ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತೆ: ನೀವ್ಯಾಕೆ ಹೀಗೆ?

Last Updated 17 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಅಂಗೈ ರೇಖೆ ಕದಡಿ ನೀವೇ ನಿರ್ಮಿಸಿದ
ಉರುಟು ರಸ್ತೆಗಳ ಮೇಲೆ, ಬಿಸಿಲ ತಾಪಕ್ಕೆ ಕರಗಿ
ನೀವು ಶತಾಯಗತಾಯ ನಡೆದೇ ನಡೆಯುತ್ತಿದ್ದಾಗ
ನಾವು ನಮ್ಮ ಮನೆಗಳಲ್ಲಿ ಎಸಿ ಇಲ್ಲವೆಂದು ಚಡಪಡಿಸಿ
ಮೇಲಿನ ಪ್ರಭುಗಳಿಗೆ ಶಾಪ ಹಾಕುತ್ತಿದ್ದೆವು.
ನೀವು ನಿರ್ಲಿಪ್ತರಾಗಿ ನಿಶ್ಚಿಂತೆಯಿಂದ ಚಲಿಸುತ್ತಿದ್ದಿರಿ

ಕಿಸೆ ಖಾಲಿಯಾಗಿ, ದುಡಿಮೆ ಶೂನ್ಯಸಂಪಾದನೆಯಾಗಿ
ಏರೋಪ್ಲೇನುಗಳಲ್ಲಿ ಹಾರಾಡುವ ಯೋಗ್ಯತೆಯಿಲ್ಲದ ನೀವು
ಸಾವಿರ ಸಂಖ್ಯೆಯಲ್ಲಿ ಪಲ್ಲಕ್ಕಿಯ ಮುಂದೆ
ಮೆರವಣಿಗೆ ಹೊಂಟಾಗ, ನಾವು ಅಶ್ವಿನಿ ದೇವತೆಗಳನ್ನು
ಪುಷ್ಪಕವಿಮಾನದಲ್ಲಿ ಕರೆತರುವ ಯೋಜನೆಗೈಯುತ್ತಿದ್ದೆವು
ನೀವು ದೇವಾನುದೇವತೆಗಳನ್ನು ನೆನೆದು ಪಾದ ಸವೆಸುತ್ತಿದ್ದಿರಿ

ನಿಮ್ಮ ಪುಟ್ಟಕಂದಮ್ಮಗಳ ಊರಲಾರದ ಹೆಜ್ಜೆಯ ಶಕ್ತಿಹೀನ
ಬರಿಗಾಲ ಪಾದಗಳು ಬಲವಂತವಾಗಿ ಭೂಮಿಯನ್ನು ನೋಯಿಸುತ್ತಿದ್ದಾಗ
ಬಾಳೆಹಣ್ಣಿನ ಗಡಿಗೆಯ ಕೂಸುಗಳು ಬೂಸ್ಟ್ ಕುಡಿಯಲು
ತಕರಾರು ಮಾಡಲು, ಅದರ ಅಮ್ಮಂದಿರು
‘ಬೂಸ್ಟ್ ಈಸ್ ದ ಸೀಕ್ರೇಟ್ ಆಫ್ ಯುವರ್ ಎನರ್ಜಿ’ ಎನ್ನುತ್ತಾ
ಆತಂಕದಿಂದ ಸೊರಗಿಯಾವೆಂದು ಪರದಾಡುತ್ತಿದ್ದರು

ನೀವೇ ಬೆವರು ಬಸಿದು ಬಿತ್ತಿದ ಬೀಜಗಳು ಕೊಟ್ಟ ಫಲವನ್ನು
ಉಣ್ಣಲಾರದೇ ನೀವೇ ನಿಡುಸುಯ್ಯುವ ಸಮಯದಲ್ಲಿ
ಒಣಹಣ್ಣುಗಳು, ದುಂದಿನ ಸಂಕೇತವಾಗಿ ಹೆಸರಿಟ್ಟ ಸ್ನ್ಯಾಕ್ಸುಗಳು
ಕಾಲ ಕಳೆಯಲು ಅಸಾಧ್ಯವಾಗಿ ಹೈಫೈ ಗೃಹಿಣಿಯರ ಅಡುಗೆಮನೆಯಲ್ಲಿ
ಬೆಂದ ಭಕ್ಷ್ಯ ಭೋಜನಗಳು, ತರಾವರಿ ಪಾಕ ಪ್ರಾವಿಣ್ಯತೆಗಳು
ಸಾಮಾಜಿಕ ಜಾಲತಾಣಗಳಲ್ಲಿ ಸಿಂಗರಿಸಿಕೊಂಡು ಮೆರೆಯುತ್ತಿದ್ದವು
ತುತ್ತು ಕೂಳೂ ಕೂಡ ನಿಮ್ಮೊಂದಿಗೆ ಮುನಿಸಿಕೊಂಡು ಮೂಲೆ ಸೇರಿತ್ತು

ಏರುಪೇರುಗಳು, ಅವಘಡಗಳು, ಬದುಕಿನ ಬೆಂಗಾಡುಗಳು
ಮತ್ತೆ ಮತ್ತೆ ತಮ್ಮ ತಿರುಗಣೆಯಲ್ಲಿ ಹಾಕಿ ಅರೆಯುವಾಗ,
ಸೋಲನ್ನು ಮುಂದೊಡ್ಡುವಾಗ, ನಿಮಗೆ ಕೋಪ ಬರಲಿಲ್ಲ
ಸಿಡಿದೇಳಲಿಲ್ಲ, ಪರಿಸ್ಥಿತಿಯ ತಾಪಕ್ಕೆ ಕೊಂಚವೂ ಬೆದರಲಿಲ್ಲ
ಆಗಲೇ ನಿಮ್ಮನ್ನು ಮಟ್ಟ ಹಾಕಲು ನಾವು ಹತ್ತಾರು ಕಾನೂನು ತಂದೆವು
ಸೌಲಭ್ಯ ಒತ್ತಟ್ಟಿಗಿರಲಿ ಸಂಕಟಗಳ ನೂಲನ್ನೆ ನೇಯ್ದು ತೊಡಿಸಿದೆವು
ನೀವು ನಿಮ್ಮ ಅರಿವಿನ ಸಮಾಧಿಗೆ ಮೌನದ ಚಾದರ ಹೊದ್ದಿಸಿದ್ದಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT