ಸೋಮವಾರ, ಆಗಸ್ಟ್ 8, 2022
23 °C

ಸೋಮು ಬರೆದ ಕಥೆ: ಎಳೆಗರುಂ ಎತ್ತಾಗದೆ..

ಸೋಮು Updated:

ಅಕ್ಷರ ಗಾತ್ರ : | |

Prajavani

ನೀರವಮೌನದಲ್ಲಿ ಅದ್ದಿದ ಕಾಳರಾತ್ರಿಯಲ್ಲಿ ರಾಜಾ ತ್ರಿವಿಕ್ರಮನು ಸ್ಮಶಾನ ಪ್ರವೇಶಿಸಿ, ಅಲ್ಲಿ ಆಲವೃಕ್ಷದ ಕೊಂಬೆಯ ಮೇಲೆ ನೇತಾಡುತ್ತಿದ್ದ ಶವವನ್ನು ಹೆಗಲಿಗೇರಿಸಿ ಮತ್ತೆ ತನ್ನ ಗಮ್ಯದತ್ತ ಹೆಜ್ಜೆ ಹಾಕಲಾರಂಭಿಸಿದನು. ಅವನ ಛಲಬಿಡದ ಪ್ರಯತ್ನವನ್ನು ಕಂಡು ಬೇತಾಳವು 'ಎಲೈ ರಾಜನ್! ನಾನೆಷ್ಟೇ ಪ್ರಯತ್ನಿಸಿದರೂ ನೀನು ಛಲ ಬಿಡದೆ ಮತ್ತೆ ಮತ್ತೆ ನನ್ನನ್ನು ಹೊತ್ತು ಮಾಂತ್ರಿಕನ ಯಜ್ಞಕುಂಡದ ಬಳಿಗೆ ಕರೆದೊಯ್ಯುವ ಯತ್ನ ಮಾಡುತ್ತಲೇ ಇರುವೆ. ನಿನ್ನ ಕರ್ಮ ಅನುಭವಿಸು. ಮಾರ್ಗಮಧ್ಯದಲ್ಲಿ ನಿನಗೆ ಆಯಾಸ-ಬೇಸರಗಳುಂಟಾಗದೆ ಇರಲು ನನ್ನ ಷರತ್ತಿನಂತೆ ಕಥೆಯೊಂದನ್ನು ಪೇಳುತ್ತೇನೆ. ಮೌನ ಮುರಿಯದೆ  ಕೇಳುವಂತವನಾಗು” ಎಂದು ಶುರು ಮಾಡಿಯೇ ಬಿಟ್ಟಿತು.

***

ಒಂದಾನೊಂದು ಊರಿನಲ್ಲಿ ಪ್ರಕಾಶ ಡಿಸೋಜಾ-ಸುಜಾತಮ್ಮ ಎಂಬ ಸಜ್ಜನ ದಂಪತಿಗಳಿದ್ದರು. ಧರ್ಮಭೀರು ಕ್ರೈಸ್ತರಾಗಿದ್ದ ಅವರೀರ್ವರೂ ‘ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆ’ ನಡೆಸುತ್ತಿದ್ದ ಪ್ರಾಥಮಿಕ ಶಾಲೆಯೊಂದರಲ್ಲಿ ಶಿಕ್ಷಕರಾಗಿದ್ದರು. ಪ್ರಕಾಶ್ ಮಾಸ್ಟರ್ ಏಳನೇ ತರಗತಿಗೆ ಪಾಠ ಮಾಡುತ್ತಿದ್ದರೆ, ಅವರ ಹೆಂಡತಿ ಸುಜಾತಮ್ಮ ಅದೇ ಶಾಲೆಯಲ್ಲಿ ನಾಲ್ಕನೇ ತರಗತಿಗೆ ಪಾಠ ಹೇಳುತ್ತಿದ್ದರು.

ಅದಿನ್ನೂ ಎಪ್ಪತ್ತರ ದಶಕ. ಆಗೆಲ್ಲ ಈಗಿನಂತೆ ಒಂದೊಂದು ವಿಷಯಕ್ಕೆ ಒಬ್ಬೊಬ್ಬ ಶಿಕ್ಷಕರಿರುತ್ತಿರಲಿಲ್ಲ. ಎಲ್ಲಾ ವಿಷಯಗಳನ್ನೂ ತರಗತಿಗೆ ನೇಮಿಸಲ್ಪಟ್ಟಿದ್ದ ಒಬ್ಬ ಶಿಕ್ಷಕರೇ ಕಲಿಸುತ್ತಿದ್ದರು. ತಮ್ಮಲ್ಲಿದ್ದ  ಜ್ಞಾನವನ್ನೆಲ್ಲ ಧಾರೆಯೆರೆಯಲು ಶಿಕ್ಷಕರು ಸರ್ವಪ್ರಯತ್ನವನ್ನು ಮಾಡುತ್ತಿದ್ದರೆ ಹೊರತು ಈಗಿನಂತೆ ಸಂಬಳ-ಸವಲತ್ತಿಗೆ ಕಟ್ಟುಬಿದ್ದು ಕಾಟಾಚಾರಕ್ಕೆ ಪಾಠ ಹೇಳುವ ಶಾಸ್ತ್ರ ಮಾಡುತ್ತಿರಲಿಲ್ಲ. ಶಾಲೆಯ ತರಗತಿಗಳಲ್ಲಿನ ಗಲಾಟೆ ಮೊದಲ ನೋಟಕ್ಕೆ ಮೀನು ಮಾರುಕಟ್ಟೆ ನೆನಪಿಸುವಂತಿದ್ದರೂ, ಕಲಿಸುವ ಶಿಕ್ಷಕರ ಉತ್ಸಾಹ ಮತ್ತು ಕಲಿಯುವ ಮಕ್ಕಳ ಶ್ರದ್ಧಾ ಭಕ್ತಿ ಅನನ್ಯ. 

ಪ್ರಕಾಶ್-ಸುಜಾತಮ್ಮ ದಂಪತಿ ತಮ್ಮ ವಿದ್ಯಾರ್ಥಿ ಸಮೂಹಕ್ಕೆಲ್ಲ ಬಹಳ ಜನಪ್ರಿಯರಾಗಿದ್ದರು. ಅದಕ್ಕೆ ಕಾರಣ ಆಗಿನ ಕಾಲದ ಇನ್ನಿತರ ಶಿಕ್ಷಕರಂತೆ ‘ಛಡಿ ಛಮ್ ಛಮ್, ವಿದ್ಯಾ ಗಮ್ ಗಮ್’ ಎಂಬ ತತ್ವ ಪಾಲಿಸುತ್ತಿರಲಿಲ್ಲ. ಅದೂ ಅಲ್ಲದೆ ಪಾಠದ ಜೊತೆಜೊತೆಗೆ ಆಟೋಟಗಳಿಗೂ ಅವರು ಪ್ರಾಮುಖ್ಯತೆ ನೀಡುತ್ತಿದ್ದರು. ಆ ಕಾಲದ ಮಕ್ಕಳು ಆಡುತ್ತಿದ್ದ ಆಟಗಳಾದರೂ ಎಂಥವು- ಕಬಡ್ಡಿ, ಲಗೋರಿ, ಚಿಣ್ಣಿ-ದಾಂಡು, ಕಣ್ಣಾ-ಮುಚ್ಚಾಲೆ, ಗೋಲಿಯಾಟ. ಎಷ್ಟೊಂದು ವೈವಿಧ್ಯಮಯವೋ ಅಷ್ಟೇ ವರ್ಣರಂಜಿತ.

ಸ್ವತಃ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರಾಗಿದ್ದರೂ ಮಕ್ಕಳಿಗೆ ರಾಮಾಯಣ, ಮಹಾಭಾರತ, ಪಂಚತಂತ್ರ, ಭಾಗವತ, ಪುರಾಣದ ಕಥೆಗಳನ್ನು ಹೇಳಿಕೊಡುತ್ತಿದ್ದರು. ಜೊತೆಗೆ ಯೇಸು ಕ್ರಿಸ್ತ, ಗಾಂಧಿ, ಬಸವ, ಬುದ್ಧ ಮೊದಲಾದ ಮಹಾತ್ಮರ ಜೀವನದಿಂದ ಆಯ್ದ  ಘಟನೆಗಳನ್ನು ಹೇಳಿ ಅವರಲ್ಲಿ ಮಾನವೀಯ ಮೌಲ್ಯಗಳ ಬೀಜ ಬಿತ್ತುತ್ತಿದ್ದರು. ಏಳನೇ ತರಗತಿ ಪಬ್ಲಿಕ್ ಪರೀಕ್ಷೆಗೂ ಮುಂಚೆ ಮಕ್ಕಳ ಮುಂದಾಳತ್ವದಲ್ಲಿಯೇ ‘ಸರಸ್ವತಿ ಪೂಜೆ’ ಆಯೋಜಿಸಿ ಬಾಳಿನಲ್ಲಿ ವಿದ್ಯೆಗಿರುವ ಸ್ಥಾನದ ಮಹತ್ವ ಮಕ್ಕಳಿಗೆ ಪರೋಕ್ಷವಾಗಿ ತಿಳಿಯುವಂತೆ ಮಾಡುತ್ತಿದ್ದರು.

ಮಕ್ಕಳು ಕೂಡ ಮನೆಯಲ್ಲಿ ಬೈಸಿಕೊಂಡರೂ, ಸಂಕ್ರಾಂತಿಗೆ ‘ಎಳ್ಳು-ಬೆಲ್ಲ’ ಹಾಗೂ ದಸರೆಗೆ ‘ಬನ್ನಿ-ಬಂಗಾರ’ ಕೊಟ್ಟು, ಡಿಸೋಜಾ ದಂಪತಿಗಳ ಕಾಲಿಗೆರಗಿ ನಮಸ್ಕರಿಸುತ್ತಿದ್ದರು. ಮುಸ್ಲಿಂ ವಿದ್ಯಾರ್ಥಿಗಳು ತಮ್ಮ ಹಬ್ಬದ ದಿನಗಳಲ್ಲಿ ‘ಶಿರ್ ಕುಂಬಾ’ (ಪಾಯಸ), ಚೋಂಗ್ಯ (ಶೇಂಗಾ ಹೋಳಿಗೆ) ಮುಂತಾದ ಸಿಹಿ ತಂದು ಅರ್ಪಿಸುತ್ತಿದ್ದರು. ಹೀಗಾಗಿ ಮಕ್ಕಳಿಗೆಂದೂ ‘ನಾವು ಬೇರೆ, ಅವರು ಬೇರೆ’ ಅಂತ ಅನಿಸಿರಲೇ ಇಲ್ಲ. ಮಕ್ಕಳಿಗೆ ಕಲಿಕೆಯೂ ಖುಷಿ ಕೊಡುವ ಆಟದಂತೆ ಭಾಸವಾಗಿತ್ತು ಎಂದರೆ ಅದಕ್ಕೆ ಪ್ರಕಾಶ್ ಮಾಸ್ಟರ್ ಮತ್ತು ಸುಜಾತಮ್ಮ ಕಾರಣ.

***

ತಾನು ಹೇಳುತ್ತಿದ್ದ ಕಥೆಗೆ ಅಲ್ಪವಿರಾಮ ಕೊಟ್ಟು ಬೇತಾಳವು ತನ್ನ ತೆಲೆಯನ್ನು ರಾಜನ ಎಡ ಹೆಗಲಿನಿಂದ ಬಲ ಹೆಗಲಿಗೆ ಬದಲಾಯಿಸುತ್ತಾ ‘ರಾಜನೇ! ಕತೆ ಕೇಳಲು ಸಪ್ಪೆ ಎನಿಸಿತೇ? ನೀನು ‘ಹೂಂ’ಗುಡದೆ ಇದ್ದರೆ ನನಗೆ ಕತೆ ಮುಂದುವರೆಸಲು ಹೇಗೆ ಆಸಕ್ತಿ ಬಂದೀತು? ಕತೆಯನ್ನು ಆಲಿಸುತ್ತಿರುವೆಯಾ?’ ಎಂದು ಅವನ ಮೌನ ಮುರಿಯುವ ಪ್ರಯತ್ನ ಮಾಡಿತು. ರಾಜ ಏನೂ ಹೇಳದೆ ‘ಕೇಳಿಸಿಕೊಳ್ಳುತ್ತಿರುವೆ’ ಎಂಬಂತೆ ತೆಲೆಯಾಡಿಸಲು, ಅಷ್ಟು ಸುಲಭದಲ್ಲಿ ವಿಕ್ರಮನ ಬಾಯಿ ಬಿಡಿಸಲಾಗದು ಎಂದು ತಿಳಿದಿದ್ದ ಬೇತಾಳವು ‘ಆಯ್ತು. ನೀನು ಮಾತಾಡದೆ ಇದ್ದರೆ ‘ಕತ್ತೆ ಬಾಲ ಹೋಯಿತು’. ಮುಂದಕ್ಕೇನಾಯಿತು ಕೇಳುವಂತವನಾಗು’ ಎಂದು ಕತೆ ಮುಂದುವರೆಸಿತು.

***

ಪ್ರಕಾಶ ಮಾಸ್ಟರ್ ಹಾಗು ಸುಜಾತಮ್ಮ ದಂಪತಿಗಳಿಗೆ ಬಹಳ ವರ್ಷ ಮಕ್ಕಳಾಗಿರಲಿಲ್ಲ. ತಮ್ಮ ಶಾಲೆಯ ವಿದ್ಯಾರ್ಥಿಗಳನ್ನೇ ಸ್ವಂತ ಮಕ್ಕಳಂತೆ ಭಾವಿಸಿ, ಎಷ್ಟೇ ಪ್ರೀತಿ ತೋರಿಸಿ ಸಮಾಧಾನ ಪಟ್ಟುಕೊಂಡರೂ, ನಾಳೆ ತಮ್ಮ ಹೆಸರು ಹೇಳುವ ‘ಮಗು’ ಇಲ್ಲವೆಂಬ ಕೊರಗು ನೀಗದಾಯಿತು. ಎಲ್ಲ ಸಂತಾನಹೀನ ದಂಪತಿಗಳಂತೆ ಇವರೂ ಕೂಡ ಕಂಡ-ಕಂಡ ದೇವರಿಗೆಲ್ಲಾ ಹರಕೆ ಹೊತ್ತು, ಎಲ್ಲ ಬಗೆಯ ಸೇವೆ-ಪ್ರಾರ್ಥನೆ ಸಲ್ಲಿಸುತ್ತಲೇ ಇದ್ದರೂ ಬಹುಕಾಲದವರೆಗೂ ಫಲ ಸಿಕ್ಕಿರಲಿಲ್ಲ.

ಪ್ರಕಾಶ ಮಾಸ್ಟರ್ ಅವರಿಗೆ ಹಿರಿಯಣ್ಣ ಇದ್ದರು. ರೇಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಅವರ ಹೆಸರು ಆನಂದಪ್ಪ. ಆನಂದಪ್ಪನವರಿಗೆ ಇಬ್ಬರು ಮಕ್ಕಳಿದ್ದರು- ಹಿರಿಯ ಮಗಳು ಜೂಲಿ ಹಾಗೂ ಅವಳ ತಮ್ಮ ಜಾನ್. ಮಾಸ್ಟರ್ ದಂಪತಿಗಳು ಅವರಿಬ್ಬರಲ್ಲಿ ಒಬ್ಬರನ್ನು ದತ್ತು ಪಡೆಯಲು ಯೋಚಿಸಿದ್ದರು. ಆದರೆ ಅಷ್ಟೊತ್ತಿಗಾಗಲೇ, ಜೂಲಿಗೆ ಹದಿನೈದು ವರ್ಷ ತುಂಬಿತ್ತು ಮತ್ತು ಜಾನ್ ಹನ್ನೆರಡು ವಯಸ್ಸಿನವನಾಗಿದ್ದನು. ಜಾನ್ ಅಥವಾ ಜೂಲಿಯನ್ನು ದತ್ತು ತೆಗೆದುಕೊಂಡರೆ, ಬೆಳೆದ ನಿಂತ ಅವು ತಮಗೆ ಹೊಂದಿಕೊಳ್ಳುವುದು ಕಷ್ಟ ಎನ್ನುವ ಕಾರಣದಿಂದ ದತ್ತು ವಿಚಾರ ಕೈಬಿಟ್ಟಿದ್ದರು.

ಕೊನೆಗೆ ಮದುವೆಯಾದ ಎರಡು ದಶಕದ ನಂತರ ಪುತ್ರನ ಜನ್ಮವಾಯಿತು. ಮಕ್ಕಳಿಲ್ಲದ ತಮ್ಮ ಬರಡು ಬಾಳಿಗೆ ಆನಂದದ ಹೊಳೆ ಹರಿಸಿದ ಮಗುವನ್ನು ‘ಸಂತೋಷ’ ಅಂತ ಹೆಸರಿಟ್ಟು ಕರೆದರು. ಮಕ್ಕಳ ಭಾಗ್ಯವಿಲ್ಲದೆ ಕೊರಗಿನಲ್ಲಿದ್ದ ಈ ಮದ್ಯವಯಸ್ಕ ದಂಪತಿಗಳಿಗೆ ‘ಸಂತೋಷ’ ಹರುಷದ ಹೊನಲನ್ನೇ ಹರಿಸಿದ. ಶಾಲೆಗೆ ಬರುತ್ತಿದ್ದ ಬೇರೆಯವರ ಮಕ್ಕಳನ್ನೇ ಅಷ್ಟೊಂದು ಪ್ರೀತಿಯಿಂದ ಕಾಣುತಿದ್ದ ಅವರು ಸಂತೋಷನನ್ನು ಪ್ರೇಮ-ವಾತ್ಸಲ್ಯದ ಸುಧೆ ಹರಿಸಿ ಬೆಳೆಸಿದರು. ಸಂತೋಷ ಸಣ್ಣವನಿದ್ದಾಗ ಬಹಳ ಮುದ್ದುಮುದ್ದಾಗಿ-ಚೂಟಿಯಾಗಿ ಇದ್ದ. ಅವನ ಆಟ-ಪಾಟ, ತೊದಲ್ನುಡಿಗಳು, ಎಡರು-ತೊಡರು ನಡಿಗೆ- ಇವನ್ನೆಲ್ಲ ಕಂಡು ಪ್ರಕಾಶ-ಸುಜಾತಮ್ಮ ದಂಪತಿಗೆ ತಮ್ಮ ಜೀವನ ಸಾರ್ಥಕವಾಯಿತು ಎಂಬ ಭಾವ ಮೂಡಿತ್ತು.

ಸ್ವಭಾವತಃ ಧರ್ಮಭೀರುಗಳಾದ ಮಾಸ್ಟರ್-ಸುಜಾತಮ್ಮ ದಂಪತಿ ಚಿಕ್ಕಂದಿನಿಂದಲೇ ಹುಡುಗನನ್ನು ತಮ್ಮ ಜೊತೆಗೆ ಚರ್ಚ್‌ಗೆ ಕರೆದೊಯ್ದು ಕ್ರಿಶ್ಚಿಯನ್ ಧರ್ಮದ ತಿರುಳಾದ ದಯೆ-ಕರುಣೆ-ಕ್ಷಮೆ ಮುಂತಾದುವುಗಳ ಬಗ್ಗೆ ಅರಿವು ಮೂಡಿಸಲು ಯತ್ನಿಸಿದರು.

ಅವರೀರ್ವರ ಪ್ರಯತ್ನದ ಫಲವಾಗಿ ಸಂತೋಷ ಮುಗ್ಧತೆಯಿಂದ ‘ಯೇಸು ಸ್ವಾಮಿಯೇ ಕರುಣಿಸು ಬಾ’ ಎನ್ನುವ ಪ್ರಾರ್ಥನೆ ಹೇಳುತ್ತಿದ್ದನು. ಆಗಲಂತೂ ಪ್ರಕಾಶ್-ಸುಜಾತಮ್ಮ ತಮ್ಮ ಮಗುವಿನ ಭಕ್ತಿಪರವಶತೆಗೆ ಬೆರಗಾಗಿ ಧನ್ಯತೆಯಿಂದ ಬೀಗಿದರು. ತಾವು ಕಲಿಸುತ್ತಿದ್ದ ಶಾಲೆ ಸೇರಿಕೊಂಡ ಸಂತೋಷ ಓದಿನಲ್ಲೂ ಚುರುಕಾಗಿರುವುದನ್ನು ಕಂಡಾಗಲಂತೂ ಅವರ ಖುಷಿಗೆ ಪಾರವೇ ಇರಲಿಲ್ಲ. ಹೀಗೆ ಸಂತೋಷ ಶುಕ್ಲಪಕ್ಷದ ಚಂದ್ರನಂತೆ ಬೆಳೆದನು.

***

ರಾಜಾ ವಿಕ್ರಮನ ನಡಿಗೆಯ ವೇಗವು ಕಡಿಮೆಯಾದ ಹಾಗೆ ಬೇತಾಳಕ್ಕೆ ಅನಿಸಿತು. ತನ್ನ ಕಥೆ ರಾಜನ ಮೇಲೆ ಪರಿಣಾಮ ಬೀರುತ್ತಿದೆ ಎಂದರಿತ ಬೇತಾಳವು ‘ನೋಡಿದೆಯಾ ರಾಜನೇ! ಈಗ ಕಥೆಗೆ ಒಂದು ಸ್ಪಷ್ಟ ರೂಪ ಸಿಕ್ಕುತ್ತಾ ಇದೆಯಲ್ಲವೆ? ಮುಂದೆ ಕೇಳುತ್ತಾ ಹೋದ ಹಾಗೆ ನಿನಗೆ ಕುತೂಹಲ ತಾಳದೆ ಹೋಗಿ, ನೀನು ನನ್ನನ್ನು ಕಥೆ ಚೆನ್ನಾಗಿದೆ, ನಿಲ್ಲಿಸಬೇಡವಂದು ಬೇಡಿಕೊಳ್ಳಬಹುದು. ನೀನೇ ನೋಡುತ್ತಿಯಲ್ಲ’ ಎಂದು ಹೇಳಿ ಕಥೆಯನ್ನು ಪುನರಾರಂಭಿಸಿತು.

***

ರೇಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಮಾಸ್ಟರ್ ಅಣ್ಣ ಅನಂದಪ್ಪನವರು ನಿವೃತ್ತಿಗೆ ಎರಡೇ ವರ್ಷವಿದ್ದಾಗ ಪಾರ್ಶ್ವವಾಯುವಿನಿಂದಾಗಿ ತೀವ್ರ ಅನಾರೋಗ್ಯಕ್ಕೆ ಈಡಾದರು. ಮಲಗಿದ್ದಲ್ಲೇ ಅವರ ದೈನಂದಿನ ಸಕಲ ಕಾರ್ಯಕ್ರಮಗಳೂ ನಡೆಯಬೇಕಾಗಿತ್ತು. ಆನಂದಪ್ಪನವರ ಪತ್ನಿ ವರ್ಷಗಳ ಹಿಂದೆಯೇ ಹೊಟ್ಟೆನೋವಿನಿಂದ ತೀರಿಕೊಂಡಿದ್ದರು. ಹೀಗಾಗಿ ಆನಂದಪ್ಪನವರ ಆರೈಕೆಯನ್ನು ಅವರ ಮಕ್ಕಳೇ ಮಾಡಬೇಕಾಗಿ ಬಂತು. ಅದನ್ನು ಅವರಿಬ್ಬರೂ ಗೊಣಗುತ್ತಲೇ ಮಾಡತೊಡಗಿದ್ದರು.

ಸೋಮಾರಿತನ, ಬೇಜಬ್ದಾರಿತನ ಮೈಗೂಡಿಸಿ ಕೊಂಡಿದ್ದ ಜಾನ್ ಹಾಗೂ ಚೆಲ್ಲುಚೆಲ್ಲಾಗಿ ವರ್ತಿಸುತ್ತಾ ಅನೇಕ ಗೆಳೆಯರೊಂದಿಗೆ ಮಜಾ ಉಡಾಯಿಸುತ್ತಿದ್ದ ಜೂಲಿ- ಇಬ್ಬರಿಗೂ ಈಗಿರುವ ಸ್ಥಿತಿಯಲ್ಲಿ ಅಪ್ಪ ಹೀಗೆಯೇ ಬದುಕಿ ಉಳಿಯುವುದಕ್ಕಿಂತ, ನಿವೃತ್ತಿಗೆ ಮುಂಚೆಯೇ ಸತ್ತರೇನೇ ‘ಲಾಭ’ ಎಂಬ ಹಿತೈಷಿಗಳ ಸಲಹೆಯಂತೆ ತಮ್ಮೊಳಗೆ ಪರಾಮರ್ಶಿಸಿ ಕಾರ್ಯೋನ್ಮುಖರಾದರು. ಈಗಾಗಲೇ ತಮ್ಮ ಪರಿಚಯದ ಅನೇಕ ಗೆಳೆಯರು ಮಾಡಿದಂತೆ, ಅನಂದಪ್ಪನವರನ್ನು ‘ಮುಗಿಸಿ’ ತಮ್ಮ ಉಜ್ವಲ ಭವಿತವ್ಯಕ್ಕೆ ಭದ್ರ ಬುನಾದಿ ಹಾಕಲು ಉದ್ಯುಕ್ತರಾದರು.

ಆನಂದಪ್ಪನವರ ನೋವು ನಿವಾರಣೆ ಹಾಗೂ ವಿಶ್ರಾಂತಿಗೆಂದು ಡಾಕ್ಟರ್ ನಿದ್ದೆ ಮಾತ್ರೆಗೆ ಚೀಟಿ ಬರೆದುಕೊಟ್ಟಿದ್ದರು. ಒಂದೇ ಚೀಟಿಯನ್ನು ಬೇರೆ ಬೇರೆ ಫಾರ್ಮಸಿಗಳಲ್ಲಿ ತೋರಿಸಿ ಜೂಲಿ ಮತ್ತು ಜಾನ್ ಹತ್ತಾರು ನಿದ್ದೆಮಾತ್ರೆಗಳನ್ನು ಖರೀದಿಸಿದರು. ಮುಂಚೆ ಮಾಡಿಕೊಂಡಿದ್ದ ಪ್ಲಾನ್ ಅನುಸಾರವಾಗಿ ಒಂದು ರಾತ್ರಿ ಮಲಗುವ ಮುನ್ನ ಆಷ್ಟೂ ನಿದ್ದೆ ಮಾತ್ರೆಗಳನ್ನು ಹಾಲಿನಲ್ಲಿ ಬೆರೆಸಿ ಕುಡಿಸಿ, ಆನಂದಪ್ಪ ಯೇಸುವಿನ ಪಾದ ಸೇರುವಂತೆ ನೋಡಿಕೊಂಡರು. ಮರುದಿನ ಏನೂ ಅರಿಯದವರಂತೆ ಅಪ್ಪನ ಸಾವಿಗೆ ‘ಗೋಳೋ’ ಎಂದು ಅತ್ತು ಕರೆದು ನೆರೆದ ಜನ ನಂಬುವಂತೆ ರಂಪಾಟ ಗೈದು ಮಣ್ಣು ಮಾಡಿದರು.

ತರುವಾಯ ಮೊದಲೇ ನಿಶ್ಚಯಿಸಿಕೊಂಡಂತೆ, ಜಾನ್ ಅನುಕಂಪ ಆಧಾರದ ಮೇಲೆ ಅಪ್ಪನ ನೌಕರಿ ಗಿಟ್ಟಿಸಿಕೊಂಡರೆ, ಭವಿಷ್ಯ ನಿಧಿ-ವಿಮೆ ಮುಂತಾದ ಸೌಲಭ್ಯಗಳ ಲಕ್ಷಾಂತರ ರೂಪಾಯಿಗಳ ದೊಡ್ಡಮೊತ್ತದ ಇಡುಗಂಟು ಜೂಲಿಗೆ ದಕ್ಕಿತು.

ಇಬ್ಬರು ಕಾಲಾನುಕ್ರಮದಲ್ಲಿ ಮದುವೆಯಾಗಿ ಹಾಯಾಗಿದ್ದರು. ಆದರೆ ಎಷ್ಟೇ ಎಚ್ಚರ ವಹಿಸಿದರೂ ಅವರ ಈ ಗುಟ್ಟು ಗುಸು ಗುಸು ರೂಪದಲ್ಲಿ ಹರಡಿ, ಕೊನೆಗೆ ಮಾಸ್ಟರ್ ದಂಪತಿಗೂ ಗೊತ್ತಾಯಿತು. ಅಣ್ಣನ ಮಕ್ಕಳ ಕುಕೃತ್ಯಕ್ಕೆ ಹೇಸಿ, ಅಸಹ್ಯಪಟ್ಟುಕೊಂಡು ಮಾಸ್ಟರ್ ಜಾನ್-ಜೂಲಿ ಇಬ್ಬರೊಂದಿಗಿನ ಸಂಬಂಧ ಕಡಿದುಕೊಂಡರು. ಜಾನ್-ಜೂಲಿ ಮಾಡಿದ ಕರ್ಮಕಾಂಡದಿಂದ ಮಾಸ್ಟರ್ ದಂಪತಿಗೆ ಅವರಿಬ್ಬರಲ್ಲಿ ಒಬ್ಬರನ್ನು ದತ್ತು ತೆಗೆದುಕೊಳ್ಳುವ ವಿಚಾರ ಕೈಬಿಟ್ಟದ್ದೇ ಒಳ್ಳೆಯದಾಯಿತು ಎಂದೆನಿಸಿತು.

***

ರಾಜಾ ವಿಕ್ರಮ ಥಟ್ಟನೆ ನಿಂತದ್ದರಿಂದ ಬೇತಾಳಕ್ಕೆ ‘ರಾಜನಿಗೆ ಗೊಂದಲವಾಯಿತೇನೋ’ ಎಂದು ಅನುಮಾನ ಬಂದು ‘ರಾಜನೇ! ನೀನು ‘ಇದೇನು ಪ್ರಕಾಶ್ ಮಾಸ್ಟರ್ ಕಥೆಯಿಂದ ಆರಂಭಿಸಿ ಮಕ್ಕಳಿಂದಲೇ ಕೊಲೆಗೀಡಾದ ಅವರ ಅಣ್ಣನ ದಾರುಣ ಸಾವಿನ ಕಥೆಗೆ ಜಿಗಿದೆ’ ಎಂದುಕೊಂಡೆಯಾ? ನಾನು ಹೇಳುತ್ತಿರುವ ಕಥೆಯ ಮುಂದಿನ ಭಾಗದಲ್ಲಿ ಆನಂದಪ್ಪನವರ ಸಾವು ಪ್ರಕಾಶ-ಸುಜಾತಮ್ಮ ಮಾತ್ರವಲ್ಲ ಸಂತೋಷನ ಜೀವನದ ಮೇಲೂ ಹೇಗೆ ಪರಿಣಾಮ ಬೀರಿತು ಎನ್ನುವುದು ಮುಂದೆ ಹೋದಂತೆ ನಿನಗೇ  ಗೊತ್ತಾಗುತ್ತದೆ’ ಎನ್ನುತ್ತಾ ಕಥೆಯ ಉತ್ತರಾರ್ಧ ಹೇಳಲು ಉಪಕ್ರಮಿಸಿತು.

***

ಅಣ್ಣ ಆನಂದಪ್ಪನವರನ್ನು ಅವರ ಮಕ್ಕಳೇ ದುರಾಸೆಯಿಂದ ‘ಕೊಲೆ’ ಮಾಡಿದ ಘಟನೆ ಪ್ರಕಾಶ ಮಾಸ್ಟರ್ ದಂಪತಿಗಳ ಮೇಲೆ ಗಾಢ ಪರಿಣಾಮ ಬೀರಿತು. ಆಗಿನ್ನೂ ಸಂತೋಷ ಶಾಲೆಗೆ ಹೋಗಲಾರಂಭಿಸಿದ್ದ. ಚಿಕ್ಕವನಿದ್ದಾಗ ಜಾನ್-ಜೂಲಿಯರೊಂದಿಗೆ ಮಗ ಸಂತೋಷ ಸಾಕಷ್ಟು ಬಾರಿ ಒಡನಾಡಿದ್ದ ಎಂಬ ಸಂಗತಿ ಕಳವಳಕ್ಕೀಡು ಮಾಡಿತು. ‘ಅವರೀರ್ವರ ಕೆಟ್ಟ ಪ್ರಭಾವ ಯಾವುದಾದರೊಂದು ರೀತಿಯಲ್ಲಿ ಸಂತೋಷನ ಮೇಲೆ ಆಗದಿದ್ದೀತೆ? ಹಾಗೇನಾದರೂ ಆದರೇನು ಗತಿ? ಎಂದು ಯೋಚಿಸಿ, ಯೋಚಿಸಿ ಹಣ್ಣಾದ ಅವರು ತಮ್ಮ ಸಂಕಟವನ್ನು ಪಾದ್ರಿಯ ಬಳಿ ನಿವೇದಿಸಿಕೊಂಡರು.

ಅವರ ಗೋಳನ್ನು ಕೇಳಿದ ಪಾದ್ರಿ ಸುದೀರ್ಘವಾಗಿ ವಿಚಾರ ಮಾಡಿ, ಸಂತೋಷ ಸಹ ಜಾನ್-ಜೂಲಿ ಥರ ಸೈತಾನನ ಮಾರ್ಗ ಹಿಡಿಯುವುದನ್ನು ತಪ್ಪಿಸಲು ಅವನ ಮನಸ್ಸಿನಲ್ಲಿ ಇನ್ನೂ ಹೆಚ್ಚಿನ ದೈವಭಕ್ತಿ ಬಿತ್ತುವುದೊಂದೇ ಮಾರ್ಗ ಎಂದು ಒತ್ತಿ ಹೇಳಿದರು. ಹತ್ತನೇ ತರಗತಿಯ ನಂತರ ಸೆಮಿನರಿಯಲ್ಲಿ 5-6 ವರ್ಷ ತರಬೇತಿ ಪಡೆದರೆ ದೇವರ ಸೇವೆಗೈಯ್ಯುವ ಪಾದ್ರಿಯಾಗಿ ತಯಾರಾಗುತ್ತಾನೆ. ಪ್ರಭು ಯೇಸುವಿನ ಮಹಿಮೆಯನ್ನೂ, ಕ್ರೈಸ್ತ ಧರ್ಮದ ತಿರುಳನ್ನು ಜನರಿಗೆ ಸಾರುವ ಸೈನಿಕನಾಗುತ್ತಾನೆ ಎಂದೆಲ್ಲ ಪಾದ್ರಿಗಳು ವಿವರಿಸಿ ಹೇಳಿದರು. ಸ್ವಭಾವತಃ ಧರ್ಮಭೀರುಗಳಾದ ಮಾಸ್ಟರ್ ದಂಪತಿ ಈ ಸಲಹೆಯನ್ನು ಸಂಪೂರ್ಣವಾಗಿ ಒಪ್ಪಿ, ಅದರಂತೆ ಸಂತೋಷನನ್ನು ಇನ್ನೂ ಅಧಿಕ ಮಟ್ಟದಲ್ಲಿ ದೈವ-ಧರ್ಮ ಇತ್ಯಾದಿ ವಿಷಯಗಳ ಕಡೆಗೆ ತಿರುಗಿಸಲು ಮುಂದಾದರು.

ಸಂತೋಷನನ್ನು ಬೇರೆ ಮಕ್ಕಳೊಂದಿಗೆ ಬೆರೆಯಲು ಬಿಡದೆ ಅನವರತ ಕ್ರೈಸ್ತನ ಭಜನೆ-ಧ್ಯಾನಗಳಲ್ಲಿ ತೊಡಗಿರುವಂತೆ ನೋಡಿಕೊಳ್ಳುತ್ತಿದ್ದರು. ಶಿಶು ಸಹಜ ಕುತೂಹಲವನ್ನು ಬೆಳೆಯಗೊಡದೆ, ‘ನಾಳೆ ನೀನು ಪಾದ್ರಿಯಾಗೋನು, ಬೇರೆ ಮಕ್ಕಳಂತೆ ಪೋಲಿ ಅಲೆಯೋದು, ಆಟವಾಡುತ್ತಾ ಸಮಯ ವ್ಯರ್ಥ ಮಾಡೋದು ಸಲ್ಲದು’ ಎಂದು ಕಟ್ಟುಪಾಡು ವಿಧಿಸಿ ಬಾಲ್ಯಸಹಜ ಚಟುವಟಿಕೆಗಳನ್ನೆಲ್ಲ ಅದುಮುತ್ತಿದ್ದರು. ‘ಸುಳ್ಳು ಹೇಳೋದು ಪಾಪ, ಕಳ್ಳತನ ಅಪರಾಧ’ ಎಂಬಿತ್ಯಾದಿ ಉಪದೇಶಾಮೃತವನ್ನು  ಅವನ ತೆಲೆಗೆ ತುರುಕಿ, ಸನ್ಮಾರ್ಗದಲ್ಲಿ ನೆಡೆಯುವಂತೆ ಕಾಯುತ್ತಿದ್ದರು. ಪರಿಣಾಮ ಸ್ವರೂಪವಾಗಿ ತನ್ನ ವಾರಿಗೆಯ ಮಕ್ಕಳೆಲ್ಲ ಆಟವಾಡುತ್ತಿರುವಾಗ ಸಂತೋಷನ ಬಾಲ್ಯವೆಲ್ಲವೂ ‘ಸುವಾರ್ತೆ-ಪ್ರಾರ್ಥನೆ’ಗಳ ಸುತ್ತಲೇ ಗಿರಕಿ ಹೊಡೆಯತೊಡಗಿತು. ಮಾತು-ಮಾತಿಗೆ ‘ಪಾದ್ರಿಯಾಗೋದು ಪುಣ್ಯದ ಕೆಲಸ. ಜನ ತಿಳಿದೋ, ತಿಳಿಯದೆಯೋ ಮಾಡುವ ಪಾಪವನ್ನೆಲ್ಲಾ ಕಳೆಯುವಂಥ ದಿವ್ಯ ಕಾಯಕ. ಇದರಿಂದ ನಮ್ಮ ಮೇಲೂ ಕೂಡ ಯೇಸುವಿನ ಕೃಪೆಯಾಗುತ್ತೆ’ ಎಂದು ಹೇಳುತ್ತಾ ಸಂತೋಷನ ಮನದಲ್ಲಿ ತಾನು ಪಾದ್ರಿಯಾಗೋದು ಬಿಟ್ಟರೆ ಅನ್ಯಮಾರ್ಗವಿಲ್ಲವೆಂಬ ನಂಬುಗೆಯನ್ನು ಬಲವಾಗಿ ಅಚ್ಚೊತ್ತಿದ್ದರು.

ಆಗಿನ್ನೂ ಚಿಕ್ಕ ಹುಡುಗನಾಗಿದ್ದ ಸಂತೋಷ ತಾನು ‘ಪಾದ್ರಿ’ ಆಗಿ ದೇವರು-ಧರ್ಮದ ಸೇವೆಗೈಯುವೆನೆಂದು ಬಾಲಭಾಷೆಯಲ್ಲಿ ನುಡಿಯತೊಡಗಿದನು. ಅದಕ್ಕನುಗುಣವಾಗಿ ದೇವರು-ಧರ್ಮದ ವಿಷಯವಾಗಿ ಅತೀವ ಶ್ರದ್ಧಾ-ಭಕ್ತಿ ಬೆಳೆಸಿಕೊಂಡನು. ದೇವರ ಪವಿತ್ರ ಸಾನ್ನಿಧ್ಯದಲ್ಲಿರಲು ಸಾಧ್ಯವಾದಷ್ಟೂ ಅವಕಾಶ ಒದಗಲಿ ಎಂಬ ನಿಟ್ಟಿನಲ್ಲಿ ಪಾದ್ರಿಯ ಸಲಹೆಯಂತೆ ಸಂತೋಷನನ್ನು ಚರ್ಚಿನ ವಿಶಾಲ ಪ್ರಾಂಗಣಕ್ಕೆ ನೀರು ಹಾಕುವುದು, ಆಸನಗಳನ್ನು ಸ್ವಚಗೊಳಿಸುವುದು, ಹೂ ತೋಟಕ್ಕೆ ನೀರೆರೆಯುವುದು ಮುಂತಾದ ಸಣ್ಣ-ಪುಟ್ಟ ಕಾರ್ಯಗಳಿಗೆ ನಿಯೋಜಿಸಲಾಯಿತು. ಮುಗ್ಧ ಸಂತೋಷ ಕೂಡ ತಂದೆ-ತಾಯಿಯ ಇಚ್ಛೆಯಂತೆ ಅವರ ಮಾತುಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದುದಲ್ಲದೆ ಶಾಲೆಯ ಬಿಡುವಿನ ವೇಳೆಯಲ್ಲಿ ಚರ್ಚಿನ ಪವಿತ್ರ ವಾತಾವರಣದಲ್ಲಿ ಪಾದ್ರಿಗಳ ಬಳಿ ಇದ್ದು ಪೂಜಾ-ಪ್ರಾರ್ಥನೆಯ ಕೈಂಕರ್ಯದಲ್ಲಿ ಸಹಾಯ ಮಾಡುತ್ತಾ ಕಳೆಯುತ್ತಿದ್ದನು.

ಆದರೆ ‘ತಾನೊಂದು ಬಗೆದರೆ ದೈವವೊಂದುಬಗೆಯುವುದು’ ಎಂದು ತಿಳಿದವರು ಸುಮ್ಮನೆ ಹೇಳುತ್ತಾರೆಯೇ? ‘ಎಳೆಗರುಂ ಎತ್ತಾಗದೆ’ ಎಂಬ ಕವಿವಾಣಿಯಂತೆ ಸಂತೋಷ ಎಂಬ ಮುದ್ದಿನ ಕರು ಬೆಳೆದು ಎತ್ತಾಯಿತು. ಮುಂದೆ ಹೆತ್ತವರ ಪಾಲಿಗೆ ‘ಕುತ್ತೂ’ ಆಯಿತು.

***

ಕಥೆಯ ನಿರೂಪಣೆ ನೀರಸವೆನಿಸಿತೆ ಎಂಬ ಅನುಮಾನ ಕಾಡಲು, ಬೇತಾಳವು ವಿಕ್ರಮನನ್ನು ಕುರಿತು ‘ರಾಜನೇ! ನಿನಗೆ ಈ ಕಥೆಯಲ್ಲೇನು ಸ್ವಾರಸ್ಯವಿದೆ ಎನಿಸುತ್ತಿರಬಹುದು. ಪ್ರೇಮ-ಪ್ರೀತಿ-ಹಾದರ ಇತ್ಯಾದಿಗಳು ಸೃಷ್ಟಿಸುವ ರೋಚಕತೆ ನಾನು ಹೇಳುತ್ತಿರುವ ಕಥೆಯಲ್ಲಿ ಇಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಹಾಗಾಗಿ ಕತೆಯ ನಿರೂಪಣೆ ನೀರಸವೆನಿಸಿದರೂ ಕೊಂಚ ತಾಳ್ಮೆಯಿಂದ ಕೇಳಿಸಿಕೊ. ಕಥೆಯ ಸಾರ್ಥಕ್ಯದ ಬಗ್ಗೆ ಕೊನೆಯಲ್ಲಿ ನಿರ್ಧರಿಸಬಹುದು’ ಎಂದು ಮತ್ತೆ ಬಿಟ್ಟಲ್ಲಿಂದ ಕಥೆ ಮುಂದುವರೆಸಿತು.

***

ಏಳನೇ ತರಗತಿ ಪಾಸಾದ ನಂತರ ದೂರದ ಇನ್ನೊಂದು ಹೈಸ್ಕೂಲಿಗೆ ಸೇರಿದ ಸಂತೋಷನ ಸ್ವಭಾವದಲ್ಲಿ ಗುರುತರವಾದ ಬದಲಾವಣೆಯಾಗತೊಡಗಿತು. ಹೊಸ ವಾತಾವರಣದಲ್ಲಿ ಲಭಿಸಿದ ಸ್ವಚ್ಛಂದತೆ ವಿಧಿಸಿದ ಕಟ್ಟುಪಾಡುಗಳೆಲ್ಲವನ್ನೂ ಧಿಕ್ಕರಿಸುವಂತೆ ಪ್ರೇರೇಪಿಸಿತು. ‘ಸಹವಾಸದಿಂದ ಸನ್ಯಾಸಿ ಕೆಟ್ಟ’ ಅಂತಾರಲ್ಲ ಹಾಗೆ ಹೊಸ ಗೆಳೆಯರ ಸಂಗದಲ್ಲಿ ಸಂತೋಷ ಸಂಪೂರ್ಣವಾಗಿ ಬದಲಾದ. ಸಣ್ಣ-ಪುಟ್ಟ ವಿಷಯಕ್ಕೂ ಹಠ ಮಾಡುವುದು, ಶಾಲೆ ತಪ್ಪಿಸಿ ಗೆಳೆಯರೊಂದಿಗೆ ಬೀದಿ ಬೀದಿ ಸುತ್ತುವುದು, ಸುಳ್ಳು ಹೇಳುವುದು, ಮನೆಯಲ್ಲಿ ಇಟ್ಟಿರುತ್ತಿದ್ದ ಹಣ ಕದಿಯುವುದು-ಇವೆಲ್ಲ ದುರ್ಗುಣಗಳು ಕಾಣಿಸಿಕೊಂಡವು. ತಿಳಿಸಿ ಬುದ್ಧಿ ಹೇಳುವ, ಯೇಸುವಿನ ಮೇಲೆ ಆಣೆ-ಭಾಷೆ-ಪ್ರಮಾಣ ಇರಿಸಿ, ದೈವ ಶಿಕ್ಷೆಯ ಭೀತಿ ತೋರಿಸಿ ಅವನನ್ನು ಸರಿದಾರಿಗೆ ತರುವ ಪ್ರಯತ್ನಗಳೆಲ್ಲ ‘ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ’ ವ್ಯರ್ಥವಾದವು. ನಿಧಾನವಾಗಿ ಸಂತೋಷ ಚರ್ಚಿನ ಹಾದಿಯನ್ನೇ ಮರೆತ.

ಪಾದ್ರಿಗಳೊಡನೆ ಮಾತನಾಡಿ ಈ ಸಮಸ್ಯೆಗೆ ಪರಿಹಾರ ಹುಡುಕಲು ಪ್ರಕಾಶ್ ಮಾಸ್ಟರ್-ಸುಜಾತಮ್ಮ ದಂಪತಿಗಳು ಯತ್ನಿಸಿದರು. ಆದರೆ ಪಾದ್ರಿಗಳ ಉಪದೇಶಕ್ಕೂ ಸಂತೋಷ ತಲೆಕೆಡಿಸಿಕೊಳ್ಳದೆ, ಅವರ ಉಪದೇಶವನ್ನು ಧಿಕ್ಕರಿಸಿ ತನ್ನ ದುಸ್ಸಾಹಸಗಳನ್ನು ಮುಂದುವರೆಸಿದನು. ಕೊನೆಗೆ ಸೋತ ಪಾದ್ರಿ– ‘ದೈವೇಚ್ಛೆ ಮುಂದೆ ನಮ್ಮ ಪ್ರಯತ್ನ ಎಲ್ಲಿ ಫಲನೀಡುವುದು? ಅವನ ಹಣೆಬರಹದಲ್ಲಿ ಇದ್ದಂತೆ ಆಗುತ್ತದೆ’ ಎಂಬ ಮಾತಿನಿಂದ ಮಾಸ್ಟರ್ ದಂಪತಿಗಳನ್ನು ಸಮಾಧಾನಪಡಿಸಿದರು. ನೆರೆಹೊರೆಯವರೆಲ್ಲ ದಂಪತಿಗಳ ದುರದೃಷ್ಟಕ್ಕೆ ಮರುಗುತ್ತ ‘ಎಂಥವರ ಹೊಟ್ಟೆಯಲ್ಲಿ ಎಂಥಾ ಮಗ! ‘ಗೋವಿನ ಹೊಟ್ಟೆಯಲ್ಲಿ ಹಾವು ಹುಟ್ಟಿದ ಹಾಗೆ’ ಆಯ್ತಲ್ಲ’ ಎಂದು ಉದ್ಗರಿಸಿದರು.

ನೆರೆಹೊರೆಯ ಸಣ್ಣ-ಪುಟ್ಟ ಜಗಳದಿಂದ ಆರಂಭವಾಗಿ ಬರಬರುತ್ತ ಗ್ಯಾಂಗ್ ಕಟ್ಟಿಕೊಂಡು ಗೂಂಡಾಗಿರಿ ಮಾಡುವ ಮಟ್ಟಕ್ಕೆ ಸಂತೋಷನ ಉಪಟಳ ಬೆಳೆಯಿತು. ಮಾಸ್ಟರ್-ಸುಜಾತಮ್ಮನವರ ಸಜ್ಜನಿಕೆಯೇ ಅವರ ದೌರ್ಬಲ್ಯವೂ ಆಯಿತು. ಬರಬರುತ್ತಾ ಸಂತೋಷ ತನ್ನ ಸಿಗರೇಟು-ಕುಡಿತದಂತಹ ದುಶ್ಚಟಗಳಿಗಾಗಿ ಹಣ ಬೇಕೆಂದು ಪೀಡಿಸಲು ಆರಂಭಿಸಿ ಬೈಯುವುದಷ್ಟೆ ಅಲ್ಲ, ತಂದೆ-ತಾಯಿಯ ಮೇಲೆ ಕೈ ಎತ್ತುವುದಕ್ಕೂ ಹೇಸದವನಾಗಿದ್ದನು.

ಪ್ರೀತಿಯಿಂದ ಸಾಕಿ ಬೆಳೆಸಿದ ಮಗ ಈ ರೀತಿ ದಾರಿ ತಪ್ಪಿದ್ದನ್ನು ಕಂಡು ದಿಕ್ಕೆಟ್ಟ ಮಾಸ್ಟರ್‌ಗೆ ಡಿಸೋಜಾ ದಂಪತಿಗಳಿಗೆ ಅವನು ಹಾಗೆ ದಾರಿ ತಪ್ಪಲು ಅವನನ್ನು ಬೆಳೆಸುವಾಗ ತಾವು ಮಾಡಿದ್ದ ತಪ್ಪೇನು? ಎಂಬ ಪ್ರಶ್ನೆ ಭೂತಾಕಾರವಾಗಿ ಕಾಡಿತು. ಉತ್ತರ ಸಿಗಲಿಲ್ಲ. ಹೀಗಾಗಿ ಡಿಸೋಜಾ ದಂಪತಿ ಮುಂದೆ ಎಂದಾದರೂ ಸಂತೋಷ ಪಾದ್ರಿ ಆಗುವನೆಂಬ ತಮ್ಮ ಮಹದಾಸೆಗೆ ಎಳ್ಳು-ನೀರು ಬಿಟ್ಟರು.

ಈ ನಡುವೆ ಶಾಲಾ ಸೇವೆಯಿಂದ ನಿವೃತ್ತಿ ಹೊಂದಿದ ಮಾಸ್ಟರ್-ಸುಜಾತಮ್ಮ ಚರ್ಚಿನಲ್ಲಿ ಸೇವೆ ಮಾಡಿ ಬಂದ ಗೌರವ ಧನದಲ್ಲೇ ಬದುಕು ಸಾಗಿಸುತ್ತಿದ್ದರು. ಇವರು ಬ್ಯಾಂಕಿನಲ್ಲಿ ತಮ್ಮ ಇಳಿಗಾಲದ ಕಾಯಿಲೆ-ಕಸಾಲೆ, ಅನುವು-ಆಪತ್ತಿಗೆಂದು ಇಟ್ಟಿದ್ದ ಡೆಪಾಸಿಟ್ ಮೇಲೆ ಸಂತೋಷನ ಕಣ್ಣು ಬಿದ್ದು ಅದನ್ನು ತಾನು ಆರಂಭಿಸಲಿರುವ ಫೈನಾನ್ಸ್ ಬಿಜಿನೆಸ್‌ನಲ್ಲಿ ತೊಡಗಿಸಲು ಕೊಡಬೇಕೆಂದು ಪೀಡಿಸಲಾರಂಭಿಸಿದ್ದ. ಆ ಹಣವನ್ನೇನಾದರೂ ಸಂತೋಷನಿಗೆ ಒಪ್ಪಿಸಿದರೆ ತಾವು ನಾಳೆ ಬೀದಿ ಭಿಕಾರಿ-ಹಾದಿ ಹೆಣವಾಗುವುದು ನಿಶ್ಚಿತ ಎಂಬ ಅರಿವು ಮಾಸ್ಟರ್ ದಂಪತಿಗೆ ಸ್ಪಷ್ಟವಾಗಿ ಇದ್ದಿತು. ಆದ್ದರಿಂದ ಸಂತೋಷನಿಗೆ ಬಿಡಿಗಾಸೂ ಕೊಡುವುದಿಲ್ಲ ಎಂದು ಖಡಾಖಂಡಿತವಾಗಿ ಸ್ಪಷ್ಟಪಡಿಸಿದರು. ಹೀಗಾಗಿ ಸಂತೋಷ- ಅವರ ಮಧ್ಯೆ ಈ ವಿಷಯಕ್ಕಾಗಿ ಸಾಕಷ್ಟು ಬಾರಿ ಜಟಾಪಟಿ ನೆಡೆಯುತ್ತಿತ್ತು.

ಇತ್ತೀಚೆಗಂತೂ ಸಂತೋಷನ ಗಲಾಟೆಗಳಿಂದಾಗಿ ಬೇರೆಯವರಿಗೆ ತೊಂದರೆ ಆದಾಗಲೆಲ್ಲ ಇವರು ಅವರಲ್ಲಿ ಕ್ಷಮೆ ಯಾಚಿಸುವುದರಿಂದ ಶುರುವಾಗಿ, ಬರ್ತಾ ಬರ್ತಾ ಪೊಲೀಸ್‌ ಕೇಸು ಆದಾಗ ಅವನನ್ನು ಜಮೀನಿನ ಮೇಲೆ ಬಿಡಿಸಿಕೊಂಡು ಬರುವವರೆಗೂ ಹೋಗಿ ಇತ್ತೀಚೆಗಂತೂ ಇಂಥದ್ದು ಸಾಮಾನ್ಯವೆಂಬಂತೆ ಆಗಿಬಿಟ್ಟಿತ್ತು. ಬಹಳಷ್ಟು ಸಾರಿ ಮಾಸ್ಟರ್ ದಂಪತಿಗೆ ‘ಯಾವ ಪಾಪಕ್ಕೆ ಸ್ವಾಮಿ ಯೇಸು ತಮಗೆ ಇಂಥ ಶಿಕ್ಷೆ ಕೊಡುತ್ತಾ ಇದ್ದಾನೋ’ ಎಂಬ ಯೋಚನೆ ಕಾಡಿ ಕಳವಳದಿಂದ ತಮ್ಮನ್ನು ಹಾಗೂ ಸಂತೋಷನನ್ನು ಕ್ಷಮಿಸುವಂತೆ ಪ್ರಾರ್ಥಿಸುತ್ತಿದ್ದರು.

*** 

ಮತ್ತೆ ಹೆಗಲು ಬದಲಾಯಿಸಿದ ಬೇತಾಳ ವಿಕ್ರಮನನ್ನುದ್ದೇಶಿಸಿ ‘ಹೂಂ! ಕಥೆ ಅಂತೂ ಒಂದು ಹಂತಕ್ಕೆ ಬಂದಂತಾಯಿತು. ಅಲ್ಲವೇ? ಈಗ ಖಂಡಿತ ನಿನಗೆ ಕಥೆಯ ಅಂತ್ಯದ ಕುರಿತು ಕುತೂಹಲ ಮೂಡಿರಬಹುದು. ಹಾಗಾದ್ರೆ ನಾನು ಕಥೆ ಹೇಳ್ತಾ ಇರೋದು ಸಾರ್ಥಕವಾಯಿತು. ಇನ್ನೇನು ಕೊನೆ ಹಂತದಲ್ಲಿದ್ದೀವಿ. ಸ್ವಲ್ಪ ಸಮಾಧಾನಿಯಾಗಿರು’ ಎಂದು ಕಥೆಯ ಅಂತ್ಯ ಹೇಳತೊಡಗಿತು.

***

ಕೆಲವು ದಿನಗಳ ನಂತರ ಸ್ಥಳೀಯ ಪತ್ರಿಕೆಯಲ್ಲಿ ಸುದ್ದಿಯೊಂದು ಈ ಕೆಳಗಿನಂತೆ ಪ್ರಕಟಗೊಂಡಿತು.

‘ಹಣಕ್ಕಾಗಿ ಹೆತ್ತವರನ್ನೇ ಕೊಲೆ ಮಾಡಿದ ಪುತ್ರ’

‘ತನ್ನ ದುರಭ್ಯಾಸಗಳಿಗೆ ಕೇಳಿದಷ್ಟು ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಆಕ್ರೋಶಗೊಂಡ ಮಗನು ಮಲಗಿದ್ದ ತನ್ನ ತಂದೆಯನ್ನು ದಿಂಬಿನಿಂದ ಅದುಮಿ ಹಿಡಿದು ಉಸಿರುಗಟ್ಟಿಸಿ ಕೊಂದುದಷ್ಟೇ ಅಲ್ಲ ಬಿಡಿಸಲು ಬಂದ ತನ್ನ ತಾಯಿಯ ಹಣೆಗೆ ಕಬ್ಬಿಣದ ಸರಳಿನಿಂದ ಬಲವಾಗಿ ಪ್ರಹಾರ ಮಾಡಿದ್ದರಿಂದ ಆಕೆ ತೀವ್ರ ರಕ್ತಸ್ರಾವದಿಂದಾಗಿ ಅಸು ನೀಗಿದ್ದಾಳೆ.

ಗಲಾಟೆಯಿಂದ ಎಚ್ಚೆತ್ತ ನೆರೆಹೊರೆಯವರು ಕೊಲೆ ಮಾಡಿ ಓಡಿಹೋಗುತ್ತಿದ್ದ ಪುತ್ರ ಸಂತೋಷನನ್ನು(25) ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕೊಲೆಯಾದವರು ಪ್ರಕಾಶ ಡಿಸೋಜಾ (70) ಹಾಗೂ ಸುಜಾತಮ್ಮ ಡಿಸೋಜಾ (65) ಎಂದು ತಿಳಿದುಬಂದಿದೆ.’ 

***

ಕಥೆ ಹೇಳಿ ಮುಗಿಸಿದ ಬೇತಾಳವು ‘ಎಲೈ ರಾಜ! ಕಥೆ ಕೇಳಿಯಾದ ಮೇಲೆ ನಿನ್ನನ್ನೂ ಕೆಲವು ಪ್ರಶ್ನೆಗಳು ಕಾಡಿರಬಹುದು.

ತಮ್ಮ ಶಾಲೆಯಲ್ಲಿ ಕಲಿತ ನೂರಾರು ಮಕ್ಕಳ ಉಜ್ವಲ ಭವಿಷ್ಯ-ವ್ಯಕ್ತಿತ್ವ ರೂಪಿಸಿದ ಪ್ರಕಾಶ್-ಸುಜಾತಮ್ಮ ದಂಪತಿಗಳಿಗೆ ಮಗ ಸಂತೋಷನ ಪಾಲನೆಯ ವಿಷಯದಲ್ಲೇಕೆ ಸೋಲುಂಟಾಯಿತು? ಅವರ ಧಾರ್ಮಿಕ ಆಚರಣೆಗಳ ಪ್ರಭಾವ ಸಂತೋಷನ ಮೇಲೇಕೆ ಆಗಲಿಲ್ಲ? ಅವನು ಹೀಗೆ ದುಷ್ಟ ಸಮಾಜಘಾತುಕನಾಗಿ ತಯಾರಾಗಿದ್ದಕ್ಕೆ ಕೇವಲ ಹೊರಗಿನ ಸಹವಾಸವಷ್ಟೇ ಕಾರಣವೇ? ಅಥವಾ ಅತಿಯಾದ ಧಾರ್ಮಿಕತೆಯ ಪವಿತ್ರತೆಯ ಸೋಗಿನಿಂದ ರೋಸಿಹೋಗಿ ಅದರಿಂದ ಬಿಡುಗಡೆ ಹೊಂದಲೆಂದೇ ಬಂಡೆದ್ದು ಸಂತೋಷ ಧರ್ಮವಿರೋಧಿಯಾದನೆ?’

ಕೊನೆಗೆ ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುವ ಕಾರಣೀಭೂತ ಅಂಶ ಯಾವುದು? ತಂದೆ-ತಾಯಿ, ಗುರು ಹಿರಿಯರು ನೀಡುವ ಸಂಸ್ಕಾರವೇ? ಶಾಲೆ-ಕಾಲೇಜುಗಳಲ್ಲಿ ಕೊಡುವ ಶಿಕ್ಷಣವೇ? ಬೆಳೆದು ಬಾಳುವ ಪರಿಸರವೇ? ಮನೆ ಹೊರಗಿನ ಆವರಣದಲ್ಲಿ ಸಿಗುವ ಗೆಳೆಯರ ಸಾಂಗತ್ಯವೇ? ಜೀವನದ ಕಷ್ಟ-ನಷ್ಟಗಳು ಕಲಿಸುವ ಪಾಠವೇ?

ಎಲೆ ರಾಜನೇ! ಈ ಎಲ್ಲ ಪ್ರಶ್ನೆಗಳಿಗೆ ನೀನು ಉತ್ತರಿಸಲೇಬೇಕು. ಇಲ್ಲದೆ ಹೋದಲ್ಲಿ ನಿನ್ನ ತೆಲೆ ಸಿಡಿದು ಸಾವಿರ ಹೋಳಾಗಿ ಹೋಗುತ್ತದೆ. ಹೇಳು ಬೇಗ ಹೇಳು’ ಎಂಬುದಾಗಿ ದುಂಬಾಲು ಬಿದ್ದಿತು.

ಕಥೆ ಕೇಳುತ್ತಾ ಮೈ ಮರೆತ್ತಿದ್ದ ರಾಜ ವಿಕ್ರಮನು ಬಾಯ್ದೆರೆದು ಈ ರೀತಿಯಾಗಿ ಉತ್ತರಿಸಿದನು- ‘ಎಲೈ ಬೇತಾಳವೇ! ನಿನ್ನ ಪ್ರಶ್ನೆಗೆ ನಾನು ಉತ್ತರ ನೀಡುತ್ತಿರುವುದು ನನ್ನ ಕರ್ತವ್ಯ ಪ್ರಜ್ಞೆಯಿಂದಲೇ ಹೊರತು, ನನ್ನ ತೆಲೆ ಸಾವಿರ ಹೋಳಾಗುತ್ತದೆ ಎಂಬ ಭೀತಿಯಿಂದಲ್ಲ.’

‘ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಬಾಲ್ಯದಲ್ಲಿ ದೊರೆವ ಸಂಸ್ಕಾರ-ಶಿಕ್ಷಣ ಪ್ರಮುಖ ಪಾತ್ರವಹಿಸುತ್ತವೆ ಎಂಬುದು ನಿಜವಾದರೂ ಅಂತಿಮವಾಗಿ ವ್ಯಕ್ತಿತ್ವ ರೂಪಿಸುವಲ್ಲಿ ಸುತ್ತಲಿನ ವಾತಾವರಣವೇ ಕಾರಣೀಭೂತ ಅಂಶವಾಗುತ್ತದೆ. ಚಿಕ್ಕವಯಸ್ಸಿನಲ್ಲಿ ತಂದೆ-ತಾಯಿ, ಗುರು-ಹಿರಿಯರ ಪ್ರಭಾವ ಮಗುವಿನ ಮೇಲೆ ಆಗುತ್ತದೆ ಎಂಬುದು ನಿಜ. ಆದರೆ ಒಮ್ಮೆ ಕುಟುಂಬದ ಸೀಮಿತ ಆವರಣ ದಾಟಿ ವಿಶಾಲ ಜಗತ್ತಿನಲ್ಲಿ ಸ್ವಾತಂತ್ರ್ಯಸವಿಯಲಾರಂಭಿಸಿದಾಗ ಆವರೆಗೆ ಅದುಮಿಟ್ಟಿದ್ದ ವಾಂಛೆಗಳೆಲ್ಲವೂ ಹೆಡೆಯೆತ್ತಿ ನರ್ತಿಸುತ್ತವೆ. ಯೌವ್ವನದ ಹೊಳೆಯಲ್ಲಿ ವಿಹರಿಸುವಾಗ ಮನಸ್ಸು ಇಲ್ಲಿಯವರೆಗೆ ಸುಪ್ತವಾಗಿದ್ದ ಆಸೆಗಳ ಈಡೇರಿಕೆಗೆ ಹವಣಿಸುತ್ತದೆ. ಆಗ ಗುರು-ಹಿರಿಯರು ವಿಧಿಸಿದ ಕಟ್ಟುಪಾಡುಗಳು, ಬಾಲ್ಯದಲ್ಲಿ ಕಲಿತ ನೀತಿ ಪಾಠಗಳು ಇವ್ಯಾವೂ ಮಕ್ಕಳು ಅಡ್ಡದಾರಿ ಹಿಡಿಯುವುದನ್ನು ತಪ್ಪಿಸಲು ನೆರವಾಗುವುದಿಲ್ಲ. ಯಾಕಂದರೆ ಯೌವ್ವನದಲ್ಲಿ ನೆನಪುಗಳಿರುವುದಿಲ್ಲ, ಬರೀ ಕನಸು ಕಾಡುತ್ತವೆ. ಅಂತೆಯೇ ವಯಸ್ಸಾದಾಗ ಕನಸುಗಳಿರುವುದಿಲ್ಲ, ಬರೀ ನೆನಪು ಕಾಡುತ್ತವೆ.’

‘ಈ ಹಂತದಲ್ಲಿ ದುಷ್ಟರ ಸಹವಾಸ ಲಭಿಸಿದರೆ ಇದುವರೆಗೆ ದೊರೆತ ಸಂಸ್ಕಾರದ ಪ್ರಭಾವ ಕಳಚಿಕೊಂಡು ಮನಸ್ಸು ಸುಲಭ ಸುಖ ಪಡೆಯಲು ಹವಣಿಸುತ್ತದೆ. ಹೀಗಾದಾಗ ‘ತಮ್ಮ ಮಕ್ಕಳು ತಮ್ಮ ಪ್ರತಿರೂಪವಾಗಲಿ’ ಎಂದು ಹೆತ್ತವರು ಕಂಡಿದ್ದ ಕನಸಿನ ಕನ್ನಡಿ ಒಡೆದು ಚೂರಾಗುತ್ತದೆ’ ಎಂದು ನುಡಿದ ರಾಜನು ‘ಅತಿಯಾದ ಧಾರ್ಮಿಕ ಪವಿತ್ರತೆಯ ಸೋಗಿನಿಂದ ಸಂತೋಷ ರೋಸಿಹೋಗಿದ್ದ ಎನ್ನುವುದು ಕೂಡ ಸ್ವಲ್ಪಮಟ್ಟಿಗೆ ಕಾರಣವಾಗಿರಬಹುದು’ ಎನ್ನುತ್ತಾ ತನ್ನ ಉತ್ತರವನ್ನು ಪೂರ್ಣಗೊಳಿಸಿದನು.

ಹೀಗೆಂದು ರಾಜನು ಉತ್ತರಿಸುತ್ತಿದ್ದಂತೆ ಬೇತಾಳವು ‘ಭಲೇ ರಾಜನ್! ಬಲು ಕ್ಲಿಷ್ಟ ಸಮಸ್ಯೆಗೆ ಪ್ರಾಮಾಣಿಕ ಉತ್ತರ ನೀಡುವ  ನಿನ್ನ ಜಾಣ್ಮೆ ಮೆಚ್ಚುವಂಥದು. ನೀನು ಹೇಳಿದ್ದೇ ಬಹುಪಾಲು ಸತ್ಯ. ಆದರೆ ನಿನ್ನ ಮೌನ ಮುರಿದು ಉತ್ತರಿಸಿದೆ. ಆ ಕಾರಣಕ್ಕಾಗಿ ನಾನೀಗ ಮತ್ತೆ ಸ್ವತಂತ್ರ’ ಎಂದು ವಿಕಾರವಾಗಿ ಕಿರುಚುತ್ತಾ, ನಗುತ್ತಾ ಮತ್ತೆ ತನ್ನ ಮೂಲಸ್ಥಾನ ಸೇರಿತು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.