ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿನ್ನತೆ, ಬಹುತ್ವದ ಮಾದರಿ

Last Updated 30 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ಚಾರ್ಲಿಯ ತಂದೆ 3 ಮಿಲಿಯನ್ ಡಾಲರ್ ಮೊತ್ತವನ್ನು ಒಂದು ಟ್ರಸ್ಟ್‌ನ ಹೆಸರಿಗೆ ಉಯಿಲು ಮಾಡಿರುವುದು ತನ್ನ ತಂದೆಯ ಸಾವಿನ ನಂತರ ಚಾರ್ಲಿಗೆ ತಿಳಿಯುತ್ತದೆ. ಈ ಕುರಿತು ವಿಚಾರಣೆ ನಡೆಸುವ ಚಾರ್ಲಿಗೆ ತನ್ನ ಜೊತೆ ಬೆಳೆಯದ, ತನಗೆ ನೆನಪಿನಲ್ಲೂ ಇಲ್ಲದ ತನ್ನ ಅಣ್ಣ ರೇಮಂಡ್‍ನನ್ನು ನೋಡಿಕೊಳ್ಳುವ ಟ್ರಸ್ಟ್‌ಗೆ ಅಪ್ಪ ಹಣ ನೀಡಿರುವುದು ತಿಳಿಯುತ್ತದೆ. ಹೊಸದಾಗಿ ಅಣ್ಣನನ್ನು ಭೇಟಿ ಮಾಡಿ, ಅವನೊಂದಿಗೆ ಒಡನಾಡುವ ಚಾರ್ಲಿ ಅಣ್ಣನ ಅಸಹಜ ವರ್ತನೆಯಿಂದ ರೋಸಿ ಹೋಗುತ್ತಾನೆ. ನಂತರ ಅವನಿಗೆ ಆಟಿಸಂ ಸಮಸ್ಯೆ ಇರುವುದು ತಿಳಿದು ಬರುತ್ತದೆ. ಮೊದ ಮೊದಲು ಅಣ್ಣ ರೇಮಂಡ್‍ನ ವಿಕ್ಷಿಪ್ತತೆ, ಅಸಹಜ ನಡವಳಿಕೆಗಳಿಂದ ಬೇಸರ, ಸಿಟ್ಟು, ಆಕ್ರೋಶಗಳನ್ನು ತೋರುವ ಚಾರ್ಲಿ ನಿಧಾನವಾಗಿ ಅವನಲ್ಲಿನ ವಿಶೇಷತೆ, ವಿಭಿನ್ನತೆಗಳನ್ನು ಒಪ್ಪಿಕೊಳ್ಳುತ್ತಾ ಅವನಲ್ಲಿ ಪ್ರೀತಿ, ಆತ್ಮೀಯತೆಗಳನ್ನು ಬೆಳೆಸಿಕೊಳ್ಳುತ್ತಾ ಬದಲಾವಣೆ ಕಂಡುಕೊಳ್ಳುತ್ತಾನೆ. ಇತ್ತ ರೇಮಂಡ್‍ನಲ್ಲೂ ಬದಲಾವಣೆ ಕಾಣಿಸಿಕೊಳ್ಳುತ್ತದೆ. ಪ್ರೀತಿ, ಆತ್ಮೀಯತೆಗಳ ಭಾವಗಳನ್ನೇ ಅರಿಯದ ರೇಮಂಡ್ ಅವುಗಳಿಗೆ ಸ್ಪಂದಿಸುವಷ್ಟು ಬದಲಾಗುತ್ತಾನೆ.

ಇದು 30 ವರ್ಷಗಳ ಹಿಂದೆ ತೆರೆ ಕಂಡ ‘ರೈನ್ ಮ್ಯಾನ್’ ಎಂಬ ಇಂಗ್ಲಿಷ್ ಚಲನಚಿತ್ರದ ಕಥೆ. ಈ ಸಿನಿಮಾವನ್ನು ಕೆಲ ದಿನಗಳ ಹಿಂದೆ ಮತ್ತೊಮ್ಮೆ ನೋಡಿದಾಗ ತಕ್ಷಣಕ್ಕೆ ಹೊಳೆದದ್ದು ಬರುವ ಏಪ್ರಿಲ್ 2 ರಂದು ‘ವಿಶ್ವ ಆಟಿಸಂ ದಿನಾಚರಣೆ’ ಇದೆ ಎಂದು. ಟಾಮ್ ಕ್ರೂಸ್, ಡಸ್ಟಿನ್ ಹಾಫ್‍ಮನ್‍ರವರ ಅಮೋಘ ನಟನೆಯ ರೈನ್ ಮ್ಯಾನ್ ಚಿತ್ರಕ್ಕೆ ನಾಲ್ಕು ಆಸ್ಕರ್ ದೊರೆತದ್ದೂ ಅಲ್ಲದೇ ಆ ಕಾಲಕ್ಕೆ ಬಾಕ್ಸ್ ಆಫೀಸ್‍ನಲ್ಲಿ ಹಿಟ್ ಚಲನಚಿತ್ರ ಎನಿಸಿಕೊಂಡಿತು. ಆಟಿಸಂ ಬಗ್ಗೆ ಎಳ್ಳಷ್ಟೂ ಅರಿವಿಲ್ಲದ ಅಂದಿನ ಜಗತ್ತಿಗೆ ಆಟಿಸಂ ಬಗ್ಗೆ ರೈನ್ ಮ್ಯಾನ್ ಚಿತ್ರ ತಿಳಿವಳಿಕೆ ನೀಡಿತೆನ್ನಬಹುದು. 2010ರಲ್ಲಿ ನಡೆದ ಒಂದು ಅಧ್ಯಯನದ ಪ್ರಕಾರ ರೈನ್ ಮ್ಯಾನ್ ಬಿಡುಗಡೆಯಾದ 1988ನೇ ವರ್ಷವನ್ನು ಆಟಿಸಂ ಕುರಿತಂತೆ ಜಾಗತಿಕ ಬದಲಾವಣೆಗೆ ಕಾರಣವಾದ ವರ್ಷವೆಂದು ಗುರುತಿಸಲಾಗಿದೆ. ಒಂದು ಚಲನಚಿತ್ರವು ಅನೇಕ ವರ್ಷಗಳ ಕಾಲ ಜನರು ಕಟ್ಟಿಕೊಂಡಿರಬಹುದಾದ ಸಾಂಸ್ಕತಿಕ ಪ್ರಜ್ಞೆಯನ್ನು ಯಾವ ರೀತಿಯಲ್ಲಿ ಪ್ರಭಾವಿಸಬಹುದೆಂಬುದಕ್ಕೆ ರೈನ್‍ಮ್ಯಾನ್ ಚಿತ್ರವನ್ನು ಒಂದು ರೂಪಕವಾಗಿ ಪರಿಗಣಿಸಬಹುದಾಗಿದೆ.

ರೈನ್‍ಮ್ಯಾನ್ ಮೂಡಿಸಿದ ಜಾಗತಿಕ ಪ್ರಭಾವದ 30 ವರ್ಷಗಳ ನಂತರವೂ ಆಟಿಸಂನಂತಹ ಅಸಹಜವೆನ್ನಬಹುದಾದ ಮತ್ತು ಸ್ವಾಭಾವಿಕ ಮಿತಿಗಳನ್ನು ಹೊಂದಿರುವ ಜನರನ್ನು ಪಕ್ಷಪಾತ, ತಾರತಮ್ಯಗಳಿಂದ ನೋಡದೆ ಅವರಲ್ಲಿರುವ ಮಿತಿಗಳ ಸಹಿತ ಪರಿಗಣಿಸಿ, ಒಪ್ಪಿಕೊಂಡು ತಮ್ಮೊಂದಿಗೆ ಭಾಗವಹಿಸುವಿಕೆಗೆ ಎಷ್ಟರ ಮಟ್ಟಿಗೆ ಅವಕಾಶ ನೀಡಲಾಗುತ್ತಿದೆ ಎಂಬ ನಮ್ಮನ್ನು ಪ್ರಶ್ನೆ ಕಾಡದೇ ಇರದು.

ಆಟಿಸಂ ಹೊಂದಿರುವ ವ್ಯಕ್ತಿಗಳ ಪೂರ್ಣಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು ಹಾಗೂ ಅವರಿಗಿರುವ ಹಕ್ಕುಗಳು ಮತ್ತು ಮೂಲಭೂತ ಸ್ವಾತಂತ್ರ್ಯವನ್ನು ಚಲಾಯಿಸಲು ಅಗತ್ಯ ಬೆಂಬಲ ನೀಡುವ ಉದ್ದೇಶದಿಂದ 2008ರಿಂದ ವಿಶ್ವಸಂಸ್ಥೆಯು ಪ್ರತಿ ವರ್ಷ ಒಂದು ನೂತನ ಘೋಷವಾಕ್ಯದೊಂದಿಗೆ ಏಪ್ರಿಲ್ 2ನೇ ತಾರೀಕನ್ನು ‘ವಿಶ್ವ ಆಟಿಸಂ ದಿನಾಚರಣೆ’ ಎಂದು ಆಚರಿಸಲಾಗುತ್ತದೆ. ಕೆಲವು ಸಂಘಟನೆಗಳು ಇಡೀ ಏಪ್ರಿಲ್ ತಿಂಗಳನ್ನು ಆಟಿಸಂ ಮಾಸವೆಂದು ಆಚರಿಸಲು ಕರೆ ನೀಡುತ್ತವೆ. ಆಟಿಸಂ ಹೊಂದಿರುವವರ ಪಾಲ್ಗೊಳ್ಳುವಿಕೆಗೆ ಇರುವ ಅಡೆತಡೆಗಳನ್ನು ಕಡಿಮೆಗೊಳಿಸುವುದು. ಆಟಿಸಂವುಳ್ಳವರು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಗರಿಷ್ಠ ಮಟ್ಟದಲ್ಲಿ ಪಾಲ್ಗೊಳ್ಳುವುದನ್ನು ಉತ್ತೇಜಿಸುವುದು ಈ ದಿನಾಚರಣೆಯ ಉದ್ದೇಶವಾಗಿದೆ. 2019 ಹಾಗೂ 2020ರ ದಿನಾಚರಣೆಗೆ ‘ಂssisಣive ಣeಛಿhಟಿoಟogies, ಂಛಿಣive Pಚಿಡಿಣiಛಿiಠಿಚಿಣioಟಿ’ ಎಂಬ ಘೋಷವಾಕ್ಯವನ್ನು ಹೊಂದಲಾಗಿದೆ. ಆಧುನಿಕ ತಂತ್ರಜ್ಞಾನದ ಸಾಧನಗಳನ್ನು ಬಳಸಿಕೊಂಡು ಆಟಿಸಂವುಳ್ಳ ಜನರ ಬದುಕನ್ನು ಸುಲಭ ಹಾಗೂ ಉತ್ತಮಗೊಳಿಸುವುದು ಮತ್ತು ಅವರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಅವರನ್ನು ಜೋಡಿಸುವುದು ಈ ಘೋಷವಾಕ್ಯದ ತಿರುಳಾಗಿದೆ.

ಆಟಿಸಂ ಎಂಬುದು ನರವ್ಯೂಹ ಸಂಬಂಧಿ ತೊಂದರೆಯಾಗಿದ್ದು, ಅನುವಂಶೀಯ ಹಾಗೂ ಪರಿಸರಾತ್ಮಕ ಪ್ರಭಾವಗಳ ಕಾರಣದಿಂದ ಕಾಣಿಸಿಕೊಳ್ಳುತ್ತದೆನ್ನಲಾಗಿದೆ. ಈ ತೊಂದರೆ ಇರುವವರು ಇತರರೊಂದಿಗೆ ಸರಾಗವಾಗಿ ಸಂವಹನದಲ್ಲಿ ತೊಡಗುವುದಿಲ್ಲ. ಈ ಕಾರಣದಿಂದ ಯಾರೊಂದಿಗೂ ಬೆರೆಯದೇ ತಮ್ಮದೇ ಪ್ರಪಂಚದಲ್ಲಿರುತ್ತಾರೆ. ತಮ್ಮಷ್ಟಕ್ಕೇ ತಾವು ಯಾವುದಾದರೂ ಒಂದು ಕ್ರಿಯೆ ಅಥವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಈ ಕಾರಣದಿಂದ ಆಟಿಸಂ ತೊಂದರೆಯನ್ನು ಸ್ವಲೀನತೆ, ಸ್ವಮಗ್ನತೆ ಎಂದು ಕರೆಯಲಾಗುತ್ತದೆ. ಇತರರ ಕಣ್ಣಲ್ಲಿ ಕಣ್ಣಿಟ್ಟು ನೋಡದ ಇವರು ತಮ್ಮ ಅವಶ್ಯಕತೆಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗುವುದಿಲ್ಲ. ಇತರ ವ್ಯಕ್ತಿಗಳ ಮಾತುಗಳಿಗೆ ಗಮನ ನೀಡಲು ಇವರಿಗೆ ಸಾಧ್ಯವಾಗುವುದಿಲ್ಲ. ತಕ್ಷಣದ ಶಬ್ದಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸುತ್ತಾ ತಮ್ಮ ಕಿವಿಗಳನ್ನು ಮುಚ್ಚಿಕೊಳ್ಳುತ್ತಾರೆ. ಕೆಲವು ಸಂಗತಿಗಳಿಗೆ ತೀವ್ರ ಪ್ರತಿರೋಧವನ್ನು ತೋರುತ್ತಾರೆ. ಒಂದೇ ಚಟುವಟಿಕೆಯನ್ನು ಮತ್ತೆ ಮತ್ತೆ ಪುನರಾವರ್ತಿಸುತ್ತಾರೆ ಮತ್ತು ಆಡಿದ ಮಾತನ್ನೇ ಪದೇ ಪದೇ ಆಡುತ್ತಾರೆ ಹಾಗೂ ಸಾಮಾನ್ಯವಾಗಿ ನಿಧಾನ ಪ್ರತಿಕ್ರಿಯೆ ನೀಡುತ್ತಾರೆ. ಆಡುವ ಮಾತು ಹಾಗೂ ವ್ಯಕ್ತಪಡಿಸುವ ಹಾವಭಾವಗಳಿಗೆ ಹೊಂದಾಣಿಕೆಯಾಗುವುದಿಲ್ಲ. ರೋಬೊ ಹೊರಡಿಸುವ ಶಬ್ದಗಳ ತರಹ ಆಟಿಸಂವುಳ್ಳವರ ಮಾತುಗಳು ಅಸಹಜ ಮತ್ತು ಯಾಂತ್ರಿಕವಾಗಿರುತ್ತವೆ. ಆಟಿಸಂವುಳ್ಳ ಹೆಚ್ಚಿನವರು ಅಶಾಬ್ದಿಕ ಸಂವಹನಗಳಿಗೆ ಪ್ರತಿಕ್ರಿಯಿಸುತ್ತಾರೆ. ಮಕ್ಕಳಾಗಿದ್ದಲ್ಲಿ ತಮ್ಮ ಆಟದ ವಸ್ತುಗಳನ್ನು ಸಾಲಾಗಿ ಜೋಡಿಸುವುದು, ವಸ್ತುಗಳನ್ನು ಪದೇ ಪದೇ ಪರೀಕ್ಷಿಸುವುದು ಮಾಡುತ್ತಾರೆ. ಸೀಮಿತ ಆಸಕ್ತಿ, ಹವ್ಯಾಸಗಳನ್ನು ಹೊಂದಿರುವ ಇವರ ಚಟುವಟಿಕೆಗಳಲ್ಲಿ ವೈವಿಧ್ಯ ಇರುವುದಿಲ್ಲ.

ಆಟಿಸಂ ಸಮಸ್ಯೆಯು ಸಾಮಾನ್ಯ ರೀತಿಯ ಒಟ್ಟು ಐದು ನ್ಯೂನತೆಗಳಲ್ಲಿ ಒಂದಾಗಿದ್ದು ಇದಕ್ಕೆ ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ ಎನ್ನುತ್ತಾರೆ. ಆಟಿಸಂ ಹೊಂದಿರುವವರ ಸಮಸ್ಯೆಯು ವಿಸ್ತಾರದಿಂದ ಕೂಡಿದ್ದು, ಕೆಲವರು ಗಂಭೀರ ಎನ್ನಬಹುದಾದಷ್ಟು ತೊಂದರೆ ಹೊಂದಿದ್ದು, ಇತರರ ಆಶ್ರಯ ಅಗತ್ಯವಾಗಿದ್ದರೆ ಇನ್ನು ಹಲವರು ಸ್ವತಂತ್ರವಾಗಿ ಜೀವನ ನಿರ್ವಹಣೆ ಮಾಡಬಲ್ಲವರಾಗಿರುತ್ತಾರೆ. ಆಟಿಸಂವುಳ್ಳ ಒಟ್ಟು ಜನರಲ್ಲಿ ಶೇ 31ರಷ್ಟು ಮಂದಿಗೆ ಬುದ್ಧಿಶಕ್ತಿಯ ಅಸಾಮರ್ಥ್ಯ ಇರುತ್ತದೆ. ಇವರ ಐಕ್ಯೂ 70ಕ್ಕಿಂತ ಕಡಿಮೆ ಇದ್ದು, ದೈನಂದಿನ ಕಾರ್ಯಗಳ ನಿರ್ವಹಣೆ ಇವರಿಗೆ ಕಠಿಣವಾಗುತ್ತದೆ. ಆಟಿಸಂ ಸಮಸ್ಯೆಯ ಜೊತೆ ಕೆಲವರಲ್ಲಿ ಮೂರ್ಛೆ ರೋಗದ ಸಮಸ್ಯೆಯೂ ಇರುತ್ತದೆ. ಇನ್ನೂ ಹಲವರಲ್ಲಿ ಎ.ಡಿ.ಎಚ್.ಡಿ. (ಂಣಣeಟಿಣioಟಿ ಆeಜಿiಛಿiಣ ಊಥಿಠಿeಡಿಚಿಛಿಣive ಆisoಡಿಜeಡಿ), ಡಿಸ್ಲೆಕ್ಸಿಯಾ, ಆತಂಕ, ಖಿನ್ನತೆ ಇತ್ಯಾದಿ ಸಮಸ್ಯೆಗಳು ಜೊತೆಗೂಡಿ ಇರುತ್ತವೆ.

ಆಟಿಸಂ ಸಮಸ್ಯೆ ಎಷ್ಟು ಜನರನ್ನು ತೊಂದರೆಗೀಡು ಮಾಡಿದೆ ಎಂಬುದು ಖಚಿತವಾಗಿ ತಿಳಿದುಬಂದಿಲ್ಲ. ಒಂದು ಅಂದಾಜಿನ ಪ್ರಕಾರ ವಿಶ್ವದ ಶೇ 1.7 ರಿಂದ 2ರಷ್ಟು ಜನ ಆಟಿಸಂ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬಾಲಕರು ಬಾಲಕಿಯರಿಗಿಂತ ಮೂರರಿಂದ ನಾಲ್ಕು ಪಟ್ಟು ಹೆಚ್ಚು ಈ ತೊಂದರೆಯ ಸುಳಿಯಲ್ಲಿದ್ದಾರೆನ್ನಲಾಗಿದೆ. ಪ್ರಾಯಶಃ ಬಾಲಕಿಯರು ತಮಗಿರುವ ತೊಂದರೆಯನ್ನು ಸಾಮಾಜಿಕವಾಗಿ ಹಂಚಿಕೊಳ್ಳಲು ಮುಜುಗರಪಟ್ಟುಕೊಳ್ಳುವ ಕಾರಣ ಬಾಲಕಿಯರಿಗೆ ಆಟಿಸಂ ಸಮಸ್ಯೆ ಇದ್ದಾಗ್ಯೂ ಗಮನಕ್ಕೆ ಬಾರದೇ ಹೋಗಿರುವ ಸಾಧ್ಯತೆ ಇರಬಹುದಾಗಿದೆ. ವರ್ಷದಿಂದ ವರ್ಷಕ್ಕೆ ಆಟಿಸಂ ಸಮಸ್ಯೆಯಿಂದ ತೊಂದರೆಗೀಡಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಈ ತೊಂದರೆಯಲ್ಲಿರುವವರಿಗೆ ಬೆಂಬಲ, ಆಸರೆಯ ಅಗತ್ಯದ ಕಡೆ ಗಮನಹರಿಸಬೇಕಾಗಿದೆ.

ಆಟಿಸಂ ಎಂಬುದು ಕಾಯಿಲೆಯಲ್ಲ, ಅದನ್ನು ಭಿನ್ನತೆಯಾಗಿ ಪರಿಗಣಿಸಬೇಕೆಂಬ ವಾದ ಇತ್ತೀಚೆಗೆ ಪ್ರಬಲವಾಗುತ್ತಿದೆ. ಈ ಕಾರಣದಿಂದ ಇಂದಿನ ಜಾಗೃತ ಸಮಾಜವು ಆಟಿಸಂವುಳ್ಳವರ ಹಕ್ಕುಗಳ ಆಂದೋಲನಕ್ಕೆ ಚಾಲನೆ ನೀಡಿದೆ. ವ್ಯಕ್ತಿಗಳಿಗೆ ಇರಬಹುದಾದ ಆಟಿಸಂ ಹಾಗೂ ಆಟಿಸಂ ರೀತಿಯ ಇತರೆ ಸ್ವಾಭಾವಿಕ ಮಿತಿಗಳನ್ನು ಅವುಗಳು ಇರುವ ಹಾಗೆಯೇ ಅವರನ್ನು ಸ್ವೀಕರಿಸಿ, ಮನ್ನಣೆ ನೀಡಬೇಕು. ಆಟಿಸಂ ಹೊಂದಿರುವ ಇತರೆ ಸಾಮಾನ್ಯ ವ್ಯಕ್ತಿಗಳಿಗೆ ವಿಪರೀತ ಎನಿಸುವಂತೆ ತೋರುವ ವರ್ತನೆಗಳ ಕುರಿತಂತೆ ಸಹಿಷ್ಣುತೆ ತೋರುವ ಮೂಲಕ ಅವರನ್ನು ಮುಕ್ತವಾಗಿ ಸ್ವೀಕರಿಸುವಂತಾಗಬೇಕು. ಆಟಿಸಂಅನ್ನು ಭಿನ್ನತೆ, ವೈಶಿಷ್ಟ್ಯತೆ, ಬಹುತ್ವದ ಮಾದರಿಯಾಗಿ ಪರಿಗಣಿಸಿದಲ್ಲಿ ಆಟಿಸಂವುಳ್ಳವರ ಬದುಕಲ್ಲಿ ಬೆಳ್ಳಿರೇಖೆ ಕಾಣಿಸಿಕೊಳ್ಳುವುದರಲ್ಲಿ ಸಂದೇಹವಿಲ್ಲ. ಆಟಿಸಂವುಳ್ಳವರಿಗೆ ಅಗತ್ಯ ಪ್ರೀತಿ, ಬೆಂಬಲ ನೀಡುವ ಮೂಲಕ ಅವರ ಗರಿಷ್ಠ ಪಾಲ್ಗೊಳ್ಳುವಿಕೆಯನ್ನು ಖಾತ್ರಿಪಡಿಸುವತ್ತ ವಿಶ್ವ ಆಟಿಸಂ ದಿನಾಚರಣೆಯ ದಿನ ಸಂಕಲ್ಪ ಮಾಡಬೇಕಿದೆ. ಆಟಿಸಂ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ, ಜಾಗೃತಿ ಮೂಡಿಸುವುದೂ ಸೇರಿದಂತೆ ಈ ಮಿತಿಯನ್ನು ಆರಂಭದಲ್ಲೇ ಗುರುತಿಸಿ, ನೆರವು, ಸಹಾಯ, ಅನುಭೂತಿ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT