ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿ ಕಥಾಸ್ಪರ್ಧೆ: ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ –ದೇವತೆಗಳೆ ಹರಸಿರಿ

Last Updated 13 ನವೆಂಬರ್ 2021, 19:30 IST
ಅಕ್ಷರ ಗಾತ್ರ

ರಾಘವಯ್ಯ ಕಠಾರಿಪಾಳ್ಯ ಪೊಲೀಸ್‌ ಸ್ಟೇಷನ್ ಮೆಟ್ಟಿಲು ಹತ್ತಿದಾಗ ಬೆಳಿಗ್ಗೆ ಹನ್ನೊಂದರ ಸಮಯವಾಗಿತ್ತು. ಅಲ್ಲಿ ಪೇದೆ ಕಮ್ ರೈಟರ್ ಆಗಿದ್ದ ಸುನೀಲ ರಾಘವಯ್ಯನ ಊರಿನವನೆ. ಹಾಗಾಗಿಯೆ ರಾಘವಯ್ಯ ನೇರ ಸುನೀಲನನ್ನೆ ಹುಡುಕಿ ಬಂದ.ಸುನೀಲ ತತ್‌ಕ್ಷಣವೆ ರಾಘವಯ್ಯನನ್ನು ನೋಡಿ ಸಂತೋಷಗೊಂಡವನಂತೆ ಮುಖ ಅರಳಿಸಿದ. ತುಸು ನಕ್ಕಂತೆ ಮುಖಮಾಡಿದ ರಾಘವಯ್ಯ ತತ್‌ಕ್ಷಣವೆ ಮುಖ ಸಂಕೋಚಿಸಿಕೊಂಡ.

ಸುನೀಲ ರಾಘವಯ್ಯನ ಕುಶಲ ವಿಚಾರಿಸಿ, ಹತ್ತು ನಿಮಿಷ ಕಾಯಲು ಹೇಳಿ; ಒಂದು ವರದಿ ಸಿದ್ಧಗೊಳಿಸಿ ಫೈಲಿಗ್ಹಾಕಿ ಅವರೊಂದಿಗೆ ನೇರ ಸ್ಟೇಷನ್‌ನಿಂದ ಹೊರಬಿದ್ದ.

ಹತ್ತಿರದ ಆದರ್ಶ ಹೋಟೆಲಿನ ಒಳಗೆ ಇಬ್ಬರೂ ಎದುರುಬದುರು ಕೂತರು. ಸುನೀಲನಿಗೆ ರಾಘವಯ್ಯನ ವಿಷಯ ಗೊತ್ತಿತ್ತು. ಆದರೂ ಮಾತು ಆರಂಭಿಸಲು ಏನೋ ತಡೆಯುತ್ತಿತ್ತು. ರಾಘವಯ್ಯ ಐದು ನಿಮಿಷ ಕಳೆದರೂ ಮುಗುಂ ಆಗಿಯೆ ಕೂತಿದ್ದಾನೆ. ಸುನೀಲನಿಗೆ ತಾಳ್ಮೆ ತಪ್ಪುತ್ತಿತ್ತು. ಅವನೆ ಬಾಯಿಬಿಟ್ಟು:

‘ಈಗ ಏನು ಮಾಡ್ಬೇಕು ಅಂಥ ಡಿಸೈಡ್ ಮಾಡಿದೀರಿ?!’

ರಾಘವಯ್ಯ ಸುನೀಲನ ಮುಖವನ್ನು ಅರೆಕ್ಷಣ ನೋಡಿ ತನ್ನ ಜೊತೆ ತಂದಿದ್ದ ಕಪ್ಪು ಲೆದರ್‌ಬ್ಯಾಗಿನಿಂದ ಒಂದು ಸ್ಟಿಕ್ ಫೈಲ್ ಹೊರತೆಗೆದ. ಸುನೀಲ ಅದನ್ನು ಬಿಟ್ಟಕಣ್ಣು ಬಿಟ್ಟವನಂತೆ ನೋಡಿದ. ರಾಘವಯ್ಯ ಅದನ್ನು ಸುನೀಲನತ್ತ ನೀಡಿದ. ಸುನೀಲ ಅದನ್ನು ತೆರೆದು ಒಳಗಿನ ಬರೆಹ ನೋಡಿದ. ‘ದೂರು’!

‘ಇವರಿಂದ’ ಎಂದು ತುಸು ಜೋರಾಗಿಯೆ ಓದಿಕೊಂಡ. ಅಷ್ಟರಲ್ಲಿ ಆರ್ಡರ್ ಕೇಳಿಕೊಂಡು ಮಾಣಿ ಬಂದ. ಸುನೀಲ ರಾಘವಯ್ಯನ ಮುಖ ನೋಡಿದ. ಆತ ‘ಏನೂ ಬೇಡ’ ಎಂಬಂತೆ ತಲೆ ಅಲ್ಲಾಡಿಸಿದ. ಕನಿಷ್ಟ ಕಾಫಿಯಾದರೂ ಆಗಲಿ ಎಂದು ಬಲವಂತ ಮಾಡಿದ ಸುನೀಲ. ರಾಘವಯ್ಯ ‘ಆಗಲಿ’ ಎಂದು ಒಪ್ಪಿಕೊಂಡ.

ಸುನೀಲ ‘ದೂರ’ನ್ನು ಈಗ ಸಾವಧಾನದಿಂದ ಓದತೊಡಗಿದ.

ಇವರಿಂದ
ರಾಘವಯ್ಯ ಬಿ.ವಿ. ಬಿನ್ ವೆಂಕಟೇಶಪ್ಪ
ಹುಣಸೀಕೋಟೆ ಗ್ರಾಮ, ಕಸಬಾ ಹೋಬಳಿ
ಬಂಗಾರಪೇಟೆ ತಾಲ್ಲೂಕು.

ಇವರಿಗೆ
ವೃತ್ತ ನಿರೀಕ್ಷಕರು
ಕಠಾರಿಪಾಳ್ಯ ಪೊಲೀಸ್‌ಸ್ಟೇಷನ್
ಬಂಗಾರಪೇಟೆ

ಮಾನ್ಯರೆ,
ವಿಷಯ: ಸ್ವಂತ ಮಗಳನ್ನು ಕೊಂದ ಅಳಿಯನನ್ನು ಬಂಧಿಸುವಂತೆ ಕೋರಿ.

ರಾಘವಯ್ಯ ಬಿ.ವಿ. ಬಿನ್ ವೆಂಕಟೇಶಪ್ಪ ಆದ ನಾನು ಸು.ಅರವತ್ತೆರಡು ವರ್ಷದ ಹುಣಸೀಕೋಟೆ ಗ್ರಾಮದ ನಿವಾಸಿಯಾಗಿದ್ದು; ಸದರಿ ಗ್ರಾಮದಲ್ಲೆ ವಾಸವಿರುವ ಮರಿಸ್ವಾಮಿ ಬಿನ್ ನಂಜುಂಡಪ್ಪನಿಗೆ ನನ್ನ ಮಗಳಾದ ಲಕ್ಷ್ಮಿಯನ್ನು ಹತ್ತು ವರ್ಷಗಳ ಕೆಳಗೆ ಮದುವೆ ಮಾಡಿಕೊಟ್ಟಿದ್ದೆವು. ಆಗ ಮೂವತ್ತು ಗ್ರಾಂ ಚಿನ್ನ, ಐವತ್ತು ಸಾವಿರ ಹಣವನ್ನು ಕೂಡ ಆತನ ಮನೆಯವರಿಗೆ ಕೊಟ್ಟಿದ್ದೆವು.
ಈ ಮರಿಸ್ವಾಮಿ ಎಂಬುವವನು ತಾನು ಭಾರೀ ಘನಂದಾರಿ ದೊಡ್ಡ ಮನುಷ್ಯ ಎಂದು ನಮ್ಮ ಹತ್ತಿರ ಹೇಳಿ, ನಮ್ಮನ್ನು ನಂಬಿಸಿ ನಮ್ಮ ಮಗಳನ್ನು ಮದುವೆಯಾಗಿದ್ದ. ಚಿತ್ತೂರಿನಲ್ಲಿ ಭಾರೀ ಸಂಬಳದ ಕೆಲಸ ತನಗಿದೆ ಎಂದು ಹೇಳಿಕೊಂಡಿದ್ದ. ಹಳ್ಳಿ ಜನರಾದ ನಾವು ಅದನ್ನು ನಂಬಿ ನಮ್ಮ ಮಗಳನ್ನು ಆತನಿಗೆ ಧಾರೆ ಎರೆದುಕೊಟ್ಟೆವು. ಹಳ್ಳಿಯಲ್ಲಿದ್ದಾಗ ಒಳ್ಳೆ ಹುಡುಗನಂತೆ ಇದ್ದ; ಹಾಗಾಗಿ ನಾವು ಮೋಸಹೋಗಿಬಿಟ್ಟೆವು.

ಚಿತ್ತೂರಿನಲ್ಲಿ ಆತನಿಗೆ ತಾನು ಹೇಳಿಕೊಂಡಂತೆ ಯಾವ ಘನಂದಾರಿ ಕೆಲಸವೂ ಇರಲಿಲ್ಲ. ಮೇಲಾಗಿ ಕುಡಿತದ ಹವ್ಯಾಸ ಬೇರೆ. ಕೊನೆಕೊನೆಗೆ ನಾವೇ ತಿಂಗಳಾ ತಿಂಗಳಾ ಏನಾದರೂ ನೂಕಬೇಕಾದ ಸ್ಥಿತಿ ಏರ್ಪಟ್ಟಿತು.

ಹತ್ತು ವರ್ಷಗಳಲ್ಲಿ ಒಂದು ಗಂಡು, ಒಂದು ಹೆಣ್ಣು ಮಗುವಾಯಿತು. ದೊಡ್ಡ ಗಂಡು ಹುಡುಗ ಆರು ವರ್ಷದವನಾಗಿದ್ದಾಗ ಮನೆಮುಂದೆ ತುಂಡರಿಸಿಬಿದ್ದಿದ್ದ ವಿದ್ಯುತ್ ಲೈನನ್ನು ತುಳಿದು ಶಾಕ್ ಹೊಡೆದು ಸತ್ತುಹೋದ. ತಾಯಿಯಾದವಳು ಇದನ್ನು ಹೇಗೆ ಸಹಿಸಬೇಕು? ಈತನಂತೂ ಕುಡಿತದ ಮೇಲೆ ಅದನ್ನು ಮರೆತುಬಿಟ್ಟ.

ಎರಡು ವರ್ಷ ಆದ ಮೇಲೆ ಈ ಮರಿಸ್ವಾಮಿ ಹೊಸ ರಾಗ ಎಳೆದ. ತನಗೆ ಗಂಡುಮಗು ಬೇಕು; ಹೆಂಡತಿಗೆ ಮಕ್ಕಳಾಗದ ಹಾಗೆ ಆಪರೇಷನ್ ಆಗಿರುವುದರಿಂದ ತಾನು ಇನ್ನೊಂದು ಮದುವೆಯಾಗುವುದಾಗಿ ಹೇಳತೊಡಗಿದ. ಹುಡುಗಿಗಾಗಿ ಹುಡುಕಾಟ ಕೂಡ ಶುರುಮಾಡಿದ.

ಮಗಳಿಗೆ ಎದೆ ಧಸಕ್ ಎಂದಿತು. ಆಗಬಾರದಾ? ನಾನು ಆತನನ್ನು ಎಂದೂ ಅಳಿಯ ಎಂದು ಗೌರವಿಸಿದವನಲ್ಲ. ಆದರೂ ಮಗಳು ಕೆಟ್ಟುಹೋಗಬಾರದೆಂದು ಈ ‘ವಿಷಯ’ ಬೇಡ ಎಂದು ಕೈ ಮುಗಿದೆ. ಮರಿಸ್ವಾಮಿ ಇದಕ್ಕೆಲ್ಲಾ ಬಗ್ಗುವ ವ್ಯಕ್ತಿಯಾಗಿರಲಿಲ್ಲ. ಮಗಳು ಲಕ್ಷ್ಮಿ ಹೇಗೇಗೋ ಆಡೋಕೆ ಶುರುಮಾಡಿದಳು. ನನಗೆ ಹಾಗೂ ನಮ್ಮ ಮನೆಯವರಿಗೆ ದಿಗಿಲಾಯಿತು.

ಹಾಗೂ ಹೀಗೂ ಒಂದು ವರ್ಷ ಕಳೆಯಿತು.

ಅಷ್ಟರಲ್ಲಿ ಮರಿಸ್ವಾಮಿಯೆ ಒಂದು ಸುದ್ದಿಯನ್ನು ಎಲ್ಲಿಂದಲೋ ಸಂಗ್ರಹಿಸಿ ತಂದ. ಅದನ್ನು ಕೇಳಿ ಮೊದಮೊದಲು ನಾನು ನಂಬಲಿಲ್ಲ. ಆಮೇಲೆ ವಿಚಾರಿಸಲಾಗಿ ಅದು ದಿಟ ಎಂದು ತಿಳಿಯಿತು. ಲಕ್ಷ್ಮಿಗೂ ಇದರಿಂದ ಹೊಸ ಭರವಸೆ ಕಾಣಿಸಿತು. ಒಲ್ಲದ ಮನಸ್ಸಿನಿಂದಲೆ ನಾನು ಹಾಗೂ ನನ್ನ ಮನೆಯವರು ಇದಕ್ಕೆ ಒಪ್ಪಿಕೊಂಡೆವು.

***

ಲೇಡಿಡಾಕ್ಟರ್ ಸರಳಾದೇವಿ ಅಷ್ಟೆಲ್ಲಾ ಓದಿದ್ದಾರೆ. ಎಷ್ಟೆಷ್ಟೋ ಇಂತಹ ಕೇಸುಗಳನ್ನು ನೀರುಕುಡಿದ ಹಾಗೆ ನಿಭಾಯಿಸಿದ್ದಾರೆ. ಆದರೂ ಲಕ್ಷ್ಮಿ ಹೇಗೆ ಸತ್ತಳು? ಎಂದು ನನಗೆ ಸಖತ್ ಸೋಜಿಗ ಆಯ್ತು! ಡಾಕ್ಟರಮ್ಮಳೆ ನನ್ನನ್ನು ಕೂರಿಸಿಕೊಂಡು ವಿವರವಾಗಿ ಬಿಡಿಸಿ ಹೇಳಿದಳು.

ಅವರು ಮರಿಸ್ವಾಮಿಗೆ ಸ್ಪಷ್ಟವಾಗಿ ಬಿಡಿಸಿ ಹೇಳಿದ್ದರಂತೆ: ‘ಮಕ್ಕಳಾಗಬಾರದು ಅಂಥ ಆಗಿರುವ ಆಪರೇಷನನ್ನು ಮತ್ತೆ ಆಪರೇಷನ್ ಮಾಡಿ, ಮಕ್ಕಳಾಗುವ ಹಾಗೆ ಮಾಡಿ; ಮತ್ತೆ ಆಗದ ಹಾಗೆ ಇನ್ನೊಂದು ಆಪರೇಷನ್ ಮಾಡಬೇಕು. ಇದು ಅಸಾಧ್ಯವಲ್ಲ. ಆದರೆ ದೇಹದ ಮೇಲೆ, ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರುತ್ತೆ’ ಅಂಥ.

ಮರಿಸ್ವಾಮಿ ಇದನ್ನೆಲ್ಲಾ ನಮಗೆ ಹೇಳಿರಲಿಲ್ಲ.

ಸರಿ, ಆಪರೇಷನ್ ಆಯ್ತು. ಲಕ್ಷ್ಮಿ ವರ್ಷ ಆಗುವುದರಲ್ಲಿ ಗರ್ಭ ಧರಿಸಿದಳು. ಎಲ್ಲರಿಗೂ ಖುಷಿಯಾಯಿತು. ಮಗು ಹೆಣ್ಣಾಯಿತು. ಒಮ್ಮೆಲೆ ಎಲ್ಲರಿಗೂ ನಿರಾಶೆಯಾಯಿತು. ‘ಹೋಗಲಿಬಿಡು, ದೇವರಿಚ್ಛೆ. ನಾವು ಅವನ ಆಜ್ಞೆಯಂತೆ ನಡೆಯಬೇಕು’ ಎಂದು ನಾನು, ಗಂಡ-ಹೆಂಡತಿ ಇಬ್ಬರಿಗೂ ಸಮಾಧಾನ ಹೇಳಿದೆ; ತನ್ಮೂಲಕ ನನಗೂ ಸಮಾಧಾನ ಮಾಡಿಕೊಂಡೆ.

ಮರಿಸ್ವಾಮಿ ಅಲ್ಲಿಗೆ ಸುಮ್ಮನಾಗಲಿಲ್ಲ. ಇನ್ನೊಂದು ಸರ್ತಿ ಪ್ರಯತ್ನ ಪಡೋಣ ಎಂದು ಹೆಂಡತಿಯನ್ನು ಪುಸಲಾಯಿಸಿದ. ಆಕೆಗೆ ಇದು ಬೇಕಿರಲಿಲ್ಲ. ಈತ ಬಿಡಲೊಲ್ಲ! ಆಕೆ ಏನು ತಾನು ಮಾಡಲು ಸಾಧ್ಯ? ಇನ್ನೊಂದು ಸರ್ತಿ ಗರ್ಭಧಾರಣೆಯಾಯಿತು. ಮರಿಸ್ವಾಮಿ ಸರಳಾದೇವಿಯವರಲ್ಲಿ ಇದು ಗಂಡೋ? ಹೇಗೆ? ಎಂದು ಕೇಳಿದನಂತೆ. ಆಕೆ ‘ಬಿಲ್‌ಕುಲ್ ಹೇಳೋಲ್ಲ. ರೂಲ್ಸ್ ಎಗೆನೆಸ್ಟ್ ಇದು’ ಎಂದರಂತೆ. ಈತ ದುಡ್ಡು ಎಂದರೆ ಬಾಯಿ ಬಿಡುವ ಡಾಕ್ಟರೊಬ್ಬರನ್ನು ಹಿಡಿದು ಪರೀಕ್ಷೆ ಮಾಡಿಸಿದ. ಅದು ಹೆಣ್ಣಾಗಿತ್ತು. ತೆಗೆಸಿಬಿಟ್ಟ. ಅದರ ಮುಂದಿನದು ಕೂಡ ಅದೇ ಆಗಿತ್ತು. ಅದನ್ನೂ ಮುಗಿಸಿಬಿಟ್ಟ. ಹೀಗೆ ಆರುಬಾರಿ ಅವಳನ್ನು ನಿರ್ಜೀವಗೊಳಿಸಿಬಿಟ್ಟ. ಕೊನೆಗೆ ಅವಳು ಈ ಪಾತಗಳಿಂದ ಸುಧಾರಣೆ ಕಾಣದೆ ಸತ್ತು ಹೋದಳು.

ಗಂಡು ಮಗು ಬೇಕೆಬೇಕೆಂದು ಸಾಲುಸಾಲು ಗರ್ಭಪಾತಗಳನ್ನು ಮಾಡಿಸಿ ಮಾಡಿಸಿಯೆ ನನ್ನ ಮಗಳನ್ನು ಈ ಮರಿಸ್ವಾಮಿ ಕೊಂದುಹಾಕಿರುತ್ತಾನೆ. ಆದುದರಿಂದ ತಾವು ಈತನನ್ನು ಬಂಧಿಸಿ, ಸೂಕ್ತ ವಿಚಾರಣೆ ನಡೆಸಿ; ನ್ಯಾಯಾಲಯದ ಮುಂದೆ ನಿಲ್ಲಿಸಿ; ಕಠಿಣ ಶಿಕ್ಷೆ ಒದಗುವ ಹಾಗೆ ಮಾಡಬೇಕು; ತನ್ಮೂಲಕ ಮಗಳನ್ನು ಕಳೆದುಕೊಂಡು ನೋಯುತ್ತಿರುವ ನನಗೆ ಹಾಗೂ ನನ್ನ ಮನೆಯವರಿಗೆ ನ್ಯಾಯ ಒದಗಿಸಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ.

ದಿನಾಂಕ: 23, ಜೂನ್ ಇಂತಿ ದುಃಖತಪ್ತ ದುರ್ದೈವಿ ತಂದೆ
ಸ್ಥಳ: ಹುಣಸೀಕೋಟೆ ರಾಘವಯ್ಯ ಬಿ.ವಿ.

ಸುನೀಲ ದೂರನ್ನು ಸ್ಟಿಕ್‌ಫೈಲಿನೊಳಕ್ಕೆ ಹಾಕಿ ರಾಘವಯ್ಯನಿಗೆ ಹಿಂತಿರುಗಿಸಿದ. ಸುನೀಲ ಏನು ಹೇಳಬಹುದು ಎಂದು ಆತ ಎದುರು ನೋಡುತ್ತಿದ್ದ. ಅಷ್ಟರಲ್ಲಿ ಕಾಫಿ ಬಂತು. ಇಬ್ಬರೂ ಬಿಸಿಬಿಸಿ ಕಪ್‌ಗಳನ್ನು ಕೈಗೆ ತೆಗೆದುಕೊಂಡರು.

ಸುನೀಲ ಮತನಾಡಿದ:

‘ರಾಘವಯ್ಯನವರೆ, ನಿಮ್ಮ ಅಳಿಯನಿಗೆ ಭಾರೀ ಲಾಯರಿ ತಲೆಯಿದೆ ಅಥವಾ ಯಾರಾದರೂ ತಲೆ ಇರುವ ಲಾಯರನ್ನು ಹಿಡಿದಿರಬೇಕು. ನಿನ್ನೆಯೆ ನಮ್ಮ ಸ್ಟೇಷನ್ನಿಗೆ ಬಂದು ಸಮಜಾಯಿಷಿ ಕೊಟ್ಟು ಹೋಗಿದ್ದಾನೆ. ಏನಂತ ಗೊತ್ತ?’

ರಾಘವಯ್ಯ ಕಣ್ಣು – ಕಿವಿ ಎರಡೂ ಅರಳಿಸಿ ಸುನೀಲನತ್ತ ನೋಡಿದ.

‘ನಮ್ಮ ಮಾವನವರಾದ ಶ್ರೀಮಾನ್ ರಾಘವಯ್ಯನವರಿಗೆ ಇಬ್ಬರು ಪತ್ನಿಯರು. ಮೊದಲ ಪತ್ನಿಯಲ್ಲಿ ಬರೀ ಹೆಣ್ಣು ಮಕ್ಕಳಾದುದರಿಂದ ಅವರು ಎರಡನೆಯ ಮದುವೆ ಬಗ್ಗೆ ಯೋಚಿಸಿದರು. ಆಗ ಅವರ ಪತ್ನಿ ಇದಕ್ಕೆ ವಿರೋಧವಾಗಿ ನಿಂತರು. ಈ ಗಲಾಟೆಯಲ್ಲಿ ನಮ್ಮ ಮಾವನವರು ನಮ್ಮ ಅತ್ತೆಯವರನ್ನು ಚೆನ್ನಾಗಿ ಥಳಿಸಿದ್ದರು. ಪರಿಣಾಮ ಅವರು ಸತ್ತು ಹೋದರು.
ಆಮೇಲೆ ಅವರು ಎರಡನೇ ಮದುವೆ ಆದರು. ಅವರಲ್ಲಿ ಮೊದಲು ಎರಡು ಹೆಣ್ಣಾದ ಬಳಿಕ ಒಂದು ಗಂಡಾಯಿತು. ಮಾವನವರು ನಿಟ್ಟುಸಿರುಬಿಟ್ಟಿದ್ದರು.

ನಮಗೆ ಒಂದು ಗಂಡು ಒಂದು ಹೆಣ್ಣು ಮಗುವಿತ್ತು. ಗಂಡು ಆಕಸ್ಮಿಕವಾಗಿ ವಿದ್ಯುತ್ ತಂತಿ ತುಳಿದು ಶಾಕ್ ತಿಂದು ಸತ್ತು ಹೋಯಿತು. ಇನ್ನು ಉಳಿದಿರುವ ಹೆಣ್ಣುಮಗು ವರ್ಷಗಳ ನಂತರವಾದರೂ ಬೇರೆ ಮನೆಗೆ ಹೋಗಲೇಬೇಕು ಹಾಗಾಗಿ ಆಪರೇಷನ್ ಆಗಿದ್ದರೂ ಅದನ್ನು ಮತ್ತೊಂದು ಸಣ್ಣ ಆಪರೇಷನ್ ಮಾಡಿ ಮಕ್ಕಳನ್ನು ಪಡೆಯಬಹುದೆಂದು ನಮಗೆ ತಿಳಿಯಿತು. ಗಂಡ-ಹೆಂಡತಿ ಇಬ್ಬರೂ ಸ್ವಇಚ್ಛೆಯಿಂದ ಡಾ.ಸರಳಾದೇವಿಯವರಲ್ಲಿ ಚಿಕಿತ್ಸೆ ಪಡೆದೆವು. ಒಂದು ಹೆಣ್ಣುಮಗುವಾಯಿತು. ನಮಗೋ ಸಂತೋಷವೋ ಸಂತೋಷ! ಇನ್ನೊಮ್ಮೆ ಗಂಡುಮಗುವಾಗಬಹುದು ಸತ್ತಹುಡುಗ ಮತ್ತೆ ಹುಟ್ಟಬಹುದು ಎಂದು ನನ್ನ ಹೆಂಡತಿಗೆ ಆಸೆ ಹಾಗೂ ಭರವಸೆಯಿತ್ತು. ಈ ಪ್ರಕ್ರಿಯೆಯಲ್ಲಿ ಆಕಸ್ಮಿಕವಾಗಿ ಆಕೆ ಅಸುನೀಗಿದಳು’.

‘ಸುಳ್ಳು, ಸುಳ್ಳು! ಹಸಿಸುಳ್ಳು!’ – ರಾಘವಯ್ಯ ತಾನಿರುವುದು ನಾಲ್ಕಾರು ಜನರಿರುವ ಹೋಟೆಲ್ ಎಂಬುದನ್ನು ಮರೆತು ಚೀರಿದ.

ಸುನೀಲ ಸಮಾಧಾನ ಮಾಡಿದ.

ಅಲ್ಲಿಂದ ಎದ್ದು, ಬಿಲ್‌ಕೊಟ್ಟು ಹೊರಬಂದ. ರಾಘವಯ್ಯನಿಗೆ ಸುನೀಲನನ್ನು ಹಿಂಬಾಲಿಸದೆ ಬೇರೆ ದಾರಿಯಿರಲಿಲ್ಲ.

***

ಸ್ಟೇಷನ್‌ನಲ್ಲಿ ಸುನೀಲನೆ ರೈಟರ್ ಆಗಿದ್ದರಿಂದ ರಾಘವಯ್ಯನ ದೂರನ್ನು ಪಡೆದು ರಿಜಿಸ್ಟರ್ ಮಾಡಿಕೊಂಡ. ಮುಂದಿನ ಕ್ರಮದ ಬಗ್ಗೆ ತಿಳಿಸುವ ಮಾತಿನ ಮೇಲೆ ಸುನೀಲ, ರಾಘವಯ್ಯನನ್ನು ಅಲ್ಲಿಂದ ಕಳುಹಿಸಿಕೊಟ್ಟ.

***

ಬಸ್‌ನಲ್ಲಿ ಕೂತು ಊರಿಗೆ ಹಿಂತಿರುಗುತ್ತಿದ್ದ ರಾಘವಯ್ಯನಿಗೆ ಮರಿಸ್ವಾಮಿ ಕೊಟ್ಟ ಹೇಳಿಕೆ ನೆನಪಾಗಿ ಚುಚ್ಚುತ್ತಿತ್ತು. ನಿಜ, ತಾನು ಹುಡುಗತನದಿಂದ ಗಂಡಾಗಲಿಲ್ಲವೆಂದು ಇನ್ನೊಂದು ಮದುವೆಗೆ ದುಡುಕಿದ್ದು ನಿಜ. ಇವಳು ಅಡ್ಡ ಬಂದದ್ದು ನಿಜ. ಕೋಪದಿಂದ ನಾಲ್ಕು ಬಿಗಿದಿದ್ದು ನಿಜ. ಇದರಿಂದಲೇ ಅವಳು ಸತ್ತುಹೋದಳಾ?! ಇದು ಮಾತ್ರ ರಾಘವಯ್ಯನಿಗೆ ಒಪ್ಪಲಾಗುತ್ತಿಲ್ಲ! ಆತನಿಗೆ ಇವೆಲ್ಲಾ ನೆನಪಾಗಿ ನಾಚಿಕೆಯಾಯಿತು. ಹಿಂದೆಯೆ ಅಳಿಯನ ಮೇಲೆ ಕೋಪ ಹುಟ್ಟಿತು. ಅವನನ್ನು ಕೋರ್ಟ್ಮೆಟ್ಟಿಲು ಹತ್ತಿಸಿ ಜೈಲು ಕಾಣಿಸ್ತೀನಿ ಅಂಥ ರೋಷದಿಂದ ಕೂಡಿದ ಶಪಥ ರಾಘವಯ್ಯನ ಮನಸ್ಸಿನಲ್ಲಿ ಹುಟ್ಟಿ ಅದು ವೇಗವಾಗಿ ಬೆಳೆಯಿತು.

ಹುಣಸೀಕೋಟೆ ಗೇಟಿನಲ್ಲಿ ಇಳಿದು; ಅಲ್ಲಿಂದ ಅರ್ಧಮೈಲು ದೂರದ ಊರಕಡೆ ರಾಘವಯ್ಯ ಹೆಜ್ಜೆ ಹಾಕತೊಡಗಿದ. ಒಂದು ಫರ್ಲಾಂಗ್ ನಡೆಯುವ ಹೊತ್ತಿಗೆ ಊರಕಡೆಯಿಂದ ಒಂದು ಆಂಬುಲೆನ್ಸ್ ಹಾರ್ನ್ ಮಾಡುತ್ತ ಬಂತು. ದಾರಿಬಿಟ್ಟ ರಾಘವಯ್ಯ ಅದು ಹೋದುದನ್ನು ದುಗುಡದಿಂದ ನೋಡಿದ. ಹಳ್ಳವೊಂದರ ಮೇಲೆ ಚಕ್ರ ಹರಿದು ಆಂಬುಲೆನ್ಸ್‌ನ ಹಿಂಬದಿಯ ನೇಮ್‌ಪ್ಲೇಟೊಂದು ಕಳಚಿಬಿದ್ದುದು ಡ್ರೈವನ ಗಮನಕ್ಕೆ ಬರಲಿಲ್ಲ. ರಾಘವಯ್ಯ ಅದನ್ನು ಎತ್ತಿಕೊಂಡು ನೋಡಿದ. ತೆಲುಗು ಅಕ್ಷರಗಳು. ಅದೇನೆಂದು ಗೊತ್ತಾಗಲಿಲ್ಲ. ಕೈಯಲ್ಲಿ ಹಿಡಿದು ಊರಿನತ್ತ ಹೆಜ್ಜೆ ಕಿತ್ತಿಡತೊಡಗಿದ.

ಊರಿನ ಮುಂದೆ ಹೋಟೆಲ್ ಇಟ್ಟುಕೊಂಡಿರುವ ಚಿನ್ನಪ್ಪನಿಂದ ರಾಘವಯ್ಯನಿಗೆ ವಿಷಯ ತಿಳಿಯಿತು. ಒಮ್ಮೆಲೆ ತಲೆ ಧೀಂ ಎಂದಿತು. ತನ್ನ ತಂಗಿಯ ಮಗ ಬಸುರಿ ಹೆಂಡತಿಯನ್ನು ಕಾಲಿನಿಂದ ಒದ್ದಿದ್ದ. ಏನೋ ಗಂಡ-ಹೆಂಡತಿ ಜಗಳ ಅಂತ ಸುದ್ದಿ. ಏಟು ತಿಂದ ಅವಳಿಗೆ ಸ್ರಾವ ಶುರುವಾಯಿತಂತೆ. ಯಾರೋ ಪುಣ್ಯಾತ್ಮರು ಆಂಬುಲೆನ್ಸ್‌ಗೆ ಹೇಳಿದರು.

ರಾಘವಯ್ಯನಿಗೆ ಹಲ್ಲು ಕಡಿಯುವಷ್ಟು ಸಿಟ್ಟು ಬಂತು. ತನ್ನ ಕೈಯಲ್ಲಿದ್ದ ನೇಮ್‌ಪ್ಲೇಟನ್ನು ಥಟ್ಟನೆ ನೆಲಕ್ಕೆ ಒಗೆದು ನೇರ ಊರಿನೊಳಕ್ಕೆ ದುಡುದುಡು ನಡೆದುಬಿಟ್ಟ.

ಬಿದ್ದ ಆ ಪ್ಲೇಟನ್ನು ಚಿನ್ನಪ್ಪ ಎತ್ತಿಕೊಂಡ. ತೆಲುಗು ಆತನಿಗೆ ಗೊತ್ತಿತ್ತು. ಚಿತ್ತೂರಿನಿಂದ ಬಂದು ಇಲ್ಲಿ ಅಂಗಡಿ ಹಾಕಿಕೊಂಡಿದ್ದ ಆತ ತೆಲುಗಿನಲ್ಲೆ ಓದಿದ್ದು. ಆ ಪ್ಲೇಟಿನಲ್ಲಿದ್ದ ‘ದೇವತಲಾರ ದಿವಿಂಚಂಡಿ’ ಎಂಬ ಪದಗಳು ಆತನಿಗೆ ಇಷ್ಟವಾಯಿತು. ತನ್ನ ಅಂಗಡಿ ಮುಂದೆ ಇದನ್ನು ತೂಗು ಹಾಕಿದರೆ ಚೆನ್ನಾಗಿರುತ್ತದೆ ಎಂದು ಆತ ನಿಶ್ಚಯಿಸಿಕೊಂಡ. ಊರಿನತ್ತ ಗಾಳಿವೇಗದಲ್ಲಿ ನುಗ್ಗಿ ಹೋದ ರಾಘವಯ್ಯನಿಗೆ ಮಗಳನ್ನು ಕಳೆದುಕೊಂಡ ದುಃಖವನ್ನು ಭರಿಸುವಂತೆ ಈ ‘ದೇವತೆಗಳು ಹರಸಲಿ’ ಎಂದು ಚಿನ್ನಪ್ಪ ತುಸು ಗಟ್ಟಿಯಾಗಿಯೆ ಹೇಳಿಕೊಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT