ಸೋಮವಾರ, ಸೆಪ್ಟೆಂಬರ್ 27, 2021
21 °C

ಕವಿತೆ: ವಿಷಯ ನಿಮ್ಮಲ್ಲೇ ಇರಲಿ

ಜಯಂತ ಕಾಯ್ಕಿಣಿ Updated:

ಅಕ್ಷರ ಗಾತ್ರ : | |

Prajavani

ಗಾಳಿಯ ಅಂಚಿನಲ್ಲಿ
ಒಂದು ಮಾತು
ಉಸಿರಿನೊಂದಿಗೆ
ಆಕಾರ ಕುದುರಿಸುತ್ತಿದೆ

ಮೊನ್ನೆಯಷ್ಟೆ ಬಸ್ಸಿನಿಂದಿಳಿದರಲ್ಲ
ಯಾಕಿಷ್ಟು ಬೇಗ ಹೊರಟುಬಿಟ್ಟರು
ನಿನ್ನೆ ಪೇಟೆಯಲ್ಲಿ ಕಂಡಾಗಲೂ ಯಾವುದೋ
ಬೀಗದ ಕೈ ಕಳಕೊಂಡವರಂತೆ
ಅಧೋವದನರಾಗಿ ಅಲೆಯುತ್ತಿದ್ದರು

ವಿಷಯಗಳು ನಿರಾಕಾರವನ್ನು ಅರಸುತ್ತ
ನಡುರಾತ್ರಿಯ ಬಿಕೋ ಬೀದಿಗಳಲ್ಲಿ
ಗಸ್ತು ಹಾಕುವವು

ಒಂದು ದಪ್ಪ ಬಾಗಿಲ ಮಿಡ ಸರಿಸಿದ ಸದ್ದು
ಇನ್ನೆಲ್ಲೋ ಒಂದು ಅಸ್ಪಷ್ಟ ಉಲುಹು
ಒಂದು ಪಾತ್ರೆಯ ಮುಚ್ಚಳ ಎಲ್ಲೋ
ಬಿದ್ದು
ರಿವ್ವ ರಿವ್ವ ರಿವ್ವ ಎಂದು
ನೀರವಗೊಳ್ಳುವ ತನಕದ ಉತ್ಕಂಠೆ

ಒಲೆ ಹಿಂದಿನ ಮಸಿಗೋಡೆಯ ಮೇಲೆ
ದೇವರದೆ ಕಂಬನಿ ಕಲೆ
ಊದುಗೊಳವೆಯಲಿ ಇನ್ನೂ ಉಸಿರಿದೆ

ಏನೋ ಕೇಳಲೆಂದೆ ಬಂದಿದ್ದ ಹಣ್ಣು ತರುಣ
ಇನ್ಯಾರೋ ಇದ್ದರೆಂದು ಮಾತೆ ಆಡದೆ ಹೋದ

‌ಇನ್ನೇನು ನಿಮ್ಮ ಕಿಟಕಿಗೇ ಬರುತ್ತಿರುವ
ಹಳದಿ ಸಿಗ್ನಲ್‌ ಕಂಗಳ ಹಸಿದ ಬಾಲ ದೇವತೆಗಳು
ನೀವೆಷ್ಟೇ ಕಣ್‌ತಪ್ಪಿಸಿದರೂ ಎಷ್ಟೇ ಸ್ಮಾರ್ಟ್‌ ಆಗಿ
ಇನ್‌ಶರ್ಟ್‌ ಮಾಡಿ ಇನ್‌ಕಂ ಟ್ಯಾಕ್ಸ್‌ ಕಟ್ಟಿದರೂ
ಇಗೋ ಸೀದ ಬಂದು ನಿಮ್ಮ ಆತ್ಮದ
ಚಿಂದಿಯ ಒಂದು ಹರುಕಿನಲ್ಲಿ
ಖಾಯಂ ಇದ್ದು ಬಿಡುವರು

ವಿಷಯ ನಿಮ್ಮಲ್ಲೇ ಇರಲಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು