ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದುಕಾ ಪುರಾಣ

Last Updated 22 ಜೂನ್ 2019, 19:30 IST
ಅಕ್ಷರ ಗಾತ್ರ

ನಾನು ಎಲ್ಲರಹಾಗೆ ಸಾಮಾನ್ಯನಲ್ಲ ದೈವಾಂಶ ಸಂಭೂತ ಎಂಬ ವಿಷಯ ನನಗೂ ಇತ್ತೀಚೆಗಷ್ಟೇ ಗೊತ್ತಾಗಿದೆ. ಇದನ್ನು ನಾನು ಈವರೆಗೆ ಯಾರಿಗೂ ಹೇಳಿರಲಿಲ್ಲ. ಈಗ ನಿಮಗೆ ಮಾತ್ರ ಹೇಳುತ್ತಿದ್ದೇನೆ. ದಯವಿಟ್ಟು ನೀವು ಯಾರಿಗೂ ಹೇಳಬೇಡಿ!

ಇದು ಶುರುವಾದದ್ದು ಹೀಗೆ. ದೇವತೆಗಳು ಚಪ್ಪಲಿಗಳನ್ನು ಹಾಕಿರುವುದಿಲ್ಲ. ಗಮನಿಸಿದ್ದೀರಾ? ಇದೇಕೆ ಎಂದು ನಿಮಗೆ ಗೊತ್ತೇ? ನೆಲದೊಂದಿಗೆ ಸಂಪರ್ಕವಿದ್ದಾಗ ಮಾತ್ರ ಸ್ಟಾಟಿಕ್ ಎನರ್ಜಿ ಕೆಲಸ ಮಾಡುತ್ತದೆ! ಆಗಲೇ ದೇವತೆಗಳು ವರ ಅಥವಾ ಶಾಪ ಕೊಡಲು ಸಾಧ್ಯ. ಬರಿಗಾಲಲ್ಲಿರುವ ಎಲ್ಲರಿಗೂ ಇದು ಅನ್ವಯಿಸುವುದಿಲ್ಲ ಸ್ವಾಮಿ!

ಚಿಕ್ಕಂದಿನಿಂದಲೂ ನನಗೂ ಚಪ್ಪಲಿಗೂ ಅಷ್ಟಕ್ಕಷ್ಟೇ. ಅದೆಂತಹ ಚಪ್ಪಲಿಗಳನ್ನು ಕೊಡಿಸಿದರೂ ಆರು ತಿಂಗಳಲ್ಲಿ ಕಿತ್ತು ಚುಪ್ಪಾಚೂರಾಗುತ್ತಿದ್ದವು. ನನ್ನ ತಾಯಿ ನಿನ್ನ ಕಾಲಲ್ಲಿ ಕತ್ತರಿ ಇರಬೇಕು ಅಂತಾ ಸದಾ ಬಯ್ಯುತ್ತಿದ್ದಳು. ಹಾಗಾಗಿ ಬಹಳಷ್ಟು ಬಾರಿ ಬರಿಗಾಲಲ್ಲೇ ನಡೆದು ಹೋಗುತ್ತಿದ್ದೆ. ಈ ನಡುವೆ ಸೈನ್ಯಕ್ಕೆ ಸೇರಬೇಕು ಅಂತ ಕೂಡಾ ಹೋಗಿದ್ದೆ. ನನ್ನ ಎತ್ತರ, ನಿಲುವು ನೋಡಿದ ಅಧಿಕಾರಿ 'ಏಕ್ ಬಾರ್‌ ಚಲ್‌ ಕೇ ದಿಖಾನ' ಅಂದ. ನಾನು ಹಿಂದಿನ ದಿನ ತಾನೆ ಹೊಸಾ ಚಪ್ಪಲಿ ಖರೀದಿಸಿದ್ದೆ. ಅದು ಯಕ್ಕ-ಮಕ್ಕಾ ಕಡಿದು ಕಾಲಿಗೆ ಗಾಯವಾಗಿ ಕುಂಟುತ್ತಿದ್ದೆ. ನನ್ನ ಕುಂಟುಗಾಲನ್ನು ನೋಡಿದ ಅಧಿಕಾರಿ 'ಠೀಕ್ ಸೆ ಚಲ್ನಾ ನಹೀ ಆತಾ. ಚಲೋ ತುಮ್‌ ಫೇಲ್' ಅಂದು ಓಡಿಸಿಬಿಟ್ಟ. ದೈವ ಸಮಾನನೊಬ್ಬ ಸೈನಿಕನಾಗುವುದು ವಿಧಿಗೆ ಇಷ್ಟವಿರಲಿಲ್ಲ ಅನ್ನಿಸುತ್ತದೆ!

ನಾನೊಬ್ಬ ಮಹಾಪುರುಷನೆಂಬ ಸೂಚನೆಗಳ ಆರಂಭವಾದದ್ದು ಹೀಗೆ! ಕೈಲಾಸ-ಮಾನಸ ಸರೋವರ ಯಾತ್ರೆಯಲ್ಲಿದ್ದಾಗ 11 ಅಂಗುಲದ ಟ್ರೆಕ್ಕಿಂಗ್ ಶೂ ಹಾಕಿ ಮಾನಸ ಸರೋವರದ ಬಳಿ ನಿಂತಿದ್ದೆ. ಅಲ್ಲಿಗೆ ಗುಂಪುಗುಂಪಾಗಿ ಬಂದ 10-15 ಟಿಬೆಟನ್ ಹೆಂಗಸರು ತಮ್ಮಲ್ಲಿದ್ದ ಮಣಿಸರ, ಬಳೆ, ಉಂಗುರಗಳನ್ನು ಕೊಳ್ಳುವಂತೆ ಪೀಡಿಸುತ್ತಿದ್ದರು. ನನ್ನ ಬಳಿಗೂ ಬಂದ ಒಬ್ಬಾಕೆ ಅಚಾನಕ್ಕಾಗಿ ನನ್ನ ಶೂ ನೋಡಿದವಳೇ ಮಿಡುಕಿ ಬಿದ್ದು ತನ್ನ ಸಂಗಡಿಗರನ್ನೆಲ್ಲಾ ಕರೆದು ನನ್ನ ಕಾಲು ತೋರಿಸುತ್ತಾ ಏನೋ ಹೇಳತೊಡಗಿದ್ದಳು. ಅವರೆಲ್ಲಾ ನನ್ನ ಬಳಿ ಬಂದು ಪ್ಯಾಂಟು ಸರಿಸಿ ಶೂ ಬಿಚ್ಚುವಂತೆ ಸಂಜ್ಞೆ ಮಾಡಿ ನನ್ನ ದೊಡ್ಡಕಾಲನ್ನು ಮುಟ್ಟಿಮುಟ್ಟಿ ನೋಡುತ್ತಾ ಟಿಬೆಟನ್ ಭಾಷೆಯಲ್ಲಿ ಮಾತನಾಡಿಕೊಂಡು ಎಲ್ಲರೂ ಹಿಂದೆ ತಿರುಗಿ ತಿರುಗಿ ನೋಡುತ್ತಾ ವ್ಯಾಪಾರವನ್ನೂ ಮಾಡದೇ ಹೋಗೇಬಿಟ್ಟರು.

ಪುಣೆಯ ಬಳಿ ಇರುವ ಪಂಚವಟಿ ಎಂಬ ಸ್ಥಳಕ್ಕೆ ವರ್ಷದ ಹಿಂದೆ ಹೋಗಿದ್ದೆ. ಶ್ರೀರಾಮಚಂದ್ರ, ಸೀತೆ ಮತ್ತು ಲಕ್ಷ್ಮಣರೊಂದಿಗೆ ತನ್ನ ವನವಾಸದ ಕಾಲಾವಧಿಯನ್ನು ಅಲ್ಲೇ ಕಳೆದನಂತೆ ಮತ್ತು ಭರತ ಅಣ್ಣನ ಪಾದರಕ್ಷೆಗಳನ್ನು ಪಂಚವಟಿಯಿಂದಲೇ ಅಯೋಧ್ಯೆಗೆ ಕೊಂಡೊಯ್ದದ್ದು ಎಂದು ಹೇಳಲಾಗುತ್ತದೆ. ಆವತ್ತು ನಾನೂ ಕೂಡಾ ಚಪ್ಪಲಿ ತೆಗೆದಿಟ್ಟು ಗೋದಾವರಿ ನದಿಗೆ ಇಳಿದು ನಮಸ್ಕರಿಸಿ ಮೇಲೆ ಬಂದೆ. ವಾಪಾಸಾಗುವಷ್ಟರಲ್ಲಿ ನನ್ನ ಚಪ್ಪಲಿ ಕಾಣೆಯಾಗಿತ್ತು. ಎಷ್ಟು ಹುಡುಕಾಡಿದರೂ ಸಿಗಲಿಲ್ಲ. ನಮ್ಮ ಜೊತೆಗಿದ್ದ ಗೈಡ್ ಹೇಳಿದ ಇಲ್ಲಿ ಯಾರದ್ದೂ ಚಪ್ಪಲಿ ಕಳೆದು ಹೋಗುವುದಿಲ್ಲ ನಿಮ್ಮದು ಕಳೆದಿದೆ ಎಂದರೆ ಏನೋ ವಿಶೇಷವಿದೆ. ನೀವು ಸಾಮಾನ್ಯರಲ್ಲ ಸಾರ್‌ ಅಂದ. ನನ್ನ ಜೊತೆಗಾರರೆಲ್ಲಾ 'ಸಾರ್ ಬಹುಶಃ ರಾಮನೋ ಅಥವಾ ಲಕ್ಷ್ಮಣನೋ ತಗೊಂಡು ಹೋಗಿರಬೇಕು' ಅಂದರು. ಇದು ಖಾತ್ರಿಯಾದದ್ದು ಇನ್ನೊಂದು ಸಂದರ್ಭದಲ್ಲಿ.

ಆರು ತಿಂಗಳ ಹಿಂದೆ ಪುಷ್ಕರಕ್ಕೆ ಹೋಗಿದ್ದೆ. ಅಲ್ಲಿ ಒಂದೆಡೆ ಚಪ್ಪಲಿ ಬಿಟ್ಟು ಪುಷ್ಕರ ಮತ್ತು ರಾಮಾಯಣ-ಮಹಾಭಾರತಗಳ ಪೌರಾಣಿಕ ಸಂಬಂಧದ ಬಗ್ಗೆ ಯೋಚನೆ ಮಾಡುತ್ತಾ ಪುಷ್ಕರಿಣಿಗೆ ಇಳಿದು ನಮಸ್ಕರಿಸಿ ಮೇಲೆ ಬಂದು ಬ್ರಹ್ಮನ ದೇವಸ್ಥಾನ ನೋಡಿ ಬರುವ ವೇಳೆಗೆ ನನ್ನ ಚಪ್ಪಲಿ ಮತ್ತೆ ನಾಪತ್ತೆಯಾಗಿತ್ತು. ನಮ್ಮ ಗೈಡ್‍ ಅಂದ, 'ಸಾರ್‍ ಇದರ್ ಕಿಸೀಕಾ ಭೀ ಚಪ್ಪಲ್‌ ಚೋರಿ ನಹೀ ಹೋತಾ.' ಆದರೆ, ನನ್ನ ಚಪ್ಪಲಿ ಮಾತ್ರ ಕಳುವಾಗಿತ್ತು. ಎಲ್ಲರ ಚಪ್ಪಲಿಗಳೂ ಅನಾಥವಾಗಿ ಬಿದ್ದು ಬೇಜಾರಾಗಿದ್ದವು. ನನಗೆ ಬೇಕಾದ 11 ಸೈಜಿನ ಚಪ್ಪಲಿ ಸಿಗದೇ ಇಡೀ ದಿನ ಬರಿಗಾಲ ಸುತ್ತಾಟವಾಯ್ತು. ನನಗೇನೋ ಚಪ್ಪಲಿ ಪ್ರಕರಣಗಳಲ್ಲಿ ಅನುಮಾನ ಶುರುವಾಗಿತ್ತು.

ಒಂದೆರಡು ತಿಂಗಳಿನಿಂದ ಕಾಲಿನ ಗೌಟ್‍ ಅಥವಾ ಸಂಧಿವಾತದ ತೊಂದರೆ ಆರಂಭವಾಗಿದೆ. ಇದನ್ನು ನೋಡಿದ ಒಬ್ಬ ಸೀನಿಯರ್ ಡಾಕ್ಟರ್, 'ಅಪ್ಪಾ ನೀನು ಬರಿಗಾಲಲ್ಲಿ ನಡೆಯಬೇಕು. ಈ ಥರಾ ತೊಂದರೆ ಬಹಳ ಕಡಿಮೆ ಜನಕ್ಕೆ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ನೀನೊಬ್ಬ!' ಅಂದರು. ದೈವ ನಿರ್ಣಯ ಅಂತ ಬರಿಗಾಲಲ್ಲಿ ನಡೆಯಲು ಶುರು ಮಾಡಿದ ಮೇಲೆ ಆರಾಮ ಅನ್ನಿಸುತ್ತಿದೆ. ಕೊನೆಗೆ ನನಗೆ ಖಾತ್ರಿಯಾಯಿತು, ಯಾವುದೋ ಶಾಪದ ಕಾರಣವಾಗಿ ನಾನು ಮನುಷ್ಯನಾಗಿ ಭೂಮಿಯಲ್ಲಿ ಹುಟ್ಟಿರಬೇಕು. ಅದರಿಂದಲೇ ದೇವತೆಗಳ ಹಾಗೆ ಬರಿಗಾಲಲ್ಲಿ ಇರಬೇಕು ಅಂತ. ಹಿಮಾಲಯದಲ್ಲಿ ದೊಡ್ಡಪಾದದ ಗುರುತು ಕಂಡೆವು ಅಂತ ನೇಪಾಳಿ ಸೈನಿಕರು ಇತ್ತೀಚೆಗೆ ಹೇಳಿಕೆ ಕೊಟ್ಟಿದ್ದರಲ್ಲ ಸ್ವಾಮಿ. ಅದು ನನ್ನಂತಹ ದೇವಾನುದೇವತೆಗಳದ್ದು ಅನ್ನೋ ವಿಷಯ ಈಗ ನಿಮ್ಮ ಮನಸ್ಸಿಗೂ ಬಂದಿರಬೇಕು.

ಇದನ್ನೆಲ್ಲಾ ನನ್ನ ಗುರುಗಳ ಬಳಿ ಹೇಳಿದಾಗ ಅವರಂದರು, 'ನೀನು ಅಸಾಮಾನ್ಯ ಕಣಪ್ಪ. ನಿನ್ನ ಕಾಲಲ್ಲಿ ಚಕ್ರವಿರಬೇಕು. ಅದಕ್ಕೆ ನಿಲ್ಲದೇ ಸುತ್ತುತ್ತೀಯ. ಇನ್ನು ನೀನು ಬರಿಗಾಲಲ್ಲೇ ನಡೆಯಬೇಕು ಅನ್ನೋದು ದೈವನಿಯಾಮಕ ಕಣಯ್ಯ. ನೀನು ಯಾವುದೋ ದೇವತೆಯ ಅಪರಾವತಾರ' ಅಂದರು. ಈ ವಿಷಯ ಜನರಿಗೆ ಗೊತ್ತಾದರೆ ಸುಮ್ಮನೆ ಬಂದು ತೊಂದರೆ ಕೊಡುತ್ತಾರೆ ಅಂತ ಯಾರಿಗೂ ಹೇಳಿಲ್ಲ. ನಿಮಗೆ ಮಾತ್ರ ಹೇಳಿದ್ದೇನೆ. ನೀವೂ ಯಾರಿಗೂ ಹೇಳಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT