ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದಾನೋ ಬಲೀಂದ್ರ ರಾಯ

Last Updated 28 ಅಕ್ಟೋಬರ್ 2019, 6:15 IST
ಅಕ್ಷರ ಗಾತ್ರ

ಆರ್ಯ‑ದ್ರಾವಿಡ ಎಂಬ ಜನಾಂಗಗಳ ಅಸ್ತಿತ್ವ ಹಾಗೂ ಅವುಗಳ ನಡುವೆ ನಡೆದ ಸಾಂಸ್ಕೃತಿಕ ಸಂಘರ್ಷ ಮತ್ತು ಸಮ್ಮಿಲನ ಸತ್ಯವೊ ಸುಳ್ಳೋ ಎಂಬ ಮಾತು ಬೇರೆ. ಈ ಜಿಜ್ಞಾಸೆ ಸಾವಿರಾರು ವರ್ಷಗಳಿಂದ ನಡೆಯುತ್ತಲೇ ಬಂದಿದೆ. ಆದರೆ, ವೈದಿಕತೆ ಹಾಗೂ ಅದರ ಎದುರು ತನ್ನನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಲು ಹೆಣಗುವ ಆದಿಸಂಸ್ಕೃತಿಗಳ ನಡುವೆ ನಿರಂತರ ಘರ್ಷಣೆ ನಡೆಯುತ್ತಿರುವುದಂತೂ ಸತ್ಯ. ಈ ಘರ್ಷಣೆಯೇ ಒಂದು ರೀತಿಯಲ್ಲಿ ನಿರಂತರ ಸೃಜನಶೀಲತೆಗೂ ದಾರಿಮಾಡಿಕೊಟ್ಟಿದೆ. ಅಂತಹ ಸೃಜನಶೀಲತೆಯ ಪ್ರತೀಕವಾಗಿ ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದಾದ್ಯಂತ ಬಲಿ ಚಕ್ರವರ್ತಿಯ ಆರಾಧನೆ ನಡೆಯುತ್ತಿದೆ. ಬುಡಕಟ್ಟುಗಳು ಮತ್ತು ದುಡಿಯುವ ವರ್ಗವೆನಿಸಿದ ಶೂದ್ರ ಪ್ರಪಂಚದ ಒಳಾವರಣದಲ್ಲಿ ಇದು ಹೆಚ್ಚು ಕ್ರಿಯಾಶೀಲ.

ದಕ್ಷಿಣ ಭಾರತದಾದ್ಯಂತ ದ್ರಾವಿಡ ಬುಡಕಟ್ಟುಗಳ ಆದಿಮ ಸ್ಮೃತಿಯಂತೆ ಇರುವ ಬಲೀಂದ್ರನ ಆರಾಧನೆ ನಮ್ಮ ‘ಪೌರಾಣಿಕ ಇತಿಹಾಸ’ವನ್ನು ಮರುವ್ಯಾಖ್ಯಾನಿಸಲು ಒತ್ತಾಯಿಸುತ್ತದೆ. ಕನ್ನಡ ಜಾನಪದದಲ್ಲಿ ಇದಕ್ಕೆ ಇರುವ ಸ್ಥಾನವೇನು? ಎಂಬುದನ್ನು ಮನಗಾಣುವ ಮೂಲಕ ಬಲಿಯ ಆರಾಧನೆಯ ನೆಪದಲ್ಲಿ ಕನ್ನಡದ ಮೌಖಿಕ ವಾಙ್ಞಯವೊಂದು ಹೇಗೆ ಬೆಳೆದು ಬಂದಿದೆ ಎಂಬುದನ್ನು ಶೋಧಿಸಲೂ ಸಾಧ್ಯವಿದೆ. ಯಜಮಾನ್ಯದ ಸ್ಥಾನದಲ್ಲಿರುವ ಸಂಸ್ಕೃತಿಯೊಂದು ತನ್ನ ದಬ್ಬಾಳಿಕೆಯ ಮೂಲಕ ಆದಿ ಸಂಸ್ಕೃತಿಯ ಮೇಲೆ ತನ್ನ ಮೌಲ್ಯಗಳನ್ನು ಹೇರಲು ಬಂದಾಗ, ಅದರಿಂದ ಸಾವರಿಸಿಕೊಂಡು ಜಾನಪದ ಜಗತ್ತು ಹೇಗೆ ಆ ದಬ್ಬಾಳಿಕೆಯ ಪುರಾಣಮೂಲವನ್ನು ತನ್ನೊಳಗೇ ವಿಲೀನಗೊಳಿಸಿಕೊಳ್ಳುತ್ತದೆ ಎಂಬುದಕ್ಕೆ ಬಲೀಂದ್ರನ ಆಚರಣೆಯೇ ಸಾಕ್ಷಿ. ಏಕೆಂದರೆ ಈ ಭೂಮಿ, ಭೂಮಿಯ ಒಡೆತನ, ಆನಂತರ ಬೆಳೆದ ಪ್ರಭುತ್ವ, ಪ್ರಭುತ್ವದ ಹಂತದಲ್ಲಿ ನಡೆದ ದಬ್ಬಾಳಿಕೆಗಳು ಹಾಗೂ ಆ ದಬ್ಬಾಳಿಕೆಯ ಮೂಲಕ ಹೇರಲಾದ ಅನ್ಯ ಸಂಸ್ಕೃತಿ, ಈ ಕ್ರಮಗಳಿಗೆ ಉಂಟಾದ ಕ್ರಿಯೆ ಮತ್ತು ಪ್ರಕ್ರಿಯೆ ಇವೆಲ್ಲವನ್ನು ಅರ್ಥಮಾಡಿಕೊಳ್ಳದೆ ನಮ್ಮ ಆರಾಧನೆ, ಆಚರಣೆಗಳನ್ನು ವಿಶ್ಲೇಷಿಸಲು ಸಾಧ್ಯವಿಲ್ಲ.

ಆದ್ದರಿಂದಲೇ ಗ್ರಾಮೀಣ ಪ್ರದೇಶಗಳ ಒಂದು ಆಚರಣೆ ಎಂದರೆ ಅದು ಕೇವಲ ಆರಾಧನೆ ಅಥವಾ ಮನರಂಜನೆ ಅಲ್ಲ. ಸ್ಥಾಪಿತ ಇತಿಹಾಸಕ್ಕೆ ಪುನರ್‌ ವ್ಯಾಖ್ಯಾನ ನೀಡಬಲ್ಲ ಸಾಂಸ್ಕೃತಿಕ ಸಂಗತಿಯೂ ಹೌದು. ಆದ್ದರಿಂದಲೇ ಒಂದು ಆಚರಣೆ ಎಂದರೆ ಅಗಣಿತ ಕುತೂಹಲಗಳನ್ನೊಳಗೊಂಡ ಒಂದು ಸಂಕೀರ್ಣ ಸಂಗತಿ. ಬಲೀಂದ್ರನನ್ನು ಧ್ಯಾನದಿಂದ ಆರಾಧಿಸುವ ಕೃಷಿ ಸಮುದಾಯಗಳು ಅವನನ್ನು ತಮ್ಮ ಕುಲಮೂಲದ ಹಿರಿಯನನ್ನಾಗಿ ಕಲ್ಪಿಸಿಕೊಳ್ಳುತ್ತವೆ. ಬಹುಶಃ ಶೂದ್ರ ಸಮುದಾಯಗಳ ಪ್ರತೀ ಕುಟುಂಬವೂ ಆರಾಧಿಸುವ ಏಕಾಮೇವಾದ್ವಿತೀಯ ದೈವ ಬಲೀಂದ್ರ. ಬಲೀಂದ್ರನ ಆಗಮನ ಮತ್ತು ನಿರ್ಗಮನದ ನಡುವಿನ ಆಚರಣಾ ಲೋಕ ಅದೆಷ್ಟು ವೈವಿಧ್ಯವೋ ಅದಕ್ಕಿಂತಲೂ ಹೆಚ್ಚು ಅವನನ್ನು ಕುರಿತ ವರ್ಣನಾತ್ಮಕ ಹಾಡುಗಳ ಲೋಕ.

ಲಯದ ಕಲ್ಪನೆ ಕೃಷಿಕರಲ್ಲಿ ಇಲ್ಲ. ಲಯಕ್ಕೆ ವಿರುದ್ಧವಾದ ಸಮೃದ್ಧಿ ಇವರ ಗುರಿ. ಆ ಸಮೃದ್ಧಿಗಾಗಿ ಆರಾಧಿಸುವುದು ಅವರ ಆಶಯ. ಬೆಂಕಿ, ಬಿರುಗಾಳಿ ಪ್ರವಾಹಕ್ಕೆ ಇವರ ಸಮ್ಮತಿ ಇಲ್ಲ. ಅವುಗಳನ್ನು ಆಶಿಸುವುದೂ ಇಲ್ಲ. ವಿಕೋಪಗಳನ್ನೇ ಆರಾಧಿಸುವ ಮೂಲಕ ನಮ್ಮ ಇಡೀ ನಾಡು ಸಮೃದ್ಧವಾಗಿರಲಿ, ಹಸಿರಾಗಿರಲಿ, ನಗುನಗುತ್ತಾ ಇರಲಿ ಎಂಬುದು ಅವರ ಪ್ರಾರ್ಥನೆ. ಇವರ ಇಂಥ ಸಕಾರಾತ್ಮಕವಾದ ಆಶಯಗಳ ಪ್ರತೀಕವೇ ಬಲೀಂದ್ರ.

‘ಪಾತಾಳದಿಂದ ಬಂದ ಬಲೀಂದ್ರ ಹಣ್ಣಡಕೆ ಕೊನೆಯನ್ನೇರಿ, ತನ್ನ ರಾಜ್ಯದ ಸಿರಿಯನ್ನು ನೋಡುತ್ತಾನೆ. ಅಲ್ಲಿ ಹಾಲು ಹಳ್ಳ, ಮೊಸರಗುಡ್ಡ, ಬೆಳೆಯ ಸಮೃದ್ಧಿ. ಅವನ ಪಟ್ಟೆದೋತರ, ಮುತ್ತಿನುಂಗರ ಹಾಗೂ ಮೈಬೆಳಕು ಮನೆ ತುಂಬುತ್ತದೆ. ಮೂರುದಿನ ಉಳಿದು ಮುತ್ತಿನ ಕೊಡೆ ಹಿಡಿದು ಬಲೀಂದ್ರ ಹೊರಡುತ್ತಾನೆ. ಹೋಗುವಾಗ ಸಣ್ಣಕ್ಕಿಯ ಪಾಯಸವುಂಡು ಹೋಗುತ್ತಾನೆ.

ಮುತ್ತಿನ ಕುಡಿಬಾಳೆಲೆಯಲ್ಲಿ ಹಾಲು, ತುಪ್ಪ, ಅನ್ನವನ್ನುಂಡು ಅಕ್ಕಿಯ ಕಣಜದಿಂದ ಇಳಿದು ಬಲಿ ಪಾತಾಳಕ್ಕೆ ಹೋಗುತ್ತಾನೆ. ಮೂರು ದಿನ ರಾಜ್ಯ ಸಿರಿಯನ್ನು ನೋಡಿ ರಾಜ್ಯಕ್ಕೆ ಶುಭ ಕೋರುತ್ತಾನೆ. ತನ್ನ ರಾಜ್ಯದಲ್ಲಿ ಕಟ್ಟದೆ ಕರೆಯಲಿ, ಬಿತ್ತದೆ ಬೆಳೆಯಲಿ, ಕಲ್ಲುಗುಡ್ಡಗಳು ಚಿಗುರಿ ನಾಡು ಹಸುರೊಡೆಯಲಿ ಎಂದು ಹಾರೈಸಿ ಪಾತಾಳಕ್ಕಿಳಿಯುತ್ತಾನೆ.

ಮಾಳಿಗೆಯ ಒಳಗಿಂದ ಎಣ್ಣೆಯ ಬಲೀಂದ್ರ ಇಳಿದು ಬಂದ. ಮಕ್ಕಳೇ ಬುಟ್ಟಿಯನ್ನು ತೆಗೆದುಕೊಳ್ಳಿ. ನಮ್ಮೂರಿನಲ್ಲಿ ಮುತ್ತು ಮಾಣಿಕ ಬೆಳೆಯುವಂತೆ ಬೀಜವನ್ನು ಬಿತ್ತುತ್ತಾ ಬರೋಣ. ಪಟ್ಟೆಯ ಹಚ್ಚಡದ ಮುತ್ತಿನುಂಗುರದ ಬಲೀಂದ್ರನಿಗೆ ಮುತ್ತಿನಾರತಿ ಬೆಳಗೋಣ.

ನೀವು ಕಟ್ಟಿದ ಕೊಟ್ಟಿಗೆಗೆ, ತುಂಬಿದ ಸಭೆಗೆ ಸಿರಿಬರಲಿ. ನೀವು ಸುಖವಾಗಿ ಬಾಳಿರಿ. ನಾನು ನನ್ನ ರಾಜ್ಯಕ್ಕೆ ಹೋಗುತ್ತೇನೆ ಎಂದು ಮಾಳಿಗೆಯಿಂದಿಳಿದು ಹಟ್ಟಿಗೆ ಬರುತ್ತಾನೆ. ಬೆಳ್ಳಿಯ ಬಸವನನ್ನೇರಿ ರಾಜ್ಯಕ್ಕೆ ಸಿರಿ ಸಂಪತ್ತು ಬರಲೆಂದು ಹಾರೈಸಿ, ‘ಒಡ್ಡಿ’ ಗುಡಿಗೆ ಹೋಗುತ್ತಾನೆ.

ಇವು ಬಲೀಂದ್ರನ ಹಾಡುಗಳ ಕೆಲವು ಉದಾಹರಣಾರೂಪದ ಸಾರಾಂಶ.

ಬಲೀಂದ್ರನ ಆಚರಣೆಯನ್ನು ಗಮನಿಸುವುದಕ್ಕಾಗಿ ಎರಡು ವರ್ಷಗಳ ಹಿಂದೆ ದೀಪಾವಳಿ ಸಂದರ್ಭದಲ್ಲಿ ನಾನು ಶಿವಮೊಗ್ಗ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಒಕ್ಕಲಿಗರ ದೀಪಾವಳಿ, ಸಾಗರ ತಾಲ್ಲೂಕಿನಲ್ಲಿ ಹಸಲರು ಮತ್ತು ದೀವರ ದೀಪಾವಳಿ, ಉತ್ತರ ಕನ್ನಡದ ಹೊನ್ನಾವರ ತಾಲ್ಲೂಕಿನಲ್ಲಿ ನಾಡವರು, ಗಾಮೊಕ್ಕಲು, ಹಾಲಕ್ಕಿ ಒಕ್ಕಲಿಗರು ಮತ್ತು ಹವ್ಯಕ ದೀಪಾವಳಿ, ದಕ್ಷಿಣ ಕನ್ನಡದಲ್ಲಿ ಬಂಟರು ಮತ್ತು ಬಿಲ್ಲವರು ಮುಂತಾದ ಸಮುದಾಯಗಳು ಆಚರಿಸುವ ಬಲೀಂದ್ರನ ಪೂಜೆಯನ್ನು ನೋಡುವ ಅವಕಾಶ ಲಭಿಸಿತು. ಬಹುತೇಕ ಎಲ್ಲ ಕಡೆಯೂ ಬಲೀಂದ್ರನೆಂದರೆ ಹಿಂಗಾರ ಮತ್ತು ಹೂಮಾಲೆಗಳಿಂದ ಅಲಂಕರಿಸಿದ ಕಲಶ ಜೊತೆಗೆ ವಿವಿಧ ಫಲಗಳು (ಬಹುತೇಕ ಕಡೆ ಮೊಗೆಕಾಯಿ) ಮತ್ತು ಕೃಷಿ ಉಪಕರಣಗಳನ್ನು ಒಪ್ಪ ಓರಣವಾಗಿ ಜೋಡಿಸಿದ ಸಂಯುಕ್ತಾಕೃತಿ.

ನಡುಮನೆಯಲ್ಲಿ ಒಂದು ಮಂಟಪದ ಚೌಕಟ್ಟಿನೊಳಗೆ ವಿವಿಧ ಹಸಿರೆಲೆ, ಪುಷ್ಪ ಮತ್ತು ಕಾಡು ಕಾಯಿ ಗೊಂಡೆಗಳ ಸಮೃದ್ಧಿಯೇ ಅಲ್ಲಿ ಇರುತ್ತಿತ್ತು. ಕೆಲವರು ಕಲಶದಲ್ಲಿ ನೀರು ತುಂಬಿದರೆ ಕೆಲವರು ಭತ್ತ ಅಕ್ಕಿ ಮುಂತಾದ ಧಾನ್ಯಗಳನ್ನು ತುಂಬಿರುತ್ತಿದ್ದರು. ಜೊತೆಗೆ ಬಲೀಂದ್ರನ ತಾಯಿ ಎಂದು ಸಂಕೇತಿಸುವ ‘ಬೂರಜ್ಜಿ’ಯ ಕಲಶವೂ ಇದ್ದೇ ಇರಬೇಕು. ನಾನು ಗಮನಿಸಿದ ವಿಚಿತ್ರವೆಂದರೆ ಉತ್ತರ ಕನ್ನಡದ ಒಂದು ಹಳ್ಳಿಯಲ್ಲಿ ಬ್ರಾಹ್ಮಣರ ಮನೆಯಲ್ಲಿ ಪ್ರತಿಷ್ಠಾಪಿಸಿದ ಬಲಿ ಒಬ್ಬ ರಾಕ್ಷಸನಾಗಿದ್ದ. ಅಂದರೆ ದೊಡ್ಡ ಮೊಗೆಕಾಯಿಯ ಮುಂಭಾಗಕ್ಕೆ ಮುಖದ ಚಿತ್ರವೊಂದನ್ನು ಬರೆದು ಅದರಲ್ಲಿ ಮೀಸೆ ಮತ್ತು ಕೊರೆಹಲ್ಲುಗಳ ರಾಕ್ಷಸನನ್ನು ಚಿತ್ರಿಸಲಾಗಿತ್ತು. ಅಲ್ಲಿಂದ ನಾಲ್ಕಾರು ಹೆಜ್ಜೆಗಳ ದೂರದಲ್ಲಿದ್ದ ಶೂದ್ರರ ಮನೆಗಳಲ್ಲಿ ಕಲಶ ರೂಪದ ‘ಬಲಿ’ ತನ್ನೆಲ್ಲ ಫಲ ಪುಷ್ಪಗಳ ಜೊತೆ ದೇವತೆಯಾಗಿ ಪೂಜೆಗೊಳ್ಳುತ್ತಿದ್ದ. ಬ್ರಾಹ್ಮಣರಲ್ಲಿ ಅದರಲ್ಲಿಯೂ ಹವ್ಯಕರಲ್ಲಿ ಬಲಿಯನ್ನು ಪೂಜಿಸಿ ಹಾಡುವವರು ಹೆಂಗಸರು ಮಾತ್ರ. ಅವರು ಬಲಿಯ ಬಗೆಗೆ ಅನೇಕ ಹಾಡುಗಳನ್ನು ಹಾಡುತ್ತಾ ವಿಷ್ಣು ಮತ್ತು ಇಂದ್ರನನ್ನು ಹೊಗಳುತ್ತಾ ಬಲಿಯನ್ನು ‘ಮಹಾದಾನಿ’ ಎಂದು ಬಣ್ಣಿಸುತ್ತಾರೆ.

ಎಲ್ಲ ಆಚರಣೆಗಳಂತೆಯೇ ಬಲೀಂದ್ರನ ಪೂಜೆ ಕೂಡ ಸಮೃದ್ಧಿಯ ಆಚರಣೆ. ಬೇಡಿಕೆಗಳನ್ನು ಇವರ ಪೂರ್ವಜನಾದ ಬಲೀಂದ್ರ ಸ್ವತಃ ಬಂದು ನೆರವೇರಿಸಿಕೊಡುತ್ತಾನಂತೆ. ಆದರೆ ಬಲೀಂದ್ರನೊಬ್ಬನೆ ಬರುವುದಿಲ್ಲ ಎನ್ನುವುದು ಇಲ್ಲಿ ಮುಖ್ಯ. ಬಲೀಂದ್ರನ ಜೊತೆ ಬೂರಜ್ಜಿ, ಬೂರಮ್ಮ ಅಥವಾ ಬೋರಮ್ಮನೆಂದು ಕರೆಯಿಸಿಕೊಳ್ಳುವ ಮಾತೃ ದೇವತೆಯೂ ಬರುತ್ತಾಳೆ. ಮಾತೃದೇವತೆ ಇಲ್ಲದೆ ಸಮೃದ್ಧಿ ಆಚರಣೆಗಳು ಇರುವುದಿಲ್ಲ ಎನ್ನುವುದಕ್ಕೆ ಈ ಬೂರಜ್ಜಿ ಮತ್ತೊಂದು ಸಾಕ್ಷಿ. ಪ್ರತಿ ಮನೆಯಲ್ಲಿಯೂ ಪ್ರತಿಷ್ಠಾಪಿಸುವ ತುಂಬಿದ ಧಾನ್ಯದ ಎರಡು ಕಲಶಗಳು ಬಲೀಂದ್ರನನ್ನು ಮತ್ತು ಬೂರಜ್ಜಿಯನ್ನು ಪ್ರತಿನಿಧಿಸುತ್ತವೆ. ಉತ್ತರ ಕನ್ನಡದಲ್ಲಿ ಈ ಬಗ್ಗೆ ಅಧ್ಯಯನ ಮಾಡಿರುವ ಎಲ್.ಆರ್.ಹೆಗಡೆಯವರು ಈ ಬೂರಜ್ಜಿಯನ್ನು, ಭೂಮಿ ತಾಯಿಯೆಂದು ಕಲ್ಪಿಸುತ್ತಾರೆ. ಬೂರಜ್ಜಿ ಎಂದರೆ ‘ಬೂ ಅಜ್ಜಿ’ ಎಂಬುದು ಅವರ ತರ್ಕ. ಹಾಗೆಯೇ ಬಲೀಂದ್ರನನ್ನು ‘ಭೂಮಿಪುತ್ರ’ನೆಂದು ಕರೆಯಲಾಗುತ್ತದೆ. ಹೀಗೆ ಭೂಮಿತಾಯಿ ಮತ್ತು ಭೂಮಿಪುತ್ರರ ಸಂಯೋಜನೆ ಇಲ್ಲಿ ಕ್ರಿಯಾತ್ಮಕವಾಗಿ ಆಚರಣೆಗೆ ಒಳಪಟ್ಟಿದೆ.

ಬಲಿಯ ಪುರಾಣದ ಬಗ್ಗೆ ನಾವು ಒಂದಿಷ್ಟು ಗಮನ ಹರಿಸಬಹುದು. ಒಂದು ಕಾಲಕ್ಕೆ ಆದಿಯುಗದ ಲಿಪಿಗೊತ್ತಿಲ್ಲದ ಪ್ರಾಚೀನ ಕಾಲದ ಸಹಜ ಪುರಾಣಗಳು ಬರಬರುತ್ತ ಕೆಲವರ ಪೂರ್ವಯೋಜಿತ ಉದ್ದೇಶಕ್ಕಾಗಿ ಪುನರ್‌ರಚನೆಗೊಂಡವು ಎಂಬುದನ್ನು ತಳ್ಳಿ ಹಾಕುವಂತಿಲ್ಲ. ವೇದಕಾಲ ಅಥವಾ ಅದಕ್ಕೂ ಮೊದಲೇ ಪುರಾಣಗಳ ವ್ಯವಸ್ಥಿತ ಪುನರ್ರಚನೆ ಆಗಿರುವಂತೆ ಕಾಣುತ್ತದೆ. ಆದರೆ ಆ ಪುನರ್ರಚನೆ ಅಷ್ಟಕ್ಕೆ ಸೀಮಿತವಾಗಿ ನಿಂತಿತೆ? ಇಲ್ಲ. ರಾಮಾಯಣ, ಮಹಾಭಾರತಗಳೆಂಬ ಐತಿಹ್ಯ ರೂಪದ ಮಹಾಕಾವ್ಯಗಳೂ ಕೂಡ ಹೇಗೆ ಕಾಲದಿಂದ ಕಾಲಕ್ಕೆ ಎಣೆಯಿಲ್ಲದಷ್ಟು ಪ್ರಕ್ಷೇಪಗಳನ್ನು ಕಂಡವು ಎಂಬುದನ್ನು ನಾವು ನೋಡಿದ್ದೇವೆ. ಎಷ್ಟೋ ಪುರಾಣಗಳು ಐತಿಹಾಸಿಕವಾಗಿ ಮೂಲದಲ್ಲಿ ಕೆಲವು ಸತ್ಯಾಂಶಗಳನ್ನು ಒಳಗೊಂಡಿದ್ದರೂ, ಬರವಣಿಗೆ ಗೊತ್ತಿದ್ದವರು ಮತಧರ್ಮದ ಅಂಧಕಾರಕ್ಕೆ ಸಿಕ್ಕು ಅವುಗಳ ಸಹಜ ರೂಪವನ್ನು ಮೂಲ ಆಶಯಗಳನ್ನು ಬದಲಿಸಿಬಿಟ್ಟರು. ಅದು ಒಂದು ರೀತಿಯಲ್ಲಿ ವ್ಯವಸ್ಥಿತ ರೂಪಾಂತರ. ಈ ವೈದಿಕೀಕರಣ ಯಾರಿಂದಲೇ ಆಗಿರಲಿ, ಅದು ತತ್‍ಕಾಲಕ್ಕೆ ಮಾತ್ರ ಸಂಬಂಧಪಟ್ಟದ್ದು. ಸ್ಥಳೀಯ ಸಂಸ್ಕೃತಿಗಳ ಒಳಪ್ರವಾಹಗಳನ್ನು ತಡೆಹಿಡಿಯುವುದು ಸಾಧ್ಯವಿಲ್ಲ. ಬಲೀಂದ್ರನ ಆಚರಣೆಯನ್ನೇ ಇಟ್ಟುಕೊಂಡು ಹೇಳುವುದಾದರೆ ಪುರಾಣ ಯಾವುದೇ ಇರಲಿ ಅಥವಾ ಪುರಾಣದಿಂದ ಯಾವುದೇ ಸಾಮಗ್ರಿ ಸ್ವೀಕರಿಸಿರಲಿ ಅದನ್ನು ತಮ್ಮಂತೆ ಮಾಡಿಕೊಳ್ಳುವ, ತಮ್ಮ ಆ ಬೃಹತ್ ಪಾರಂಪರಿಕ ಪದರುಗಳಲ್ಲಿ ವಿಲೀನಗೊಳಿಸಿಕೊಳ್ಳುವ ಛಲವನ್ನು ಜನಪದ ಸಮುದಾಯ ಇಲ್ಲಿ ತೋರಿದೆ. ಸ್ಥಾಪಿತ ಪುರಾಣವೊಂದು ಈ ದೇಶದ ಕೃಷಿಕರ ಆರಾಧ್ಯ ವ್ಯಕ್ತಿಯನ್ನು ‘ಅಸುರ’ನೆಂದು ಕರೆದು ದ್ರಾವಿಡನೆಂದು ಹತ್ತಿಕ್ಕಿದ ಸಂದರ್ಭವನ್ನು ಗ್ರಹಿಸಿ ಅಂತಹ ಕ್ರಿಯೆಗೆ ಪ್ರತಿಭಟನೆಯಾಗಿ ಅವನನ್ನು ತಮ್ಮ ಇಷ್ಟ ದೈವವನ್ನಾಗಿ ರೂಪಿಸಿಕೊಂಡದ್ದು ಶೂದ್ರ ಜಗತ್ತಿನ ಒಳ ಬಂಡಾಯ ಎಂದರೆ ಅತಿಶಯೋಕ್ತಿಯಲ್ಲ.

ಪಕ್ಷಪಾತದ ಸಾಂಸ್ಕೃತಿಕ ದಬ್ಬಾಳಿಕೆಯನ್ನು ಬದಿಗೆ ಸರಿಸಿ, ಕೃಷಿ ಮೂಲದ ಯಾವ ನಾಯಕನಿಗೆ ಅನ್ಯಾಯವಾಯಿತೋ ಅವನನ್ನು ತಮ್ಮ ಮೂಲಪುರುಷನೆಂದು ಇಲ್ಲಿ ಪರಿಗಣಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT