ಸೋಮವಾರ, ಏಪ್ರಿಲ್ 19, 2021
24 °C

ಕಥೆ: ಮಹಾನಾಯಕಿ

ವಿಶ್ವನಾಥ ಪಾಟೀಲ್ ಗೋನಾಳ Updated:

ಅಕ್ಷರ ಗಾತ್ರ : | |

Prajavani

ಗಾಂಧೀ ಸರ್ಕಲ್‍ನ ಮಧ್ಯೆ ನಿಂತಿರುವ ಎಲ್ಲರ ಕೈಯ್ಯಲ್ಲೂ ಮೇಣದ ಬತ್ತಿ, ಕೆಲವರ ಕೈಯಲ್ಲಿ ಮೇಣದ ಬತ್ತಿಯ ಜೊತೆಗೆ ಹುಡುಗಿಯೊಬ್ಬಳ ಫೋಟೊ ಹಿಡಿದು ಜೈಕಾರ ಹಾಕುತ್ತಿದ್ದರು. ಅಲ್ಲೇ ಇದ್ದ ಪೊಲೀಸರು ನಾಲ್ಕು ಕಡೆಯಿಂದ ಬರುತ್ತಿದ್ದ ವಾಹನಗಳನ್ನು ತಡೆದು ನಿಲ್ಲಿಸಲು ಒದ್ದಾಡುತ್ತಿದ್ದರು. ಜೈಕಾರ ಹಾಕುತ್ತಲೇ ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿದರು. ‘ಯಾತಕ್ಕಾಗಿ ಹೋರಾಟ, ನ್ಯಾಯಕ್ಕಾಗಿ ಹೋರಾಟ’, ‘ವಿ ವಾಂಟ್ ಜಸ್ಟಿಸ್’ ಎಂದು ಕೂಗುತ್ತಲೇ ಇದ್ದರು. ಪೊಲೀಸರು ಮಧ್ಯೆ ಪ್ರವೇಶಿಸಿ ‘ಸರ್ ಸ್ವಲ್ಪ ಬೇಗ ಮುಗಿಸಿ’ ಎಂದು ಒತ್ತಾಯಿಸಿದರು. ಆಗ ಮಾನವ ಸರಪಳಿಯನ್ನು ತೊರೆದು ಸರ್ಕಲ್‍ನ ಒಂದು ಬದಿಯಲ್ಲಿ ಸೇರಿದರು.

ಎಡಕ್ಕೆ ಗಾಂಧೀಜಿಯ ಪ್ರತಿಮೆ, ಬಲಕ್ಕೆ ಅಂಬೇಡ್ಕರ್‌ರವರ ಜೀವನ ಆಧಾರಿತ ಮಹಾನಾಯಕ ಧಾರಾವಾಹಿಯ ದೊಡ್ಡದಾದ ಬ್ಯಾನರ್. ಅವೆರಡರ ಮಧ್ಯೆ ನಿಂತರು. ಅವರಲ್ಲೊಬ್ಬ ಆಕ್ರೋಶಭರಿತ ಧ್ವನಿಯಲ್ಲಿ ಈ ದೇಶದ ನ್ಯಾಯವ್ಯವಸ್ಥೆ ಹಾಗೂ ರಾಜಕೀಯ ವ್ಯವಸ್ಥೆಯನ್ನು ಹಿಗ್ಗಾ ಮುಗ್ಗಾ ಝಾಡಿಸುತ್ತಿದ್ದ. ಆತನ ಮುಖ ರಾತ್ರಿಯ ವೇಳೆ ಆ ಮೇಣದ ಬತ್ತಿಗಳ ಬೆಳಕಿನಲ್ಲಿ ಬೆಂಕಿಯುಂಡೆಯಂತೆ ಕಾಣಿಸುತ್ತಿತ್ತು. ಅದೆಲ್ಲವನ್ನೂ ನೋಡಿದ ನನಗೆ ದುಃಖ ಉಮ್ಮಳಿಸಿ ಬರುತ್ತಿತ್ತು. ನನ್ನ ನಿರ್ಧಾರ ಅಚಲ, ಯಾವುದೇ ಅಡ್ಡಿ-ಆತಂಕಗಳು ಬಂದರೂ ನನ್ನ ತೀರ್ಮಾನ ಕೈಗೂಡಲೇಬೇಕು. ನನ್ನ ತಲೆಯಲ್ಲಿ ಆ ವಿಚಾರ ಬಿಟ್ಟು ಬೇರೆ ಯಾವ ವಿಚಾರಗಳಿಗೂ ಜಾಗವಿರಲಿಲ್ಲ. ನನ್ನ ಬಗ್ಗೆ ನನಗೇ ಅಸಹ್ಯ ಭಾವನೆ ಮೂಡಿ ‘ಥೂ ನಿನ್ನ ಜನ್ಮಕ್ಕಿಷ್ಟು ಬೆಂಕಿ ಹಾಕ’ ಎಂದು ಮತ್ತೊಂದು ಮನಸ್ಸು ನನ್ನನ್ನು ಕ್ಯಾಕರಿಸಿ ಉಗಿಯತೊಡಗಿತು. ಅದೆಲ್ಲವನ್ನೂ ಸಹಿಸಿಕೊಂಡೆ. ನನಗೆ ಇದೇ ಸರಿಯಾದ ಜಾಗ, ಎಲ್ಲರ ಎದುರೇ ಆಗಬೇಕು, ‘ಇಲ್ಲ ಇಲ್ಲ ಎಲ್ಲರ ಎದುರು ಸರಿಯಲ್ಲ. ಅವರೆಲ್ಲಾ ಅಲ್ಲಿಂದ ತೆರಳಲಿ. ಯಾರೂ ಇರದೇ ಇದ್ದರೆ ಇನ್ನೂ ಒಳ್ಳೆಯದು. ನನ್ನ ಕೆಲಸ ಸುಸೂತ್ರವಾಗಿ ನಡೆಯುತ್ತೆ’ ಎಂದು ಮನಸ್ಸು ಗಟ್ಟಿಮಾಡಿಕೊಂಡು ಸರ್ಕಲ್‍ನ ಬದಿಯಲ್ಲಿ ಸುಮ್ಮನೆ ಅವರನ್ನೇ ನೋಡುತ್ತಾ ನಿಂತೆ...

***

ಹತ್ತನೇ ತರಗತಿ ಮೊದಲ ದರ್ಜೆಯಲ್ಲಿ ಪಾಸಾಗಿಬಿಟ್ಟೆ. ನಮ್ಮೂರಿನಲ್ಲಿ ಕಾಲೇಜು ಇರಲಿಲ್ಲ. ಕಾಲೇಜಿಗೆ ಎಂದು ಸಿಂಧನೂರಿಗೆ ಬರಬೇಕಿತ್ತು. ಕಾಲೇಜಿಗೆ ಸೇರಿಸಿ, ಬಸ್‍ಪಾಸ್ ಮಾಡಿಸಿ ಓದಿಸುವಷ್ಟು ಸ್ಥಿತಿವಂತಿಕೆ ಮನೆಯಲ್ಲಿ ಇಲ್ಲ. ಚಿಕ್ಕವಯಸ್ಸಿನಲ್ಲೇ ಅವ್ವನನ್ನು ಕಳೆದುಕೊಂಡೆ. ಈಗ ಅಪ್ಪನೇ ಅವರಿವರ ಹೊಲ-ಗದ್ದೆಗಳಲ್ಲಿ ಕೂಲಿ ಮಾಡಿ ನಮ್ಮನ್ನೆಲ್ಲಾ ಸಾಕಿ ಸಲುಹತೊಡಗಿದ. ಅಪ್ಪನಿಗೆ ಒಂದು ಕಣ್ಣು ಸರಿಯಾಗಿ ಕಾಣದೇ ಬಹಳಷ್ಟು ಒದ್ದಾಡುತ್ತಿದ್ದ. ಕಣ್ಣು ಆಪರೇಷನ್ ಮಾಡಿಸಲು ಬೇಕಾದಷ್ಟು ಹಣ ಇರದೇ ಇದ್ದುದರಿಂದ ಜೀವನವನ್ನು ಹಾಗೆಯೇ ದೂಡುತ್ತಿದ್ದ. ಅಂಗಡಿಯಿಂದ ಸಕ್ಕರೆ ತೆಗೆದುಕೊಂಡು ಬಂದೆ, ಸಕ್ಕರೆ ಕಟ್ಟಿದ್ದ ಪೇಪರ್ ಒಂದು ಪಾಂಪ್ಲೇಟ್ ಆಗಿತ್ತು. ಅದನ್ನು ಯಾಕೋ ಒಗೆಯುವ ಮನಸ್ಸಾಗಲಿಲ್ಲ. ಅದರಲ್ಲಿದ್ದ ಕಣ್ಣಿನ ಚಿತ್ರ ನನ್ನ ಮನಸ್ಸನ್ನು ಅರಳಿಸಿತು. ‘ಸಿಂಧನೂರಿನ ರುದ್ರಗೌಡ ಪಾಟೀಲ್ ಫೌಂಡೇಷನ್‍ರವರಿಂದ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ’ ಎಂಬುದಾಗಿ ಇದ್ದುದನ್ನು ಕಂಡು ಒಂದು ಕ್ಷಣ ತುಂಬಾ ಸಂತೋಷವಾಯಿತು. ಕಣ್ಣಂಚಲಿ ನೀರು ಜಿನುಗಿದವು. ಅಪ್ಪನ ಮತ್ತೊಂದು ಕಣ್ಣಿಗೆ ಆಸರೆಯಾಯಿತು ಎಂದು ಭಾಸವಾಯಿತು. ಓಡಿಹೋಗಿ ಅಪ್ಪನಿಗೆ ತಿಳಿಸಿದೆ. ‘ಇಲ್ಲಬುಡಮ ಇವತ್ತಿನ ದಿನದಾಗ ರೊಕ್ಕ ಕೊಟ್ಟರೂ ಸರಿಯಾಗಿ ನೋಡ್ಲಾರ್ದಂತ ಕಾಲದಾಗ, ಛೇ ಛೇ ಇಂಥವುಗಳನ್ನ ನಾ ನಂಬಂಗಿಲ್ಲ’ ಎಂದ. ಸಿಂಧನೂರಿನ ಪರಿಚಯ ಇರುವ ಚಿನ್ನೂರು ಲಚುಮವ್ವನನ್ನು ಕೇಳಿದರಾಯಿತು ತಡಿ ಎನ್ನುತ್ತಾ, ಲಚುಮವ್ವನ ಮನೆಕಡೆಗೆ ಹೆಜ್ಜೆ ಹಾಕಿದೆ.

‘ಯವ್ವಾ ಎಂಥಾ ಮಾತು ಅಂತ ಆಡಿದೆಬೇ, ರುದ್ರುಗೌಡ್ರು ಅಂದ್ರ ಏನಂದಕಂಡೀದಿ? ಅವ್ರುದು ಚಿನ್ನೂರಿಗೆನೇ ದೊಡ್ಡ ಮನೆತನ. ಅವ್ರು ಈ ಕೆಲಸ ಮಾಡಾಕತ್ತಾರ ಅಂದ್ರ ಅದು ಸುಳ್ಳಲ್ಲವ ತಂಗಿ, ಖರೇ ಇರ್ತದ. ತಲೆತಲಾಂತರದಿಂದನೂ ಇಂಥ ಕೆಲಸ ಮಾಡಿಕೆಂತ ಬಂದಾರಬೇ. “ಒರತೆ ನೀರು, ಗರಕಿ ಬೇರು” ಇದ್ದಂಗ ಅವರ ಸೇವೆ. ದೊಡ್ಡ ಗೌಡ್ರು ಹೋದಮ್ಯಾಲ ಈಗ ಅವರ ಮಗ ದೊಡ್ಡಗೌಡ್ರು ಮಾಡುತ್ತಿದ್ದ ಕೆಲಸಗಳನ್ನೆಲ್ಲಾ ನಡೆಸಿಕೊಂಡು ಹೊಂಟಾರ. ಆತನೂ ಥೇಟ್ ಅವರಪ್ಪನ ಬಾಯಾಗ ಉಚ್ಚಿಬಿದ್ದಂಗ, ಯಾರು ಏನೇ ಕೇಳಲಿ ಇಲ್ಲ ಅಂಬ ಮಾತು ಅವರ ಬಾಯಾಗಿಂದ ಇಲ್ಲಿವರೆಗೂ ಬಂದಿಲ್ಲ ತಾಯಿ. ನೀವು ಹೋಗ್ರಿ ಅಂತವರ ಕೈಯ್ಯಾಗ ಆಪರೇಷನ್ ಮಾಡಿಸಿಕೊಳ್ಳೋಕು ಪುಣ್ಯ ಬೇಕವ್ವ ಪುಣ್ಯ. ಎಲ್ಲಾ ಬೇಸಾತೈತಿ ಹೋಗಿಬರ್ರಿ’ ಎಂದು ಹೇಳಿ ಕಳುಹಿಸಿದಳು.

ಮರುದಿನ ಅಪ್ಪ ಮತ್ತು ನಾನು ಬಸ್ ಹತ್ತಿ ಸಿಂಧನೂರು ಬಸ್ಟ್ಯಾಂಡಿಗೆ ಬಂದೆವು. ಕೈಯ್ಯಲ್ಲಿದ್ದ ಪಾಂಪ್ಲೇಟ್ ತೆಗೆದು ಅಡ್ರೆಸ್ ಎಲ್ಲಿ ಬರುತ್ತ ಎಂದು ಯಾರನ್ನಾದ್ರು ಕೇಳೋಣ ಎಂದು ಯೋಚನೆ ಮಾಡುವ ಹೊತ್ತಿಗೆ, ನಾಲ್ಕು ಸಾಲಿ ಹುಡುಗರು ಬಂದು ‘ನೀವು ಕಣ್ಣು ಪರೀಕ್ಷೆ ಮಾಡಿಸಲು ಬಂದೀರೇನು?’ ಎಂದು ಕೇಳಿದರು. ‘ಹೌದು’ ಎಂದೆ. ತಕ್ಷಣವೇ ‘ಇಲ್ಲಿ ಬರ್ರಿ’ ಎಂದು ಸಾಲಾಗಿ ನಿಂತಿದ್ದ ಆಟೊ, ಆಟೊದ ಸುತ್ತಲೂ ಇವತ್ತಿನ ಉಚಿತ ನೇತ್ರ ತಪಾಸಣೆ ಕಾರ್ಯಾಗಾರದ ಕುರಿತಾದ ಪೋಸ್ಟರ್‌ಗಳನ್ನು ಹಚಿಗೆಂಡು ನಿಂತಿದ್ದವು. ಅದರಲ್ಲಿ ಒಂದು ಆಟೊದಲ್ಲಿ ನಮ್ಮನ್ನು ಕುಳ್ಳಿರಿಸಿ ಕ್ಯಾಂಪ್ ಹಾಕಿರುವ ಕಡೆ ಕರೆದುಕೊಂಡು ಹೋದರು. ಅಲ್ಲಿಗೆ ಹೋಗುತ್ತಿದ್ದಂತೆ ನಮಗೆ ನಾಸ್ಟಾ-ಚಹಾ ಕೊಟ್ಟು ಬಹಳ ಇಂತಿಜಮೆ ಮಾಡಿದರು. ನಮ್ಮ ಪಾಳೆ ಬರುವತನಕ ನಮ್ಮನ್ನು ವೈಟಿಂಗ್ ಹಾಲ್‍ನಲ್ಲಿ ಕೂಡಿಸಿ ಟಿವಿ ಹಚ್ಚಿದ್ದರು. ನಮ್ಮ ಪಾಳೆ ಬಂದಾಗ ಹುಡುಗರೇ ಬಂದು ನಮ್ಮನ್ನ ಡಾಕ್ಟರ್ ಬಳಿ ಕರೆದುಕೊಂಡು ಹೋದ್ರು. ನಗುಮುಖದಿಂದ ಡಾಕ್ಟರ್ ನಮ್ಮನ್ನು ಬರಮಾಡಿಕೊಂಡು ಅಪ್ಪನ ಕಣ್ಣು ಚೆಕ್ ಮಾಡಿದ್ರು. ‘ನಿಮ್ಮ ಒಂದು ಕಣ್ಣು ಚ್ವಲೋ ಐತಿ, ಮತ್ತೊಂದು ಕಣ್ಣಿಗೆ ಆಪರೇಷನ್ ಮಾಡಿಸಬೇಕು. ಮುಂದಿನ ವಾರ ಬನ್ನಿ. ನಿಮಗ ಆಪರೇಷನ್ ಮಾಡ್ತೀನಿ’ ಎಂದರು. ನಮಗೆ ತುಂಬಾ ಖುಷಿಯಾಯಿತು. ‘ನಿಮ್ಮ ಮನೆತನದ ಬಗ್ಗೆ ಎಲ್ಲಾ ಕಡೆ ಭಾಳ ಗೌರವ ಐತ್ರಿ. ಈ ಕಲಿಯುಗದೊಳಗ ನಿಮ್ಮಂಥವರು ಎಲ್ಲೋ ಕೋಟಿಗೊಬ್ರು ಸಿಗತಾರ್ರೀ. ಕಿವಿ ಕೇಳಲಿಲ್ಲ ಅಂದ್ರು ಬದುಕಬಹುದು, ಮಾತು ಬರಲಿಲ್ಲ ಅಂದ್ರೂ ಬದುಕಬಹುದು, ಆದರೆ ಕಣ್ಣೇ ಇಲ್ಲಂದ್ರ ಬದುಕೋದು ಹೆಂಗ್ರಿ? ಜೀವನ ಅನುಭವಿಸೋದು ಹೆಂಗ್ರಿ? ಇಂಥ ಅಮೂಲ್ಯವಾದ ಕೆಲಸನಾ ನೀವು ಸಣ್ಣ ವಯಸ್ಸಿನಲ್ಲೇ ಮಾಡಾಕತ್ತೀರಲ್ರಿ ನಿಮ್ಮನ್ನ ಆ ಭಗವಂತ ನೂರಾರುಕಾಲ ಚನ್ನಾಗಿ ಇಡಲ್ರಿ’ ಎಂದು ಅಪ್ಪ ಹಾರೈಸಿದರೂ ಡಾಕ್ಟ್ರು ಮಾತ್ರ ಒಂದು ಸಣ್ಣ ಸ್ಮೈಲ್ ಮಾಡಿ ಶಿರಬಾಗಿ ಕೈಮುಗಿದರು ಅಷ್ಟೆ.

ಮುಂದಿನ ವಾರ ಆಪರೇಷನ್‍ಗೆ ಬಂದೆವು. ಆಪರೇಷನ್‍ ಕೂಡ ಸುಸೂತ್ರವಾಗಿ ಆಯಿತು. ಆಗ ಡಿಸ್ಚಾರ್ಜ್‌ ಮಾಡುವ ವೇಳೆ ಅಪ್ಪ ಡಾಕ್ಟರ್ ಅವರ ಮುಂದೆ ನಿಂತು ಎರಡೂ ಕೈ ಜೋಡಿಸಿ ‘ನಿಮ್ಮ ಋಣ ಹೆಂಗ ತೀರಿಸಲಿರಿ ಸರ್’ ಎಂದು ಕಣ್ಣಲ್ಲಿ ನೀರು ತಂದ. ‘ಕಣ್ಣೀರು ಹಾಕಬಾರದು, ನೀವು ದೊಡ್ಡವರು, ತಂದೆ ಸ್ಥಾನದಲ್ಲಿದ್ದವರು. ನಿಮ್ಮಮಗಳನ್ನು ಚೆನ್ನಾಗಿ ಓದಿಸಿ ಆಕೆಯನ್ನು ಡಾಕ್ಟರ್ ಮಾಡಿ ಆಕೆ ಕೈಯಿಂದ ಇಂಥ ಕೆಲಸ್ ಮಾಡಿಸಿ ಆಗ ನೀವು ನನ್ನ ಋಣ ತೀರಿಸಿದಂತೆ’ ಎಂದು ಹಾರೈಸಿದರು. ‘ನೀವು ಅಂದುಕೊಂಡಷ್ಟು ಓದಿಸೋ ಶಕ್ತಿ ನಮಗಿಲ್ಲರೀ ಸರ್, ಹತ್ತನೇ ಕ್ಲಾಸ್ ಓದಿಸಿದ್ದೇ ದೊಡ್ಡದು. ಇನ್ನು ನಮಗ ನೀಗಂಗಿಲ್ಲ. ಚ್ವಲೋ ಮನೆತನ ನೋಡಿ ಮದುವಿ ಮಾಡಿದ್ರಾತು ಅಂದ್ಕಂಡೀವಿ’ ಎಂದ ಅಪ್ಪ. ಆಗ ಡಾಕ್ಟರ್ ಅವರು ಒಂದು ಚೀಟಿಯಲ್ಲಿ ಏನೇನೋ ಬರೆದು ಒಂದು ಕವರಿಗೆ ಹಾಕಿ ಬಾಗಿಲಲ್ಲೇ ನಿಂತಿದ್ದ ಹುಡುಗನ ಕೈಗೆ ಕೊಟ್ಟು ‘ಶೆಟ್ಟಿ ಸರ್‍ಗೆ ಇದನ್ನ ಕೊಡು’ ಎಂದು ಹೇಳಿದರು.  ‘ಹಾಗೆಲ್ಲಾ ಮಾಡಬೇಡಿ, ಚೆನ್ನಾಗಿ ಓದಿಸಿ. ಹೋಗಿ ಶೆಟ್ಟಿ ಸರ್‍ನ ಭೆಟ್ಟಿಯಾಗಿ’ ಎಂದು ಹೇಳಿ ಕಳುಹಿಸಿದರು. ಆ ಹುಡುಗ ನಮ್ಮನ್ನು ನೇರವಾಗಿ ಶೆಟ್ಟಿ ಸರ್ ಬಳಿ ಕರೆದುಕೊಂಡು ಬಂದು ಲೆಟರನ್ನು ಅವರಿಗೆ ಕೊಟ್ಟು ಹೋದ. ಲೆಟರ್ ತೆಗೆದು ನೋಡಿದ ಶೆಟ್ಟಿ ಸರ್, ‘ಸರಿ ನಿಮ್ಮ ಮಗಳಿಗೆ ನಮ್ಮ ಕಾಲೇಜಿನಲ್ಲಿ ಫ್ರೀ ಸೀಟ್ ಕೊಡ್ತೀನಿ, ಅಷ್ಟೆ ಅಲ್ಲ ಹಾಸ್ಟೆಲ್ ವ್ಯವಸ್ಥೆನೂ ಮಾಡಿಕೊಡ್ತೀನಿ. ಒಂದು ವಾರ ಬಿಟ್ಟು ನನ್ನನ್ನು ಭೆಟ್ಟಿಯಾಗಿ’ ಎಂದು ಕಾಲೇಜಿನ ವಿಳಾಸ ಬರೆದು ಕಳುಹಿಸಿದರು. ‘ನೋಡಮ ದೇವ್ರು ಎಷ್ಟು ದೊಡ್ಡಾವ ಅದಾನ ನಾವು ಯಾವ ಕೆಲಸ ಆಗಲ್ಲ ಅಂದ್ಕಂಡಿದ್ದೆವೋ ಅವೆಲ್ಲಾ ಎಷ್ಟು ಸಲೀಸಾಗಿ ಆಗಕತ್ಯಾವ’ ಎಂದು ಖುಷಿಯಿಂದ ಹೇಳಿದ ಅಪ್ಪ. ‘ನೋಡಮ ನೀನು ಚ್ವಲೋತ್ತಿನ್ಯಾಗಿ ಓದಬೇಕು. ಓದಿ ನೀನೂ ಡಾಕ್ಟರ್ ಆಗಿ ರುದ್ರಗೌಡ್ರು ಅವರ ಮಗ ಹೆಂಗ ಸೇವೆ ಮಾಡಕತ್ತಾರಲ್ಲ ಅವರಂಗ ನೀನು ಮಾಡುವಂತಾಗಬೇಕು, ಅವಾಗಲೇ ಡಾಕ್ಟರ್ ಅವರ ಋಣ ತೀರೋದು’ ಎಂದ ಅಪ್ಪ.

ಡಾಕ್ಟರ್ ಅವರ ಸಹಾಯದಿಂದ ಕಾಲೇಜು ಮತ್ತು ಹಾಸ್ಟೆಲ್ ಸಿಕ್ಕ ಖುಷಿಯಲ್ಲಿ ಚೆನ್ನಾಗಿ ಓದತೊಡಗಿದೆ. ಕಾಲೇಜಿಗೆ ನಾನೇ ಫಸ್ಟ್ ಬರತೊಡಗಿದೆ. ಎಲ್ಲಾ ಉಪನ್ಯಾಸಕರೂ ನನ್ನನ್ನು ಗುರುತಿಸಿ ಪ್ರೋತ್ಸಾಹಿಸತೊಡಗಿದರು. ನಾನು ಹಳ್ಳಿಯಿಂದ ಬಂದವಳು. ಕಾಲೇಜಿನಲ್ಲಿ ಫಸ್ಟ್ ಬಂದಿದ್ದರಿಂದ ಚೆನ್ನಾಗಿರುವ ಬಟ್ಟೆ ತೊಡಬೇಕು, ಚೆನ್ನಾಗಿ ಕಾಣಿಸಬೇಕು ಎನ್ನುವ ಆಸೆಯಾಯಿತು. ಅದಕ್ಕೆ ಒಂದೆರಡು ಜೊತೆ ಅಪ್ಪನೂ ತಂದುಕೊಟ್ಟ. ಕಾಲೇಜಿನಲ್ಲಿ ಗೋವಾಗೆ ಪ್ರವಾಸ ಏರ್ಪಡಿಸಿದರು. ಅಲ್ಲಿಗೆ ಹೋಗುವ ಬಯಕೆ, ಅಪ್ಪ ಅದನ್ನು ಈಡೇರಿಸಿಯೇ ಬಿಟ್ಟ. ಪ್ರವಾಸದಿಂದ ಮರಳಿ ಬಂದ ನಂತರ ನನ್ನಲ್ಲಿದ್ದ ಓದುವ ಆಸಕ್ತಿ ಕ್ರಮೇಣ ಕಡಿಮೆಯಾಗತೊಡಗಿತು. ಗೋವಾ ಬೀಚಲ್ಲಿ ಅಲೆಗಳೊಂದಿಗಿನ ಆಟದಲ್ಲಿ ಹುಡುಗನೊಬ್ಬ ಮೈಮೇಲೆ ಬಿದ್ದು ನೀರಲ್ಲೇ ಗಟ್ಟಿಯಾಗಿ ತಬ್ಬಿಕೊಂಡುಬಿಟ್ಟ. ಆಗಿನಿಂದ ನನ್ನಪ್ಪ ತಲೆಸವರಿ ಬುದ್ಧಿಹೇಳಿದ್ದೆಲ್ಲವೂ ನೀರಲ್ಲೇ ಕರಗಿಹೋಯಿತು. ಅಪ್ಪನ ಕನಸು, ಡಾಕ್ಟರ್ ಅವರ ಹಾರೈಕೆ ಎಲ್ಲವೂ ನೀರಲ್ಲಿ ಕೊಚ್ಚಿಹೋಯಿತು. ಅಪ್ಪನ ಮನಸ್ಸಿನ ಸುಖಕ್ಕಾಗಿ ಇಲ್ಲಿಯವರೆಗೂ ಬದುಕಿದ್ದ ನನಗೆ ಈಗ ನನ್ನ ದೇಹ ಸುಖಕ್ಕಾಗಿ ಬದುಕುವ ಕೆಟ್ಟ ಆಲೋಚನೆಯೊಂದು ದೆವ್ವ-ಭೂತಗಳಂತೆ ನನ್ನ ಮೈ ಹೊಕ್ಕಿತು. ನಾನು ಅದೇ ಹುಡುಗನೊಂದಿಗೆ ಪ್ರೀತಿಯ ಸಂಬಂಧ ಬೆಳೆಸತೊಡಗಿದೆ. ಆದರೆ ಆ ಹುಡುಗನು ಪ್ರೀತಿಯ ನಂತರದ ಪಯಣಕ್ಕೆ ಸಿದ್ಧನಿರಲಿಲ್ಲ. ಅದಕ್ಕಾಗಿ ಹಂಬಲಿಸುತ್ತಿದ್ದ ನನಗೆ ಕಾಲೇಜಿನ ಯಾವ ಹುಡುಗರೂ ತಣಿಸಲಿಲ್ಲ. ಹಾಸ್ಟೆಲ್‍ನಲ್ಲಿ ಸಮಸ್ಯೆ ಇರುವುದಾಗಿ ಅಪ್ಪನಿಗೆ ಸುಳ್ಳು ಹೇಳಿದೆ. ಊರಿನಿಂದ ಬಸ್ಸಲ್ಲಿ ಓಡಾಟ ಶುರುಮಾಡಿದೆ. ಬಸ್ಸಲ್ಲಿನ ಓಡಾಟ ನನಗೆ ತುಂಬಾ ಖುಷಿ ನೀಡಿತು. ಬಸ್ಸಿನಲ್ಲಿ ಪರಿಚಯವಾದ ಹುಡುಗ ನನ್ನ ಸಖ್ಯ ಬೆಳೆಸುವ ಸೂಚನೆ ನೀಡಿದ. ನನ್ನ ಕಾಲೇಜಿನ ಹತ್ತಿರದವರೆಗೂ ಬರತೊಡಗಿದ. ಒಂದೆರಡು ವಾರದಲ್ಲಿ ನಾನು ಅವನಿಗಾಗಿ ಬಹುಬೇಗನೇ ಬರತೊಡಗಿದೆ. ಇಬ್ಬರೂ ಕಾಲೇಜಿನ ಹಿಂಭಾಗದಲ್ಲಿ ಸೇರತೊಡಗಿದೆವು. ಒಬ್ಬರನ್ನೊಬ್ಬರು ಪ್ರೀತಿಸತೊಡಗಿದೆವು. ನಮ್ಮ ಪ್ರೀತಿ ಗಾಢವಾಗಿ ಬೆಳೆಯಿತು.

“ನೀ ಕೆಮ್ಮಬೇಡ ಗೆಳತಿ
ನಿನ್ನ ಎದೆಯಲಿ ನಾನಿರುವೆ
ಹಾರಿ ಹೋದೇನು.

ನೀ ತುಟಿ ಕಚ್ಚಬೇಡ ಗೆಳತಿ
ನಿನ್ನ ತುಟಿಯಂಚಲಿ ನಾನಿರುವೆ
ತುಂಡಾಗಿ ಹೋದೇನು.

ನೀ ಅಳಬೇಡ ಗೆಳತಿ
ನಿನ್ನ ಕಣ್ಣಲ್ಲಿ ನಾನಿರುವೆ
ಜಾರಿ ಹೋದೇನು.

ನೀ ನೋಯಬೇಡ ಗೆಳತಿ
ನಿನ್ನ ಮನದಲಿ ನಾನಿರುವೆ
ಸತ್ತು ಹೋದೇನು.”

ಎಂಬ ಅವನ ಕವಿತೆಯ ಸಾಲುಗಳು ನನ್ನ ಮನಸೂರೆಗೊಂಡಿತು. ಕಣ್ಣಂಚಲಿ ಆನಂದಭಾಷ್ಪ ಜಿನುಗುವಂತೆ ಮಾಡಿತು. ಅವನು ತನ್ನ ಎರಡೂ ಕೈಗಳಿಂದ ಬಟ್ಟಲುಗಣ್ಣಲ್ಲಿ ಜಿನುಗಿದ ಕಣ್ಣೀರನ್ನು ಅಂಗೈಯಲ್ಲಿ ಹಿಡಿದು ‘ನೀನು ನನ್ನ ಪ್ರಾಣ, ಸಾಯುವವರೆಗೂ ನಾವಿಬ್ಬರೂ ಜೊತೆಯಾಗಿಯೇ ಇರೋಣ, ಅದೇನೇ ಬರಲಿ ನಾನು ನಿನ್ನ ಕೈಬಿಡುವುದಿಲ್ಲ. ಇದಕ್ಕೆ ನನ್ನ ಅಂಗೈಯ್ಯಲ್ಲಿರುವ ಕಣ್ಣೀರೇ ಸಾಕ್ಷಿ. ಆದರೆ ನೀ ಕೈಬಿಟ್ಟ ದಿನವೇ ನನ್ನ ಸಾವು’ ಎಂದು ಶಪಥ ಮಾಡಿದ. ಆ ಕ್ಷಣಕ್ಕೆ ನಾನು ಅವನನ್ನು ಎರಡೂ ಕೈಗಳಿಂದ ಬಿಗಿದಪ್ಪಿ ಮುದ್ದಾಡಿದೆ. ನಮ್ಮಿಬ್ಬರ ಪ್ರೀತಿ ತಾರಕಕ್ಕೇರಿತು.

ದಿನಾಲೂ ಕಾಲೇಜಿಗೆ ಬರುವ ಹಾಗೆಯೇ ಆ ದಿನವೂ ಕಾಲೇಜಿಗೆ ಬಂದೆ. ಎರಡು ತರಗತಿಗಳು ಮುಗಿಯುತ್ತಿದ್ದಂತೆಯೇ ನನ್ನ ಗೆಳೆಯ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡು, ನನ್ನ ದಾರಿಗಾಗಿ ಕಾಲೇಜಿನ ಹಿಂದೆ ಕಾರೊಂದರಲ್ಲಿ ಕಾಯುತ್ತಿದ್ದ. ನಾನು ಆತುರ ಆತುರವಾಗಿ ಹೋಗಿ ಕಾರಿನಲ್ಲಿ ಕುಳಿತೆ. ಕಾರು ರಾಯಚೂರಿನ ಕಡೆಗೆ ಹೊರಟಿತು. ‘ಈಗ ಎಲ್ಲಿಗೆ ಹೋಗೋದು’ ಎಂದೆ. ‘ನಾನು ಅದಕ್ಕೆಲ್ಲಾ ವ್ಯವಸ್ಥೆ ಮಾಡಿದ್ದೇನೆ. ಪ್ರಾಣಕ್ಕೆ ಪ್ರಾಣ ಕೊಡುವ ಗೆಳೆಯರಿದ್ದಾರೆ. ಅದಕ್ಯಾಕೆ ಚಿಂತೆ ಮಾಡ್ತೀದಿ’ ಎನ್ನುತ್ತಲೇ ನನ್ನ ಕೈಯ್ಯನ್ನು ಗಟ್ಟಿಯಾಗಿ ಹಿಡಿದ. ‘ನಾವು ಅಂದುಕೊಂಡಂತೆಯೇ ಎಲ್ಲಾ ಆಯ್ತು’ ಎಂದು ಕಾರಲ್ಲಿದ್ದ ಅವನ ಗೆಳೆಯರು ಖುಷಿಯಿಂದ ಜಂಬ ಕೊಚ್ಚಿಕೊಳ್ಳತೊಡಗಿದರು.

ರಾಯಚೂರಿನ ಊರ ಹೊರಗಿನ ದೇವಸ್ಥಾನವೊಂದರಲ್ಲಿ ನನಗೆ ತಾಳಿ ಕಟ್ಟಿ ನನ್ನನ್ನು ಮದುವೆಯಾದ. ಅಂದು ರಾತ್ರಿ ರಾಯಚೂರಿನ ಲಾಡ್ಜವೊಂದರಲ್ಲಿ ಕಳೆದೆವು. ಬಹುದಿನಗಳಿಂದ ಹಾತೊರೆಯುತ್ತಿದ್ದ ಮನದಾಗ್ನಿಯ ಕೆಂಡಕ್ಕೆ ಕೊಂಚ ನೀರೆರೆದಂತಾಯಿತು. ನಿನ್ನೆಯಿಂದಲೇ ಮನೆಯಲ್ಲಿ ನನಗಾಗಿ ಹುಡುಕಾಟ ಶುರುವಾಗಿತ್ತು. ನಾವಾಗಲೇ ಮದುವೆಯಾಗಿ ಒಂದು ದಿನ ಕಳೆಯಿತು. ಮನೆಯವರಿಗೆ ನಾವೇ ಕರೆಮಾಡಿ ತಿಳಿಸಿದೆವು. ‘ಎಲ್ಲಿ ಅದೀಯಮ, ನಿನ್ನೆಯಿಂದ ಎಲ್ಲಾ ಕಡೆಯೂ ಹುಡುಕಾಡಿದ್ವಿ, ಎಲ್ಲರನ್ನೂ ವಿಚಾರಿಸಿದೆವು ಸದ್ಯ ಸಿಕ್ಕಿದೆಯಲ್ಲ. ಹೌದು ಈಗ ಎಲ್ಲಿ ಇದಿಯಾ’ ಧಾವಂತದಿಂದ ಕೇಳಿದ ಅಪ್ಪ. ‘ಅಪ್ಪ ನಾನು ಒಂದು ಹುಡುಗನನ್ನು ಪ್ರೀತಿಸುತ್ತಿದ್ದೆ, ಈಗ ಅವನನ್ನೇ ಮದುವೆಯಾಗಿದ್ದೀನಿ’ ಎಂದು ಗಟ್ಟಿ ಮನಸ್ಸಿನಿಂದ ಹೇಳಿ ಫೋನ್ ಕಟ್ ಮಾಡಿಬಿಟ್ಟೆ. ಆ ಕಡೆಯಿಂದ ಫೋನ್ ಕರೆಗಳು ಶುರುವಾದವು. ಆಗ ಸ್ವಿಚ್ ಆಫ್ ಮಾಡಿಬಿಟ್ಟೆ. ಒಂದಷ್ಟು ಸಮಯದ ನಂತರ ಅಪ್ಪನ ಧ್ವನಿ ಯಾಕೋ ಕಿವಿಯಲ್ಲಿ ಗುಂಯ್‍ಗುಡತೊಡಗಿತು. ಫೋನ್ ಸ್ವಿಚ್ ಆನ್ ಮಾಡಿದೆ. ಫೋನ್ ಆನ್ ಆಗುತ್ತಿದ್ದಂತೆ ಕರೆ ಬಂತು, ‘ನಿಮ್ಮಪ್ಪನಿಗೆ ಹಾರ್ಟ್‍ಅಟ್ಯಾಕ್ ಆಗಿದೆ, ಚಿನ್ನೂರು ಗವರ್ನಮೆಂಟ್ ಆಸ್ಪತ್ರೆಯಲ್ಲಿ ಹಾಕ್ಯಾರ. ನೀನು ಬಂದು ನಿಮ್ಮಪ್ಪನನ್ನ ನೋಡಿದ್ರ ಆತನ ಮನಸ್ಸಿಗೆ ಒಂದಷ್ಟು ಸಮಾಧಾನ ಆಗುತ್ತ, ಎರಡು ದಿನಗಳಿಂದ ನಿನ್ನನ್ನು ನೋಡದೇ ಬಹಳಷ್ಟು ಗಾಬರಿಯಾಗ್ಯಾನ, ನೋಡವ ನಿಮ್ಮಿಷ್ಟ’ ಎಂದು ಫೋನ್ ಕಟ್ ಮಾಡಿದರು.

ಕಿವಿಯಲ್ಲಿದ್ದ ಗುಂಗು ಈಗ ತಲೆಯೊಳಗೆ ಹೊಕ್ಕು ಕೊರೆಯತೊಡಗಿತು. ‘ನಮ್ಮಪ್ಪ ಸಾವು ಬದುಕಿನ ಮಧ್ಯೆ ಇದ್ದಾರಂತೆ ಒಂದುಸಲ ಹೋಗಿ ನೋಡಿ ಬರೋಣ ಬರ್ರಿ’ ಎಂದು ಗಂಡನನ್ನು ಒಪ್ಪಿಸಿದೆ. ಆಸ್ಪತ್ರೆಯ ಹೊರಗಡೆ ನಾವು ಬರುವುದನ್ನೇ ಕೌತುಕದಿಂದ ಕಾಯುತ್ತ ಒಂದರ್ಧ ಊರೇ ಬಂದು ನಿಂತಿತ್ತು. ನಾವು ಆಸ್ಪತ್ರೆಯ ಮುಂದೆ ಬಂದು ನಿಂತಾಗ ಎಲ್ಲರ ದೃಷ್ಟಿಯು ನಮ್ಮತ್ತ ನೆಟ್ಟಿತ್ತು. ದೊಡ್ಡಪ್ಪನ ಮಕ್ಕಳು ವಕ್ರ ದೃಷ್ಟಿಯಿಂದ ನೋಡುತ್ತಿದ್ದರು. ಅಪ್ಪ ಮಲಗಿರುವ ಬೆಡ್‍ನ ಕಡೆಗೆ ಕರೆದುಕೊಂಡು ಹೋದರು. ಅಸ್ಥಿಪಂಜರದಂತೆ ಮಲಗಿದ್ದ ಅಪ್ಪ ನನ್ನ ಕೊರಳೊಳಗಿದ್ದ ತಾಳಿಯನ್ನು ಕಂಡು ಮಕ್ಕಳಂತೆ ಅಳತೊಡಗಿದ. ಅಳಲು ಧ್ವನಿಯೂ ಇಲ್ಲದೇ ಕೀರಲು ಧ್ವನಿಯಲ್ಲಿ ಚೀರುತ್ತಾ ಕೈ ಸನ್ನೆ ಮಾಡುತ್ತಾ ಹತ್ತಿರ ಕರೆದ. ಅಪ್ಪನ ದಯನೀಯ ಸ್ಥಿತಿಯು ನನ್ನ ಮನಸ್ಸನ್ನು ತುಸು ಕಲುಕಿತು. ಆದರೂ ನನ್ನ ನಿರ್ಧಾರ ಅಚಲವಾಗಿತ್ತು. ಪಕ್ಕದ ರೂಮಿಗೆ ನನ್ನನ್ನು ಕರೆದುಕೊಂಡು ಹೋದ ನನ್ನ ಅಣ್ಣಂದಿರು, ‘ಈ ವಿಷಯವನ್ನು ಮೊದ್ಲು ನಮಗ ಹೇಳಬಾರದಿತ್ತೇನಮ್ಮಾ. ನೀನು ಭಾಳ ಅವಸರ ಮಾಡಿದಿ. ನಾವೇನು ಮದುವೆಗೆ ಒಲ್ಲೇ ಅಂತಿದ್ದಿವೇನು? ಎಂಥಾ ಹುಚ್ಚುಹುಡಿಗಿ ನೀನು. ಸರಿಬಿಡು ತಾಳಿ ಕಿತ್ತಿ ಬಿಸಾಕು. ನೀನು ಎಂಥಾ ಹುಡುಗ ಅಂತೀದ್ಯೋ ಅಂಥವನ ಕುಡ ಮದುವೆ ಮಾಡಿಸ್ತೀವಿ ತಾಳಿ ಕಿತ್ತಾಕು’ ಎಂದರು. ‘ಅದನ್ನು ಬಿಟ್ಟು ಬೇರೆ ಏನಾದ್ರು ಕೇಳ್ರಿ’ ಎಂದು ಅಳುತ್ತಾ ಬೇಡಿಕೊಂಡೆ. ‘ಇಷ್ಟು ವರ್ಷ ಜೋಪಾನ ಮಾಡಿದ ತಂದೆ-ತಾಯಿಗಳಿಗಿಂತ ಅವನೇ ಹೆಚ್ಚಾದನಾ ನಿನಗೆ? ಅಪ್ಪನನ್ನಾದ್ರೂ ನೋಡು, ನಿನ್ನ ಚಿಂತಿ ಅಚಿಗೆಂಡು ಎರಡು ದಿನದಲ್ಲೇ ಹೆಂಗಾಗ್ಯಾನಂತ’ ಎಂದರು ಅಣ್ಣಂದಿರು. ಅಷ್ಟಾದರೂ ನಾನು ಕೇಳಲಿಲ್ಲ. ‘ಅಣ್ಣಾ ಅವನು ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸ್ತಾ ಇದಾನೆ’ ಎಂದೆ. ‘ನಿನ್ನವ್ನು ನಮಗ ಎದುರು ಮಾತಾಡ್ತೀಯೇನು?’ ಎಂದು ಒಂದೆರಡು ಏಟು ಹೊಡೆದರು. ಕುತ್ತಿಗೆಗೆ ಕೈ ಹಾಕಿ ತಾಳಿಯನ್ನು ಕಿತ್ತುಬಿಟ್ಟರು. ಒಂದು ಕ್ಷಣ ನನ್ನ ಕರುಳನ್ನೇ ಕಿತ್ತುಬಿಟ್ಟರು ಎನ್ನುವಷ್ಟು ನೋವಾಯಿತು. ಗೋಡೆಗೆ ಆಸರೆಯಾಗಿ ಕೆಳಗೆ ಕುಸಿದು ಬಿದ್ದೆ. ಎಚ್ಚರವಾದ ಮೇಲೆ ಕಣ್ಣು ಬಿಟ್ಟು ನೋಡಿದೆ. ನಾನು ನಮ್ಮ ಮನೆಯಲ್ಲಿದ್ದೆ. ಗಾಬರಿಯಿಂದ ಎದ್ದು ಗಂಡನಿಗಾಗಿ ಹುಡುಕಾಡಿದೆ. ಕಾಣಲಿಲ್ಲ. ಚಡಪಡಿಸತೊಡಗಿದೆ. ‘ನೋಡು ಅದೆಲ್ಲವನ್ನು ಮರೆತುಬಿಡು. ನಾವು ಹೇಳಿದಂಗ ಕೇಳು ನಿನಗ ಒಳ್ಳೆಯದಾಗುತ್ತೆ. ಅವನ್ಯಾರೋ ಬೇವರ್ಸಿ ನನ್ಮಗನ ಆಲೋಚನೆ ಬಿಟ್ಟುಬಿಡು. ಅವರೆಲ್ಲಾ ಬಾಳೆವುಮಾಡೋರಲ್ಲ, ದೇವರಿಗೆ ಬಿಟ್ಟ ಕೋಣ ಇದ್ದಂಗ, ಸಿಕ್ಕಲ್ಲೆಲ್ಲಾ ಸಿಕ್ಕಿದ್ದನ್ನೆಲ್ಲಾ ಮೇಯ್ತಾವ. ತಲ್ಯಾಗ ಯಾವುದನ್ನೂ ಇಟ್ಟುಕೊಳ್ಳಬೇಡ. ಒಂದುನಾಲ್ಕುದಿನ ರೆಸ್ಟ್ ಮಾಡು ಎಲ್ಲಾ ಸರಿಹೋಗುತ್ತ. ಹೋಗಿರೋ ಮಾನ-ಮರ್ಯಾದೆ ಒಳ್ಳಿ ಬರಲ್ಲ. ಆದರ ನೀನು ಮನೆಗೆ ಬಂದೀಯಲ್ಲ ಅಷ್ಟು ಸಾಕು. ಅದೇ ಖುಷಿ ನಮಗ.’ ಎಂದರು ಅಣ್ಣಂದಿರು.

ಗಂಡನ ನೆನಪು ಪ್ರತೀಕ್ಷಣವೂ ಕಾಡುತ್ತಿತ್ತು. ಈ ಎಲ್ಲಾ ವಿಚಾರಗಳನ್ನು ಮುಚ್ಚಿಟ್ಟು ಮತ್ತೊಂದು ಕಡೆ ಮದುವೆ ಫಿಕ್ಸ್ ಮಾಡಿದ್ರು. ಈ ಹೊಸ ಹುಡುಗ ಹಬ್ಬಕ್ಕೆ  ಊರಿಗೆ ಬಂದು, ಎರಡು ದಿನ ಮನೆಯಲ್ಲೇ ಇದ್ದು ಹೊಸ ಫೋನ್ ಒಂದನ್ನು ಕೊಡಿಸಿ ಹೋದ. ಈ ಹುಡುಗನೊಂದಿಗೆ ಸಲುಗೆಯಿಂದ ಇರುವುದು ಕಂಡು ಮನೆಯಲ್ಲಿ ಒಂದಷ್ಟು ನಿರಾಳವಾಯಿತು. ಕರಾಳ ಛಾಯೆ ಸರಿದಂತಾಯಿತು. ದಿನಗಳು ಕಳೆದವು, ಈ ಹುಡುಗನ ಕರೆ ನಿತ್ಯವೂ ಮೂರೊಪ್ಪತ್ತು ಊಟದಂತೆ ಶುರುವಾಯಿತು. ಮನೆಯಲ್ಲಿ ಎಲ್ಲರೂ ಹೊಂದಿಕೊಂಡರು. ಗಂಟೆಗಟ್ಟಲೆ ಮೊಬೈಲ್ ಮಾತುಕತೆಗೆ ಮನೆಯವರೆಲ್ಲರೂ ಸಹಕರಿಸತೊಡಗಿದರು. ಫೋನ್ ರಿಂಗ್ ಆಗುತ್ತಿದ್ದಂತೆ ನನ್ನ ಕೈಯ್ಯಲ್ಲಿದ್ದ ಕೆಲಸವನ್ನು ಬಿಡಿಸಿ ಮಾತುಕತೆಗೆ ಪ್ರೋತ್ಸಾಹಿಸಿದರು. ರಾತ್ರಿ ಹೊತ್ತಲ್ಲದ ಹೊತ್ತಲ್ಲೂ ಮಾತುಕತೆಗಳು ನಡೆಯುತ್ತಿದ್ದವು. 

ನಾಳೆ ಊರ ದೇವರ ಜಾತ್ರೆ. ರಾತ್ರಿ ಹನ್ನೆರಡು ಗಂಟೆಯಾದರೂ ಇನ್ನೂ ಊರು ಜನ ಮಲಗಿರಲಿಲ್ಲ. ಎಲ್ಲರೂ ಜಾತ್ರೆಯ ತಯಾರಿಯಲ್ಲಿದ್ರು. ಚಿಕ್ಕಮ್ಮನ ಮಗಳ ಬಳಿ ಮೆಹಂದಿ ಹಾಕಿಸಿಕೊಂಡು ಬರುತ್ತೇನೆ ಎಂದು ಕೈಯ್ಯಲ್ಲಿದ್ದ ಫೋನನ್ನು ಅಲ್ಲೇ ಬಿಟ್ಟು ಹೊರ ಹೋದೆ. ‘ಜಲ್ದಿ ಬಂದುಬಿಡಮ ಬೆಳಿಗ್ಗೆ ಜಲ್ದಿ ಗಂಗಾಸ್ಥಳಕ್ಕ ಹೋಗ್ತಾರಂತ, ತಡಮಾಡಬ್ಯಾಡ್ರಿ’ ಎಂದ ಅಪ್ಪ. ‘ಆಯ್ತು ಅಪ್ಪ’ ಎಂದು ಎದ್ದು ಹೊರಹೋದೆ. ಚಿಕ್ಕ ಹಳ್ಳದ ಬಳಿ ಆಗಲೇ ಸೈಕಲ್ ಮೋಟರ್ ತೆಗೆದುಕೊಂಡು ಬಂದು ನಿಂತಿದ್ದ ನನ್ನ ಗಂಡನ ಜೊತೆ ಹೊರಟೇಬಿಟ್ಟೆ. ಅರ್ಧಗಂಟೆಯಾದರೂ ನಾನು ಮನೆಗೆ ಹೋಗದೇ ಇದ್ದುದು ಅಪ್ಪನಿಗೆ ಸಣ್ಣದೊಂದು ಅನುಮಾನ ಮೂಡಿತು. ನಾನು ಬಿಟ್ಟು ಹೋಗಿದ್ದ ಫೋನನ್ನು ಕೈಯ್ಯಲ್ಲಿಹಿಡಿದು ಚಿಕ್ಕಮ್ಮನ ಮನೆಗೆ ಬಂದು ವಿಚಾರಿಸಿದ. ‘ಅವಳು ಮನೆಗೆ ಬಂದೇ ಇಲ್ಲ’ ಎಂಬ ವಿಚಾರ ತಿಳಿಯುತ್ತಿದ್ದಂತೆ ಅಣ್ಣಂದಿರು ಅಪ್ಪನ ಕೈಯ್ಯಲ್ಲಿದ್ದ ಫೋನ್ ತೆಗೆದುಕೊಂಡು ಸರ್ಚ್ ಮಾಡಿದರು. ಅದರಲ್ಲಿ ಆ ಹೊಸ ಹುಡುಗನಿಗಿಂತ ಹೆಚ್ಚಾಗಿ ನನ್ನ ಗಂಡನ ಜೊತೆಗೆ ಮಾತನಾಡಿದ್ದು ತಿಳಿಯಿತು. ಕೊನೆಯ ಕರೆಯೂ ಕೂಡ ನನ್ನ ಗಂಡನೊಂದಿಗಿನ ಮಾತುಕತೆಯಾಗಿತ್ತು. ಅವರ ಅನುಮಾನ ನಿಜವಾಯಿತು. ಈ ಸಲ ಮತ್ತೆ ನನ್ನನ್ನು ಹುಡುಕುವ ಪ್ರಯತ್ನ ಯಾರೂ ಮಾಡಲೇ ಇಲ್ಲ.

ನನ್ನ ಗಂಡನ ಗೆಳೆಯರೆಲ್ಲರೂ ಸೇರಿ ಕ್ಯಾಂಪ್ ಒಂದರಲ್ಲಿ ಒಂದು ರೂಮನ್ನು ಅರೆಂಜ್ ಮಾಡಿದ್ದರು. ಖಾಲಿ ಕೈಯ್ಯಲ್ಲಿ ರೂಮನ್ನು ಸೇರಿದೆವು. ಬೆಳಿಗ್ಗೆ ಎದ್ದು ‘ಮನೆಗೆ ಅತ್ಯವಶ್ಯಕ ಸಾಮಾಗ್ರಿಗಳನ್ನು ಬರೆದುಕೊಡು ತರ್ತೀನಿ’ ಎಂದ. ಸರಿ ಎಂದು ಇಷ್ಟುದ್ದದ ಲೀಸ್ಟ್ ರೆಡಿಮಾಡಿ ಕೊಟ್ಟೆ. ‘ಇವತ್ತಿನಿಂದ ಹೊಸ ಜೀವನ ಆರಂಭ, ಅದನ್ನು ಖುಷಿಯಿಂದಲೇ ಆರಂಭಿಸೋಣ’ ಎಂದು ಸಾಮಗ್ರಿಗಳನ್ನು ತರಲು ಹೊರಟ. ಅವನು ಬರುವ ಹೊತ್ತಿಗೆ ಕೋಣೆಯನ್ನೆಲ್ಲಾ ಸ್ವಚ್ಛಗೊಳಿಸಿ ಕುಳಿತಿದ್ದೆ. ಇಬ್ಬರೂ ಸಾಮಗ್ರಿಗಳನ್ನು ಜೋಡಿಸಿಟ್ಟೆವು. ಎಲ್ಲಾ ಕೆಲಸ ಮುಗಿಯುತ್ತಿದ್ದಂತೆ ಅಡುಗೆ ಮಾಡಿದೆ. ಇಬ್ಬರೂ ಒಂದೇ ತಟ್ಟೆಯಲ್ಲಿ ಊಟಮಾಡಿ ಖುಷಿಪಟ್ಟೆವು. ‘ಪ್ರಿಯೇ ನಿನಗೇನು ಬೇಕು ಕೇಳು ಕ್ಷಣದಲ್ಲೇ ತಂದು ಕೊಡುವೆ. ಆ ಚುಕ್ಕಿ-ಚಂದಿರನ ತಂದು ಕೊಡಲೇ’ ಎಂದು ಕವನದಿಂದ ಮನಸ್ಸನ್ನು ಉಲ್ಲಾಸಗೊಳಿಸುತ್ತಿದ್ದ. ‘ಅದ್ಯಾವುದೂ ಬೇಡ ನಮಗೊಂದು ಪುಟಾಣಿ ಪಾಪು ಆದರೆ ಅಷ್ಟೆ ಸಾಕು’ ಎಂದು ನಾಚಿಕೆಯಿಂದ ಹೇಳಿದೆ.

 ನನಗೆ ಏನೇನೋ ಬಯಕೆಗಳು ಒಡಮೂಡತೊಡಗಿದವು. ಮೂರು ತಿಂಗಳು ಗರ್ಭಿಣಿ ಎಂದು ನನಗೆ ಖಾತರಿಯಾಯಿತು. ಬೆಳಿಗ್ಗೆ ಎದ್ದು ಅಡುಗೆ ಮಾಡಿ ಅವನಿಗೆ ಊಟಕ್ಕೆ ನೀಡುತ್ತಿದ್ದೆ, ಕಣ್ಣೀರು ಹರಿಯತೊಡಗಿದವು. ‘ಆನಂದ ಭಾಷ್ಪನಾ?’ ಎಂದ. ‘ಹ್ಞಾಂ’ ಎಂದೆ. ಊಟ ಮಾಡಿ ಅವನು ಹೊರಹೋದ. ಹಾಗೆಯೇ ಚಾಪೆಯ ಮೇಲೆ ಮೆಲ್ಲಗೆ ಒರಗಿದೆ... ಈ ಸಂದರ್ಭದಲ್ಲಿ ತವರು ಮನೆಯಿಂದ ಕಳ್ಳ ಬುತ್ತಿ ಬರುತ್ತಿತ್ತು. ಹಾಗೆಯೇ ನನ್ನ ಬಯಕೆಯಂತೆ ಎಲ್ಲಾ ತಿನಿಸುಗಳನ್ನು ಮಾಡಿಕೊಡುತ್ತಿದ್ದರು. ತವರು ಮನೆಯಿಂದ ತಂದ ಬುತ್ತಿಯಲ್ಲಿ ಊರುಮಂದಿಗೆ ಹಂಚೋದು, ಒಂಬತ್ತು ತಿಂಗಳದ ಆಸುಪಾಸಿನಲ್ಲಿ ನನ್ನ ಸಂಬಂಧಿಕರೆಲ್ಲರೂ ಬಂದು ಮುತೈದೆಯರಿಂದ ಮೈ ತುಂಬಾ ಹರಿಸಿಣ ಹಚ್ಚಿ, ಹರಿಸಿಣದ ನೀರೆರೆದು, ಹಸಿರು ಬಳೆ, ಹಸಿರು ಸೀರೆ-ಕುಪ್ಪಸ ತೊಡಿಸಿ, ತಲೆ ತುಂಬಾ ಹೂವಿನ ದಂಡೆ ಹಾಕಿ, ಇಷ್ಟಗಲದ ಕುಂಕುಮ ಹಣೆಗೆ ಇಟ್ಟು, ತಾಳಿ, ಬಳೆ, ಮೂಗುತಿಗೆ ಕುಂಕುಮ ಹಚ್ಚಿ, ಕೆನ್ನೆಗೆ ಹರಿಸಿಣ ಸವರಿ, ಅಲಂಕರಿಸಿದ ಕುರ್ಚಿಯಮೇಲೆ ಗಂಡ-ಹೆಂಡತಿಯರಿಬ್ಬರನ್ನೂ ಕುಳ್ಳಿರಿಸಿ, ಮುಂದೆ ಪರಾತದೊಳಗೆ ದಿನಾಸಗರಿ ಹಣ್ಣು-ಹಂಪಲ, ಸಿಹಿ-ಖಾರ ತಿನಿಸು ಎಲ್ಲವನ್ನೂ ಇಡೋರು. ನೋಡಿದರೆ ಸಾಕು ಬಾಯಲ್ಲಿ ನೀರು ಬರೋದು. ಗಂಡನಿಗೆ ಚಿನ್ನದ ಉಂಗುರ ತೊಡಿಸುವರು. ಮುಂದಿನ ಸಾಲಿನಲ್ಲಿ ಸಣ್ಣ ಸಣ್ಣ ಹುಡುಗಿಯರು, ನಂತರ ದೊಡ್ಡವರು. ಹಿಂದೆ ಕುಳಿತಿದ್ದ ಮುದುಕಿಯರು ಪದ ಹಾಡೊರು. ಕೆಲವು ರಸಿಕರು ಮಧ್ಯೆ ಬಂದು ‘ಯವ್ವಾ ಜಿಲೇಬಿ ಪದ ಹಾಡಬ್ಯಾಡ್ರಿ ಹೆಣ್ಣು ಮಗು ಹುಟ್ಟುತ್ತ ನೋಡು. ಮಿರ್ಚಿ ಪದ ಹಾಡ್ರಿ’ ಎಂದು ಹೇಳೋರು. ಕುಳಿತವರೆಲ್ಲಾ ಬಿದ್ದು ಬಿದ್ದು ನಗೋರು. ಆ ಕಡೆ ಗಂಡ-ಹೆಂಡತಿಯರಿಗೆ ಅಕ್ಷತೆ ಕಾಳು ಹಾಕಿ ಕಳಶ ಬೆಳಗಿ ಹೂ ಮುಡಿಸೋರು. ಕಳಶ ಬೆಳಗಿ ಕೆಳಗಡೆ ಹಿಡುವ ಹೊತ್ತಿಗೆ ಮುಂದೆ ಕುಳಿತಿದ್ದ ಹುಡುಗಿಯರು ಕಳಶದ ಮಣೆ ಕೈಯ್ಯಲ್ಲಿ ಹಿಡಿದು ‘ಒಗಟು ಇಟ್ಟು ಗಂಡನ ಹೆಸರು ಹೇಳ್ರಿ, ಅಲ್ಲಿತನಕ ನಾನು ಮಣೆ ಕೊಡುವುದಿಲ್ಲ’ ಎಂದು ಹಟ ಹಿಡಿಯುವರು.

‘ಅಡಿಕಿ ಗಟ್ಟಿ, ತುಳಸಿ ಕಟ್ಟಿ, ನನ್ನ ಗಂಡನ ಹೆಸರು ಕೇಳಾಕಿ ಬಲು ಗಟ್ಟಿ, ಗದ್ದಿಗೌಡ್ರು.’

‘ಕರೆ ಹೊಲ್ದಾಗಿನ ಕರಿಕಿ, ನನ್ನ ಗಂಡ ಬಲು ಬೆರಿಕಿ, ಬಸನಗೌಡ್ರು’

‘ಕಟಕಟ ರೊಟ್ಟಿ ಖಾರದ ಪುಡಿ, ಕಟಿಗೆಂಡು ಹೋಗು ಅಂದ್ರ ಸೆಟಗೊಂಡು ಹೋಗ್ತಾನ ಸಂಗನಗೌಡ್ರು’

ಕೆಲವರ ಒಗಟುಗಳಿಗೆ ಬಿದ್ದು ಬಿದ್ದು ನಗೋರು, ಇನ್ನು ಕೆಲವರ ಒಗಟುಗಳಿಗೆ ಶಹಬ್ಬಾಶ್‍ದ ಎಂದು ಹೇಳೋರು. ಬಸಿರ ಹೆಂಗಸು ತನ್ನೆಲ್ಲಾ ನೋವನ್ನು ಮರೆತು ಮನೋರಂಜನೆ ಪಡೆಯುತ್ತಿದ್ದಳು. ‘ಚ್ವಲೋದು ಒಂದು ಗಂಡು ಹಡೆದು ಕೊಡು ನಾನಾ ಮಾಡ್ಕೆಳ್ತೀನಿ’ ಎಂದು ಚಿಕ್ಕವ್ವ-ದೊಡ್ಡವ್ವರನವರು ನೆಕಲಿ ಮಾಡೋರು.

ಮಗು ಹುಟ್ಟಿ ತೊಟ್ಟಿಲ ಕಾರ್ಯಕ್ರಮದಲ್ಲಿ ಕೂಸಿನ ಸೋದರ ಮಾವನು ತಲೆಗೆ ಟವೆಲ್ ಸುತ್ತಿಗೊಂಡು, ಕೈಯ್ಯಲ್ಲಿ ಗಂಗಾಳ ಸವಟು ಹಿಡುಕೊಂಡು ನಾಮಕರಣ ಮಾಡಲು ಬರುತ್ತಿದ್ದಂತೆಯೇ, ಅವನ ಅತ್ತೆಯಂದಿರು-ಸೊಸೆಯಂದಿರು ಅವನ ಬೆನ್ನಿಗೆ ಬಡಿಯಲು ಕೈ ಬಳೆ ಏರಿಸಿ ಸಿದ್ಧರಾದರೆ, ನನ್ನ ಮಗನಿಗೆ ಹೊಡೆಯೋಕೆ ನಾವು ಬಿಡಲ್ಲ ಎಂದು ಅವನ ಚಿಕ್ಕಮ್ಮ-ದೊಡ್ಡಮ್ಮ, ಅಕ್ಕ-ತಂಗಿಯರು ಅಡ್ಡಗಟ್ಟಿ ನಿಲ್ಲೋರು. ಆತನು ಮೊದಲು ನಾಲ್ಕು ದೇವರುಗಳ ಹೆಸರು ಇಟ್ಟು, ನಂತರ ಕರೆಯುವ ಹೆಸರನ್ನು ಹೇಳುತ್ತಾ ಗಂಗಾಳ ಬಾರಿಸುತ್ತಾ ಕುಟ್ ಕುಡ್ರ್ ಕುಟ್ ಕುಡ್ರ್ ಎಂದು ಹೆಸರಿಟ್ಟು ಆಚೆಗೆ ಬರುವ ಹೊತ್ತಿಗೆ ಅತ್ತೆಯರಿಂದ ಒಂದಷ್ಟು ಏಟುಗಳನ್ನು ತಿಂದು ಮುಸಿ ಮುಸಿ ನಗುತ್ತಲೇ ಹೊರಬರುತ್ತಿದ್ದ. ಎಲ್ಲರೂ ಸಂತೋಷದ ಕ್ಷಣವನ್ನು ಅನುಭವಿಸಿ ಗೋಧಿ ಹುಗ್ಗಿ ಉಂಡು ಹೊರಡುವರು.

ಆದರೆ ಅದ್ಯಾವ ಭಾಗ್ಯವೂ ನನಗೆ ಸಿಗಲಿಲ್ಲ ಎಂದು ಚಾಪೆಯ ಮೇಲೆ ಮಲಗಿದ್ದಲ್ಲಿಯೇ ಎಲ್ಲವನ್ನೂ ನೆನೆಸಿಗೊಂಡೆ. ನಾನು ಇಷ್ಟೊಂದು ಸಂತೋಷವನ್ನು ತವರು ಮನೆಗೆ ನೀಡದೇ, ನಾನೂ ಪಡೆಯದೇ ಬಂದೆ ಎಂದು ಹೊಟ್ಟೆಯ ಮೇಲೆ ಕೈಯ್ಯಾಡಿಸಿಕೊಂಡೆ. ಕರುಳು ಚುರ್ ಎನ್ನತೊಡಗಿತು. ತಲೆದಿಂಬನ್ನು ಗಟ್ಟಿಯಾಗಿ ತಬ್ಬಿಕೊಂಡೆ, ಕಣ್ಣೀರು ಹಾಕಿದೆ. ನೆನಪುಗಳು ಮತ್ತೆ ಮತ್ತೆ ಕಾಡತೊಡಗಿದವು. ಕರುಳು ಹಿಂಡುವಷ್ಟು ನೋವು. ಎಲ್ಲವನ್ನೂ ಆ ಒಂಟಿ ರೂಮಿನಲ್ಲಿ ಸಹಿಸಿಕೊಂಡೆ. ನೋವಲ್ಲೂ ಕನಸಿನ ಬೀಜ ಮೊಳಕೆಯೊಡೆಯಿತು. ಇಂಥ ವೇಳೆಯಲ್ಲಾದರೂ ಇವನು ಬೇಗನೇ ಮನೆಗೆ ಬರಬಾರದೆ? ಯಾವಾಗಲೂ ಜೊತೆಯಾಗಿಯೇ ಇರಬಾರದೆ? ಇತ್ತೀಚೆಗೆ ಒಂದೊಂದು ದಿನ ಮನೆಗೆ ಬರದೇ ಇರೋದು, ಕೆಲವೊಮ್ಮೆ ಕುಡಿದು ಬರುವುದು ಸಾಮಾನ್ಯವಾಗಿತ್ತು. ಯಾರಿಗೂ ಹೇಳದ ಸ್ಥಿತಿ ನನ್ನದು. ಎಡವಿ ಬಿದ್ದಾಗ ನಕ್ಕವರ ಮುಂದೆ ತಲೆ ಎತ್ತಿ ಬಾಳಬೇಕು ಎನ್ನುವ ಒಂದೇ ಒಂದು ಆಸೆಯಿಂದ ಎಲ್ಲವನ್ನೂ ಸಹಿಸಿಕೊಂಡೆ.

ಈಗಂತೂ ಎಲ್ಲೂ ಕೆಲಸಕ್ಕೆ ಹೋಗದೇ ಅವರಿವರ ಬಳಿ ಸಾಲ ಪಡೆದು ಇಸ್ಪಿಟ್ ಆಡುವುದು, ಕುಡಿಯುವುದು, ಪಾರ್ಟಿ ಮಾಡುವುದನ್ನೇ ಅಭ್ಯಾಸ ಮಾಡಿಕೊಂಡುಬಿಟ್ಟ. ಹೆರಿಗೆಯ ನೋವು ಕಾಣಿಸಿಕೊಂಡಿತು. ನನ್ನನ್ನು ಆಸ್ಪತ್ರೆಗೆ ಸೇರಿಸಿ ತಾನು ಹೊರನಡೆದ. ಚೊಚ್ಚಲ ಹೆರಿಗೆ ನನ್ನವರು ಅಂತ ಯಾರೂ ಇಲ್ಲ. ಕೊನೇ ಪಕ್ಷ ಪ್ರೀತಿಸಿ ಮದುವೆಯಾದ ಗಂಡನಾದ್ರೂ ಜೊತೆಗೆ ಇರಬಾರದೇ? ಹೆರಿಗೆಯ ನೋವಿಗಿಂತ ಈ ನೋವು ಹೆಚ್ಚಾಗಿ ಕಾಡತೊಡಗಿತು. ಹೆರಿಗೆಯಾಗಿ ಒಂದೆರಡು ಗಂಟೆಗಳ ಬಳಿಕ ರೂಮಿಗೆ ಶಿಫ್ಟ್ ಮಾಡಿದರು. ಅಲ್ಲಿಯವರೆಗೂ ನನಗೆ ಒಂದು ಹನಿ ನೀರು ಕೊಡುವವರು ಗತಿಯಿಲ್ಲ. ಹೆಣ್ಣು ಮಗು ಹುಟ್ಟಿದ್ದು ಒಂದುಕಡೆ ಖುಷಿಯಾದರೆ, ಮತ್ತೊಂದು ಕಡೆ ದುಃಖ ಉಮ್ಮಳಿಸಿತು. ನನ್ನ ಕರ್ಮ ನಾನೇ ಅನುಭವಿಸಬೇಕು. ಯಾವ ಹೆಣ್ಣು ಕೂಡ ಮನೆಬಿಟ್ಟು ಓಡಿಹೋಗೋದು ಬೇಡ. ಈ ಪರಿಸ್ಥಿತಿ ಮತ್ಯಾವ ಹೆಣ್ಣಿಗೂ ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿದೆ. ಆಗ ಹೊರಗಡೆಯಿಂದ ಬಂದ. ‘ಇಷ್ಟು ಹೊತ್ತಿನ ತನಕ ಎಲ್ಲಿ ಹೋಗಿದ್ದಿರಿ? ನಾನು ಅದಿನೋ ಸತ್ತಿನೋ ಅಂತ ಕೇಳೋಕು ಇರಲಿಲ್ಲ’ ಅಳುತ್ತಲೇ ಹೇಳಿದೆ. ‘ಅಲ್ಲೊಬ್ಬರು ಹಣ ಕೊಡ್ತೀನಿ ಎಂದು ಹೇಳಿದ್ದರು ಅದಕ್ಕೆ ಹೋಗಿದ್ದೆ’ ಎಂದ. ಆತನ ಮುಖದಲ್ಲಿ ಒಂದಷ್ಟು ಸಂತೋಷವೂ ಇರಲಿಲ್ಲ, ಸಂಭ್ರಮವೂ ಇರಲಿಲ್ಲ. ನನ್ನ ಪಕ್ಕದಲ್ಲಿ ಕುಳಿತು ಮಗುವನ್ನು ನೋಡಿ ಆನಂದಿಸಲೂ ಇಲ್ಲ. ನನ್ನ ಕೈ ಹಿಡಿದು ತುಸು ಧೈರ್ಯವೂ ನೀಡಲಿಲ್ಲ. ಅಂದು ಸಂಜೆಯೇ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಿದರು.

‘ಇನ್ನಮೇಲೆಯಾದ್ರೂ ಸ್ವಲ್ಪ ಮನ್ಯಾಗ ಇರು. ಮಗು ಅಳುತಿರುತ್ತೆ, ಮನೆ ಕೆಲಸ ಮಾಡುವಾಗ ಮಗುವಿನ ಮುಂದೆ ಇರು. ತೊಡೆಮೇಲೆ ಹಾಕ್ಕೆಂಡು ಒಂದಷ್ಟು ಆಡಿಸುತ್ತಿರುವಂತೆ. ಹ್ಞಾಂ, ಮಗುವಿಗೆ ನೀರು ಎರೆಯುವುದಕ್ಕೆ ಯಾರಿಗಾದರು ಹೇಳು ಬಂದು ಎರೆದುಕೊಟ್ಟು ಹೋಗ್ತಾರೆ.’ ಎಂದೆ. ‘ಆಯ್ತು’ ಎಂದು ಹೇಳಿ ಹೊರ ಹೋದವನು ಎರಡು ಮೂರು ದಿನಗಳಾದ್ರೂ ಮನೆಕಡೆಗೆ ತಿರುಗಿಯೂ ನೋಡಲಿಲ್ಲ. ಹಸಿಮೈ ಬಾಣಂತಿಯಾಗಿದ್ದರೂ ನಾನೇ ಒಂದಿಬ್ಬರನ್ನು ವಿಚಾರಿಸಿದೆ. ಯಾವುದೋ ಅಜ್ಜಿ ನನ್ನ ಕಷ್ಟ ನೋಡದೇ ನಿತ್ಯವೂ ಬಂದು ಮಗುವಿಗೆ ನೀರೆರೆದು ಹೋಗುತ್ತಿದ್ದಳು. ಇವನ ಹಿಂದೆ ಬಂದ ತಪ್ಪಿಗೆ ನನ್ನ ಬಾಣಿಂತನವನ್ನು ನಾನೇ ಮಾಡಿಕೊಳ್ಳತೊಡಗಿದೆ. ಒಂದು ಕಷ್ಟ ಹೇಳಿಕೊಳ್ಳೋಕು, ಸುಖ ಹಂಚಿಕೊಳ್ಳೋಕು ಯಾರು ಗತಿ ಇಲ್ಲವಾಯಿತು.

ಮಗುವಿಗೆ ನಾಲ್ಕೈದು ತಿಂಗಳು ಆಗುವ ಹೊತ್ತಿಗೆ ಇವನು ನನ್ನೊಂದಿಗಿನ ಆಸಕ್ತಿಯನ್ನು ಕಳೆದುಕೊಂಡ. ನಾಲ್ಕೈದು ದಿನಕ್ಕೊಮ್ಮೆ, ವಾರಕ್ಕೊಮ್ಮೆ ಮನೆಗೆ ಬರತೊಡಗಿದ. ಹೀಗಾದರೆ ಮಗುವಿನೊಂದಿಗೆ ಬದುಕು ನಡೆಸುವುದು ಕಷ್ಟ ಎಂದು ತಿಳಿದು, ‘ಮನೆಯಲ್ಲಿ ಒಂದಷ್ಟು ರೇಷನ್ ಇಲ್ಲ. ಮಗುವಿಗೆ ಕುಡಿಸಲು ಪೌಡರ್ ಕೂಡ ಇಲ್ಲ.’ ಎಂದು ಮನೆಗೆ ಬಂದಾಗಲೆಲ್ಲಾ ಹೇಳಿದೆ. ಅಂದು ನನ್ನ ಕೈಗೆ ಒಂದಷ್ಟು ಹಣ ಕೊಟ್ಟು ಹೋದ. ‘ಬೇಗ ಮನೆಗೆ ಬಾ ಅಡುಗೆ ಮಾಡ್ತೀನಿ ಊಟ ಮಾಡುವಂತೆ’ ಎಂದೆ ‘ಹ್ಞಾಂ’ ಎನ್ನುತ್ತಲೇ ಹೊರ ನಡೆದೇಬಿಟ್ಟ.

ಇಷ್ಟು ದಿನಗಳಾದರೂ ಮಗುವಿಗೆ ಇನ್ನೂ ನಾಮಕರಣ ಮಾಡಿಲ್ಲ, ಇನ್ನೆಷ್ಟು ದಿನ ಕಾಯಬೇಕೋ ಏನೋ ಎಂಬ ಚಿಂತೆಯಲ್ಲಿ, ಸೀರೆಯ ಜೋಳಿಗೆಯೊಳಗೆ ಮಗುವನ್ನು ಹಾಕಿ ತೂಗುತ್ತ ಚಾಪೆಯ ಮೇಲೆ ಒರಗಿದ್ದೆ. ಸಂಜೆಯಾಗಿತ್ತು, ಬಾಗಿಲ ಶಬ್ದವಾಯಿತು. ಎದ್ದು ಹೋಗಿ ಬಾಗಿಲು ತೆರೆದೆ. ಅವನ ಗೆಳೆಯರು ಬಂದಿದ್ದರು. ‘ಏನ್ರಣ ಅವರು ಬರಲಿಲ್ವಾ?’ ವಿಚಾರಿಸಿದೆ. ‘ನೀವು ಮನೆಗೆ ಹೋಗ್ರಿ ನಾನು ಬರ್ತೀನಿ ಎಂದು ಹೇಳಿ ಕಳಿಸ್ಯಾನ’ ಎಂದ ಅವರಲ್ಲೊಬ್ಬ. ‘ನಾಮಕರಣ ಕಾರ್ಯ ಇನ್ನೂ ಬಾಕಿ ಇದೆಯಲ್ಲ ಅದಕ್ಕೆ ಬಂದಿರಬಹುದು’ ಎಂದು ಅವರನ್ನೆಲ್ಲಾ ಒಳಗೆ ಕರೆದೆ. ಒಳಗೆ ಬಂದವರೇ ಒಬ್ಬ ಬಾಗಿಲು ಹಾಕಿದ. ಮತ್ತೊಬ್ಬ ನನ್ನ ಹಿಂದಿನಿಂದ  ಬಿಗಿಯಾಗಿ ತಬ್ಬಿಕೊಂಡ. ‘ಯಾಕ್ರಣ್ಣ ಬಿಡ್ರಿ ಏನ್ ಮಾಡಾಕತ್ತೀರಿ ನೀವು?’ ಎಂದೆ. ಮತ್ತೊಬ್ವ ಬಾಯಿಗೆ ಕೈ ಒತ್ತಿಹಿಡಿದ. ಮೈಮೇಲಿದ್ದ ಸೀರೆಯನ್ನು ಸೆಳೆದ. ‘ಹಸಿ ಮೈಯ್ಯ ಹೆಣ್ಣು ನಾನು ಕೈ ಬಿಡ್ರೋ’ ಎಂದು ಚೀರಿದೆ. ಒಬ್ಬರಾದ ಮೇಲೆ ಒಬ್ಬರಂತೆ ಮೈ ಮೇಲೆ ಬಿದ್ದರು. ಹಸಿದ ಹಂದಿಗಳಂತೆ ನನ್ನನ್ನು ತಿಂದು ಹಾಕಿದರು.

ನಿಶ್ಯಕ್ತಿಯ ನಡುವೆಯೂ ಕಣ್ಣೀರು ಹಾಕುತ್ತಾ ಮೇಲಕ್ಕೆ ಎದ್ದು, ಸೀರೆಯನ್ನು ಮೈಗೆ ಸುತ್ತಿಕೊಂಡು ಹೊರಗೆ ಬಂದೆ. ರಸ್ತೆಯ ಮೇಲೆ ಹಾಗೆ ಮೆಲ್ಲಗೆ ನಡೆಯುತ್ತಾ ಸಾಗಿದೆ. ಗಾಂಧೀ ಸರ್ಕಲ್‍ನಲ್ಲಿ ಪ್ರತಿಭಟನೆಯಲ್ಲಿದ್ದ ಅವರೆಲ್ಲರನ್ನು ನೋಡಿದೆ. ಇದೇ ಸೂಕ್ತ ಸ್ಥಳ ಇಲ್ಲೇ ಯಾವುದೋ ಲಾರಿಗೋ ಬಸ್ಸಿಗೋ ಅಡ್ಡಬಿದ್ದು ಸತ್ತು ಹೋಗೋಣ. ಇದೇ ಸರ್ಕಲ್‍ನಲ್ಲಿ ನಾನು ಬೀದಿ ಹೆಣವಾಗಲಿ ಎಂದು ಗಟ್ಟಿ ಧೈರ್ಯ ಮಾಡಿದೆ. ಸ್ವಲ್ಪ ಹೊತ್ತಿಗೆ ಪ್ರತಿಭಟನಾಕಾರರು ಅಲ್ಲಿಂದ ತೆರಳಿದರು. ಆಗ ಸರ್ಕಲ್ ಖಾಲಿಯಾಯಿತು.  ಅವರು ನಿಂತಿದ್ದ ಸ್ಥಳಕ್ಕೆ ಹೋದೆ. ಕನ್ನಡ ಬಾವುಟ ಹೊತ್ತಿದ್ದ ಧ್ವಜ ಕಂಬ, ಅದರ ಪಕ್ಕದಲ್ಲಿ ಮೌನದಲ್ಲಿ ಕುಳಿತಿದ್ದ ಮಹಾತ್ಮಾಗಾಂಧಿ ಪ್ರತಿಮೆ. ಅದರ ಬಲಭಾಗದಲ್ಲಿ ದೊಡ್ಡಗಾತ್ರದಲ್ಲಿ ನಿಲ್ಲಿಸಿದ್ದ “ಮಹಾನಾಯಕ’’ ಧಾರಾವಾಹಿಯ ಪೋಸ್ಟರ್. ‘ನೀ ಅಳಬೇಡ ಗೆಳತಿ, ನಿನ್ನ ಕಣ್ಣಲಿ ನಾನಿರುವೆ, ಜಾರಿಹೋದೇನು’ ಎಂದು ಹೇಳಿದ್ದ ಕವಿತೆ ನೆನಪಾಯಿತು. ಜೋರಾಗಿ ಅಳತೊಡಗಿದೆ, ‘ನನ್ನ ಕಣ್ಣೊಳಗಿರುವ ನೀಚನೇ ಜಾರಿಹೋಗು’ ಎಂದು. ಪಕ್ಕದಲ್ಲೇ ಇಟ್ಟು ಹೋಗಿದ್ದ ಮೇಣದ ಬತ್ತಿಯನ್ನು ಕೈಯ್ಯಲ್ಲಿ ಹಿಡಿದು ಕಣ್ಣಿನ ಹತ್ತಿರಕ್ಕೆ ಹಿಡಿದುಕೊಂಡು ‘ಸುಟ್ಟು ಹೋಗು ಬೆಂಕಿಯ ಬಿಸಿಗೆ’ ಎಂದು ಜೋರಾಗಿ ಅಳತೊಡಗಿದೆ. ‘ನೀ ನೋಯಬೇಡ ಗೆಳತಿ ನಿನ್ನ ಮನದಲ್ಲಿ ನಾನಿರುವೆ ಸತ್ತು ಹೋದೇನು’ ಎಂದಿದ್ದೆಯಲ್ಲ, ಸತ್ತು ಹೋಗು ಪ್ರತೀ ಕ್ಷಣವೂ ನೋವನ್ನು ಅನುಭವಿಸುತ್ತಿದ್ದೇನೆ, ಸತ್ತುಹೋಗು ಎಂದು ದುಃಖಿಸತೊಡಗಿದೆ. ‘ಅವನು ದೇವರಿಗೆ ಬಿಟ್ಟ ಕೋಣ ಇದ್ದಂತೆ ಸಿಕ್ಕ ಸಿಕ್ಕಲ್ಲೆಲ್ಲಾ ಸಿಕ್ಕಿದ್ದನ್ನೆಲ್ಲಾ ಮೆಯ್ತಾವೆ’, ಎಂದು ನನ್ನ ಅಣ್ಣಂದಿರು ತಿಳಿಸಿ ಹೇಳೀದರೂ ಪ್ರೀತೀಯ ಗುಂಗಲ್ಲಿದ್ದ ನನಗೆ ಅದ್ಯಾವುದು ಮೈಗೆ ಹತ್ತಲಿಲ್ಲ. ಪ್ರಾಣಕ್ಕೆ ಪ್ರಾಣ ಕೊಡುವ ಗೆಳೆಯರಿದ್ದಾರೆ ಎಂದೆಯಲ್ಲ ಅದೇ ಗೆಳೆಯರೇ ನನ್ನ ಪ್ರಾಣ ತೆಗಿಯುತ್ತಿದ್ದಾರೆ ನೋಡು. ‘ಹಸಿಮೈಯ್ಯನ್ನು ಹರಿದು ತಿಂದವರೇ ಜೀವವನ್ನೇ ತಿಂದುಬಿಡಿ ಬನ್ನಿ’ ಎಂದು ಅರಚಿದೆ. ಯಾವುದಾದರು ವಾಹನಕ್ಕೆ ಅಡ್ಡ ಬಿದ್ದು ಸತ್ತು ಹೋಗುವ ಧಾವಂತದಿ ಮುಂದಕ್ಕೆ ಹೆಜ್ಜೆ ಇಟ್ಟೆ. ನನ್ನಪ್ಪ ನನ್ನ ತಲೆ ಸವರಿ ಮುಗ್ಧತೆಯಿಂದ ನನ್ನಲ್ಲಿ ಭವ್ಯಭವಿಷ್ವನ್ನು ಕಂಡು ಸಂತೋಷಪಟ್ಟಿದ್ದು, ಎಷ್ಟೆಲ್ಲಾ ಇದ್ದರೂ ಸದಾ ಸಮಾಜಸೇವೆಯಲ್ಲಿ ತೊಡಗಿದ ಡಾಕ್ಟರ್ ಅವರ ಒಂದೇ ಒಂದು ಸ್ಮೈಲ್ ಕಣ್ಣಿಗೆ ಕಟ್ಟಿದಂತಾಯಿತು. ಡಾಕ್ಟರ್ ಅವರು ಋಣ ತೀರಿಸುವ ಹೊಣೆ ಹೋರಿಸಿದ ಅಪ್ಪನ ಮಾತುಗಳು ನೆನಪಾದವು. ಮನೆಯಲ್ಲಿ ಸೀರೆಯ ಜೋಳಿಗೆಯಲ್ಲಿ ಮಲಗಿದ್ದ ನನ್ನ ಕಂದಮ್ಮ ಈಗ ಎದ್ದು ನನಗಾಗಿ ಹಪಿಹಪಿಸುತ್ತಿರಬಹುದು. ಹಸಿವಿನಿಂದ ಅಳುತ್ತಿರಬಹುದು. ನಾನು ಸತ್ತರೆ ನನ್ನೊಂದಿಗೆ ಎಲ್ಲರ ಕನಸು, ಆಶಯಗಳು ಹಾಗೂ ನನ್ನ ಭರವಸೆ ಎಲ್ಲವೂ ಮಣ್ಣುಪಾಲು ಆಗುವುದು ಸತ್ಯ. ದಿಢೀರನೇ ಕತ್ತಲೆಯ ಮಧ್ಯೆ ಬೆಳಕೊಂದು ಕಾಣಿಸಿತು. ಗಾಂಧೀಜಿ ಮೌನ ಮುರಿಯಲಿಲ್ಲ. ಅಂಬೇಡ್ಕರ್‌ರವರು ಅತ್ತ ಕಡೆ ಕೈ ತೋರಿಸುತ್ತಿದ್ದರು. ಭೀಮರಾವ್ (ಪುಟ್ಟ ಅಂಬೇಡ್ಕರ್) ಎರಡೂ ಕೈಗಳಿಂದ ಪುಸ್ತಕವನ್ನು ಎದೆಗೆ ಒತ್ತಿಕೊಂಡು ಸಾಧಿಸುವ ಹುಮ್ಮಸ್ಸಿನಿಂದ ನಿಂತಿರುವ ಚಿತ್ರ ಕಾಣಿಸಿತು. ಒಂದುಕ್ಷಣ ಆ ಚಿತ್ರವನ್ನೇ ನೋಡುತ್ತ ಮೈಮರೆತು ನಿಂತುಬಿಟ್ಟೆ. ಕಷ್ಟದ ಮಧ್ಯೆಯು ಬದುಕಿದ ಬಾಲ ಅಂಬೇಡ್ಕರ್ ನನ್ನ ಕೆಟ್ಟ ನಿರ್ಧಾರವನ್ನು ದುರ್ಬಲಗೊಳಿಸಿದ. ಹೊಳೆಯುತ್ತಿರವ ನನ್ನ ಮಗುವಿನ ಬಟ್ಟಲು ಕಣ್ಣುಗಳು, ಅಳುವ ತುಟಿಗಳು ನನ್ನನ್ನು ಕೈ ಬೀಸಿ ಕರೆದವು. ‘ಡಾಕ್ಟರ್‌ ಅವರ ಋಣ ತೀರಿಸಿಯೇ ತೀರಿಸುತ್ತೇನೆ. ಮಗಳನ್ನು ಮಹಾನಯಕಿಯನ್ನಾಗಿ ಮಾಡಿಯೇ ತೀರುತ್ತೇನೆ.’ ಎಂದು ಧಾವಂತದಿ ಮನೆಕಡೆಗೆ ಹೆಜ್ಜೆ ಹಾಕಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.