ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಜೋಡು

Last Updated 4 ಮೇ 2019, 19:31 IST
ಅಕ್ಷರ ಗಾತ್ರ

ಆವತ್ತು ಹಿರಿಯ ಮಗನ ಮಗ ‘ಚಿಂಟು’ ಬಹಳ ಸಂತೋಷದಿಂದ ಶಾಲೆಯಿಂದ ಹಟ್ಟಿಗೆ ಬಂದಾ. ಅದ ನೋಡಿ ತಾತ ವೆಂಕಟಪ್ಪ ‘ಯಾಕೋ ಏನ್ ಸಮಾಚಾರ’ ಎಂದಾಗ ಮೊಮ್ಮಗ ‘ತಾತಾ ಇವತ್ತು ಸ್ಕೂಲ್‍ನಲ್ಲಿ ಹೊಸ ಶೂ ಕೊಟ್ಟರು ನೋಡು’ ಎಂದಿತು. ವೆಂಕಟಪ್ಪ ಎರಡು ಕೈಗಳಿಂದಲೂ ಈಸಿಕೊಂಡು ನೋಡಿ ‘ಜೋಪಾನವಾಗಿ ಇಟ್ಟುಕೋ. ಎಂಗೇ ಬೇಕು ಅಂಗೇ ಅದಾ ಎಳದು ಹಾಳ್ ಮಾಡಬೇಡ’ ಎಂದು ಒಂದ್ ಬೀಡಿಯ ತುಟಿಗೆ ಎಸೆದು ಕಡ್ಡಿಗೀರಿ ಬೆಂಕಿ ತುದಿಯಲ್ಲಿ ಬೀಡಿ ಮೂತಿಯ ಕೆಂಪಗೆ ಮಾಡಿದರು. ತದೇಕ ಚಿತ್ತದಿಂದ ನೋಡ ತೊಡಗಿದರು. ಆಗ ಮೊಮ್ಮಗ ಮತ್ತೊಮ್ಮೆ ಕೂಗಿ ‘ತಾತಾ ಬರೀ ಶೂ ಕೊಟ್ಟಿಲ್ಲ. ಕಾಲುಚೀಲನು ಕೊಟ್ಟವರೇ’ ಎಂದು ತೋರಿಸಿದಾಗ ‘ಆಯಿತು ಓದಿಕೋ ಹೋಗು’ ಎಂದು ಬೀಡಿಹೊಗೆಯ ಜೊತೆಗೆ ಮಾತನಾಡತೊಡಗಿದರು.

“ಅಂದು ಯುಗಾದಿ ಹಬ್ಬ”. ಕೇರಿಯ ಹೈಕಳು ಸುಮಾರು ತಿಂಗಳ ಮೇಲೆ ತಲೆಗೆ ಎಣ್ಣೆ ಕಂಡು ಬಿಸಿನೀರಲ್ಲಿ ಸ್ನಾನ ಮಾಡಿ ಹಬ್ಬದಲ್ಲಿ ಅನ್ನ ಮಾಡುವ ರೂಢಿ ಹಟ್ಟಿಯಲ್ಲಿ ಇದ್ದರಿಂದ ಸಂತೋಷಗೊಂಡಿದ್ದರು. ಹಂಗೇ ಒಂದ್ ಚಡ್ಡಿ ಮತ್ತು ಬನೀನು ಹೊಸದಾಗಿ ದೊರಕಿ ಸಂತಸ ಇನ್ನೂ ವಸಿ ಇಮ್ಮಡಿಯಾಗಿ ಹಟ್ಟಿಮಾರಮ್ಮನ ಗುಡಿಯ ಸಿಂಗಾರ ಮಾಡುತ್ತ ತಮಟೆ ಸದ್ದಿಗಾಗಿ ಕಾಯುತ್ತಾ ಇದ್ದರು.

ಯುಗಾದಿ ಹೊತ್ತಿಗೆ ಸುಣ್ಣ ಕಂಡ ಗೋಡೆಗಳು, ಹೊಸದಾಗಿ ಬಂದಾ ತೆಂಗಿನಗರಿ ಹೊದಿಕೆ ಅಕ್ಕಂದಿರು ಗೋಡೆಗೆ ಬರೆದ ನವಿಲು ಚಿತ್ರಗಳು ಕೇರಿ ಅಂದವನ್ನು ಹೆಚ್ಚಿಸಿದ್ದವು. ನಮ್ಮ ಕೇರಿ ಜನ ಸಂತೆಯ ಬಟ್ಟೆ ತೊಟ್ಟು ಕಡ್ಡಿಗೊಂಬೆಯಂತೆ ಕಾಣುತ್ತಿದ್ದರು. ಮಧ್ಯಾಹ್ನದ ವೇಳೆಗೆ ಸಾರುವಯ್ಯ ಪದ್ಧತಿಯಂತೆ ‘ಹೊಸ ಜೋಡು ಹಿಡಿಯೋರು ಸಂಜೆ ಹೊತ್ತಿಗೆ ಹಟ್ಟಿಮಾರಮ್ಮನ ಗುಡಿ ಹತ್ರ ಇರ್‍ಬೇಕು. ಹಂಗೆಯೇ ಎಲ್ಲಾ ತಪ್ಪದೇ ಆರತಿ ತರ್‍ಬೇಕು’ ಎಂದು ಸಾರಿ ಮುಂದಿನ ಕೇರಿಗೆ ನಡೆದ.

ನಮ್ಮವ್ವ ‘ಮಗಾ ನೀನು ಬಹು ಚೆಂದಾಗಿ ಕುಣಿತಾ ಹಾಕುತೀ. ನೀನು ಹೋಗು ಗೌಡರು ಖುಷಿಯಾದರೇ ನೀನು ಜೋಡು ಹಿಡಿಯಬಹುದು ಅಂದಳು. ಅವಳ ಮಾತಿಗೆ ನನ್ನಾಸೆಯೂ ಸೇರಿ ‘ಆಗಲೀ ಕಣವ್ವಾ’ ಎಂದು ಹಟ್ಟಿಮಾರಮ್ಮನ ಗುಡಿ ತಾವಕ್ಕೆ ಹೋದೆ.

ಹಟ್ಟಿ ಮಾರಮ್ಮನ ಗುಡಿಯ ಮುಂದೆ ನೆಟ್ಟಗೆ ನಿಂತಿದ್ದ ಒಂದು ಕಲ್ಲುಕಂಬಕ್ಕೆ ನಮ್ಮ ಕೇರಿ ಹೈಕಳು-ಹುಡುಗೀರು ಹೊಸದಾಗಿ ಮದುವೆಯಾದೋರು ಒಂದು ಚೊಂಬಲ್ಲಿ ನೀರು, ಬೇವಿನ ಸೊಪ್ಪುನೊಂದಿಗೆ ಬಂದು ತಮ್ಮ ಹರಕೆಯ ನೀರಾ ಅದರ ಮೇಲೆ ಚೆಲ್ಲುತ್ತಿದ್ದರೆ, ಮೇಲುಜಾತಿಯವರು ಹಟ್ಟಿಮಾರಮ್ಮನ ಗುಡಿಯ ಮುಂದೆ ನೀರಾ ಚೆಲ್ಲುತ್ತ ಆ ಎರಡು ನೀರು ಬೀದಿಗೆ ಹರಿದು ಒಂದಾಗಿ ಮಣ್ಣಿನ ಗಮಲ ಹೆಚ್ಚುಮಾಡುತ್ತ ಜನರ ಓಡಾಟಕ್ಕೆ ಕೆಸರಾಗಿ ಸಂಜೆ ತಮಟೆ ಏಟಿಗೆ ಕುಣಿಯಲು ನೆಲ ತಂಪಾಗುವಂತೆ ಕಂಡಿತು. ಆದರೆ ಮನಸ್ಸು ಯಾಕೋ ಏನೋ ಸರಿಯಿಲ್ಲವೆಂದು ಹೇಳತೊಡಗಿದ್ದರು, ನಾವು ಅನ್ನ ಉಣ್ಣೋದೆ ಹಬ್ಬದ ದಿನದಲ್ಲಿ. ಇನ್ನು ನಮ್ಮ ಕಾಲಿಗೆ ಜೋಡು ಕನಸಿನ ಮಾತೇ ಆಗಿತ್ತು. ಅವ್ವಾ ಹೇಳಿದಂಗೆ ಇವತ್ತು ನಾಲ್ಕಾರು ಹೆಜ್ಜೆಗಳು ಚೆಂದಾಗಿ ಹಾಕಿ ಗೌಡರು ಖುಷಿಗೊಂಡರೆ ಜೋಡು ಹಿಡಿಯೋ ಭಾಗ್ಯ ನನ್ನದಾಗಿ ಜೋಡು ಮೆಟ್ಟಿಕೊಂಡು ಊರುಕೇರಿಯ ತಿರುಗಾಡಬಹುದು ಎಂಬ ಆಸೆ ಮೂಡತೊಡಗಿತು.

ನಮ್ಮ ಕೇರಿಯ ಸಿದ್ದ ತಮಟೆಯ ಸದ್ದು ಮಾಡುತ್ತಾ ಕಲಿಕೆಯ ಹೈಕಳು ಜೊತೆಗೆ ಸದ್ದು ಮಾಡುತ್ತ ಹಟ್ಟಿಮಾರಮ್ಮನ ಗುಡಿ ತಾವುಕೆ ಬಂದರು. ಹೈಕಳು ಸಾಲಾಗಿ ಕುಣಿತ ಆರಂಭಿಸಿದರು. ಜೊತೆಗೆ ನಾನೂ ಸೇರಿ ಕುಣಿಯತೊಡಗಿದೆ. ಬೇಸಿಗೆಯ ಸೂರ್ಯ ಮರೆಯಾದ ಮೇಲೆ ಗೌಡರು ಬಂದರು. ಅರೆಘಳಿಗೆ ನಿಂತು ನೋಡಿ ಮಾರಮ್ಮನ ಪೂಜೆಗೆ ಅನುಮತಿ ನೀಡಿ ಮತ್ತು ಕುಣಿಯೋ ಜಾಗಕ್ಕೆ ಬಂದು ನಿಂತು ‘ಕೂಡಗಪ್ಪನ ಮಗ ವೆಂಕಟ ನೀನು ಬಾರೋ’ ಎಂದರು. ಆಗ ಕುಣಿಯುತ್ತಿದ್ದ ಹೈಕಳು ಅರೆಘಳಿಗೆ ನಿಂತರು. ಬಹಳ ಭಕ್ತಿಯಿಂದ ಜೋಡಾ ತಂದಿದ್ದ ಮುನಿಯಪ್ಪ ಆಗಲೇ ಅದಕ್ಕೆ ಪೂಜೆ ಮಾಡಿಸಿದ್ದ. ಈ ಬಾರಿ ಅದು ಯಾರಿಗೇ ದಕ್ಕ ಬಹುದೆಂದು ಯೋಚನೆ ಮಾಡುತ್ತ ಹಿಡಿದು ನಿಂತು ನೋಡುತ್ತಿದ್ದ. ಗೌಡರು ‘ಕೂಡಗಪ್ಪನ ಮಗ ವೆಂಕಟ ಈ ವರ್ಷ ಜೋಡು ಹಿಡಿಯಲಿ’ ಎಂದರು.

ಮುನಿಯಪ್ಪ ‘ಅವ್ವಾ ಮಾರವ್ವಾ ನಿನ್ನ ಮ್ಯಾಲೆ ಗ್ಯಾನ ಇಟ್ಟವಳೇ’ ಬದುಕು ಕಂದಾ ಎನ್ನುತ್ತ ಬಿದಿರು ಕಟ್ಟಿಗೆ ಕಟ್ಟಿದ್ದ ಜೋಡಿನ ಕಡ್ಡಿಯಾ ನನ್ನ ಕೈಗೆ ನೀಡಿದ. ಅಷ್ಟ್ರಲ್ಲಿ ದೀಪದ ಆರತಿ ಹಿಡಿದ ಎಲ್ಲ ಕೇರಿಯ ಹೆಂಗಸರು ಬರತೊಡಗಿದರು. ಗುಂಪು ಗುಂಪಾಗಿ ಸೇರಿದವರು ಜೋಡಾ ಹಿಡಿದ ನನ್ನ ಒಮ್ಮೆ ಗಮನಿಸುತ್ತಿದ್ದರು. ಆಗಾ ಮನಸ್ಸು ‘ನಾನು ಈ ಜೋಡು ಹಿಡಿಯ ಬೇಕಾ’ ಎಂದು ಕೇಳತೊಡಗಿತು. ಆದರೆ ಅವ್ವನ ಮಾತು ನೆನಪಿಗೆ ಬಂದವು. ಆರತಿ ಹಿಡಿದ ನಮ್ಮ ಕೇರಿ ಹೆಂಗಸರು ದೇವಸ್ಥಾನದಿಂದ ದೂರದಲ್ಲೇ ಇದ್ದರು. ನಮ್ಮ ಹೈಕಳು ತಮಟೆ ಲಯಕ್ಕೆ ಹೆಜ್ಜೆ ಹಾಕುತ್ತಿದ್ದರು. ಮಹಾಮಂಗಳಾರತಿ ಮುಗಿದ ನಂತರ ಆರತಿಯೊಂದಿಗೆ ಮೆರವಣಿಗೆ ದೊಡ್ಡಹಟ್ಟಿ ಮಾರಮ್ಮನ ಗುಡಿಗೆ. ಜೋಡು ಹಿಡಿದ ನಾ ಮುಂದೆ, ಆಮೇಲೆ ತಮಟೆಯವರು, ಕುಣಿತದ ಹೈಕಳು ಮತ್ತು ಜನರ ಗುಂಪು ಅವರ ಹಿಂದೆ ಆರತಿಯವರು. ಕೇರಿಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ. ದೇವರ ಜೋಡು ಹಿಡಿದ ನನಗೆ ನಾಚಿಕೆ, ಭಯ ಆರಂಭವಾಯಿತು. ‘ಹೊಲಗೇರಿಯ ಗಂಡು ಜೋಡು ಹಿಡಿದು ಏನ್ ಚೆನ್ನಾಗಿ ಕಾಣಿಸುತ್ತಾನೆ’ ಎನ್ನುತ್ತಿದ್ದರು. ಆದರೆ ‘ಒಂದ್ ಚಡ್ಡಿ, ಬನಿಯನ್ ನನ್ನ ಉಡುಗೆಯಾಗಿತ್ತು.’ ಕಪ್ಪು ಹಣೆಗೆ ಕೆಂಪು ತಿಲಕ ಎದ್ದು ತೋರುತ್ತ ಒಂದ್ ಕೈ ಸುಸ್ತಾದರೆ ಮತ್ತೊಂದ್ ಕೈ ಬದಲಿಸುತ್ತ ಜೋಡಿನ ಕಡ್ಡಿ ಹಿಡಿದು ಸಾಗುತ್ತಿದ್ದೆ. ಆಗ ‘ಒಂದು ಜೊತೆ ಜೋಡಿಗಾಗಿ ಮೌನವಾಗಿ ಮೆರವಣಿಗೆ ಮಾಡಬೇಕಾ’ ಎಂದು ಮನಸ್ಸು ಕೇಳತೊಡಗಿತ್ತು. ದೊಡ್ಡಹಟ್ಟಿ ಮಾರಮ್ಮನ ಗುಡಿಯ ಅನತಿ ದೂರದಲ್ಲಿ ಅಲ್ಲಿನ ಪೂಜಾರಿ ಬಂದು ತೀರ್ಥ ನೀರ್ ಎರಚಿ ಯಾವುದೋ ಮಹತ್ವದ ಕಾರ್ಯ ಮಾಡಿದವಂತೆ ಕುತ್ತಿಗೆಗೆ ಹೂವಿನ ಎಸಳು ಎಸೆದು ಜೋಡು ನಿಂಗೆಯೆಂದಾ. ಅವ್ವಾ ತಕ್ಷಣವೇ ಬಂದು ‘ಕೂಸು ಕಾಲಿಗೆ ಈಗಲೇ ಹಾಕ್ ಬೇಡ. ಹಟ್ಟಿಗೆ ಹೋಗಿ ಒಂದ್ ಪೂಜೆ ಮಾಡಿ ಆಮ್ಯಾಕೆ ಧರಿಸುವಂತೆ’ ಎಂದು ಹೇಳಿದಳು. ಅದು ಎಮ್ಮೆ ಚರ್ಮದಿಂದ ಮಾಡಿದ ಜೋಡು ಆಗಿತ್ತು. ಅದು ಮಾರಮ್ಮನಿಗೆ ಕಳೆದ ವರ್ಷ ಬಲಿ ಕೊಟ್ಟ ಎಮ್ಮೆ ಚರ್ಮ. ಅದಕ್ಕಾಗಿ ಅವ್ವಾ ದೇವರು ಕೋಪ ಮಾಡಿಕೊಳ್ಳಬಾರದೆಂದು ಪೂಜೆ ಮಾಡಿ ಧರಿಸಲು ಸಲಹೆ ನೀಡಿದ್ದಳು.

ನಾಲ್ಕಾರು ದಿನ ಕೇರಿಯಲ್ಲಿ ಈ ವರ್ಷ ಜೋಡು ಹಿಡಿದವ ನಮ್ಮ ವೆಂಕಟ ಎನ್ನುವ ಮಾತು ನಡೆಯುತ್ತ ಇತ್ತು. ಅದಕ್ಕೆ ಕಾರಣ ಗೌಡರು ‘ಯಾರ ಹೆಜ್ಜೆ ಕುಣಿತಕ್ಕೆ ಮನಸೋಲುವರೋ ಅವರಿಗೆ ಆ ವರ್ಷ ಜೋಡು ಹಿಡಿಯುವ ಭಾಗ್ಯ’. ಆದ್ದರಿಂದ ಗೌರವದ ಸಂಕೇತವಾಗಿ ನಾನು ಮೊದಲ ಬಾರಿಗೆ ಜೋಡು ಧರಿಸುತ್ತಿದ್ದೆ.ಆವತ್ತು ರಾತ್ರಿ ನಮ್ಮಪ್ಪ ಕುಡಿದು ಅವ್ವನ ಜೊತೆಗೆ ಜಗಳವಾಡುತ್ತಿದ್ದ. ‘ಬೋಸುಡಿ ಮುಂಡೆ ಹಾದರ ಮಾಡಿ ಮಗನಿಗೆ ಜೋಡು ಕೊಡಿಸಿದ್ಹಾಂಗೆ. ಕಳ್ಳಮುಂಡೆ ನಿನ್ನ ಹಿಪ್ಪನೇರಳೆ ತೋಟದ ಆಟ ನನಗೆ ಗೊತ್ತಿಲ್ವಾ?’ ಎಂದು ತೊದಲು ನುಡಿಯುತ್ತ ಮಲಗಿಕೊಂಡ. ಅವ್ವಾ ನನ್ನ ನೋಡಿ ‘ಕೂಸು ಕುಡಿದು ಮತ್ತು ಏರಿ ಏನೋ ಪೇಚಾಡುತ್ತಿದೆ. ನೀ ಮಲಿಕೋ’ ಎಂದಳು. ಯಾಕೋ ಆ ಜೋಡು ಒಂದ್ ತರಹವಾಗಿ ಕಂಡಿತು. ತಲೆಯೊಳಗೆ ನೂರಾರು ಯೋಚನೆಗಳು ಕುಣಿಯ ತೊಡಗಿದವು. ನಿದ್ದೆ ಅದ್ಯಾವ ಮಾಯದಲ್ಲೋ ಆವರಿಸಿಕೊಂಡಿತು.

ಬೆಳಿಗ್ಗೆ ಜೋಡು ಮೆಟ್ಟಿಕೊಳ್ಳದೇ ಹಂಗೇ ಹೋಗುತ್ತಿದ್ದೆ. ಅಪ್ಪ ‘ಕೂಸು, ಜೋಡು ಮೆಟ್‍ಕಂಡು ತಿರುಗಾಡು. ದೇವರು ಕೋಪ ಮಾಡಿಕೊಂಡರೆ ಕೇರಿಗೆ ಒಳ್ಳೇದಾಗಲ್ಲ’ ಎನ್ನಲು ಅವ್ವಾ ‘ಅದ್ಯಾಕೆ ಹಂಗೇ ಎದುರಿಸ್ತೀಯೇ ಕೂಸುಗೆ’ ಎನ್ನುತ್ತ ಜೋಡಿನ ದೂಳನ್ನು ತನ್ನ ಸೆರಗಿನಲ್ಲಿ ವರಸಿಕೊಟ್ಟಳು. ನಾಲ್ಕಾರು ಹೆಜ್ಜೆ ಕೇರಿಯಿಂದ ಆಚೆ ಬಂದೆ. ಗೌಡ್ರು ‘ವೆಂಕಟ, ಜೋಡು ಮೆಟ್‍ಕೊಂಡು ನಡೆಯೋದು ಎಂಗೇ?’ ಎಂದರು. ನಾ ತಲೆ ತಗ್ಗಿಸಿ ‘ದೇವ್ರ ಪ್ರಸಾದ ಅಲ್ವಾ ಗೌಡ್ರೆ’ ಎಂದೆ. ನಗುತ್ತಾ ಗೌಡ್ರು ಮುಂದೆ ಸಾಗಿದರು. ಎರಡು ಹೆಜ್ಜೆ ಹಾಕಿದೆ. ಗೊಬ್ಬಳಿ ಮುಳ್ಳು ಚಪ್ಪಲಿ ಆಚೆ ಬಂದು ಚುಚ್ಚಿ ‘ಅವ್ವಾ’ ಎಂದೆ. ಗೌಡ್ರು ನಿಂತು ‘ನಿಮ್ಮ ಅವ್ವನಿಗೆ ಹೇಳು. ಇನ್ನೊಂದ್ ಸಾರಿ ದೇವರ ಹರಕೆ ತೀರಿಸು’ ಅಂತ, ಎಂದು ಮುನ್ನಡೆದರು. ಚಪ್ಪಲಿಯಿಂದ ಮುಳ್ಳು ಇರಿದು ಹಾಕೊಂಡು ನಡೆದೆ.

‘ತಾತಾ ತಾತಾ ನೋಡು ನನ್ ಕಾಲಿಗೆ ಶೂ ಹಾಕಿದ್ದೀನಿ. ಚೆನ್ನಾಗಿದೆ ತಾನೇ’ ಎನ್ನುತ್ತ ತೊಡೆಯೇರಿ ಕುಳಿತುಕೊಂಡು ಕಾಲು ಅಲ್ಲಾಡಿಸುತ್ತ ನಂಗೇ ಯುಗಾದಿ ಹಬ್ಬಕ್ಕೆ ಹೊಸ ಚಪ್ಪಲಿ ತಕ್ಕೊಡು ಎನ್ನುತ್ತ ಅಪ್ಪಿಕೊಂಡು ಮುದ್ದುಗರೆಯಿತು. ‘ಆಗಲೀ ಈಗ ಈ ಬೂಟನ್ನು ಜೋಪಾನವಾಗಿ ಮಡಿಕೋ’ ಎಂದು ಮತ್ತೊಂದು ಬೀಡಿ ತುಟಿಗೆ ಎಸೆದು ಎಳೆದು ಆ ಲೋಕದಿಂದ ಈ ಲೋಕಕ್ಕೆ ಬಂದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT