ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮು ರೆಡ್ಡಿ ಬರೆದ ಕಥೆ: ಬದುಕು ಮಾಯೆಯ ಆಟ

Last Updated 12 ಮಾರ್ಚ್ 2022, 19:30 IST
ಅಕ್ಷರ ಗಾತ್ರ

‘ಈ ದುಗ್ಗಾನಿ ಹೆಂಗ್ಸೂರ್‍ನ ದುಡಿಯಾಕ ಕಳ್ಸಬಾರ್‍ದು ಅನ್ನೂದ ಇದಕನೋಡ. ಸೊಟ್ಟ ನೂರ-ನೂರಾಯಿಪ್ಪತ್ತ್ರೂಪಾಯ್ಕ ಸಂಸಾರ ಮೂರಾಬಟ್ಟಿ ಆಗು ಹ್ವಾರೆವು ಇದ. ಊರ ಮಂದಿ ಉಂಡ ಮಲಗೂ ಹೊತ್ತಾದ್ರೂ ಮನಿಗೆ ಬರ‍್ಲಾರದಂತಾ ಕೆಲಸಾ ಏನಿದ್ದೀತು ಈ ಲೌಡಿದೂ...’ ತನ್ನ ಮನೆಯ ಖೋಲಿಯಲ್ಲಿ ಮಂಚದ ಮೇಲೆ ಮಲಗಿದ್ದ ಲೇಶಪ್ಪ ಹೆಂಡತಿ ಚಿನ್ನವ್ವಳಿಗೆ ಹೀಗನ್ನುತ್ತಾ ಎದ್ದು ಗೋಡೆಗೆ ಬೆನ್ನು ಆನಿಸಿ ಕುಳಿತ.

ಖೋಲಿ ಭಾಗಶಃ ಕತ್ತಲಿನಿಂದ ತುಂಬಿತ್ತು. ಅವನ ಕೈ ಅಳತೆಯ ದೂರದಲ್ಲಿ ಕುರ್ಚಿಯೊಂದರ ಮೇಲೆ ಇಡಲಾಗಿದ್ದ ಚಿಮುಣಿ ಅಲ್ಲಿನ ಕತ್ತಲು ನುಂಗಲು ಹೆಣಗುತ್ತಿದ್ದದ್ದನ್ನ ಕಂಡು ಅದೆಂತದೋ ಅಸಹನೆ ಹುಟ್ಟಿಸಿಕೊಂಡು ಆ ಚಿಮುಣಿಯ ಬುಡ್ಡಿ ಏರಿಸಿ ಸಾಕಷ್ಟು ಬೆಳಕು ಮಾಡಿಕೊಂಡ. ಮಂಚದ ಮೇಲೆ ಹಾಸಿದ್ದ ಹಾಸಿಗೆ ಮಾಸಿದಂತಾಗಿತ್ತು. ಅದರ ಸುತ್ತಲೂ ಎಲ್ಲೆಂದರಲ್ಲಿ ಸುಸ್ಥಿತಿಯಲ್ಲಿರದ ಸಣ್ಣ ಸಣ್ಣ ಐಯಂಟ್‌ಮೆಂಟ್‌ನ ಟ್ಯೂಬು, ಔಷಧಿ ಬಾಟಲಿ, ಗುಳಿಗೆಯ ಚೀಟಿ-ಚಿಪ್ಪಾಟಿ, ಸೇದಿ ಕಿರಿದಾಗಿಸಿದ ಬೀಡಿ ತುಂಡು, ನೀರಿನ ಚರಗಿ, ಲೋಟ, ಉಂಡು ಕೈತೊಳೆದುಕೊಂಡ ತಾಟು, ಆ ತಾಟಿನಲ್ಲಿ ಉಳಿದುಕೊಂಡ ಮುಸುರಿ ತಿನ್ನಲು ಜುಯ್ಯೆಂದು ಹಾರುತ್ತಿದ್ದ ನೊಣಗಳ ಹಿಂಡು- ಇದೆಲ್ಲಾ ಗಲೀಜು ಕಂಡು ಮನಸ್ಸಿಗೆ ಪಿಚ್ಚೆನಿಸಿ ಚಿಟ್ಟನೇ ಚೀರಬೇಕೆನಿಸಿತು ಅವನಿಗೆ. ಆದರೆ ಚೀರಲು ಮನಸ್ಸು ಮಾಡಲಿಲ್ಲ. ಹೆಂಡತಿ ಮೊದಲಿನಂತಿದ್ದರೆ ಈ ಖೋಲಿ ನಿಜಕ್ಕೂ ಹೀಗಿರುತ್ತಿರಲಿಲ್ಲ ಅಂದುಕೊಂಡ.

ಕ್ಷಣ ಕ್ಷಣಕ್ಕೂ ಹೆಂಡತಿಯ ಮೇಲಿನ ಸಂಶಯದ ದೆಸೆಯಿಂದ ಭುಗಿಲೇಳುತ್ತಿದ್ದ ಕ್ರೋಧವನ್ನ ತಹಬಂದಿಗೆ ತಂದುಕೊಳ್ಳಲು ಏನಾದರೂ ಮಾಡಬೇಕೆನಿಸಿ ತನ್ನ ತಲೆದಿಂಬಿನ ಕೆಳಗಿರುವ ಬೀಡಿಕಟ್ಟಿನಿಂದ ಒಂದು ಬೀಡಿ ಹಿರಿದ. ಅದನ್ನ ಅಂಗೈಗಳ ಮಧ್ಯೆ ಇಟ್ಟು ತನ್ನ ಹದಕ್ಕೆ ಒಗ್ಗುವಂತೆ ನಾಜೂಕಾಗಿ ಉಜ್ಜಿ ಚಿಮುಣಿಯ ಬೆಂಕಿಯಿಂದ ಅದರ ಮೂಗು ಸುಟ್ಟು ಬಾಯಲ್ಲಿಟ್ಟುಕೊಂಡು ಜುರಿ ಎಳೆಯತೊಡಗಿದ. ಬೀಡಿಗೆ ಹೊತ್ತಿಕೊಂಡಿದ್ದ ಬೆಂಕಿ ಆತನ ಬೆರಳುಗಳಿಗೆ ತಾಗೊವಷ್ಟು ಕಿರಿದಾಗೋವರೆಗೂ ಬೀಡಿ ಸೇದುತ್ತಾ, ಗೋಣು ಮೇಲೆತ್ತಿ ವಿಧವಿಧವಾಗಿ ಹೊಗೆಬಿಟ್ಟು ಕೊಂಚ ನಿರಾಳನಾದಂತೆ ಪಲ್ಲವಿಸಿದ. ಮರುಕ್ಷಣವೇ ತಾನು ಬಲಗಾಲು ಊನು ಮಾಡಿಕೊಂಡು ಹಗಲಿರುಳಿನ ವ್ಯಸನವಿಲ್ಲದೇ ಕುಳಿತೋ, ಮಲಗಿಯೋ ಟೈಮು ದೂಡುತ್ತಿರುವಾಗ ಯಾವುದೋ ಒಂದು ರೀತಿಯಲ್ಲಿ ದುಡಿದು ಸಲಹುತ್ತಿರುವ ಹೆಂಡತಿಯ ಮೇಲೆ ವಿನಾಕಾರಣ ಪಿತ್ತ ನೆತ್ತಿಗೇರಿಸಿಕೊಳ್ಳುತ್ತಿರುವ ತನ್ನ ಪ್ರಸ್ತುತ ಅಸಹಾಯಕತೆಗೆ ಏನನ್ನೂ ಮಾಡಲಾಗದೇ ತನ್ನ ಬಲಗೈ ಮುಷ್ಠಿಯಿಂದ ಎರಡು ಬಾರಿ ಮಂಚಕ್ಕೆ ಗುದ್ದಿದ. ಕೈ-ಕೈ ಹಿಸುಕಿಕೊಳ್ಳುತ್ತಾ ಹಲ್ಲು ಗಟರಿಸಿದ. ತಲೆ ಜಜ್ಜಿಕೊಂಡು ಚಿತ್ತ ಬದಲಿಸಲು ಯತ್ನಿಸಿ ಬೆಳಕು ನೀಡಲು ತನ್ನನ್ನು ತಾನು ಸುಟ್ಟುಕೊಳ್ಳುತ್ತಿರುವ ಚಿಮುಣಿಯ ಕಡೆಗೆ ಗಮನ ಕೇಂದ್ರಿಕರಿಸುತ್ತಿರುವಾಗ ತೊಲೆಬಾಗಿಲಿನ ‘ಕರಕ್ ಕರಕ್’ ಅನ್ನುವ ಸಪ್ಪಳ ಅವನನ್ನ ಸೆಳೆಯಿತು. ಹೆಂಡತಿಯೇ ಬಂದಿರಬಹುದೆಂಬ ಕೌತುಕತೆಯಿಂದ ತಡಮಾಡದೇ ‘ಯಾರವ್ರು?’ ಎಂದು ತುಸು ಗಟ್ಟಿಯಾಗಿಯೇ ಒದರುತ್ತಾ, ದುಬ್ಬಕ್ಕೆ ಆಸೆರೆಯಾಗಿದ್ದ ಗೋಡೆ ತೊರೆದು ಮಂಚದ ತುದಿಗೆ ಬಂದು ಎರಡು ಕಾಲುಗಳನ್ನು ಇಳಿಬಿಟ್ಟ. ಆ ಕಡೆಯಿಂದ ಯಾರ ಪ್ರತಿಕ್ರಿಯೆಯೂ ಬಾರದೇ ದಡ್ ಎನ್ನುವ ಬಾಗಿಲಿನ ಅಗಾಧ ಅವಾಜು ತೇಲಿಬಂತು. ಮತ್ತೇ ‘ಯಾರವ್ರು’ ಎಂದು ಪ್ರಶ್ನಿಸಬೇಕೆಂದು ತುಟಿ ಎರಡು ಮಾಡುವಷ್ಟರಲ್ಲಿ ಕಾಲುಚೈನಿನ ಗಿಲ್‌ಗಿಲ್ ಎನ್ನುವ ಶಬ್ದ ತನ್ನತ್ತ ಬರುವದನ್ನ ಗಮನಿಸಿ ಕಸ್ತೂರಿ ಬಂದಿರಬೇಕೆಂದು ನಿರಾಶೆಗೊಂಡ. ಅವನ ಊಹೆ ನಿಜವಾಗಿತ್ತು.

‘ಅಪ್ಪಾ’ ಎನ್ನುತ್ತಾ ಖೋಲಿಯ ಬಾಗಿಲದೂಡಿ ಆರು ವರ್ಷದ ಕಸ್ತೂರಿ ಒಳಬಂದಾಗ ಚಿಂತಾಕ್ರಾಂತನಾಗಿ ಕುಳಿತಿದ್ದ ಲೇಶಪ್ಪ ಆಕೆಯ ಕರೆಗೆ ಓಗೊಡಲಿಲ್ಲ. ಎರಡನೇ ಬಾರಿ ‘ಅಪ್ಪಾ’ ಎಂದಾಗ ಖಬರು ತಪ್ಪಿ ತುನಕ್ಕನೇ ಹಾರಿ ಆಕೆಯನ್ನು ದಿಟ್ಟಿಸಿ ‘ಹ್ಞೂಂ.. ಹೇಳವ್ವಾ’ ಅಂದ. ‘ಅವ್ವಾ ಇನ್ನೂ ಬಂದಿಲ್ಲಾ?’ ಪ್ರಶ್ನೆಯನ್ನಿಟ್ಟಳು. ‘ನನಗೇನ್ ಗೊತ್ತು? ಹೊರಗಿದ್ದಾಕಿ ನೀನು’ ಚೂರು ಗಡುಸಾಗಿ ಅಂದ. ಅಪ್ಪನ ಮೌನ ಮಿಶ್ರಿತ ಸೆಡುವು ಅರಿತ ಕಸ್ತೂರಿ ಮತ್ತೇನನ್ನೂ ಅವನಿಂದ ನಿರೀಕ್ಷಿಸದೇ ಸುಮ್ಮನೆ ಮಂಚ ಹತ್ತಿ ಅವನ ಬೆಚ್ಚಗಿನ ತೊಡೆಯ ಮೇಲೆ ತಲೆ ಚಲ್ಲಿ ಪವಡಿಸುವ ಇರಾದೆ ತೋರಿದಳು. ಲೇಶಪ್ಪ ಇದು ತನಗೆ ಹುಟ್ಟಿದೆಯೋ, ಇಲ್ಲವೋ, ಅನ್ನಿಸಿ ದಡಗ್ಗನೇ ತನ್ನ ತೊಡೆ ಝಾಡಿಸಿದಾಗ ಕಸ್ತೂರಿಯ ತಲೆ ಮಂಚಕ್ಕೆ ಬಡಿದು ಟಗ್ಗೆಂದಿತು. ತಲೆ ಕೆದರಿಕೊಳ್ಳತ್ತಾ ಅಳಲು ಶುರುವಿಟ್ಟ ಆಕೆಯನ್ನ ಅವನು ರಮಿಸಲೂ ಇಲ್ಲ, ಬೈಯ್ಯಲೂ ಇಲ್ಲ. ಕಸ್ತೂರಿ ಅಪ್ಪನನ್ನ ಎವೆಯಿಕ್ಕದೇ ಕೆಲ ಕ್ಷಣ ನಿರುಕಿಸಿ ಅಳುತ್ತಲೇ ಮಂಚದ ಬದಿಗೆ ಸರಿದು ಗಪ್‌ಚುಪ್ ಮಲಗಿದಳು.

ಎಷ್ಟೋ ಹೊತ್ತಿನ ನಂತರ ‘ಹೆಂಡತಿ ನಡೆತೆಗೆಟ್ಟವಳು ಇದ್ದಿರಬಹುದು. ಆದರೆ ಇದರಲ್ಲಿ ಈ ಪಾಪದ ಕೂಸಿನ ಪ್ರಮಾದವೇನು?’ ಎಂಬ ಸಣ್ಣ ಪ್ರಜ್ಞೆಯ ಕಿಡಿ ಲೇಶಪ್ಪನಲ್ಲಿ ಹೊತ್ತಿಕೊಂಡಾಗ ತನ್ನ ಅಷ್ಟೂ ಬೇಸರವನ್ನು ಬದಿಗಿರಿಸಿ ಮಲಗಿದ್ದ ಕಸ್ತೂರಿಯ ತಲೆ ನೇವರಿಸುತ್ತಾ ‘ಯವ್ವಾ ಯವ್ವಾ’ ಅಂದ. ಕಸ್ತೂರಿ ಅಷ್ಟೊತ್ತಿಗೆ ನಿದ್ರೆಗೆ ಜಾರಿದ್ದಳು. ಆಕೆಯ ಮೊಗದಲ್ಲಿದ್ದ ಅಮಾಯಕಳ ಛಾಯೆ ಕಂಡು ಏಕಾಏಕಿ ಅವಳನ್ನ ಬಾಚಿ ತಬ್ಬಿಕೊಂಡ. ಎದೆಯೊಳಗೆ ಹೆಪ್ಪುಗಟ್ಟುತ್ತಿದ್ದ ದುಃಖ ತಡೆಯದೇ ಕಣ್ಣುಗಳನ್ನು ತೆವಗೊಳಿಸಿಕೊಂಡ. ‘ಎಷ್ಟ ಚಂದಿತ್ತ ನನ್ನ ಬಾಳೆವು. ಈ ದರಿದ್ರ ಕಾಲು ಮುರಿದು ಎಲ್ಲಾ ಹಾಳಾಗಿ ಈ ಕತ್ತಲಾದಾಗ ಕುಂದ್ರಿಸೇತಿ’ ಅಂತ ತಲೆದಿಂಬಿನ ಪಕ್ಕದಲ್ಲಿಟ್ಟಿದ್ದ ಟಾವೆಲ್ ತನ್ನ ಮುಖಕ್ಕೆ ಹಿಡಿದುಕೊಂಡು ಬಿಕ್ಕಿದ.

ಲೇಶಪ್ಪನ ದುಃಖ ತಿಳಿಗೊಳ್ಳಲು ಅರ್ಧತಾಸಿಗಿಂತಲೂ ಅಧಿಕ ಸಮಯವೇ ಹಿಡಿದಿತ್ತು. ಖೋಲಿಯಲ್ಲಿನ ಚಿಮುಣಿಯ ಬೆಳಕು ಕ್ಷೀಣಿಸಿ ಕತ್ತಲು ಗಾಢವಾಗಿತ್ತು. ಕಸ್ತೂರಿ ಗಾಢನಿದ್ರೆಯಲ್ಲಿದ್ದಳು. ಇನ್ನೇನು ಚಿನ್ನವ್ವ ಬಂದೇಬಿಡುತ್ತಾಳೆ ಅನ್ನುವ ಮಾನಸಿಕ ಮುನ್ಸೂಚನೆಯಾಗಲಿ, ಆಸೆಯಾಗಲಿ ಅವನಲ್ಲಿ ಉಳಿದಿರದ ಕಾರಣ ಕಸ್ತೂರಿಗೆ ಚಾದರ ಹೊದಿಸಿದ. ಹಸಿವು ಹೊಟ್ಟೆಯನ್ನ ಗೆಬರುತ್ತಿದ್ದಕ್ಕಾಗಿ ಖೋಲಿಯಲ್ಲಿ ಹಸಿವು ನೀಗಿಸುವ ಪದಾರ್ಥಗಳಿಗೆ ಕಣ್ಣೋಟದಿಂದ ತಡಕಾಡಿದ. ಮಂಚದ ಕೆಳಗೆ ಲೋಟ ಮಚ್ಚಿಟ್ಟಿದ್ದ ಚರಗಿಯಲ್ಲಿರುವ ನೀರೊಂದನ್ನ ಬಿಟ್ಟು ಮತ್ತೇನೂ ಇರಲಿಲ್ಲ. ಎರಡು ಲೋಟದಷ್ಟು ಅದೇ ನೀರನ್ನು ಕುಡಿದು ಹೊಟ್ಟೆ ಮೇಲೆ ಕೈಯಾಡಿಸಿಕೊಂಡು, ಸೇದುತ್ತಿದ್ದ ಕಾಲು ನೋವುನ್ನು ಸಹಿಸಿಕೊಂಡು ಮಂಚದ ಮೇಲೆ ಮಲಗಿಕೊಂಡ. ಪುನಃ ಚಿನ್ನವ್ವಳ ಅನುಪಸ್ಥಿತಿಯ ಚಿಂತೆ ಅವನನ್ನ ಕೆಣಕತೊಡಗಿತು.

* * *
ಈ ಮೊದಲು ಪ್ರತಿನಿತ್ಯ ಎಷ್ಟೇ ಹೈರಾಣದ ಕೆಲಸವಿದ್ದರೂ ಸಂಜೆ ಐದರ ಹೊತ್ತಿಗೆ ಚಿನ್ನವ್ವ ಮನೆಗೆ ಹಾಜಾರಾಗಿಬಿಡುತ್ತಿದ್ದಳು. ಆ ಎಳೆಯ ಸಂಜೆಯಲ್ಲಿ ಮನೆಯನ್ನೆಲ್ಲಾ ಕಸಗೂಡಿಸಿ, ಚಾ ಕುಡಿದು ನಾಲ್ಕೈದು ರೊಟ್ಟಿ ತಟ್ಟಿ ಅವರಿಬ್ಬರಿಗೆ ಉಣ್ಣಕ್ಕಿಟ್ಟು ತಾನೂ ಉಂಡು ಹಾಸಿಗೆ ಹಾಸಿ ದಿಂಬಿಗೆ ತಲೆ ಕೊಟ್ಟಳೆಂದರೆ ಆಕೆಯ ಆ ದಿನ ಕೊನೆಗೊಳ್ಳುತ್ತಿತ್ತು. ಪುನಃ ಹೊಸ ನಸುಕನ್ನು ಎದುರುಗೊಂಡಾಗ ಲೇಶಪ್ಪನ ಹೇಲುಚ್ಚೆಯ ಕರ್ಮ ಮುಗಿಸುವುದು, ಕಸಗುಡಿಸುವುದು, ಬಾಂಡೆ ತಿಕ್ಕುವುದು, ಸ್ನಾನ ಮಾಡುವುದು, ಸಂಜೆಯವರೆಗೆ ಸಾಕಾಗುವಷ್ಟು ಅಡುಗೆ ಮಾಡಿಡುವುದು, ತಾನು ಉಂಡು, ಬುತ್ತಿಕಟ್ಟಿಕೊಂಡು ಗೌಂಡಿ ಕೆಲಸಕ್ಕೆ ಹೊರಟು ಬಿಡುವುದು ಆಕೆಯ ಸಾಮಾನ್ಯ ದಿನಚರಿಯಾಗಿತ್ತು. ಹಾಸಿ ಹೊದ್ದುವಷ್ಟು ಬಡತನ, ಕಷ್ಟ ಕೊಟಲೇಗಳಿದ್ದರೂ ಅನ್ಯೋನ್ಯವಾಗಿದ್ದ ಲೇಶಪ್ಪ ಮತ್ತು ಚಿನ್ನವ್ವಳ ನಡುವೆ ಸಣ್ಣ ಬಿರುಕು ಮೂಡಲು ಕಾರಣ ಆಕೆಯ ಕೆಲಸದ ವರಸೆ ಬದಲಾಗಿದ್ದು!

ಲೇಶಪ್ಪ ಕಾಲು ಮುರಿದುಕೊಂಡು ಮೂಲೆಗುಂಪಾಗಿ ಕುಳಿತು ಹತ್ತತ್ರ ಎರಡು ತಿಂಗಳಾಗಿತ್ತೇನೋ ಒಂದು ದಿನ ಚಿನ್ನವ್ವ ತಾನು ಗೌಂಡಿ ದಗದಕ್ಕೆ ಹೋಗುವುದಾಗಿ ತಿಳಿಸಿದಾಗ ‘ಕಲ್ಲಾ-ಮಣ್ಣ ಹೊರೋ ಗೌಂಡಿ ಹ್ವಾರೆ ಕಡಿಮಿ ತ್ರಾಸಿಂದಲ್ಲ. ಚೋಲೋ ಪಗಾರ ಸಿಗುತ್ತ ಅನ್ನೂದ ಅಷ್ಟ ಖರೆ. ಸಂಜೆ ಅನಗೊಡದ ಮೈ ಅನ್ನೂದ ಹಣ್ಣನ್ನ ಆಗಿರತೈತಿ’ ಅಂತ ಕೆಲಸದ ಭಾದಕಗಳನ್ನ ಬಿಚ್ಚಿಟ್ಟು ಆಕೆ ಕೆಲಸಕ್ಕೆ ಹೋಗಬಾರದೆಂಬ ನಿಲುವು ವ್ಯಕ್ತಪಡಿಸಿದ್ದ. ‘ಹಂಗ ಅನಕೋತ ಕುಂತ್ರ ಸಂಸಾರ ನಡಸೂದ ಕಷ್ಟೈತಿ. ತಿಂಗಳಿಗೊಮ್ಮೆ ನಿನಗ ದವಾಖಾನಿಗೆ ತರ‍್ಸಾಕ ರೊಕ್ಕಾ ಎಲ್ಲಿಂದ ತರ್ಲಿ ನಾ? ನೀನ ಹುಷಾರಾಗಿ ದುಡ್ಯಾಕ ಹೋಗಬೇಕಂದ್ರ ಹೆಚ್ಚುಕಡಿಮಿ ಆರತಿಂಗ್ಳಾದ್ರೂ ಬೇಕ. ಅಲ್ಲಿವರೆಗೂ ಬೇಕಲ್ಲ ಏನಾದ್ರೂ ಹೊಟ್ಟಿಗೆ ತಿನ್ನಾಕ?’ ಅಂತ ಅಂದು ತಾನು ಕೆಲಸಕ್ಕೆ ಹೋಗುವುದರ ಅಗತ್ಯತೆಯನ್ನು ಅರುಹಿದಳು. ಲೇಶಪ್ಪ ತನ್ನ ಮೊಂಡಾಟ ಬಿಟ್ಟು ವಾಸ್ತವತೆ ಅರಿತು ‘ಹೋಗ್ಹೋಗ ಜ್ವಾಕಿ ನೋಡು. ಯಾರ ಹತ್ರ ಹೊಕ್ಕಿ ದಗದಕ್ಕ?’ ಎಂದು ಪ್ರಶ್ನಿಸಿದಾಗ ಆಕೆ ‘ರಾಚಪ್ಪನ ಕಡೆ’ ಅಂತ ಅಂದಿದ್ದಳಷ್ಟೇ ಇವನಿಗೆ ಸಿಟ್ಟು ಎಲ್ಲಿತ್ತೋ ಏನೋ ‘ಆ ಬೋಸಡಿಮಗ ಹೆಣ್ಣ ಕಂಡ್ರ ಗಿಡದಾನ್ ಹಣ್ಣ ಕಂಡಂಗ ಮಾಡ್ತಾನ. ನಾವು ಉಪವಾಸ ಸತ್ರೂ ಸರಿ ಅವ್ನತ್ರ ನೀನ ಕೆಲಸಕ್ಕ ಹೋಗೂದ ಬ್ಯಾಡ’ ಅಂತ ಸಿಕ್ಕಾಪಟ್ಟೆ ಒದರಾಡಿ, ಬೈದು ಎಲ್ಲಿಯೂ ಹೋಗದಂತೆ ದಿಗ್ಭಂದನ ಹಾಕಿಬಿಟ್ಟ.

ಲೇಶಪ್ಪ ಮತ್ತು ರಾಚಪ್ಪ ಇಬ್ಬರೂ ಒಂದೇ ಊರಿನ ಕಟ್ಟಡ ಮೇಸ್ತ್ರಿಗಳಾಗಿದ್ದರಿಂದ ರಾಚಪ್ಪನ ಸಂಪೂರ್ಣ ಹಾಲ್‌ಚಾಲ್ ಲೇಶಪ್ಪನಿಗೆ ಗೊತ್ತಿತ್ತು. ರಾಚಪ್ಪ ತನ್ನ ಮೇಸ್ತ್ರಿ ಕೆಲಸದಲ್ಲಿ ಶೃದ್ಧೆ ಇಟ್ಟಿರಲಿಲ್ಲ. ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿರಲೂ ಇಲ್ಲ. ಸಂಜೆಯಾದರೂ ಸಾಕು ಕಂಟಮಟ ಕುಡಿಯವುದು, ಕಂಡಕಂಡವರೊಂದಿಗೆ ಜಗಳ ಮಾಡುವುದು ಅವನ ಅನುದಿನದ ಕರ್ಮ. ಅದಾಗ್ಯೂ ತನ್ನ ಬಳಿ ಕೆಲಸಕ್ಕೆ ಬರುವ ಹೆಣ್ಣುಮಕ್ಕಳನ್ನ ತನ್ನ ಕಾಮತೃಷೆಗೆ ಬಳಸಿಕೊಳ್ಳುತ್ತಿದ್ದ. ಈ ವಿಷಯವಾಗಿ ರಾಚಪ್ಪ ಎಷ್ಟೆಲ್ಲಾ ಕಷ್ಟ ಅನುಭವಿಸಿದ್ದರೂ ‘ಹುಟ್ಟು ಗುಣ ಸುಟ್ರೂ ಹೋಗುವುದಿಲ್ಲ’ ಅನ್ನುವಂತೆ ತನ್ನ ಚಾಳಿ ಬಿಟ್ಟಿರಲಿಲ್ಲ. ಈ ಕಾರಣಕ್ಕಾಗಿ ಅವನ ಬಳಿ ಚಿನ್ನವ್ವಳನ್ನ ಕೆಲಸಕ್ಕೆ ಕಳುಹಿಸಲು ಒಂದಷ್ಟು ದಿನಗಳ ಕಾಲ ಲೇಶಪ್ಪ ಮನಸ್ಸು ಮಾಡಿರಲಿಲ್ಲ.

ಲೇಶಪ್ಪ ಸ್ವತಃ ದುಡಿವಂತಿರಲಿಲ್ಲ. ಹೆಂಡತಿಗೂ ದುಡಿಯಲು ಕಳುಸುತ್ತಿರಲಿಲ್ಲ. ಹೀಗಾಗಿ ಅವನ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಡುತ್ತಾ ಹೋಯಿತು. ಇದನ್ನ ಕಂಡ ಚಿನ್ನವ್ವ ‘ಯಾರ ತ್ವಾಟಪಟ್ಟಿಯೊಳಗ ಕೆಲಸ ಇಲ್ಲ. ಹೋದ್ರ ರಾಚಪ್ಪನ ಕಡೇನ ಗೌಂಡಿ ಕೆಲಸಕ್ಕ ಹೋಗಬೇಕ. ಅದನ್ ಬಿಟ್ರ ಬ್ಯಾರೆ ಗತಿಯಿಲ್ಲ. ನಾವ ಇದ್ಹಂಗ ಜಗತ್ತ ಇರತೈತಿ’ ಅಂತ ಚಿನ್ನವ್ವ ತನ್ನ ನಡೆತೆಯ ಬಗೆಗೆ ಗಂಡ ಅನುಮಾನಪಡಬಾರದು ಎಂಬಂತೆ ಲೇಶಪ್ಪನಿಗೆ ರಮಿಸಿ ಹೇಳಿದಾಗ ಅವನು ಕತ್ತು ಅಲ್ಲಾಡಿಸಿ ಚಿನ್ನವ್ವಳಿಗೆ ಕೆಲಸಕ್ಕೆ ಹೋಗಲು ಅನುಮತಿ ಕೊಟ್ಟ.

ತಿಂಗಳೊಪ್ಪತ್ತಿನವರೆಗೂ ರಾಚಪ್ಪನ ಬಳಿ ಚಿನ್ನವ್ವ ಕೆಲಸ ಮಾಡಿದರೂ ಆಕೆಯ ಸುದ್ದಿಗೇ ಬಂದಿರಲಿಲ್ಲ. ದಿನಗಳೆದಂತೆ ಆಕೆಯ ನಸುಗಪ್ಪಿನ ನೀಳವಾದ ದೇಹದ ಸರಿಯಾದ ಉಬ್ಬು-ತಗ್ಗು ಇರುವ ಅಂಗಾಂಗಳು ಆತನಲ್ಲಿ ಬೆರಗು ಮೂಡಿಸತೊಡಗಿದವು. ಆಕೆಯ ಮೋಹಕ ನಗು, ಮಿತವಾದ ಭಾಷೆ, ಸಭ್ಯ ನಡತೆ-ಹೀಗೆ ಎಲ್ಲದಕ್ಕೂ ಮನಸೂರೆಗೊಂಡು ತನ್ನ ಕ್ಯಾಂತಿ ಸುರುಮಾಡಿಕೊಂಡ. ಕೆಲಸದ ನೆಪವೊಡ್ಡಿ ಆಕೆಯನ್ನು ಗಾಡಿ ಮೇಲೆ ಕೂರಿಸಿಕೊಂಡು ಅಡ್ಡಾಡುವುದು, ಕೆಲಸದ ವೇಳೆಯಲ್ಲಿ ಮುಖಕ್ಕೆ ಸಿಮೆಂಟು ಒರೆಸುವುದು, ಮರೆಯಲ್ಲಿ ನಿಂತು ಹಳ್ಳ ಒಗೆಯುವುದು, ದ್ವಂದ್ವ ಅರ್ಥದ ಅಶ್ಲೀಲ ಜಾನಪದ ಹಾಡುತ್ತಾ ಓರೆ ನೋಟದಿಂದ ನೋಡಿ ಸಿಳ್ಳು ಹಾಕುವುದು, ಕಣ್ಣು ಹೊಡೆದು ನಗಾಡುವುದನ್ನ ಮಾಡುತ್ತಾ ನಿರಂತರವಾಗಿ ಕಾಡಿಸ್ಯಾಡತೊಡಗಿದ. ಚಿನ್ನವ್ವ ಇದೆಲ್ಲವನ್ನು ಗಂಡ ಲೇಶಪ್ಪನ ಮುಂದೆ ತೋಡಿಕೊಂಡು ರಾಚಪ್ಪನಿಗೆ ತಕ್ಕ ಶಾಸ್ತಿ ಮಾಡಿಸಬೇಕೆಂದರೆ: ಈ ಮೊದಲೇ ಲೇಶಪ್ಪ ರಾಚಪ್ಪನ ಹಲಕಟ್‌ಗಿರಿಗಳ ಬಗ್ಗೆ ಸವಿಸ್ತಾರವಾಗಿ ಹೇಳಿ ಅವನ ಬಳಿ ಕೆಲಸ ಮಾಡದಂತೆ ವಾಗ್ಧಾನ ನೀಡಿದ್ದರಿಂದ ಚಿನ್ನವ್ವ ಈ ಸಮಸ್ಯೆಯ ಪರಿಹಾರಾರ್ಥವಾಗಿ ಗಂಡನಿಗೆ ಬಾಯಿ ತೆರೆಯಲು ಮುಖವಿಲ್ಲದಂತಾಗಿತ್ತು. ಬೇರೆ ಯಾರಿಗಾದರೂ ಹೇಳಿ ಅವನನ್ನ ತಿದ್ದಬೇಕೆನ್ನುವ ಹಠಕ್ಕೆ ಧೈರ್ಯ ಸಾಲದೇ ಹೇಗಾದರೂ ಮಾಡಿ ಅವನಿಗೆ ಸ್ವತಃ ತಾನೇ ಬುದ್ದಿ ಹೇಳಿ ತನ್ನ ಸಮಸ್ಯೆಗಳು ಬಗೆಹರಿಯುವವರಗೆ ಕೆಲಸ ಮಾಡಿ ಈ ಕೂಪದಿಂದ ಪರಾರಿ ಆಗಿಬೇಡಬೇಕೆಂಬ ಅಕಲು ಹಾಕಿದಳು. ಅದರಂತೆ ಒಂದು ದಿನ ಸಮಯ ನೋಡಿ ತನಗೆ ಕಾಟಕೊಡದಂತೆ ಕೈಮುಗಿದು ಅವನಿಗೆ ಬೇಡಿಕೊಂಡಳು. ಆದರೆ, ಅವನು ‘ನೋಡು ಲೇಶ್ಯಾಂದು ಕಥೀ ಮುಗಿದೈತಿ. ಅವ್ನ ನೆಚ್ಕೊಂಡು ಕುಂತ್ರ ನಿನ್ನೆ ಬಾಳೆ ಸೂಸುತ್ರ ನಡ್ಯೂದಿಲ್ಲ. ಗಂಡ-ಹೆಣ್ಣ ಅಂದಮ್ಯಾಲ ಕಾಮ ಅನ್ನೂದ ಸಹಜ. ನೀ ನನ್ನ ಹಂತೇಕ ಕೆಲಸ ಮಾಡೂದ ಬ್ಯಾಡ. ರಾಣಿಯಂಗ ಬಂದು ರಾಣಿಯಂಗ ಹೋಗು. ಚಲೋ ಚಲೋ ಸಿರೋ ಉಟ್ಕೊ, ಹೂ ಇಟ್ಗೋ, ಸ್ನೋಪೌಡರ್ ಹಚ್ಗೊಂಡ ನಾ ಕರದಾಗೊಮ್ಮೆ ಬಾ ಸಾಕು. ನಿನ್ನ ಬಂಗಾರದಂಗ ನೋಡ್ಕೊತೀನಿ’ ಅಂದ. ಹೀಗೆ ಅಂದಾಕ್ಷಣ ಚಿನ್ನವ್ವ ಅವನಿಗೆ ಚಪ್ಪಲಿಯೇ ಎತ್ತಿಬಿಟ್ಟಿದ್ದಳು. ಇದನ್ನೇ ನೆಪಮಾಡಿಕೊಂಡು ರಾಚಪ್ಪ ಪಗಾರ ಕೊಡುವುದನ್ನೇ ನಿಲ್ಲಿಸಿದ್ದ!

ಮನೆಗೆ ಬೇಕಾದ ರೇಷನ್ನಿಗೆ, ತಿಂಗ್ಳು ತಿಂಗ್ಳು ತರಬೇಕಾದ ಔಷಧಿ-ಗುಳಿಗಿಗೆ, ಕಸ್ತೂರಿಗೆ ಆಗಾಗ ಕೊಡುಸುತ್ತಿದ್ದ ಪೆಪ್ಪರ್‌ಮೆಂಟಿಗೆ- ಹೀಗೆ ಸಣ್ಣ-ಪುಟ್ಟ ಕೈಬಳಕೆಗೆ ಬೇಕಾದ ಯಾವ ಕೆಲಸಕ್ಕೂ ಕೊರತೆಯಾಗದಂತೆ ಮನೆ ತೂಗಿಸುತ್ತಿದ್ದ ಚಿನ್ನವ್ವ ಬರಬರುತ್ತಾ ಯಾವ ಕೆಲಸಕ್ಕೂ ತನ್ನ ಬಳಿ ಬಿಡಿಗಾಸು ಇಲ್ಲ ಅಂತ ಕಡ್ಡಿ ತುಂಡು ಮಾಡಿದಂತೆ ಹೇಳತೊಡಗಿದಳು. ಒಮ್ಮೆ ಲೇಶಪ್ಪ ‘ಯಾಕ ಪಗಾರ ಕೊಟ್ಟಿಲ್ಲನ ಅಂವಾ?’ ಅಂತ ಕೇಳಿಯೇ ಬಿಟ್ಟ. ಅವನ ಪ್ರಶ್ನೆಗೆ ಚಿನ್ನವ್ವಳ ಬಳಿ ಯಾವ ಉತ್ತರವೂ ಇಲ್ಲದೇ ಗಳಗಳನೇ ಅತ್ತುಬಿಟ್ಟಳು. ಇಂಥಹ ಅವಕಾಶ ಮತ್ತೆಮ್ಮೋ ಸಿಗುತ್ತೋ ಇಲ್ಲವೋ ಎಂಬಂತೆ ರಾಚಪ್ಪ ಆಡಿದ ಅಷ್ಟೂ ಮಾತುಗಳನ್ನ ಯಥಾವತ್ತಾಗಿ ಹೇಳಿಯೇ ಬಿಟ್ಟಳು! ವಿಷಯ ಕೇಳಿದ ಲೇಶಪ್ಪ ದಂಗಾಗಿಹೋದನೇ ಹೊರತು ಏನನ್ನೂ ಮಾಡಲಾಗದ ಅಸಹಾಯಕತೆಯಲ್ಲಿ ಬುಸುಗುಟ್ಟಿ ತಲ್ಲಣಗೊಂಡಿದ್ದ.
ಇಷ್ಟೇಲ್ಲಾ ಆದ ಮೇಲೆಯೂ ಚಿನ್ನವ್ವ ರಾಚಪ್ಪನ ಬಳಿ ಕೆಲಸಕ್ಕೆ ಹೋಗುವದನ್ನ ಮಾತ್ರ ನಿಲ್ಲಿಸಿರಲಿಲ್ಲ. ಅವನ ಬಗೆಗಿನ ಯಾವ ಪಿರ್ಯಾದಿಯನ್ನು ಮತ್ತೆಂದೂ ಲೇಶಪ್ಪನ ಮುಂದಿಡಲಿಲ್ಲ. ಇತ್ತೀಚಿಗಂತೂ ಚಿನ್ನವ್ವ ತುಂಬಾ ಲವಲವಿಕೆಯಿಂದ ಕೆಲಸಕ್ಕೆ ಹೊರಡುತ್ತಿದ್ದಳು. ಮನೆಯಲ್ಲಿ ಕನೋಡಿ, ಸ್ನೋ, ಪೌಡರ್, ಬಗೆಗೆಯ ಕ್ಲಿಪ್ಪು ತಂದಿಟ್ಟು ಶೋಕಿ ಮಾಡತೊಡಗಿದ್ದಳು. ದಿನಕ್ಕೊಂದರಂತೆ ಬಣ್ಣಬಣ್ಣದ ಸೀರೆಯುಟ್ಟು ನುಲಿಯತೊಡಗಿದ್ದಳು. ಇತ್ತೀಚಿನ ಹದಿನೈದಿಪ್ಪತ್ತು ದಿನಗಳಿಂದ ಕೆಲಸ ಮುಗಿಸಿ ರಾತ್ರಿ ಒಂಬತ್ತು, ಒಂಬೊತ್ತುವರೆ, ಹತ್ತು ಗಂಟೆಗೆ ಬರುವದನ್ನ ರೂಢಿಸಿಕೊಂಡಿದ್ದಳು. ಹೀಗಾಗಿ ಚಿನ್ನವ್ವ ರಾಚಪ್ಪನ ಜೊತೆ ಸೇರಿದ್ದಾಳೋ ಆಗಿಬಿಟ್ಟಿದ್ದಾಳೇನೋ ಅಂತ ಅನುಮಾನದ ಹುಳ ಲೇಶಪ್ಪನನ್ನ ತಿನ್ನತೊಡಗಿತ್ತು!!!

* * *
ಖೋಲಿಯ ಕಿಟಕಿ ಮೂಲಕ ಎಳೆಯ ನಸುಕಿನ ತಂಪು ಗಾಳಿ ನುಸುಳಿ ಮೈಗೆ ತಾಗಿದ್ದಕ್ಕೋ, ಹಸಿವು ನೀಗಿಸಿಕೊಳ್ಳಲು ರಾತ್ರಿ ಹೊಟ್ಟೆ ತುಂಬಾ ನೀರು ಕುಡಿದು ಮಲಗಿದ್ದರಿಂದ ಅವನ ದೇಹದ ಮೂತ್ರಚೀಲ ತುಂಬಿದ್ದಕ್ಕೋ ಗೊತ್ತಿಲ್ಲ ಒಟ್ಟಿನಲ್ಲಿ ಲೇಶಪ್ಪನಿಗೆ ಬೆಳ್ಳಂ ಬೆಳಗ್ಗೆ ಎಚ್ಚರವಾಯಿತು. ಎದ್ದು ಕುಳಿತು ಕಣ್ಣುಜ್ಜುತ್ತಾ ತನ್ನ ಎದುರಿಗಿದ್ದ ಗೊಡಚಿ ಈರಣ್ಣನ ಫೋಟೋಗೆ ಕೈ ಮುಗಿದು ಸಾವಕಾಶವಾಗಿ ಮಂಚದಿಂದ ಕಾಲು ಇಳಿಬಿಟ್ಟಾಗ ಮೆತ್ತಮೆತ್ತಗೆ ಏನೋ ತಾಗಿದಂತಾಗಿ ಕೆಳಗೆ ನೋಡಿದ. ಮಂಚದ ಬುಡದಲ್ಲಿ ಚಿನ್ನವ್ವ ಬರೋಬ್ಬರಿ ನಿದ್ದೆ ಮಾಡುತ್ತಿದ್ದಳು.

‘ರಾತ್ರಿಯೆಲ್ಲಾ ಹರಗ್ಯಾಡಿ ಬಂದು. ಹ್ಯಾಂಗ್ ಬಿದ್ಕೊಂಡಾಳ ನೋಡ ಬೋಸಡಿ’ ಅಂತ ಮನಸ್ಸಿನಲ್ಲಿ ಅಂದಕೊಂಡು ತನ್ನ ಎಡಗಾಲಿನಿಂದ ಆಕೆಯ ದುಬ್ಬಕ್ಕೆ ತಿವಿದ. ಆಕೆ ಹೌಹಾರಿ ದಡಗ್ಗನೇ ಎದ್ದು ಕುಳಿತು ಹುಬ್ಬು ಹಾರಿಸಿ ಏನು? ಎಂದು ಸಂಜ್ಞೆ ಮಾಡಿದಳು. ಲೇಶಪ್ಪ ತನ್ನ ಬಲಗೈನ ಕಿರುಬೆರಳು ತೋರಿಸಿದ. ಆಕೆ ಎದ್ದು ಅವನ ಎಡಗೈ ಎತ್ತಿ ತನ್ನ ಭುಜದ ಮೇಲಿರಿಸಿ ಬಲಗೈ ಸಹಾಯದಿಂದ ಆತನ ನಡ ಹಿಡಿದುಕೊಂಡು ನಡೆಯಲು ಮುಂದಾದಳು. ಲೇಶಪ್ಪ ಆಕೆಯಿಂದ ಕೊಸರಿಕೊಂಡು ಅಲ್ಲೇ ಮಂಚದ ಮಗ್ಗಲಲ್ಲಿ ಬಿದ್ದಿದ್ದ ಕೋಲನ್ನು ಬಲ ಬಗಲಲ್ಲಿ ಇಟ್ಟುಕೊಂಡು ನಾಲ್ಕು ಹೆಜ್ಜೆ ನಡೆಯುವಷ್ಟರಲ್ಲಿ ಕಾಲಿಗೆ ಏನೋ ತಾಗಿ ನೋವಿನಿಂದ ನರಳಿದ. ಚಿನ್ನವ್ವ ಈ ಬಾರಿ ಅವನ ಸಿಟ್ಟು-ಸೆಡುವು ಲೆಕ್ಕಿಸಿದೇ ಹಿತ್ತಲಿಗೆ ಒಯ್ದು ಅವನ ಹೇಲುಚ್ಚಿಯ ಕರ್ಮಗಳನ್ನ ಮುಗಿಸಿಕೊಂಡು ಬಂದು ಮತ್ತದೇ ಮಂಚದ ಮೇಲೆ ಕೂಡಿಸಿದಳು. ‘ಇವತ್ತ ಹುಬ್ಳಿಗೆ ಹೋಗಿಬರೂಣು. ಅಲ್ಲೇ ಚೋಲೋ ಡಾಕ್ಟರ್ ಅದಾರಂತ ನಿನ್ನ ತರ‍್ಸಗೊಂಡು ಬರ್ತೀನಿ. ಯಾಡ ಜರಗಿ ಜಳಕಾ ಮಾಡಿ, ಒಂದೀಟ ಉಪ್ಪಿಟ ಮಾಡಿ ತಿಂದು ಹೋಗೂಣ’ ಅಂದಳು. ‘ನಾ ಎಲ್ಯೂ ಬರೂದಿಲ್ಲ. ನನ್ನ ತೊಡಿಬ್ಯಾಡ. ನಾನ...’ ಲೇಶಪ್ಪ ಅನ್ನುತ್ತಿದ್ದ ಮಾತನ್ನು ತಡೆದು ‘ನೀ ಏನರ ಅನ್ಕೋ ಮಾರಾಯ್ಯ. ಇವತ್ತೊಂದಿನಾ ಸುಮ್ನ ಬಾ...’ ಅಂತ ಚಾಲುವರೆದಳು. ಲೇಶಪ್ಪ ಮೌನವಹಿಸಿದ.

ಖೋಲಿಯೊಳಗೆ ಬಿಸಿಲಿನ ಬಿಲ್ಲೆ ಬೀಳುತ್ತಲೇ ಅದರ ಪ್ರಖರತೆಯಿಂದ ಉಂಟಾದ ಝಳಕ್ಕೆ ಕಸ್ತೂರಿ ಎದ್ದು ಕುಳಿತು ‘ಅವ್ವಾ’ ಎಂದಳು. ಅಷ್ಟು ದೂರದಿಂದ ತೇಲಿಬಂದ ‘ಓ’ ಎನ್ನುವ ದನಿಯನ್ನು ಕಣ್ಣು ತಿಕ್ಕಿಕೊಳ್ಳುತ್ತಾ ಓಡುನಡುಗೆಯಲ್ಲಿ ಹಿಂಬಾಲಿಸಿದಳು. ಒಬ್ಬಂಟಿಯಾದ ಲೇಶಪ್ಪ ಪುನಃ ತನ್ನ ಮೂಲ ಚಿಂತೆಯಲ್ಲಿ ಮುಳುಗಿದ. ‘ಅವಂದ್ರೋಳಗ ಇಕಿ ಏನ್ ಕಂಡಾಳ ಕಸಬಿ’ ಅಂತ ಚಿನ್ನವಳ ನಡವಳಿಕೆಯನ್ನ ಹಳಿಯತೊಡಗಿದ್ದಾಗ ಚಿನ್ನವ್ವ ತಾಟಿನಲ್ಲಿ ಉಪ್ಪಿಟು ತಂದಿಟ್ಟು ಲಗುಲಗು ತಿನ್ನಲು ಹೇಳಿ ಅಲ್ಲೇ ಗಳದ ಮೇಲೆ ಒಣಹಾಕಿರುವ ಅವನ ಚಡ್ಡಿ-ಬನಿಯನ್, ಲುಂಗಿ-ಅಂಗಿ ಪಕ್ಕದಲ್ಲಿಟ್ಟು ‘ತಯಾರಾಗ’ ಅಂದಳು. ಅದಕ್ಕವನು ‘ಹ್ಞುಂನೂ’ ಅನ್ನಲಿಲ್ಲ ‘ಹ್ಞಾಂನೂ’ ಅನ್ನಲಿಲ್ಲ.

ಚಿನ್ನವ್ವ ಈ ಮೊದಲೇ ನಿಶ್ಚಯಿಸಿದಂತೆ ಲೇಶಪ್ಪ ಮತ್ತು ಕಸ್ತೂರಿಯನ್ನ ಕರೆದುಕೊಂಡು ಹಂಗೋ ಹಿಂಗೋ ಹುಬ್ಬಳ್ಳಿಯ ಗಡಿಗಿ ದವಾಖಾನೆಗೆ ತಲುಪಿ ರಿಶಪ್‌ನಿಷ್ಟ್ ಕೌಂಟರ್‌ನಲ್ಲಿ ಕುಳಿತಾಗ ಕರೆಕ್ಟ್ ಒಂದು ಗಂಟೆಯಾಗಿತ್ತು. ಬಸ್‌ನಲ್ಲಿ ಉಂಟಾದ ದಡಕಿಯಿಂದ ಲೇಶಪ್ಪನ ಕಾಲು ಮತ್ತಷ್ಟೂ ನೋವಾಗಿ ಯಮಯಾತನೆ ಅನುಭವಿಸುತ್ತಿದ್ದ. ಬಸ್ಸಿನಲ್ಲಿ ಕೊಡಿಸಿದ್ದ ಪೆಪ್ಪರಮೆಂಟು ತಿಂದು ಜಿಬಿಜಿಬಿ ಕೈ-ಬಾಯಿಗೆ ಅಂಟಿಸಿಕೊಂಡು ಕಸ್ತೂರಿ ಹೊಸ ಜನ, ಹೊಸ ಜಾಗ ಕಂಡು ಬೆಕ್ಕಸ ಬೆರಗಾಗುತ್ತಾ ಸಂಭ್ರಮದಲ್ಲಿದ್ದಳು. ಚಿನ್ನವ್ವ ದೇವರಾಜ್ ಡಾಕ್ಟರ್ ಬಳಿ ತನ್ನ ಗಂಡನನ್ನ ತೋರಿಸುವುದಾಗಿ ಹೇಳಿ ಕೌಂಟರನಲ್ಲಿ ದುಡ್ಡು ಕಟ್ಟಿದ ಹದಿನೈದಿಪ್ಪತ್ತು ನಿಮಿಷಕ್ಕೆ ಲೇಶಪ್ಪನ ಹೆಸರಿನಿಂದ ಫೈಲ್‌ವೊಂದು ತಯಾರಾದ ನಂತರ ಬಿಳಿ ಕೋಟು ತೊಟ್ಟ ಹುಡುಗಿಯೊಬ್ಬಳು ‘ಲೇಶಪ್ಪಾ ಹಾದಿಮನಿ’ ಅಂತ ಕೂಗಿ ಅವನನ್ನ ವ್ಹೀಲ್‌ಚೇರ್ ಮೇಲೆ ಕೂಡಿಸಿಕೊಂಡು ದೇವರಾಜ್ ಡಾಕ್ಟರ್‌ನ ಖೋಲಿಯತ್ತ ವ್ಹೀಲ್‌ಚೇರ್ ದಬ್ಬಿಕೊಂಡು ಹೋದಳು. ಅಲ್ಲೆಲ್ಲೋ ಆಡುತ್ತಿದ್ದ ಕಸ್ತೂರಿಯನ್ನ ಗಟ್ಟಿಯಾಗಿ ಕೂಗಿ ಆಕೆ ಬರಲು ಒಪ್ಪದಿದ್ದಕ್ಕೆ ನಿಚ್ಚಳ ಎರಡೇಟು ದುಬ್ಬಕ್ಕೆ ಹಾಕಿ ದರದರನೇ ಎಳೆದುಕೊಂಡು ಬಂದು ವ್ಹೀಲ್‌ಚೇರ್ ಹೋದ ಹಾದಿ ಹುಡುಕಿ ಹೊರಟಳು ಚಿನ್ನವ್ವ.

ಡಾಕ್ಟರ್‌ನ ಕೋಣೆಯ ಬಾಗಿಲದೂಡಿ ಚಿನ್ನವ್ವ ಒಳಹೋದಾಗ ಲೇಶಪ್ಪ ಬೆಡ್ ಮೇಲೆ ಅಡ್ಡಾಗಿದ್ದ. ಕರೆತಂದ ಹುಡುಗಿ ಬಿಪಿನೋ, ಶುಗರ‍್ರೋ, ಮತ್ತೆಂತದೋ ಚಕಪ್‌ಗಳನ್ನ ಮಾಡುತ್ತಿದ್ದಳು. ಕೆಲ ಸಮಯದ ನಂತರ ಡಾಕ್ಟರ್ ಬಾಗಿಲದೂಡಿ ಒಳಬರುತ್ತಾ ಎದುರಿಗಿದ್ದ ಕಸ್ತೂರಿಯ ಎರಡೂ ಗಲ್ಲ ಗಿಂಜಿ ‘ಏನ್ ಪುಟ್ಟಿ ನಿನ್ನ ಹೆಸರು’ ಅಂತ ಕೇಳಿ ಆಕೆಯ ಉತ್ತರಕ್ಕೆ ಕಾಯದೇ ತನ್ನ ಸೀಟ್‌ನಲ್ಲಿ ಕುಳಿತ. ಚಿನ್ನವ್ವ ಅವಕ್ಕಾಗಿ ಡಾಕ್ಟರ್‌ಗೆ ಎರಡೂ ಕೈ ಜೋಡಿಸಿ ನಮಸ್ಕರಿಸುತ್ತಾ ‘ನನ್ನ ಹೆಸ್ರ ಚಿನ್ನವ್ವಂತ್ರೀ. ನವಲಗುಂದದ ನೀರಜ್ ಡಾಕ್ಟರ್ ಮನ್ಯಾಗ ಅಡಿಗಿ ಕೆಲಸಾ ಮಾಡ್ತೀನ್ರಿ’ ಅನ್ನುತ್ತಿದ್ದ ಮಾತನ್ನ ತಡೆದು ಡಾಕ್ಟರ್ ‘ಇಲ್ಲಿ ಕುತ್ಕೋಮ್ಮ’ ಎಂದಾಗ ಕುಳಿತು ಮತ್ತೇ ಮಾತು ಆರಂಭಿಸಿದಳು. ‘ಅವ್ರ ಕಡೆ ಕೆಲಸಾ ಮಾಡಾಕತ್ತ ಈಗ ಇಪ್ಪತ್ತದಿನ ಆತು. ನಮ್ಮ ಡಾಕ್ಟರ್ ದೇವ್ರಂತಾ ಮನಶ್ಯಾರ. ನವಲಗುಂದಾಗ ಹೊಸ ಆಸ್ಪತ್ರೀ ಕಟ್ಟಡ ಕೆಲಸಕ್ಕ ಬರ್ತಿದ್ದೆ ನಾ. ಒಬ್ಬ ಹಲಕಟ್ ಮೇಸ್ತ್ರಿ ನನಗ ಗಂಟ ಬಿದ್ದಿದ್ದಾ. ನನಗ ಏನ ತಿಳಿತೋ ಏನೋ ಡಾಕ್ಟರ್ ಮುಂದ ನನ್ನ ಸಮಸ್ಯಾ ಹೇಳಿದ್ಯ. ಅವ್ರ ತಾಬೂಡತೂಬಡ ಆ ಮೇಸ್ತ್ರಿ ಕರೀಸಿ ಉಗುಳಿ ಉಳ್ಳಾಗಡ್ಡಿ ಕಟ್ಟಿ ಅವನ ಕಡೆಯಿಂದ ಬರೂ ಪಗಾರ ಇಸಿದುಕೊಟ್ಟ ತಮ್ಮ ಮನ್ಯಾಗ ನನಗ ಕೆಲ್ಸಾ ಕೊಟ್ರ. ಮತ್ ನನ್ನ ಗಂಡಂದ ಹಿಂಗಿಂಗ ಅಂತ ತ್ರಾಸ ಹೇಳಿಕೊಂಡಿದ್ದಕ್ಕ ನಿಮ್ಮ ಕಡೆ ಹೋಗಂತ ಕಳಿಸಿದ್ರರೀ’ ಅಂದಳು.

‘ಹೌದು ನಿನ್ನೆ ನೀರಜ್ ಫೋನ್ ಮಾಡಿದ್ದ’ ಅಂತ ಡಾಕ್ಟರ್ ಅಂದಾಗ ಚಿನ್ನವ್ವಳ ಮುಖದಲ್ಲಿ ದೈನ್ಯತೆಯ ಭಾವ ಮೂಡಿತು. ಯಾವುದೋ ಟೆಸ್ಟಿಗೆಂದು ಸಿರೆಂಜಿನ ಮೂಲಕ ರಕ್ತ ಹೀರುತ್ತಿದ್ದ ನೋವನ್ನು ತಿನ್ನುತ್ತಲೇ ಚಿನ್ನವ್ವ ಹೇಳುತ್ತಿದ್ದ ಅಷ್ಟೂ ಮಾತನ್ನ ಲೇಶಪ್ಪ ಕಿವಿಗಿಳಿಸಿಕೊಂಡಿದ್ದ. ಹೆಂಡತಿಯ ಬಗ್ಗೆ ತಪ್ಪಾಗಿ ಅರ್ಥೈಸಿಕೊಂಡು ಸಣ್ಣತನ ಪ್ರದರ್ಶಿಸಿದ್ದು, ತನಗೇ ಹುಟ್ಟಿದ ಮಗಳನ್ನು ಅನುಮಾನದಿಂದ ಕಂಡಿದ್ದು- ಎಲ್ಲವೂ ನೆನಪಾಗಿ ತುಂಬಾ ಪಶ್ಚಾತಾಪ ಪಟ್ಟ.

ಡಾಕ್ಟರ್ ಚಿನ್ನವ್ವಳನ್ನ ಕೆಲ ನಿಮಿಷದವರೆಗೆ ಮಾತನಾಡಿಸಿ ಲೇಶಪ್ಪನ ಬಳಿ ಬಂದು ‘ಕಾಲ ಹೇಗೆ ಮುರಿತಪ್ಪಾ’ ಅಂದಾಗ ಲೇಶಪ್ಪ ಏನೇನೋ ಕಥೆ ಕಟ್ಟುತ್ತಿದ್ದ. ಚಿನ್ನವ್ವ ‘ಅದ ಸುಳ್ಳು ಸರ್’ ಅಂದು ತಾನೇ ಕಾಲು ಮುರಿದ ಬಗೆಯನ್ನು ಹೇಳಿದಳು.

ಲೇಶಪ್ಪ ಕಟ್ಟಡದ ಮೇಸ್ತ್ರಿಯಾಗಿದ್ದುಕೊಂಡೇ ಜೀವನದಲ್ಲಿ ಮುಂದೆ ಬಂದಿದ್ದ. ಕಳೆದ ವರ್ಷವೇ ಮನೆ ಕಟ್ಟಿಸಿ ಇಡೀ ಊರಿಗೆ ನಿಂತುಣ್ಣುವ ‘ಬಫೇ’ ಊಟ ಹಾಕಿಸಿದ್ದ. ಕೈಯಲ್ಲಿ ಕಾಸಿತ್ತು. ಬೇಕಾದಷ್ಟು ದುಡಿಯುವ ಹಮ್ಮು-ಬಿಮ್ಮೂ ಇತ್ತು. ಆದರೆ ಅವನ ವ್ಯಸನ ಯಾವಗ ರಾಜಕೀಯದಡೆಗೆ ಹರಿಯಿತೋ ಆಗಲೇ ಅವನ ಜೀವನ ಅವನತಿಯ ಹಾದಿ ಹಿಡಿಯಿತು. ಪಾರ್ಟಿ, ಪಕ್ಷ, ಮೀಟಿಂಗು, ಸಭೆ, ಪ್ರಚಾರ, ಹೋರಾಟ ಅಂತ ದಿನದ ಇಪತ್ನಾಲ್ಕು ತಾಸು ತಿರುಗುತ್ತಿದ್ದ ಲೇಶಪ್ಪ ರಾಜಕೀಯದಿಂದ ಸಿಗುತ್ತಿದ್ದ ಮರ್ಯಾದೆ, ಜನ ಮೆಚ್ಚುಗೆ, ಅಲ್ಪ-ಸ್ವಲ್ಪ ಹಣದ ರುಚಿ ಯಾವುದಾದರೂ ಅಧಿಕಾರದ ಗದ್ದುಗೆ ಹಿಡಿಯಬೇಕೆಂಬ ಆಸೆ ಅವನಲ್ಲಿ ಚಿಗುರಿಸಿತು. ಅದರಂತೆ ಗ್ರಾಮ ಪಂಚಾಯಿತಿ ಚುನಾವಣೆಲಿ ಸ್ಪರ್ಧಿಸಿ ಸೋತು ಸುಣ್ಣವಾದ. ಅಷ್ಟಿಷ್ಟು ಕೂಡಿಟ್ಟಿದ್ದ ಕಾಸು ಕಳೆದುಕೊಂಡ. ಇದೇ ಬೇಸರದಲ್ಲಿ ಕುಡಿಯತೊಡಗಿದ. ದುಡಿಯದೇ ದುಕ್ಕುಬಡಿಯದೇ ತಿರುಗುತ್ತಾ ತನ್ನದೆಲ್ಲವನ್ನೂ ಕಳೆದುಕೊಂಡನೇ ಹೊರತು. ತಾನು ನಂಬಿ ಆರಾಧಿಸುತ್ತಿದ್ದ ಪಕ್ಷ ಮಾತ್ರ ಬಿಡಲಿಲ್ಲ.

ಒಂದೊಮ್ಮೆ ಯಾರೋ ಪಕ್ಷದ ಪ್ರಮುಖ ಮುಖಂಡನೊಬ್ಬ ಭಾಷಣ ಮಾಡಲು ಹುಬ್ಬಳ್ಳಿಗೆ ಬರುತ್ತಿದ್ದ ಕಾರಣ ಪಕ್ಷದ ಪ್ರತಿಷ್ಠೆ ತೋರಿಸಿಕೊಳ್ಳಲು ಹೇಗಾದರೂ ಮಾಡಿ ಜನರನ್ನು ತಂದು ಕೂರಿಸುವದಕ್ಕಾಗಿ ಒಬ್ಬ ವ್ಯಕ್ತಿಗೆ ಇಂತಿಷ್ಟು ಹಣ ಅಂತ ಪ್ರತಿಯೋರ್ವ ಕಾರ್ಯಕರ್ತರಿಗೆ ಪಕ್ಷ ಹಣ ಹರಿದು ಹಂಚಿತ್ತು. ಆ ಹಣ ಲೇಶಪ್ಪನಿಗೂ ಬಂದೊದಗಿತ್ತು. ಸಿಕ್ಕಿದೇ ಛಾನ್ಸು ಅಂತ ಪಾರ್ಟಿಯ ಅಷ್ಟೂ ಹಣವನ್ನು ತಾನೇ ಕಬಳಿಸಿಬಿಡುವ ನಿಟ್ಟಿನಲ್ಲಿ ಅವನೂರಿನ ನೂರಾರು ಜನರಿಗೆ ದುಡ್ಡು ನೀಡದೇ ಊಟ ಮಾಡಿಸುವ ಆಸೆ ತೋರಿಸಿ ಕಾರ್ಯಕ್ರಮದ ದಿನ ಅವರನ್ನು ಲಾರಿಯಲ್ಲಿ ತುಂಬಿಕೊಂಡು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಬಿಟ್ಟಿದ್ದ. ದುರಾದೃಷ್ಟವಶಾತ್ ಆ ದಿನ ಮೈದಾನದಲ್ಲಿ ದೊಡ್ಡ ಗಲಾಟೆಯೇ ನಡೆದು ಎಷ್ಟೋ ಜನಗಳಿಗೆ ಗಂಭೀರ ಗಾಯಗಳಾಗಿದ್ದವು. ಲೇಶಪ್ಪನದಂತೂ ಬಲಗಾಲೇ ಮುರಿದಿತ್ತು! ಅವನು ಕರೆದುಕೊಂಡು ಬಂದಿದ್ದ ಹಲವು ಮಂದಿಯ ಪೈಕಿ ಒಂದಷ್ಟು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಲೇಶಪ್ಪ ಎಂಎಲ್ಲೇ ದುಡ್ಡ ತಿಂದ ಅಂತ ಊರ ಜನ ರೊಚ್ಚಿಗೆದ್ದು ಅವನ ಮನೆಗೆ ಮುತ್ತಿಗೆ ಹಾಕಿ ‘ನನಗೆ ಹೀಗಾಗಿದೆ, ಹಾಗಾಗಿದೆ’ ಅಂತ ಇಲ್ಲದ ನೋವು ತೋಡಿಕೊಂಡು ಆಸ್ಪತ್ರೆ ಖರ್ಚು ಅಂತ ಒನ್ ಟು ಡಬಲ್ ಹಣ ಲೇಶಪ್ಪನಿಂದ ದೇಬಿಕೊಂಡರು. ಎಂಎಲ್ಲೇ ಅವರಿಗೆ ಹೀಗಾಗಿದೆ ಅಂತ ಕಷ್ಟ ಹೇಳಿ ಎಷ್ಟೇ ಅವಲತ್ತೂಕೊಂಡರೂ ಕಿಂಚಿತ್ತೂ ನೆರವಿಗೆ ಧಾವಿಸಿರಲಿಲ್ಲ.

ಲೇಶಪ್ಪನ ಹಿಸ್ಟರಿ ಕೇಳುತ್ತಲೇ ಕಾಲಿಗೆ ಸುತ್ತಿದ್ದ ಪ್ಲಾಸ್ಟರ್‌ನ್ನ ಬಿಚ್ಚುತ್ತಾ, ಸೂಜಿಯಿಂದ ಕಾಲಿಗೆ ಚುಚ್ಚಿ ‘ಇಲ್ಲಿ ಅರಿವಿದೆಯಾ? ನೋವಾಗುತ್ತಾ’ ಅಂತೆಲ್ಲಾ ಚಿಕಿತ್ಸೆಗೆ ಸಂಬಂಧಿಸಿದ ಥರಥರದ ಪ್ರಶ್ನೆಗಳನ್ನ ಕೇಳಿ ಉತ್ತರ ಪಡೆಯುತ್ತಾ ಪರೀಕ್ಷಿಸುತ್ತಿದ್ದ ಡಾಕ್ಟರ್‌ನ ಮುಖ ಸಣ್ಣದಾಗುತ್ತಾ ಹೋಯಿತು. ಚಿನ್ನವ್ವಳ ಮಾತನ್ನ ಆಲಿಸಲು ಆಸಕ್ತಿ ಕಳೆದುಕೊಂಡು ಆ ಬಿಳಿ ಕೋಟಿನ ಹುಡುಗಿಗೆ ಕಂಗ್ಲಿಷ್‌ನಲ್ಲಿ ಏನನ್ನೋ ವಿವರಿಸುತ್ತಾ ಬೇಸರದಿಂದ ತುಸು ಬೆವೆತು ತನ್ನ ಕುರ್ಚಿಗೆ ಬಂದು ಕುಳಿತ. ‘ಬಾರಮ್ಮ ಇಲ್ಲಿ ಕುತ್ಕೋ. ಯಾಕೆ ಆಸ್ಪತ್ರೆಗೆ ಬೇಗ ಬರ್ಲಿಲ್ಲ?’ ಅಂದ ಡಾಕ್ಟರ್‌ನ ಪ್ರಶ್ನೆಗೆ ಚಿನ್ನವ್ವ ಕಳವಳಗೊಳ್ಳುತ್ತಾ ‘ರೊಕ್ಕ ಇರಲಿಲ್ರಿ’ ಅಂತ ಉತ್ತರಿಸಿದಳು. ‘ನಿನ್ನ ಜೊತೆ ಯಾರಾದ್ರೂ ಬಂದಿದಾರಾ?’ ಎಂದಿದ್ದಕ್ಕೆ ಇಲ್ಲವೆಂದು ಗೋಣು ಅಲ್ಲಾಡಿಸಿದಳು. ‘ಓಹ್... ಸ್ವಲ್ಪ ಧೈರ್ಯ ತಂದ್ಕೋ. ತುಂಬಾ ದಿನದಿಂದ ಕಾಲಿಗೆ ಹಾಕಿರೋ ಪ್ಲಾಸ್ಟರ್ ತೆಗೆಯದೇ ಇರೋದ್ರಿಂದ ಅವನಿಗೆ ಗ್ಯಾಂಗ್ರಿನ್ ಆಗಿದೆ! ಅವನ ಕಾಲು ಕತ್ತರಿಸಬೇಕು! ಈಗ ಇಲ್ಲದೇ ಹೋದ್ರೆ ಅವ್ನು ಸಾಯ್ತಾನೆ!’ ಅಂತ ಡಾಕ್ಟರ್ ಅನ್ನೋದನ್ನ ಕೇಳಿದ ಚಿನ್ನವ್ವಳಿಗೆ ಮುಗಿಲೇ ಹರಿದು ಬಿದ್ದಂತಾಗಿ ದಿಗ್ಭ್ರಾಂತಳಾಗಿ ಕುಳಿತಳು. ಆ ಬಿಳಿ ಕೋಟಿನ ಹುಡುಗಿ ಲೇಶಪ್ಪನ ಕಾಲಿಗೆ ಹತ್ತಿಯಿಂದ ಯಾವುದೋ ಔಷಧಿ ಹಚ್ಚಿತ್ತಿದ್ದಳು. ಕಸ್ತೂರಿ, ಗೋಡೆಗೆ ಅಂಟಿಸಿದ್ದ ಮನುಷ್ಯರ ಬಣ್ಣ ಬಣ್ಣದ ಕಾಲಿನ ಚಿತ್ರಗಳನ್ನ ತದೇಕಚಿತ್ತದಿಂದ ನೋಡುತ್ತಿದ್ದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT