ಭಾನುವಾರ, ಮಾರ್ಚ್ 29, 2020
19 °C

ಬಿಳಿಯೆಂಬ ಭೂತ ಮತ್ತು ಅಜ್ಜಿಯ ಕಥೆ

ಪಲ್ಲವಿ ಬಿ.ಎನ್. Updated:

ಅಕ್ಷರ ಗಾತ್ರ : | |

ಒಂದು ಹಳ್ಳಿಯಲ್ಲಿ ಶಾಂತಾ ಮತ್ತು ರಾಮು ಎಂಬ ದಂಪತಿ ಇದ್ದರು. ಅವರಿಗೆ ಇಬ್ಬರು ಮಕ್ಕಳು. ನವೀನ ಮತ್ತು ಪಾವನಿ ಎಂದು ಅವರ ಹೆಸರು. ಒಂದು ದಿನ ಶಾಂತಾ ತನ್ನ ಗಂಡನ ಬಳಿ ‘ನಾನು ಹೆರಿಗೆಗೆಂದು ಅಮ್ಮನ ಮನೆಗೆ ಹೋದರೆ ಇಲ್ಲಿ ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ’ ಎಂದು ಕೇಳಿದಳು. ‘ನಾನು ಇದ್ದೀನಲ್ಲ’ ಎಂದ ರಾಮು.

‘ಅವರಿಗೆ ಊಟ, ಸ್ನಾನ ಇತ್ಯಾದಿ ಕೆಲಸಗಳನ್ನು ಮಾಡಲು ನಿಮ್ಮಿಂದ ಆಗುತ್ತಾ? ಅಲ್ಲದೆ ಹೊಲ ಯಾರು ನೋಡಿಕೊಳ್ಳುತ್ತಾರೆ? ಎರಡೂ ಕೆಲಸಗಳು ನಿಮ್ಮೊಬ್ಬರಿಂದಲೇ ಸಾಧ್ಯವಿಲ್ಲ. ನನ್ನ ಜೊತೆ ಮಕ್ಕಳನ್ನೂ ಕರೆದುಕೊಂಡು ಹೋಗುವೆ’ ಎಂದಳು ಶಾಂತಾ. ‘ನೀನು ಹೀಗೆ ಮಾಡಿದರೆ ಅವರ ಶಾಲೆಗೆ ತೊಂದರೆಯಾಗುವುದಿಲ್ಲವಾ’ ಎಂದು ಪ್ರಶ್ನಿಸಿದ ರಾಮು. ನಂತರ ಇಬ್ಬರೂ ಚರ್ಚಿಸಿ, ಶಾಂತಾ ಮರಳಿ ಬರುವವರೆಗೂ ಆಕೆಯ ಸೋದರತ್ತೆ ಪುಟ್ಟಮ್ಮಜ್ಜಿ ಬಂದು ಮಕ್ಕಳನ್ನು ನೋಡಿಕೊಳ್ಳುವುದು ಎಂಬ ತೀರ್ಮಾನ ಆಯಿತು.

ಅದರಂತೆ, ಪುಟ್ಟಮ್ಮಜ್ಜಿ ಮಕ್ಕಳನ್ನು ನೋಡಿಕೊಳ್ಳಲು ಬಂದಳು. ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದ ಪುಟ್ಟಮ್ಮಜ್ಜಿ ಮನೆ ಕೆಲಸಕ್ಕೆ ಮಕ್ಕಳನ್ನು ತೊಡಗಿಸುತ್ತಿದ್ದಳು. ಆ ಅಜ್ಜಿ ಗಟ್ಟಿಗಿತ್ತಿ. ಅಜ್ಜಿಯು ಅಕ್ಕ ಪಕ್ಕದ ಮನೆಯ ಮಕ್ಕಳನ್ನು ಕರೆದು ಊಟ-ತಿಂಡಿ ಕೊಡುತ್ತಿದ್ದರು. ಆದರೆ ನವೀನನಿಗೆ ಈ ಕಪ್ಪು ಅಜ್ಜಿಯ ಬಗ್ಗೆ ಅಸಡ್ಡೆ ಇತ್ತು. ಆದರೂ ಅಮ್ಮ ಮನೆಯಲ್ಲಿ ಇಲ್ಲದ ಕಾರಣ, ಹಸಿವೆಯನ್ನು ನೀಗಿಸಲು ಬೇರೆ ಯಾರೂ ಇಲ್ಲ ಎಂಬ ಕಾರಣಕ್ಕೆ ಹಟ ಮಾಡದೆ ಅಜ್ಜಿ ಹೇಳಿದ ಹಾಗೆ ಕೇಳುತ್ತಿದ್ದ.

ಒಂದು ದಿನ ಅಜ್ಜಿ ರಾಗಿ ರೊಟ್ಟಿ ಮಾಡಿ ತಿಂಡಿ ತಿನ್ನಲು ಕರೆದಳು. ನವೀನ ಬಂದವನೇ, ಪಾವನಿಯ ತಟ್ಟೆಯಲ್ಲಿದ್ದ ಕಪ್ಪು ರೊಟ್ಟಿ ನೋಡಿ ತನಗೆ ಅದು ಬೇಡ, ಬೇರೆ ತಿಂಡಿ ಬೇಕು ಎಂದು ಕೇಳಿದ.

‘ನೋಡು, ಈಗ ಶಾಲೆಗೆ ಟೈಂ ಆಗದೆ. ಬೇಗ ತಿಂದು ಹೊರಡು’ ಎಂದರು ಅಜ್ಜಿ. ‘ಹುಂ ಬಾರೋ ಚೆನ್ನಾಗಿದೆ ರೊಟ್ಟಿ’ ಎಂದಳು ಪಾವನಿ. ‘ಇಲ್ಲ, ಶಾಲೆಗೆ ಹೊತ್ತಾಗುತ್ತದೆ’ ಎಂದು ನೆಪ ಹೇಳಿ ಶಾಲೆಗೆ ಹೊರಟ ನವೀನ. ಇವನು ಯಾಕೆ ತಿಂಡಿ ತಿನ್ನುತ್ತಿಲ್ಲ ಎಂಬುದನ್ನು ತಿಳಿದ ಅಜ್ಜಿ, ‘ಮಾಡ್ತೀನಿ ನಿಂಗೆ’ ಎಂದು ಮನಸ್ಸಿನಲ್ಲಿಯೇ ಅಂದುಕೊಂಡಳು.

ನವೀನ ಶಾಲೆಯಿಂದ ಸಂಜೆ ಹಿಂದಿರುಗಿದಾಗ ಅದೇ ರೊಟ್ಟಿ ಇತ್ತು. ನವೀನ ಎರಡು ರೂಪಾಯಿ ಕೊಟ್ಟು ಹೊರಗಡೆ ಬೋಟಿ ತಿಂದ. ಉಬ್ಬಿದ ಬೋಟಿ ಹೊಟ್ಟೆಯೊಳಗೆ ಎಷ್ಟು ಹೊತ್ತು ಇರುತ್ತದೆ? ಮತ್ತೆ ಹೊಟ್ಟೆ ಹಸಿಯಿತು. ಹಿಂದಿನ ರಾತ್ರಿ ಮಳೆ ಚೆನ್ನಾಗಿ ಹುಯ್ದದ್ದರಿಂದ ವಿದ್ಯುತ್ ಕಂಬ ಬಿದ್ದು ಊರಿನಲ್ಲೆಲ್ಲೂ ವಿದ್ಯುತ್ ಇರಲಿಲ್ಲ. ಬೆಳದಿಂಗಳ ರಾತ್ರಿಯಲ್ಲಿ ಅಜ್ಜಿ ಪಕ್ಕದ ಮನೆಯ ಇಬ್ಬರು ಮಕ್ಕಳನ್ನು, ‘ಬನ್ರೋ, ಕಥೆ ಹೇಳ್ತೀನಿ. ಇವತ್ತು ಒಂದು ದಿನ ಓದದಿದ್ರೆ ಆಗುತ್ತೆ’ ಎಂದು ಕರೆದರು. ನಂತರ ಅಜ್ಜಿ, ಮೂರು ಗೂಡಿನ ಒಲೆಯನ್ನು ಜಗುಲಿಯ ಮೇಲಿಟ್ಟು ಸೌದೆ ತುಂಬಿಸಿದರು. ಮಕ್ಕಳೆಲ್ಲ ಒಂದೇ ತಟ್ಟೆಯಲ್ಲಿ ತಿಂಡಿ ತಿನ್ನಬೇಕು ಎಂದೂ ಹೇಳಿದರು.

ಒಂದೊಂದೇ ರಾಗಿ ರೊಟ್ಟಿ ಹಾಕುತ್ತಾ, ಹುಚ್ಚೆಳ್ಳಿನ ಗೋರಿಕಾಯಿ ಪಲ್ಯವನ್ನು ಮಕ್ಕಳಿಗೆ ನೀಡಿ ಕಥೆ ಹೇಳಲು ಆರಂಭಿಸಿದರು ಅಜ್ಜಿ.

‘ಒಂದು ಊರಿನಲ್ಲಿ ರಾಜನಿಗೆ ಕಪ್ಪು ಮಗು ಹುಟ್ಟುತ್ತದೆ. ಆದರೆ ಮಗುವಿನ ಬಣ್ಣದ ಬಗ್ಗೆ ಯಾರಿಗೂ ಬೇಸರವಿರದೆ ತಮ್ಮ ತಮ್ಮ ಕಾರ್ಯ ನಿರ್ವಹಿಸುತ್ತಿದ್ದರು. ಆ ಯುವ ರಾಜ ತರುಣನಾದಾಗ ತಾನು ಬೆಳ್ಳಗೆ ಆಗಬೇಕೆಂದು ಅನಿಸಿತು. ಅದನ್ನು ತನ್ನ ತಂದೆ–ತಾಯಿಗೆ ತಿಳಿಸಿದ. ಅದಕ್ಕೆ ಅಲ್ಲಿನ ರಾಜ ವೈದ್ಯರೆಲ್ಲ ಬಂದು ಕೇಸರಿ ಹಾಲು, ಕೆಲವು ಎಣ್ಣೆಗಳನ್ನು ಯುವರಾಜನ ಮೇಲೆ ಪ್ರಯೋಗಿಸುತ್ತಾರೆ. ಏನೂ ಪ್ರಯೋಜನವಾಗುವುದಿಲ್ಲ...’

ಅಜ್ಜಿ ಹೀಗೆ ಕಥೆ ಹೇಳುತ್ತಿದ್ದಾಗ ನವೀನನಿಗೆ ಹಸಿವು ತಡೆಯಲಾಗಲಿಲ್ಲ. ಕಥೆಯ ಸ್ವಾರಸ್ಯ, ಕಥೆ ಕೇಳುತ್ತಿದ್ದವರೆಲ್ಲರ ನಗುವಿನ ಕೇಕೆ ನವೀನ ಮನಸೋಲುವಂತೆ ಮಾಡಿತು. ಅಜ್ಜಿ ಬಿಸಿ ಬಿಸಿ ರೊಟ್ಟಿಯನ್ನು ಒಲೆಯ ಮೇಲಿಂದ ನೇರವಾಗಿ ತಟ್ಟೆಗೆ ಹಾಕುತ್ತಿದ್ದಳು. ಗಾಳಿಯು ಹಿತವಾಗಿ ಬೀಸುತ್ತಿದ್ದರಿಂದ ರೊಟ್ಟಿಯ ರುಚಿಯಂತೂ ಅದ್ಭುತ ಅನಿಸಿತು ನವೀನನಿಗೆ. ರೊಟ್ಟಿಯ ಜೊತೆ ಇದ್ದ ಬೆಣ್ಣೆ ಬಾಯಿಯಲ್ಲಿ ಕರಗಿದಂತೆಲ್ಲ ರುಚಿ ಇನ್ನಷ್ಟು ಹೆಚ್ಚುತ್ತಿತ್ತು.

ಅಜ್ಜಿ ಕಥೆ ಮುಂದುವರಿಸಿದಳು: ‘ಅಂದಿನಿಂದ ರಾಜನ ಮಗನಿಗೆ ಬೆಳ್ಳಗಿನ ಆಹಾರ ಪದಾರ್ಥಗಳನ್ನು ಕೊಡುತ್ತಿದ್ದರು. ಕಪ್ಪಗಿನದ್ದು ನೀಡುತ್ತಿರಲಿಲ್ಲ. ಇದು ಬೇರೆಯ ದೇಶದ ಹಣ್ಣು, ನೆರೆ ದೇಶದ ಪಥ್ಯ, ಇದನ್ನು ಮಾಡಿದರೆ ಬೆಳ್ಳಗೆ ಆಗುತ್ತಾರೆ ಎಂದು ಹೇಳಿ ರಾಜನಿಂದ ಹಣ ಕಸಿಯುತ್ತಿದ್ದರು ಪಂಡಿತರು. ಬೆಳ್ಳಗಾಗುವ ಔಷಧಿ ಕಂಡು ಹಿಡಿಯುವವರಿಗೆ ಒಂದಿಷ್ಟು ಭೂಮಿ ನೀಡುವೆನು ಎಂದು ಯುವರಾಜ ಘೋಷಣೆ ಕೂಡ ಮಾಡಿದ. ಸ್ವಲ್ಪ ದಿನಗಳ ನಂತರ ಅಲ್ಲಿಗೆ ಬಂದ ಸನ್ಯಾಸಿಯೊಬ್ಬನಿಗೆ ಈ ವಿಷಯ ತಿಳಿಯಿತು. ತಾನು ಇದಕ್ಕೆ ಪರಿಹಾರ ನೀಡುತ್ತೇನೆ ಎಂದ ಆ ಸನ್ಯಾಸಿ. ರಾಜನ ಸಭೆಗೆ ಬಂದ ಸನ್ಯಾಸಿಯು ರಾಮ, ಕೃಷ್ಣ ಮತ್ತು ಶಿವನ ಚಿತ್ರಗಳನ್ನು ತರಲು ಹೇಳಿದ.’

‘ನೋಡು ಯುವರಾಜ, ಮನುಷ್ಯನಿಗೆ ಮಾನವೀಯತೆ ಮುಖ್ಯವೇ ಹೊರತು ಬಣ್ಣವಲ್ಲ. ನಮ್ಮ ದೇವರ ಬಣ್ಣಗಳು ಕಪ್ಪು. ಅವರು ತಮ್ಮ ಚರ್ಮದ ಬಣ್ಣದ ಬಗ್ಗೆ ಕೀಳರಿಮೆ ಇಟ್ಟುಕೊಂಡವರಲ್ಲ. ಆದರೆ ಅವರ ಕೃತ್ಯಗಳು ಸಕಲರಿಗೂ ಒಳ್ಳೆಯದನ್ನು ಮಾಡಿದವು. ಬಣ್ಣಗಳು ಊಟದ ರುಚಿಯನ್ನು ನಿರ್ಧರಿಸುವುದಿಲ್ಲ. ಅದರೊಳಗಿರುವ ಸತ್ವಗಳು ರುಚಿ ನಿರ್ಧರಿಸುತ್ತವೆ. ಹಾಗೆಯೇ ನಿನ್ನ ಬಣ್ಣಕ್ಕಿಂತ ನಿನ್ನ ಜ್ಞಾನದ ಆಳ ಬಹಳ ಮುಖ್ಯ. ಬೆಳ್ಳಗಾಗುವ ಆಸೆ ಈಡೇರಿಸಿಕೊಳ್ಳಲು ನಿನ್ನ ಸಮಯ, ಹಣ, ಆರೋಗ್ಯ ವ್ಯರ್ಥ ಮಾಡಿಕೊಳ್ಳಬೇಡ ಎಂದು ಹೇಳಿದ ಆ ಸನ್ಯಾಸಿ ರಾಜನ ಸಭೆಯಿಂದ ಹೊರಟ’ ಎಂದು ಅಜ್ಜಿ ತನ್ನ ಕಥೆ ಮುಂದುವರಿಸಿದ್ದಳು.

‘ಯುವರಾಜನಿಗೆ ಸತ್ಯ ತಿಳಿಯಿತು. ನನ್ನನ್ನು ಎಚ್ಚರಿಸಿದಕ್ಕೆ ಧನ್ಯವಾದ. ಈ ವರಹಗಳನ್ನು ಸ್ವೀಕರಿಸಿ ಎಂದು ಸನ್ಯಾಸಿಗೆ ಉಡುಗೊರೆ ನೀಡಲು ಬಂದ. ಸನ್ಯಾಸಿ ಅವುಗಳನ್ನು ನಿರಾಕರಿಸಿ ಹೊರಟು ಹೋದ...’ ಎಂದು ಅಜ್ಜಿ ಕಥೆ ಮುಗಿಸಿದಳು. ಕಥೆ ಮುಗಿದಾಗ ರಾತ್ರಿ ಹತ್ತೂವರೆ ಆಗಿತ್ತು. ‘ಇಷ್ಟು ರುಚಿಯಾದ ಆಹಾರವನ್ನು ಬೇಡವೆಂದು ತಿರಸ್ಕರಿಸಿದೆನಲ್ಲ. ಕಪ್ಪಗಾಗುತ್ತೀನಿ ಎಂಬ ಭಯದಿಂದ ಬೆಳಿಗ್ಗೆ ರೊಟ್ಟಿ ಬೇಡ ಎಂದೆನಲ್ಲ’ ಎಂದು ನವೀನ ತನ್ನ ಮೂರ್ಖತನಕ್ಕೆ ತಾನೇ ಬೈದುಕೊಂಡ. ಅಜ್ಜಿಯ ಕಥೆ ಅವನ ಮನಸ್ಸಿಗೆ ನಾಟಿತ್ತು. ಅದೆಷ್ಟು ರೊಟ್ಟಿಗಳನ್ನು ತಿಂದಿದ್ದನೋ?! ಬೆಳದಿಂಗಳ ರಾತ್ರಿಯಲಿ ಅವನಿಗೇ ತಿಳಿದಿರಲಿಲ್ಲ. ‘ಇಂತಹ ರಾತ್ರಿಗಳು ಮತ್ತೆ ಮತ್ತೆ ಬರಲಿ ದೇವರೆ, ಬಿಳಿ ಬಣ್ಣವೆಂಬ ಭೂತ ಓಡಿ ಹೋಗಲಿ’ ಎಂದುಕೊಂಡು ಮಲಗಿದವನಿಗೆ ನಿದ್ದೆ ಯಾವಾಗ ಹತ್ತಿತೋ ತಿಳಿಯಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)