ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ದೈಹಿಕ ಕ್ಷಮತೆಗೆ ಯೋಗ; ಮಾನಸಿಕ ಸ್ಥಿಮಿತಕ್ಕೆ ರಾಗ!

Last Updated 2 ಸೆಪ್ಟೆಂಬರ್ 2020, 2:25 IST
ಅಕ್ಷರ ಗಾತ್ರ

ಸದಾ ಸ್ವರ, ರಾಗ, ತಾಳ, ಭಾವ, ಲಯಗಳ ಗುಂಗಿನಲ್ಲೇ ವಿಹರಿಸುತ್ತಿದ್ದ ಸಂಗೀತಲೋಕ ಕೊರೊನಾ ಸಂಕಷ್ಟದಿಂದ ಕಳೆಗುಂದಿದೆ. ಕಲಾವಿದರ ಬದುಕು ಮೂರಾಬಟ್ಟೆಯಾಗಿದೆ. ಕಲಾಲೋಕದಲ್ಲೇ ಇದ್ದು, ಕೇಳುಗರಿಗೆ ಮಾನಸಿಕ ನೆಮ್ಮದಿ ನೀಡುತ್ತಿದ್ದ ಕಲಾವಿದರು ಇಂದು ಸಂಕಷ್ಟದಿಂದ ಪಾಡುಪಡುತ್ತಿದ್ದಾರೆ. ಇತರ ಯಾವುದೇ ಆದಾಯ ಮೂಲವಿಲ್ಲದೆ ಸಂಗೀತದಿಂದಲೇ ಕುಟುಂಬ ನಿರ್ವಹಣೆ ಮಾಡುತ್ತಿದ್ದ ಹಲವಾರು ಬಡ ಕಲಾವಿದರ ಕುಟುಂಬ ಬೀದಿಗೆ ಬಿದ್ದಿದೆ. ಇಂಥ ಸಂಕಟದ ದಿನಗಳಲ್ಲಿ ಕೆಲ ಬಡಕಲಾವಿದರು ಆತ್ಮಹತ್ಯೆಯಂಥ ಕಠಿಣ ನಿರ್ಧಾರವನ್ನೂ ತೆಗೆದುಕೊಂಡಿರುವುದು ಕಲಾಪ್ರಪಂಚದ ದುರಂತ.

ಈ ಎಲ್ಲ ವಿಕ್ಷಿಪ್ತ ಮನಸ್ಸುಗಳಿಗೆ, ಸಂಕಟದ ಕುಟುಂಬಗಳಿಗೆ ಕೆಲ ಖ್ಯಾತ ಕಲಾವಿದರು ಸಾಂತ್ವನದ ಜೊತೆಗೆ ಸಹಾಯಹಸ್ತವನ್ನೂ ಚಾಚಿ ಸಂಗೀತ ಸೇವೆಯೊಂದಿಗೆ ಸಮಾಜಸೇವೆಯನ್ನೂ ಮಾಡುತ್ತಿದ್ದಾರೆ. ಇಂಥವರಲ್ಲಿ ಹೆಸರಾಂತ ಪಿಟೀಲು ವಾದಕ ವಿದ್ವಾನ್‌ ಮೈಸೂರು ಮಂಜುನಾಥ್‌ ಮುಂಚೂಣಿಯಲ್ಲಿದ್ದಾರೆ. ಕಲಾವಿದರಿಗೆ ಸಂಗೀತವೇ ಶಸ್ತ್ರ, ಸಂಗೀತವೇ ಶಕ್ತಿ. ಇದೇ ಜೀವನ ಸ್ಫೂರ್ತಿ. ಕೊರೊನಾದಿಂದ ಮುಕ್ತಿ ಪಡೆಯಬೇಕಾದರೆ, ಕೊರೊನಾ ವಾರಿಯರ್ಸ್‌ಗೆ ಧೈರ್ಯ ತುಂಬಲು, ಪ್ರೇರಣೆ ನೀಡಲು ಹೆಸರಾಂತ ಕಲಾವಿದರು ಸೇರಿ ‘ಕೊರೊನಾ ವಿರುದ್ಧ ಸಂಗೀತ ಸಮರ’ ಸಾರಿದ್ದಾರೆ. ಜೊತೆಗೆ ಸಂಕಷ್ಟದಲ್ಲಿರುವ ಕಲಾವಿದರಿಗೆ ಆರ್ಥಿಕ ಸಹಾಯ, ಫುಡ್‌ಕಿಟ್‌ ಮುಂತಾದವುಗಳನ್ನು ನೀಡುವ ಮೂಲಕ ಇವರ ಬದುಕನ್ನು ಹಸನುಗೊಳಿಸವ ಪ್ರಯತ್ನ ಮಾಡುತ್ತಿದ್ದಾರೆ. ಇವೆಲ್ಲದರ ಸಾರಥ್ಯವನ್ನು ವಹಿಸಿರುವುದೂ ವಿದ್ವಾನ್‌ ಮಂಜುನಾಥ್ ಅವರೇ.

