ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ: ಕೆ.ಪಿ. ಉಮ್ಮರ್

Last Updated 29 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಕೋಳಿಕ್ಕೋಡಿನಿಂದ ಪ್ರಕಟವಾಗುತ್ತಿದ್ದ ಮಕ್ಕಳ ವಾರಪತ್ರಿಕೆಯೊಂದರಲ್ಲಿ ಸಬ್‍ಎಡಿಟರ್ ಆಗಿ ಕೆಲಸ ಮಾಡುತ್ತಿದ್ದ ಕಾಲವದು.

ಅಷ್ಟೇನೂ ಅನುಕೂಲಕರವಲ್ಲದ ಆಫೀಸ್. ಕೋಣೆಯ ತುಂಬಾ ದೂಳು ತಿನ್ನುತ್ತಿರುವ ಪತ್ರಿಕೆಗಳ ಕಟ್ಟು. ರಾತ್ರಿ ಪೂರ್ತಿ ನೆತ್ತರಪಾರ್ಟಿಗೆಂದೇ ಬರುವ ಸೊಳ್ಳೆಗಳ ಅಟ್ಟಹಾಸ. ಅಸ್ತವ್ಯಸ್ತವಾಗಿ ಬಿದ್ದಿರುವ ಫರ್ನಿಚರ್‌ಗಳು. ಇದರ ನಡುವೆಯೇ ನನ್ನ ಕೆಲಸ ಮತ್ತು ನಿದ್ದೆ.

ಮೈ ತುಂಬಾ ಕೆಲಸ ಬಿದ್ದಿದ್ದ ಯಾವುದೋ ಒಂದು ಮುಹೂರ್ತದಲ್ಲಿ ಫೋನ್ ರಿಂಗಾಯಿತು.

‘ಹಲೋ, ನಾನು ಕೆ.ಪಿ. ಉಮ್ಮರ್.’

‘ಯಾರು?’

‘ಸಿನಿಮಾದಲ್ಲಿ ಕೆಲಸ ಮಾಡುವ ಕೆ.ಪಿ. ಉಮ್ಮರ್.’

‘ಲೋ ಖಾದರ್, ಇವತ್ತು ಮುಗಿಸಬೇಕಾದ ಕೆಲಸ ತುಂಬಾ ಇದೆ ಮಾರಾಯಾ. ನಿನ್ನ ಮಿಮಿಕ್ರಿ ಎಲ್ಲ ಇನ್ನೊಮ್ಮೆ ಕೇಳಿಸಿಕೊಳ್ತೀನಿ. ಸಂಜೆ ಸಿಗೋಣ ಆಯ್ತಾ.’

ಖಾದರನ ತಮಾಷೆಯಿಂದಾಗಿ ಚೂರು ಹಗುರಾಗಿ ನನ್ನ ಮುಖದಲ್ಲಿ ನಗು ಮೂಡಿತ್ತು.

ಫೋನ್ ಇಟ್ಟು ಕೆಲಸದ ಕಡೆಗೆ ತಿರುಗುವಾಗ ಪುನಃ ರಿಂಗ್.

‘ಹಲೋ, ತಾಲೋಲಂ ಬಾಲಪತ್ರಿಕೆಯ ಆಫೀಸ್ ತಾನೇ ಇದು?’

ಥೋ, ಪುನಃ ಕೆ.ಪಿ. ಉಮ್ಮರ್.

ನನಗೆ ಕೆ.ಪಿ. ಉಮ್ಮರ್ ಸಿನಿಮಾದ ಕೆಲವು ಡೈಲಾಗುಗಳು ನೆನಪಾದವು.

‘ನೀವು ತಪ್ಪು ತಿಳಿದುಕೊಂಡಿದ್ದೀರಾ. ನಾನು ನಿಜಕ್ಕೂ ಕೆ.ಪಿ ಉಮ್ಮರ್. ಈಗ ಮಹಾರಾಣಿ ಹೋಟೆಲಲ್ಲಿದ್ದೇನೆ.’ ಆ ಕಡೆಯಿಂದ ಕೆ.ಪಿ. ಉಮ್ಮರ್ ಮಾತು ಮುಂದುವರಿಸಿದರು.

ಇಲ್ಲಿಯ ತನಕ ಒಮ್ಮೆಯೂ ಕಂಡು ಮಾತಾಡಿಸಿ ಪರಿಚಯವಿಲ್ಲದ ಕೆ.ಪಿ. ಉಮ್ಮರ್ ಎಂಬ ಸಿನಿಮಾ ನಟ ನನ್ನ ಜೊತೆ ಫೋನಲ್ಲಿ ಮಾತಾಡುತ್ತಿದ್ದಾರೆ. ಭಗವಂತಾ ಇದು ನಿಜವೇನು?

ಉಮ್ಮರ್ ಮಾತು ಮುಂದುವರಿಸಿದರು, ‘ನಿಮ್ಮ ಪತ್ರಿಕೆಯಲ್ಲಿ ಒಂದು ಕಾರ್ಟೂನು ಬರುತ್ತಲ್ಲ, ಪಂಕ್ರು ಮತ್ತು ಚಂಕ್ರು. ನನಗದು ತುಂಬಾ ಇಷ್ಟ. ಇತ್ತೀಚೆಗೆ ನಾನು ಅಮೆರಿಕಾಗೆ ಹೋಗಿದ್ದೆ. ಹಾಗಾಗಿ ಎರಡು ಸಂಚಿಕೆಗಳು ಮಿಸ್ಸಾದವು. ಆ ಎರಡು ಸಂಚಿಕೆಗಳು ಈಗ ಸಿಗೋದಕ್ಕೆ ಚಾನ್ಸ್ ಇದೆಯಾ? ಇದೆ ಅಂತಾದರೆ ನಾನು ಜನ ಕಳಿಸುತ್ತೇನೆ.’

ನನಗೆ ದಿಕ್ಕೇ ತೋಚಲಿಲ್ಲ. ಚಂಕ್ರು ಮತ್ತು ಪಂಕ್ರುವನ್ನು ನನ್ನಿಷ್ಟದ ನಟ ಕೆ.ಪಿ. ಉಮ್ಮರ್ ಬಿಡದೆ ಓದುತ್ತಾರೆಂದರೆ! ಪಂಕ್ರುವಿನ ಮೇಲೆ ನಿರಂತರ ಆಕ್ರಮಣ ಮಾಡುವ ಚಂಕ್ರು. ಆದರೆ ಪ್ರತಿ ಸಲವೂ ನಿಷ್ಕಳಂಕ ಪಂಕ್ರು ಬಚಾವಾಗುವ ಬಗೆ. ಇದನ್ನು ತಮಾಷೆ ಮೂಲಕ ಹೇಳುವ ಚಂಕ್ರು ಮತ್ತು ಪಂಕ್ರು ಎಂಬ ಚಿತ್ರಕತೆ. ಅಭಿಮಾನಿಗಳು ಬೇಕಾದಷ್ಟಿದ್ದಾರೆ. ಆದರೆ ಕೆ.ಪಿ. ಉಮ್ಮರ್ ತರದ ನಟನೊಬ್ಬ ನಿರಂತರ ಓದುಗ ಅಂದರೆ ನಂಬುವುದಕ್ಕೇ ಆಗುತ್ತಿಲ್ಲವಲ್ಲ. ನಾನು ಕನಸು ಕಾಣುತ್ತಿಲ್ಲ ತಾನೇ?

ನಾನಂದೆ, ‘ಉಮ್ಮುಕ್ಕಾ, ಕಳೆದೆರಡು ಸಂಚಿಕೆಗಳನ್ನು ನಾನೇ ತಂದುಕೊಡುತ್ತೇನೆ, ಈಗಲೇ.’

ಸಂತೋಷ ಮತ್ತು ಆತಂಕಗಳು ಒಟ್ಟೊಟ್ಟಿಗೆ ಬಂದಪ್ಪಳಿಸಿದವು.

ಅದೆಷ್ಟು ಸಿನಿಮಾಗಳು!

ಮಹಲುಗಳಿಂದ ಕಟ್ಟಿದ್ದ ಪೂದಪ್ಪಾರೆಯ ರೂಪಾ ಟಾಕೀಸು. ಆ ಸೀ ಕ್ಲಾಸ್ ಥಿಯೇಟರಲ್ಲಿ ಕಪ್ಪು ಬಿಳುಪಿನ ಡೈಲಾಗುಗಳ ಅಬ್ಬರ. ಪ್ರೇಮ್ ನಝೀರ್ ಜೊತೆಗಿನ ನಿರಂತರ ಸ್ಟಂಟ್ ಸೀನುಗಳು. ಕೊನೆಗೆ ಬರುವ ಚಡ್ಡಿ ಮತ್ತು ಉದ್ದ ಟೊಪ್ಪಿಯ ಪೊಲೀಸರು. ಕೆಲವೊಮ್ಮೆ ಪೊಲೀಸರಿಂದ ಅರೆಸ್ಟಾಗುತ್ತಿದ್ದ ಇನ್ನು ಕೆಲವು ಸಿನಿಮಾಗಳಲ್ಲಿ ಪ್ರೇಮ್ ನಝೀರ್ ಕೈಯಿಂದ ಗುಂಡೇಟು ತಿಂದು ಕಪ್ಪು ಬಿಳುಪು ನೆತ್ತರಿನಲ್ಲಿ ಮುಳುಗಿ ಕ್ಷಮೆ ಕೇಳುತ್ತಾ ಸಾಯುವ ನನ್ನ ನೆಚ್ಚಿನ ನಟ ಉಮ್ಮುಕ್ಕಾ. ಮುಂದೆ ಕಲರ್ ಸಿನಿಮಾಗಳು ಬಂದ ಮೇಲೆ ನಗರದ ಏಸಿ ಥಿಯೇಟರುಗಳಲ್ಲಿ ನಾಯಕನಾಗಿಯೂ ಮಿಂಚಿದ ನಟ.

ಹೋಟೆಲ್ ಮಹಾರಾಣಿಯ ಸ್ಪೆಷಲ್ ಏಸಿ ರೂಮಿನ ಮುಚ್ಚಿದ ಬಾಗಿಲ ಮುಂದೆ ನಿಂತು ಪುನಃ ರೂಂ ನಂಬರ್ ನೋಡಿಕೊಂಡೆ. ಎದೆಬಡಿತ ಇನ್ನೂ ಹತೋಟಿಗೆ ಬಂದಿಲ್ಲ. ಖಾದರ್ ಶಬ್ದ ಬದಲಿಸಿ ಫೋನ್ ಮಾಡಿದ್ದಿರಬಹುದಾ ಎಂದು ಆಗಲೂ ಸಂಶಯ. ಹಾಗಾಗದಿರಲಿ ಎಂದು ಪ್ರಾರ್ಥಿಸುತ್ತಾ ಬಾಗಿಲನ್ನು ಮೆಲ್ಲನೆ ತಟ್ಟಿದೆ.

ಬಾಗಿಲು ತೆರೆದಾಗ ಕಣ್ಣೆದುರು ಕಂಡದ್ದು, ಸುರಸುಂದರ ಕೆ.ಪಿ. ಉಮ್ಮರ್! ಪ್ರಾಯ ಇಷ್ಟಾದರೂ ಸೌಂದರ್ಯಕ್ಕೆ ಚೂರೇ ಚೂರು ಮುಪ್ಪಡರಿಲ್ಲ. ಸ್ವಲ್ಪ ದೊಡ್ಡದೇ ಆಗಿದ್ದ ಹಳದಿ ಮತ್ತು ಕೆಂಪು ಬಣ್ಣದ ಟರ್ಕಿ ಟವೆಲ್ ಹೆಗಲಲ್ಲಿತ್ತು. ಆ ಬಣ್ಣಗಳ ನಡುವೆ ಪ್ರಭಾತ ಸೂರ್ಯನಂತೆ ನಿಂತಿರುವ ಉಮ್ಮರ್. ಅಬ್ಬಾ, ಆ ಕಣ್ಣುಗಳ ತೇಜಸ್ಸು!

ತಾಲೋಲಂ ಪತ್ರಿಕೆಯಿಂದ ಎಂದು ಹೇಳಿದಾಗ ಸಿನಿಮಾದ ಅದೇ ಶೈಲಿಯಲ್ಲಿ ತುಟಿಗಳನ್ನು ಸಡಿಲಿಸದೆ ‘ಬನ್ನಿ’ ಎಂದರು.

ಕುರ್ಚಿ ತೋರಿಸಿ ಕುಳಿತುಕೊಳ್ಳಲು ಸನ್ನೆ ಮಾಡುತ್ತಾ, ‘ನನಗೆ ಚಂಕ್ರು ಮತ್ತು ಪಂಕ್ರು ತುಂಬಾ ಇಷ್ಟ. ಶೂಟಿಂಗಲ್ಲಿ ಎಷ್ಟೇ ಮುಳುಗಿದ್ದರೂ ಮಾರ್ಕೆಟಿನಿಂದ ಒಂದು ಕಾಪಿ ಹೇಗಾದರು ಮಾಡಿ ಕೊಂಡುಕೊಳ್ಳುವೆ. ಮದರಾಸಿನ ರೈಲ್ವೇ ಸ್ಟೇಷನ್ನಲ್ಲೂ ನಿಮ್ಮ ಪತ್ರಿಕೆ ಸಿಗುತ್ತದೆ.’

ಅರೆ ಕ್ಷಣದ ನಂತರ ಮಾತು ಪೂರ್ತಿ ಮಾಡಿದರು, ‘ಎಲ್ಲ ಕತೆಗಳಲ್ಲೂ ದುಷ್ಟರು ಸೋಲುವುದನ್ನು ಕಾಣುವಾಗ ಚೂರು ನೆಮ್ಮದಿ ಸಿಗುತ್ತದೆ.’

ಹೌದು, ಬ್ಲಾಕ್ ಆ್ಯಂಡ್ ವೈಟ್ ಸಿನಿಮಾ ಕಾಲದಲ್ಲಿ ನಾವು ಕೂಡ ಉಮ್ಮುಕ್ಕಾರನ್ನು ದುಷ್ಟನಾಗಿಯೇ ಕಾಣುತ್ತಿದ್ದೆವು. ಅವರ ಸೋಲಿನಲ್ಲಿ ನಾವು ನೆಮ್ಮದಿ ಕಾಣುತ್ತಿದ್ದೆವು.

ಅನುಭವ ಜ್ಞಾನದ ಅವರ ಮಾತುಗಳು ಮುಂದುವರಿಯುತ್ತಲೇ ಹೋಯಿತು. ಮಹತ್ತರವಾದ ಹಲವು ಕ್ಲಾಸಿಕ್ ಕಾದಂಬರಿಗಳನ್ನು ಮತ್ತು ಕಥೆಗಳನ್ನು ಅವರು ಓದಿಕೊಂಡಿದ್ದಾರೆ. ಅವುಗಳನ್ನು ಹೃದಯದಲ್ಲೂ ವೈಜ್ಞಾನಿಕ ಪುಸ್ತಕಗಳನ್ನು ಕಪಾಟಿನಲ್ಲೂ ಜೋಡಿಸಿಟ್ಟಿದ್ದಾರೆ.

ಮಾತುಕತೆಯ ನಡುವೆ ಅವರು ಬರೆದ ಕೆಲವು ಕತೆಗಳನ್ನು ನಾನು ನೆನಪಿಸಿದೆ.

‘ನನ್ನ ಕತೆಗಳಲ್ಲಿ ವಿಲನ್ ಆಗಲಿ ನಾಯಕನಾಗಲಿ ಇರುವುದಿಲ್ಲ. ನಾನು ಮಿತಿಗಳ ನಡುವೆ ಬರೆಯುವ ಒಬ್ಬ ಬರಹಗಾರ. ಸಿನಿಮಾದಲ್ಲಿ ಹಲವು ಖಳನಾಯಕನ ಪಾತ್ರಗಳನ್ನು ಮಾಡಿದ್ದರಿಂದಲೇ ಇರಬಹುದು, ನಿಜ ಜೀವನದಲ್ಲಿ ವಿಲನ್ ತರಹ ಬಾಳಬೇಕು ಎಂಬ ನನ್ನ ಕನಸು ನನಸಾಗಲೇ ಇಲ್ಲ.’

‘ಉಮ್ಮುಕ್ಕಾ, ನಾಯಕನ ಕೈಯಿಂದ ಹೊಡೆತ ಅಥವಾ ಗುಂಡೇಟು ಬಿದ್ದು ಸೋಲುವ ಹಂತದಲ್ಲಿ ನಿಮಗೆ ಬೇಸರ ಆಗುವುದಿಲ್ವಾ?’

ನನ್ನ ಪ್ರಶ್ನೆ ಕೇಳಿ ಅವರು ಜೋರಾಗಿ ನಕ್ಕರು.

‘ನನಗೆ ಹೊಡೆಯುವುದು ಪಾಪದ ನಝೀರ್ ಆಗಿದ್ದರಿಂದ ಇರಬಹುದೇನೋ, ಒಮ್ಮೆಯೂ ನನಗೆ ನೋವಾಗಿಲ್ಲ.’ ಇಷ್ಟು ಹೇಳಿ ಮಾತು ನಿಲ್ಲಿಸಿದ ಅವರ ಮುಖದಲ್ಲಿ ಯಾವುದೋ ನೆನಪಿನ ಅಲೆಯೊಂದು ಮಿಂಚಿ ಮರೆಯಾಯಿತು. ಮರುಕ್ಷಣವೇ ತನ್ನ ಮಗುವಿನಂತ ನಗುವನ್ನು ಮುಖದ ಮೇಲೆ ತಂದುಕೊಂಡರು. ಆದರೂ ಮುಖದಲ್ಲಿ ಆಲೋಚನೆಯ ಸೂಚನೆಗಳು ಇನ್ನೂ ಮಾಯವಾಗಿರಲಿಲ್ಲ.

‘ಪ್ರತಿಯೊಬ್ಬ ವಿಲನ್ ನಮ್ಮ ಮೂಲಕ ಕೊನೆಯಾಗುವುದಕ್ಕಿಂತ ಮಿಗಿಲಾದ ಪುಣ್ಯವಿಲ್ಲ. ವಿಲನ್ ಪಾತ್ರದಲ್ಲಿ ನಟಿಸುವ ನಟರು ನಾಯಕ ನಟರಿಗಿಂತಲೂ ಸ್ವಲ್ಪ ಹೆಚ್ಚಿಗೆ ಸಮಾಜ ಸುಧಾರಕರು.’

ಈ ಮಾತು ಕೇಳಿದ್ದೇ ತಡ, ಕಾಸರಗೋಡಿನ ಬದಿಯಡ್ಕದ ಕೆ.ಪಿ. ಉಮ್ಮರ್ ಇದ್ದಕ್ಕಿದ್ದಂತೆ ನೆನಪಾಗಿ ಬಿಟ್ಟರು. ಗೋಪಾಲಕೃಷ್ಣನೆಂಬ ವ್ಯಕ್ತಿಯೊಬ್ಬ ಕೆ.ಪಿ. ಉಮ್ಮರ್ ಆಗಿ ಬದಲಾದದ್ದು ವಿಚಿತ್ರ ವಿಧಿಯೇ ಸರಿ. ಈಗ ಬದಿಯಡ್ಕದ ಜನರಿಗೆ ಗೋಪಾಲಕೃಷ್ಣ ಎಂಬ ಹೆಸರೇ ಮರೆತು ಹೋಗಿದೆ.

ಬದಿಯಡ್ಕದ ಕೆ.ಪಿ. ಉಮ್ಮರ್ ಅವರದ್ದು ಬಹಳ ದೊಡ್ಡ ಮನೆತನ.

ಏಳು ಸಹೋದರರಿಗೆ ಒಬ್ಬಳೇ ಸಹೋದರಿ. ಹಿರಿಯಾತ ಹೈಕೋರ್ಟಿನ ಜಡ್ಜ್. ಇನ್ನೊಬ್ಬ ಪ್ರಸಿದ್ಧ ಎಂಜಿನಿಯರ್. ಉಳಿದವರು ದೆಹಲಿ, ಯುಎಸ್ ಅಂತೆಲ್ಲ ದೂರವೇ ಇದ್ದಾರೆ. ನಾಲ್ಕನೆಯವರು ಈ ಕೆ.ಪಿ. ಉಮ್ಮರ್. ಕೊನೆಯವನೊಬ್ಬ ಮಾತ್ರ ಊರೂರು ತಿರುಗುವ ಕವಿಯಾಗಿಬಿಟ್ಟ. ಹೆಸರು ಶಶಿಕುಮಾರ್. ಹತ್ತನೇ ತರಗತಿ ಪಾಸಾಗಿಲ್ಲ. ಆದರೆ, ಪ್ರತಿಭಾವಂತ ಬರಹಗಾರ. ವರ್ಷಗಳ ಹಿಂದೆ ನಾನು ಕಾಸರಗೋಡಿನಲ್ಲಿ ಅಂಡಲೆಯುತ್ತಿದ್ದಾಗ ‘ಧಿಕ್ಕಾರಿ’ ಎಂಬ ಕಾವ್ಯನಾಮದಲ್ಲಿ ಬರೆಯುತ್ತಿದ್ದ ಶಶಿಕುಮಾರನನ್ನು ಪ್ರಭಾಕರ್ ಪರಿಚಯ ಮಾಡಿಕೊಟ್ಟಿದ್ದ.

ಇಳಿಸಂಜೆಯ ಮಬ್ಬುಗತ್ತಲಿನಲ್ಲಿ ಆ ಪುರಾತನ ತರವಾಡಿನ ಒಳಗೆ ಕಾಲೂರಿದಾಗ ಮಧ್ಯಾಹ್ನವೇ ಬಂದು ತಂಗಿದ್ದ ಕತ್ತಲು ನನ್ನನ್ನು ಸ್ವಾಗತಿಸಿತ್ತು.

ಎರಡಂತಸ್ತಿನ ಮನೆಯ ಮುಂದಿನ ತುಕ್ಕು ಹಿಡಿದ ಗೇಟಿನ ಮೇಲೆ ಅರಕ್ಕಾಡು ತರವಾಡು ಎಂಬ ಫಲಕ. ಅಂಗಳದ ಹುಲ್ಲು ಕಿತ್ತು ಅದೆಷ್ಟು ವರ್ಷಗಳಾದವೋ ಏನೋ. ದೂರದಲ್ಲಿ ಯೌವ್ವನವನ್ನು ತುಂಬಿ ತುಳುಕಿಸುತ್ತಿರುವ ಕೊಳ. ಸುಣ್ಣ ಮಾಸಿದ ಗೋಡೆ ಮತ್ತು ಬೀಟೆ ಮರದ ಬಾಗಿಲುಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ನಿಂತು ಮಾತುಕತೆಯಲ್ಲಿ ಮುಳುಗಿವೆ. ಏಣಿ ಏರುವಾಗ ಹೆಜ್ಜೆ ಹೆಜ್ಜೆಗೂ ಮರ ಕಿರುಗುಟ್ಟಿತು. ಶಶಿಕುಮಾರ್ ಜೇಡರ ಬಲೆ ತುಂಬಿದ್ದ ಕೋಣೆಯ ಕಿಟಕಿ ಬಾಗಿಲುಗಳನ್ನು ಒಂದೊಂದಾಗಿ ತೆರೆದಂತೆ ಲೆಕ್ಕವಿಲ್ಲದಷ್ಟು ಬಾವಲಿಗಳು ಧೂಳೆಬ್ಬಿಸುತ್ತಾ ಹಾರಿಹೋದವು.

ಆತನ ಮುಖದಲ್ಲಿ ಯಾವಾಗಲಾದರೊಮ್ಮೆ ಮೂಡುವ ನಗುವಿನೊಂದಿಗೆ ಕಣ್ಣುಗಳೆರಡನ್ನು ಮೇಲೆ ಮಾಡಿ ಅಸಹಾಯಕನಂತೆ ನನ್ನನ್ನು ನೋಡಿದ.

‘ನಿಮ್ಮಂತ ಒಬ್ಬ ವ್ಯಕ್ತಿಯನ್ನು ಇಂತಹದ್ದೊಂದು ಮನೆಗೆ ಆಹ್ವಾನಿಸಬಾರದಿತ್ತು.’

ಆತನ ಹೆಗಲ ಮೇಲೆ ಕೈಯಿಟ್ಟೆ.

‘ಇದಕ್ಕಿಂತಲೂ ಎಷ್ಟೋ ಕೆಟ್ಟದಾಗಿತ್ತು ನನ್ನ ಮನೆ.’

‘ನಾನು ಬದಿಯಡ್ಕಕ್ಕೆ ಬಂದು ತುಂಬಾ ದಿನಗಳಾದವು. ಧೂಳೆಲ್ಲ ಈಗ ಕ್ಲೀನ್ ಮಾಡುತ್ತೇನೆ. ನೀವು ಇವತ್ತು ಇಲ್ಲೇ ಇರಿ. ನಾಳೆ ಹೋದರಾಯಿತು. ನಿಮ್ಮ ಬರವಣಿಗೆ ನನಗೆ ತುಂಬ ಇಷ್ಟ. ಅದೂ ಅಲ್ಲದೆ ಇವತ್ತು ಹುಣ್ಣಿಮೆ. ಮೂರನೇ ಮಾಳಿಗೆಯಲ್ಲಿ ಒಂದು ಪುಟ್ಟ ಕೋಣೆಯಿದೆ. ಅದರ ನಾಲ್ಕು ಹೆಂಚುಗಳನ್ನು ತೆಗೆದು ಗಾಜು ಹಾಕಿದ್ದಾರೆ. ನಾವು ಅಲ್ಲಿ ಕೂತು ಬೆಳದಿಂಗಳು ಸವಿಯಬಹುದು. ನಿಮಗೆ ಬೆಳದಿಂಗಳೆಂದರೆ ಇಷ್ಟವೆಂದು ನನಗೆ ಗೊತ್ತು.’

ಆತ ತೆರೆಯುತ್ತಿದ್ದ ಚಿಕ್ಕ ಚಿಕ್ಕ ಕಿಟಕಿ ಬಾಗಿಲುಗಳು ಅದುವರೆಗೆ ನುಂಗಿಕೊಂಡಿದ್ದ ನೋವನ್ನು ಹೊರಹಾಕುತ್ತಾ ತೆರೆದುಕೊಂಡವು.

ಆ ಮನೆಯ ವಿಶಾಲ ನೀರವತೆ ನನ್ನನ್ನು ಮೂಕವಿಸ್ಮಿತನನ್ನಾಗಿಸಿತು.

ನಾನು ಕೇಳಿದೆ: ‘ಇಷ್ಟು ದೊಡ್ಡ ಮನೆಯಲ್ಲಿ ನೀನು ಒಬ್ಬನೇ ಇರುವುದಾ?’

‘ಅಲ್ಲ, ಕೆಳಗಿನ ಎರಡು ಕೋಣೆಗಳು ಅಕ್ಕನದ್ದು. ಅವಳು ಮದುವೆ ಆಗಿಲ್ಲ. ಮತ್ತೆ ಅಣ್ಣನೂ ಇದ್ದಾರೆ. ಗೋಪಾಲಕೃಷ್ಣ ಅಣ್ಣ. ಉಳಿದವರೆಲ್ಲ ಓದಿಕೊಂಡು ದೊಡ್ಡ ದೊಡ್ಡ ಕೆಲಸ ಗಿಟ್ಟಿಸಿಕೊಂಡರು. ದೂರದೇಶಗಳಲ್ಲಿ ಮನೆ ಮಾಡಿಕೊಂಡರು. ಈ ಧೂಳು ಮತ್ತು ಜೇಡರ ಬಲೆ ನಮಗೆ ಮೂವರಿಗೆ ಉಳಿಯಿತು.’

ಆದರೆ ಯಾರನ್ನೂ ಅಲ್ಲಿ ಕಾಣಲಿಲ್ಲ.

‘ಗೋಪಾಲಕೃಷ್ಣ ಅಣ್ಣನದ್ದು ವಿಚಿತ್ರ ಸ್ವಭಾವ. ಸಂಜೆ ನಾಲ್ಕು ಗಂಟೆಗೆ ನಿದ್ದೆ ಮಾಡುತ್ತಾರೆ. ಅಣ್ಣನಿಗೆ ಕಾವಲು ಕೂತು ಈಗ ಅಕ್ಕನೂ ಹಾಗೆಯೇ ಆಗಿದ್ದಾಳೆ.’

‘ವಿಚಿತ್ರವಾಗಿದೆಯಲ್ಲ. ಆದರೆ ಈಗ ನೋಡುವಾಗ ನೀನು ಹೀಗೆ ಅಲೆಮಾರಿಯಾದದ್ದು ವಿಶೇಷ ಅಂತ ಅನಿಸುತ್ತಿಲ್ಲ.’

‘ನನಗೆ ಭೂಮಿಯೆಂದರೆ ಸುಡುತ್ತಿರುವ ಬರಿಯ ಮಣ್ಣು. ಅದಕ್ಕೆ ಕಾಲುಗಳನ್ನು ಒಂದೆಡೆ ಇಡಲಾಗದೆ ಹೆಜ್ಜೆ ಬದಲಿಸುತ್ತಲೇ ಇರುತ್ತೇನೆ.’ ಅವನ ನಗುವಿನಲ್ಲಿ ನೋವಿನ ಎಳೆಯಿತ್ತು.

ಗಾಜಿನ ಹೆಂಚಿನಲ್ಲಿ ಆಕಾಶ ನೋಡುತ್ತಾ ಮಲಗಿದ್ದಾಗ ಬೆಳದಿಂಗಳು ಸುರಿಯಿತು. ಹುಣ್ಣಿಮೆಯ ಸವಿ ಉಣ್ಣುತ್ತಾ ಅಲ್ಲೇ ನಿದ್ದೆ ಹೋದೆವು.

ಅರ್ಧ ರಾತ್ರಿ ಕಳೆದ ಹೊತ್ತಲ್ಲಿ ಕೆಳಗಿನ ಮಹಡಿಯಲ್ಲಿ ಬಂದೂಕು ಸಿಡಿದ ಸದ್ದು ಕೇಳಿ ಬೆಚ್ಚಿ ಎದ್ದೆ. ನನ್ನ ಹಿಂದೆಯೇ ಎದ್ದು ಕೂತ ಶಶಿಕುಮಾರನ ಮುಖದಲ್ಲಿ ಆತಂಕವೇನೂ ಇರಲಿಲ್ಲ.

‘ಹೆದರಬೇಡಿ, ಅದು ಗೋಪಾಲಕೃಷ್ಣ ಅಣ್ಣ. ಇನ್ನೂ ಸ್ವಲ್ಪ ಹೊತ್ತು ಹೀಗೆ ಸದ್ದು ಕೇಳಿಸುತ್ತದೆ. ಮತ್ತೆ ಮಲಗಿಕೊಳ್ಳುತ್ತಾರೆ. ಹುಶಾರಿಲ್ಲ. ನನಗಿದೆಲ್ಲ ವರ್ಷಗಳಿಂದ ಅಭ್ಯಾಸ ಆಗಿಬಿಟ್ಟಿದೆ.’

ಶಶಿಕುಮಾರ್ ಹೇಳಿದಂತೆ ಮತ್ತೆ ಸದ್ದು ಕೇಳಿಸಿತು. ‘ಲೋ, ಕೆ.ಪಿ. ಉಮ್ಮರ್, ನನ್ನನ್ನೇನು ಪೆದ್ದ ಅಂದುಕೊಂಡಿದ್ದೀಯಾ? ರಾಸ್ಕಲ್! ಬೆಳದಿಂಗಳ ರಾತ್ರಿಯಲ್ಲಿ ನೀನು ಕಿಟಕಿ ಹತ್ತಿರ ಬಂದು ನಾನು ಸತ್ತಿದ್ದೇನಾ ಅಂತ ಇಣುಕಿ ನೋಡುವುದು ನನಗೇನು ಗೊತ್ತಾಗಲ್ಲ ಅಂತ ಅಂದುಕೊಂಡಿದ್ದೀಯಾ? ನಿನಗೆ ಆ ಅವಳೊಂದಿಗೆ ಚೆಲ್ಲಾಟ ಆಡುವಾಗ ಕೊಚ್ಚಿಕೊಳ್ಳುವುದಕ್ಕೆ ಒಂದು ಸುದ್ದಿ ಬೇಕು. ನನ್ನ ಸಾವು. ಅಲ್ವಾ ಉಮ್ಮರ್? ಬಾರೋ, ಗಂಡಸು ಅಂತ ಹೇಳಿಕೊಂಡರೆ ಆಗಲಿಲ್ಲ. ಹೀಗೆ ಅಡಗಿಕೊಂಡು ಕೂರದೆ ಮುಂದೆ ಬಾರೋ... ಬಾ... ನೀನು ಈ ಸಲವೂ ಕೂದಲೆಳೆಯಲ್ಲಿ ಬಚಾವಾದೆ. ನನ್ನ ಬಂದೂಕಿನಲ್ಲಿ ಇನ್ನೂ ಗುಂಡುಗಳಿವೆ.’

ನಾನು ಎದ್ದು ಕೂತೆ.

‘ಶಶಿ, ಇದೆಲ್ಲ ಏನು? ಈ ಕೆ.ಪಿ. ಉಮ್ಮರ್ ಅಂದರೆ?’

‘ಹೌದು. ಅದೇ ಉಮ್ಮರ್. ಸಿನಿಮಾ ನಟ ಕೆ.ಪಿ. ಉಮ್ಮರ್.’

‘ಅಣ್ಣನಿಗೆ ಈ ಭೂಮಿಯ ಮೇಲೆ ಒಬ್ಬನೇ ಒಬ್ಬ ಶತ್ರು ಇರುವುದು. ಅದು ಬೇರೆ ಯಾರೂ ಅಲ್ಲ. ಇಲ್ಲಿಯತನಕ ಒಮ್ಮೆಯೂ ಕಂಡಿಲ್ಲದ, ಮಾತಾಡಿಸಿಲ್ಲದ ಕೆ.ಪಿ. ಉಮ್ಮರ್. ಕೆ.ಪಿ. ಉಮ್ಮರ್‌ನನ್ನು ಇಲ್ಲಿಂದ ಓಡಿಸದಿದ್ದರೆ ನಮ್ಮ ದೇಶ ಪ್ರಗತಿ ಕಾಣುವುದಿಲ್ಲ ಎಂಬುದು ಅವರ ವಾದ ಮತ್ತು ಬಲವಾದ ನಂಬಿಕೆ. ಈ ಥಿಯರಿ ಇಟ್ಟುಕೊಂಡು ಸಾವಿರದೈನೂರು ಪುಟಗಳ ಒಂದು ಪುಸ್ತಕವನ್ನೇ ಬರೆದಿಟ್ಟಿದ್ದಾರೆ. ಪುಸ್ತಕದ ಹೆಸರು Why K P Ummar? ಅಕ್ಕಿಗೆ ಬೆಲೆಯೇರುತ್ತಿರುವುದು ಯಾಕಾಗಿ ಎಂಬುದು ಒಂದು ಚಾಪ್ಟರಿನ ಹೆಸರು. ಇದಕ್ಕೆಲ್ಲ ಕಾರಣ ಕೆ.ಪಿ. ಉಮ್ಮರ್ ಎಂಬುದನ್ನು ಸೈದ್ಧಾಂತಿಕವಾಗಿಯೂ ವಸ್ತುನಿಷ್ಠವಾಗಿಯೂ ಪುಸ್ತಕದಲ್ಲಿ ವಿವರಿಸಿದ್ದಾರೆ. ಅಣ್ಣನ ಬಳಿ ಪುಸ್ತಕಗಳ ದೊಡ್ಡ ಭಂಡಾರವೇ ಇದೆ.’

ಶಶಿಕುಮಾರ್ ಎದ್ದು ಕೂತು ಒಮ್ಮೆ ದೇಹ ಮುರಿದ. ಗಾಜಿನ ಹಂಚಿನಲ್ಲಿ ಚಂದಿರ ಉನ್ಮತ್ತನಂತೆ ಕಾಣುತ್ತಿದ್ದ.

‘ಬದಿಯಡ್ಕದಲ್ಲಿ ನ್ಯಾಷನಲ್ ಹೈವೇ ಪಕ್ಕ ಭೂಮಿಗೆ ಬೆಲೆ ಹೆಚ್ಚಾದರೆ, ರೈಲು ಯಾತ್ರೆ ತುಟ್ಟಿಯಾದರೆ, ತನ್ನಿಷ್ಟದ ನಾಯಕ ಚುನಾವಣೆಯಲ್ಲಿ ಸೋತರೆ, ಜನಸಂಖ್ಯೆ ಹೆಚ್ಚಾದರೆ, ನಿರುದ್ಯೋಗ ಜಾಸ್ತಿಯಾದರೆ, ಕಾರ್ಖಾನೆಗಳು ಮುಚ್ಚಲ್ಪಡುವಾಗ, ಗಡಿಯಲ್ಲಿ ಗುಂಡು ಸಿಡಿದರೆ, ಆತ್ಮಾಹುತಿ ದಾಳಿಗಳಾದರೆ... ಹೀಗೆ ಪ್ರತಿಯೊಂದು ಘಟನೆ ನಡೆದಾಗಲೂ ಅಣ್ಣ ಹೇಳುತ್ತಾರೆ: ಎಲ್ಲ ಆ ಕೆ.ಪಿ. ಉಮ್ಮರನ ಕೆಲಸ.

ಅವರ ಪುಸ್ತಕದ ಒಂದು ಅಧ್ಯಾಯದ ಹೆಸರು ‘ಕೆ.ಪಿ. ಉಮ್ಮರ್‌ನನ್ನು ಗಡಿಪಾರು ಮಾಡಲು ಹದಿನೇಳು ಕಾರಣಗಳು’ ಅಂತ.

ಸಿನಿಮಾ, ಬ್ಲಾಕ್‍ಮನಿ ಮತ್ತು ಸ್ವಿಸ್ ಬ್ಯಾಂಕ್ ರಹಸ್ಯ ಎಂಬ ಚಾಪ್ಟರಿನಲ್ಲಿ ಕೆ.ಪಿ. ಉಮ್ಮರ್ ಮತ್ತು ದಾವೂದ್ ಇಬ್ರಾಹಿಂ ನಡುವಿನ ರಹಸ್ಯ ಸಂಬಂಧದ ಬಗ್ಗೆ ವಿಸ್ತೃತವಾಗಿ ಬರೆದಿದ್ದಾರೆ. ಚೋಟಾ ರಾಜನ್ ಜೊತೆ ಸೇರಿಕೊಂಡು ನಡೆಸಿದ ದೇಶದ್ರೋಹಿ ಕೃತ್ಯಗಳ ಬಗ್ಗೆ ಇನ್ನೊಂದು ಅಧ್ಯಾಯದಲ್ಲಿ ಬರೆದಿದ್ದಾರೆ. ಅಣ್ಣನನ್ನು ಈಗ ಜನರು ಕೆ.ಪಿ. ಉಮ್ಮರ್ ಎಂದೇ ಕರೆಯುವುದು. ಗೋಪಾಲಕೃಷ್ಣ ಎಂಬ ಹೆಸರನ್ನು ಎಲ್ಲರು ಮರೆತು ಬಿಟ್ಟಿದ್ದಾರೆ.’

ಗಾಜಿನ ಹಂಚಿನಲ್ಲಿ ಇದ್ದಕ್ಕಿದ್ದಂತೆ ಮೋಡವೊಂದು ಚಂದಿರನ ಅಡಗಿಸಿ ಕತ್ತಲು ಆವರಿಸಿತು. ದಿಂಬಿನಡಿಯಿಂದ ಒಂದು ಬೀಡಿ ತೆಗೆದು ಹಚ್ಚಿದ. ಜೋರಾಗಿ ಎಳೆದ ದಮ್ಮಿನ ಹೊಗೆಯನ್ನು ಉಗುಳುತ್ತಾ ಶಶಿಕುಮಾರ್ ಮಾತು ಮುಂದುವರಿಸಿದ:

‘ಮಕ್ಕಳಲ್ಲಿ ಅತ್ಯಂತ ಬ್ರಿಲಿಯಂಟ್ ಗೋಪಾಲಕೃಷ್ಣ.

ಆಕ್ಸ್‌ಫರ್ಡಿನಲ್ಲಿ ಅಡ್ಮಿಷನ್ ಸಿಕ್ಕಿತ್ತು. ಆದರೆ ಅಣ್ಣ ತನ್ನ ದಾರಿ ಸಿನಿಮಾ ಎಂದು ಹೇಳಿ ಅದನ್ನು ತಳ್ಳಿ ಹಾಕಿದರು.

ಯಾರೂ ಎದುರಾಡಲಿಲ್ಲ. ಹಾಗೆ ಮದರಾಸಿನ ಅಡಯಾರ್ ಫಿಲ್ಮ್ಇನ್‌ಸ್ಟಿಟ್ಯೂಟ್ಸೇರಿದರು. ನೋಡೋದಕ್ಕೆ ಹಳೆಯ ಕಾಲದ ಪ್ರೇಮ್ ನಝೀರ್ ತರ ಕಾಣಿಸುತ್ತಿದ್ದರು. ಅಷ್ಟೊಂದು ಸುಂದರ. ಮನೆಯಲ್ಲಿ ಆಗ ಕೃಷಿ ಚಟುವಟಿಕೆಗಳು ಚೆನ್ನಾಗಿ ನಡೆಯುತ್ತಿದ್ದ ಕಾಲ. ದುಡ್ಡಿನ ಚಿಂತೆಯಿರಲಿಲ್ಲ. ಅಣ್ಣನಿಗೆ ಬೆಲೆಬಾಳುವ ಬಟ್ಟೆಬರೆಗಳೇ ಬೇಕು. ಹೊರಗಿಳಿಯುವಾಗ ಚೆಂದಕ್ಕೆ ಡ್ರೆಸ್ ಮಾಡಿಕೊಳ್ಳುತ್ತಿದ್ದರು.

ಧಾರಾಳ ಹುಡುಗಿಯರು ಅಣ್ಣನ ಬೆನ್ನು ಬಿದ್ದಿದ್ದರೂ ಅಣ್ಣನಿಗೆ ಇಷ್ಟವಾಗಿದ್ದು ಸಿನಿಮಾ ಕಲಿಯಲು ಬಂದಿದ್ದ ಬೆಂಗಳೂರು ಮಲಯಾಳಿ ಮೇರ್ಸಿಯನ್ನು. ಆದರೆ ಸುಂದರಿಯಾಗಿದ್ದ ಮೇರ್ಸಿಗೆ ಅಣ್ಣನ ಮೇಲಿದ್ದದ್ದು ಬರಿಯ ಕುತೂಹಲ ಮಾತ್ರ.

ಒಂದು ದಿನ ಹೀಗೆ ಮಾತನಾಡುತ್ತಿದ್ದಾಗ ಮೇರ್ಸಿ ಅಣ್ಣನ ಬಳಿ ‘ನನಗೆ ಪ್ರೇಮ್ ನಝೀರಿಗಿಂತ ಉಮ್ಮರ್ ತುಂಬ ಇಷ್ಟ ಆಗ್ತಾರೆ. ನಝೀರ್ ಬದಲಿಗೆ ಉಮ್ಮರ್ ಸೂಪರ್‌ಸ್ಟಾರ್ ಆಗಬೇಕಿತ್ತು.’ ಎಂದು ಹೇಳಿದಳಂತೆ.

ಅಣ್ಣನಿಗೆ ಅದು ಎಲ್ಲಿಯೋ ತಾಗಿತು. ಸಮಾಧಾನವಾಗಿಯೇ ಶುರುವಾದ ವಾದ ಪ್ರತಿವಾದ ಕೊನೆಗೆ ದೊಡ್ಡ ಜಗಳದಲ್ಲಿ ಕೊನೆಯಾಯಿತು.

ಮೇರ್ಸಿ ಮಾತ್ರ ಅವಕಾಶ ಸಿಕ್ಕಾಗಲೆಲ್ಲ ಕೆ.ಪಿ. ಉಮ್ಮರ್ ಬಗ್ಗೆ ಹೊಗಳಿ ಮಾತಾಡಿ ಅಣ್ಣನನ್ನು ಉದ್ರೇಕಿಸುತ್ತಲೇ ಇದ್ದಳು. ಇದರ ಜೊತೆಗೆ ಮೇರ್ಸಿ ನಿಧಾನಕ್ಕೆ ತನ್ನಿಂದ ದೂರಾಗುತ್ತಿದ್ದಾಳೆ ಎಂದೂ ಅಣ್ಣನಿಗೆ ಅನಿಸತೊಡಗಿತ್ತು. ಅದರಲ್ಲಿ ಚೂರು ವಾಸ್ತವವೂ ಇತ್ತು.

ಒಮ್ಮೆ ಕೆ.ಪಿ. ಉಮ್ಮರ್ ವಿಷಯದಲ್ಲಿ ವಾದಿಸುತ್ತಿದ್ದಾಗ ಅಣ್ಣ ಹೇಳಿದರು, ‘ಎಷ್ಟೇ ದೊಡ್ಡ ಸ್ಥಾನಕ್ಕೆ ಏರಿದರೂ ಹೆಣ್ಣಿನ ಬುದ್ಧಿ ಮೊಳಕಾಲ ಕೆಳಗೆಯೇ.’

ಆ ಮಾತು ಕೇಳಿ ಮೇರ್ಸಿ ‘ಶಟ್ ಅಪ್ ಯುವರ್ ಮೌತ್’ ಎಂದು ಸಿಡಿಲಿನಂತೆ ಅಬ್ಬರಿಸಿದಳು. ಅದು ಅವರಿಬ್ಬರ ನಡುವಿನ ಕೊನೆಯ ಸಂಭಾಷಣೆ.

ಅಣ್ಣನಿಗೆ ಹುಟ್ಟಿನಿಂದ ಬಳುವಳಿಯಾಗಿ ಬಂದಿದ್ದ ಗಂಡಾಳ್ವಿಕೆಯ ನಾತ ಮೇರ್ಸಿಗೆ ಉಸಿರುಗಟ್ಟಿಸುತ್ತಿತ್ತು.

ಈ ನಡುವೆ ಆಕೆ ಫಿಲಂ ಇನ್‌ಸ್ಟಿಟ್ಯೂಟಿನ ತನ್ನ ಓದು ನಿಲ್ಲಿಸಿ ಊರಿಗೆ ಮರಳಿದಳು.

ಅಣ್ಣನ ದಿನನಿತ್ಯದ ಕೆಲಸಗಳು, ಮಾತನಾಡುವ ಶೈಲಿ ಎಲ್ಲವೂ ತಾಳ ತಪ್ಪತೊಡಗಿದವು. ಆದರೆ, ಮೊದಮೊದಲಿಗೆ ಯಾರೂ ಇದನ್ನು ಗುರುತಿಸಲಿಲ್ಲ. ಅಣ್ಣನೊಂದಿಗಿದ್ದ ನಮ್ಮೂರಿನ ಥಾಮಸ್‍ಗೆ ಕೂಡ ಇದೊಂದೂ ಗೊತ್ತಾಗಲೇ ಇಲ್ಲ. ಪ್ರಾಕ್ಟಿಕಲ್ ಕ್ಲಾಸಿನ ಯಾವುದೋ ಶೂಟಿಂಗಿನಲ್ಲಿ ಕ್ಯಾಮೆರಾದ ವ್ಯೂಫೈಂಡರ್ ಮೂಲಕ ನೋಡುತ್ತಿದ್ದಾಗ ಮೊದಲ ಬಾರಿಗೆ ಅದು ಸಂಭವಿಸಿತ್ತು.

ಫೀಲ್ಡಿನಲ್ಲಿ ಯಾರೋ ಅನಗತ್ಯವಾಗಿ ಬಂದು ನಿಂತಿದ್ದಾರೆ. ಫೋಕಸ್ ಮಾಡಿ ನೋಡಿದರೆ ಕೆ.ಪಿ. ಉಮ್ಮರ್!

‘ಮಿಸ್ಟರ್ ಕೆ.ಪಿ. ಉಮ್ಮರ್, ಫೀಲ್ಡಿನಿಂದ ಆಚೆ ಹೋಗಿ.’

ಅದು ಕೇಳಿದ ಕೂಡಲೇ ಉಮ್ಮರ್ ಸಾರಿ ಕೇಳುತ್ತಾ ದೂರ ಹೋದರು. ಆದರೆ, ನಿನ್ನನ್ನು ಆಮೇಲೆ ನೋಡಿಕೊಳ್ಳುತ್ತೇನೆ ಎಂಬಂತೆ ಆತನ ಮುಖದಲ್ಲಿತ್ತು ಎಂದು ಅಣ್ಣ ಹೇಳುತ್ತಾರೆ.

ವ್ಯೂಫೈಂಡರ್ ಆನ್ ಮಾಡಿದಾಗ ಪುನಃ ಕೆ.ಪಿ. ಉಮ್ಮರ್ ಅಲ್ಲೇ ನಿಂತಿದ್ದಾರೆ.

ಅಣ್ಣ ಬಾಯಿಗೆ ಬಂದ ಹಾಗೆ ಬೈದರು.

‘ದೊಡ್ಡ ಸ್ಟಾರ್ ಎಂಬ ಅಹಂಕಾರ ನಿನ್ನ ಕೈಯಲ್ಲೇ ಇರಲಿ. ಪ್ರಶಸ್ತಿ ಪುರಸ್ಕಾರಗಳೆಲ್ಲ ಹೊರಗೆ. ನಾನು ಕೆಲಸ ಮಾಡುವಲ್ಲಿ ನಿನ್ನ ಆಟ ನಡೆಯಲ್ಲ.’

ಈ ಘಟನೆಯ ನಂತರ ಅಣ್ಣ ಇನ್‌ಸ್ಟಿಟ್ಯೂಟಲ್ಲಿ ಚರ್ಚೆಯ ವಿಷಯವಾದರು.

ಕೆ.ಪಿ. ಉಮ್ಮರ್ ಮೇಲೆ ಅಣ್ಣ ಹಲವರಿಗೆ ದೂರು ನೀಡಿದರು. ಮೊದಲು ಪ್ರಿನ್ಸಿಪಾಲರಿಗೆ, ಅಮೇಲೆ ಅಡ್ಮಿನಿಸ್ಟ್ರೇಷನ್ ಅಧಿಕಾರಿಗೆ. ಯಾವುದೂ ಪ್ರಯೋಜನಕ್ಕೆ ಬಾರದಿದ್ದಾಗ ಅಡಯಾರ್ ಫಿಲ್ಮ್‌ ಇನ್‌ಸ್ಟಿಟ್ಯೂಟ್ ಉರುಳಿಸಲು ಕೆ.ಪಿ. ಉಮ್ಮರ್ ಪ್ಲಾನ್ ಮಾಡುತ್ತಿದ್ದಾರೆ ಎಂಬ ದೂರಿನೊಂದಿಗೆ ರಾಷ್ಟ್ರಪತಿಗೆ ಪತ್ರ ಬರೆದರು. ಸಹಾಯಕ್ಕೆ ಕೆಲವು ನಕ್ಸಲೈಟ್ ವಿದ್ಯಾರ್ಥಿಗಳು ಆತನ ಜೊತೆಗಿದ್ದಾರೆಂದೂ ಕೇಂದ್ರವು ತುರ್ತಾಗಿ ಮಧ್ಯ ಪ್ರವೇಶ ಮಾಡಬೇಕೆಂದೂ ಪತ್ರದಲ್ಲಿ ಬರೆದಿದ್ದರು. ಪತ್ರ ತಲುಪಿ ನಾಲ್ಕನೇ ದಿನ ದೆಹಲಿಯಿಂದ ಬಂದ ತಂಡವೊಂದು ಅಡಯಾರ್ ಇನ್‌ಸ್ಟಿಟ್ಯೂಟ್ಸುತ್ತುವರಿದಾಗ ವಿಷಯ ಕೈ ಮೀರಿ ಹೋಗಿತ್ತು. ಪ್ರಿನ್ಸಿಪಾಲ್ ಮನೆಗೆ ಕಳುಹಿಸಿದ ಟೆಲಿಗ್ರಾಂ ಕಂಡು ದೊಡ್ಡಣ್ಣ ಕಂಗಾಲಾದರು.

ಕೆ.ಪಿ. ಉಮ್ಮರ್ ಪರ ವಹಿಸಿ ಯಾರೇ ಮಾತಾಡಿದರೂ ಅಣ್ಣ ಜಗಳಕ್ಕೆ ನಿಲ್ಲತೊಡಗಿದರು. ಬೇಕಾದ ಸಾಕ್ಷ್ಯಾಧಾರಗಳನ್ನು ಮೊದಲೇ ಸೃಷ್ಟಿಸಿಟ್ಟುಕೊಳ್ಳುತ್ತಿದ್ದರು. ಅದಕ್ಕಾಗಿ ಮೊದಲು ಮಾಡಿದ ಕೆಲಸ ಸುಳ್ಳುಗಳಿಗೆ ಮಸಾಲೆ ಸೇರಿಸಿ ಮಾತನಾಡುವುದು. ಮತ್ತೆ ಅದನ್ನೇ ಹೇಳುತ್ತಾ ಅದುವೇ ಸತ್ಯವೆಂದು ನಂಬುವುದು. ಪ್ರತೀಕಾರ, ಸುಳ್ಳು, ಅದನ್ನು ಸತ್ಯವೆಂದು ನಂಬಿಸುವುದು, ತಾನೇ ನಂಬುವುದು. ಹೀಗೆ ಉನ್ಮಾದದ ಗಿಡಗಳನ್ನು ತನ್ನ ಸುತ್ತ ನೆಟ್ಟು ಪೊರೆಯತೊಡಗಿದರು. ಕೆ.ಪಿ. ಉಮ್ಮರ್ ಎಂಬ ವ್ಯಕ್ತಿಯೊಬ್ಬ ಈ ಭೂಮಿಯ ಮೇಲೆ ಇಲ್ಲದಿರುತ್ತಿದ್ದರೆ ಲೋಕ ಸ್ವರ್ಗವಾಗಿರುತ್ತಿತ್ತು ಎಂದು ಅಣ್ಣ ಬಲವಾಗಿ ನಂಬಿದರು. ಸುಳ್ಳಿನ ಕತೆಗಳು ಹುಚ್ಚಿನರಮನೆಯಲ್ಲಿ ಉಸಿರಾಡಿದವು; ಮತ್ತೆ ಅಲ್ಲಿಂದ ಹೊರಟು ನಿಂತವು.’

ಬೆಳಗಾದಾಗ ನಾನು ಮತ್ತು ಶಶಿಕುಮಾರ್ ಏಣಿ ಇಳಿದೆವು. ಗಂಜಿಯಲ್ಲಿ ಅದ್ದಿದ, ಇಸ್ತ್ರಿಯ ಗೆರೆಗಳು ಹಾಳಾಗದಂತೆ ಬಿಳಿ ಖಾದಿ ಜುಬ್ಬಾ ಧರಿಸಿ ಆರಾಮ ಕುರ್ಚಿಯಲ್ಲಿ ಕೂತು, ಕೋಲುಕನ್ನಡಕದಲ್ಲಿ ದಿನಪತ್ರಿಕೆ ಓದುತ್ತಿರುವ ಒಬ್ಬ ವ್ಯಕ್ತಿ. ಟೈಮ್ಸ್ ಆಫ್ ಇಂಡಿಯಾ ಸಹಿತ ನಾಲ್ಕು ಪತ್ರಿಕೆಗಳನ್ನು ಬೇರೆ ಯಾರಿಗೂ ಕೊಡಲಾರೆ ಎಂಬಂತೆ ತನ್ನ ಪಕ್ಕದಲ್ಲೇ ಇಟ್ಟುಕೊಂಡಿದ್ದಾರೆ. ಹಣೆಯಲ್ಲಿ ವಿಭೂತಿ. ಅದರ ನಡುವಿನಲ್ಲಿ ಕಡುಗೆಂಪು ಬಣ್ಣದ ಬೊಟ್ಟು. ಕೈಯಲ್ಲಿ ಹಲವು ತರದ ನೂಲುಗಳನ್ನು ಸುತ್ತಿಕೊಂಡಿದ್ದಾರೆ.

ಶಶಿಕುಮಾರ್ ಪರಿಚಯ ಮಾಡಿಸಿದ: ‘ನಮ್ಮಣ್ಣ ಗೊಪಾಲಕೃಷ್ಣ. ಇವರು ನನ್ನ ಗೆಳೆಯ ಬಾಹಿಸ್ ಅಂತ. ಬರಹಗಾರರು.’

ಎದ್ದು ನಿಂತು ಕೈ ಜೋಡಿಸಿ ಸೌಮ್ಯವಾಗಿ ನಮಸ್ಕಾರ ಮಾಡಿದರು.

ಅವರು ಬಹಳ ಮಾತಾಡಿದರು. ಅವರಿಗೆ ಗೊತ್ತಿಲ್ಲದ ಸಂಗತಿಯೇ ಇರಲಿಲ್ಲ. ಎಲ್ಲ ಜ್ಞಾನಗಳೂ ಅವರ ಮೆದುಳಿನ ನೆಲಮಾಳಿಗೆಯಲ್ಲಿ ಶರಣಾಗಿ ಬಿದ್ದಿದ್ದವು. ‘Jack of all trade, master of none.’ ಅರಿಯದೇ ನನ್ನ ಬಾಯಿಂದ ಉದ್ಗಾರ ಬಂತು. ಅಷ್ಟರಲ್ಲಿ ಯಾವುದೋ ಪುರಾತನ ಗುಹೆಯೊಳಗಿನಿಂದೆಂಬತೆ ಅಕ್ಕ ಕನ್ನ ಚಹಾ ತಂದರು. ಅವರ ಕಣ್ಣುಗಳಲ್ಲಿ ದಡವಿಲ್ಲದ ಕಡಲಿನಂತೆ ಮಮತೆಯ ಅಸಹಾಯಕತೆಯು ನೆಲೆನಿಂತಿತ್ತು.

ಶಶಿ ಹೊರಡುವ ಮೊದಲು ಅಣ್ಣನ ಕಾಲು ಮುಟ್ಟಿ ನಮಸ್ಕರಿಸಿದ.

ಅಣ್ಣ ಕಣ್ಣು ಮುಚ್ಚಿ ಏನನ್ನೋ ಮಂತ್ರಿಸಿ ಆಶೀರ್ವದಿಸಿದರು.

ಗೇಟು ತೆರೆದು ಹೊರ ಬರುತ್ತಲೇ ಶಶಿಕುಮಾರ್ ನಗುತ್ತಾ ಹೇಳಿದ, ‘ಏನಿಲ್ಲ, ಒಂದು ತಪ್ಪು ಭಾವನೆ ದೂರ ಮಾಡಲು ಆ ನಮಸ್ಕಾರದ ನಾಟಕ.’

ನಾನು ಅರ್ಥವಾಗದವನಂತೆ ನೋಡಿದಾಗ ನಗು ನಿಲ್ಲಿಸಿ ಹೇಳಿದ:

‘ಇಲ್ಲದಿದ್ದರೆ ನಾನು ಕೆ.ಪಿ. ಉಮ್ಮರ್‌ನನ್ನು ನೋಡಲು ಹೋಗುತ್ತಿರುವುದು ಎಂದು ಭಾವಿಸುತ್ತಾರೆ.’

ಹೋಟೆಲ್ ಮಹಾರಾಣಿಯಲ್ಲಿ ಉಮ್ಮುಕ್ಕಾ ಲೋಕಾಭಿರಾಮವಾಗಿ ಮಾತಾಡುತ್ತಲೇ ಇದ್ದರು.

ನಡುವೆ ಒಮ್ಮೆ ಒಳಗೆ ಹೋಗಿ ಒಂದು ಪ್ಲೇಟಿನಲ್ಲಿ ಬನಾನ ಚಿಪ್ಸ್ ತಂದರು.

‘ಕೋಳಿಕ್ಕೋಡನ್ ಚಿಪ್ಸ್. ಕಲಬೆರಕೆಯಿಲ್ಲದ ಕೊಬ್ಬರಿ ಎಣ್ಣೆಯಲ್ಲಿ ಹುರಿದ ಚಿಪ್ಸ್. ತೆಗೆದುಕೊಳ್ಳಿ.’

ರಿಸೆಪ್ಶನಿಗೆ ಫೋನ್ ಮಾಡಿ ಎರಡು ಚಹಾ ತರಲು ಹೇಳಿದರು. ‘ಈಗಿನ ಕಾಲದಲ್ಲಿ ಯಾವುದನ್ನೂ ನಂಬುವ ಹಾಗಿಲ್ಲ. ಎಲ್ಲದರಲ್ಲೂ ಕಲಬೆರಕೆ. ಯಾವುದು ಒಳ್ಳೆಯದು ಯಾವುದು ಕೆಟ್ಟದು ಅಂತ ಹೇಳುವುದಕ್ಕೇ ಆಗುವುದಿಲ್ಲ.’

ನಾನು ಬಹಳ ಸಂಕೋಚದಿಂದಲೇ ಆ ಪ್ರಶ್ನೆಯನ್ನು ಕೇಳಿದೆ: ‘ಉಮ್ಮುಕ್ಕಾ, ನಿಮಗೆ ಬದಿಯಡ್ಕದ ಗೋಪಾಲಕೃಷ್ಣ ಅಂತ ಒಬ್ಬರು ಗೊತ್ತಾ?’

ಆ ಕ್ಷಣದಲ್ಲಿ ಅವರ ಮುಖದಲ್ಲಿ ಮಿಂಚಿ ಮರೆಯಾದ ಭಾವವನ್ನು ನನಗೆ ವಿವರಿಸಲು ಸಾಧ್ಯವಿಲ್ಲ. ಸ್ವಲ್ಪ ಹೊತ್ತಿನ ಮೌನದ ನಂತರ ಹೇಳಿದರು, ‘ಜೀವನದಲ್ಲಿ ಒಮ್ಮೆಯೂ ಕಂಡಿಲ್ಲ. ಆದರೆ ಬಹಳ ಹತ್ತಿರದ ಪರಿಚಯ. ಮೊದ ಮೊದಲಿಗೆ ವಾರಕ್ಕೆ ಎರಡಾದರೂ ಕಾಗದಗಳು ಬರುತ್ತಿದ್ದವು. ಯಾರೋ ಮೇರ್ಸಿ ಅಂತ ಹುಡುಗಿ ಅವರಿಂದ ದೂರಾಗಲು ನಾನು ಕಾರಣವಂತೆ. ನಾನು ಮಧ್ಯಸ್ಥಿಕೆ ವಹಿಸಿ ಸರಿ ಮಾಡಿಕೊಡಬೇಕು. ಮೊದಲಿಗೆಲ್ಲ ಈ ವಿಷಯದಲ್ಲೇ ಪತ್ರಗಳು ಬರುತ್ತಿದ್ದವು. ನಂತರದ ದಿನಗಳಲ್ಲಿ ಬೈಗುಳ ಮತ್ತು ಬೆದರಿಕೆಗಳು ಶುರುವಾದವು. ಜೀವನದಲ್ಲಿ ಇಲ್ಲಿಯ ತನಕ ಅಡಯಾರ್ ಇನ್‌ಸ್ಟಿಟ್ಯೂಟಿಗೆ ನಾನು ಹೋಗಿಲ್ಲ. ನನ್ನ ಅಭಿನಯದ ಪಾಠಶಾಲೆ ಬೀದಿಗಳು, ದೇವಸ್ಥಾನದ ಅಂಗಳ, ಜಾತ್ರೆ ಬೀದಿ ಮತ್ತು ಪಾರ್ಟಿ ಸಮ್ಮೇಳನಗಳು. ಅಲ್ಲಿ ನಾನು ಆಡಿದ ಅದೆಷ್ಟೋ ನಾಟಕಗಳು ನನ್ನನ್ನು ಸಿನಿಮಾದ ತನಕ ನಡೆಸಿದವು.’

‘ಆತನ ಮೇಲೆ ಕೋಪಗೊಂಡಿದ್ದಿದೆಯೇ?’

‘ಯಾಕೆ ಕೋಪ? ಹೆಸರು ಗಳಿಸುವುದೆಂದರೆ ಗುಲಾಬಿ ಹೂವನ್ನು ಎತ್ತಿಕೊಂಡ ಹಾಗೆ. ಅದರಲ್ಲಿ ಮುಳ್ಳುಗಳೂ ಇರುತ್ತವೆ.’

ಬನಾನ ಚಿಪ್ಸ್ ನಾಲಗೆ ಮೇಲೆ ಇಟ್ಟದ್ದೇ ತಡ, ಕೋಣೆಯ ತುಂಬ ಶುದ್ಧ ಕೊಬ್ಬರಿ ಎಣ್ಣೆಯ ಸುವಾಸನೆ ತುಂಬಿಕೊಂಡಿತು. ಒಮ್ಮೆಲೇ ಜ್ಞಾನೋದಯವಾದಂತೆ ನನ್ನ ಮನಸ್ಸು ಎಚ್ಚರಗೊಂಡಿತು. ಜೀವನದ ಬಗೆಗಿನ ಜ್ಞಾನೋದಯ. ಹಲ್ಲುಗಳೆಡೆಯಲ್ಲಿ ಸಿಕ್ಕ ಅದು ಕುರುಮುರು ಸದ್ದು ಮಾಡುತ್ತಾ ಪುಡಿಪುಡಿಯಾಯಿತು. ಆದರೆ ಸುಲಭದಲ್ಲಿ ಸೋಲೊಪ್ಪದ ಚಿಪ್ಸ್ ಅರ್ಧ ಸೆಕೆಂಡು ಹಲ್ಲುಗಳೆಡೆಯಲ್ಲಿ ಜೀವ ಉಳಿಸಿಕೊಂಡಿತ್ತು ಎಂಬುದು ಕಟು ವಾಸ್ತವ. ನಂತರ ಅದು ಅತ್ಯಂತ ಸಾಧಾರಣವಾಗಿ ನಾಲಗೆ ಮೇಲೆ ಬಿದ್ದು ರಸಗ್ರಂಥಿಗಳಲ್ಲಿ ಜೀವನೋತ್ಸವವನ್ನು ನಡೆಸಿತು. ಪುಡಿಯಾಗಿ ನಾಲಗೆ ಮೇಲೆ ಬಿದ್ದ ಚಿಪ್ಸ್ ತನ್ನ ಪ್ರೇಮಿಯೊಂದಿಗೆ ಒಂದಾಗುವ ಹಾಗೆ ಉಗುಳಿನೊಂದಿಗೆ ಸೇರಿಕೊಂಡಿತು. ಕ್ಷಣಮಾತ್ರದಲ್ಲಿ ಅದೆಷ್ಟೋ ಕಾಲದ ರುಚಿಯ ಸುಖ ಬಾಯಲ್ಲಿ ಈಜಿ ಮರೆಯಾಯಿತು. ನನ್ನ ಕಣ್ಣುಗಳು ಮುಚ್ಚಿಕೊಂಡವು. ಇಷ್ಟೊಂದು ಸುಖವಾಗಿ ಬಾಳಬಹುದಾದ ರುಚಿಗಳನ್ನು ಕೆಡಿಸುತ್ತಿರುವವರು ಯಾರು ಎಂಬ ಪ್ರಶ್ನೆ ಮನಸ್ಸನ್ನು ಹಿಡಿದು ನಿಲ್ಲಿಸಿತು.

ಅಲ್ಲಿಂದ ಬೀಳ್ಕೊಡುವಾಗ ಉಮ್ಮುಕ್ಕ ಏನೋ ನೆನಪಾದವರಂತೆ ಕೇಳಿದರು, ‘ಬದಿಯಡ್ಕದ ಗೋಪಾಲಕೃಷ್ಣ ನಿಮ್ಮ ಪರಿಚಯದವರಾ?’

‘ಅವರ ತಮ್ಮ ನನ್ನ ಗೆಳೆಯ. ಧಿಕ್ಕಾರಿ ಎಂಬ ಹೆಸರಿನಲ್ಲಿ ಕವಿತೆ ಬರೀತಾನೆ.’

‘ಆ ಹೆಸರನ್ನು ನಾನು ಕೆಲವು ಕಡೆ ಗಮನಿಸಿದ್ದೇನೆ.’

ಅವರಿಗೆ ಪುನಃ ಏನೋ ನೆನಪಾಗಿ ‘ಒಂದು ನಿಮಿಷ ಇರಿ’ ಎಂದು ಹೇಳಿ ಒಳಗಡೆ ಹೋದರು. ಮರಳಿ ಬರುವಾಗ ಕೈಯಲ್ಲಿ ಒಂದು ಪ್ಯಾಕೆಟ್ ಬನಾನ ಚಿಪ್ಸ್ ಇತ್ತು.

‘ಇದನ್ನು ಗೋಪಾಲಕೃಷ್ಣರಿಗೆ ತಲುಪಿಸಬಹುದಾ?’

‘ಖಂಡಿತಾ ತಲುಪಿಸುವೆ.’

‘ಸಾಧ್ಯವಾದರೆ ಇದನ್ನು ನಿಮ್ಮ ಕೈಯಾರೆ ಕೊಡಬೇಕು. ಪರವಿರೋಧಕ್ಕೆ ಬನಾನ ಚಿಪ್ಸ್ ಬಹಳ ಒಳ್ಳೆಯದು. ಹಲ್ಲುಗಳ ನಡುವೆ ಚಿಪ್ಸ್ ನಜ್ಜುಗುಜ್ಜಾಗುವಾಗ ನಮ್ಮ ಒಳಬೇಗುದಿಗಳೆಲ್ಲ ನಂದಿಹೋಗುತ್ತವೆ. ಒಳ್ಳೆಯ ನಾಟಿ ಕೊಬ್ಬರಿ ಎಣ್ಣೆಯ ಪರಿಮಳವನ್ನೂ ನಿಧಾನಕ್ಕೆ ಗ್ರಹಿಸುತ್ತಾರೆ.’

ಉಮ್ಮರ್ ತನ್ನ ಟರ್ಕಿ ಟವಲ್ಲನ್ನು ಕಣ್ಣಿಗೆ ಒತ್ತಿಕೊಂಡರು.

ಹಲವಾರು ಹುಣ್ಣಿಮೆಗಳು ನನ್ನನ್ನು ಕಂಡೂ ನಾನು ಅವುಗಳನ್ನು ಕಂಡೂ ಕಳೆದು ಹೋದವು. ಬದಿಯಡ್ಕದಿಂದ ಯಾವಾಗಲಾದರೊಮ್ಮೆ ಪೋಸ್ಟ್ ಕಾರ್ಡುಗಳು ಬರುತ್ತವೆ. ಶಶಿಕುಮಾರನಿಂದ. ‘ಗಾಜಿನ ಹಂಚಿನಲ್ಲಿ ಹುಣ್ಣಿಮೆ ಚಂದಿರನನ್ನು ನೋಡುತ್ತಾ ಮಲಗೋಣವಾ? ನೀನು ಕತೆ. ನನ್ನ ಕವಿತೆ. ಒಂದಿಷ್ಟು ಕಾಲವಾದರೂ ನಾವು ಬದುಕಿಬಿಡೋಣ.’

ಹೀಗೆ ಹಲವಾರು ವರ್ಷಗಳ ನಂತರ ನಾನು ಪುನಃ ಅರಕ್ಕಾಡು ತರವಾಡು ತಲುಪಿದೆ. ಕಾಲು ಜಾರುವ ಪಾಚಿ ಮತ್ತು ಹುಲ್ಲುಗಳಿಗೆ ಯಾವುದೇ ಬದಲಾವಣೆ ಇರಲಿಲ್ಲ. ಗೇಟು ಮನುಷ್ಯಾಕಾರದಲ್ಲಿ ಮತ್ತಷ್ಟು ತುಕ್ಕು ಹಿಡಿದು ನಿಂತಿದೆ. ಹಸಿರು ಬಣ್ಣದ ಕೊಳ ಮಾತ್ರ ಯೌವನ ತುಳುಕಿಸುತ್ತಾ ರವಿಕೆ ಬಿಗಿಯಾಗಿ ಎಳೆದುಕೊಂಡು ನಗುತ್ತಲೇ ಇತ್ತು. ಗಾಜಿನ ಹಂಚಿನಲ್ಲಿ ಹುಣ್ಣಿಮೆ ನೋಡುತ್ತಾ ಮಲಗಿದ್ದಾಗ ನಾನು ಕೇಳಿದೆ, ‘ಶಶಿ, ನೀನು ಊರು ಬಿಟ್ಟು ಎಷ್ಟು ಕಾಲವಾಯಿತೋ? ಎಲ್ಲಿದ್ದೆ ಇಷ್ಟು ಕಾಲ?’

‘ನೆಲ ಸುಡುತ್ತಿತ್ತು. ಬೇಗ ಬೇಗ ಹೆಜ್ಜೆ ಬದಲಿಸಿದೆ. ನನಗರಿವಿಲ್ಲದೆಯೇ ಅದೊಂದು ಯಾತ್ರೆಯಾಯಿತು. ಅಕ್ಕ ತೀರಿ ಹೋದಳು. ಹಗಲು ಹೊತ್ತಲ್ಲಿ ಸಂಬಂಧಿಕರೊಬ್ಬರು ಬಂದು ಮನೆ ಗುಡಿಸಿ ಒರೆಸಿ ಹೋಗುತ್ತಾರೆ. ಅವರ ಮನೆಯಿಂದಲೇ ಅಣ್ಣನಿಗೆ ಊಟ ತರುತ್ತಾರೆ. ಮೊದಲು ಅವರು ಉಣ್ಣಬೇಕು. ಆಮೇಲಷ್ಟೇ ಅಣ್ಣನ ಊಟ. ಬದಿಯಡ್ಕದಲ್ಲಿ ಇತ್ತೀಚೆಗೆ ಕಪ್ಪುಗಾಜಿನ ಕಾರಿನಲ್ಲಿ ತಿರುಗಿತ್ತಿರುವ ಕೆ.ಪಿ.ಉಮ್ಮರನ್ನು ಹಲವರು ಕಂಡಿದ್ದಾರಂತೆ. ಒಮ್ಮೆ ಚಿಪ್ಸಿನ ರೂಪದಲ್ಲಿ ಸಾವು ಮನೆ ತನಕ ಬಂದಿತ್ತಂತೆ.’

‘ಈಗಲೂ ಅದೇ ಹಗೆತನ ಇದೆ, ಅಲ್ವಾ?’

‘ಅಣ್ಣ ಈಗ ಹಳೆಯ ದ್ವೇಷವನ್ನು ಆಧುನೀಕರಣಗೊಳಿಸಿದ್ದಾರೆ. ವಾಟ್ಸ್‌ ಆ್ಯಪಿನಲ್ಲಿ ಕೆ.ಪಿ. ಉಮ್ಮರ್ ವಿರೋಧಿ ಸಮಿತಿ ಅಂತೇನೋ ಒಂದು ಗ್ರೂಪ್ ಮಾಡಿದ್ದಾರಂತೆ.’

‘ಅದರಲ್ಲಿ ಜನರಿದ್ದಾರಾ?’

‘ಇದ್ದಾರಾ ಅಂತ ಕೇಳ್ತಿದ್ದೀಯಾ? ದುಬೈಯಲ್ಲಿರುವ ಒಬ್ಬ ವಕೀಲ, ಕುಂಞಬ್ದುಲ್ಲ ಅಂತ, ಅದರ ಓವರ್‍ಸೀಸ್ ಪ್ರೆಸಿಡೆಂಟ್. ಅಣ್ಣನ ಅಭಿಮಾನಿಗಳು ಜಾಸ್ತಿ ಇರೋದು ದುಬೈಯಲ್ಲೇ.’

‘ನಾನೊಮ್ಮೆ ಮಾತಾಡಿ ನೋಡಿದರೆ ಹೇಗೆ?’

‘ನಿನಗೆಂತ ಹುಚ್ಚು ಹಿಡಿದಿದ್ಯಾ?’

ಬೆಳಿಗ್ಗೆ ಏಣಿ ಇಳಿಯುವಾಗ ಅದೇ ಕುರ್ಚಿಯಲ್ಲಿ ಅದೇ ಬಿಳಿ ಖಾದಿ ಜುಬ್ಬಾದಲ್ಲಿ ಗೋಪಾಲಕೃಷ್ಣರು.

ಹೊರಡುವಾಗ ಶಶಿ ಕಾಲು ಮುಟ್ಟಿ ನಮಸ್ಕರಿಸಿದ. ಕಣ್ಣು ಮುಚ್ಚಿ ಯಾವುದೋ ಮಂತ್ರಗಳನ್ನು ಪಠಿಸುತ್ತಾ ಆಶೀರ್ವಾದವೂ ಸಿಕ್ಕಿತು.

ನಾನು ಹೇಳಿದೆ, ‘ಹಿಂದೆ ಒಮ್ಮೆ ನಾನಿಲ್ಲಿಗೆ ಬಂದಿದ್ದೆ.’

‘ಯೆಸ್. ಐ ರಿಮೆಂಬರ್. ನಾವು ಮಾತಾಡಿದ ವಿಷಯಗಳನ್ನು ಒಂದು ನೋಟ್‍ಬುಕ್ಕಿನಲ್ಲಿ ಬರೆದಿಟ್ಟಿದ್ದೆ. ಒಳಗೆ ಇದೆ ಅದು. ಮತ್ತೆ... ನಿಮಗೆ ವಾಟ್ಸ್‌ಆ್ಯಪ್ ಉಂಟಾ?’

‘ಉಂಟು.’ ನಾನು ನಂಬರ್ ಹೇಳಿಕೊಟ್ಟೆ.

ನಿಧಾನಕ್ಕೆ ಅದನ್ನು ತನ್ನ ಫೋನಿನಲ್ಲಿ ಹಾಕಿಕೊಂಡರು.

‘ನಮ್ಮದೊಂದು ವಾಟ್ಸ್‌ ಆ್ಯಪ್ ಗ್ರೂಪುಂಟು. ಐನೂರಕ್ಕಿಂತ ಜಾಸ್ತಿ ಜನರಿದ್ದಾರೆ. ಸ್ಪೆಷಲ್ ಸಾಫ್ಟ್ವೇರ್ ಹಾಕಿಕೊಂಡಿದ್ದೇವೆ. ಕೆ.ಪಿ. ಉಮ್ಮರ್ ವಿರೋಧಿ ಸಮಿತಿ ಅಂತ ಅದರ ಹೆಸರು. ನೀವು ನಮ್ಮ ಗ್ರೂಪಿಗೆ ಸೇರಬೇಕು.’

ನಾನು ತಲೆಯಾಡಿಸಿದೆ.

‘ಅವನನ್ನು ಸುಮ್ಮನೆ ಬಿಡಬಾರದು. ಆ ಕೆ.ಪಿ. ಉಮ್ಮರ್ ಕಾರಣ ಎಲ್ಲ... ನೀವು ನಮ್ಮ ಜೊತೆಗಿರಬೇಕು.’

ನಾನು ಕೇಳಿದೆ, ‘ಅಲ್ಲ, ಈ ಕೆ.ಪಿ. ಉಮ್ಮರ್ ತೀರಿ ಹೋಗಿ ಸುಮಾರು ವರ್ಷಗಳಾದವಲ್ಲ?’

ತಕ್ಷಣ ಚೂಪಾದ ಈಟಿಯೊಂದು ಅವರ ಕಣ್ಣುಗಳಿಂದ ನನ್ನತ್ತ ಧಾವಿಸಿ ಬಂತು. ‘ಅದೆಲ್ಲ ಆತನ ಅಭಿನಯ. ಗೊತ್ತಾಯ್ತಾ?’

ಶಶಿ ಹಿಂದಿನಿಂದ ದೈನ್ಯತೆಯಿಂದ ಹೇಳುತ್ತಲೇ ಇದ್ದ:

‘ವಾದ ಮಾಡಬೇಡ. ಪ್ಲೀಸ್. ವಾದ ಮಾಡಬೇಡ...’

ಕನ್ನಡಕ್ಕೆ: ಸುನೈಫ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT