ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜಯ್ ಕುಮಾರ್ ಎಂ. ಗುಂಬಳ್ಳಿ ಬರೆದ ಕಥೆ: ಪ್ರೀತಿ

Last Updated 1 ಜನವರಿ 2022, 19:30 IST
ಅಕ್ಷರ ಗಾತ್ರ

ಹರೀಶ ಕಾಲೇಜಿಂದ ಹೊರಟು ಲೆವೆಲ್ ಕ್ರಾಸಿಂಗ್ ಬಳಿ ನಿಂತಿದ್ದ. ಕೆಂಪುದೀಪ ಮಿನುಗುತ್ತಿತ್ತು. ರೈಲು ಬಂದಿತು. ಹಳಿಯ ಮೇಲೆ ಹತ್ತು ಪೈಸೆ ಇಟ್ಟರೂ ರೈಲು ಉರುಳಿ ಬೀಳುತ್ತದೆಂದು ನಂಬಿದ್ದ ದಿನಗಳು ನೆನಪಾಗಲು ಆತ ಮುಗುಳ್ನಕ್ಕ. ರಂಗಾಯಣಕ್ಕೆ ಹೋಗುವ ಮನಸ್ಸಾಗಲಿಲ್ಲ. ಕುಕ್ಕರಹಳ್ಳಿ ಕೆರೆ ಗೇಟು ತಳ್ಳಿ ಒಳ ನಡೆಯುತ್ತ ನೀರಲ್ಲಿ ತೇಲುತ್ತಿದ್ದ ಹಕ್ಕಿಗಳನ್ನು ನೋಡಿ ಖುಷಿಗೊಂಡ.

ಪ್ರೇಮಿಗಳಿಬ್ಬರು ಬೆರಳಿಗೆ ಬೆರಳುಕೂಡಿಸಿ ಕುಳಿತಿದ್ದರು. ಅವರನ್ನು ನೋಡಿ ‘ಪ್ರೀತಿ’ ತಟ್ಟನೆ ತಲೆಗೆ ಬಂದಳು. ಬದನೆಕಾಯಿ ಜಡೆಯ, ಕಪ್ಪುಕೂದಲಿನ, ಕೋಲು ಮುಖದ, ಕೆಂಪನೆಯ ಹುಡುಗಿ. ಅಬ್ಬಾ! ಅವಳ ಮಾತು ಎಂಥ ಚಂದ. ಶಾಲೆಗೆ ಬಂದ ಒಂದು ತಿಂಗಳಲ್ಲೇ ಎಲ್ಲರನ್ನು ಆಕರ್ಷಿಸಿದ್ದಳು.

ಆ ದಿನಗಳಲ್ಲಿ ಪ್ರೇಮ ನಿವೇದನೆ ಮಾಡಬೇಕಿತ್ತು. ಇಷ್ಟವಿದ್ದರೆ ಒಪ್ಪುತ್ತಿದ್ದಳು. ಇಲ್ಲದಿದ್ದರೆ ‘ಇಲ್ಲ’ ಎನ್ನುತ್ತಿದ್ದಳು.

‘ಛೇ ನಾನೆಂಥ ಮೂರ್ಖ’ ಎನಿಸಿತು.

‘ಕ್ಯಾಕರಿಸಿ ಉಗಿದಿದ್ದರೆ..’ ಹೀಗಂದಿತು ಒಳಮನಸ್ಸು.

ನನ್ನೊಂದಿಗೆ ನಗುತ್ತ ಮಾತನಾಡುತ್ತಿದ್ದಳು. ಸಹಪಾಠಿಗಳಾದ್ದರಿಂದ ನೋಟ್‍ಬುಕ್, ಪೆನ್, ಪೆನ್ಸಿಲ್, ರಬ್ಬರ್ ಇತ್ಯಾದಿಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದೆವು. ನನ್ನೊಟ್ಟಿಗೆ ಸಲಿಗೆಯಿಂದಿದ್ದಳು. ಮಳೆ ದಿವಸ ನಾವಿಬ್ಬರು ಒಂದೇ ಕೊಡೆ ಹಿಡಿದು ಶಾಲಾ ಆವರಣದಲ್ಲಿ ಸುತ್ತಾಡಿದ್ದೆವು. ನಾನು ಮತ್ತು ಆಯುಧ್ ಅಭಿನಯಿಸಿದ ನಾಟಕ ಮೆಚ್ಚಿ ಉಡುಗೊರೆಯಾಗಿ ‘ಜೆಲ್‍ಪೆನ್’ ಕೊಟ್ಟಿದ್ದಳು.

ಪ್ರೀತಿ ನೆನಪು ಭಾರವೆನಿಸಿ ವಾಸ್ತವಕ್ಕೆ ಬಿದ್ದು, ಇಳಿಜಾರಿನ ಕಪ್ಪು ರಸ್ತೆಗೆ ಇಳಿಯದೇ ಸುತ್ತುಗೋಡೆ ಮೇಲೆಹತ್ತಿ ಹಾಸ್ಟೆಲ್ ಅಂಗಳಕ್ಕೆ ನೆಗೆದ.

‘ಲೋ ಬಾರ್ಲ ಹುಡುಗ, ಊಟ ಮಾಡು’ ಲಕ್ಷ್ಮಮ್ಮ ಕೂಗಿದಳು. ಬಿರುಸಾಗಿ ನಡೆಯಲು ಅವನಲ್ಲಿ ಶಕ್ತಿಯಿಲ್ಲವಾಗಿತ್ತು. ರಮೇಶ ತಟ್ಟೆ ಕಿತ್ತುಕೊಂಡು ತಮಾಷೆ ಮಾಡುತ್ತ ‘ಇವ್ನು ನಮ್ ಮಾವನ ಮಗ’ ಎನ್ನುತ್ತಿದ್ದ. ಹರೀಶನಿಗೆ ಸಿಟ್ಟತ್ತಿ ‘ಮುಚ್ಕೊಂಡು ಅನ್ನ ಹಾಕು’ ರೇಗಿದ. ಅವನ ಹಸಿವನ್ನು ಅಂದಾಜಿಸಿದ ರಮೇಶ ಒಂದೂ ಮಾತಾಡಲಿಲ್ಲ.

ರೂಮಿಗೆ ಬಂದು ಹಾಸಿಗೆಗೆ ಕಾಲು ನೀಟಿ, ಕಾಲೇಜಿನ ವಾರ್ಷಿಕ ಸಂಚಿಕೆಗೆ ‘ಬೇಜಾರು ಕಳೆಯುವುದು ಹೇಗೆಂದು’ ತೋಚಿದ್ದನ್ನು ಬರೆದು, ರಾಘವನ ರೂಮಿಗೆ ಹೋಗಿ ‘ಓದಿ ಹೇಗಿದೆ? ಹೇಳು’ ತೋರಿಸಿದ. ‘ಚೆನ್ನಾಗಿದೆ. ಒಟ್ನಲ್ಲಿ ಏನೋ ಮಾಡ್ತಿಯ ನೀನು’ ಅಂದ ರಾಘವ. ಸಿಲಬಸ್ ಓದುತ್ತಿದ್ದ ವಿನೋದ ನಗುವಿನಲ್ಲೇ ಮೆಚ್ಚುಗೆ ಸೂಚಿಸಿದ.

***

ಇಳಿಸಂಜೆಗೆ ಹಾಸ್ಟೆಲ್‍ನ ಹಿಂಬದಿಗೆ ಹೋಗಿ ಬಟ್ಟೆ ಒಗೆಯುವ ಕಲ್ಲಿನ ಮೇಲೆ ಕೂತು ಪಿಲ್ಲರ್ ಸರಳಿನ ಬಳಿ ಹಾರಾಡುತ್ತಿದ್ದ ಹಕ್ಕಿಯನ್ನು ಅಭ್ಯಸಿಸುವಂತೆ ನೋಡಿದ. ಗುಬ್ಬಚ್ಚಿ ತರಹವೇ ಕಾಣಿಸಿದರೂ ಗುಬ್ಬಚ್ಚಿಯಲ್ಲ ಎಂಬ ಖಾತರಿ ಇತ್ತು. ಮೆಲುಕು ಹಾಕಿದಾಗ ‘ತೇಜಸ್ವಿ’ ನೆನಪಾದರು. ತಕ್ಷಣಕ್ಕೆ ಗೀಜುಗ ಎಂಬುದು ಹೊಳೆಯಿತು. ಎಳೆ ವಯಸ್ಸಲ್ಲಿ ಗೆಳೆಯರೊಟ್ಟಿಗೆ ಊರಿನ ಉದ್ದಿ ಬಯಲಿನ ಗೊಬ್ಬಳಿ ಮರದಲ್ಲಿ, ಗೀಜುಗನ ಗೂಡುಗಳನ್ನು ಕಿತ್ತು ಅದರಲ್ಲಿದ್ದ ಮೊಟ್ಟೆಗಳನ್ನು ಕಲ್ಲಲ್ಲಿ ಕುಟ್ಟಿ ಪುಡಿಪುಡಿ ಮಾಡಿ, ಕೊನೆಗೆ ಎರಡು ಸಣ್ಣ ಗೀಜುಗದ ಮರಿಗಳನ್ನು ಸಾಯಿಸಿ ಮಣ್ಣು ಮಾಡಿದ್ದನು. ಚಡ್ಡಿ ದೋಸ್ತ್ ಆಯುಧ್ ಜೊತೆ ಸೇರಿ ಕಂಚುಗೆರೆ ಗುಡ್ಡದಲ್ಲಿ ನವಿಲೊಂದನ್ನು ಹಿಡಿದು ಮನೆಗೆ ತಂದಿದ್ದಾಗ ಶನಿಮಾತ್ಮ ಗುಡಿಯ ಪೂಜಾರಿ, ದೇವಸ್ಥಾನದ ನವಿಲೆಂದು ಹೇಳಿ ಈಸಿಕೊಂಡು ಹೋಗಿದ್ದ. ಪಾರಿವಾಳಗಳಿಗಾಗಿ ಚಿನ್ನಪ್ಪನ ಮನೆಗೆ ದಿನಕ್ಕೆ ಎರಡು ಬಾರಿಯಂತೆ ತಿಂಗಳು ತಿರುಗಿದರೂ ಪಾರಿವಾಳಗಳು ದಕ್ಕಲಿಲ್ಲ. ತನ್ನ ಅಲೆದಾಟವನ್ನೆ ಕತೆ ಮಾಡಲು ನಿರ್ಧರಿಸಿ ‘ಪಕ್ಷಿಗಳು’ ಶೀರ್ಷಿಕೆ ಬರೆದು ಪಿಲ್ಲರ್ ನೋಡಿದ. ಆ ಹಕ್ಕಿ ಹಾರಿಹೋಗಿತ್ತು. ಎದ್ದು ಹಾಸ್ಟೆಲ್ ಒಳಕ್ಕೆ ನಡೆದ. ಎಲ್ಲರು ತಟ್ಟೆ ಹಿಡಿದು ‘ಕ್ಯೂ’ ನಿಂತಿದ್ದರು. ಒಂದೇ ರುಚಿಯ ಊಟದ ಮೇಲೆ ಅವನಿಗೆ ಆಸಕ್ತಿ ಇರಲಿಲ್ಲ. ಬೇಕುಬಿಟ್ಟಿಯಿಂದ ತಟ್ಟೆ ತಂದಿದ್ದ. ಸಂಪಿಗೆ ಹೂಗಳ ಸುಗಂಧ ಮೂಗಿಗೆ ಬಡಿಯುತ್ತಿತ್ತು. ಹಾಸ್ಟಲ್ಲಿನ ಒಳಾಂಗಣದಲ್ಲಿ ಎರಡು ಸಂಪಿಗೆ ಮರಗಳು, ಒಂದು ನಿಂಬೆಗಿಡ, ಒಂದು ಪರಂಗಿ ಗಿಡವಿತ್ತು.

***

ಎಂದಿನಂತೆ ಕುಕ್ಕರಹಳ್ಳಿ ಕೆರೆಏರಿ ಮೇಲೆ ಕಾಲೇಜಿಗೆ ಹೊರಟಿದ್ದವನು ಇಡೀ ಪರಿಸರವನ್ನೇ ತನ್ನ ಕಣ್ಣೊಳಗೆ ಇಳಿಸಿಕೊಂಡಿದ್ದ. ಲೆವೆಲ್ ಕ್ರಾಸಿಂಗ್ ದಾಟಿ ಡಿಸಿ ಕಛೇರಿ ಕಡೆದು ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರನ್ನು ಹುಡುಕಾಡಿದ. ಅವರು ರಜೆಯಲ್ಲಿದ್ದರು. ಇವನು ಮತ್ತಾವ ತರಗತಿಯನ್ನು ಏಕಾಗ್ರತೆಯಿಂದ ಕೇಳಿಸಿಕೊಳ್ಳಲಿಲ್ಲ. ಬಯಾಲಜಿ ಪ್ರಾಯೋಗಿಕ ತರಗತಿಯಲ್ಲಿ ‘ಆಕೆಯ ಬದುಕೇಕೆ ಹೀಗೆ’ ಎಂದು ಒಬ್ಬ ಹೆಂಗಸಿನ ಬಗ್ಗೆ ಕವಿತೆ ಬರೆದ. ಜೊತೆಗಿದ್ದ ವಿನೋದ ‘ಏನ್ಲಾ ನಿನ್ ಲವ್ವರಾ, ಈ ಕವಿತೇಲಿ ಇರುವ ಹೆಣ್ಣು’ ಅಂದಾಗ ‘ಪ್ರೀತಿ’ ಮತ್ತೆ ನೆನಪಾದಳು. ‘ಅವಳು ತನ್ನನ್ನು ನೆನಪಿಸಿಕೊಳ್ಳಬಹುದೇ’ ತನ್ನನ್ನೆ ಕೇಳಿಕೊಂಡ. ಅವಳು ಯಾವ ಕಾಲೇಜಿಗೆ ಸೇರಿದ್ದಾಳೆಂದು ಸಹ ಇವನಿಗೆ ಗೊತ್ತಿರಲಿಲ್ಲ. ಆಗಾಗ ಇವನಲ್ಲಿ ‘ಪ್ರೀತಿ’ಯ ಅಲೆ ಏಳುತ್ತಲೇ ಇತ್ತು.

ಮಧ್ಯಾಹ್ನ ಕಾಲೇಜು ಬಿಟ್ಟಾಗ ಇಬ್ಬರೂ ಸಿಟಿಗೆ ಹೊರಟಿದ್ದರು. ಅಂಗಡಿ, ಮಳಿಗೆಗಳು ಹರೀಶನಲ್ಲಿ ಬಣ್ಣಬಣ್ಣದ ಕನಸುಗಳನ್ನು ಹುಟ್ಟಿಸುತ್ತಿದ್ದವು. ವಿನೋದನ ಬಳಿ ಕಾಸಿರಲಿಲ್ಲ. ಇಬ್ಬರದೂ ಒಂದೇ ಪರಿಸ್ಥಿತಿ. ಒಳ್ಳೆಯ ಊಟ-ತಿಂಡಿ, ಬಟ್ಟೆಬರೆ, ಫೋನು-ಬೈಕು, ಪ್ರಿಯತಮೆ ಇಷ್ಟು ಅವರನ್ನು ಕಂಗೆಡಿಸುತ್ತಿದ್ದವು.

ಇಬ್ಬರು ಸಿಟಿ ಬಸ್ ನಿಲ್ದಾಣದಕ್ಕೆ ಬಂದಾಗ ಹುಡುಗೀರು, ಕಾಡುಗಳಲ್ಲಿ ಅಲೆದಾಡುತ್ತ ಮೇವು ಹುಡುಕುವ ಮೇಕೆಗಳಂತೆ ಓಡಾಡುತ್ತಿದ್ದರು. ಕಣ್ಣುಗಳಿಗೆ ಹಬ್ಬವೋ ಹಬ್ಬ. ವಿನೋದ, ಹರೀಶ ಇಬ್ಬರಲ್ಲೂ ಏನೋ ಒಂಥರಾ ಖುಷಿ. ಹುಡುಗೀರ ಒಂದು ನೋಟಕ್ಕೆ ಇವರಲ್ಲಿ ಕನಸುಗಳ ಬುತ್ತಿ ಬಿಚ್ಚಿಕೊಳ್ತಲೆ, ಇಬ್ಬರ ಹರೆಯದ ಮನಸ್ಸುಗಳು ಲಗಾಮು ಇಲ್ಲದ ಕುದುರೆಯಂತೆ ಸಿಕ್ಕಸಿಕ್ಕ ದಿಕ್ಕಿಗೆ ಉಗ್ರ ಓಟವನ್ನು ಮುಂದುವರೆಸಿದ್ದವು.

‘ಹಾಯ್ ವಿನೋದ್’ ರಶ್ಮಿ ಕರೆದಾಗ ಮೈಮರೆತಿದ್ದ ಇಬ್ಬರು ದಿಗಿಲಾದರು.

‘ಪ್ರಣತಿ ಯಾಕ್ ಬಂದಿಲ್ಲ ಕಾಲೇಜಿಗೆ’ ವಿನೋದ್ ಅತ್ಯಂತ ಆಸ್ಥೆಯಿಂದ ಕೇಳಿದಾಗ

ರಶ್ಮಿ ‘ಜ್ವರ-ತಲೆನೋವು ಅವ್ಳಿಗೆ’ ಅಂದಳು.

‘ತುಂಬಾನೆ ಉಷಾರಿಲ್ವ’ ವಿನೋದ್‍ನ ಧ್ವನಿಯಲ್ಲಿ ಆತಂಕವಿತ್ತು.

‘ಹಾಗೇನು ಇಲ್ಲ. ನಾಳೆ ಬರ್ತಾಳೆ ಬಿಡು’ ಎಂದು ರಶ್ಮಿ ಗೆಳತಿಯರ ಕೂಗಿಗೆ ಅಲ್ಲಿಂದ ಕಾಲ್ಕಿತ್ತಳು.

‘ಪ್ರಣತಿನಾ ಕೇಳ್ದೆ ಅಂತ ಹೇಳು. ಓಕೆ ನಾ’ ವಿನೋದ ನಗುತ್ತಲೇ ಹೇಳಿದ.

‘ಸರಿ...ಸರಿ’ ಹೇಳುತ್ತ ರಶ್ಮಿ ಹರೀಶನನ್ನು ದಿಟ್ಟಿಸುತ್ತಲೇ ನಡೆದಳು.

‘ಇವ್ಳು ಚೆನ್ನಾಗಿದಾಳೆ’ ಎಂದ ಹರೀಶನ ಮುಖದಲ್ಲಿ ಹೊಳಪಿತ್ತು.

‘ಅಷ್ಟೇನು ಖುಷಿ ಆಗ್ಬೇಡ. ಅವ್ಳು ಆಲ್‍ರೆಡಿ ಲವ್ ಮಾಡ್ತವ್ಳೆ’ ವಿನೋದ್ ತಟ್ಟನೆ ಹೇಳಿದಾಗ ಹೆದ್ದಾರಿಯ ವಾಹನ ಸರಣಿಯಂತೆ ಹರೀಶನಲ್ಲಿ ‘ಪ್ರೀತಿ’ಯೊಂದಿಗೆ ಕಳೆದ ದಿನಗಳು ತಡವಿಲ್ಲದಂತೆ ಚಲಿಸುತ್ತಿದ್ದವು.

ಶಾಲೆ ಆವರಣದಲ್ಲಿ ವಿದ್ಯಾರ್ಥಿಗಳ ಗುಂಪು. ದೈಹಿಕ ಶಿಕ್ಷಣದ ತರಗತಿಯಾದ್ದರಿಂದ ಕ್ರೀಡಾ ಚಟುವಟಿಕೆ ನಡೀತಿತ್ತು. ಬಸವನ ಗುಡಿ ಪಕ್ಕದಲಿ ಸೌಮ್ಯ, ಸ್ನೇಹ, ಪಲ್ಲವಿ ನೀರಿನಲ್ಲಿ ಆಟವಾಡುತ್ತಿದ್ದರು. ಅಶ್ವಿನಿ, ನಿರ್ಮಲ, ಮಲ್ಲಿಗೆ ಇನ್ನಿತರ ವಿದ್ಯಾರ್ಥಿನಿಯರು ಥ್ರೋಬಾಲ್ ಅಭ್ಯಸಿಸುತ್ತಿದ್ದರು. ಯಾವ ಗುಂಪಲ್ಲೂ ‘ಪ್ರೀತಿ’ ಸುಳಿವು ಕಾಣದೇ ಹರೀಶ ಪರಿತಪಿಸಿದ. ಅವನ ಬ್ಯಾಗಿನಲ್ಲಿದ್ದ ಗುಲಾಬಿ ಹೂ ಮುದುಡಿ ಹೋಗಿತ್ತು. ಶಾಲೆ ಹಿಂಬದಿಯ ಕಾಲುವೆ ಬಳಿ ಧಾವಿಸಿದ. ಅಲ್ಲೂ ಅವಳ ಪತ್ತೆ ಇಲ್ಲ. ಕಾಂಪೌಂಡ್ ಹತ್ತಿ ಸಸ್ಯಕ್ಷೇತ್ರಕ್ಕೆ ಜಿಗಿದ. ಅಲ್ಲೂ ಪ್ರೀತಿ ಸಿಗಲಿಲ್ಲ. ಗೆಳೆಯನ ಮಿಸುಕಾಟವನ್ನು ಗಮನಿಸಿ ಸಿದ್ದೇಶ ‘ಪ್ರೀತಿ, ಕ್ಲಾಸ್ ರೂಮಲ್ಲಿ ಮಲ್ಗಿದಾಳೆ’ ಹೇಳಿ ವಾಲಿಬಾಲ್ ಅಂಕಣದತ್ತ ನಡೆದ. ಒಂದೇ ಉಸಿರಿಗೆ ಹರೀಶ ತರಗತಿ ರೂಮಿಗೆ ಓಡಿಹೋದ. ಪ್ರೀತಿ ಮತ್ತು ಶ್ವೇತ ಚಿತ್ರ ಬಿಡಿಸುತ್ತಿದ್ದರು. ತಲೆಎತ್ತಿದ ಪ್ರೀತಿ ಮುಗುಳ್ನಕ್ಕಳು. ತಕ್ಷಣಕ್ಕೆ ಶ್ವೇತ ರೂಮಿಂದ ಹೊರಕ್ಕೆ ಬಿದ್ದಳು. ‘ಹೂ ಕೇಳಿದ್ದಲ್ಲ ತಗೋ’ ಎನ್ನುತ್ತ ಬ್ಯಾಗಿಗೆ ಕೈಹಾಕಿದಾಗ ದಳಗಳೆಲ್ಲ ಉದುರಿಹೋಗಿದ್ದ ಗುಲಾಬಿ ಹೂ ಸಿಕ್ಕಿತು. ಅವನಿಗೆ ಬೇಸರವಾಗಿ ಅದನ್ನು ಎಸೆದು ಅವಳೆಡೆಗೆ ನೋಡಿದ. ಪ್ರೀತಿ ನಕ್ಕಳು. ನಾಚಿಕೆ ಎನಿಸಿ ಪೆಚ್ಚು ನಗೆಯಿಂದ ಹರೀಶ ರೂಮಿಂದ ಹೊರಕ್ಕೆ ಬಂದ. ಪ್ರೀತಿ ಕರೆದದ್ದೂ ಅವನಿಗೆ ಕೇಳಿಸಲಿಲ್ಲ. ಶ್ವೇತಳು ಕೂಗಿದಳು. ಯಾರ ಕೂಗು ಕೇಳದಷ್ಟು ಅವನ ಮನಸ್ಸು ಭಾವನೆಗಳ ತೀಕಲಾಟದಲ್ಲಿತ್ತು.

ಸ್ವಲ್ಪ ಸಮಯದ ಮೇಲೆ ಶ್ವೇತ, ಪ್ರೀತಿ ಇಬ್ಬರೂ ಹುಡುಗೀರ ಗುಂಪು ಸೇರಿಕೊಂಡರು. ಆಟಗಳು ಮುಂದುವರೆದವು.

ಕೆತ್ತನೆ ಕಲ್ಲಿನ ಮೇಲೆ ಕುಳಿತು ಯೋಚಿಸುತ್ತಿದ್ದ ಹರೀಶನ ಸಮೀಪ ಬಂದು ಸಿದ್ದೇಶ

‘ಟೇಮಾಯ್ತು ಬಾ’ ಅಂದ.

‘ಬಂದೆ ನಡಿ’ ಎಂದು ಕೂತೇ ಇದ್ದ.

ಕೊಠಡಿಗಳ ಬಾಗಿಲುಗಳಿಗೆ ಬೀಗ ಬಿದ್ದವು. ವಿದ್ಯಾರ್ಥಿಗಳು ಕರಗುತಲಿದ್ದರು. ಹರೀಶನಿಗೆ ಪ್ರೀತಿ ಮಾತಾಡಿಸುವುದು ಬೇಕಿತ್ತು. ‘ಪ್ರೀತಿ ನಿನ್ನೊಂದಿಗೆ ಮಾತಾಡ್‍ಬೇಕಂತೆ’ ಎಂದು ತಿಳಿಸಿ ಶ್ವೇತ ಉತ್ತರಕ್ಕೆ ನಡೆದು ಆಲದ ಮರದ ಸನಿಹ ನಿಂತಳು. ಅವಳ ವಿರುದ್ಧ ದಿಕ್ಕಿಗೆ ಸಿದ್ದೇಶ ಹೋಗುತ್ತಿದ್ದ. ಎಲ್ಲಾ ಶಿಕ್ಷಕರು ಬಸ್‍ಸ್ಟ್ಯಾಂಡ್ ತಲುಪಿದ್ದು, ಹೆಡ್‍ಮೇಷ್ಟ್ರು ಮಾತ್ರವೇ ಕೆಲಸದ ನಿಮಿತ್ತ ಉಳಿದಿದ್ದರು. ‘ನಂಗೆ, ನಾಳೆ ನೀನು ಗುಲಾಬಿ ತಂದುಕೊಡು. ಮಿಸ್ ಮಾಡ್ಬೇಡ’ ಪ್ರೀತಿ ಮತ್ತದೇ ಮಗುಳ್ನಗೆಯಲ್ಲಿ ಹೇಳಿ ಶ್ವೇತಾಳ ಜೊತೆ ಸೇರಿಕೊಂಡಳು. ಒಂದೇ ಒಂದು ಮಾತಿನಿಂದ ಹರೀಶನಲ್ಲಿ ನಗೆಮೂಡಿ, ಮನಸ್ಸು ಖುಷಿಯನ್ನು ಸಂಭ್ರಮಿಸಿತೆಂದರೆ ಅವಳ ಮಾತು ಸಿಹಿಯೋ? ಅಮೃತವೋ? ಔಷಧಿಯೋ? ಅದೆಂಥ ಮರ್ಮವಿರಬಹುದು. ಯಾರಿಗಾದರೂ ಗೊತ್ತಾ?

ಕಾಲೇಜಿಗೆ ಸೇರಿ ಆರು ತಿಂಗಳಾದರೂ ಹರೀಶನಿಗೆ ಹೈಸ್ಕೂಲಿನ ದಿನಗಳೇ ಚಂದ ಎನಿಸಿತು. ಜೇಬಿನಲ್ಲಿದ್ದ ಚಿಲ್ಲರೆಗೆ ವಿನೋದ ಬಾಳೆಹಣ್ಣು ತಗೊಂಡು ‘ತಗೋ’ ಎಂದ. ಇಬ್ಬರೂ ಬಾಳೆಹಣ್ಣು ತಿನ್ನುತ್ತ, ಕಣ್ಣುಗಳನ್ನು ಅತ್ತಿತ್ತ ಹೊರಳಿಸುತ್ತ ಹಾಸ್ಟೆಲ್ ಕಡೆಗೆ ಹೆಜ್ಜೆ ಇಟ್ಟರು.

ಅಂಕಲ್ ಲೋಬೋಸ್ ಫ್ಯಾಮಿಲಿ ರೆಸ್ಟೋರೆಂಟ್ ಸಮೀಪಿಸುವ ಹೊತ್ತಿಗೆ ಸಂಜೆ ನಾಲ್ಕೂವರೆ ಸಮಯ ಆಗಿತ್ತು. ಅವರ ಕೈಕಾಲುಗಳಲ್ಲಿ ಶಕ್ತಿ ಕ್ಷೀಣಿಸಿತ್ತು. ಮೊದಲಿಗೆ ಸುತ್ತುಗೋಡೆ ಹತ್ತದೇ ಹಾಸ್ಟೆಲ್ ಅಂಗಳಕ್ಕೆ ಅಡಿಯಿಟ್ಟರು.

***

ಸಂಜೆ ಏಳಕ್ಕೆ ಎದ್ದು ಹರೀಶ, ಮುಖ ತೊಳೆಯಲು ಹೋದ. ಮೂರು ಶೌಚಾಲಯಗಳು, ನಾಲ್ಕು ಸ್ನಾನ ಗೃಹಗಳಿಗೆ ಒಂದೇ ಒಂದು ಬಲ್ಬು ಮಿಣಮಿಣ ಅಂತ ಉರಿಯುತ್ತ, ಅದು ತನ್ನ ಶಕ್ತಿ ಮೀರಿ ಬೆಳಕ ಚೆಲ್ಲಲು ಪ್ರಯತ್ನಿಸುತ್ತಿತ್ತು. ಮುಖ ತೊಳೆದು ರೂಮಿಗೆ ಬಂದು ವಾರ್ಷಿಕ ಸಂಚಿಕೆ ಬರೆದಿದ್ದ ‘ಬೇಸರ ಕಳೆಯುವುದು ಹೇಗೆ’ ಲೇಖನವನ್ನು ತಿದ್ದುತ್ತಿದ್ದ.

ನಾಲ್ಕನೇ ರೂಮಿಗೆ ವಿನೋದ್ ಬಂದು

‘ಏನ್ಲಾ ಬರಿತಿದಿಯಾ?’ ಅಂದ.

‘ಲೇಖನ ತಿದ್ದುತ್ತಿದೀನಿ’ ಎನ್ನಲು ಹರೀಶ,

‘ಲವ್ ಅಂದ್ರೆ ಏನೋ ಒಂಥರಾ ಖುಷಿ ಅಲ್ವಾ?’ ವಿನೋದ್ ಪೆನ್ನನ್ನು ಕಿತ್ತುಕೊಂಡ.

‘ಬರಿಬೇಕು ಕೊಡ್ಲಾ’ ಸಿಡುಕಿದ ಹರೀಶ.

‘ಏನಪ್ಪ ಪ್ರೀತಿ’ ಎಂದ ವಿನೋದ್.

ಹರೀಶನಿಗೆ ಒಳಗೊಳಗೆ ಖುಷಿಯಾದರು ತೋರಿಸಿಕೊಳ್ಳದೇ ‘ಬರಿಬೇಕು ಪೆನ್ ಕೊಡು’ ಎನ್ನುತ್ತ ‘ಅವ್ಳು ಹೂ ಕೇಳಿದ್ಲು. ನಾನು ಕೊಡ್ಲೇ ಇಲ್ಲ’ ನೆನಪಿಗೆ ಬೀಳುತ್ತಿದ್ದವನನ್ನು ತಡೆದು ವಿನೋದ್ ‘ನಿನ್ ಲವ್ ಸ್ಟೋರಿ ಇಡೀ ಹಾಸ್ಟೆಲ್ಲಿಗೆ ಗೊತ್ತು. ನಂದು ಹೇಳ್ತೀನಿ ಕೇಳು’ ಪ್ರಾರಂಭಿಸಿದ.

ನಾವಿಬ್ಬರೂ ಜೊತೇಲೆ ಓದಿದವ್ರು. ನಮ್ಮೂರಿನ ಪಕ್ಕದ ಊರೇ ಪ್ರಣತಿದು. ಅವ್ಳು ಮೂರನೇ ಕ್ಲಾಸಿಗೆ ನಮ್ ಶಾಲೆಗೆ ಬಂದದ್ದು; ಸ್ವಾತಂತ್ರ್ಯ ದಿನಾಚರಣೆ ಹಿಂದಿನ ದಿನ ಎಲ್ಲರೂ ಶಾಲಾ ಆವರಣವನ್ನು ಸ್ವಚ್ಛ ಮಾಡುತ್ತಿದ್ದೆವು. ಕನ್ನಡ ಮೇಷ್ಟ್ರು ಹೂಗಳನ್ನು ತರುವಂತೆ ಹೇಳಿದ್ದೆ; ರಂಗೋಲಿ ಹಾಕುತ್ತಿದ್ದ ಪ್ರಣತಿ, ಮತ್ತವಳ ಗೆಳತಿಯರು ಕಲ್ಲುಗುಡ್ಡಕ್ಕೆ ಓಡಿದರು. ‘ಎಲ್ಲಾ ಕೆಲಸಕ್ಕೂ ಎಲ್ಲರೂ ಹೋಗಬೇಡಿ. ಕೆಲಸಗಳನ್ನು ಹಂಚಿಕೊಂಡು ಮಾಡಿ’ ಕನ್ನಡ ಮೇಷ್ಟ್ರು ತಿಳಿಹೇಳಿ ನಾನು ಮತ್ತು ಸಿದ್ದೇಶನಿಗೆ ತೋರಣಕ್ಕೆ ಸೊಪ್ಪು ತರಲು ಹೇಳಿದರು. ಆಗ ನಾವಿಬ್ಬರು ಪರಶಿವ ಅವರ ತೋಟಕ್ಕೆ ಓಟಕಿತ್ತೆವು.

‘ಲವ್ ಹೇಗಾಯ್ತು’ ಹರೀಶನಿಗೆ ಆಸಕ್ತಿ ಹೆಚ್ಚಿತು.

‘ನಿಧಾನ’ ಅನ್ನುತ್ತ ವಿನೋದ

‘ಸ್ವಾತಂತ್ರ್ಯ ದಿನಾಚರಣೆ ಮುಗಿದಿತ್ತು. ನಾನು ಗಾಂಧೀಜಿ ಬಗ್ಗೆ ಕಿರುಪರಿಚಯ ಮಾಡಿದ್ದೆ. ಅಂಬೇಡ್ಕರ್ ಬಗ್ಗೆ ಆಯುಧ್ ನನಗಿಂತಲೂ ಚೆಂದಾಗಿ ಓದಿದ್ದ. ಆದರೆ ಅಲ್ಲಿ ನೆರೆದಿದ್ದ ಹೆಚ್ಚಿನ ಜನರಿಗೆ ಹಿಡಿಸಿದ್ದು ನನ್ನ ಓದು. ಧ್ವಜಾರೋಹಣಕ್ಕೆ ಬಂದಿದ್ದ ಗ್ರಾಮ ಪಂಚಾಯಿತಿ ಸದಸ್ಯೆ ಸಿದ್ದಮ್ಮ, ಎಸ್‍ಡಿಎಮ್‍ಸಿ ಅಧ್ಯಕ್ಷ ಮಹದೇವಯ್ಯ, ರಾಮೇಗೌಡ, ಮರಿನಾಯ್ಕ, ಸಿದ್ದಶೆಟ್ಟಿ ಹೀಗೆ ನೆರೆದಿದ್ದ ಅನೇಕರು ನನ್ನನ್ನು ಪ್ರಶಂಸಿದರು. ಅಷ್ಟಕ್ಕೇ ನಾನು ಆವತ್ತಿನ ಹಿರೋ ಆಗಿಬಿಟ್ಟಿದ್ದೆ. ಆಗಲೇ ಪ್ರಣತಿ ನನ್ನನ್ನು ಮಾತನಾಡಿಸಿದ್ದು; ಗೊತ್ತಾಯ್ತ?’ ವಿನೋದ ಅದೇ ಜಂಬದಿಂದ ಹೇಳಿದಾಗ ಹರೀಶನಿಗೆ ಕುತೂಹಲ ಹೆಚ್ಚಿ ಮುಂದೆ ಮುಂದೆ ಎನ್ನುತ್ತಿದ್ದ.

‘ಆವತ್ತಿನಿಂದ ಮಾತು ಶುರುವಾಯ್ತು. ಒಂದೇ ತರಗತಿ ಆಗಿದ್ದರಿಂದ ಪೆನ್, ಪೆನ್ಸಿಲ್, ಪುಸ್ತಕ, ನೋಟ್‍ಬುಕ್ ಅಂತ ನಾನು ದಿನಕ್ಕೆ ಒಂದ್ಸಲನಾದ್ರು ಮಾತನಾಡಿಸುತ್ತಿದ್ದೆ. ಅದೂ ಕೂಡ ಗಾಸಿಪ್ ಆಗಿಬಿಟ್ಟಿತ್ತು. ಸ್ವಲ್ಪದಿನ ಮಾತುಬಿಟ್ಟೆ. ಪುನ ಮಾತನಾಡಿಸಿದ್ದು ಟೂರ್ ಹೋಗಿದ್ದಾಗ. ನಿಜವಾಗಿ ಲವ್ ಆಗಿದ್ದು ಅಲ್ಲೇ.’ ಹೇಳಿ ಬ್ರೇಕ್ ತಗೊಂಡ ವಿನೋದ.

ಅಂದು ತನಗಿದ್ದ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳದಕ್ಕೆ ಹರೀಶ ತನ್ನ ಮೇಲೆಯೇ ಬೇಸರ ಪಟ್ಟುಕೊಂಡ.

‘ನಂದೆ ಸ್ಟೋರಿ ಬರಿ’ ಎಂದು ವಿನೋದ್ ಹೇಳುತ್ತ

ಬೆಳಿಗ್ಗೆ ಐದೂವರೆಗೆ ಬಸ್ ಏರಿದ ನಾವೆಲ್ಲರೂ ಮೊದಲು ತಲುಪಿದ್ದು ಮೈಸೂರಿಗೆ. ನಮ್ ಹೆಡ್‍ಮೇಷ್ಟ್ರು ಮಹಾರಾಜ ಕಾಲೇಜು ತೋರಿಸುತ್ತ ‘ಮುಂದೆ ನೀನು ಇಲ್ಲಿಗೆ ಸೇರ್ಕೋಂಡು ಓದು. ಬ್ಯಾಟಿಂಗ್ ಮಾಡೋಕೆ ಮಹಾರಾಣಿ ಕಾಲೇಜ್‌ಗೆ ಹೋಗ್ಬಿಟ್ಟಿಯ’ ಎಂದಾಗ ಆಶಾ ಮೇಡಂ, ತನು ಮೇಡಂ ಮತ್ತು ಇನ್ನಿತರ ಶಿಕ್ಷಕರ ಸಹಿತ ವಿದ್ಯಾರ್ಥಿಗಳು ಗೊಳ್ಳೆಂದರು. ‘ಆಗ ಅವರೇಳಿದ್ದು ನನಗೆ ಅರ್ಥವಾಗಿದ್ದು ಇತ್ತೀಚೆಗೆ’ ಎಂದು ವಿನೋದ್ ನಗೆಯನ್ನು ಉಸಿರಾಡಿದ. ಹರೀಶನ ಮೋರೆಯಲ್ಲು ಅದರ ಪ್ರತಿಬಿಂಬ ಮೂಡಿತು.

ವಿನೋದ್ ಮುಂದುವರೆಸಿ ‘ಹೊಸ ವರ್ಷದ ದಿನ ಅವಳು ನನಗೊಂದು ಕೀಬಂಚ್ ನೀಡಿದ್ದಳು. ನಾನವಳಿಗೆ ಕಾಲ್ಚೇನು ಕೊಟ್ಟಿದ್ದೆ. ಎಸ್ಸೆಸ್ಸೆಲ್ಸಿ ನಂತರ ಇಬ್ಬರೂ ಮೈಸೂರಿಗೆ ಸೇರಿಕೊಂಡೆವು. ಇದಿಷ್ಟು ನಮ್ಮಿಬ್ಬರ ಪ್ರೀತಿ ಇತಿಹಾಸ’ ಎಂದು ಪೂರ್ಣವಿರಾಮ ಇಟ್ಟ.

ಹರೀಶನಿಗೆ ಮತ್ತೆ ಮತ್ತೆ ‘ಪ್ರೀತಿ’ ನೆನಪಾಗತೊಡಗಿದಳು.

***

ಕನ್ನಡ ಮೇಷ್ಟ್ರು ಪಾಠ ಮುಗಿಸಿ ತರಗತಿ ಬಿಟ್ಟು ಹೊರಟಾಗ, ಹರೀಶ ಅವರಿಂದೆ ಓಡಿ ‘ಸಾರ್ ವಾರ್ಷಿಕ ಸಂಚಿಕೆಗೆ’ ತೊದಲಿಸಿ ಲೇಖನವನ್ನು ಅವರ ಕೈಗಿಟ್ಟ.

‘ಈಗ ನಿಂಗೆ ಸಮದಾನ ಆಯ್ತ’ ವಿನೋದ ಮುಗುಳ್ನಕ್ಕ.

ಏನು ಇಲ್ಲವೆಂಬಂತೆ ಅವನೂ ನಕ್ಕ.

ಮತ್ತೊಬ್ಬರು ಮೇಷ್ಟ್ರು ಬರೋವರೆಗೂ ವಿದ್ಯಾರ್ಥಿಗಳ ಮಾತುಗಳು ನಿಲ್ಲಲಿಲ್ಲ.

***

ಓದುತ್ತ ಕುಳಿತಿದ್ದ ಹರೀಶ. ದಿಢೀರನೆ ಪ್ರತ್ಯಕ್ಷವಾದ ವಿನೋದ್ ಮಹಾರಾಜರ ಪುತ್ಥಳಿ ಇರುವ ದೊಡ್ಡ ಪುಸ್ತಕವನ್ನು ತೋರಿಸುತ್ತ ಅವನಲ್ಲಿ ಕುತೂಹಲ ಹೆಚ್ಚಿಸಿದ್ದ. ಅವನಿಂದಿಂದೆ ಅಲೆಯುತ್ತ ಹರೀಶ ‘ಪ್ಲೀಸ್ ಕೊಡೋ’ ಗೋಗರೆಯುತ್ತಿದ್ದ. ವಿನೋದ್ ಅವನ ಕೈಗೆ ಪುಸ್ತಕ ಕೊಟ್ಟಾಗ ಹರೀಶನ ಹಣೆಮೇಲೆ ಬೆವರ ಹನಿಗಳಿದ್ದವು. ಒಂದೊಂದು ಪುಟ ತಿರುವುತ್ತಲೂ ಆನಂದ ಪಡುತ್ತಿದ್ದ. ‘ಬೇಜಾರು ಕಳೆಯುವುದು ಹೇಗೆ’ ಶೀರ್ಷಿಕೆ ನೋಡಿ ಅವನಿಗೆ ಇನ್ನೂ ಹೆಚ್ಚಿನ ಖುಷಿಯಾಯ್ತು. ಲೇಖನದ ಕೆಳಗೆ ಹೆಸರಿದ್ದದ್ದು; ಶ್ರೀ ವಿಜಯ್, ಕನ್ನಡ ಉಪನ್ಯಾಸಕರು. ಹರೀಶನ ಕಣ್ಣಂಚಲ್ಲಿ ನೀರು ಇಳಿಯಿತು. ಮನಸ್ಸು ಬೇಜಾರಿನಿಂದ ಒದ್ದಾಡುತ್ತದೆ. ಪುಸ್ತಕ ಮುಚ್ಚಿ ಹಾಸ್ಟೆಲ್ಲಿನ ಹೊರಕ್ಕೆ ಬಂದು ದಿಗಂತ ದಿಟ್ಟಿಸುತ್ತ ನಿಲ್ಲುವನು. ಅವನಿಂದೆ ವಿನೋದನು ಬಂದ. ಇಬ್ಬರೂ ಇಳಿಜಾರು ರಸ್ತೆಗೆ ಇಳಿದರು.

ಪಾನೀಪುರಿ ಸೆಂಟರ್ ಬಳಿ ಇಬ್ಬರು ಹುಡುಗೀರು ಉಲ್ಲಾಸದಿಂದ ನಗುತ್ತ ಪಾನಿಪುರಿ ತಿನ್ನುತ್ತಿದ್ದರು. ಇಬ್ಬರೂ ಚೂಡಿದಾರ್ ತೊಟ್ಟಿದ್ದರು.

ಆ ಕಡೆಗೆ ಕೈ ತೋರಿಸುತ್ತ ‘ಆ ಗುಲಾಬಿ ಹೂ ನಂಗೆ ತುಂಬಾ ಇಷ್ಟ’ ಗೊತ್ತ ಎಂದಳು.

‘ಹೌದಾ’ ಮತ್ತೊಬ್ಬಳು ನಗೆ ಬೀರಿದಳು.

ಇಬ್ಬರೂ ಹೂಗಳ ವೀಕ್ಷಣೆಯಲ್ಲಿ ತೊಡಗಿ ನೆನಪುಗಳನ್ನು ಉಸಿರಾಡುತ್ತಿದ್ದರು.

ನರ್ಸರಿಯ ಹೂಗಳು ಹರೀಶನನ್ನು ಸೆಳೆಯುತ್ತವೆ. “ಹಳದಿ ಬಣ್ಣದ ಗುಲಾಬಿ, ‘ಪ್ರೀತಿ’ಗೆ ತುಂಬಾ ಇಷ್ಟ. ನಾನು ಕೊಡ್ಲೇ ಇಲ್ಲಾ?” ಮಿಂಚಿಹೋಗಿದ್ದ ಅವಕಾಶಗಳು ಪುನ ಸಿಗಲಿ ಎಂಬ ಆಸೆ ಅವನಲ್ಲಿ ಪುಟಿದೇಳುತ್ತಿತ್ತು.

‘ಹರೀಶ ನೋಡು ಬ್ಯೂಟಿಫುಲ್ ಹುಡ್ಗೀರು’ ಅವರತ್ತ ವಿನೋದ್ ಕೈ ತೋರಿಸಿದ.

ಹತ್ತಿರಾಗುತ್ತಿದ್ದಂತೆ ಹರೀಶನಿಗೆ ಕನಸೋ? ಭ್ರಮೆಯೋ? ಯೋಚಿಸಲು ಆಗಲಿಲ್ಲ. ತಕ್ಷಣಕ್ಕೆ ಅವನ ಬುದ್ಧಿಗೆ ಮಂಕು ಹಿಡಿದಂತಾಗಿತ್ತು.

ಅವಳು ತುಸು ಹತ್ತಿರಕ್ಕೆ ಬಂದಳು.

‘ಪ್ರೀತಿ’ ಎನ್ನುತ್ತ ಹರೀಶ ಇನ್ನಷ್ಟು ಸಮೀಪಿಸಿದ.

‘ಹರೀ’ ಎನ್ನುತ್ತ ಅವಳು ಮಾತೇ ಬಾರದಷ್ಟು ಭಾವನೆಗಳಲ್ಲೇ ತುಂಬಿಹೊಗಿದ್ದಳು.

ನರ್ಸರಿಯಲ್ಲಿನ ಹೂಗಳು ಒಮ್ಮೆಲೆ ನಕ್ಕವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT