ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ರಮ್ಯಾ ‘ರ‍್ಯಾಪ್’ ಕಾಲ...

Last Updated 10 ಜುಲೈ 2021, 19:30 IST
ಅಕ್ಷರ ಗಾತ್ರ

ಅ ದು ಜನವರಿ ತಿಂಗಳ ಕಾಲ. ಅತ್ತ ದೆಹಲಿಯಲ್ಲಿ ರೈತರ ಪ್ರತಿಭಟನೆ ಕಾವೇರುತ್ತಿದ್ದಂತೆ, ಇತ್ತ ಕನ್ನಡದ ಮನವೊಂದು ರೈತರತ್ತ ತುಡಿಯುತ್ತಿತ್ತು. ಅಲ್ಲಿಗೆ ಹೋಗಲಾರದೇ ರೈತರನ್ನು ಹೇಗೆ ಬೆಂಬಲಿಸಬಹುದೆಂದು ಯೋಚಿಸುತ್ತಿರುವಾಗ ಒಡಮೂಡಿದ್ದು ‘ವಕ್ತ್ ಆಯಾ ಹೈ’ ಅನ್ನುವ ರ‍್ಯಾಪ್ ಗೀತೆ. ರಾತ್ರೋರಾತ್ರಿ ಹೋರಾಟಗಾರರ ಮನ ಗೆದ್ದಿದ್ದ ಈ ಹಾಡನ್ನು ಹಾಡಿದ್ದು ಬೆಂಗಳೂರಿನ ರಮ್ಯಾ ಶ್ರೀಧರ್.

ಕನ್ನಡದಲ್ಲೇ ಮೊದಲ ಹಾಡು ಹಾಡಬೇಕೆಂಬ ಸಂಕಲ್ಪ ತೊಟ್ಟಿದ್ದ ರಮ್ಯಾ ಅವರ ಹಿಂದಿ ರ‍್ಯಾಪ್ ಗೀತೆಗೆ ಬೆನ್ನುತಟ್ಟಿದ್ದು ದೆಹಲಿ ಕನ್ನಡಿಗರಾದ ಪುರುಷೋತ್ತಮ ಬಿಳಿಮಲೆ ಅವರು. ಅಲ್ಲಿಂದಾಚೆಗೆ ರಮ್ಯಾ ಸಾಮಾಜಿಕ ಮಾಧ್ಯಮಗಳಲ್ಲಿ ರ‍್ಯಾಪ್ ಸಂಗೀತ ಪ್ರಿಯರ ಮನಸೂರೆಗೊಂಡರು. ತುಸು ಬ್ರೇಕ್ ಪಡೆದು ಈಚೆಗಷ್ಟೇ ‘ವೇಕ್ ಅಪ್’ ಹೆಸರಿನಲ್ಲಿ ಕನ್ನಡದಲ್ಲಿ ತಮ್ಮ ಮೊದಲ ರ‍್ಯಾಪ್ ಗೀತೆಯನ್ನು ರಮ್ಯಾ ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ್ದಾರೆ. ಬಿಡುಗಡೆಯಾದ ಮೊದಲ ವಾರದಲ್ಲೇ ಈ ಗೀತೆಯು ಏಳು ಸಾವಿರಕ್ಕೂ ಹೆಚ್ಚಿನ ವೀಕ್ಷಣೆ ಕಂಡಿದ್ದು, ‘ಪವರ್ ಸ್ಟಾರ್‌’ ಪುನೀತ್ ಮೆಚ್ಚುಗೆ ನುಡಿಗಳನ್ನಾಡಿರುವುದು ರಮ್ಯಾ ಅವರ ಉತ್ಸಾಹ ಇಮ್ಮಡಿಗೊಳಿಸಿದೆ.

‘ನಿತ್ಯದ ಬದುಕನ್ನು ನನ್ನ ಕಣ್ಣಲ್ಲಿ ಕಂಡಂತೆ ಗೀತ ಸಾಹಿತ್ಯವನ್ನಾಗಿಸಿ, ಸಂಗೀತ ನಿರ್ದೇಶಿಸಿ, ಹಾಡಿದರೆ ಹೇಗಿರುತ್ತೆ ಅಂತ ಆಲೋಚನೆ ಬಂದದ್ದೇ ತಡ, ‘ವೇಕ್ ಅಪ್‌’ ಗೀತೆ ಸಿದ್ಧವಾಯಿತು’ ಎನ್ನುತ್ತಾರೆ ರಮ್ಯಾ.

ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿರುವ ಅವರು, ಬಯೋಟೆಕ್ ಮತ್ತು ಫ್ಯಾಷನ್ ಡಿಸೈನಿಂಗ್ ಕೋರ್ಸ್ ಕೂಡಾ ಮಾಡಿದ್ದಾರೆ. ಭರತನಾಟ್ಯ, ಜುಂಬಾ ನೃತ್ಯವನ್ನೂ ಅಭ್ಯಾಸ ಮಾಡಿರುವ ರಮ್ಯಾ ಅವರ ಆಸಕ್ತಿಯ ಕ್ಷೇತ್ರಗಳು ಹತ್ತು–ಹಲವು, ಅಧ್ಯಾತ್ಮ, ವ್ಯಕ್ತಿತ್ವವಿಕಸನ ತರಬೇತಿ, ಶಾಯರಿ, ಹಿಂದಿ ಪದ್ಯಗಳನ್ನು ಯುಟ್ಯೂಬ್‌ಗೆ ಅಪ್‌ಲೋಡ್ ಮಾಡುವುದು, ಕೇಕ್ ಮಾಡುವುದು ಹೀಗೆ ಹಲವೆಡೆ ಸೃಜನಾತ್ಮಕವಾಗಿ ತೊಡಗಿಸಿಕೊಳ್ಳುವುದು ಅವರಿಗಿಷ್ಟ.

ಸಂಗೀತದ ಮೇಲಿನ ಮೋಹದಿಂದ ಶಾಸ್ತ್ರೀಯ ಸಂಗೀತಾಭ್ಯಾಸ ಮಾಡಿದ್ದ ರಮ್ಯಾ ಅವರಿಗೆ ಮೊದಲಿಗೆ ಯೂಟ್ಯೂಬ್ ಚಾನೆಲ್ ಆರಂಭಿಸುವ ಯೋಚನೆ ಇರಲಿಲ್ಲ. ಸ್ನೇಹಿತರೊಬ್ಬರ ಸ್ಟುಡಿಯೊಕ್ಕೆ ಹೋದಾಗ ಅಲ್ಲಿ ರಮ್ಯಾ ಒಂದೆರಡು ಸಾಲುಗಳನ್ನು ಗುನುಗುನಿಸಿದ್ದನ್ನು ಕೇಳಿದ ಸಂಗೀತ ನಿರ್ದೇಶಕರೊಬ್ಬರು ನೀವ್ಯಾಕೆ ಹಾಡಬಾರದು ಎಂದು ಪ್ರೇರೇಪಿಸಿದ್ದೇ ರ‍್ಯಾಪ್ ಸಂಗೀತದತ್ತ ಒಲವು ಮೂಡಲು ಕಾರಣವಾಯಿತು. ಇದಕ್ಕೂ ಮುನ್ನ, ಅಭಿಷೇಕ್ ಅವರ ಆಲ್ಬಂ ಸಂಗೀತಕ್ಕೆ ಹಾಗೂ ‘ತಮಸ್ಸು’ ಸಿನಿಮಾದ ಹಾಡುಗಳಿಗೆ ಸಾಹಿತ್ಯ ಬರೆದ, ಸಹಾಯಕ ನಿರ್ದೇಶಕಿಯಾಗಿ ದುಡಿದ ಅನುಭವವೂ ಅವರಿಗಿತ್ತು.

ಸಿನಿಮಾ, ಸಂಗೀತದತ್ತ ಅಪಾರ ಒಲವಿರುವ ರಮ್ಯಾ ಜಗತ್ತನ್ನು ಪಾಸಿಟಿವ್ ಆಗಿ ನೋಡುವ ದೃಷ್ಟಿಕೋನ ರೂಢಿಸಿಕೊಳ್ಳಬೇಕು ಅನ್ನುತ್ತಾರೆ. ಇದನ್ನೇ ವಿಷಯವನ್ನಾಗಿಟ್ಟುಕೊಂಡು ‘ವೇಕ್ ಅಪ್‌’ ರೂಪಿಸಿದೆ. ವೇಗದ ಜಗತ್ತಿನಲ್ಲಿ ಒಬ್ಬರನ್ನು ತುಳಿದು ಮತ್ತೊಬ್ಬರು ಬೆಳೆಯುವ ಪರಿಪಾಟವಿದೆ. ಮತ್ತೊಬ್ಬರ ಏಳ್ಗೆಗೆ ಹೊಟ್ಟೆಕಿಚ್ಚು ಪಡುವ ಬದಲು ಪ್ರೋತ್ಸಾಹಿಸಿ, ತಾವೂ ಬೆಳೆಯಬೇಕು ಅನ್ನುವ ಆಲೋಚನೆ ಬಂದರೆ ಎಷ್ಟು ಚೆನ್ನ? ಪುಟ್ಟ ಮಕ್ಕಳಿಂದ ಹಿಡಿದು ಪ್ರಕೃತಿಯತನಕ ಕಲಿಯುವಂಥದ್ದು ಬಹಳಷ್ಟಿದೆ. ಇರುವಷ್ಟು ದಿನ ಎಲ್ಲರೂ ಶಾಂತಿ, ಸೌಹಾರ್ದದಿಂದ ನೆಮ್ಮದಿಯಿಂದ ಬದುಕಬಹುದಲ್ಲ ಅನ್ನುವ ಆಶಯ ಅವರದ್ದು. ‘ಈ ನಿಟ್ಟಿನಲ್ಲಿ ನಮ್ಮ ಮತ್ತು ಸುತ್ತಮುತ್ತಲಿನವರ ಮನಸ್ಸು ಎಚ್ಚರವಾಗಬೇಕಿದೆ. ಸರಳವಾಗಿ ಬದುಕುವ ಕಲೆ ರೂಢಿಸಿಕೊಳ್ಳಬೇಕು. ಅದನ್ನೇ ಈ ರ‍್ಯಾಪ್ ಗೀತೆಯಲ್ಲಿ ಹೇಳಲು ಪ್ರಯತ್ನಿಸಿದ್ದೇನೆ’ ಎನ್ನುತ್ತಾರೆ ಅವರು.

‘ಈ ಹಾಡಿನ ಶೂಟಿಂಗ್ ಇನ್ನೇನು ಶುರುವಾಗಬೇಕು ಅನ್ನುವಷ್ಟರಲ್ಲಿ ವಸ್ತ್ರವಿನ್ಯಾಸ ಮಾಡುವವರು ಬರಲಿಲ್ಲ. ಆಗ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಸಹಾಯಕ್ಕೆ ಬಂತು. ಸಾಹಿತ್ಯ, ಸಂಗೀತ, ಗಾಯನ ಮತ್ತು ವಸ್ತ್ರವಿನ್ಯಾಸ ಎಲ್ಲವನ್ನೂ ಸಿದ್ಧಪಡಿಸಿಕೊಂಡು ‘ಆಲ್ ಓಕೆ’ ಅನ್ನುವ ಟೀಂ ನೆರವಿನೊಂದಿಗೆ ರ‍್ಯಾಪ್ ಗೀತೆ ಸಿದ್ಧವಾಯಿತು. ‘ವೇಕ್‌ ಅಪ್’ ಯಶಸ್ಸಿನ ಹಿಂದೆ ಕ್ಯಾಮೆರಾಮನ್ ಆಕಾಶ್, ನವೀನ್, ವಿಜಯಕೃಷ್ಣ, ಶಿಲ್ಪಾ ಸೇರಿದಂತೆ ದೊಡ್ಡ ತಂಡದ ಬೆಂಬಲವಿದೆ’ ಎಂದು ಕೃತಜ್ಞತೆ ಸಲ್ಲಿಸುತ್ತಾರೆ ರಮ್ಯಾ.

ಹಾಡು, ನೃತ್ಯದ ಜೊತೆಗೆ ದೇಹದ ಫಿಟ್‌ನೆಸ್ ಕಡೆಗೂ ಕಾಳಜಿ ವಹಿಸುವ ರಮ್ಯಾ ಅವರಿಗೆ ಸಿನಿಮಾದಲ್ಲಿ ನಟಿಸುವ ಅವಕಾಶಗಳು ಹೇರಳವಾಗಿ ಬಂದಿವೆ. ಆದರೆ, ಸ್ಕ್ರಿಪ್ಟ್ ವಿಷಯದಲ್ಲಿ ಚೂಸಿಯಾಗಿರುವ ಅವರು, ಒಳ್ಳೆಯ ಚಿತ್ರಕಥೆ ಸಿಕ್ಕರೆ ಅಭಿನಯಿಸಲು ಸಿದ್ಧ ಎನ್ನುತ್ತಾರೆ. ಕನ್ನಡದಲ್ಲಿ ಹೆಣ್ಣುಮಕ್ಕಳು ಹೆಚ್ಚಾಗಿ ರ‍್ಯಾಪ್ ಸಂಗೀತ ಮಾಡುತ್ತಿಲ್ಲ. ಹಿಂದಿ, ಪಂಜಾಬಿ ಭಾಷೆಯಲ್ಲಿ ಬಹಳಷ್ಟು ಮಂದಿ ಸಿಗುತ್ತಾರೆ. ಹಾಗಾಗಿ, ಕನ್ನಡದಲ್ಲೇ ಮುಂದೆಯೂ ರ‍್ಯಾಪ್ ಗೀತೆಗಳನ್ನು ಮಾಡುವ ಆಶಯ ವ್ಯಕ್ತಪಡಿಸುವ ರಮ್ಯಾ ಅವರಿಗೆ ಬರವಣಿಗೆ, ಸಾಹಿತ್ಯ, ಓದು ಅಪ್ಪ–ಅಮ್ಮನಿಂದ ಬಂದ ಬಳುವಳಿ. ‘ಆದರೆ, ಎಲ್ಲೂ ಅಪ್ಪ–ಅಮ್ಮನ ಪ್ರಭಾವ ಬಳಸಿಕೊಂಡಿಲ್ಲ. ಸ್ವತಂತ್ರವಾಗಿ ಬೆಳೆಯಬೇಕೆಂಬ ಆಸೆ ನನ್ನದು’ ಎಂದು ವಿನೀತರಾಗಿ ನುಡಿಯುತ್ತಾರೆ ಅವರು.

ಅಂದಹಾಗೆ ರಮ್ಯಾ ಶ್ರೀಧರ್ ಅವರು, ಅಗ್ನಿ ಶ್ರೀಧರ್–ಲತಾ ಶ್ರೀಧರ್ ದಂಪತಿಯ ಪುತ್ರಿ.

ಹಾಡು ವೀಕ್ಷಿಸಲು:

https://youtu.be/yFNi0ma-pD8

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT