ಶನಿವಾರ, ಫೆಬ್ರವರಿ 22, 2020
19 °C

ಪುಟ್ಟಿ ಕೊಟ್ಟ ಚೆಂಡು ಹೂವು

ಮಾಲಾ ಮ. ಅಕ್ಕಿಶೆಟ್ಟಿ Updated:

ಅಕ್ಷರ ಗಾತ್ರ : | |

ತನ್ನ ಸಹಪಾಠಿಗಳು ತರುವ ಯಾವುದೇ ಹೂವನ್ನು ಮುಡಿಯುವ ಟೀಚರ್ ತಾನು ತಂದುಕೊಟ್ಟ ಹೂವನ್ನು ಮುಡಿಯುತ್ತಿಲ್ಲ ಎಂಬ ಕೊರಗು ಪುಟ್ಟಿಯ ಮನಸ್ಸಿನಲ್ಲಿ ಮೂಡಿತು. ಅದು ಟೀಚರ್‌ಗೆ ಸೂಕ್ಷ್ಮವಾಗಿ ಅರ್ಥವಾಯಿತು ಸಹ. ಟೀಚರ್ ತಾವಾಗಿಯೇ, ‘ಕಂದಾ, ನೀ ತಂದ ಚೆಂಡು ಹೂವು ಮುಡಿಯುತ್ತಿದ್ದೆ. ಆದರೆ ನನ್ನ ಹತ್ತಿರ ಪಿನ್ನು ಇಲ್ಲ’ ಎಂದರು.

ಅದೊಂದು ಸರ್ಕಾರಿ ಶಾಲೆ. ಅಲ್ಲಿ ಒಂದನೇ ಕ್ಲಾಸಿನಲ್ಲಿ ಕಲಿಯುತ್ತಿದ್ದ ಚಿಕ್ಕ ಹುಡುಗಿಯ ಹೆಸರು ಪುಟ್ಟಿ. ಜೂನ್ ತಿಂಗಳಲ್ಲಿ ಶಾಲೆಗೆ ದಾಖಲಾದ ಆಕೆ, ಶಾಲೆಯ ವಾತಾವರಣಕ್ಕೆ ಸಂಪೂರ್ಣವಾಗಿ ಹೊಂದಿಕೊಂಡಿದ್ದಳು. ಹಾಗೆಯೇ, ಆಕೆ ಅಭ್ಯಾಸದಲ್ಲೂ ಮುಂದೆ ಇದ್ದಳು. ಎಲ್ಲರೊಂದಿಗೆ ಹೊಂದಿಕೊಂಡು, ಸೂಕ್ಷ್ಮವಾಗಿ ಎಲ್ಲವನ್ನೂ ವಿಕ್ಷೀಸುವ ಸ್ವಭಾವ ಆಕೆಯದ್ದು.

ಜುಲೈ ತಿಂಗಳಿನಿಂದ ಡಿಸೆಂಬರ್ ತಿಂಗಳವರೆಗೆ ಚೆಂಡು ಹೂವು ತುಂಬಾನೇ ಬೆಳೆಯುತ್ತದೆ. ದಸರಾ ಮತ್ತು ದೀಪಾವಳಿ ಹಬ್ಬಕ್ಕೆ ಅದನ್ನು ಹೆಚ್ಚೆಚ್ಚು ಬಳಸುತ್ತಾರೆ. ತಮ್ಮ ಮನೆಯ ಹಿತ್ತಲಲ್ಲಿ ಬೆಳೆಸಿದ ಅಂಗೈ ಅಗಲದ ಒಂದು ದೊಡ್ಡದಾದ ಚೆಂಡು ಹೂವನ್ನು, ಎಲೆಗಳ ಸಹಿತ ಕಿತ್ತುಕೊಂಡು ಬಂದ ಪುಟ್ಟಿ ಶಾಲೆಯ ಬೆಳಗ್ಗಿನ ಪ್ರಾರ್ಥನೆಗಿಂತ ಮೊದಲು ತನ್ನ ಕ್ಲಾಸ್ ಟೀಚರ್‌ಗೆ ಕೊಟ್ಟಳು. ಅದನ್ನು ತೆಗೆದುಕೊಂಡ ಟೀಚರ್, ಬಹಳ ಖುಷಿಪಟ್ಟು, ‘ಇಷ್ಟೊಂದು ದೊಡ್ಡದಾದ ಹಳದಿ ಚೆಂಡು ಹೂವು! ನಿಮ್ಮ ಮನೆಯಿಂದ ತಂದೆಯಾ? ತುಂಬಾ ಚೆನ್ನಾಗಿದೆ’ ಎಂದು ಅದನ್ನು ತಮ್ಮ ಟೇಬಲ್ ಮೇಲಿಟ್ಟರು. ಪುಟ್ಟಿಯನ್ನು ಪ್ರಾರ್ಥನೆಗೆ ಕರೆದು, ತಾವೂ ಪ್ರಾರ್ಥನೆಗೆ ಹೋದರು.

ಪ್ರಾರ್ಥನೆಯ ನಂತರ ಎಂದಿನಂತೆ ಕ್ಲಾಸಿಗೆ ಬಂದ ಟೀಚರ್ ಹಾಜರಾತಿ ಪಡೆದು, ಮಕ್ಕಳು ಮಾಡಿದ್ದ ಹೋಮ್‌ ವರ್ಕ್ ನೋಡಿ, ಹೊಸ ವಿಷಯಗಳನ್ನು ಪಾಠಗಳ ಮೂಲಕ ಹೇಳಿದರು. ಪಾಠ ಮಾಡುತ್ತಲೇ ಟೀಚರ್‌ ಕೇಳುತ್ತಿದ್ದ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ತಾ ಮುಂದು ನೀ ಮುಂದು ಎಂಬಂತೆ ಉತ್ತರಿಸಿದರು.

ಪುಟ್ಟಿಯೂ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದಳು. ಇದಾದ ನಂತರ ಸಣ್ಣ ವಿರಾಮದ ಗಂಟೆ ಬಾರಿಸಿತು. ತಾನು ಕೊಟ್ಟ ಚೆಂಡು ಹೂವು ಇನ್ನೂ ಟೇಬಲ್ ಮೇಲೆಯೇ ಇದ್ದಿದ್ದನ್ನು ಪುಟ್ಟಿ ವಿರಾಮದ ವೇಳೆಯಲ್ಲಿ ನೋಡಿದಳು. ಏನೋ ಕೆಲಸಕ್ಕೆ ಎಂದು ಮುಖ್ಯೋಪಾಧ್ಯಾಯರ ಕೊಠಡಿಗೆ ಹೋಗಿದ್ದ ಟೀಚರ್ ವಾಪಸ್ ಬರುತ್ತಿದ್ದರು. ಪುಟ್ಟಿ ಮತ್ತೆ ಆ ಚೆಂಡು ಹೂವನ್ನು ತೆಗೆದುಕೊಂಡು ಹೋಗಿ ಟೀಚರ್‌ಗೆ ಕೊಟ್ಟಳು.

‘ಹೂವು ಚೆನ್ನಾಗಿದೆ ಪುಟ್ಟಾ’ ಎಂದು ಟೀಚರ್ ಹೂವನ್ನು ತೆಗೆದುಕೊಂಡರು. ಮತ್ತೆ ತರಗತಿಗೆ ಹೋಗಿ ಇನ್ನೊಂದೆರಡು ವಿಷಯಗಳಿಗೆ ಸಂಬಂಧಿಸಿದಂತೆ ಪಾಠ ಮಾಡಿದರು. ಆಗಲೂ ಆ ಚೆಂಡು ಹೂವು ಟೇಬಲ್ ಮೇಲೆಯೇ ಇತ್ತು. ಮಧ್ಯಾಹ್ನ ಊಟಕ್ಕೆ ವಿರಾಮವನ್ನು ನೀಡಲಾಗಿ, ಬಿಸಿಯೂಟ ಕೊಡಲಾಯಿತು. ಊಟ ಮಾಡಿದ ಪುಟ್ಟಿ, ಅದೇ ಚೆಂಡು ಹೂವನ್ನು ಟೀಚರ್‌ ಕೈಗೆ ಪುನಃ ಕೊಟ್ಟಳು. ಟೀಚರ್ ಮತ್ತೆ ಹೂವನ್ನು ತೆಗೆದುಕೊಂಡು ಮುಗುಳ್ನಕ್ಕರು.

ಊಟದ ವಿರಾಮದ ನಂತರ ಪಾಠಗಳು ಮತ್ತೆ ಪ್ರಾರಂಭವಾದವು. ಪುಟ್ಟಿ ತರಗತಿಯಲ್ಲಿ ಚೆಂಡು ಹೂವಿನ ಮುಂದೆ ನಿಂತು ಪದೇ ಪದೇ ಏನೋ ಹೇಳಲು ಪ್ರಯತ್ನಿಸುತ್ತಿದ್ದಳು. ಇದನ್ನು ಟೀಚರ್‌ ಸೂಕ್ಷ್ಮವಾಗಿ ಗಮನಿಸಿದ್ದರು. ತಾನು ತಂದ ಹೂವನ್ನು ತನ್ನ ಕ್ಲಾಸ್ ಟೀಚರ್ ಮುಡಿದುಕೊಳ್ಳಲಿ ಎಂಬ ಆಸೆ ಪುಟ್ಟಿಯ ಮನಸ್ಸಿನಲ್ಲಿ ಇತ್ತು. ಸಾಮಾನ್ಯವಾಗಿ ಚೆಂಡು ಹೂವನ್ನು ಯಾರೂ ಮುಡಿಯುವುದಿಲ್ಲ. ಅದನ್ನು ದೇವರ ಪೂಜೆಗೆ ಮಾತ್ರ ಬಳಸಲಾಗುತ್ತದೆ. ಅಷ್ಟೇ ಅಲ್ಲದೆ, ಆ ಹೂವು ಬಹಳ ದೊಡ್ಡದಾಗಿತ್ತು. ಹೀಗಾಗಿ ಟೀಚರ್ ಅದನ್ನು ಮುಡಿದಿರಲಿಲ್ಲ. ಆದರೆ ‍ಪುಟ್ಟಿಗೆ, ‘ನಾನು ತಂದ ಹೂವನ್ನು ಟೀಚರ್‌ ಏಕೆ ಮುಡಿದುಕೊಳ್ಳುತ್ತಿಲ್ಲ’ ಎಂಬ ಪ್ರಶ್ನೆ ಕಾಡುತ್ತಿತ್ತು.

ತನ್ನ ಸಹಪಾಠಿಗಳು ತರುವ ಯಾವುದೇ ಹೂವನ್ನು ಮುಡಿಯುವ ಟೀಚರ್ ತಾನು ತಂದುಕೊಟ್ಟ ಹೂವನ್ನು ಮುಡಿಯುತ್ತಿಲ್ಲ ಎಂಬ ಕೊರಗು ಪುಟ್ಟಿಯ ಮನಸ್ಸಿನಲ್ಲಿ ಮೂಡಿತು. ಅದು ಟೀಚರ್‌ಗೆ ಸೂಕ್ಷ್ಮವಾಗಿ ಅರ್ಥವಾಯಿತು ಸಹ. ಟೀಚರ್ ತಾವಾಗಿಯೇ, ‘ಕಂದಾ, ನೀ ತಂದ ಚೆಂಡು ಹೂವು ಮುಡಿಯುತ್ತಿದ್ದೆ. ಆದರೆ ನನ್ನ ಹತ್ತಿರ ಪಿನ್ನು ಇಲ್ಲ’ ಎಂದರು. ಇದನ್ನು ಕೇಳಿಸಿಕೊಂಡ ಪುಟ್ಟಿ ತನ್ನಲ್ಲಿದ್ದ ಪಿನ್ನನ್ನು ತಕ್ಷಣ ಕೊಟ್ಟು, ‘ಇಲ್ಲಿದೆ ಟೀಚರ್, ತಗೊಳ್ಳಿ’ ಎಂದಳು. ಮಗು ತೋರಿದ ಈ ಪ್ರೀತಿಗೆ ಟೀಚರ್ ಮಂತ್ರಮುಗ್ಧರಾದರು!

ಚಿಕ್ಕ ಪೋರಿ ಕೊಟ್ಟ ಪಿನ್ನು ಮತ್ತು ದೊಡ್ಡದಾದ ಚೆಂಡು ಹೂವನ್ನು ತೆಗೆದುಕೊಂಡು, ಹೂವನ್ನು ಮುಡಿದರು ಟೀಚರ್. ತಲೆತುಂಬಾ ಹೂವು ಕಾಣುತ್ತಿತ್ತು. ಇದನ್ನು ಕಂಡ ಆ ಮುಗ್ಧ ಮಗುವಿಗೆ ಎಲ್ಲಿಲ್ಲದ ಆನಂದ. ಹೂವಿನಂತಹ ತನ್ನೆರಡು ಕಣ್ಣುಗಳನ್ನು ಅರಳಿಸಿ, ಬೆಲೆ ಕಟ್ಟಲಾಗದ ನಗುವನ್ನು ತನ್ನ ಮುಖದ ಮೇಲೆ ತಂದುಕೊಂಡಳು ಪುಟ್ಟಿ. ಚೆಂಡು ಹೂವನ್ನು ಮುಡಿಯಬಾರದೆಂದು ಟೀಚರ್ ಎಷ್ಟೋ ಬಾರಿ ತಪ್ಪಿಸಿಕೊಳ್ಳಲು ನೋಡಿದ್ದರು, ಪಿನ್ ಇಲ್ಲವೆಂದು ಹೇಳಿದ್ದರು, ಆಮೇಲೆ ಮುಡಿಯುವುದಾಗಿ ಹೇಳಿದ್ದರು. ಆದರೆ ಅವ್ಯಾವುವೂ ಕೆಲಸಕ್ಕೆ ಬಂದಿರಲಿಲ್ಲ.

ಶಾಲೆ ಬಿಟ್ಟ ನಂತರ ಇತರ ಶಿಕ್ಷಕರು ಆ ಶಿಕ್ಷಕಿಯನ್ನು ನೋಡಿ ನಕ್ಕಿದ್ದೇ ನಕ್ಕಿದ್ದು. ಇಷ್ಟೊಂದು ದೊಡ್ಡ ಹೂವು, ಅದೂ ಚೆಂಡು ಹೂವು! ‘ಯಾರಾದರೂ ಮುಡಿಯುತ್ತಾರಾ’ ಎಂದು ಗೇಲಿ ಮಾಡಿದ್ದೇ ಮಾಡಿದ್ದು. ಟೀಚರ್ ಮಾತ್ರ ಯಾರ ಗೇಲಿಯನ್ನೂ ಮನಸ್ಸಿಗೆ ತೆಗೆದುಕೊಳ್ಳದೆ, ಅವರೊಂದಿಗೆ ತಾವೂ ನಕ್ಕು ಹಗುರಾದರು. ಹೂವನ್ನು ಹಾಗೆಯೇ ಮುಡಿದುಕೊಂಡು ಮನೆಗೆ ತೆರಳಿದರು. ತಾನು ಅಷ್ಟು ದೊಡ್ಡ ಹೂವನ್ನು ಮುಡಿದುಕೊಂಡಿದ್ದು ಏಕೆ ಎಂಬುದು ಆ ಶಿಕ್ಷಕಿಗೆ ಮಾತ್ರ ಗೊತ್ತಿತ್ತು.

ಚಿಕ್ಕ ಮಗುವಿನ ಖುಷಿಯ ಮುಂದೆ ಯಾವ ಗೇಲಿಯೂ ಗೇಲಿ ಅನ್ನಿಸಲಿಲ್ಲ. ‘ಮಗುವಿಗೆ ಆಗುವ ಆನಂದವನ್ನು ನೋಡುವಾಗ ನಾವೇ ಆನಂದಪಡುತ್ತೇವೆ’ ಎಂಬ ಮಾತು ಇದೆಯಲ್ಲ? ಅಂತಹ ಆನಂದವನ್ನು, ಮಗುವಿನ ಮನಸ್ಸನ್ನು ಅರಿತ ಆ ಶಿಕ್ಷಕಿ ಅನುಭವಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)