ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾದಮಯ... ಈ ವಿಶ್ವವೆಲ್ಲಾ...

Last Updated 25 ಜನವರಿ 2020, 19:30 IST
ಅಕ್ಷರ ಗಾತ್ರ

ಪಿಟೀಲಿನ ಮೂಲಕ ಪ್ರಪಂಚದ ಉದ್ದಗಲಕ್ಕೂ ನಾದವನ್ನು ಪಸರಿಸಿ ತಂತಿವಾದ್ಯದಲ್ಲಿ ಭಾರತೀಯ ಸಂಗೀತವನ್ನು ಜಗದ್ವಿಖ್ಯಾತಗೊಳಿಸಿದವರು ‘ಮೈಸೂರು ಬ್ರದರ್ಸ್‌’ ಎಂದೇ ಹೆಸರಾದ ವಿದ್ವಾನ್‌ ನಾಗರಾಜ್‌ ಹಾಗೂ ವಿದ್ವಾನ್‌ ಮಂಜುನಾಥ್‌.

ತಮ್ಮ ತಂದೆ ಮೈಸೂರು ಮಹದೇವಪ್ಪ ಅವರಿಂದ ಪಿಟೀಲು ನುಡಿಸಾಣಿಕೆಯ ತಂತ್ರಗಾರಿಕೆ ಕಲಿತು ಎಂಟನೇ ವಯ‌ಸ್ಸಿಗೇ ಪೂರ್ಣಪ್ರಮಾಣದ ಸಂಗೀತ ಕಛೇರಿ ನೀಡಿದ್ದು ಈ ಕಲಾವಿದರ ಹೆಚ್ಚುಗಾರಿಕೆ. ದೇಶ, ವಿದೇಶಗಳ ಸಾವಿರಾರು ವೇದಿಕೆಗಳಲ್ಲಿ ನಿರಂತರವಾಗಿ ನಾದಪ್ರವಾಹ ಹರಿಸುತ್ತಿರುವ ಇವರಿಗೆ ಸುವರ್ಣ ಸಂಭ್ರಮದಲ್ಲಿರುವ ಕರ್ನಾಟಕ ಗಾನ ಕಲಾ ಪರಿಷತ್ತು ‘ಗಾನಕಲಾಭೂಷಣ’ ಬಿರುದು ನೀಡಿ ಸತ್ಕರಿಸುತ್ತಿದೆ. ಫೆ. 1ರಿಂದ ಬೆಂಗಳೂರಿನ ಎನ್‌.ಆರ್‌. ಕಾಲೊನಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಸಂಗೀತೋತ್ಸವದಲ್ಲಿ ಈ ಬಿರುದು ಪ್ರದಾನವಾಗಲಿವೆ.

ಪಿಟೀಲಿನ ‘ಗಟ್ಟಿಕುಳ’ಗಳಾದ ಮೈಸೂರು ನಾಗರಾಜ್‌–ಮೈಸೂರು ಮಂಜುನಾಥ್‌ ತಮ್ಮ ಸಾಧನೆಯ ಹಾದಿ, ಪಿಟೀಲಿನ ಅಭ್ಯಾಸ, ಕಛೇರಿಗಳು, ಮನೋಧರ್ಮ, ನುಡಿಸಾಣಿಕೆಯ ತಂತ್ರಗಾರಿಕೆ, ಹೊಂದಾಣಿಕೆ, ಕೇಳುಗರ ಪ್ರಶಂಸೆ, ಧನ್ಯತೆ, ರಾಗಗಳ ಚಮತ್ಕಾರ... ಮುಂತಾದ ವಿಷಯಗಳನ್ನು ‘ಪ್ರಜಾವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಪಿಟೀಲಿನ ನಾದದಷ್ಟೇ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

* ನಿಮ್ಮ ಸಂಗೀತ ಪಯಣದ ಅವಿಸ್ಮರಣೀಯ ಕಛೇರಿಗಳು ಯಾವುವು?

ಎಂಟನೇ ವಯಸ್ಸಿನಲ್ಲಿ ಮೊದಲ ಕಛೇರಿ ನುಡಿಸಿದ ಸಂದರ್ಭ. ಬಾಲಕರಾಗಿದ್ದಾಗ ತಂದೆಯವರ ಜೊತೆಗೆ ವೇದಿಕೆಗಳಲ್ಲಿ ನುಡಿಸಿದ ಅನೇಕ ಕಛೇರಿಗಳು ಇನ್ನೂ ಮನದಾಳದಲ್ಲಿ ಹಸಿರಾಗಿವೆ. ಮುಂದೆ ನುಡಿಸುತ್ತಾ ಬಂದಂತೆ, ರಾಜ್ಯ, ರಾಷ್ಟ್ರ ಮತ್ತು ವಿಶ್ವಮಟ್ಟದ ನೂರಾರು ಕಛೇರಿಗಳು ಒಂದಕ್ಕಿಂತ ಒಂದು ವಿಭಿನ್ನ. ವಿದೇಶಗಳಲ್ಲಿ ನುಡಿಸಲು ಸಿಕ್ಕಿದ ಅವಕಾಶಗಳಂತೂ ಎಂದಿಗೂ ಸ್ಮರಣೀಯ.

ಬ್ರಿಟನ್‌ನ ರಾಯಲ್‌ ಆಲ್ಬರ್ಟ್‌ ಹಾಲ್‌, ಸಿಡ್ನಿಯ ಅಪೆರಾ ಹೌಸ್‌, ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ, ಶಿಕಾಗೊ ವಿಶ್ವ ಸಂಗೀತೋತ್ಸವ, ಸಿಂಗಪುರದ ಎಸ್ಪಿನೇಟ್‌ ಥಿಯೇಟರ್‌, ಮೆಲ್ಬರ್ನ್‌ನ ಫೆಡರೇಷನ್‌ ಸ್ಕ್ವೇರ್‌, ಇಟಲಿಯ ರಾಯಲ್‌ ಪ್ಯಾಲೇಸ್‌ ಹಾಲ್‌... ಇವೆಲ್ಲವೂ ಐತಿಹಾಸಿಕ ಪ್ರೇಕ್ಷಣೀಯ ಸ್ಥಳಗಳು. ಇಲ್ಲೆಲ್ಲ ಜನ ಟಿಕೆಟ್‌ ಖರೀದಿಸಿ ಕಾರ್ಯಕ್ರಮ ನೋಡುತ್ತಾರೆ. ಇಂತಹ ಹೆಸರಾಂತ ವೇದಿಕೆಗಳಿಗೆ ನಮ್ಮನ್ನು ಆಹ್ವಾನಿಸಿ ಪಿಟೀಲು ನುಡಿಸಲು ದೊರಕಿರುವುದು ನಿಜಕ್ಕೂ ನಮ್ಮ ಸೌಭಾಗ್ಯ.

ಇನ್ನೊಂದು ಘಟನೆ ನೆನೆಸಿಕೊಳ್ಳಬೇಕು. ಅಮೆರಿಕದ ಸ್ಯಾಂಡಿಯಾಗೋದಲ್ಲಿ ನುಡಿಸಿದ ಕಛೇರಿಗೆ ಖ್ಯಾತ ಸಿತಾರ್‌ ವಾದಕ ಪಂ. ರವಿಶಂಕರ್‌ ಅವರು ಬಂದಿದ್ದರು. ಆಗ ಅವರಿಗೆ ಅನಾರೋಗ್ಯ ಕಾಡಿತ್ತು. ಆಗಷ್ಟೇ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಿದ್ದರು. ತಮ್ಮ ಪತ್ನಿ ಹಾಗೂ ನರ್ಸ್‌ಗಳ ಜತೆ ವೀಲ್‌ಚೇರ್‌ನಲ್ಲಿ ಕುಳಿತು ಮೂಗಿಗೆ ಆಕ್ಸಿಜನ್‌ ಮಾಸ್ಕ್‌ ಹಾಕಿಕೊಂಡು ಎರಡು ಗಂಟೆಗಳ ಕಾಲ ನಮ್ಮ ಕಛೇರಿ ಕೇಳಿದರು. ನಮ್ಮನ್ನು ‘ಮೈಸೂರಿನ ರಾಜಕುಮಾರರು ಅಂದ್ರೆ ನೀವೇ’ ಎಂದು ಪ್ರೀತಿಯಿಂದ ಹೊಗಳಿದ್ದು ಎಂದಿಗೂ ಮರೆಯಲು ಸಾಧ್ಯವಿಲ್ಲ.

* ಮನೋಧರ್ಮ ಸಂಗೀತ ಕಲಾವಿದರಿಗಿಂತ ಕಲಾವಿದರದ್ದು ಭಿನ್ನ. ನಿಮ್ಮ ಮನೋಧರ್ಮದ ಬಗ್ಗೆ ಹೇಳಿ.

ಮನೋಧರ್ಮ ಪ್ರಮುಖವಾಗಿ ಭಾರತೀಯ ಸಂಗೀತದ ಹೃದಯ ಎನ್ನಬಹುದು. ಭಾರತೀಯ ಸಂಗೀತಕ್ಕೆ ವಿಶ್ವದ ಸಂಗೀತ ಪ್ರಪಂಚದಲ್ಲಿ ವಿಶಿಷ್ಟ ಸ್ಥಾನ ತಂದುಕೊಟ್ಟದ್ದೇ ಮನೋಧರ್ಮ. ನಾವು ಚಿಕ್ಕವರಿದ್ದಾಗ ನಮ್ಮ ತಂದೆ ಮನೋಧರ್ಮ ಸಂಗೀತದ ಬಗ್ಗೆ ವಿಶೇಷ ಆಸ್ಥೆಯಿಂದ, ಶಿಸ್ತುಬದ್ಧವಾದ ತಂತ್ರಗಾರಿಕೆ ಹಾಗೂ ಮನೋಧರ್ಮದಲ್ಲಿ ಸ್ವಂತಿಕೆ ಬೆಳೆಸಿಕೊಳ್ಳುವ ಬಗ್ಗೆ ಸಮಗ್ರವಾದ ಸಂಗೀತ ಶಿಕ್ಷಣ ಕೊಟ್ಟರು. ಶಾಸ್ತ್ರೀಯ ಚೌಕಟ್ಟಿನಲ್ಲಿ ಸಂಗೀತದ ಎಲ್ಲ ಅಂಶಗಳನ್ನು ಒಳಗೊಂಡಿರಬೇಕು ಎಂಬ ವಿಚಾರವನ್ನು ನಮಗೆ ಮನದಟ್ಟು ಮಾಡಿದ್ರು. ಹೀಗಾಗಿ ಸಂಗೀತದ ಎಲ್ಲ ಆಯಾಮಗಳು, ಒಳಹೊರಗಿನ, ರಾಗ ರಸ, ಹೂರಣದ ಬಗ್ಗೆ ಬಹಳಷ್ಟು ಕಲಿತುಕೊಂಡೆವು. ನಮ್ಮದೇ ಮನೋಧರ್ಮ ರೂಢಿಸಿಕೊಂಡೆವು.

ನುಡಿಸಾಣಿಕೆ ಹೇಗಿರಬೇಕು ಎಂದರೆ ಕಲಾವಿದ ಕಣ್ಮುಚ್ಚಿಕೊಂಡು ವಯೊಲಿನ್‌ ನುಡಿಸುವಾಗ ರಾಗದೇವತೆಗಳು ಕಣ್ಣಿಗೆ ಕಾಣ್ತಾ ಇರಬೇಕು. ಮನಸ್ಸಿನೊಳಗೆ ರಾಗದೇವತೆ ನರ್ತನ ಮಾಡ್ತಾ ಇರಬೇಕು. ಭೈರವಿ ರಾಗ ಎಂದರೆ ಅಲ್ಲಿ ಭೈರವಿಯ ಸೊಬಗೇ ಕಾಣಿಸ್ತಾ ಇರಬೇಕು. ಕಲ್ಯಾಣಿ, ಮೋಹನ, ಶಂಕರಾಭರಣ, ಮಾಯಾಮಾಳವಗೌಳ... ಹೀಗೆ ಯಾವ ರಾಗಗಳನ್ನು ನುಡಿಸಿದರೂ ಅದೊಂದು ತಪಸ್ಸು, ಧ್ಯಾನ ಎಂಬಂತಿರಬೇಕು. ಜೊತೆಗೆ ಭಾವನೆಗಳಿಗೂ ಜೀವತುಂಬಿ, ಕಲೆಯ ಅಭಿವ್ಯಕ್ತಿಯಲ್ಲಿ ನಮ್ಮ ಮನೋಧರ್ಮವನ್ನು ಸೇರಿಸಿದರೆ ಕೇಳುಗರು ಧ್ಯಾನಸ್ಥರಾಗುವುದರಲ್ಲಿ ಸಂಶಯವಿಲ್ಲ.

* ಕಛೇರಿಗಳಲ್ಲಿ ಬೇರೆ ಬೇರೆ ರಾಗಗಳನ್ನು ನುಡಿಸುವಾಗ ಇಬ್ಬರೂ ಹೇಗೆ ಹೊಂದಾಣಿಕೆ ಮಾಡಿಕೊಳ್ಳುತ್ತೀರಿ.

ನೂರಕ್ಕೆ ತೊಂಬತ್ತರಷ್ಟು ಕಛೇರಿಗಳಲ್ಲಿ ನಾವು ಒಟ್ಟಿಗೆ ನುಡಿಸುವಾಗ ವೇದಿಕೆ ಏರುವ ಮುನ್ನ ಏನನ್ನೂ ನಿರ್ಧರಿಸಿರುವುದಿಲ್ಲ. ಕೇಳುಗರನ್ನು ಕೇಳಿಯೇ ಯಾವ ರಾಗ ನುಡಿಸಬೇಕು ಎನ್ನುವುದನ್ನು ನಿರ್ಧರಿಸುತ್ತೇವೆ. ರಾಗ ತಾನ ಪಲ್ಲವಿಯನ್ನು ನುಡಿಸುವಾಗ ರಾಗ ತಾನ ನುಡಿಸಿ ಪಲ್ಲವಿಯನ್ನು ‘ಆನ್‌ ದಿ ಸ್ಪಾಟ್‌ ’ ಕಂಪೋಸ್‌ ಮಾಡಿ ನುಡಿಸ್ತೀವಿ. ತೋಡಿ ರಾಗ ಇರಲಿ, ಚಾರುಕೇಶಿ ಇರಲಿ, ಕೇಳುಗರ ಆದ್ಯತೆಗೇ ನಮ್ಮ ಪ್ರಾಶಸ್ತ್ಯ. ನಾವಿಬ್ಬರು ನುಡಿಸುವುದು ಕಾಂಪ್ಲಿಮೆಂಟ್‌ ಆಗಿಯೂ ಇರಬೇಕು, ಕಾಂಟ್ರಾಸ್ಟ್‌ ಆಗಿಯೂ ಇರಬೇಕು. ಒಂದೇ ತರ ಇದ್ರೆ ಒಬ್ಬರೇ ನುಡಿಸಬಹುದಲ್ಲ? ಹಾಗೆಂದು ದಿಕ್ಕಾಪಾಲಾಗಿ ನುಡಿಸುವ ಹಾಗೆಯೂ ಇಲ್ಲ. ಅಲ್ಲಿ ಸಹಮತವೂ ಇರಬೇಕು, ವೈಶಿಷ್ಟ್ಯವೂ ಇರಬೇಕು.

ಗಾನಕಲಾಶ್ರೀ

ಕರ್ನಾಟಕ ಗಾನಕಲಾ ಪರಿಷತ್ತು ಯುವ ವಿದ್ವಾಂಸರ ಸಮ್ಮೇಳನವನ್ನೂ ಜೊತೆಗೇ ನಡೆಸುತ್ತಿದ್ದು, ಖಂಜೀರ ವಾದಕರಾದ ಗುರುಪ್ರಸನ್ನ ಹಾಗೂ ಘಟಂ ವಾದಕರಾದ ಗಿರಿಧರ ಉಡುಪ ಅವರಿಗೆ ಗಾನಕಲಾಶ್ರೀ ಬಿರುದು ನೀಡಿ ಸತ್ಕರಿಸುತ್ತಿದೆ.

ಈ ಇಬ್ಬರೂ ಕಲಾವಿದರು ಪಕ್ಕವಾದ್ಯವಾದ ಖಂಜೀರ ಹಾಗೂ ಘಟಂನಲ್ಲಿ ಸಾಕಷ್ಟು ಪರಿಣತಿ ಸಾಧಿಸಿದ್ದು, ಗಾಯಕ, ವಾದಕರಿಗೆ ಸಮರ್ಥವಾದ ಸಹಕಾರ ನೀಡಿ ಕಛೇರಿ ಕಳೆಗಟ್ಟಲು ಶ್ರಮಿಸುತ್ತಿದ್ದಾರೆ. ನಾಡಿನ ನಾನಾ ಭಾಗಗಳಲ್ಲದೆ ದೇಶ, ವಿದೇಶಗಳಲ್ಲೂ ಪಕ್ಕವಾದ್ಯಗಳ ಸವಿಯನ್ನು ಉಣಿಸಿರುವುದು ಈ ಇಬ್ಬರು ಕಲಾವಿದರ ಹೆಗ್ಗಳಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT