ಭಾನುವಾರ, ಮಾರ್ಚ್ 26, 2023
21 °C
ಸಾಹಿತ್ಯ ಹಾಗೂ ಕಲಾಲೋಕಕ್ಕೆ ಬಡಿದಿದ್ದ ಕೊರೊನಾ ‘ಗರ’ ಈಗ ಬಿಟ್ಟಾಂತಾಗಿದೆ

ಬಳ್ಳಾರಿಯಲ್ಲಿ ಅಂತರರಾಷ್ಟ್ರೀಯ ಕವಿ ಸಮ್ಮೀಳನ: ಇದು ಕಾವ್ಯದ ಹೊನಲುಗಳ ಸಂಗಮ

ದಸ್ತಗೀರಸಾಬ್ ದಿನ್ನಿ Updated:

ಅಕ್ಷರ ಗಾತ್ರ : | |

ಸಾಹಿತ್ಯ ಹಾಗೂ ಕಲಾಲೋಕಕ್ಕೆ ಬಡಿದಿದ್ದ ಕೊರೊನಾ ‘ಗರ’ ಈಗ ಸಂಪೂರ್ಣವಾಗಿ ಬಿಟ್ಟಂತೆ ತೋರುತ್ತದೆ. ಎಲ್ಲೆಡೆಯೂ ಸಾಹಿತ್ಯ ಮತ್ತು ಕಲಾಲೋಕದ ಚಟುವಟಿಕೆಗಳು ಇದೀಗ ಇದ್ದಕ್ಕಿದ್ದಂತೆ ಪುಟಿದೆದ್ದಿವೆ. ನವೋತ್ಸಾಹವನ್ನೂ ತುಂಬುತ್ತಿವೆ. ಇಂತಹ ಸಂಭ್ರಮದ ಚಿಲುಮೆಯಲ್ಲಿ ಪುಟಿದೆದ್ದಿರುವ ನಮ್ಮ ಬಳ್ಳಾರಿ, ರಾಜ್ಯವು ಈ ಹಿಂದೆ ಕಂಡಿರದಂತಹ ಬಹುದೊಡ್ಡ ಅಂತರರಾಷ್ಟ್ರೀಯ ಕವಿ ಸಮ್ಮೇಳನವನ್ನು ಆಯೋಜಿಸುತ್ತಿದೆ. ಜಗತ್ತಿನ ಹಲವು ದೇಶಗಳ ಕಾವ್ಯದ ಹೊನಲುಗಳು ಜಗದ್ವಿಖ್ಯಾತ ಹಂಪಿಗೆ ಹತ್ತಿರದ ಈ ಪರಿಸರದಲ್ಲಿ ಸಂಗಮಿಸುತ್ತಿವೆ. ಆದ್ದರಿಂದಲೇ ಈ ಸಮ್ಮೇಳನವನ್ನು ‘ಸಂಗಂ’ ಎಂದೇ ಹೆಸರಿಸಲಾಗಿದೆ.

ಸಮ್ಮೇಳನದ ಮುಖ್ಯ ಸಂಯೋಜಕರಾದ ಪ್ರೊ.ಎಚ್‌.ಎಸ್‌. ಶಿವಪ್ರಕಾಶ್‌ ಅವರಿಗೀಗ ಬಿಡುವಿಲ್ಲದ ಕೆಲಸ. ತೆರಪಿಲ್ಲದಂತೆ ಬರುತ್ತಿರುವ ಫೋನ್‌ ಕರೆಗಳ ನಡುವೆಯೇ ಬಿಡುವು ಮಾಡಿಕೊಂಡು ಸಮ್ಮೇಳನದ ವೈಶಿಷ್ಟ್ಯದ ಕುರಿತು ಅವರದ್ದು ಚುಟುಕಾದ ಪ್ರತಿಕ್ರಿಯೆ. ‘ಕರ್ನಾಟಕದಲ್ಲಿ  ಇದುವರೆಗೆ ಇಷ್ಟು ದೊಡ್ಡಮಟ್ಟದ ಅಂತರರಾಷ್ಟ್ರೀಯ ಕವಿ ಸಮ್ಮೇಳನ ನಡೆದಿರಲಿಲ್ಲ. ಕೊರೊನಾ ಕಾಲಘಟ್ಟದಲ್ಲಿ ಲಾಕ್‌ಡೌನ್‌ನಿಂದ ಸಂಪರ್ಕ ಕಡಿದು ಹೋದಾಗ ವಿಶ್ವದ ಕವಿಗಳು ಕೂಡ ಬರೀ ವರ್ಚ್ಯುವಲ್‌ ಆಗಿದ್ದರು. ಈಗ ಬಿಡುಗಡೆ ಸಿಕ್ಕಿರುವುದರಿಂದ ನಾವು ವಿಶ್ವ ಕಾವ್ಯವನ್ನು ಸಂಭ್ರಮಿಸುವ ಒಂದು ಪ್ರಯತ್ನವನ್ನು ಮಾಡುತ್ತಿದ್ದೇವೆ’ ಎನ್ನುತ್ತಾರೆ.

‘ಸಮ್ಮೇಳನ ನಡೆಯುವ ಸ್ಥಳ ಬಳ್ಳಾರಿ. ಇದು ಹಂಪಿಯ ಅಂಚಿನಲ್ಲಿದೆ. ಹಂಪಿ ಎನ್ನುವುದು ಕರ್ನಾಟಕದ ಸಾಂಸ್ಕೃತಿಕ ವಿಕಸನದ ಎರಡನೆಯ ದೊಡ್ಡ ಹಂತದ ದ್ಯೋತಕ. ಇದು ಕನ್ನಡ ಸಂಸ್ಕೃತಿಯನ್ನು ಒಂದಾಗಿ ಸೇರಿಸಿದ ನಾಗರಿಕತೆಯಾಗಿತ್ತು. ಇಂತಹ ಪರಿಸರದಲ್ಲಿ ‘ಸಂಗಂ’ ನಡೆಯುತ್ತಿರುವುದು ಅರ್ಥಪೂರ್ಣವಾಗಿದೆ’ ಎಂದು ಅವರು ಹೇಳುತ್ತಾರೆ.

‘ಸಂಗಂ ಎನ್ನುವುದು ದ್ರಾವಿಡ ಕಾವ್ಯ ಪರಂಪರೆಯ ಮೊತ್ತಮೊದಲ ಸಾಂಸ್ಕೃತಿಕ ಸ್ವರೂಪ. ತಮಿಳಿನ ಸಂಗಂ ಕಾವ್ಯ ದ್ರಾವಿಡ ಕಾವ್ಯದ ಪ್ರತಿಫಲ. ಅದರ ಸ್ಮರಣಾರ್ಥವಾಗಿ ಸಂಗಂ ಅನ್ನು ಆಚರಿಸುತ್ತಿದ್ದೇವೆ. ಕನ್ನಡದ ಮಣ್ಣಿನ ಮೇಲೆ ವಿಶ್ವದ ಅನೇಕ ಭಾಷೆಯ ಕಾವ್ಯ, ಕವಿಗಳನ್ನು ಮೇಳೈಸಿ ಅದರಿಂದ ಅಪೂರ್ವವಾದುದನ್ನು ಮೂಡಿಸುವುದು ಇದರ ಉದ್ದೇಶ’ ಎಂದು ವಿವರಿಸುತ್ತಾರೆ. ‘ಈಗ ನಾವು ಶುರು ಮಾಡಿದ್ದೇವೆ. ಮುಂದೆ ಇದನ್ನು ದೊಡ್ಡ ಪ್ರಮಾಣದಲ್ಲಿ ಮುಂದುವರಿಸಬಹುದು. ಎಲ್ಲಾ ಕವಿಗಳು ಸಾವಿರಾರು ಮೈಲುಗಳಿಂದ, ಲಕ್ಷಾಂತರ ರೂಪಾಯಿ ದುಡ್ಡು ಹಾಕಿಕೊಂಡು ಬರುತ್ತಿದ್ದಾರೆ. ಆರ್ಥಿಕ ಹೊರೆ ಎನಿಸಿದರೂ ಕೂಡ ಕಾವ್ಯಪ್ರೇಮ ಹಾಗೂ ಮಾನವೀಯ ತುಡಿತದಿಂದ ದೇಶ ವಿದೇಶದ ಕವಿಗಳು ಪಾಲ್ಗೊಳ್ಳುತ್ತಿದ್ದಾರೆ’ ಎಂದೂ ಶಿವಪ್ರಕಾಶ್ ಹೇಳುತ್ತಾರೆ.

ಮೂರ್ತ, ಅಮೂರ್ತ, ಸುಡುವ ವರ್ತಮಾನ, ಅಂತರಂಗದ ತೊಳಲಾಟ, ನಗ್ನ ಸತ್ಯ, ಇಂಗದ ದಾಹ, ಜೀವ ಕಾರುಣ್ಯದಂತಹ ಸಂವೇದನೆಗಳಿಗೆ ಅಕ್ಷರ ರೂಪದ ಅಭಿವ್ಯಕ್ತಿ ನೀಡಿ ಸಹೃದಯರ ಮನ ಮನಕ್ಕೆ ದಾಟಿಸುವ ವಿಶ್ವದ ಕವಿಗಳ ಆಲೋಚನಾ ಕ್ರಮ, ಸಾಂಸ್ಕೃತಿಕ ಪ್ರೀತಿ, ಕೈಂಕರ್ಯ ನಿಜಕ್ಕೂ ದೊಡ್ಡದು. ಈ ಲೋಕವನ್ನು ಬದಲಿಸುವ, ಕತ್ತಲೆ ದಾರಿಗೆ ದೊಂದಿಯಾಗುವ ಕಾವ್ಯ ಅನುಭಾವದ ಹುಡುಕಾಟಕ್ಕೆ ಜತೆಯಾಗುತ್ತದೆ. ಬುದ್ಧನ ನಗೆಯನ್ನು, ನೆಲದ ಮರೆಯ ನಿಧಾನವನ್ನು, ಜಗದ ಬಾಗಿಲುಗಳನ್ನು ತೆರೆದು ತೋರಿಸುವ ಕಾವ್ಯ ತಾಯಿ ಪ್ರೀತಿಯನ್ನು ಮೊಗೆ ಮೊಗೆದು ಹಂಚುವಂತಹದ್ದು.

ಸಮ್ಮೇಳನದಲ್ಲಿ ಪಾಲ್ಗೊಳ್ಳಲಿರುವ ಪರ್ಷಿಯನ್‌ ಕವಯಿತ್ರಿ ಮರ್ಯಮ್ ಅಲಾ ಅಮ್ಜದಿ ಅವರ ಮಾತು ಕೇಳಿ.

‘ಯಾವುದೂ ನಿಜವಾಗಿ ಕೊನೆಗೊಳ್ಳುವುದಿಲ್ಲ. ಒಂದು ಕವಿತೆ ಕೂಡ ಪೂರ್ಣ ವಿರಾಮಗಳಿಗಿಂತ ಹೆಚ್ಚು ಅಲ್ಪವಿರಾಮಗಳನ್ನು ಹೊಂದಿದೆ. ಏಕೆಂದರೆ, ಅದು ಎಂದಿಗೂ ಕೊನೆಗೊಳ್ಳುವುದಿಲ್ಲ. ಮತ್ತು ಪ್ರತೀ ಪುಟದ ಬುಡದಲ್ಲಿ, ಭರವಸೆ ಇದೆ. ಪದಗಳು ಹರಿಯುತ್ತಲೇ ಇರುತ್ತವೆ ಮತ್ತು ಅವು ಎಲ್ಲಾ ದಿಕ್ಕುಗಳನ್ನೂ ದಾಟಿ ಮುಂದೆ ಹರಿಯುತ್ತವೆ’ ಎನ್ನುತ್ತಾರೆ.

‘ಬಳ್ಳಾರಿ 'ಸಂಗಂ' ಕವಿಗೋಷ್ಠಿಯ ಭಾಗವಾಗಲು ನಾನು ಹೆಮ್ಮೆಪಡುತ್ತೇನೆ ಮತ್ತು ಕನ್ನಡ ಭಾಷೆಯಲ್ಲಿ ವಿಶ್ವ ಕವಿಗಳ ಸಂಗಮಕ್ಕಾಗಿ ಈ ಉದಾರ ಜಾಗವನ್ನು ಸೃಷ್ಟಿಸಿದ ಸಂಘಟಕರಿಗೆ ಅತ್ಯಂತ ಕೃತಜ್ಞಳಾಗಿದ್ದೇನೆ. ವಿಭಿನ್ನ ಭಾಷೆ ಮತ್ತು ಸಂಸ್ಕೃತಿಗಳ ಕ್ರಿಯಾತ್ಮಕ ಧ್ವನಿಗಳ ಮೂಲಕ ಸಹಾನುಭೂತಿ, ಜ್ಞಾನೋದಯ ಮತ್ತು ವಿಮೋಚನೆಯ ನಕ್ಷೆ ತಯಾರಿಕೆಗೆ ಅತ್ಯಪೂರ್ವ ಕೊಡುಗೆ ನೀಡುವ ಅರ್ಥಪೂರ್ಣ ಸ್ಥಳವಾಗಿದೆ ಇದು. ಸಂಸ್ಕೃತ ಭಾಷೆಯಲ್ಲಿ 'ಸಂಗಮ್' ಪದದ ಅರ್ಥ ನದಿಗಳ ಸೇರುವ ತಾಣ. ಈ ಸಂಗಂ ಸಮ್ಮೇಳನದಲ್ಲೂ ನಾನು ವಿಶ್ವದ ವಿವಿಧ ಭಾಷೆಯ ಕಾವ್ಯದ ನುಡಿ-ನದಿಗಳ ಭವ್ಯವಾದ ಸಂಗಮವನ್ನು ನಿರೀಕ್ಷಿಸುತ್ತೇನೆ’ ಎಂದು ಭಾವುಕರಾಗಿ ಹೇಳುತ್ತಾರೆ.

ಕೊಲಂಬಿಯಾದ ಸ್ಪ್ಯಾನಿಷ್‌ ಕವಯಿತ್ರಿ ಯೊಹಾನ ಕಾರ್ವಾಲ್, ‘ಪ್ರಪಂಚದ ಕವಿಗಳು ಒಂದುಗೂಡುವುದು ಮತ್ತು ಕಾವ್ಯದ ಮೂಲಕವೇ ರಾಜಕೀಯ ಗಡಿರೇಖೆಗಳನ್ನು ಮೀರಲು ಯತ್ನಿಸುವುದು ಬಹಳ ಮುಖ್ಯ. ಭಾರತದಲ್ಲಿ ಜರುಗಲಿರುವ ಈ ವಿಶ್ವಕವಿ ಸಮ್ಮೇಳನದ ಭಾಗವಾಗಿರುವುದು ನನಗೆ ಗೌರವ ಹಾಗೂ ಹೆಮ್ಮೆ. ಈಗಾಗಲೇ ನನ್ನ ‘ದೇವಿ ಸಂಪುಟ’ದ ಕವಿತೆಗಳು ಪುರಾತನ ದ್ರಾವಿಡ ಭಾಷೆಯಾದ ಕನ್ನಡದಲ್ಲಿ ಅನುವಾದಗೊಂಡು ಪ್ರಕಟವಾಗಿರುವುದು ನನಗೆ ಮರೆಯಲಾಗದ ಅನುಭವ’ ಎಂದು ಖುಷಿಪಡುತ್ತಾರೆ.

ಕಾವ್ಯ ವಿಶ್ವದ ಗಾಯಗಳಿಗೆ ಮುಲಾಮು ಆಗಿ, ನದಿಯಾಗಿ, ಕೈಮರವಾಗಿ, ಆಯಾ ಕಾಲದ ಬಿಕ್ಕಟ್ಟುಗಳಿಗೆ ದನಿಯಾಗಿ, ಆತ್ಮ ಸಂಗಾತವಾಗಿ, ಹಸಿರನ್ನು ಉಕ್ಕಿಸುತ್ತ, ವಿವೇಕವನ್ನು ವಿಸ್ತರಿಸುತ್ತ ಹಲವು ಹತ್ತು ಪಾತ್ರಗಳನ್ನು ನಿರ್ವಹಿಸುತ್ತಿದೆ. ಕಾವ್ಯ ಎಲ್ಲರಿಗೂ ಬೇಕು. ಎಲ್ಲ ಕಾಲಕ್ಕೂ ಬೇಕು. ನಮ್ಮ ಒಳಗಣ್ಣು ತೆರೆಸುವ, ಪಿಸು ಮಾತುಗಳನ್ನು ಉಸುರುವ, ಒಲವ ಮಧುಬಟ್ಟಲದ ನಶೆಯನ್ನು ಸವರುವ, ರೋಮಾಂಚನವನ್ನು ಉಂಟು ಮಾಡುವ, ಜಗದ ಕೇಡನ್ನು ಕಳೆಯುವ, ಬಂಡಾಯದ ಕೆಂಡದುಂಡೆಯನ್ನು ಕಾರುವ, ಪ್ರತಿಮೆ, ರೂಪಕಗಳ ಸೊಗಸಾದ ಕಾವ್ಯಕ್ಕೆ ಮತ್ತೆ ಮತ್ತೆ ಕಿವಿಯಾಗಬೇಕಿದೆ.

ಈ ಸಮ್ಮೇಳನವಾದರೂ ಅದೇ ಆಶಯದಿಂದ ರೂಪುಗೊಂಡಿದೆ. ‘ಸಾಹಿತ್ಯವಾಗಲಿ ಸಂಸ್ಕೃತಿಯಾಗಲಿ ಅಥವಾ ಅಧಿಕಾರವೇ ಆಗಲಿ ವಿಕೇಂದ್ರೀಕರಣಗೊಂಡಾಗಲೇ ಹೊಸ ದನಿ, ಬನಿ‌ ಮೂಡಿ ಬರಲು ಸಾಧ್ಯ. ಕರ್ನಾಟಕದ ಬಹುಪಾಲು ಜಿಲ್ಲೆಗಳಿಂದ ಪಾಲ್ಗೊಳ್ಳುತ್ತಿರುವ ಯುವ ಪ್ರತಿಭೆಗಳೇ ಇದಕ್ಕೆ ಸಾಕ್ಷಿ’ ಎನ್ನುತ್ತಾರೆ ಸಮ್ಮೇಳನದ ಸಂಚಾಲಕ ಆರಿಫ್‌ ರಾಜಾ.

ಅನ್ಯ ಭಾಷೆಗಳ, ಅನ್ಯ ಪ್ರದೇಶಗಳ ಕವಿಗಳನ್ನು ಈ ಸಮ್ಮೇಳನ ಪುಳಕಗೊಳಿಸಿದೆ. ‘ನಾನು ಒಮ್ಮೆಯೂ ಕೂಡ ದಕ್ಷಿಣ ಭಾರತಕ್ಕೆ ಬಂದಿಲ್ಲ. ನಮಗೆ ಭಾಷೆಯೆಂದರೆ ಹಿಂದಿ ಅಥವಾ ಇಂಗ್ಲೀಷ್ ಎಂಬಂತಾಗಿದೆ. ನೇಪಾಳಿ ನುಡಿಯಲ್ಲಿ ಕಾವ್ಯ ಬರೆಯುತ್ತಿರುವ ಡಾರ್ಜಿಲಿಂಗ್‌ ನಿವಾಸಿಯಾದ ನನಗೆ, ಸಾವಿರಾರು ವರುಷಗಳ ಇತಿಹಾಸವಿರುವ ದ್ರಾವಿಡ ಭಾಷೆ ಹಾಗೂ ಸಂಸ್ಕೃತಿಯನ್ನು ಹತ್ತಿರದಿಂದ ನೋಡಬೇಕೆಂಬ ಕುತೂಹಲವಿದೆ. ಕನ್ನಡವೆಂಬ ಭಾಷೆ, ಕಾವ್ಯದಲ್ಲಿ ನುಡಿಗೊಡುವ ಬಗೆಯನ್ನು ಆಲಿಸಬೇಕಿದೆ’ ಎನ್ನುತ್ತಾರೆ ನೇಪಾಳಿ ಕವಿ ಮನೋಜ್‌ ಬೊಗಟಿ.

ಈ ಕವಿ ಸಮ್ಮೇಳನದಲ್ಲಿ ಇಸ್ರೇಲ್, ಇರಾನ್, ಅಲ್ಜೀರಿಯಾ, ಚಿಲಿ, ವೆನೆಜುವೆಲಾ, ಫೆರೋ ಐಲ್ಯಾಂಡ್, ಕೊಲಂಬಿಯಾ, ಅಮೆರಿಕ, ಪೆರು, ಕೊಸ್ಟರಿಕಾ, ಇಟಲಿ, ಬಾಂಗ್ಲಾದೇಶ, ಲಿಥುವೇನಿಯಾ ಮುಂತಾದ ದೇಶಗಳಿಂದ, ದೇಶದ ವಿವಿಧ ರಾಜ್ಯಗಳಿಂದ, ಕರ್ನಾಟಕದ ವಿವಿಧ ಜಿಲ್ಲೆಗಳಿಂದ, ಬಳ್ಳಾರಿ ಜಿಲ್ಲೆಯ ವಿವಿಧ ಭಾಗಗಳಿಂದ ಬರಲಿರುವ ಕವಿಗಳು ಕಾವ್ಯವಾಚನ ಮಾಡಲಿದ್ದಾರೆ. ವಾಚಿಸಿದ ಕವಿತೆಗಳ ಕುರಿತಂತೆ ಚರ್ಚೆಗಳು ನಡೆಯಲಿವೆ.

‘ಇಡೀ ಪ್ರಪಂಚದಾದ್ಯಂತ ಜಾತಿ ವೈಷಮ್ಯ, ಸ್ವಾರ್ಥ ಪಾರಮ್ಯವನ್ನು ಮೆರೆದಿರುವ ಪ್ರಸ್ತುತ ಸನ್ನಿವೇಶದಲ್ಲಿ ಕಾವ್ಯ ಮಾತ್ರ ಅಸ್ವಸ್ಥ ಸಮಾಜವನ್ನು ಸ್ವಸ್ಥಗೊಳಿಸುವ ಜೀವ ಸೆಲೆಯಾಗಬಹುದು. ಪ್ರಾಚೀನ ಕಾಲದಿಂದಲೂ ಸಾಹಿತ್ಯ ಮತ್ತು ಸಾಂಸ್ಕೃತಿಕ ಹಿರಿಮೆಯನ್ನು ಮೆರೆದ ಬಳ್ಳಾರಿಯಂಥ ನಗರದಲ್ಲಿ ವಿಶ್ವದ ಶ್ರೇಷ್ಠ ಕವಿಗಳು ಒಂದೆಡೆ ಸೇರುತ್ತಿರುವುದು ಸಂಭ್ರಮದ ಸಂಗತಿಯಾಗಿದೆ’ ಎನ್ನುತ್ತಾರೆ ತೆಲುಗು ಕವಿ ಗೊರೆಟಿ ವೆಂಕಣ್ಣ.

ಹೊಸ ತಲೆಮಾರಿನ ಕವಿಗಳನ್ನು ಹೆಚ್ಚು ಒಳಗು ಮಾಡಿಕೊಂಡಿರುವ, ಕನ್ನಡ ಕಾವ್ಯ ಕ್ಷೇತ್ರದಲ್ಲೇ ಹೊಸ ಮೈಲುಗಲ್ಲು ಅಗಲಿರುವ ‘ಸಂಗಂ ವಿಶ್ವ ಕವಿ ಸಮ್ಮೇಳನ’ವನ್ನು ಬಳ್ಳಾರಿಯ ಅರಿವು ಸಂಸ್ಥೆಯು ಆಯೋಜಿಸಿದೆ. ಸಂಗಂನ ಆಳದ ಆಶಯವೆಂದರೆ ಎಲ್ಲ ದೇಶಗಳ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಕೂಡಿಸುವ ಜತೆಗೆ, ಜಗತ್ತಿನ ಕಾವ್ಯ ಪರಂಪರೆಗೆ ಕನ್ನಡ ನೆಲದ ಮೂಲಕ ತೆರೆದುಕೊಳ್ಳುವುದೇ ಆಗಿದೆ. ಈ ಎಲ್ಲ ಹಂಬಲಗಳಿಗೆ ಬಳ್ಳಾರಿಯ ವಿಶ್ವ ಕವಿ ಸಮ್ಮೇಳನ ನಾಂದಿಯಾಗಿ ಹೊಸ ಭಾಷ್ಯ ಬರೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು