ಈ ಬಾರಿ ಕರ್ನಾಟಕ–ಪಾಶ್ಚಿಮಾತ್ಯ ಜುಗಲ್‌ಬಂದಿ

7
81ನೇ ರಾಮನವಮಿ ಅಂತರರಾಷ್ಟ್ರೀಯ ಸಂಗೀತೋತ್ಸವ

ಈ ಬಾರಿ ಕರ್ನಾಟಕ–ಪಾಶ್ಚಿಮಾತ್ಯ ಜುಗಲ್‌ಬಂದಿ

Published:
Updated:
Prajavani

ಸಂಗೀತದ ರಸದೌತಣ ಉಣಬಡಿಸುವ ರಾಮನವಮಿ ಸಂಗೀತೋತ್ಸವ ಮತ್ತೆ ರಂಗೇರಲಿದೆ. ಈ ಬಾರಿ ಅಂದಾಜು ಐದು ಲಕ್ಷ ಜನ ಸೇರಲಿರುವ ರಾಮಸೇವಾಮಂಡಳಿಯ ರಾಷ್ಟ್ರೀಯ ರಾಮಸೇವಾ ಸಂಗೀತೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಏಪ್ರಿಲ್‌ 6ರಂದು ಆರಂಭವಾಗುವ ಉತ್ಸವಕ್ಕೆ ಈಗಾಗಲೇ ಸಿದ್ಧತೆ ನಡೆದಿದೆ. 

ಫೆಬ್ರುವರಿ 7ರಂದು ಹಳೆ ಕೋಟೆ ಹೈಸ್ಕೂಲ್‌ ಮೈದಾನದಲ್ಲಿ ಗುದ್ದಲಿಪೂಜೆ ನಡೆದಿದೆ. ಅದ್ದೂರಿಯಾದ ಸೆಟ್‌ ಹಾಕಲು ಬೇಕಾದ ತಯಾರಿ ನಡೆಸಲಾಗಿದೆ. ಈ ಬಾರಿಯ ಸಂಗೀತೋತ್ಸವಕ್ಕೆ ರಂಗು ತುಂಬಲು ಕಲಾವಿದರ ದೊಡ್ಡ ಪಟ್ಟಿಯೇ ಸಿದ್ಧಗೊಂಡಿದೆ. ಪ್ರತಿ ವರ್ಷದಂತೆ ಕೆಲವು ಜನಪ್ರಿಯ ಕಲಾವಿದರು ಈ ಬಾರಿಯೂ ವೇದಿಕೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ 5ಲಕ್ಷಕ್ಕಿಂತ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ.

ಜಯಚಾಮರಾಜೇಂದ್ರ ಒಡೆಯರ್‌ ಜನ್ಮ ಶತಮಾನೋತ್ಸವ ಹಾಗೂ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮದಿನಾಚರಣೆ ಇರುವ ಕಾರಣ ಈ ಮಹನೀಯರಿಗೆ ಸಂಗೀತೋತ್ಸವ ವನ್ನು ಅರ್ಪಿಸಲಾಗಿದೆ.

2019ರ ವಿಶೇಷ: ಪ್ರತಿ ವರ್ಷ ಸಂಗೀತೋತ್ಸವದಲ್ಲಿ ಭಿನ್ನವಾದ ಸಂಗೀತ ಕಛೇರಿ ಗಳನ್ನು ಪರಿಚಯಿಸಲಾಗು ತ್ತದೆ. ಈ ಬಾರಿಯೂ ಜುಗಲ್‌ಬಂದಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. 

ಹಿಂದೂಸ್ತಾನಿ ಹಾಗೂ ಕರ್ನಾಟಕ ಸಂಗೀತದ ಜುಗಲ್‌ಬಂದಿಗಳು ಸಾಮಾನ್ಯವಾಗಿ ನಡೆಯುತ್ತವೆ. ಆದರೆ ಕರ್ನಾಟಕ ಸಂಗೀತದ ಜೊತೆ ಪಾಶ್ಚಿಮಾತ್ಯ ಶೈಲಿಯ ಸಂಗೀತದ ಜುಗಲ್‌ಬಂದಿ ಇದ್ದರೆ ಹೇಗಿರುತ್ತದೆ? ಹೀಗೊಂದು ಭಿನ್ನ ಪ್ರಯತ್ನವನ್ನು ಸಂಗೀತೋತ್ಸವದಲ್ಲಿ ಮಾಡಲಾಗಿದೆ. 

ಡಾ.ಎಲ್‌.ಸುಬ್ರಹ್ಮಣ್ಯ ಮತ್ತು ಸಂಗಡಿಗರು ಈ ರೀತಿಯ ಜುಗಲ್‌ಬಂದಿಗೆ ಸಿದ್ಧತೆ ನಡೆಸಿದ್ದಾರೆ. ಫೆಬ್ರುವರಿ 12ರಂದು ಸಂಜೆ 6.15ರಿಂದ ರಾತ್ರಿ 9.30ವರೆಗೆ ಈ ಕಾರ್ಯಕ್ರಮ ನಡೆಯಲಿದೆ. 

ಫೆಬ್ರುವರಿ 28ಕ್ಕೆ ವಯೊಲಿನ್‌, ಕೊಳಲು, ಪಿಯಾನೊ ಜುಗಲ್‌ಬಂದಿ ಇದೆ. ಈ ಮೂರು ವಾದ್ಯಗಳ ಜುಗಲ್‌ಬಂದಿ ಕೂಡ ತೀರಾ ಅಪರೂಪ. ಮೈಸೂರು ನಾಗರಾಜ್‌ ಅವರು ವಯೊಲಿನ್‌ ನುಡಿಸಿದರೆ, ರಾಕೇಶ್‌ ಚೌರಾಸಿಯಾ ಅವರು ಕೊಳಲು ಹಾಗೂ ಅನಿಲ್‌ ಶ್ರೀನಿವಾಸನ್‌ ಪಿಯಾನೊ ನುಡಿಸಲಿದ್ದಾರೆ.

ಪುಸ್ತಕ ಬಿಡುಗಡೆ: ರಾಮಸೇವಾ ಮಂಡಳಿಯ ಸಂಸ್ಥಾಪಕ ಎಸ್‌.ವಿ.ನಾರಾಯಣಸ್ವಾಮಿ ರಾವ್‌ ಅವರ 95ನೇ ಜನ್ಮದಿನಾಚರಣೆ ಪ್ರಯುಕ್ತ ಸಂಗೀತೋತ್ಸವದ ಮೊದಲ ದಿನ ‘ಕಾಫಿ ಟೇಬಲ್‌ ಬುಕ್‌‘ ಬಿಡುಗಡೆ ಮಾಡಲಾಗುತ್ತಿದೆ. 

ರಾಮಸೇವಾ ಮಂಡಳಿ ಹಾಗೂ ನಾರಾಯಣಸ್ವಾಮಿ ಅವರ ಕುರಿತು ಸಾಕಷ್ಟು ಕುತೂಹಲ ಸಂಗತಿಗಳು ಈ ಪುಸ್ತಕದಲ್ಲಿವೆ. ಐತಿಹಾಸಿಕ ದಾಖಲೆಗಳನ್ನು ಮಾಡಲಾಗಿದೆ.

ಪ್ರಶಸ್ತಿ: ಈ ಬಾರಿಯ ‘ಎಸ್‌ವಿಎನ್‌ ಅವಾರ್ಡ್‌ ಫಾರ್‌ ಎಕ್ಸಲೆನ್ಸ್‌’ ಪ್ರಶಸ್ತಿಯನ್ನು ಚಂದನ್‌ ಬಾಲ ಕಲ್ಯಾಣ್‌, ಇಂದ್ರಯುಧ್‌ ಮಜುಂದಾರ್‌, ಶಂಕರಮೂರ್ತಿ ಬಲಿಲಾ, ಸಲೀಲ್‌ಭಟ್‌ ಅವರಿಗೆ ನೀಡಲಾಗುತ್ತಿದೆ.

ಪ್ರತಿ ವರ್ಷ ಯುವ ಕಲಾವಿದರಿಗೆ ಪ್ರತಿಭಾಕಾಂಕ್ಷೆ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿಯೂ 2,500 ಅರ್ಜಿಗಳು ಬಂದಿದ್ದವು. ಅದರಲ್ಲಿ 25 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಅವರಿಗೆ ಸಂಗೀತೋತ್ಸವದಲ್ಲಿ ಪ್ರತಿಭಾ ಪ್ರದರ್ಶನಕ್ಕೂ ಅವಕಾಶ ನೀಡಲಾಗಿದೆ. ಮೇ 4ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

**

ಹರಿದಾಸ ಕೀರ್ತನೆ ಹಾಡಲಿರುವ ಬಾಲಸುಬ್ರಹ್ಮಣ್ಯಂ

ಮೊದಲ ಬಾರಿಗೆ ಸಂಗೀತೋತ್ಸವದಲ್ಲಿ ಪಾಲ್ಗೊಳ್ಳಲಿರುವ ಹಿನ್ನೆಲೆ ಗಾಯಕ ಎಸ್‌.ಪಿ ಬಾಲಸುಬ್ರಹ್ಮಣ್ಯಂ ಅವರು ಹರಿದಾಸ, ರಾಮದಾಸ ಹಾಗೂ ತ್ಯಾಗರಾಜರ ಕೀರ್ತನೆಗಳನ್ನು ಹಾಡಲಿದ್ದಾರೆ. 

ಏಪ್ರಿಲ್‌ 21ರಂದು ಸಂಜೆ 5.45ಕ್ಕೆ ಸಂಗೀತ ಕಾರ್ಯಕ್ರಮ ಆರಂಭವಾಗಲಿದೆ. ಇದೇ ವೇಳೆ ಅವರಿಗೆ ‘ಎಸ್‌.ವಿ. ನಾರಾಯಣಸ್ವಾಮಿ ರಾವ್‌ ಜಾಗತಿಕ ಸಂಗೀತ ಪ್ರಶಸ್ತಿ‘ ನೀಡಿ ಗೌರವಿಸಲಾಗುತ್ತದೆ.

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !