೆಸಿದರು. ಇದಕ್ಕೂ ಮುನ್ನ ಅವರು ‘ಪ್ರಜಾವಾಣಿ’ಗೆ ಜುಗಲ್ಬಂದಿ ಸಂದರ್ಶನವನ್ನೂ ನೀಡಿದರು.

ಇಬ್ಬರು ಕಲಾವಿದರಿಗೂ ಬೆಂಗಳೂರಿನ ಜೊತೆ ಭಾವನಾತ್ಮಕ ಸಂಬಂಧ ಇದೆ. ‘ನಾನು ಸುಮಾರು 37 ವರ್ಷಗಳ ಹಿಂದೆ ಗುರು ಪಂಡಿತ್ ವಿಜಯ ರಾಘವ್ ಜೊತೆ ಬೆಂಗಳೂರಿಗೆ ಮೊದಲ ಬಾರಿ ಬಂದೆ. ಪ್ರಭಾತ್ ಕಲಾವಿದರ ಜೊತೆಗೆ ಕೆಲಕಾಲ ಇದ್ದೆ. ಇಲ್ಲಿಯೇ ಕರ್ನಾಟಕಿ ಕೊಳಲು ವಾದಕ ನಟರಾಜನ್, ತಬಲಾ ವಾದಕ ರವೀಂದ್ರ ಯಾವಗಲ್ ಜೊತೆಗೆ ಕೊಳಲು ನುಡಿಸಿದೆ. ಮೈಸೂರು ಮಂಜುನಾಥ್ ಅವರ ಜೊತೆಗೆ ಮೊದಲ ಜುಗಲ್ಬಂದಿ ನಡೆದಿದ್ದೂ ಇಲ್ಲೇ. ಕದ್ರಿ ಅವರ ಜೊತೆ ಜುಗಲ್ಬಂದಿ ಕೂಡಾ ಇಲ್ಲೇ ನಡೆದಿತ್ತು. ಬೆಂಗಳೂರು ಜನ, ಆಹಾರ ಎಲ್ಲವೂ ನನಗೆ ಇಷ್ಟ’ ಎಂದು ಪಂಡಿತ್ ರೋನು ಮಾತಿನ ಮಾಲೆ ಪೋಣಿಸಿದರು. ಅದನ್ನು ರಾಜೇಶ್ ಮುಂದುವರಿಸುತ್ತಾ, ‘ನನಗೆ ಬೆಂಗಳೂರು ಎರಡನೇ ತವರು ಮನೆ. ಒಂದು ಕಾಲದಲ್ಲಿ ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಇಲ್ಲಿಗೆ ಬರುತ್ತಿದ್ದೆವು. ಜಾಕಿರ್ ಹುಸೇನ್, ಶಂಕರ್ ಮಹದೇವನ್ ಮುಂತಾದವರ ಜೊತೆ ಇಲ್ಲಿ ಕಛೇರಿ ನೀಡಿದ್ದೇನೆ. ಬೆಂಗಳೂರಿನ ಜನ ಬಹುಶ್ರುತರು, ತೆರೆದ ಮನಸ್ಸಿನವರು, ಸಂಗೀತದ ಬಗ್ಗೆ ನಿಜವಾದ ಪ್ರೀತಿಯನ್ನು ಇಟ್ಟುಕೊಂಡವರು. ಅದಕ್ಕೇ ಅವರ ಎದುರಿಗೆ ಕಛೇರಿ ನೀಡಲು ಕೊಂಚ ಭಯ’ ಎಂದು ಹುಸಿ ಹೆದರಿಕೆ ವ್ಯಕ್ತಪಡಿಸಿದರು.

ಇಬ್ಬರಿಗೂ ತಮ್ಮ ಗುರುಗಳ ಬಗ್ಗೆ ಅಪಾರ ಗೌರವ. ಸಂಗೀತದ ಜೊತೆಗೆ ಬದುಕನ್ನೂ ಕಲಿಸಿದ ಗುರುಗಳೂ ತಮಗೆ ಸಿಕ್ಕಿದ್ದು ತಮ್ಮ ಅದೃಷ್ಟ ಎಂಬ ಭಾವ. ‘ನನ್ನ ತಂದೆಯ ಗುರುಗಳಾಗಿದ್ದ ಪಂಡಿತ್ ಪನ್ನಾಲಾಲ್ ಅವರೇ ನನಗೂ ಆರಂಭದಲ್ಲಿ ಗುರುಗಳಾಗಿದ್ದರು. ನಂತರ ಪಂಡಿತ್ ಲಕ್ಷ್ಮಣ ಪ್ರಸಾದ್ ಅವರಲ್ಲಿ ಹಾಡುಗಾರಿಕೆ ಕಲಿಯಲು ಆರಂಭಿಸಿದೆ. ಅಲ್ಲಿಂದ ಪಂಡಿತ್ ವಿಜಯರಾಘವ್ ರಾವ್ ಅವರ ಶಿಷ್ಯನಾದೆ. ಅವರದ್ದು ವಾದ್ಯವೃಂದವಿತ್ತು. ಅವರ ಗುರುಗಳು ಪಂಡಿತ್ ರವಿಶಂಕರ್. ಹಾಗಾಗಿ ನನಗೆ ರವಿಶಂಕರ್ ಅವರ ಪರಿಚಯವಾಯಿತು. ಜೊತೆಗೆ ಶಿಷ್ಯತ್ವವೂ ಲಭಿಸಿತು’ ಎಂದು ನೆನಪಿನಾಳಕ್ಕೆ ಇಳಿದರು ರೋನು.

‘ರವಿಶಂಕರ್ ಅವರೊಂದಿಗೆ ತಿರುಗಾಡುತ್ತಾ ನಾನು ಸಂಗೀತವನ್ನೂ ಕಲಿತೆ. ಜೊತೆಗೆ ಬದುಕನ್ನೂ ಕಲಿತೆ. ಆರ್.ಡಿ.ಬರ್ಮನ್ ಅವರ ಶಿಷ್ಯತ್ವ ಕೂಡ ಲಭಿಸಿತು. ಅದಕ್ಕಾಗಿಯೇ ನಾನು ಹೇಳಿದ್ದು ಸಂಗೀತ ಕಲಿಸುವವರು ಬೇಕಾದಷ್ಟು ಜನ ಸಿಗುತ್ತಾರೆ. ಸಂಗೀತದ ಜೊತೆಗೆ ಬದುಕನ್ನೂ ಕಲಿಸುವವರು ಸಿಗುವುದು ಕಷ್ಟ. ಆದರೆ ಅಂತಹ ಗುರುಗಳು ಸಿಕ್ಕಿದ್ದು ನನ್ನ ಅದೃಷ್ಟ’ ಎಂದು ರೋನು ಭಾವುಕರಾದರೆ, ರಾಜೇಶ್ ತಮ್ಮ ಗುರು, ಅಣ್ಣ ಯು.ಶ್ರೀನಿವಾಸ್ ವ್ಯಕ್ತಿತ್ವವನ್ನು ಬಿಚ್ಚಿಟ್ಟರು. ‘ನನ್ನ ಅಣ್ಣ ನನಗೆ ಸಂಗೀತ ಮಾತ್ರ ಕಲಿಸಲಿಲ್ಲ, ಬದುಕಿನ ಕೌಶಲವನ್ನೂ ಕಲಿಸಿದ. ತಂತ್ರದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ. ಹೃದಯಕ್ಕೆ ಹತ್ತಿರವಾದದ್ದನ್ನು ನುಡಿಸು. ಅದು ಸರಿಯೋ ತಪ್ಪೋ ಎಂದು ಆಲೋಚಿಸಬೇಡ. ಹೃದಯಕ್ಕೆ ತಟ್ಟುವುದು ಎಲ್ಲವೂ ಸರಿಯಾಗಿಯೇ ಇರುತ್ತದೆ ಎಂದು ಅವರು ಹೇಳುತ್ತಿದ್ದರು. ಅವರು ಎಲ್ಲವನ್ನೂ ಹೇಳಿಕೊಡಲಿಲ್ಲ. ನಾನು ಹೇಗಿರಬೇಕೋ ಹಾಗೆ ಅವರು ನಡೆದುಕೊಂಡರು. ಅವರು ನಡೆದ ಹಾದಿಯಲ್ಲಿ ನಾನು ನಡೆದೆ. ನಡೆಯುತ್ತಲೇ ಇದ್ದೇನೆ’ ಎಂದು ಅಣ್ಣನನ್ನು ಬಣ್ಣಿಸಿದರು.

ಕೇಳುಗರೂ ಗುರುವಾಗುತ್ತಾರಾ ಎಂದು ಕೇಳಿದರೆ ರಾಜೇಶ್ ‘ಕೇಳುಗರ ಚಪ್ಪಾಳೆಯೇ ದೊಡ್ಡ ಪ್ರಶಸ್ತಿ. ಅದಕ್ಕಿಂತ ದೊಡ್ಡದು ಯಾವುದೂ ಇಲ್ಲ. ಅದಕ್ಕೇ ನಾನು ಯಾವುದೇ ಕಛೇರಿಯಲ್ಲಿ ನನ್ನ ಆಯ್ಕೆಗೆ ಆದ್ಯತೆ ನೀಡುವುದಿಲ್ಲ. ಕೇಳುಗರು ಏನನ್ನು ಬಯಸುತ್ತಾರೋ ಅದನ್ನು ನುಡಿಸುತ್ತೇನೆ. ಕೇಳುಗರ ಬಗ್ಗೆ ನಮಗೆ ಗೌರವ ಇರಬೇಕು. ಮನೆಯಲ್ಲಿ ಏನೇನೋ ತಾಪತ್ರಯ ಇದ್ದರೂ, ರಸ್ತೆಯಲ್ಲಿ ವಾಹನದಟ್ಟಣೆ ಹೇಗಿದ್ದರೂ ಕಷ್ಟಪಟ್ಟು ಅವರು ನಮ್ಮ ಸಂಗೀತವನ್ನು ಅರಸಿ ಬಂದಿರುತ್ತಾರೆ. ಆ ಪ್ರಜ್ಞೆ ಕಲಾವಿದನಿಗೆ ಇರಬೇಕು. ಆಗ ಕಛೇರಿ ಚೆನ್ನಾಗಿರುತ್ತದೆ. ಕಲಾಭಿಮಾನಿಗಳೂ ಸಂತೃಪ್ತರಾಗುತ್ತಾರೆ’ ಎಂದರು. ಇದಕ್ಕೆ ಸಂಪೂರ್ಣ ಸಹಮತ ವ್ಯಕ್ತಪಡಿಸಿದ ರೋನು, ಕಛೇರಿಯಲ್ಲಿ ತಮ್ಮ ವೈಖರಿಯನ್ನು ನೋಡಿ ಹಿರಿಯ ಕಲಾವಿದರೊಬ್ಬರು ‘ಯಾರಿಂದ ಕಲಿತೆ ಇದನ್ನೆಲ್ಲಾ’ ಎಂದು ಕೇಳಿದರು. ‘ನಾನು ಪಂಡಿತ್ ರವಿಶಂಕರ್ ಶಿಷ್ಯ’ ಎಂದೆ. ‘ಓಹೋ ಭಾರತ ರತ್ನ ರವಿಶಂಕರ್. ಆದರೂ ಅವರು ಭಾರತ ರತ್ನ ಏನಲ್ಲ’ ಎಂದರು. ಆ ಮಾತನ್ನು ಕೇಳಿ ನನಗೆ ಬಹಳ ಬೇಸರವಾಯಿತು. ‘ಏನಿದು ನಮ್ಮ ಗುರುಗಳ ಬಗ್ಗೆ ಹೀಗೆ ಆಡಿದರಲ್ಲ’ ಎಂದು. ಆದರೆ ಅವರು ತಮ್ಮ ಮಾತನ್ನು ಅಷ್ಟಕ್ಕೇ ನಿಲ್ಲಿಸಲಿಲ್ಲ. ಮಾತು ಮುಂದುವರಿಸಿ ‘ರವಿಶಂಕರ್ ಭಾರತ ರತ್ನ ಅಲ್ಲ. ಅವರೊಬ್ಬ ವಿಶ್ವ ರತ್ನ’ ಎಂದರು. ಅದನ್ನು ಕೇಳಿ ನನ್ನ ಹೃದಯ ತುಂಬಿ ಬಂತು ಎಂದು ಅವರು ನೆನಪಿಸಿಕೊಂಡರು.

ವಾದ್ಯವನ್ನು ಯಾರು ಬೇಕಾದರೂ ನುಡಿಸಬಹುದು. ಆದರೆ ಅದರ ಹಿಂದೆ ಒಂದು ಅಧ್ಯಾತ್ಮ ಇರಬೇಕು. ಆ ಶಕ್ತಿಯನ್ನು ಗುರು ತುಂಬುತ್ತಾನೆ ಎಂದು ರೋನು ಮಜುಂದಾರ್ ಹೇಳಿದರೆ, ಸಂಗೀತ ಇರುವುದು ಶಾಂತಿಗಾಗಿಯೇ ವಿನಾ ಯುದ್ಧಕ್ಕಾಗಿ ಅಲ್ಲ. ಜುಗಲ್ಬಂದಿ ಎಂದರೆ ಸಂಗೀತದ ಜಗಳ ಅಲ್ಲ. ಎಲ್ಲವೂ ಒಂದಾಗುವುದೇ ಜುಗಲ್ಬಂದಿ ಎಂದರು ರಾಜೇಶ್. ಭಾರತೀಯ ಸಂಗೀತದ ಶಕ್ತಿಯೇ ಅದು. ಎಲ್ಲರನ್ನೂ ಒಂದುಗೂಡಿಸುತ್ತದೆ. ಅದಕ್ಕೇ ಎಲ್ಲಿ ಹೋದರೂ ಅದಕ್ಕೆ ಗೌರವ ಇದ್ದೇ ಇರುತ್ತದೆ. ಫ್ಯೂಜನ್ ಕೂಡಾ ಒಳ್ಳೆಯದೆ. ಆದರೆ ಫ್ಯೂಜನ್ ನಿಜವಾದ ಸಂಗೀತದ ಆಸಕ್ತಿಯನ್ನು ಕೆರಳಿಸಬೇಕು ಎಂದರು ರಾಜೇಶ್.

ರೋನು–ರಾಜೇಶ್ ರಾಗ ಅನುರಾಗದ ಸಂಗೀತದ ಸಮಾರಾಧನೆಗೆ ಸಮಯದ ಹಂಗಿರಲಿಲ್ಲ. ಇಬ್ಬರ ಅನುಭವವೂ ದೊಡ್ಡದು. ಸಂಗೀತದಂತೆ ಸಾಗುತ್ತಲೇ ಇತ್ತು ಅಲೆಅಲೆಯಾಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT