ಗುರುವಾರ , ಮಾರ್ಚ್ 4, 2021
24 °C

ಕಥೆ: ಜೋಡಿ ನೇಣಿನ ಪ್ರಸಂಗ

ಆರ್. ವಿಜಯರಾಘವನ್ Updated:

ಅಕ್ಷರ ಗಾತ್ರ : | |

Prajavani

ಅಂದು ಊರಿಂದ ಬಂದ ಮಾಲತಿ ಹೇಳಿದ್ದ ವಿಚಾರವಿದು. ಬಹಳ ದಿನದಿಂದ ನನೆಗುದಿಗೆ ಬಿದ್ದಿದ್ದ ಈ ವಿಚಾರವನ್ನು ಬರೆಯಬೇಕನಿಸಿದ್ದು ವಾರದ ಹಿಂದೆ.

ನರಜುಕುಂಟೆಯ ದಡದಲ್ಲಿರುವ ಜೋಡಿ ನೇರಳೆಮರದಲ್ಲಿ ಅದೊಂದು ಹೋದ ಭಾನುವಾರ ಬೆಳಬೆಳಿಗ್ಗೆಯೇ ಎರಡು ಹೆಣಗಳು ನೇತಾಡುತ್ತಿದ್ದವಂತೆ. ಒಂದು ನಲವತ್ತೈದರ ಹೆಣ್ಣಿನದಂತೆ, ಇನ್ನೊಂದು ಇಪ್ಪತ್ತಕ್ಕಿಂತಲೂ ಚಿಕ್ಕವಯಸ್ಸಿನ ಹುಡುಗಿಯದಂತೆ. ತಾಯಿ-ಮಗಳ ಹೋಲಿಕೆ ಚೂರೂ ಇರಲಿಲ್ಲವಂತೆ. ಕ್ಷಣಮಾತ್ರದಲ್ಲಿ ಈ ವಿಚಾರ ಊರಲ್ಲೆಲ್ಲ ಹರಡಿ ಹೆದರುವವರು ಬಿಟ್ಟರೆ ಮಿಕ್ಕ ಎಲ್ಲರೂ ನರಜುಕುಂಟೆಯತ್ತ ಓಡಿದರಂತೆ. ಹಿಂದಿನ ದಿನ ಆ ಕಡೆ ಕುರಿ ಮೇಕೆ, ಎಮ್ಮೆ ಹಸು ಮೇಯಿಸಲು ಹೋಗಿದ್ದವರು ಸಂಜೆ ಕುಂಟೆಯಲ್ಲಿ ಜಾನುವಾರುಗಳಿಗೆ ನೀರು ಕುಡಿಸಿಕೊಂಡೇ ಬಂದರೆಂದು, ಆಗ ಇಂಥ ಯಾವುದೂ ಘಟಿಸಿರಲಿಲ್ಲವೆಂದೂ ಹೇಳಿದರು. ಅಲ್ಲಿಗೆ ಹೋದವರೆಲ್ಲರೂ ರಾತ್ರೋರಾತ್ರಿ ಈ ರೀತಿ ಹೆಣಗಳು ಆಗಿಹೋದವರು ಯಾವ ದಿಕ್ಕಿಂದ ನೋಡಿದರೂ ನಮ್ಮ ಊರಿನ ಜನವಲ್ಲ ಎಂದು ಖಚಿತಪಡಿಸಿಕೊಂಡರಂತೆ. ಕೂಡಲೇ ಸುದ್ದಿ ಸುತ್ತಮುತ್ತಲಿನ ಊರುಗಳಿಗೂ ವ್ಯಾಪಿಸಿ ಸೈಕಲ್ಲುಗಳಲ್ಲಿ ಜನ ಬಂದು ನೆರೆದು ಅದು ದೊಡ್ಡ ಪರಿಷೆಯೇ ಆಗಿಬಿಟ್ಟಿತ್ತಂತೆ. ಆದರೆ, ಹೆಣಗಳಾದವರು ನೆರೆಯ ಊರಾದ ಕಣಿವೇನಹಳ್ಳಿಯವರೂ ಅಲ್ಲ. ಸುತ್ತಲಿನ ಲಿಂಗಾಪುರ, ಚವ್ವೇನಹಳ್ಳಿ, ಕಡತೂರು, ಅಬ್ಬೇನಹಳ್ಳಿ, ಭಾವನಹಳ್ಳಿ, ಕೊರಚನೂರು, ಸುಣ್ಣಕಲ್ಲುಬಾರ್ಲಿಯವರೂ ಅಲ್ಲ ಅಂತ ಆಯಾ ಊರಿನ ಜನ ಘೋಷಿಸಿಬಿಟ್ಟರಂತೆ. ಕೊನೆಗೂ ಅವರು ಯಾರು ಎತ್ತ ಎನ್ನುವುದು ಗೊತ್ತಾಗಲೇ ಇಲ್ಲವಂತೆ.

ಫೋಟೊ ಹಿಡಕೊಂಡು ಡಾಕ್ಟರ್‌ ಕರೆಸಿ, ಹೆಣ ಕುಯ್ಯಿಸಿ, ಹೆಣಗಳನ್ನ ಪೊಲೀಸರೇ ದಾಸನಕೆರೆಯಲ್ಲಿ ಯಾವ ಜನವೋ ಎತ್ತಲೋ ಅಂತ ಊರ ಹಿರೀಕರು ಆಕ್ಷೇಪಮಾಡಿದರೂ ಸ್ವಲ್ಪ ಆಚೆಗೆ ಮಣ್ಣು ಮಾಡಿಸಿದರಂತೆ. ಕರ್ಣಾಕರ್ಣಿಯಾಗಿ ಈ ಜೋಡಿ ನೇಣಿನ ಸುದ್ದಿ ಸೀಮೆಯೆಲ್ಲ ಹಬ್ಬಿದರೂ ಯಾರೊಬ್ಬರೂ ಅದರ ವಾರಸಿನ ಪ್ರಸ್ತಾಪ ಮಾಡಲಿಲ್ಲವಂತೆ. ಇದರ ಹಿಂದು ಮುಂದು ಎಂಥದೇ ಇರಲಿ, ಎತ್ತಿನ ಗಾಡಿ ಮಾತ್ರವೇ ಓಡಾಡುತ್ತಿದ್ದ ದಾರಿಯಲ್ಲಿ ಎರಡು ದಿನ ಪೊಲೀಸರ ಜೀಪು, ಒಂದು ದಿನ ಹೆಣ ಸಾಗಿಸಲು ಟೆಂಪೋ ಓಡಾಡಿದವು ಅಂದಳು. ನನಗಂತೂ ದಿಗಿಲಾಗಿ ರಾತ್ರಿ ಆಚೆ ಹೋಗುವಾಗ ಸ್ಮಿತಾನ, ಅವಳಿಗೆ ಹೆದರಿಕೆ ಅಂತ ಸುಧೀನ ಎಬ್ಬಿಸಿಕೊಂಡು ಹೋಗೋ ಹಾಗೆ ಆಗಿದೆ ಕಣೋ ಅಂತನೂ ಅಂದಳು. ಆಮೇಲೆ ನಗುತ್ತ ಈ ಕಡೆ ಕೇರಿಯ ಹುಡುಗರು ಆ ಜೀಪುಗಳ ಹಿಂದೆ, ಟೆಂಪೋ ಹಿಂದೆ ಓಡಿ ಪೊಲೀಸರಿಂದ ಬೈಸಿಕೊಂಡು ಹೆದರಿಕೊಂಡು ಮನೆ ಸೇರಿ ಬಾಗಿಲ ಸಂದೀಲಿ ಅವರು ವಾಪಸ್ಸು ಹೋಗೋವಾಗ ಇಣುಕಿಣುಕಿ ನೋಡಿದ್ದನ್ನ ಜ್ಞಾಪಕ ಮಾಡಿಕೊಂಡಳು.

ಸುದ್ದಿಯೋ ಕಥೆಯೋ, ಇದರ ವಿವರವನ್ನು ಕೇಳಿದ ಕ್ಷಣವೇ ನನ್ನ ಮನಸ್ಸಿನಲ್ಲಿ ಅಲ್ಲಿಯ ಸ್ಥಳೀಯ ಭೂಗೋಳವೆಲ್ಲ ಪುನಾಸೃಷ್ಟಿಯಾಗತೊಡಗಿತು.

ಊರಿಗೆ ದಕ್ಷಿಣಕ್ಕೆ ಲಿಂಗಾಪುರದ ಮೂಲಕ ಮಾಲೂರಿಗೆ ಹೋಗುವ ದಾರಿಯಿದೆ. ಉತ್ತರಕ್ಕೆ ಕಣಿವೇನಹಳ್ಳಿಗೆ. ಜನರ ವ್ಯವಹಾರವೆಲ್ಲ ಉತ್ತರ ಪೂರ್ವ ದಕ್ಷಿಣಕ್ಕೇ ಸೀಮಿತ. ಅಬ್ಬೇನಹಳ್ಳಿಗೆ ಹೋಗಲು ಊರ ಪಶ್ಚಿಮಕ್ಕೆ ಕಾಲುದಾರಿ ಇದ್ದರೂ ಅದನ್ನು ಜನ ಬಳಸುವುದು ಅಪರೂಪ. ಹೊಲದ ಕೆಲಸವಿದ್ದರೆ ಇಲ್ಲವೆ ದನ ಮೇಯಿಸಬೇಕಾದರೆ ಮಾತ್ರವೇ ಜನ ಆ ಕಡೆ ಹೋಗುವುದು. ಎರಡೇ ಮೈಲಿಯ ಆಜೂಬಾಜಿನಲ್ಲಿ ಇದ್ದರೂ ಅಬ್ಬೇನಹಳ್ಳಿಯವರು ನಮ್ಮೂರಿಗೆ, ನಮ್ಮೂರವರು ಅಲ್ಲಿಗೆ ಹೋಗಿಬರುವುದು ತೀರಾ ಕಡಿಮೆ. ವರ್ಷಕ್ಕೆರಡು ಸಲ ಬರುತ್ತಿದ್ದವರು ಬ್ರಾಹ್ಮಣಾರ್ಥಕ್ಕೆ ಅಂತ ಒಂಟಿ ಕಣ್ಣಿನ ಮೇಷ್ಟ್ರು ಸೀನಪ್ಪ, ಹಳೇ ಶಾನುಭೋಗ ನಾರಾಯಣಪ್ಪ ಇವರೇ. ಇನ್ನು ನರಜುಕುಂಟೆ ಇರುವ ದಾರಿ ಅದು ಯಾವ ಊರಿಗೂ ದಾರಿಯಲ್ಲ. ಹೊಲಗಳಿಗೆ ಮತ್ತೆ ಅಡವಿಯ ಮುತ್ತರಾಯನ ಗುಡಿಗೆ ಹೋಗಲಿಕ್ಕೆ ಮಾತ್ರ ಇರುವಂಥದು. ದನ ಕರು ಓಡಾಡುವಂಥದು. ಸ್ವಲ್ಪ ಮುಂದೆ ಒಂದು ಮುತ್ತರಾಯನ ಗುಡಿ ಇದೆ. ಅದಕ್ಕೆ ಪೂಜೆ ಮಾಡಲು ವರಸೆ ಪ್ರಕಾರ ಶನಿವಾರಗಳಂದು ಸೈಕಲ್ ಹತ್ತಿ ಪೂಜಾರಿ ಸಂಜೀವಯ್ಯನೋ, ಸಂಪಂಗಿರಾಮಯ್ಯನೋ ಹೋಗುತ್ತಾರೆ. ಭಕ್ತರು ನಡಕೊಳ್ಳುವವರು ಯಾರೂ ಅದಕ್ಕಿದ್ದಂತೆ ನನಗೆ ತೋರಿಲ್ಲ. ಅತ್ತ ಹೋಗಬೇಕಾದರೆ ನಮ್ಮ ಮನೆಯ ಹಿಂದೆಯಿಂದಲೇ ಹೋಗಬೇಕು. ನಮ್ಮ ಮನೆಯವರು ಹಾಕುವ ತಂಗಳು ಕೂಳಿಗೆಂದು ಬರುವ ಊರಿನ ಬೀದಿ ನಾಯಿಗಳು ಅಲ್ಲೇ ನೆರಳಲ್ಲಿ ಮಲಗಿ ನಮ್ಮ ನಾಯಿಗಳೇ ಆಗಿಹೋಗಿ ಋಣ ತೀರಿಸಿಕೊಳ್ಳಲು ಹಾದಿಹೋಕರ ಮೇಲೆ ಜಬರ್ದಸ್ತುಮಾಡುವುದರಿಂದ ಹಿಂದೆ ಯಾರಾದರೂ ಓಡಾಡಿದರೆ ನಮಗೆ ಗೊತ್ತಾಗಿಬಿಡುತ್ತದೆ. ಹೀಗಿರುವುದರಿಂದ ಪಶ್ಚಿಮದ ಕಡೆಯ ಅರ್ಧ ಗೋಳವೇ ಜನ ಸಂಚಾರವಿಲ್ಲದೆ ನಿಗೂಢವಾಗಿರುತ್ತದೆ. ಇದನ್ನು ಬಿಟ್ಟರೆ ನರಜುಕುಂಟೆ ದುರ್ಗಮವೇ ಸರಿ.

ನಮ್ಮ ಊರಾದ ಮಲಿಯಪ್ಪನಹಳ್ಳಿಯ ಆಚೆಯಲ್ಲಿ ಪೂರ್ವೋತ್ತರ ದಿಕ್ಕಿನಲ್ಲಿ ನಾವಿದ್ದ ಮನೆ 1956ರಲ್ಲಿ ಕಟ್ಟಿ ಮುಗಿಸಿದ್ದು. ಹಾಗಂತ ಅದರ ಮುಂದೆ ಗಾರೆಯಲ್ಲಿ ಮಾಡಿದ ಉಬ್ಬು ಗುರುತು ಹೇಳುತ್ತದೆ. ಊರಿನಲ್ಲಿ ಚಿಕ್ಕದೊಂದು ಮನೆ ನಮಗೆ ಇತ್ತೆಂದೂ, ಅದು ಈಗ ಸಿದ್ದಪ್ಪನ ಗುಡಿ ಇರುವ ಜಾಗಕ್ಕೂ, ಸಲ್ಲಾಪುರಮ್ಮನ ದೇವಸ್ಥಾನ ಇರುವ ಜಾಗಕ್ಕೂ ನಡುವೆ ಜೊಣ್ಣಪ್ಪನು ಹುಲ್ಲುಮನೆ ಕಟ್ಟಿಕೊಂಡು ನನಗೆ ನೆನಪು ಹುಟ್ಟಿದ ದಿನದಿಂದಲೂ ಇರುವ ಕಡೆಯಲ್ಲಿ ಇತ್ತೆಂದೂ ನಾವು ಕೇಳಿ ಬಲ್ಲೆವು. ಆದರೆ ಊರಿಗೆ ಪ್ಲೇಗ್ ಜಾಡ್ಯ ಕಾಲಿಟ್ಟು ಇಕ್ಕಟ್ಟು ಇಕ್ಕಟ್ಟು ಮನೆಗಳಲ್ಲಿ ತುಂಬಿಕೊಂಡಿದ್ದ ಜನಗಳು ಇಲಿ ಬಿತ್ತೋ ಜನ ಸತ್ತೋ ಅಂತೂ ದಿಕ್ಕಾಪಾಲಾಗಿ ಹೋಗಿದ್ದರೆಂದೂ, ಆರು ತಿಂಗಳೇ ಕಳೆದ ಮೇಲೆ ಊರಿಗೆ ಮರಳಿದರೆಂದೂ, ತಮಗೆ ಮಾತ್ರ ಆ ಇಕ್ಕಟ್ಟು ಹೊಂದದೆ ಎಲ್ಲಿ ಗುಡಿಸಲು ಹಾಕಿಕೊಂಡಿದ್ದೆವೋ ಅಲ್ಲಿಯೇ ನೆಲೆಸಲು ನಮ್ಮ ತಾತ ನಿರ್ಧಾರ ಮಾಡಿದರೆಂದೂ, ಆಮೇಲೆ ಊರ ಮನೆಯನ್ನು ಜೊಣ್ಣಪ್ಪನಿಗೆ ಮಾರಿ ಹೊಲದಲ್ಲಿ ಮನೆ ಕಟ್ಟಿದ್ದೆಂದೂ ಅಜ್ಜಿ ಅವರಿವರಿಗೆ ಹೇಳುತ್ತಿದ್ದ ವೃತ್ತಾಂತಗಳನ್ನು ಆಧರಿಸಿ ನಾವು ವಲಸೆಯ ಚಿತ್ರಗಳನ್ನು ಕಟ್ಟಿಕೊಂಡಿದ್ದೆವು. ಆ ಪಿಳೇಕು ಮಾರೆಮ್ಮನು ಯಾರ‍್ಯಾರಿಗೆ ವಕ್ಕರಿಸಿದ್ದಳೆಂದು ಯಾರ‍್ಯಾರು ಬದುಕಿ ಯಾರ‍್ಯಾರು ಹೋದರೆಂದೂ ಹೇಳಿದ್ದಳು.

ಊರಾಚೆಗೆ ಮನೆ ಕಟ್ಟಿ ದೆವ್ವಗಳಂಥ ಮರಗಳನ್ನು ಬೆಳೆಸಿ ಕತ್ತಲ ಗವಿಯಂತಹ ಇರುಳುಗಳು ಹುಟ್ಟಿಕೊಂಡು ನಮ್ಮ ತಾಯಂದಿರು ನಮ್ಮನ್ನು ಅಂಕೆಯಲ್ಲಿಡಲು ಸೃಷ್ಟಿಸಿದ ಇರುಳ ಗುಮ್ಮಗಳು ಮರಗಳ ಗವಗತ್ತಲೆಯಲ್ಲಿ ನೆಲಸಿ ನಮ್ಮನ್ನು ಹೆದರಿಸಿ ಹೆದರಿಸಿ ಕೊಲ್ಲುತ್ತಿದ್ದುದರಿಂದ ನಾವು ಬೇರೆ ಬೇರೆ ಕಾರಣಗಳಿಗಾಗಿ ಊರಿನಲ್ಲಿದ್ದ ಇಕ್ಕಟ್ಟು ಮನೆಗಳನ್ನು ಪ್ರೀತಿಸಿ ಅಲ್ಲಿ ವಾಸಿಸುವ ಜನರನ್ನು ಅವರ ನೆಮ್ಮದಿಗಾಗಿ ದ್ವೇಷಿಸುತ್ತಿದ್ದೆವು. ಇರುಳ ನಿಗೂಢಗಳು ಮಾವಿನ ಮರದಲ್ಲಿ, ಹಲಸಿನ ಮರದಲ್ಲಿ, ಕಥೆಗಳನ್ನು ಹೇಳುವವರ ಬಾಯಿಯ ಭೂತಾವಾಸ ಹುಣಿಸೆ ಮರದಲ್ಲಿ ಸದಾ ಅಡಗಿರುತ್ತಿದ್ದವು. ಅವಕ್ಕೆ ಹಲವು ಬಾರಿ ನಿರೂಪಕರ ಸಾಮರ್ಥ್ಯಕ್ಕೆ ಅನುಸಾರವಾಗಿ ಸೌಮ್ಯ-ಉಗ್ರ ರೂಪಗಳು ಪ್ರಾಪ್ತವಾಗುತ್ತಿದ್ದವು. ಅವುಗಳ ಜೊತೆಗೆ ಹರಿದು ಬರುವ ನಾನಾ ನಮೂನೆಯ ಹಾವುಗಳು ಬೇರೆ. ಜರಿ, ಗೊದ್ದ, ಕಟ್ಟಿರುವೆ, ಚೇಳು, ಮಂಡರಗಪ್ಪೆ, ತಿಗಣೆ ಸೊಳ್ಳೆಗಳು ಬೇರೆ.

ಇಂಥ ಜಾಗವನ್ನು ಅಪರಿಚಿತರು ಹುಡುಕಿಕೊಂಡು ಬಂದು ನೇಣು ಹಾಕಿಕೊಂಡರೆಂದರೆ ನಂಬುವುದು ನನಗಂತೂ ಕಷ್ಟವಾಯಿತು. ಎಲ್ಲಿಯಾದರೂ ಕೊಂದುಹಾಕಿ ಇಲ್ಲಿ ತಂದು ನೇತುಹಾಕಿದ್ದಾರೋ? ಆ ಸಂಶಯ ಬಹಳ ಹೊತ್ತು ನಿಲ್ಲಲಿಲ್ಲ. ಏಕೆಂದರೆ ನಮ್ಮ ಮನೆಯ ಹಿಂದಿನ ದಾರಿಯಲ್ಲಿ ಅಲ್ಲದೆ ಬೇರೆ ಯಾವ ದಾರಿಯಲ್ಲೂ ಆ ಹೆಣಗಳನ್ನು ಅಲ್ಲಿಗೆ ಸಾಗಿಸಲು ಸಾಧ್ಯವಿಲ್ಲ. ನಮ್ಮ ಮನೆ ಹಿಂದಿನ ಅಡವಿಯ ದಾರಿಗೆ ನಡು ಊರೊಳಗಿಂದಲೆ ಪ್ರವೇಶಿಸಬೇಕು. ಆದರೆ ಆ ದಾರಿಯಲ್ಲಿ ವರ್ಷಕ್ಕೊಮ್ಮೆ ಸಂಕ್ರಾಂತಿ ಸಮಯದಲ್ಲಿ ಕೊರಚನೂರು ಪಕ್ಕ ಉಮ್ಮಲಿನ ಮೂಲಕ ತೊರ್ನಹಳ್ಳಿಯ ಸಫಲಮ್ಮನ ಜಾತ್ರೆಗೆ ರಾಸುಗಳನ್ನು ಹೊಡೆಯುವವರು ಹೋಗುವುದು, ಊರ ಹೆಣ್ಣುಗಳು ತಂಬಿಟ್ಟು ತೆಂಗಿನಕಾಯಿಗಳನ್ನು ಒಯ್ಯುವುದು ಮಾಡುತ್ತಿದ್ದರು. ಏನಾದರೂ ತುಸು ಮುಂದೆ ಅದು ತೋಪುಗಳ ನಡುವಣ ಕಾಲುದಾರಿ ಮಾತ್ರವೇ. ಇನ್ನು ಒಬ್ಬ ವ್ಯಕ್ತಿ ಆ ದಾರಿಯಲ್ಲಿ ಹಗಲಿರುಳೆನ್ನದೆ ನಡೆದಾಡುತ್ತಿದ್ದವನೆಂದರೆ ಕಲ್ಲು ಮುನಿಯಪ್ಪನು ಮಾತ್ರವೇ. ಆದರೆ ಅವನು ಕುಡಿದಿರದ ಸಮಯ ಊರದೇವರು ಸಲ್ಲಾಪುರಮ್ಮನಿಗೂ ತಿಳಿದಿರಲಿಲ್ಲ.

ಆದರೂ ಅವನು ಹಿಂದಿನ ದಿನದ ಇರುಳು ಕಲ್ಲು ಕರಗುವ ಸಮಯದಲ್ಲಿ ಕೊರಚನೂರಿಂದ ಡರಾಮು ಹಾಕಿಕೊಂಡು, ನರಜುಕಲ್ಲು ಕುಂಟೆಗಳನ್ನು ಹಾಯ್ದೇ ಬಂದಿದ್ದರಿಂದಲೂ ಅವನು ನರಜುಕುಂಟೆಯ ಬಳಿ ತನ್ನ ತನುಬಾಧೆಗಳನ್ನು ಮುಗಿಸಿಕೊಂಡು, ಅಲ್ಲಿ ದಡದ ಮೇಲೆ ಕುಳಿತು ಇನ್ನೊಂದು ಡರಾಂ ಏರಿಸಿ ಉಳಿದಿದ್ದನ್ನು ನಿಕ್ಕರು ಜೇಬಿನಲ್ಲಿಟ್ಟು ಬರುತ್ತಲಿದ್ದದ್ದರಿಂದಲೂ ಅವನೇನಾದರೂ ಇದನ್ನು ಗಮನಿಸಿದ್ದಾನೆಂಬ ಗುಮಾನಿ ಊರಲ್ಲಿ ಕೆಲವರಿಗಾದರೂ ಇತ್ತು.

ಗುಮಾನಿಗೆ ತಕ್ಕಂತೆ ಕಲ್ಲುಮುನೆಪ್ಪನು ಅಂದಿನ ಇರುಳು ಕೊರಚನೂರಿನಿಂದ ಊರಿಗೆ ಮರಳಿದಾಗ ಸಮಯ ಹನ್ನೊಂದೂವರೆ ಮೀರಿತ್ತು. ಊರಾಚೆಯ ನಮ್ಮ ಮನೆಯ ಹತ್ತಿರ ಅವನ ಹಾಡು ಬಂದಾಗ ಮಾಲತಿಗೆ ಎಚ್ಚರಾಗಿ ಕಣ್ಣು ಕಿರಿದು ಮಾಡಿ ತನ್ನ ತಲೆದಿಂಬಿನ ಅಡಿಯಲ್ಲಿನ ಪ್ರಾಚೀನ ಫೇವರ್‍ಲೂಬಾ ರಿಸ್ಟ್‌ವಾಚಿನಲ್ಲಿ ಮುಳ್ಳುಗಳ ಕಂಡು ಅವನು ನಮ್ಮ ಎಚ್ಚರದ ಯಾವ ಸುಳಿವನ್ನೂ ಹಿಡಿಯಬಾರದೆಂಬಂತೆ ಮಲಗಿದ್ದಾಗ ಅವನು ಮನೆಯ ಹಿಂದೆಯೇ ಹೊರಟುಹೋಗಿದ್ದ. ಮಾರನೆಯ ದಿನವೇ ಇದು ಗುಲ್ಲಾಗಿ, ನಿಜವಾಗಿ, ಹೃದಯವಿದ್ರಾವಕವಾಗಿ, ಭಯಾನಕವಾಗಿ, ಊರಿಗೆ ಮೊದಲಾಗಿ, ತಲೆನೋವಿನದಾಗಿ, ಏನೇನೋ ಆಗಿ ಪರಿಣಮಿಸಿತ್ತು. ಮಾಲತಿ ಗುಟ್ಟಾಗಿ ಗೋಮಟೇಶನ ಬಳಿ ಮುನೆಪ್ಪನ ವಿಚಾರ ಹೇಳಿದ್ದಳು. ಅವನೂ ಗುಟ್ಟಾಗಿ ಮುನೆಪ್ಪನನ್ನು ವಿಚಾರಿಸಲಾಗಿ ತಾನು ನಿನ್ನೆ ಕೊರಚನೂರಿಗೆ ಹೋಗಿಯೇ ಇರಲಿಲ್ಲವೆಂದು ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆದರೆ ಇಲ್ಲ ಮಾಮಾ, ನಿನ್ನೆ ರಾತ್ರಿ ನೀನು ಹನ್ನೊಂದೂವರೆ ಆದ ಮೇಲೆ ಊರಿಗೆ ಬಂದೆಯೆಂದು ನನಗೆ ಗೊತ್ತು ಎಂದು ದಬಾಯಿಸಲಾಗಿ ಯಾರಿಗೂ ಹೇಳಬಾರದೆಂಬ ಅಭಯ ಪಡೆದು, ನಿನ್ನೆ ರಾತ್ರಿ ನಡೆದ ಒಂದು ವಿದ್ಯಮಾನವನ್ನು ಹೇಳಿದ್ದ.

ನಿನ್ನೆ ರಾತ್ರಿ ಅವನು ನರಜುಕಲ್ಲು ಕುಂಟೆಗಳ ಬಳಿ ಬರುವ ವೇಳೆಗೆ ಒಂದು ಟೈರು ಬಂಡಿಯಲ್ಲಿ ಇಬ್ಬರನ್ನು ಮಲಗಿಸಿಕೊಂಡು ಇಬ್ಬರು ಬರುತ್ತಿದ್ದವರಲ್ಲಿ ಒಬ್ಬರು ಇವನನ್ನು ಕಂಡು ‘ಸ್ವಾಮೇ ಈ ದಾವ ಅಬ್ಬೇಪಲ್ಲಿಕಿ ಪೋತುಂದಾ’ ಅಂತ ಕೇಳಿದರಂತೆ. ಅದಕ್ಕೆ ಇವನು ‘ಲೇ ಯಾರಪ್ಪ ನೀವು’ ಅಂತ ಕೇಳಿದನಂತೆ. ಅವರು ತಮ್ಮದು ಚಿಕ್ಕಶಿವಾರವೆಂದೂ, ತನ್ನ ಹೆಂಡತಿ, ಇವಳ ಅಕ್ಕ ಇಬ್ಬರೂ ಜಡೇ ಮುನೀಶ್ವರನ ಗಾಳಿಗೆ ಸಿಕ್ಕಿ, ಇಬ್ಬರಿಗೂ ಜ್ಞಾನ ಕಳೆದಿರುವುದಾಗಿಯೂ, ಅಬ್ಬೇನಹಳ್ಳಿಯಲ್ಲಿ ಇದ್ದಾರೆಂಬ ಕೇರಳದಲ್ಲಿ ಸಾಧನೆ ಮಾಡಿದ ಭಯಂಕರ ಮಂತ್ರವಾದಿಯಾದ ಸುಬ್ಬಣ್ಣನವರು ಇಂಥದನ್ನು ಮೇಲು ಮಾಡುವುದರಿಂದ ಅವರಲ್ಲಿಗೆ ಹೋಗುತ್ತಿರುವುದಾಗಿಯೂ, ಯಾರೋ ‘ಈ ದಾವಲೋ ಸೀದಾ ಪೋತೆ ಅದೇ ಅಬ್ಬೇಪಲ್ಲಿ’ ಅಂತ ಹೇಳಿದ್ದರಿಂದ ಈ ದಾರಿ ಹಿಡಿದು ಬಂದು ಈಗ ಸಂಶಯ ಬಂದು ತನ್ನನ್ನು ಕೇಳಿದ್ದಾಗಿಯೂ ಆ ವೃತ್ತಾಂತವಿತ್ತು. ಗೋಮಟೇಶನು ಮಾಮಾ ನೀನು ಅದಕೇನಂದೆ ಅಂತ ಕೇಳಿದ್ದನು. ಅದಕ್ಕೆ ಮುನೆಪ್ಪನು ವಾಪಸು ಕಣಿವೇನಳ್ಳಿಗೆ ಹೋಗಿ ಸುಣ್ಣಕಲ್‍ಬಾರ್ಲಿ ಮೂಲಕ ಭಾವನಹಳ್ಳಿ ರೋಡು ಸೇರಿ ಎಡಕ್ಕೆ ತಿರುಗಿ ಎರಡು ಮೈಲಿ ಹೋದರೆ ಅಬ್ಬೇನಹಳ್ಳಿ ಸಿಗುವುದೆಂದು, ಅಲ್ಲಿ ಸುಬ್ಬಣ್ಣೋರು ಹೋಟೆಲು, ಶಾಪು ಎಲ್ಲಾ ಮಡಗಿರುವರೆಂದೂ ಹೇಳಿದ್ದಾಗಿ ಹೇಳಿದ್ದನು.

ಗಾಡಿಯೊಡನೆ ಇದ್ದವ ಏನೋ ನೆನಪಿಸಿಕೊಂಡಂತೆ ‘ಅಣ್ಣಾ ಜೀವಗಳಕ ನೀರು ಇಲ್ಲೇ ಎಲ್ಲಾದರೂ ಸಿಕ್ಕುತ್ತದಾ’ ಅಂದು ಕೇಳಿದ್ದ. ಮುನೆಪ್ಪನು ‘ಈ ಕುಂಟೆಗಳಾಗ ಸೊಗಸಾದ ನೀರವೆ, ನೀವೂ ಕುಡೀರಿ ಜೀವಗಳಕೂ ಕುಡಿಸಿರಿ’ ಎಂದು ಹೇಳಿದ್ದನ್ನೂ ಅವರು ದನಗಳನ್ನು ಬಿಚ್ಚಿ ಕುಂಟೆ ಕಡೆ ಹೋದದ್ದನ್ನೂ ಹೇಳಿದ್ದನು.

ಮಾರನೇ ದಿನ ಹೆಣಗಳ ವಿಲೇವಾರಿಯಾದ ಮೇಲೆ ಗೋಮಟೇಶನಿಗೆ ಸಂಶಯಗಳು ಕಾಡಲು ಶುರುವಾದವು. ಮೊದಲನೆಯದೆಂದರೆ ಟೈರುಗಾಡಿಯ ಚಕ್ರದ ಗುರುತುಗಳು ಎಲ್ಲಾದರೂ ಕಂಡಾವೇನೆಂಬುದು. ಎರಡನೆಯದು ಚಿಕ್ಕಶಿವಾರಕ್ಕೆ ಯಾರನ್ನಾದರೂ ಕಳಿಸಿ ಗುಟ್ಟಿನ ಪತ್ತೇದಾರಿಕೆ ನಡೆಸುವುದು, ಮೂರು ಸುತ್ತಲಿನ ಊರುಗಳಲ್ಲಿ ಈ ಸುದ್ದಿ ಹಬ್ಬಿದ್ದರಿಂದ ಪೊಲೀಸರಿಗೆ ಮಿಸ್ಸಿಂಗ್ ಕೇಸುಗಳು ಯಾವುದಾರ ಬಂದಿದ್ದಾವಾ ಎಂಬುದನ್ನು ಹಾಗೇ ಸುಮ್ಮನೆ ವಿಚಾರಿಸಬೇಕೆಂಬುದು. ಮೂರನೇಯದನ್ನು ಹುಷಾರಾಗಿ ಮಾಡಬೇಕಿತ್ತು, ಇಲ್ಲವಾದರೆ ಪೊಲೀಸಿನವರು ಆ ನನಮಗನ ಮೇಲೆ ಒಂದು ಕಣ್ಣಿಡಬೇಕು ಅಂದರೂ ಅಂದರೆ. ಅದರಿಂದ ವಾರ ಬಿಟ್ಟು ಪಂಚಾಯಿತಿ ಸದಸ್ಯನಾದ ತನ್ನ ಸೋದರಸಂಬಂಧಿ ವೆಂಕಟನಾರಾಯಣನ ಬಳಿ ಏನನಾ ಗೊತ್ತಾಯಿತೇನಣಾ? ಪೋಲೀಸೋರೆನಾದರೂ ಕೇಳಬೇಕಿತ್ತು ಅಂತ ಮುಗುಮ್ಮಾಗಿ ಕೇಳಿದ್ದ. ಅವನೂ ಪ್ರಾಮಾಣಿಕವಾಗಿ ವಿಚಾರಿಸಿದ್ದ.

ಈ ನಡುವೆ ಮಾರನೇ ದಿನ ಹಾದಿ ಹಿಡಿದು ಹೋದ ಗೋಮಟೇಶನಿಗೂ, ಸೈಕಲ್ ಹತ್ತಿ ಚಿಕ್ಕಶಿವಾರಕ್ಕೆ ಹೋಗಿದ್ದ ಅವನ ತಮ್ಮನಿಗೂ ಎಂಥ ವಿಷಯಪ್ರಾಪ್ತಿಯೂ ಆಗಲಿಲ್ಲ. ಚಿಕ್ಕಶಿವಾರದಲ್ಲಿ ತೆಲುಗು ಮಾತಾಡುವವರೇ ಇಲ್ಲವೆಂಬ ವಿಚಾರವೂ ಗೋಮಟೇಶನ ದೂತನಿಗೆ ಸಿಕ್ಕಿತ್ತು. ಇತ್ತ ಜೋಡಿನೇಣಿನ ಸ್ಪಾಟಿಗೆ ಕುತೂಹಲಿ ಜನ ಓಡಾಡಿ ಎತ್ತಿನಬಂಡಿಯ ಬೋಳುಗಾಲಿಯ ಮಾರ್ಕುಗಳು ಅಳಸಿಹೋಗಿದ್ದವು. ಅತ್ತ ಚಿಕ್ಕಶಿವಾರದಲ್ಲಿ ಗ್ರಾಮದೇವತೆ ಗಂಗಮ್ಮನ ದಯೆಯಿಂದ ಎಲ್ಲರೂ ಸುಖವಾಗಿದ್ದರು. ಅಂದರೆ ಕಲ್ಲುಮುನೆಪ್ಪನು ಪುಂಗುಬಿಟ್ಟನೇ? ಇಲ್ಲ. ಅವನು ಸುಳ್ಳುಹೇಳುವವನಂತೂ ಆಗಿರಲಿಲ್ಲ.

ಕೊನೆಗೆ ಕೇಸು ಪತ್ತೆಯಾಗದ ಕೇಸು ಅಂತ ನಿರ್ಧರಿಸಲ್ಪಟ್ಟಿತು.

***

ಇದರಿಂದ ತೊಂದರೆಯಾಗಿದ್ದು ಮಾಲತಿಗೆ. ಅವಳ ಗಂಡ ಯಾರಿಗೂ ತಿಳಿಯದೆ ಕೆಲಸಕ್ಕೆ ವಿಆರ್‍ಎಸ್ ಕೊಟ್ಟು ಬಂದ ಹಣ ತಿಂದುಕೊಂಡು ಮನೆಗೇ ಬರದವನಾಗಿದ್ದ. ಪ್ರೇಮವಿವಾಹವಾದ ಅವಳಿಗೆ ನಾವಿದ್ದ ಮನೆಯೇ ಆಶ್ರಯವಾಗಿತ್ತು. ಇಬ್ಬರು ಸಣ್ಣ ಮಕ್ಕಳು. ಊರಾಚಿನ ಮನೆಗೆ ಕರೆಂಟು ಇರಲಿಲ್ಲ. ಸುತ್ತ ಗವಗತ್ತಲು. ತಲೆ ಒಡೆದರೂ ಕೇಳುವವರಿಲ್ಲ. ಬದುಕು ಆ ಪಾಟಿ ಅಂಜಿಸಿಬಿಟ್ಟ ಬಳಿಕ ಆ ಮನೆ ತೊರೆಯಬೇಕೆಂಬ ನಿರ್ಧಾರವಾಯಿತು. ಹೀಗಾಗಿ ಮೂರೂ ಜನ ಮನೆಬಿಟ್ಟು ಎಂಪಿ ಮುನೆಪ್ಪನ ವಪ್ಪಾರದಲ್ಲಿ ಹತ್ತು ರೂಪಾಯಿ ಬಾಡಿಗೆಗೆ ಸಂಸಾರ ಹೂಡಬೇಕಾಗಿ ಬಂತು. ಅವಳು ಅಂಗನವಾಡಿ ಕಾರ್ಯಕರ್ತೆಯಾಗಿ ಬರುವ ಮೂರುಕಾಸಿನ ಗೌರವಧನದಲ್ಲಿ ಗೌರವವಾಗಿಯೇ ಜೀವನ ಸಾಗಿಸುತ್ತ ಇರುವಾಗಲೇ ಅವಳ ಗಂಡ ರೋಡ್ ಆಕ್ಸಿಡೆಂಟಿನಲ್ಲಿ ತೀರಿಕೊಂಡುಬಿಟ್ಟ. ಆಗಲೇ, ನಮಗೆಲ್ಲ ಅವನು ಸತ್ತ ಮೇಲೆಯೇ ನಮಗೆ ಅವನು ಕೆಲಸಕ್ಕೆ ವಿಆರ್‍ಎಸ್ ಕೊಟ್ಟು ಬಂದ ದುಡ್ಡ ಉಡಾಯಿಸಿ ಆ ಸಾವು ಸತ್ತನೆಂದು ತಿಳಿದುಬಂದಿದ್ದು. ಆ ಮೇಲೆ ಆ ಊರಾಚಿನ ಮನೆಯೂ ಅದೇ ವರ್ಷ ಮುಂಗಾರು ಹಿಂಗಾರುಗಳಲ್ಲಿ ಅಪರೂಪಕ್ಕೆ ಸುರಿದ ಮಳೆಯಲ್ಲಿ ಬಿದ್ದೇಹೋಯಿತು. ಯಾರೋ ಅಲ್ಲಿನ ಉಪಯೋಗಕ್ಕೆ ಬರುವ ವಸ್ತುಗಳನ್ನು ರಾತ್ರೋ ರಾತ್ರಿ ಸಾಗಿಸಿಕೊಂಡು ಹೋಗಿಬಿಟ್ಟರು.

ಇದೆಲ್ಲ ಆಗಿ ವರ್ಷಗಳೇ ಆಗಿಹೋಗಿವೆ. ಮಾಲತಿ ಗಂಡನ ಆಕಸ್ಮಿಕದ ಪರಿಹಾರ, ಫ್ಯಾಮಿಲಿ ಪೆನ್ಶನ್, ಬ್ಯಾಂಕಿನಲ್ಲಿ ಪರ್ಸನಲ್ ಸಾಲ ಹೀಗೆ ಒದ್ದಾಡಿ ಮನೆಕಟ್ಟಿಕೊಂಡಿದ್ದಳು.

***

ಮೊನ್ನೆ ಹೀಗೇ ಎಷ್ಟೋ ಕಾಲದ ಬಳಿಕ ಊರಿಗೆ ಹೋದಾಗ ನರಜುಕುಂಟೆಗಳ ಕಡೆಗೆ ಹೋಗಿಬರುವ ಮನಸ್ಸಾಯಿತು. ಅತ್ತ ಹೋದೆ. ಕುಂಟೆಗಳು ಹಾಗೇ ಇದ್ದವು. ನೀರೂ ಇತ್ತು. ನೇರಳೆ ಮರಗಳೂ ಇದ್ದವು. ಹೊಸದಾಗಿ ಬಂದಿದ್ದೆಂದರೆ ಒಂದು ನಾಲ್ಕು ಕಲ್ಲಿನ ಬಣ್ಣದ ಹನುಮಂತನ ಗುಡಿ. ಅದಕ್ಕೆ ಪಾದದ ಬಳಿ ಇದ್ದ ಮಣ್ಣಿನ ಹಣತೆ ಮತ್ತು ಸಾಮ್ರಾಣಿ ಕಡ್ಡಿಯ ಕೆಳತುದಿಗಳು, ಜೊತೆಗೆ ಬಾಡಿದ ಹೂ.

ಮನೆಗೆ ಬಂದು ಮಾಲತಿಯನ್ನು ದೇವಸ್ಥಾನದ ಬಗ್ಗೆ ವಿಚಾರಿಸಿದೆ.

ಅದನ್ನು ಕಲ್ಲುಮುನೆಪ್ಪನೇ ಕಟ್ಟಿಸಿದ್ದ. ಅದನ್ನು ಮುತ್ತರಾಯನ ಪೂಜೆ ಮಾಡುವವರ ಕೈಲೇ ಪ್ರಾಣಪ್ರತಿಷ್ಠೆ ಮಾಡಿಸಿದ್ದ. ಅವನು ದೇವರ ದಯೆ ಬೇಡಲು ಪೂಜಾರಿಗೆ ಕೊಟ್ಟ ಬೇಡಿಕೆಗಳ ಪಟ್ಟಿ ಹೀಗಿತ್ತು:

ಸ್ವಾಮೀ ಪವನಪುತ್ರ ಮಹಾನುಭಾವ. ಈ ಮುಂದೆ ಇಲ್ಲಿ ಬರುವವರಿಗೆ ನೇರಳೇಮರ ನೆರಳನ್ನು, ಹಣ್ಣನ್ನು ಮಾತ್ರ ಕೊಡಲಿ. ಕೆಟ್ಟ ಮನಸ್ಸಿನಿಂದ ಇಲ್ಲಿಗೆ ಬರುವವರಿಗೆ ಮರವೇ ಕಾಣದಿರಲಿ. ಕುಂಟೆಯ ನೀರೂ ಅಂಥವರಿಗೆ ಇಲ್ಲವಾಗಲಿ. ಈ ದಾರಿಯೇ ಅವರಿಗೆ ಮುಚ್ಚಿಹೋಗಲಿ.

***

ಕೊನೆಗೆ ಕೇಸು ಏನಾಯಿತು? ಈ ಕುತೂಹಲ ತಣಿಯುವಂತೆಯೇ ಇರಲಿಲ್ಲ.

ನೇಣುಹಾಕಿದವರು ಸಿಕ್ಕಿಬಿದ್ದಿದ್ದರು. ಅವರು ವೆಂಕಟನಬೋವಿಯ ಮಗ ಮತ್ತೆ ಅವನ ದೊಡ್ಡಕ್ಕನ ಮಗಳು. ಸತ್ತವರು ಅವನ ಹೆಂಡತಿ ಮತ್ತೆ ಅವಳ ತಂಗಿ. ಇವರೆಲ್ಲ ಒಟ್ಟಾಗಿ ಬೆಂಗಳೂರಿನ ಕಟ್ಟಡ ನಿರ್ಮಾಣಕ್ಕೆ ವರ್ಷಗಟ್ಟಲೇ ಹೋಗುವವರು. ಅವರಿಬ್ಬರೂ ಒಂದಾಗಿದ್ದರು. ಅವನ ಮಾವನಿಗೆ ಒಂದಿಷ್ಟು ಆಸ್ತಿಯಿತ್ತು. ಸ್ವಲ್ಪ ಮೇಕೆ ಸಾಕಿ ಬಂದ ಹಣವೂ ಬ್ಯಾಂಕಿನಲ್ಲಿ ಇತ್ತು. ಇದನ್ನು ಲಪಟಾಯಿಸುವ ಯೋಜನೆ ಹಾಕಿ ಊರಿಗೆ ಬರುವ ನಾಟಕವಾಡಿ ಅವರನ್ನು ಯಾಮಾರಿಸಿ ಕೊಂದು ನೇತುಹಾಕಿ ಹೋಗಿದ್ದರು. ಬಂಡಿ ಎತ್ತುಗಳ ಬಗ್ಗೆ ಬಾಯಿಬಿಡದ ಅವರ ವಿರುದ್ಧ ಸಾಕ್ಷ್ಯವಿಲ್ಲದೆ ಕೇಸು ಖುಲಾಸೆ ಆಯಿತು.

ಈಗ ಅವರಿಬ್ಬರೂ ಹಾಯಾಗಿ ಸಂಸಾರ ಮಾಡಿಕೊಂಡಿರಬಹುದೇ?

ಇಲ್ಲವಂತೆ. ಅವನು ಕೆಲಸ ಮಾಡುವ ವೇಳೆ ಕರೆಂಟು ಹೊಡೆದು ಬಲಗೈ ಬಿದ್ದುಹೋಯಿತಂತೆ. ಅವಳು ಬೇರೆ ಒಬ್ಬನ ಜೊತೆ ಓಡಿಹೋದಳಂತೆ.

ಮಾಲತಿ ಕತೆ ಹೇಳಿ ಊಟಕ್ಕೇಳು ಅಂದಳು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.