ಕೊರೊನಾ ಸಂಕಷ್ಟದ ಸಮಯದಲ್ಲಿ ಕಲಾವಿದರ ಬದುಕು–ಬವಣೆಗಳ ಬಗ್ಗೆ ಮೈಸೂರು ಮಂಜುನಾಥ್‌ ಪ್ರಜಾವಾಣಿಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.

* ಕೊರೊನಾ ಸಂಕಷ್ಟದಿಂದ ಕಲಾವಿದರ ಬದುಕಿನಲ್ಲಿ ಸುನಾಮಿ ಎದ್ದಿದೆ. ಬಡಕಲಾವಿದರು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ನೀವು ಸಹಾಯಹಸ್ತ ಚಾಚುವ ಔದಾರ್ಯ ತೋರಿರುವುದು ಶ್ಲಾಘನೀಯ. ಈ ಬಗ್ಗೆ ವಿವರಿಸಿ.

ಆರಂಭದಲ್ಲಿ ಕೊರೊನಾ ಯಾವ ಮಟ್ಟಕ್ಕೆ ಹೋಗುತ್ತೆ ಅಂತ ಯಾರಿಗೂ ಗೊತ್ತಿರಲಿಲ್ಲ. ಲಾಕ್‌ಡೌನ್‌ ಹೇಗಿರುತ್ತೆ ಎಂದು ನೋಡುತ್ತಿದ್ದ ಹಾಗೆ ಆರ್ಥಿಕ ಸಂಕಷ್ಟ ಉಂಟಾಗಲಾರಂಭಿಸಿತು. ಬಡ ಕಲಾವಿದರು ಬದುಕಿಗಾಗಿ ಪೇಚಾಡುವಂತಾಯಿತು. ಎಲ್ಲ ಕಲಾವಿದರಿಗೆ ‘ಸ್ಟಾರ್‌ ವ್ಯಾಲ್ಯೂ’ ಇರಲ್ಲ. ಮೇ ತಿಂಗಳಲ್ಲಿ ಬಡ ಕಲಾವಿದರಿಗೆ ದಿನಸಿ ಹಂಚುವ ಸಂದರ್ಭ ಬಂತು. ಇದನ್ನು ನೋಡಿದ ಮೇಲೆ ಏನು ಮಾಡಬೇಕು ಅಂತ ಗೊತ್ತಾಗಲಿಲ್ಲ. ಸಂಗೀತ ವಲಯದಲ್ಲಿ ಕಲಾವಿದರು ಬಹಳ ಕಷ್ಟಕ್ಕೊಳಗಾದರು. ಕುಟುಂಬದ ಸದಸ್ಯರಂತೆ ಇರುವ ‘ಸಂಗೀತ ಬಂಧು’ಗಳಿಗೆ ಆದ ತೊಂದರೆ ನನಗೂ ಮಾನಸಿಕ ಯಾತನೆಗೆ ಒಳಪಡುವಂತಾಯಿತು. ಇಂಥವರಿಗೆ ಸಹಾಯಮಾಡುವ ಸೌಭಾಗ್ಯ ನನಗೆ ಸಿಕ್ಕಿತು. ಇದು ಸಹಾಯಹಸ್ತ ಅಲ್ಲ, ಸ್ನೇಹದ ಬಾಂಧವ್ಯ ಬಲಪಡಿಸಲು ಸಿಕ್ಕಿದ ಅವಕಾಶ ಎಂದೇ ಭಾವಿಸುತ್ತೇನೆ. ಮೈಸೂರಿನ ಸುತ್ತೂರು ಮಠ, ಗಣಪತಿ ಸಚ್ಚಿದಾನಂದ ಸ್ವಾಮೀಜಿ. ಬೆಂಗಳೂರಿನ ಯದುಗಿರಿ ಯತಿರಾಜ ಮಠದ ಸಂಸ್ಥಾನದ ಸ್ವಾಮೀಜಿ ಹಾಗೂ ಸ್ಥಳೀಯ ಮುಖಂಡರು ಸೇರಿ ಕಲಾವಿದರ ಪುನಶ್ಚೇತನಕ್ಕಾಗಿ ಕೆಲಸ ಮಾಡುತ್ತಿದ್ದೇವೆ.

ನಾನು ‘ಜಾಗತಿಕ ಕರ್ನಾಟಕ ಸಂಗೀತ ವಿದ್ವಾಂಸರ ಸಂಘ’ ದ ಕಾರ್ಯದರ್ಶಿಯಾಗಿದ್ದು, ಆನ್‌ಲೈನ್‌ ಮೂಲಕವೂ ಧನ ಸಂಗ್ರಹ ಮಾಡಿ ಸಂತ್ರಸ್ತರಿಗೆ ತಲುಪಿಸಿದೆ. ಎಲ್ಲಿಯವರೆಗೆ ಎಂದರೆ ಕೊರೊನಾದಿಂದ ನಲುಗಿದ ಮುಂಬಯಿಯ ಧಾರಾವಿ ಸ್ಲಂನಲ್ಲಿರುವ ಕಲಾವಿದರಿಗೂ ಧನಸಹಾಯ ಮಾಡಿದ್ದೇವೆ.

* ಸಹೃದಯರ ಒಳಿತಿಗಾಗಿ ನೀವು ಮಾಡುತ್ತಿರುವ ಪ್ರಯತ್ನ ಹಾಗೂ ಸಮಾಜಸೇವೆಗೆ ಪ್ರತಿಸ್ಪಂದನ ಹೇಗಿದೆ?

ಪ್ರತಿಸ್ಪಂದನ ತುಂಬ ಚೆನ್ನಾಗಿದೆ. ಬಹಳಷ್ಟು ಕಲಾವಿದರಿಗೆ ಬದುಕುವ ಹುಮ್ಮಸ್ಸು ಬರುವಂತಾಯಿತು. ನಾವು ಮಾಡುವ ಕೆಲಸ ನೋಡಿ ಮತ್ತಷ್ಟು ಜನ ಮುಂದೆ ಬಂದಿದ್ದಾರೆ. ಕಲಾವಿದರಿಗೆ ಸಹಾಯಹಸ್ತ ಚಾಚುತ್ತಲೇ ಇದ್ದಾರೆ. ಇದಕ್ಕಾಗಿ ನನ್ನೊಂದಿಗೂ ಬಹಳ ಜನ ಕೈಜೋಡಿಸಿದ್ದಾರೆ. ಇದರಿಂದ ಮತ್ತಷ್ಟು ಸ್ಫೂರ್ತಿ ಸಿಕ್ಕಿದಂತಾಗಿದೆ.

* ‘ಲೈಫ್‌ ಅಗೇನ್’ ವಿಶ್ವದಾದ್ಯಂತ ತೊಂದರೆಗೊಳಗಾಗಿರುವ ಕೊರೊನಾ ಪೀಡಿತರ ಮಾನಸಿಕ ಸ್ಥಿಮಿತಕ್ಕಾಗಿಯೇ ಮಾಡಿದ ಸಂಗೀತ ಆಲ್ಬಂ. ಈ ಪರಿಕಲ್ಪನೆ ಸಾಕಾರಗೊಂಡದ್ದು ಹೇಗೆ?

‘ಲೈಫ್‌ ಅಗೇನ್‌’ ಎಂಬುದು ಒಂದು ವಿಶಿಷ್ಟ ಆಲ್ಪಂ. ಕೊರೊನಾ ಸಂಕಷ್ಟದಿಂದ ‘ಬದುಕೇ ನಿಂತಿದೆ; ನಿಂತ ನೀರಾಗಿದೆ’ ಎಂದು ಭಾವಿಸುವವರಿಗೆ ಸಾಂತ್ವನ ನೀಡಲೆಂದೇ ‘ಲೈಫ್‌ ಅಗೇನ್‌’ ಎಂಬ ಈ ವಿಶಿಷ್ಟ ಆಲ್ಬಂ ರೂಪಿಸಲಾಗಿದೆ. 'ಬದುಕೆಂದೂ ನಿಲ್ಲುವುದಿಲ್ಲ. ಜೀವನ ನಿರಂತರ’ ಎಂಬ ಉತ್ತಮ ಸಂದೇಶವನ್ನು ಇದು ಸಾರುತ್ತದೆ.

ಮೈಸೂರಿನ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಕೊರೊನಾ ನಡುವಿನ ಜೀವನದ ಬಗ್ಗೆಯೇ ಹಾಡಿನ ಸಾಹಿತ್ಯ ರಚನೆ ಮಾಡಿದ್ದು, ಇದಕ್ಕೆ ‘ಚಾರುಕೇಶಿ’ ರಾಗದಲ್ಲಿ ಸಂಗೀತ ಸಂಯೋಜನೆ ಮಾಡಿದ್ದೇನೆ. ಈ ಹಾಡಿಗೆ ಚೀನಾ, ಇಟಲಿ, ಅಮೆರಿಕ, ಬ್ರಿಟನ್‌, ಫ್ರಾನ್ಸ್‌, ಇರಾನ್‌, ಇಸ್ರೇಲ್, ನೆದರ್‌ಲ್ಯಾಂಡ್‌ ಸೇರಿದಂತೆ ವಿಶ್ವದ 20 ಪ್ರಮುಖ ಸಂಗೀತಗಾರರು ಕೊಡುಗೆ ನೀಡಿದ್ದಾರೆ. ತಮ್ಮ ತಮ್ಮ ಮನೆಗಳಲ್ಲೇ ಆಯಾಯ ದೇಶಗಳ ವಿಶಿಷ್ಟ ವಾದ್ಯಗಳನ್ನು ನುಡಿಸಿ ವಿಡಿಯೊ ರೆಕಾರ್ಡ್‌ ಮಾಡಿ ಕಳಿಸಿದ್ದಾರೆ, ಕೊರೊನಾ ಜನ್ಮತಾಳಿದ ಚೀನಾದ ವುಹಾನ್‌ನಿಂದಲೂ ವಾಂಗ್‌ ಯಿಂಗ್‌ ಎಂಬ ಕಲಾವಿದರು ‘ಎರ್ಹು’ ಎಂಬ ವಾದ್ಯ ನುಡಿಸಿದ್ದು ಬಹಳ ವಿಶಿಷ್ಟವೆನಿಸಿದೆ. ಮತ್ತೊಂದು ವಿಶೇಷ ಎಂದರೆ ಇಂಗ್ಲೆಂಡ್‌ನ ಒಬ್ಬ ಪಿಯಾನೊ ವಾದಕಿ ಕ್ಯಾನ್ಸರ್‌ ರೋಗಿ. ಮಧ್ಯಾಹ್ನ ಕೀಮೋಥೆರಪಿ ತಗೊಂಡು ಮನೆಗೆ ಬಂದು ರಾತ್ರಿ ಪಿಯಾನೊ ನುಡಿಸಿ ರೆಕಾರ್ಡ್‌ ಮಾಡಿ ಕಳಿಸಿಕೊಟ್ಟಿದ್ದಾರೆ.

ಒಂದೇ ಶ್ರುತಿ, ಒಂದೇ ರಾಗ, ಒಂದೇ ತಾಳವನ್ನು ಅಳವಡಿಸಿ ಆಯಾಯ ವಾದ್ಯಗಳಲ್ಲಿ ನುಡಿಸಿದ್ದಾರೆ ಇದರಲ್ಲಿ ತಬಲಾ, ಮೃದಂಗ, ಪಖಾವಾಜ್‌, ಕೊಳಲು ಎಲ್ಲವನ್ನೂ ಸೇರಿಸಿದ್ದೇನೆ. ಈ ಆಲ್ಬಂ ಅನ್ನು ಕೇಂದ್ರ ಸರ್ಕಾರದ ಐಸಿಸಿಆರ್‌ (ಇಂಡಿಯನ್‌ ಕೌನ್ಸಿಲ್‌ ಫಾರ್‌ ಕಲ್ಚರಲ್‌ ರಿಲೇಷನ್‌) ತಮ್ಮ ಬ್ಯಾನರ್‌ ಮೂಲಕ ಬಿಡುಗಡೆ ಮಾಡಿದೆ.

* ‘ರಾಗಗಳಿಂದ ಯೋಗ’ ನಿಮ್ಮ ಪರಿಕಲ್ಪನೆಯಿಂದ ‘ಭರತ’ ಎಂಬ ಹೊಸ ರಾಗ ಸೃಷ್ಟಿಸಿದ್ದೀರಿ. ಯೋಗದಿಂದ ಮಾನಸಿಕ ನೆಮ್ಮದಿ ಸಾಧ್ಯ. ’ರಾಗ–ಯೋಗ’ದ ಸಮ್ಮಿಲನದಿಂದ ಆತ್ಮಸ್ಥೈರ್ಯ ಬೆಳೆಸಿಕೊಳ್ಳಲು ಸಾಧ್ಯವೇ?

ಸುಮಧುರ ರಾಗ ಮನಸ್ಸನ್ನು ಸಂತುಷ್ಟಗೊಳಿಸುತ್ತದೆ. ಈ ನಿಟ್ಟಿನಲ್ಲಿ ಯೋಗ–ರಾಗ ಎರಡೂ ಬಹಳ ಪ್ರಯೋಜನಕಾರಿ. ಸಂಗೀತವೆಂದರೆ ಚಿಕಿತ್ಸೆ. ರೋಗ ನಿವಾರಣೆಗೆ ರಾಮಬಾಣವೂ ಹೌದು. ಯೋಗವೆಂದರೆ ಅದು ವ್ಯಾಯಾಮ, ಪ್ರಾಣಾಯಾಮ, ಧ್ಯಾನ.. ಅಷ್ಟೇ ಅಲ್ಲ. ಇದರಲ್ಲಿ ಕರ್ಮ, ನಾದ, ಜ್ಞಾನ, ಬೆಳಕು ಎಲ್ಲವೂ ಇರುತ್ತದೆ. ಓಂಕಾರದಿಂದ ಶುರುವಾಗುವ ನಾದದ ಮೂಲ ಯೋಗ ಆರಂಭವಾಗುತ್ತದೆ. ಯೋಗಯೊಂದಿಗೆ ರಾಗ ಬೆರೆತರೆ ಅಲ್ಲಿ ಅದ್ಭುತ ಶಕ್ತಿ ಸೃಷ್ಟಿಯಾಗುತ್ತದೆ.

‘ಭರತ’ ರಾಗ ಯೋಗಕ್ಕಾಗಿಯೇ ಸೃಷ್ಟಿಸಿದ ರಾಷ್ಟ್ರೀಯ ಯೋಗ ಗೀತೆ. ರಾಗ–ಯೋಗ ಎರಡೂ ನಮ್ಮ ಭಾರತ ದೇಶದ ವಿಶಿಷ್ಟ ಪರಿಕಲ್ಪನೆ. ಇವೆರಡಕ್ಕೂ ಸಾವಿರ ವರ್ಷಗಳ ಇತಿಹಾಸವಿದೆ. ಯೋಗ ಭಾರತ ದೇಶದ ವೈಶಿಷ್ಟ್ಯವೂ ಹೌದು. ಜೊತೆಗೆ ರಾಗ ಕೂಡ. ರಾಗ ಎಂದರೆ ಅಲ್ಲಿ ಭಾವ, ತಾಳ, ಮಾಧುರ್ಯ ಇರುತ್ತೆ. ಮಾನಸಿಕ ಸ್ಥಿಮಿತ ರಾಗದಿಂದಲೂ, ದೈಹಿಕ ಸ್ವಾಸ್ಥ್ಯ ಯೋಗದಿಂದಲೂ ಸಾಧ್ಯ. ಎರಡೂ ದೇಹ–ಮನಸ್ಸುಗಳಿಗೆ ಪೂರಕವಾಗಿ ಮಾಡುವ ಮನಸ್ಥೈರ್ಯ, ಆತ್ಮಸ್ಥೈರ್ಯ ಮೂಡಿಸುತ್ತದೆ.

* ಸಂಗೀತ ಕಛೇರಿಗಳಿಲ್ಲದೆ ಕಲಾಲೋಕ ಸೊರಗಿ ಹೋಗಿರುವುದರಿಂದ ಕಲಾವಿದರ ಜೀವನ ಪುನಶ್ಚೇತನ ಹೇಗೆ ಸಾಧ್ಯವಾಗಬಹುದು? ಹೊಸ ಬದುಕಿಗೆ ಇರುವ ಹಾದಿ ಯಾವುದು?

ವೈಯಕ್ತಿಕವಾಗಿ ನಾನು ಹಲವಾರು ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಹಲವು ಸಂಸ್ಥೆಗಳ ಜೊತೆ ಸೇರಿ ಚರ್ಚೆ ಮಾಡಿದ್ದೀನಿ. ಸೋಷಿಯಲ್‌ ಮೀಡಿಯಾ, ಡಿಜಿಟಲ್‌ ವೇದಿಕೆ ಬರೀ ಒಂದು ಪರ್ಯಾಯ ಆಗಬಹುದೇ ಹೊರತು ಇದು ನಿರಂತರವಾಗಿ ನಡೆಸಿಕೊಂಡು ಹೋಗುವಂಥದ್ದು ಅಲ್ಲವೇ ಅಲ್ಲ. ಸೋಷಿಯಲ್‌ ಮೀಡಿಯಾದಲ್ಲಿ ಎಷ್ಟೇ ಕಛೇರಿ ನೀಡಿದರೂ ಲೈವ್‌ ಕಛೇರಿಗಳಲ್ಲಿ ಆಗುವ ಸ್ಪಂದನೆ, ಕಲಾವಿದರ– ಶ್ರೋತೃಗಳ ನಡುವೆ ಆಗುವ ಸಂವಾದ, ಸಂವಹನ ಸಿಗುವುದೇ ಇಲ್ಲ. ಸಂಗೀತ ಕಛೇರಿಗಳು ನಡೆಯಬೇಕು. ಆದಷ್ಟು ಬೇಗ ಮತ್ತೆ ಕಛೇರಿ ಶುರು ಆಗುವ ಹಾಗೆ ಆಗಲಿ ಎಂಬುದೇ ನನ್ನ ಉದ್ದೇಶ. ಜನರಿಗೆ ಪುನಶ್ಚೇತನ ಆಗಬೇಕು. ಅದೃಷ್ಟವಶಾತ್‌ ಅಂಥ ದಿನಗಳು ಬೇಗನೆ ಬರಲಿ, ಆಗಲಿ ಎಲ್ಲರಿಗೂ ಸಂತೋಷ, ಪುನಶ್ಚೇತನ ಎಲ್ಲವೂ ಆಗುತ್ತೆ ಎಂಬುದೇ ನನ್ನ ಭಾವನೆ.

‘ಲೈಫ್‌ ಅಗೇನ್‌’ ಕೊರೊನಾ ಕಾಲಕ್ಕಾಗಿಯೇ ರೂಪಿಸಿದ ವಿಶೇಷ ಸಂಗೀತವನ್ನು ಈ ಕೊಂಡಿಯಲ್ಲಿ ಆಲಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT