ಶನಿವಾರ, ಫೆಬ್ರವರಿ 27, 2021
21 °C

ಸಂಸ್ಕಾರ

ದಿನೇಶ ಉಪ್ಪೂರ Updated:

ಅಕ್ಷರ ಗಾತ್ರ : | |

Deccan Herald

ರಾಮ ಅಡಿಗರ ಮನಸ್ಸು ಬೆಳಿಗ್ಗೆಯಿಂದ ವಿಹ್ವಲಗೊಂಡಿತ್ತು. ಒಂದು ರೀತಿಯ ದುಗುಡ, ಏನೋ ಆತಂಕ. ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಲೇ ಆಗುತ್ತಿಲ್ಲ. ನಸುಕಿನಲ್ಲಿ ಎದ್ದು ನಿತ್ಯಕರ್ಮಗಳನ್ನು ಮುಗಿಸಿ, ಅಡುಗೆ ಮನೆಯ ಕೆಲಸವನ್ನು ಮುಗಿಸಿದರು. ಬಾವಿಯ ಕಟ್ಟೆಗೆ ಹೋಗಿ ಕೊಡಪಾನದಿಂದ ತಣ್ಣೀರನ್ನು ಎತ್ತಿ ತಲೆಗೆ ಝಳಝಳ ಹೊಯ್ದುಕೊಂಡು, ಸ್ನಾನ ಮಾಡಿ ಉಟ್ಟ ಪಾಣಿ ಪಂಚೆಯಿಂದ ಮೈಯನ್ನು ಒರೆಸಿಕೊಂಡು ದೇವರ ಶ್ಲೋಕಗಳನ್ನು ಬಾಯಿಯಲ್ಲಿ ಗುಣುಗುತ್ತಾ ದೇವರ ಕೋಣೆಗೆ ಬಂದು ದೇವರ ಮುಂದೆ ಕುಳಿತರೂ, ಮನಸ್ಸು ಸ್ಥಿಮಿತಕ್ಕೆ ಬರಲಿಲ್ಲ.

ನಿತ್ಯ ಹೇಳುತ್ತಿದ್ದ ಮಂತ್ರಗಳೆ ಮಧ್ಯದಲ್ಲಿ ನಿಲ್ಲುತ್ತಿವೆ. ಮರೆತು ಹೋಗುತ್ತಿವೆ. ದೇವರ ಕಿಂಡಿಯಲ್ಲಿದ್ದ ಹಿತ್ತಾಳೆಯ ತಟ್ಟೆಯಲ್ಲಿರುವ ಸಾಲಿಗ್ರಾಮದ ಮೇಲಿನ ನಿನ್ನೆಯ ಮಲಿನ ಹೂವುಗಳನ್ನು ತೆಗೆದು, ದೇವರ ಪೂಜೆಯನ್ನೂ ಮುಂದುವರಿಸಲಾಗದೇ, ಹಾಗೆಯೇ ನೆಟ್ಟಗೆ ಕುಳಿತು ಅದನ್ನೇ ನೋಡುತ್ತಾ ಕುಳಿತರು. ಮಗ ಫೋನ್ ಮಾಡದೇ ಎಷ್ಟು ದಿನವಾಯಿತು. ಲಕ್ಷ್ಮಿ ಹಾಸಿಗೆ ಹಿಡಿದು ವರ್ಷವಾಗುತ್ತಾ ಬಂತಲ್ಲವೇ? ಪಾಪ, ಸ್ವಲ್ಪ ಎಚ್ಚರಾದರೂ ಮಗನ ಬಗ್ಗೆಯೇ ಕೇಳುತ್ತಾಳೆ. ವಾತದ ರೋಗ ಅವಳನ್ನು ಓಡಾಡದಂತೆ ಮಾಡಿ ಮಲಗಿಸಿಬಿಟ್ಟಿತು. ಮೊದಲು ಎಷ್ಟೆಲ್ಲಾ ಮಾಡಿದವಳು. ಇದ್ದ ಒಬ್ಬನೇ ಮಗನಿಗಾಗಿ ಹಟ ಹಿಡಿದು ಕೂರಿಸಿ ಓದಿಸಿ ಎಂಜಿನಿಯರ್ ಮಾಡಬೇಕೆಂದು ತನ್ನ ಆಸೆ ಆಕಾಂಕ್ಷೆಗಳನ್ನು ಬಲಿಕೊಟ್ಟಳು.

ಅವನು ಎಂಜಿನಿಯರಿಂಗ್‌ ಓದಿ ಅಮೆರಿಕ ಸೇರಿದ ಮೇಲೆ ಮನೆಯಲ್ಲಿ ತಾನು, ಅವಳು ಇಬ್ಬರೇ ಆದೆವು. ತಾನೂ ಯೌವನದಲ್ಲಿ ಗಟ್ಟಿ ಇರುವಾಗ ಸಾಕಷ್ಟು ದುಡಿದಿದ್ದರಿಂದ ಈಗ ತನ್ನದೇ ಒಂದು ಮನೆ, ಆಸ್ತಿ ಅಂತ ಮಾಡಿಕೊಳ್ಳಲು ಆಯಿತು. ಬರೀ ಅವರಿವರ ಮನೆಯ ಪೌರೋಹಿತ್ಯವನ್ನೇ ಮಾಡಿ ಇಷ್ಟೆಲ್ಲ ಮಾಡಿದೆ. ಮಗನನ್ನು ಓದಿಸಿದೆ ಎಂದರೆ ನಂಬಲಿಕ್ಕೇ ಆಗುತ್ತಿಲ್ಲ. ಲಕ್ಷ್ಮಿಯೇ ಇದಕ್ಕೆ ಕಾರಣ. ಅವಳ ದೂರಾಲೋಚನೆ, ಸಹಕಾರ ಇಲ್ಲದೇ ಇದ್ದರೆ ನಾನೂ ಹಿಂದಿನಂತೆ ಇನ್ನೂ ಆ ಮಂಜ ಭಟ್ಟರ ಹರಕು ಕೊಗಳಿನ ಅಡಿಯಲ್ಲೇ ಜೀವನ ಸಾಗಿಸಬೇಕಾಗಿತ್ತು.

ಕಾಲ ಎಷ್ಟು ಮುಂದೆ ಬಂದು ಬಿಟ್ಟಿತು. ಈಗ ತೋಟದ ಕೆಲಸ ಮಾಡಲು ಜನವೇ ಸಿಕ್ಕುವುದಿಲ್ಲ. ಗದ್ದೆ ಬೇಸಾಯವನ್ನು ಕೈದುಮಾಡಿ ಎಷ್ಟೋ ಕಾಲವಾಯಿತು. ಎಲ್ಲ ಗದ್ದೆಗಳೂ ಹಡುಬೀಳುತ್ತಿವೆ. ಯಾವುದರಲ್ಲೂ ಮೊದಲಿನಂತೆ ಆಸಕ್ತಿಯಿಲ್ಲ. ಬೆಟ್ಟು ಗದ್ದೆಗೆಲ್ಲ ಗೇರು ಸಸಿ ಹಾಕಿ ನಾನು ಜೀವ ಸವೆಸಿ ಮಾಡಿದ ಗದ್ದೆಗಳನ್ನು ಪುನಃ ಜಡ್ಡು ಮಾಡಿಯಾಯಿತು. ಇಷ್ಟಕ್ಕೂ ಇತ್ತೀಚೆಗೆ ಇನ್ನು ಇದನ್ನೆಲ್ಲಾ ಮಾಡುವುದು ಯಾರಿಗಾಗಿ ಎಂಬ ಒಂದು ಸಣ್ಣಹುಳ ಅಡಿಗರ ತಲೆಗೆ ಹೋಗಿ ಇಷ್ಟೆಲ್ಲ ಅದ್ವಾನವಾದದ್ದು.

ಮಗ ಇನ್ನು ಬಂದು ಇಲ್ಲಿ ಇರಲು ಸಾಧ್ಯವೇ?

ಆದರೆ, ನನಗೆ ಈ ಊರಿನ ಋಣ ಇನ್ನೂ ಮುಗಿಯಲಿಲ್ಲವಲ್ಲ. ನನ್ನನ್ನು ನಂಬಿ ಪೌರೋಹಿತ್ಯಕ್ಕೆ ಕರೆಯುವ ಊರಿನ ಹತ್ತಾರು ಬ್ರಾಹ್ಮಣರ ಮನೆಗೆ ಹೋಗಿ ಅವರ ಮನೆಯ ಶ್ರಾದ್ಧವೋ, ಗಣಹೋಮವೋ, ಸತ್ಯನಾರಾಯಣ ಕತೆಯೋ ಮಾಡಿ ಮಧ್ಯಾಹ್ನ ಅಲ್ಲಿಯೇ ಉಂಡು ಅವರು ಕೊಟ್ಟ ದಕ್ಷಿಣೆಯನ್ನು, ಅಕ್ಕಿ, ಕಾಯಿಯನ್ನು ಮನೆಗೆ ತಂದು, ಅದರಲ್ಲೇ ಅಡಿಗರ ಸಂಸಾರದ ರಥ ಸಾಗುತ್ತದೆ.

ಅವಳಿಗೆ ಬೆಳಿಗ್ಗೆ ಅನ್ನವೋ, ಗಂಜಿಯೋ ಮಾಡಿ, ಒಂದು ನೀರು ಸಾರೋ, ಗೊಜ್ಜೋ ಮಾಡಿ ಇಟ್ಟರೆ ಆಯಿತು. ಅವಳೆ ಉಸ್... ಉಸ್... ಎನ್ನುತ್ತಾ ನಡೆದು ಬಂದು, ಉಂಡು ಮತ್ತೆ ಹಾಗೆ ಹಾಸಿಗೆಯನ್ನು ಸೇರುತ್ತಾಳೆ. ರಾತ್ರಿ ಊಟ ಹೇಗೂ ಇಲ್ಲ. ಇದ್ದ ಮುಸರೆ ಪಾತ್ರೆಗಳನ್ನು ತೊಳೆದು ಇಟ್ಟರೆ ಒಂದು ದಿನದ ಕಾರ್ಯಕ್ರಮ ಮುಗಿಯಿತು.

ಲಕ್ಷ್ಮಿಯ ನರಳಿಕೆ ಅಡಿಗರನ್ನು ಎಚ್ಚರಿಸಿತು. ತನ್ನ ಮಗ ಕೈ ಮುಗಿದು ಪಕ್ಕದಲ್ಲಿ ತಾನು ಹೇಳುವ ಶ್ಲೋಕಗಳನ್ನು ಒಪ್ಪಿಸುತ್ತ ಇದ್ದ ಹಾಗೆ ಅನ್ನಿಸಿತು. ಕಣ್ಣು ತೆರೆದು ಎಡಮಗ್ಗುಲನ್ನು ನೋಡಿದರು. ಎಲ್ಲ ಭ್ರಮೆ. ಸಣ್ಣ ಮಂದಹಾಸವೊಂದು ಮುಖದಲ್ಲಿ ಮೂಡಿ ಮಾಯವಾಯಿತು. ಮಗ ಈಗ ಪೂಜೆ, ಜಪ ಯಾವುದನ್ನೂ ಮಾಡುವುದಿಲ್ಲವಂತೆ. ಅದೆಲ್ಲ ಅಮೆರಿಕದಲ್ಲಿ ಯಾರು ಮಾಡುತ್ತಾರೆ? ಹೋ ಬಹಳ ಹೊತ್ತು ಕುಳಿತುಬಿಟ್ಟೆ. ಇನ್ನು ಹಂಜಾರರ ಮನೆಯ ಶ್ರಾದ್ಧಕ್ಕೆ ಹೋಗಬೇಕು ಎಂದುಕೊಳ್ಳುತ್ತಾ ಬೇಗ ಬೇಗ ಪೂಜೆಯನ್ನು ಮುಂದುವರಿಸಿದರು. ಪೂಜೆ ಮುಗಿಯಿತು.

ಅಂಗಿಯನ್ನು ಹಾಕದೇ ಎಷ್ಟು ವರ್ಷವಾಯಿತೋ ಏನೋ, ಒಂದು ಪಂಚೆಯನ್ನು ಉಟ್ಟು, ಹೆಗಲ ಮೇಲೊಂದು ಶಾಲನ್ನು ಹೊದ್ದುಕೊಂಡು ಅಡಿಗರು ಹೊರಟುಬಿಟ್ಟರು. ಬಗಲಲ್ಲೊಂದು ಉದ್ದ ಮರದ ಜಲ್ಲಿನ ಕೊಡೆ ಬಿಸಿಲಿಗೆ.

‘ಲಕ್ಷ್ಮಿ, ಇವತ್ ಹಂಜಾರ್ರ ಮನೆಯ ಶ್ರಾದ್ಧ ಇತ್ ಮಾರಾಯ್ತಿ.  ಹೋಯ್ ಬತ್ತೆ. ಅಡುಗೆ ಮನೇಲಿ ಎಲ್ಲ ರೆಡಿಮಾಡಿ ಇಟ್ಟಿದ್ದೆ. ಹೆಚ್ ಓಡಾಡಿ ಆಯಾಸ ಮಾಡ್ಕಂಡ್ಬೇಡ. ಔಷಧಿಯನ್ನು, ಮಾತ್ರೆಯನ್ನೂ ನೆನಪು ಮಾಡಿ ತಕ್ಕೊ ಅಕಾ’ ಎಂದು ಮಾಮೂಲಿನಂತೆ ಹೇಳಿ ಮೆಟ್ಟಿಲುಗಳನ್ನು ಇಳಿದು ಮೆಟ್ಟನ್ನು ಹಾಕಿಕೊಂಡು ಹೆಬ್ಬಾಗಿಲನ್ನು ಮುಂದೆ ಮಾಡಿಕೊಂಡು ಹೊರಟರು.

ಈಗ ಹರೀನ ಗುಡ್ಡೆಗೆ ಎಲ್ಲಾ ಕಡೆಯಿಂದಲೂ ಸರ್ಕಾರದವರು ಮುಳ್ಳುಬೇಲಿ ಹಾಕಿಬಿಟ್ಟಿದ್ದಾರೆ. ಮೊದಲಾದರೆ ಆ ಗುಡ್ಡೆಯನ್ನು ದಾಟಿ ಹಾಯ್ಕಾಡಿಗೆ ಹೋಗಲಿಕ್ಕೆ ಸುಲಭವಿತ್ತು. ಈಗ ಗೋರಾಜಿಗೆ ಹೋಗಿ, ಅಲ್ಲಿಂದ ಕಾಸಾಡಿಗೆ ಬಂದು ರಸ್ತೆಯಲ್ಲೇ ನಡೆದು ಹಾಯ್ಕಾಡಿಗೆ ಹೋಗಬೇಕು. ಹಾಯ್ಕಾಡಿ ಪೇಟೆಯ ಹತ್ತಿರ ಸ್ವಲ್ಪ ಕೆಳಗೆ ಗದ್ದೆಯ ಬೈಲಿಗೆ ಇಳಿದರೆ ಅದರ ಮೇಲ್ ಬದಿಯಲ್ಲೇ ಎಂಕಪ್ಪ ಹಂಜಾರರ ಮನೆ. ಏನಿಲ್ಲವೆಂದರೂ ಒಂದು ಮುಕ್ಕಾಲು ಒಂದು ಗಂಟೆಯ ದಾರಿ. ದೇವರನಾಮವನ್ನು ಬಾಯಿಯಲ್ಲಿ ಹೇಳುತ್ತಾ, ಅಡಿಗರು ನಡೆಯತೊಡಗಿದರು.

ಎಂಕಪ್ಪ ಹಂಜಾರು ತಂದೆ ರಾಮ ಹಂಜಾರರ ಕಾಲದಿಂದಲೂ ಅವರ ಮನೆಗೆ ತಾನೆ ಪೌರೋಹಿತ್ಯ ಮಾಡುತ್ತಿದ್ದದ್ದಲವಾ? ಆದರೆ, ಅವರ ಮಕ್ಕಳ ಕಾಲದಲ್ಲಿ ಇತ್ತೀಚೆಗೆ ಆ ಮನೆಯಲ್ಲಿ ಹಿಂದಿನಷ್ಟು ಸಲುಗೆ, ಆತ್ಮೀಯತೆ ಇಲ್ಲ. ರಾಮ ಹಂಜಾರರ ಇಬ್ಬರು ಮಕ್ಕಳು ಈಗ ಎರಡು ಮೂರು ವರ್ಷದಿಂದ ಬೆಂಗಳೂರಿನಲ್ಲೇ ಶ್ರಾದ್ಧ ಮಾಡುತ್ತಿದ್ದರಂತೆ. ಈ ಎಂಕಪ್ಪ ಹಾಗೂ ಕಿರಿಯವ ಶೀನ ಹಂಜಾರ ಮಾತ್ರ ಇಲ್ಲಿ ಮಾಡುತ್ತಾರೆ. ಶೀನನೂ ಅದೆಲ್ಲೋ ದೂರದ ಊರಿನಲ್ಲಿ ಕೆಲಸ ಮಾಡುತ್ತಿದ್ದು ಶ್ರಾದ್ಧದ ದಿನವೇ ಬಂದು, ನೆಂಟನಂತೆ ಇದ್ದು ಹೋಗುವವ. ಇವರಿಗೆ ಶ್ರಾದ್ಧ ಅಂದರೆ ಬರೀ ಹರಕೆ ಬಲಿ; ಒಂದು ಶ್ರದ್ಧೆ ಇಲ್ಲ. ಮಾಡದಿದ್ದರೆ ಯಾರಾದರೂ ಏನಾದರೂ ಹೇಳುತ್ತಾರೆ ಎಂಬ ಹೆದರಿಕೆ. ಅಂತೂ ಈ ಶ್ರಾದ್ಧವೂ ಯಾರಾದರೂ ಕಂಟ್ರಾಕ್ಟ್ ವಹಿಸಿಕೊಂಡು ಮಾಡುವ ಭಟ್ಟರಿದ್ದರೆ ಅದನ್ನೂ ಹಣ ಕೊಟ್ಟು ಮಾಡಿಸಿ ಪ್ರಸಾದ ಕಳುಹಿಸಲು ಹೇಳುತ್ತಿದ್ದರೋ ಏನೊ. ಮುಂದೆ ಆ ಕಾಲವು ಬಂದರೂ ಬಂದೀತು.

ಹೀಗೆ ಏನೇನೋ ಯೋಚಿಸುತ್ತಾ ಅಡಿಗರು ಹಂಜಾರರ ಮನೆಯ ಎದುರಿನ ಅಡಿಕೆ ತೋಟವನ್ನು ಹಾದು ಅಂಗಳಕ್ಕೆ ಬಂದರು. ಅಲ್ಲಿಯೇ ಇದ್ದ ಬಾವಿಕಟ್ಟೆಯ ನೀರಿನ ಟಾಂಕಿನಿಂದ ಒಂದು ಚೊಂಬಿನಲ್ಲಿ ನೀರು ತೆಗೆದು ಕಾಲಿನ ಹಿಂಬದಿಗೆ ಹೊಯ್ದುಕೊಂಡು ಮೆಟ್ಟಿಲೇರಿ ಮನೆಯ ಒಳಗೆ ಹೋದರು.

ಎಂಕಪ್ಪ ಹಂಜಾರರು ಅಡಿಗರನ್ನು ನೋಡಿ, ‘ಬನ್ನಿ... ಬನ್ನಿ...’ ಎಂದು ಹೇಳಿ ಒಳಗೆ ಕೋಣೆಗೆ ಹೋಗಿ ಒಂದು ಬಣ್ಣದ ಚಾಪೆಯನ್ನು ಚಾವಡಿಯಲ್ಲಿ ಹಾಸಿ ‘ಕುಳಿತುಕೊಳ್ಳಿ, ಸ್ವಲ್ಪ ಬಾಯಾರಿಕೆಗೆ...’ ಎಂದು ಉಪಚರಿಸಿದರು. ಒಂದು ತಟ್ಟೆಯಲ್ಲಿ ಬೆಲ್ಲದ ತುಂಡು, ತಂಬಿಗೆಯಲ್ಲಿ ನೀರು ಒಂದು ಲೋಟವನ್ನು ತಂದು ಅವರ ಹೆಂಡತಿ ಅಡಿಗರ ಮುಂದೆ ಇಟ್ಟು, ‘ಬಂದ್ರಿಯಾ’ ಎಂದು ನಗೆ ಬೀರಿ ಮಾತಾಡಿಸಿದರು. ಚಾವಡೊಯಲ್ಲಿ ಕಾಲು ನೀಡಿ ಕುಳಿತು, ‘ಎಂತಹಾ ಶೆಖೆ ಮರ್ರೆ’ ಎಂದು ತನ್ನ ಪಾಣಿಪಂಚೆಯಲ್ಲಿ ಮುಖವನ್ನು ಒರೆಸಿಕೊಂಡ ಅಡಿಗರು, ಅದನ್ನೇ ಗಿರಿಗಿಟಿಯಂತೆ ತಿರುಗಿಸುತ್ತಾ ಗಾಳಿ ಹಾಕಿಕೊಂಡು ಲೋಟಕ್ಕೆ ನೀರು ಬಗ್ಗಿಸಿ, ಬೆಲ್ಲದ ತುಂಡನ್ನು ಬಾಯಿಗೆ ಎಸೆದು, ನೀರನ್ನು ಗಟಗಟನೆ ಕುಡಿದು, ‘ಎಲ್ಲಾ ರೆಡಿಯಾ?’ ಎಂದರು. ‘ಹೌದಪ’ ಎಂದ ಹಂಜಾರರು ಒಂದು ದರ್ಬೆಯ ಕಟ್ಟನ್ನು ಒಂದು ಕತ್ತಿಯನ್ನು ತಂದು ಚಾವಡಿಯಲ್ಲಿ  ಅವರ ಎದುರಿಗೆ ಹಾಕಿದರು.

ಅಡಿಗರು ದರ್ಬೆಯ ಕಟ್ಟನ್ನು ಬಿಡಿಸಿ ಅದನ್ನು ಕತ್ತರಿಸಿ ‘ಈ ವರ್ಷ ಶ್ರಾದ್ಧಕ್ಕೆ ಎಷ್ಟ್ ಜನ? ಎಲ್ಲರೂ ಬತ್ರಾ’ ಎಂದು ಕೇಳಿದರು. ಹಂಜಾರರು ‘ಇಲ್ಯೆ ನಾವಿಬ್ರೆ ಸೈ. ಉಳಿದವ್ರು ಬೆಂಗ್ಳೂರಲ್ಲೆ ಮಾಡ್ತರಂಬ್ರು’ ಎಂದರು. ಅಡಿಗರು ದರ್ಬೆಯನ್ನು ಕತ್ತರಿಸಿ ಶ್ರಾದ್ಧ ಕ್ರಿಯೆಗೆ ಬೇಕಾದ ಪವಿತ್ರ, ಸಣ್ಣ ಸಣ್ಣ ದರ್ಬೆ ಕಟ್ಟು ಇತ್ಯಾದಿ ಮಾಡಲು ಶುರುಮಾಡಿದರು.

ಅಷ್ಟರಲ್ಲಿ ಎಂಕಪ್ಪ ಹಂಜಾರರ ತಮ್ಮನೂ, ಬಂದು ಅದೂ ಇದು ಲೋಕಾಭಿರಾಮ ಮಾತಾಡಿದ.

ಶ್ರಾದ್ಧ ಶುರುವಾಯಿತು. ಅಡಿಗರು ಅಂದ ಮೇಲೆ ಎಲ್ಲವೂ ಚೊಕ್ಕ. ಶಿಸ್ತಿನಿಂದಲೇ ಎಲ್ಲವೂ ಆಗಬೇಕಾದಂತೆಯೇ ಆಗಬೇಕು. ಒಂದು ಗಂಟೆಯ ಸುಮಾರಿಗೆ ಶ್ರಾದ್ಧ ಮುಗಿದೂ ಹೋಯಿತು.

ಹಂಜಾರರ ಹೆಂಡತಿ ‘ನಿಮ್ಮ ಮಗ ಬಂದಿದ್ನೆ?’ ಎಂದು ವಿಚಾರಿಸಿದರು. ‘ಇಲ್ಲ ಮರ್ರೆ ಅವ ಎರಡ್ ಮೂರ್ ವರ್ಷಕ್ ಒಂದ್ಸಾರಿ ಬಪ್ದ್ ಅಲ್ದೆ’ ಸ್ವರದಲ್ಲಿ ಏಕೋ ನಡುಕ ಉಂಟಾಗಿ ತಾನು ಒಂಟಿ ಎಂಬ ಭಾವ ಸ್ಫುರಿಸಿತ್ತು. ಅಷ್ಟರಲ್ಲಿ ‘ನಮ್ ಮಾಣಿ, ಶಂಕ್ರನಾರಾಯಣ ಮದರ್ ತೆರೆಸಾ ಶಾಲಿಗ್ ಹ್ವಾಪದೆ. ಅವ ಬಪ್ಪು ಹೊತ್ತಾಯ್ತ. ಇಲ್ಲೆ ಪ್ಯಾಟಿಗ್ ಹೋಯಿ ಕರ್ಕಂಡ್ ಬತ್ತೆ’ ಎಂದು ಅಂಗಿ ಹಾಕಿಕೊಳ್ಳುತ್ತಾ ಎಂಕಪ್ಪ ಹಂಜಾರರು ಹೊರಗೆ ಹೊರಟರು.

‘ಮನೆಯಲ್ಲಿ ಆಗುವ ಇಂತಹ ವಿಶೇಷ ಕಟ್ಲೆಯ ದಿನ ಆದ್ರೂ ಮಕ್ಳು ಮನೆಗಿರ್ಕೆ. ಇಲ್ದಿದ್ರೆ ಅವುಕೆ ಈ ಕ್ರಮ, ಸಂಸ್ಕಾರ, ಸಂಪ್ರದಾಯ ಎಲ್ಲ ಹ್ಯಾಂಗ್ ಗೊತ್ತಾತ್ತೆ?’ ಅಂದರು ಅಡಿಗರು.

‘ಅವು ರಜೆ ಮಾಡೂಕ್ ಎಡಿಯಾ ಅಂತ್ವೆ. ಪಾಠ ಮಿಸ್ ಆತ್ತಂಬ್ರ್’ ಎಂದು ನಗುತ್ತಾ ಹೊರಟರು ಹಂಜಾರರು. ಸಂಸ್ಕಾರ ಇದ್ದೂ ಇಂದು ನನ್ನ ಮಗ ಏನು ಮಾಡುತ್ತಾನೆ ಎಂದುಕೊಂಡರು ಅಡಿಗರು.

ಮನಸ್ಸು ತನ್ನ ಬಾಲ್ಯಕ್ಕೆ ಓಡಿತು. ಅಪ್ಪಯ್ಯನಿಂದಲೇ ವೇದ ಪಾರಾಯಣ ಪಾಠ ಹೇಳಿಸಿಕೊಂಡ ನಾನು, ಅಪ್ಪಯ್ಯ ಹೋದ ಪೌರೋಹಿತ್ಯದ ಮನೆಗೆಲ್ಲ ಅವರ ಹಿಂದೆ ಹೋಗುತ್ತಿದ್ದೆ. ಅವರಿಗೆ ಸಹಾಯಕನಾಗಿ. ಸುತ್ತಮುತ್ತಲಿನ ಬ್ರಾಹ್ಮಣರ ಮನೆಯಲ್ಲಿ ನನಗೆ ಎಷ್ಟೊಂದು ಗೌರವ ಇತ್ತು. ನಾನು ಬರುತ್ತಿದ್ದರೆ ದಾರಿಬಿಟ್ಟು ಬದಿಗೆ ಸರಿಯುತ್ತಿದ್ದರು. ಆದರೆ  ಈಗ? ನನ್ನನ್ನು ನೋಡಿದರೆ ಮುಖ ತಿರುಗಿಸಿ ನೋಡಿಯೂ ನೋಡದವರಂತೆ ಹೊರಟು ಹೋಗುತ್ತಾರೆ.

ನಾನು ಅಪ್ಪಯ್ಯನಿಗೆ ಎಷ್ಟು ಹೆದರುತ್ತಿದ್ದೆ? ಹೆದರಿಕೆಯೇ ಅದು? ಅಲ್ಲ ಅದು ಗೌರವ. ಅಪ್ಪಯ್ಯ ನನಗೆ ಜೋರು ಮಾಡಿದ್ದೇ ಇಲ್ಲ. ನನ್ನ ಮಗ? ಅವನ ಪರಿಚಯ ನಮ್ಮ ಊರಿನಲ್ಲೇ ಯಾರಿಗೂ ಪರಿಚಯವಿಲ್ಲ. ಚಿಕ್ಕಂದಿನಿಂದಲೂ ಓದುವ ನೆಪದಲ್ಲಿ ಮನೆಯಿಂದ ಹೊರಗೆ ಬರುತ್ತಲೇ ಇರಲಿಲ್ಲ. ಕಾಲ ಬಹಳ ಬದಲಾಗಿ ಹೋಯಿತು. ನನ್ನನ್ನು ಕಂಡರೆ ಕಣ್ಣು ತಪ್ಪಿಸಿಕೊಂಡು ತಿರುಗುತ್ತಾನೆ. ಎದುರಿಗೆ ಬಂದು ನಿಲ್ಲುವುದೇ ಇಲ್ಲ. ಮಾತುಕತೆಯೂ ಇಲ್ಲ. ಈಗ ಅಲ್ಲಿಯೂ ಪೂಜೆ ಮಾಡುತ್ತಾನಾ? ಹೊತ್ತಿನಿಂದ ಹೊತ್ತಿಗೆ ಸರಿಯಾಗಿ ಸ್ನಾನವನ್ನೂ ಮಾಡುತ್ತಾನೋ ಇಲ್ಲವೊ. ಮನೆಯಲ್ಲಿರುವಾಗ ಅದನ್ನೆಲ್ಲ ಹೇಳಿದರೆ ‘ಅದೆಲ್ಲ ನಿಮ್ ಕಾಲದಲ್ಲಾಯ್ತು. ಈಗ ಚೆನ್ನಾಗಿ ದುಡಿಯಬೇಕು, ಹಣ ಮಾಡಬೇಕು. ಕಾಲಕ್ಕೆ ತಕ್ಕಂತೆ ಬದಲಾಗಬೇಕು’ ಅನ್ನುತ್ತಿದ್ದನಲ್ಲ. ಯಾವುದು ಬದಲಾವಣೆ? ನಮ್ಮ ನಮ್ಮ ಸಂಸ್ಕಾರವನ್ನು ಕಿತ್ತೊಗೆಯುವುದಾ? ಹಿರಿಯವರಿಗೆ ಗೌರವ ಕೊಡದಿರುವುದಾ? ಪಾಶ್ಚಾತ್ಯರನ್ನು ಅನುಕರಿಸುವುದಾ? ಎಂದರೆ, ‘ಅದೆಲ್ಲ ನಿಮಗೆ ಗೊತ್ತಾಗುವುದಿಲ್ಲ’ ಅನ್ನುತ್ತಾನೆ. ಹೌದು, ನಾನೇ ಹೆಡ್ಡನಾದೆ. ನಾಳೆಯ ದಿನಗಳನ್ನು ಯೋಚಿಸಲೇ ಇಲ್ಲ. ನನ್ನ ಲಕ್ಷ್ಮಿಯೂ ಹೇಳಿದಳಲ್ಲ. ಮಗ ಓದಲಿಕ್ಕೆ ಹುಷಾರಿದ್ದಾನೆ. ಓದುವಷ್ಟು ಓದಿಸುವ ಅಂತ. ಮಗ ಓದಿ ಓದಿ ಮೇಲೆ ಮೇಲೆ ಹೋದ. ನಾವು ಹಿಂದುಳಿದೆವು.

ತಾಯಿಗೆ ಹುಷಾರಿಲ್ಲ ಎಂದು ಫೋನ್ ಮಾಡಿದರೆ ಅದಕ್ಕೆ ‘ಆಸ್ಪತ್ರೆಗೆ ಸೇರಿಸಿ. ಹಣದ ಬಗ್ಗೆ ಯೋಚನೆ ಬೇಡ’ ಅನ್ನುತ್ತಾನೆ. ಅವನ ಹಣದಿಂದ ನೆಮ್ಮದಿಯನ್ನಾಗಲೀ, ಆರೋಗ್ಯವನ್ನಾಗಲಿ ಕೊಂಡುಕೊಳ್ಳಲು ಸಾಧ್ಯವೆ?

ದೊಡ್ಡ ನಿಟ್ಟುಸಿರೊಂದು ಬಂತು.

ಹಂಜಾರರ ಮನೆಯಲ್ಲಿ ಮಧ್ಯಾಹ್ನದ ಊಟ ಮುಗಿದು ಒಂದು ವೀಳ್ಯ ಹಾಕಿ,  ಒಂದು ಗಳಿಗೆ ಚಾವಡಿಯಲ್ಲಿ ದಿಂಬಿಗೆ ಅನಿಸಿ ಕಣ್ಣುಮುಚ್ಚಿದ ಅಡಿಗರು, ಐದು ನಿಮಿಷದಲ್ಲಿಯೇ ಎದ್ದು ಹೆಂಡತಿಯ ನೆನಪಾಗಿ ಪಾಣಿಪಂಚೆಯನ್ನು ಕೊಡಕಿ ಹೆಗಲಿಗೇರಿಸಿ ‘ಹಂಜಾರ್ರೆ ನಾನು ಇನ್ನು ಬತ್ತೆ’ ಎಂದು ಹೊರಡಲು ಅನುವಾದರು. ಹಂಜಾರರ ಹೆಂಡತಿ ಒಳಗೆ ಹೋಗಿ ಒಂದು ಲೋಟ ಕಾಫಿಯನ್ನು ತಂದುಕೊಟ್ಟರು. ಅದನ್ನು ಕುಡಿದು ಅವರು ಕೊಟ್ಟ ಸಿಹಿಯ ಪೊಟ್ಟಣವನ್ನು ತೆಗೆದುಕೊಂಡು ಅಂಗಳಕ್ಕಿಳಿದರು.

ಮತ್ತೆ ಮನಸ್ಸಿನಲ್ಲಿ ದುಗುಡ ತುಂಬಿಕೊಂಡಿತು. ಯಾಕೆ ಹೀಗೆ ಆಗುತ್ತಿದೆ? ಒಳಗೆ ಏನೋ ಒಂದು ರೀತಿಯ ಭಯ ಒಂದು ರೀತಿಯ ಅನಿಶ್ಚಿತತೆ. ಮನೆಗೆ ಬಂದು ಉಸ್ಸಪ್ಪ ಎಂದು ಮೆಟ್ಟನ್ನು ಕಳಚಿಟ್ಟು ಜಗಲಿಯ ಮೇಲೆ ಕಾಲು ನೀಡಿ ಕುಳಿತು ಕೊಂಡರು.

‘ಹ್ವಾ,  ಉಂಡ್ಯಾ? ನಿದ್ದೆ ಬಂತಾ?’ ಎಂದು ಕುಳಿತಲ್ಲಿಂದಲೇ ಹೆಂಡತಿಯನ್ನು ಕೂಗಿ ಕೇಳಿದರು.

ಉತ್ತರ ಬರಲಿಲ್ಲ.

ಹಾಗೆಯೇ ಸ್ವಲ್ಪ ಹೊತ್ತು ಕುಳಿತಿದ್ದು, ಮೆಲ್ಲನೇ ಎದ್ದು, ಕಾಲಿಗೆ ನೀರು ಹಾಕಿಕೊಂಡು ಒಳಗೆ ಚಾವಡಿಗೆ ಬಂದು ಕೊಡೆಯನ್ನು ಮಾಡಿಗೆ ಸಿಕ್ಕಿಸಿ, ಅಡುಗೆ ಮನೆಗೆ ಹೋದರು.

ಎಲ್ಲ ಎಲ್ಲಿ ಇಟ್ಟಿದ್ದಾರೋ ಅಲ್ಲಿಯೇ ಇತ್ತು. ಹಾಗಾದರೆ ಇವಳು ಊಟವನ್ನೇ ಮಾಡಲಿಲ್ಲ. ಮೆಲ್ಲನೇ ನಡೆದು ಪಡಸಾಲೆಗೆ ಬಂದರು. ಒಮ್ಮೆ ಹಾಗೆಯೇ ಕಿಟಕಿಯಿಂದ ಹೊರಗೆ ತೋಟದ ಕಡೆಗೆ ದೃಷ್ಟಿ ಹಾಯಿಸಿದರು. ಏಕೋ ಇತ್ತಿತ್ತಲಾಗೆ ತಾನು ಇಷ್ಟಪಟ್ಟು ಬೆಳೆಸಿದ ತೆಂಗು, ಅಡಿಕೆ ಮರಗಳೇ ತನಗೆ ಅಪರಿಚಿತವಾದಂತೆ ಕಾಣುತ್ತಿವೆ. ಯಾವುದೂ ಬೇಡ ಅನ್ನಿಸಲಿಕ್ಕೆ ಶುರುವಾಗಿದೆ.

ಯಾವತ್ತೂ ಒಮ್ಮೆ ಹೋಗಿ ಪ್ರತಿ ಅಡಿಕೆ ಮರದ ಬುಡದಲ್ಲಿ ನಿಂತು ಎಡಕೈಯಲ್ಲಿ ಮರವನ್ನು ಆನಿಸಿ ಹಿಡಿದು, ಒಮ್ಮೆ ತಲೆ ಎತ್ತಿ ಮರದ ತುದಿಯನ್ನು ಕಣ್ಣು ಕಿರಿದು ಮಾಡಿ ನೋಡಿದರೆ ಹೋ ಇದೆಲ್ಲ ತನ್ನದೇ ಎಂದು ಅಭಿಮಾನದ ಸಮಾಧಾನ ಪಟ್ಟುಕೊಳ್ಳುತ್ತಿದ್ದವರಿಗೆ, ಇವತ್ತು ಬೆಳಿಗ್ಗೆ ತೋಟದ ಕಡೆಗೂ ಹೋಗಿ ಬರಲು ಮನಸ್ಸಾಗಲಿಲ್ಲ. ಮಲಗುವ ಕೋಣೆಗೆ ಬಂದರು. ‘ಹ್ವಾ ಹ್ಯಾಂಗಿದ್ದೆ?’ ಎಂದು ಮಂಚದ ಕಾಲುಬದಿಯಲ್ಲಿ ಮೆಲ್ಲನೇ ಕುಳಿತರು.

‘ಈಗೀಗ ಈ ಶ್ರಾದ್ಧವೋ, ಪೂಜೆಯೋ ನಮ್ಮ ಬ್ರಾಹ್ಮಣರಿಗೂ ಬ್ಯಾಡ ಆಯಿತ್ ಮಾರಾಯ್ತಿ. ಒಟ್ ಹರ್ಕಿಬಲಿ ತೀರ್ಸ್ತೊ’ ಅಂದರು.

ಹೆಂಡತಿ ಮಗ್ಗುಲು ಮಲಗಿದವಳು ತಿರುಗಲಿಲ್ಲ. ‘ಹಾಂ ಹೂಂ’ ಇಲ್ಲ ನಿಧಾನವಾಗಿ ಅವಳ ಕಾಲನ್ನು ನೇವರಿಸಿದರು. ಆಗಲೂ ಉತ್ತರವಿಲ್ಲ.

‘ಹ್ವಾ ಉಣ್ಣಲೇ ಇಲ್ಯಾ?’ ಎಂದರು.

ಅದಕ್ಕೂ ಉತ್ತರಬಾರದಿದ್ದಾಗ ಸ್ವಲ್ಪ ಗಾಬರಿಯಾಗಿ ಎದ್ದು ತಲೆದಿಸೆಗೆ ಬಂದು ಹೊದೆವಸ್ತ್ರವನ್ನು ಸರಿಸಿ ಹಣೆಯನ್ನು ಮುಟ್ಟಿನೋಡಿದರು. ಆದರೂ, ಲಕ್ಷ್ಮಿ ಸ್ಪಂದಿಸದಾಗ, ‘ಹ್ವಾ ಎಂತ ಆತ್?’ ಎಂದು ಆಪ್ಯಾಯತೆಯಿಂದ ನುಡಿದರು. ಅದಕ್ಜೂ ಉತ್ತರವಿಲ್ಲ .

ಪುನಃ ‘ಲಕ್ಷ್ಮಿ’ ಎಂದು ಮೈಯನ್ನು ಅಲುಗಾಡಿಸಿ ಗಟ್ಟಿಯಾಗಿ ಕರೆದರು.

ಲಕ್ಷ್ಮಿ ನಿಧಾನವಾಗಿ ಕಣ್ಣು ತೆರೆದು ಗಂಡನತ್ತ ತಿರುಗಿದರು. ಮೆಲ್ಲನೆ ‘ನಂಗೆ ಏನೂ ಎಡುದಿಲ್ಯೆ. ಇನ್ನೂ ಎಷ್ಟ್ ದಿನ ಈ ಗ್ವಾಲೆಯೋ ಆ ಯಮನಿಗೆ ಇನ್ನೂ ಕರುಣೆ ಬರಲಿಲ್ಲೆ’ ಎಂದು ನೋವಿನಿಂದ ಹೇಳಿದರು.

‘ನಾನ್ ಎಷ್ಟ್ ಸಲ ಹೇಳಿದ್ದೆ ನಿಂಗೆ? ನೀನು ಹೀಂಗೆ ನಬಿಯುದ್ ಬ್ಯಾಡ. ನನ್ ಕೈಯಲ್ಲಿ ನೋಡುಕ್ ಆತಿಲ್ಲೆ.  ಒಮ್ಮೆ ಮಣಿಪಾಲಕ್ ಹ್ವಾಪ ಎಂದು. ನೀನು ಬ್ಯಾಡ ಬ್ಯಾಡ ಅಂತ್ಲೆ ಹೇಳಿಯೇ ಇಷ್ಟ್ ಕಾಲ ಕಳೆದೆ. ಎಂತ ಆತ್ ಅಂತ್ಲೂ ಸಮಾ ಹೇಳುದಿಲ್ಲೆ. ಇವತ್ ಒಂದ್ ಮುಷ್ಟಿ ಉಣಲೂ ಇಲ್ಲೆ. ಇನ್ ನಿನ್ ಮಾತು ನಾನು ಕೇಳಿದಿಲ್ಲೆ. ರಾಮನಾಯ್ಕನಿಗ್ ಫೋನ್ ಮಾಡಿ ಈಗಲೇ ಕಾರ್ ತಪ್ಪುಕೆ ಹೇಳ್ತೆ’ ಎಂದು ನಿರ್ಧಾರದಿಂದ ಎದ್ದು, ಚಾವಡಿಗೆ ಬಂದು ಹಾಲಾಡಿಯಲ್ಲಿ ಬಾಡಿಗೆ ಕಾರನ್ನು  ಓಡಿಸುತ್ತಿದ್ದ ರಾಮನಾಯ್ಕನಿಗೆ ಫೋನ್ ಮಾಡಿ ಕಾರು ತರಲು ಹೇಳಿದರು.

ಮಣಿಪಾಲಕ್ಕೆ ಹೊರಡಲು ಗಡಿಬಿಡಿಯಲ್ಲಿ ಸಿದ್ಧತೆ ಮಾಡತೊಡಗಿದರು. ಯಾವಾಗಲೂ ‘ಬೇಡ್ದೆ ನಾನ್ ಸತ್ರೆ ಇಲ್ಲೆ ಸಾಯ್ತೆ’ ಎಂದು ಹೇಳುತ್ತಿದ್ದ ಲಕ್ಷ್ಮಿಯಮ್ಮ ಇವತ್ತು ಅದಕ್ಕೂ ಉತ್ತರ ಕೊಡಲಾರದಷ್ಟು ಬಳಲಿದ್ದರು. ಅದನ್ನು ನೋಡಿ ಅವಳಿಗೆ ಆಗುವ ನೋವು ಎಷ್ಟು ಎಂಬುದನ್ನು ಎಣಿಸಿಕೊಂಡು ಅಡಿಗರು ಮತ್ತಷ್ಟು ಆತಂಕಗೊಂಡರು.

ಕಾರು ಬಂದು ನಿಂತ ಶಬ್ದ ಆಯಿತು. ‘ರಾಮ, ಬಾ ಎಲ್ಲ ರೆಡಿ ಮಾಡ್ಕಂಡ್ ಆಯ್ತು. ಒಂದು ಚಾ ಕುಡ್ಕೊ. ಅವಳನ್ ಹೊತ್ಕಂಡ್ ಕಾರಿಗೆ ಹಾಕ್ವಾ. ಮಣಿಪಾಲಕ್ ತಕಂಡ್ ಹ್ವಾಪ. ಮುಂದಿದ್ ದೇವರ ಕಂಡಂಗೆ ಆತ್’ ಎಂದು ಅದು ತನಗೂ ಅವನಿಗೂ ಅನ್ವಯಿಸುತ್ತದೆ ಎಂಬಂತೆ ಹೇಳಿದ ಅಡಿಗರು ಅವನ ಉತ್ತರಕ್ಕೆ ಕಾಯಲಿಲ್ಲ. ಅವನು ಅಡಿಗರು ಕೊಟ್ಟ ಚಾ ಕುಡಿದು, ಬಾವಿಕಟ್ಟೆಗೆ ಹೋಗಿ ಲೋಟವನ್ನು ಕುಚುಕುಚು ಮಾಡಿ ತೊಳೆದು ತಂದು ಜಗಲಿಯ ಮೂಲೆಯಲ್ಲಿ ಕವುಚಿಹಾಕಿ ಮೆಟ್ಟಿಲು ಹತ್ತಿ ಒಳಗೆ ಬಂದ.

ಇಬ್ಬರೂ ಲಕ್ಷ್ಮಿಯಮ್ಮನನ್ನು ಎತ್ತಿಕೂರಿಸಿ, ಆಚೆ ಒಬ್ಬರು, ಈಚೆ ಒಬ್ಬರು ಆನಿಸಿ ಹಿಡಿದುಕೊಂಡು ಒಂದು ರೀತಿಯಲ್ಲಿ ಹೇಳುವುದಾದರೆ ಎಳೆದುಕೊಂಡೇ ಹೋಗಿ ಕಾರಿನ ಹಿಂದಿನ ಸೀಟಿನಲ್ಲಿ ಮಲಗಿಸಿದರು. ಅಡಿಗರು ಮತ್ತೆ ಒಳಗೆ ಹೋಗಿ ಕೈಚೀಲದೊಂದಿಗೆ ಮಣಿಪಾಲದ ಆಸ್ಪತ್ರೆಯಲ್ಲಿ ಉಳಿಯಲು ಬೇಕಾದ ಬಟ್ಟೆ, ತಟ್ಟೆಯೊಂದಿಗೆ ಬಂದು, ಹೊರಬಾಗಿಲಿಗೆ ಬೀಗ ಹಾಕಿದರು. ಮನೆಯ ಹಿಂದಿನ ಕೂಲಿಯಾಳು ರಾಧುಬಾಯಿಗೆ, ತಾನು ಮಣಿಪಾಲಕ್ಕೆ ಹೆಂಡತಿಯನ್ನು ಕರೆದುಕೊಂಡು ಹೋಗುವುದಾಗಿಯೂ, ಮನೆಯ ಕಡೆ ಸ್ವಲ್ಪ ನೋಡಿಕೊಳ್ಳಲೂ ಹೇಳಿ ಬಂದು ಕಾರಿನ ಹಿಂದಿನ ಸೀಟಿನಲ್ಲಿ ಹೆಂಡತಿಗೆ ತಾಗಿ ಕುಳಿತರು. ಕಣ್ಣಿನಲ್ಲಿ ಅಯಾಚಿತವಾಗಿ ಒಂದು ಹನಿ ನೀರು ಇಳಿಯಿತು. ಕಾರು ಹೊರಟಿತು.

ಮಣಿಪಾಲದಲ್ಲಿ ಡಾಕ್ಟರರು ಪರಿಚಯದವರೆ ಲಕ್ಷ್ಮಿಯನ್ನು ಒಂದು ವಾರ್ಡಿಗೆ ಸೇರಿಸಿಯಾಯಿತು. ಒಬ್ಸರ್‌ವೇಷನ್ ಅಂತೆ. ಏನೇನೋ ಟೆಸ್ಟ್‌ಗಳಾದವು. ಅಂತೂ ರಾತ್ರಿ ತಡವಾಗಿ ಡಾಕ್ಟರು ಬಂದರು. ‘ಅಡಿಗ್ರೆ, ಒಳ್ಳೆ ಟೈಮಿಗೆ ಕರ್ಕಂಡ್ ಬಂದ್ರಿ. ಇನ್ನೂ ಸ್ವಲ್ಪ ತಡಾ ಮಾಡಿದ್ರೆ ಬಹಳ ಕಷ್ಟ ಇದ್ದಿತ್ತು. ಎಲ್ಲ ಟೆಸ್ಟ್ ಮಾಡಿದ್ವೊ. ನೋಡುವಾ’ ಎಂದರು.

ಅಡಿಗರು ಮಗ ಸದಾಶಿವನಿಗೆ ಫೋನ್ ಮಾಡಿ ವಿಷಯ ತಿಳಿಸಿದರು.

 ‘ಹೌದಾ ಅಪ್ಪಯ್ಯ, ಎಷ್ಟ್ ಖರ್ಚಾದ್ರೂ ಅಡ್ಡಿಲ್ಲೆ. ಅಪ್ಪಯ್ಯ ನೀವು ಧೈರ್ಯದಿಂದಿರಿ’ ಅಂದ. ಮಗನಿಗೆ ‘ಎಂತ ಧೈರ್ಯವೋ ಮಗಾ? ನಿಂಗ್ ಸ್ವಲ್ಪ ಪುರಸೊತ್ ಮಾಡ್ಕಂಡ್ ಬಪ್ಪುಕಾತ್ತಾ? ನಂಗೆ ಕೈಕಾಲೆ ಆಡುದಿಲ್ಲೆ. ಎಂತ ಮಾಡ್ಕಂದೇಳಿ ಗೊತ್ತಾತಿಲ್ಲೆ ಮಾರಾಯ. ತುಂಬ ಹೆದ್ರಿಕಿ ಆತ್’ ಎಂದರೆ, ಎಂದೂ ಹೀಗೆ ಮಾತಾಡದ ಅಪ್ಪಯ್ಯನ ಮಾತು ಕೇಳಿ ಸ್ವಲ್ಪ ಅಧೀರನಾದರೂ, ಅವನು  ‘ತನಗೆ ಈಗ ರಜೆ ಸಿಗುವುದಿಲ್ಲ. ತುಂಬ ಕೆಲಸ ಇದೆ. ಸ್ವಲ್ಪ ಧೈರ್ಯ ತಗೊಳ್ಳಿ ಎಲ್ಲ ಸಮಾ ಆತ್’ ಎಂದು ಹೇಳಿದ.

ಆದರೆ, ಆ ಲಕ್ಷ್ಮಿಯಮ್ಮ ಮರುದಿನ ಬೆಳಗನ್ನು ನೋಡಲೇ ಇಲ್ಲ. ಡಾಕ್ಟರರು ಬಂದು ‘ನೋಡಿ ಅಡಿಗರೆ, ಎಲ್ಲ ಅವನ ಇಚ್ಛೆ ನಾವು ಮಾಡೂದನ್ನು ಮಾಡಿದ್ದೇವೆ’ ಎಂದು ಅಡಿಗರನ್ನು ಕರೆದು ಸಂತೈಸಿದರು. ಅಡಿಗರ ಮನಸ್ಸು ಶೂನ್ಯವಾಗಿತ್ತು. ಒಳಗೆ ಅಂಧಕಾರ. ಏನು ಮಾಡಬೇಕೆಂದೇ ತಿಳಿಯಲಿಲ್ಲ. ಮಗನಿಗೆ ಮತ್ತೆ ಫೋನ್ ಮಾಡಿ ವಿಷಯ ತಿಳಿಸಿದರು.

ಸ್ವಲ್ಪ ಗಡಸಿನಿಂದಲೇ, ‘ರಜೆ ಹಾಕಿ ಕೂಡಲೇ ಬಾ. ಬಾಡಿಯನ್ನು ಐಸ್ ಲ್ಲಿ ಇಡ್ತೇವೆ. ಎಲ್ಲ ಆಯ್ಕಲೆ’ ಅಂದರು.

ಮಗ ಸ್ವಲ್ಪ ಹೊತ್ತು ಮೌನವಾಗಿದ್ದು ಮತ್ತೆ ಮೆಲ್ಲನೇ ಹೇಳಿದ. ‘ಅಪ್ಪಯ್ಯ, ನಾನು ಬರುವುದು ಎರಡು ದಿನ ಆದೀತು. ಅಷ್ಟರವರೆಗೆ ಯಾಕೆ ಇಡ್ತೀರಿ? ನೀವು ಮುಂದುವರಿಸಿ. ನನಗೆ ಅಮ್ಮನು ಇನ್ನೂ ಜೀವಂತ ಇರುವ ಹಾಗಿನ ಮುಖವೆ ಕಣ್ಣ ಮುಂದೆ ಬರುತ್ತಿದೆ. ಅದು ಹಾಗೆಯೇ ಇರಲಿ’ ಎಂದು ಹೇಳಿದ. ಅಡಿಗರಿಗೆ ಗಂಟಲು ಕಟ್ಟಿತು. ಫೋನ್ ಇಟ್ಟರು.

ಮುಂದಿನ ಎಲ್ಲ ಕೆಲಸಗಳು ಯಾಂತ್ರಿಕವಾಗಿ ನಡೆಯಿತು. ಫೋನ್ ಮಾಡಿ ಊರಲ್ಲಿ ಕೆಲವು ಆಪ್ತರಿಗೆ ಹೇಳಿದ್ದರಿಂದ ಅದು ಬಾಯಿಯಿಂದ ಬಾಯಿಗೆ ಹೋಗಿ, ಹಾಲಾಡಿಪೇಟೆಯಲ್ಲಿ ನೂರಾರು ಜನ ಸೇರಿದ್ದರು. ಅಂತೂ ಮನೆಗೆ ಹೆಂಡತಿಯ ಶವವನ್ನು ತಂದು, ಊರವರ ಸಹಕಾರದಿಂದ ದಹನವನ್ನೂ ಮಾಡಿದ್ದಾಯಿತು. ಇನ್ನು ಮಗನ ಬರವನ್ನು ಕಾಯುವುದಾಯಿತು.

ಮಗ ಎರಡನೇ ದಿನದಲ್ಲಿ ಬಂದ. ಅಷ್ಟರ ಒಳಗೆ ಅಡಿಗರು ಸುಮಾರಾಗಿ ಮನೆಯ ಹಾಗೂ ಮುಂದಿನ ಬದುಕಿನ ಪರಿಸ್ಥಿತಿಗೆ ಹೊಂದಿಕೊಂಡಿದ್ದರು. ಆದರೆ, ಗಾಢ ಮೌನ.

ಮಗ ಮನೆಯಲ್ಲಿ ಇದ್ದರೂ, ಅಪ್ಪ, ಮಗನಿಗೆ ಮಾತಿಲ್ಲ; ಕತೆಯಿಲ್ಲ. ಹಾಗೆಯೇ ಮತ್ತೆ ಎರಡು ದಿನ ಕಳೆಯಿತು. ಆ ರಾತ್ರಿ ಊಟವಾದ ಮೇಲೆ ಚಾವಡಿಯಲ್ಲಿ ಕುಳಿತು, ಮಗನನ್ನು ಕರೆದು ಕೇಳಿದರು. ‘ನೋಡು ಮಗು, ಮುಂದಿನ ಕಾರ್ಯ ಎಲ್ಲ ಎಲ್ಲಿ ಮಾಡುವುದು? ಹೇಗೆ ಮಾಡುವುದು? ಅಂತ ಯೋಚನೆ ಏನಾದ್ತೂ ಮಾಡಿದ್ಯಾ? ಈ ಮನೆಯಲ್ಲಿ ಮಾಡುವುದು ಕಷ್ಟ ಅಂತ ಕಾಣುತ್ತದೆ. ಎಲ್ಲದಕ್ಕೂ ಇನ್ನೊಬ್ರ ಕೈಯನ್ನೆ ಕಾಣ್ಕ್ ಆತ್. ನಮ್ಗೇ ಮಾಡೂ ಕಾತಿಲ್ಲೆ. ನಂಗೆ ವಯಸ್ಸಾಯ್ತು. ನಿಂಗೆ ಗೊತ್ತಾಗುದಿಲ್ಲೆ. ಎಷ್ಟ್ ಅಂತ ಇನ್ನೊಬ್ರ ಕೈ ಕಾಂಬೂಕಾತ್? ಹಾಗಂತ ಗೋಕರ್ಣದಲ್ಲಿ ಮಾಡಿದ್ರೆ ಶ್ರೇಷ್ಠ ಅಂತ್ರಪ. ಎಂತ ಮಾಡೂದ್ ಗೊತ್ತಾತಿಲ್ಲೆ. ಇಲ್ಲೇ ತೀರ್ಥಬೈಲಂಗೂ ಮಾಡ್ಲಕ್. ಎಲ್ಲ ವ್ಯವಸ್ಥೆ ಇತ್ತಂಬ್ರಪ. ನಾಳೆ ಹೋಯಿ ಮಾತಾಡಿ ಬರ್ಲಕ್ಕಾ?’. ಮಗ ಅದಕ್ಕೂ ಮಾತಾಡಲಿಲ್ಲ. 

ಆದರೆ, ಬೆಳಿಗ್ಗೆ ಎದ್ದವನೇ ಅಂಗಿ ಹಾಕಿಕೊಂಡು ಹೊರಟುಬಿಟ್ಟ. ರಾತ್ರಿ ಊಟ ಮಾಡುವಾಗ ಮೆಲ್ಲನೆ, ‘ಅಪ್ಪಯ್ಯ, ನಾನ್ ಇವತ್ ತೀರ್ಥಬೈಲಿಗೆ ಹೋಗಿ ಬಂದೆ. ಎಲ್ಲ ವ್ಯವಸ್ಥೆ ಆಯ್ತ್’ ಎಂದು ಸ್ವಲ್ಪ ಹೊತ್ತು ಸುಮ್ಮನಿದ್ದು, ‘ನಾನ್ ಒಂದ್ ಮಾತ್ ಹೇಳ್ತೆ. ನೀವ್ ಸಿಟ್ ಮಾಡೂಕಾಗ’ ಅಂದ. ಅಡಿಗರು ಏನು ಎನ್ನುವಂತೆ ಮಗನನ್ನು ನೋಡಿದರು.

‘ನನಗೆ ರಜೆ ಇಲ್ಲ. ಇನ್ನು ಎರಡು ದಿನದಲ್ಲಿ ನಾನು ಕೆಲಸಕ್ಕೆ ಹಿಂದೆ ಹೋಗ್ದಿದ್ರೆ ನನ್ನ ಕೆಲಸ ಹೋತ್. ಅದಕ್ಕೆ ನಾನು ನಾಳೆ ಹೊರ್ಡೇನೆ’ ಎಂದು ತಡೆದು ತಡೆದು ಹೇಳಿದ. ಅಡಿಗರಿಗೆ ಒಮ್ಮೆ ಅವನು ಏನು ಹೇಳುತ್ತಿದ್ದಾನೆ ಎಂಬುದು ಅರ್ಥವಾಗಲಿಲ್ಲ. ನಂತರ ಒಮ್ಮೆಲೆ ಸ್ವರ ಏರಿಸಿ, ‘ಸತ್ ಹ್ವಾದ್ ನಿನ್ ಅಮ್ಮ ಮಾರಾಯಾ. ಪಿಂಡ ಇಡಬೇಕಾದವ ನೀನು’ ಎಂದು ಜೋರಾಗಿಯೇ ಜೇಳಿದರು. ಅವರು ತನ್ನನ್ನು ಕಂಟ್ರೋಲ್ ಮಾಡಲು ಪ್ರಯತ್ನಿಸಲಿಲ್ಲ. ಸ್ವಲ್ಪ ಹೊತ್ತು ಯಾರೂ ಮಾತಾಡಲಿಲ್ಲ.

‘ಅಪ್ಪಯ್ಯ, ಅಷ್ಟ್ ಸೆಂಟಿಮೆಂಟ್ ಆಪೂದ್ ಬ್ಯಾಡ. ಸತ್ ಮೇಲ್ ಎಂತ್ ಆತ್ತೋ ಯಾರಿಗೂ ಗೊತ್ತಿಲ್ಲೆ. ಅದೆಲ್ಲ ನಮ್ನಮ್ಮ ಮನಸ್ಥಿತಿ, ನಂಬಿಕೆ ಇದ್ದ ಹಾಂಗೆ. ಈಗ ನಾನೇ ನಿಮ್ ಮಗಳು ಆಗಿದ್ರೆ ಏನ್ ಮಾಡ್ತಿದ್ರಿ?. ಅಡಿಗರಿಗೆ ಮಾತು ತೋಚಲಿಲ್ಲ, ನಾಲಿಗೆ ಹೊರಡಲಿಲ್ಲ.

‘ಅಮ್ಮ ಹೋದ ದುಃಖ ನನಗೂ ಇಲ್ಯಾ? ನಾನ್ ತೋರ್ಸ್ಕಂಬುದ್ ಇಲ್ಲೆ ಅಷ್ಟೆ. ಆದ್ರೆ ನಂಗೆ ಅದ್ರಲ್ಲೆಲ್ಲ ಅಷ್ಟು ನಂಬಿಕೆ ಇಲ್ಲೆ. ಅಮ್ಮ ಹೇಗೂ ಹೋದ್ಲು. ಇನ್ನು ಅವಳ ನೆನಪು ಮಾತ್ರ. ನಿಮಗೆ ನಂಬಿಕೆ ಇದ್ರೆ ನೀವು ಮಾಡಿ’ ಎಂದು ಹೇಳಬೇಕಾದ್ದನ್ನು ಹೇಳಿ ಮುಗಿಸಿದಂತೆ ನಿಟ್ಟುಸಿರು ಬಿಟ್ಟು ಕುಳಿತಲ್ಲಿಂದ ಎದ್ದು ಹೋದ.

ಅಡಿಗರು ಅಲ್ಲಿಯೇ ಕುಸಿದು ಕುಳಿತರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.