ಶನಿವಾರ, ಅಕ್ಟೋಬರ್ 1, 2022
20 °C

ಜ್ಯೋತಿ ಅವರ ಕಥೆ: ತಾತ ಮೌನ ಮುರಿದಾಗ…

ಜ್ಯೋತಿ Updated:

ಅಕ್ಷರ ಗಾತ್ರ : | |

ಹೊರಗೆ, ಮಧ್ಯಾಹ್ನದ ಸುಡು ಬಿಸಿಲು. ಮನೆಯ ನನ್ನ ಸ್ಟಡಿ ರೂಮಿನಲ್ಲಿ ಟೇಬಲ್ ಮೇಲೆ ಲ್ಯಾಪ್‌ಟಾಪ್ ಎದುರಿಟ್ಟುಕೊಂಡು ಕಥೆಯೊಂದನ್ನು ಟೈಪ್ ಮಾಡುತ್ತಾ ಕೂತವಳಿಗೆ, ಹಾಗೆಯೇ ಕಣ್ಣಿಗೆ ಜೋಂಪು ಹತ್ತಿದಂತೆನಿಸಿ, ಸ್ವಲ್ಪ ಹೊತ್ತು ಹೊರಗೆ ವಾಕಿಂಗ್ ಮಾಡಿದರೆ, ನಿದ್ರೆ ಕಡಿಮೆಯಾಗಬಹುದೆನಿಸಿತು. ಮನೆಯೆದುರು, ರಸ್ತೆಯ ಆ ಕಡೆಗಿದ್ದ ಪಾರ್ಕಿನತ್ತ ನಿಧಾನವಾಗಿ ಹೆಜ್ಜೆ ಇಡತೊಡಗಿದೆ. ಅಲ್ಲಿನ ಕಲ್ಲುಬೆಂಚುಗಳು ಬಹುತೇಕವಾಗಿ ಖಾಲಿಯಾಗಿದ್ದಂತೆ ಕಂಡುಬಂದವು. ಗಂಟೆ ಸುಮಾರು ಎರಡಾಗಿದೆ ಅನ್ನಿಸುತ್ತೆ.

ಮನೆಯಲ್ಲಿರುವವರು, ಸಾಮಾನ್ಯವಾಗಿ ಈ ಹೊತ್ತಿನಲ್ಲಿ ಊಟಮಾಡಿ ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳುವ ಸಮಯ. ನನ್ನ ಮನೆಯಿರುವುದು ಒಂದು ಸುವ್ಯವಸ್ಥಿತ ಲೇಔಟ್‌ನಲ್ಲಿ ಇದ್ದುದರಿಂದ, ಅದರೊಳಗಿನ ರಸ್ತೆಗಳಲ್ಲಿ ವಾಹನಗಳ ಮತ್ತು ಜನರ ಓಡಾಟ ತೀರಾ ಕಡಿಮೆಯೆನ್ನಬಹುದು. ವಿಶೇಷವಾಗಿ, ಮಧ್ಯಾಹ್ನದ ಹೊತ್ತಂತೂ, ಸಂಪೂರ್ಣ ನಿಶ್ಯಬ್ದವೆನ್ನಬಹುದು. ನಡೆಯುತ್ತಾ, ಪಾರ್ಕಿನ ಕೀರಲು ಸದ್ದಿನ ಗೇಟನ್ನು ತಳ್ಳುತ್ತಾ ಒಳಗೆ ಕಾಲಿಟ್ಟಂತೆ, ಮೈಗೆ ತಣ್ಣಗಿನ ಅನುಭವ. ಆಕಾಶಕ್ಕೆ ಚಪ್ಪರದಂತೆ ಹಾಸಿದ್ದ ಮರಗಳ ಎಲೆಗಳು ಪಾರ್ಕಿಗೆ ಸಂಪೂರ್ಣ ನೆರಳು ನೀಡಿದ್ದವು. ಕೈಕಾಲು ಬೀಸುತ್ತಾ ಮುಂದುವರಿದಂತೆ ಮನಸ್ಸಿಗೆ ಹಾಯೆನಿಸಿತು. ಆವರಿಸಿದ್ದ ಮೌನವನ್ನು ಸೀಳಿಕೊಂಡು, ಅಲ್ಲೊಮ್ಮೆ ಇಲ್ಲೊಮ್ಮೆ ತೇಲಿಬರುವ, ಮರದ ರೆಂಬೆಗಳಲ್ಲಿ ಕುಳಿತು ಸಂಭಾಷಿಸುವ ಹಕ್ಕಿಗಳ ನಿನಾದ ಕಿವಿಗಳಿಗೆ ಇಂಪೆನಿಸಿತು. 

ಶಾಂತವಾಗುತ್ತಿರುವ ಮನಸ್ಸು ಹಗುರಾಗಿ ಎಲ್ಲೊ ತೇಲಿ ಹೋದಂತೆನಿಸಿ, ಮೌನವಾಗಿ ನಡೆಯುತ್ತಾ ಮುಂದುವರಿದಂತೆ, ಪಾರ್ಕಿನ ಮಧ್ಯದಲ್ಲಿ ಸ್ಥಾಪಿತವಾಗಿದ್ದ ಗಾಂಧಿ ಮೂರ್ತಿಯತ್ತ ಒಮ್ಮೆ ಕಣ್ಣು ಹಾಯಿಸಿದರೆ, ಅಲ್ಲಿ ಗಾಂಧಿ ಇರಲಿಲ್ಲ. ‘ಅರೆ! ನಿನ್ನೆ ಇತ್ತಲ್ಲಾ! ಯಾವ ಮನೆಹಾಳರ ಕೆಲಸವಿದು? ಶಾಂತಿ ದೂತ ಗಾಂಧಿಯ ಪ್ರತಿಮೆಯನ್ನು ಬಿಡದಷ್ಟು ಅಸಹಿಷ್ಣುತೆಯೇ? ಜೀವಂತ ಗಾಂಧಿಯನ್ನು ನಾವು ಹೇಗೂ ಸಹಿಸಿಕೊಳ್ಳಲಿಲ್ಲ. ಛೇ, ಎಂಥಾ ಕಾಲ ಬಂತಪ್ಪ! ಆದರೆ, ಸದಾ ಸುದ್ದಿಯ ಬೆನ್ನುಹತ್ತುವ ಮಾಧ್ಯಮಗಳ ಗಮನಕ್ಕೆ ಇದಿನ್ನೂ ಬಂದಿಲ್ಲವೇ? ಅಥವಾ, ಗಾಂಧಿ ಅವರೂ ಚಲಾವಣೆಯಿಲ್ಲದ ನಾಣ್ಯವಾಗಿದ್ದಾರೆಯೇ?... ನನ್ನಷ್ಟಕ್ಕೆ ಗೊಣಗುತ್ತಾ ವಾಕಿಂಗ್ ಮುಂದುವರಿಸಿದೆ. ಪಾರ್ಕಿನ ಮಧ್ಯದಲ್ಲಿ ದಟ್ಟವಾಗಿ ಹರಡಿದ್ದ ಪೊದೆಗಳ ಸಂದಿಯ ನಡುವೆ ಮೆತ್ತನೆಯ ಧ್ವನಿಯೊಂದು ಹೇಳಿದಂತೆನಿಸಿತು- ‘ಇಲ್ಲ, ನನಗೆ ಯಾರು ಏನೂ ಮಾಡಿಲ್ಲ. ಸ್ವಲ್ಪ ದಣಿವೆನಿಸಿ ಇಲ್ಲಿ ಬಂದು ಕುಳಿತೆ ಅಷ್ಟೇ.’

ಒಂದು ಕ್ಷಣ ನನ್ನ ಕಾಲುಗಳು ಅಲ್ಲಿಯೇ ನಿಂತು ಬಿಟ್ಟವು. ಆ ದಿಕ್ಕಿನತ್ತ ಕತ್ತು ತಿರುಗಿಸಿ ನೋಡಿದೆ. ಅಲ್ಲೊಂದು ಪುಟ್ಟ ಕಲ್ಲು ಬೆಂಚಿನ ಮೇಲೆ ಹಿರಿಯ ಜೀವವೊಂದು ನನ್ನತ್ತ ಬೆನ್ನು ತಿರುಗಿಸಿ ಕುಳಿತಿದ್ದಂತೆ ಭಾಸವಾಯಿತು. ಯಾರಿರಬಹುದು, ಈ ಮಧ್ಯಾಹ್ನದ ಹೊತ್ತಿನಲ್ಲಿ?... ಸಾಮಾನ್ಯವಾಗಿ ಹಿರಿಯ ನಾಗರಿಕರು ಮಧ್ಯಾಹ್ನ ಊಟದ ನಂತರ ಸಣ್ಣ ನಿದ್ದೆ ಮಾಡಿ, ಸಂಜೆಯ ಟೀ, ಕಾಫಿ ಕುಡಿದುಕೊಂಡು ವಾಕಿಂಗ್ ನೆಪದಲ್ಲಿ ಮನೆಯಾಚೆ ಕಾಲಿಡುತ್ತಾರೆ. ಈ ಮನುಷ್ಯನಿಗೆ ತನ್ನವರಾರಿಲ್ಲವೆನಿಸುತ್ತದೆ. ಅಥವಾ, ಸ್ವಂತ ಸೂರಿಲ್ಲದಿರಬಹುದು. ಛೆ, ದುರಂತವಿದು! ಹಿರಿಯರನ್ನು ಗೌರವದಿಂದ ಕಂಡ ಶ್ರೇಷ್ಠ ಸಂಸ್ಕೃತಿಯ ನಾಡಿದು. ಆದರೆ, ಈಗ ಇಲ್ಲಿ ವೃದ್ಧರನ್ನು ಕೇಳುವವರಿಲ್ಲ. ಇದೆಂತಹ ಪಾಶ್ಚಾತ್ಯ ಪ್ರಭಾವ! ಪಾಪ...ಊಟವಾಗಿದೆಯೋ, ಇಲ್ಲವೋ? ಹೋಗಿ ವಿಚಾರಿಸಲೇ?... ಸುತ್ತಲೂ ನೋಡಿದರೆ, ಬೇರೆ ಯಾರೂ ಕಾಣಿಸುತ್ತಿಲ್ಲ. ಇಡೀ ಪಾರ್ಕ್ ಖಾಲಿಯಾಗಿದೆ. ಒಬ್ಬಳೇ ಹೋಗಿ ವಿಚಾರಿಸಲು ಸ್ವಲ್ಪ ಆತಂಕ ಕೂಡ. ನಮ್ಮ ನಗರಗಳಲ್ಲಿ ಇಂದು ಮನುಷ್ಯರಿಗೆ ಮನುಷ್ಯರ ಮೇಲೆ ನಂಬಿಕೆ ಕಳೆದುಹೋಗಿದೆ. ಯಾರನ್ನು ನಂಬುವುದು?... ಹಾಗಾಗಿ, ಮನುಷ್ಯ ಪ್ರಾಣಿಗಳ ಸಾಂಗತ್ಯ ಬಯಸುವುದು ಹೆಚ್ಚಾಗುತ್ತಿದೆ. ಆದರೂ ಮಾನವೀಯ ಸ್ಪಂದನೆಗಾಗಿ ಧೈರ್ಯ ಮಾಡಿ ಅತ್ತ ಹೆಜ್ಜೆ ಹಾಕ ತೊಡಗಿದೆ.

‘ಬಾ, ಮಗಳೇ ಇಲ್ಲಿ...  ಕುಳಿತುಕೋ’. ಆ ವ್ಯಕ್ತಿ ನನ್ನತ್ತ ಮುಖ ತಿರುಗಿಸಿ ಕೈಬೀಸಿ ಕರೆದಾಗ, ಒಂದು ಕ್ಷಣ ನನಗೆ ದಿಗಿಲಾಯಿತು. ನೋಡಿದರೆ, ಥೇಟ್ ಗಾಂಧಿ ತಾತನದ್ದೇ ಹೋಲಿಕೆ. ಅದೇ ಬೋಳು ತಲೆ. ಮೂಗಿನ ಮೇಲಿನ ವೃತ್ತಾಕಾರದ ವಿಂಡ್ಸರ್ ಶೈಲಿಯ ಕನ್ನಡಕ, ಕೈಯಲ್ಲಿ ಹಿಡಿದ ಕೋಲು, ಅದೇ ಮುಗುಳ್ನಗೆ, ಮೈಮೇಲೆ ಹೊದ್ದಿರುವ ಬಿಳಿ ಶಾಲು. ನೋಡಿ ನನಗೆ ಆಶ್ಚರ್ಯ, ಭಯ ಒಟ್ಟಿಗೆ ಆಯಿತು. ಇದು ಹೇಗೆ ಸಾಧ್ಯ? ಶಾಲೆಗಳ ಛದ್ಮವೇಷ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಗಾಂಧಿ ತಾತನಂತೆ ವೇಷ ಧರಿಸಿ ನಡೆದಾಡುವುದು ಸಾಮಾನ್ಯ ದೃಶ್ಯವಾಗಿತ್ತು. ಆದರೆ, ಯಾರು ಕೂಡ ಗಾಂಧಿಯನ್ನು ಸಂಪೂರ್ಣವಾಗಿ ನಕಲು ಮಾಡಲು ಅಸಾಧ್ಯವೆನ್ನುವುದು ನನ್ನ ದೃಢವಿಶ್ವಾಸವಾಗಿತ್ತು. ಆದರೆ, ಈ ವ್ಯಕ್ತಿ ಮಾತ್ರ ಗಾಂಧಿಯ ಸದೃಶ ರೂಪದಂತಿದ್ದಾರೆ. ಏನಿದು ವಿಚಿತ್ರ!

ನಾನು ಕದಲದೆ ನಿಂತುಕೊಂಡು ಅವರನ್ನೇ ದಿಟ್ಟಿಸುತ್ತಾ ಕಳೆದುಹೋಗಿ ಬಿಟ್ಟೆ. ತಾತ, ನನ್ನ ಪುನಃ ಕರೆದು ಎಚ್ಚರಿಸಿದರು, ‘ಬಾ, ಮಗಳೇ, ಇಲ್ಲಿ ಕುಳಿಕೋ. ನಿನ್ನಲ್ಲಿ ಮಾತನಾಡಬೇಕಿದೆ’.  ಅವರ ಆಣತಿಯಂತೆ ನನ್ನ ಕಾಲುಗಳು ನಿಧಾನವಾಗಿ ಅತ್ತ ಚಲಿಸಲಾರಂಭಿಸಿದವು. ಹೋಗಿ ಮೌನವಾಗಿ ಕುಳಿತುಕೊಂಡೆ. ಒಂದು ಕ್ಷಣ ಏನು ಹೇಳಬೇಕೆಂದು ತೋಚದಾಯಿತು. ತಾತನೇ ಮಾತು ಶುರುಮಾಡಿದರು.

‘ಇತ್ತೀಚೆಗಿನ ವರ್ಷಗಳಲ್ಲಿ, ನಿಂತುಕೊಳ್ಳಲಾಗದೆ ಕುಸಿದು ಹೋಗುವಷ್ಟು ಕಾಲುಗಳು ನೋಯುತ್ತಿವೆ. ಅದಕ್ಕಾಗಿಯೇ, ಸ್ವಲ್ಪ ಹೊತ್ತು ಕುಳಿತುಕೊಳ್ಳಬೇಕೆನಿಸಿತು’. 

ಇದೆಲ್ಲಾ ವಯೋಸಹಜ ಸಮಸ್ಯೆಗಳು. ಆದರೂ ಪಾಪವೆನಿಸಿ, ಅವರ ಸಂಕಟಗಳನ್ನು ಸ್ವಲ್ಪ ಹೊತ್ತು ಆಲಿಸಬೇಕೆನಿಸಿತು. ನಾನು ಗಮನಿಸಿದಂತೆ, ಈ ವಯಸ್ಸಿನಲ್ಲಿ ಜನರಿಗೆ ಅವರ ಮಾತನ್ನು ಮೌನವಾಗಿ ಕೇಳುವ ಕಿವಿಗಳು ಬೇಕೇ ಹೊರತು, ವಿಮರ್ಶಿಸುವ ಬಾಯಿಗಳಲ್ಲ. ಹಾಗಾಗಿ, ಈ ತಾತನಿಗೆ ಕಿವಿಗೊಡುವುದೇ, ನಾನು ಮಾಡಬಹುದಾದ ಸಹಾಯವೆನಿಸಿತು. ಸಹಾನುಭೂತಿಗಾಗಿ ಅವರಲ್ಲಿ ಹೇಳಿದೆ.

‘ತಾತ, ಒಮ್ಮೆ ಮೂಳೆ ಡಾಕ್ಟರ್ ಹತ್ರ ತೋರಿಸಿ. ಔಷಧವೇನಾದರೂ ಕೊಡಬಹುದು’. 

ತಾತ ತನ್ನ ಬೊಚ್ಚು ಬಾಯಿ ಅಗಲಿಸಿ ನಕ್ಕರು. ಒಂದು ಕ್ಷಣ ಆಕಾಶದತ್ತ ಮುಖ ಮಾಡಿ, ಆಮೇಲೆ, ನನ್ನತ್ತ ಕತ್ತು ತಿರುಗಿಸಿ ನಿಧಾನವಾಗಿ ಹೇಳಿದರು, ‘ಈಗ ನನಗೆ ಡಾಕ್ಟರ್ ಅಗತ್ಯವಿಲ್ಲ ಅನ್ನಿಸುತ್ತೆ, ಮಗಳೇ. ಬಹುಶಃ, ಯಾವ ಡಾಕ್ಟರ್ ಕೂಡ ನನ್ನ ವಾಸಿ ಮಾಡಲಾರರು. ನನ್ನ ಕಾಯಿಲೆಯ ಮೂಲ ಮನಸ್ಸಿನಾಳದಲ್ಲಿದೆ. ಅಲ್ಲಿ ಎದ್ದಿರುವ ಬಿಸಿ ತಣ್ಣಗಾಗದೆ, ದೇಹಕ್ಕೆಷ್ಟು ಉಪಚಾರ ಮಾಡಿದರೇನು? ಕಳೆದ ಹಲವಾರು ವರ್ಷಗಳಿಂದ ನನ್ನೊಳಗೆ ಕಾಡುತ್ತಿರುವ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹುಡುಕುತ್ತಾ, ಒಂದು ಕ್ಷಣ ಕೂತು ಸ್ವವಿಮರ್ಶೆ ಮಾಡಬೇಕೆನಿಸಿತು. ಇತ್ತೀಚೆಗಿನ ದಿನಗಳಲ್ಲಿಯಂತೂ ದೇಶದ ಎಲ್ಲಾ ಪ್ರಸಕ್ತ ಸಮಸ್ಯೆಗಳಿಗೆ, ನನ್ನತ್ತ ಬೆರಳು ಮಾಡಿ ತೋರಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ಇದು, ನನಗೆ ನಾನು ಕನ್ನಡಿ ಹಿಡಿಯಲು ಒತ್ತಾಯಿಸುವಂತೆ ಮಾಡಿದೆ. ಹೀಗಾಗಿ, ನನ್ನ ಬದುಕನ್ನೇ ಪುನರ್ ವಿಮರ್ಶೆಗೆ ಹಚ್ಚುತ್ತಾ ಕುಳಿತೆ. ಪ್ರಶ್ನೆಗಳ ನಾನೇ ಹುಟ್ಟು ಹಾಕಿ, ಉತ್ತರ ಕಂಡು ಹಿಡಿಯುವ ಪ್ರಯತ್ನ ಮಾಡುತ್ತಿರುವೆ. ನಿನ್ನಲ್ಲಿ ಮಾತನಾಡುತ್ತಾ ಯೋಚಿಸಿದರೆ, ನನ್ನ ಕೆಲಸ ಸುಲಭವಾಗಬಹುದೇನೋ... ಸಂವಾದದಲ್ಲಿ ನಾನಿನ್ನೂ ನಂಬಿಕೆ ಉಳಿಸಿಕೊಂಡಿದ್ದೇನೆ’. 

ನನಗೆ ನಗು ಬಂತು. ತಾತ ಮುಂದುವರಿಸಿದರು.

‘ಇಷ್ಟು ದಿನ ನಾನು ಮೌನವಾಗಿದ್ದೆ. ಆದರೆ, ನನ್ನ ಈ ಮೌನವನ್ನು ತಪ್ಪಾಗಿ ಅರ್ಥೈಸಿಕೊಂಡು, ನನ್ನ ಮೇಲಿನ ಆಪಾದನೆಗಳನ್ನು ಒಪ್ಪಿಕೊಂಡೆನೆಂದೇ ತಿಳಿದುಕೊಂಡು ಬಿಟ್ಟಿದ್ದಾರೆ. ವಿಶೇಷವಾಗಿ, ಇಂದಿನ ಜನನಾಯಕರುಗಳು, ತಮ್ಮ ವೈಫಲ್ಯತೆಗಳನ್ನು ಮುಚ್ಚಿ ಹಾಕಲು, ವರ್ತಮಾನದ ಸಮಸ್ಯೆಗಳಿಗೆ ನನ್ನನ್ನು ದೂಷಿಸುವುದನ್ನು ನಾನು ಗಮನಿಸಿದ್ದೇನೆ. ಇದಕ್ಕೆಲ್ಲಾ ಉತ್ತರಿಸಲು ಎದುರಲ್ಲಿ ಈಗ ನಾನಿಲ್ಲ. ಇದರಲ್ಲಿ, ನನಗೆ ಬಹಳ ನೋವು ತರಿಸುವ ವಿಷಯವೆಂದರೆ, ಈ ವ್ರತಾ ಆಪಾದನೆಗಳನ್ನು ಅಲ್ಲಗಳೆಯುವವರು ಅಲ್ಪಸಂಖ್ಯಾತರಾಗುತ್ತಿದ್ದಾರೆ. ಇದಕ್ಕಿಂತಲೂ ದೊಡ್ಡ ದುರಂತವೆಂದರೆ, ನನ್ನ ಜೀವನ ಸಿದ್ಧಾಂತಗಳನ್ನು ಗಾಳಿಗೆ ತೂರುವ ಮಂದಿ, ತಮ್ಮ ವೈಯಕ್ತಿಕ ಹಿತಾಸಕ್ತಿ ಕಾಪಾಡಿಕೊಳ್ಳುವುದಕ್ಕಾಗಿ ನನ್ನ ಹೆಸರ ಜಪಮಾಡುತ್ತಿರುವುದು ನಿರಾಶೆ ಹುಟ್ಟಿಸುತ್ತಿದೆ. ಇನ್ನೊಂದು ವಿಸ್ಮಯವೆಂದರೆ, ಈ ದೇಶದ ಪ್ರತಿ ಪಟ್ಟಣ, ನಗರಗಳಲ್ಲಿ ನನ್ನ ಹೆಸರಿನ ರಸ್ತೆಗಳಿವೆ ಮತ್ತು ಅವುಗಳೇ ಆ ಪ್ರದೇಶದ ಪ್ರಮುಖ ರಸ್ತೆಗಳಾಗಿರುತ್ತವೆ. ಆದರೆ, ಅವುಗಳು ನನ್ನ ಜೀವನ ಮಾರ್ಗವನ್ನು ಬಿಂಬಿಸುವುದಿಲ್ಲ. ಈ ದಾರಿಯ ಎರಡೂ ಬದಿಯಲ್ಲಿ ತಲೆಯೆತ್ತಿರುವ ಗಗನಚುಂಬಿ ಕಟ್ಟಡಗಳಲ್ಲಿ ಬೃಹತ್ ಉದ್ಯಮಿಗಳ ಹಣದ ಹೊಳೆ ಹರಿದಾಡುತ್ತಿರುತ್ತದೆ. ಇವೆಲ್ಲಾ, ನನ್ನ ನಿಲುವುಗಳಿಗೆ ವಿರುದ್ಧವಾಗಿ ಕಟ್ಟಿರುವ ವ್ಯವಸ್ಥೆ. ಇದಕ್ಕಿಂತ ಹೆಚ್ಚಿನ ಅವಹೇಳನ ನನ್ನ ಸಿದ್ಧಾಂತಗಳಿಗೆ ಮಾಡಲು ಅಸಾಧ್ಯ’. 

‘ತಾತ, ಒಂದು ನಿಮಿಷ. ನೀವು ಏನು ಹೇಳುತ್ತಿದ್ದೀರಿ? ನನಗೆ ಏನೂ ಗೊತ್ತಾಗ್ತಾ ಇಲ್ಲ. ಎಲ್ಲಾ ಗೋಜಲು ಗೋಜಲಾಗಿ ಕಾಣಿಸುತ್ತಿದೆ. ನನ್ನಲ್ಲಿ ಏನು ಹೇಳಬೇಕೆಂದ್ದಿರೋ ಅದನ್ನು ಸ್ಪಷ್ಟವಾಗಿ ಹೇಳಿ’. 

ತಾತ ದೀರ್ಘವಾಗಿ ಉಸಿರೆಳೆದುಕೊಂಡರು. ನಂತರ ನನ್ನನ್ನೇ ಒಂದು ಕ್ಷಣ ದಿಟ್ಟಿಸಿ ಮಾತು ಮುಂದುವರಿಸಿದರು.

‘ಮೊದಲಿಗೆ, ನಾನು ಯಾರೆಂದು ಅರ್ಥಮಾಡಿಕೊಂಡರಷ್ಟೇ, ನಿನಗೆ ನನ್ನ ಕಥೆ, ವ್ಯಥೆ, ನಿಟ್ಟುಸಿರು ಅರ್ಥವಾಗುತ್ತದೆ. ನಾನು ಮೋಹನದಾಸ್ ಕರಮ್ ಚಂದ್ ಗಾಂಧಿ. ನಾನು ಈ ದೇಶದ ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ಬಾಳಿದ್ದೆ ಎಂದು ಅಂದುಕೊಳ್ಳುತ್ತೇನೆ. ನಾನು, ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಒಬ್ಬ ದೇಶಭಕ್ತ’. 

ನನಗೆ ತಾತನ ಮಾತು ತಮಾಷೆಯೆನಿಸಿತು. ಬಹುಶಃ, ಈತ ಹಳೆಯ ತಲೆಮಾರಿನ ಗಾಂಧಿವಾದಿ ಇರಬೇಕು. ಈಗ, ವರ್ತಮಾನ ಕಾಲದಲ್ಲಿ ದೇಶದ ದುರ್ವ್ಯವಸ್ಥೆಯ ನೋಡಿ ತೀವ್ರ ಹತಾಶೆಯಾಗಿ ಬುದ್ದಿ ಭ್ರಮಣೆಗೊಂಡು ಹೀಗೆ ಅಲೆದಾಡುತ್ತಿದ್ದಾರೆ ಅನ್ನಿಸುತ್ತದೆ. ಆದರೂ, ಅವರ ಮಾತಿನಲ್ಲಿ ಏನೋ ಆಕರ್ಷಣೆಯಿದೆ. ಸಂಪೂರ್ಣ ಕೇಳಬೇಕೆನಿಸಿತು. ಇಲ್ಲದಿದ್ದರೆ, ಒಂದು ಸ್ವಾರಸ್ಯಕರ ಗಾಂಧಿ ಕಥೆ ಕೇಳುವ ಅವಕಾಶ ತಪ್ಪಿ ಹೋಗುತ್ತದೆ. ಮೂಲತಃ, ಗಾಂಧಿ ನನ್ನ ಆದರ್ಶ ವ್ಯಕ್ತಿ. ಅವರ ಕುರಿತು ಯಾರು ಮಾತನಾಡಿದರೂ ಕೇಳುವ ಮತ್ತು ವಿಮರ್ಶಿಸುವ ಕುತೂಹಲ ಉಳಿಸಿಕೊಂಡವಳು. ಹಾಗಾಗಿ, ಗಾಂಧಿ ವಿರುದ್ಧ ಯಾರೇನೂ ಸಂದೇಶ ಹಬ್ಬಿಸಿದರೂ, ನನ್ನ ನಿಷ್ಠೆ ಕಡಿಮೆಯಾಗುವುದಿಲ್ಲ, ಬದಲಾಗಿ ಹೆಚ್ಚಾಗುತ್ತದೆ. ಇಂತಹುದರಲ್ಲಿ, ಇವರೇನೋ ಹೇಳಹೊರಟಿದ್ದಾರಲ್ಲ... ಇರಲಿ ಕೇಳಿಸಿಕೊಳ್ಳೋಣ, ಅನ್ನಿಸಿತು. ಒಳಗೆ ಹುಟ್ಟುತ್ತಿರುವ ನಗುವನ್ನು ಹತೋಟಿ ಮಾಡುತ್ತಾ ಹೇಳಿದೆ, ‘ಸರಿ ತಾತ. ನೀವೇ, ಮೋಹನ್ ದಾಸ್ ಕರಮ್ ಚಂದ್ ಗಾಂಧಿ. ಒಪ್ಪಿಕೊಳ್ಳುತ್ತೇನೆ. ಈಗ ಹೇಳಿ, ಏನು ನಿಮ್ಮ ಸಮಸ್ಯೆ?’

ತಾತನ ಕಣ್ಣುಗಳು ನಿರಾಳವಾದವು. ಅವರು ಕಲ್ಲು ಬೆಂಚಿಗೆ ತನ್ನ ಬೆನ್ನು ತಾಕಿಸಿ ಆರಾಮವಾಗಿ ಕುಳಿತುಕೊಂಡು ಕಥೆ ಆರಂಭಿಸಿದರು…

‘ಬದುಕು ನಮಗೆ ದಿನವೂ ಹೊಸ ಪಾಠಗಳನ್ನು ಕಲಿಸುತ್ತಿರುತ್ತದೆ. ಅವುಗಳಿಗೆ ನಾವು ನಿರಂತರವಾಗಿ ತೆರೆದುಕೊಳ್ಳುತ್ತಾ, ಒಪ್ಪಿಕೊಳ್ಳುತ್ತಾ, ಅವುಗಳು ಕೊಡುವ ಹೊಸ ಅರಿವನ್ನು ಅಳವಡಿಸಿಕೊಳ್ಳುತ್ತಾ ಮುಂದುವರಿಯದಿದ್ದಲ್ಲಿ, ಹಾಗೆಯೇ ಅರೆಪಕ್ವಜ್ಞಾನಿಗಳಾಗಿ ಉಳಿದುಕೊಂಡುಬಿಡುತ್ತೇವೆ. ಬಾಹ್ಯ ಜಗತ್ತಿನ ನಿರಂತರ ಬದಲಾವಣೆಗಳಿಗೆ ನಮ್ಮ ತನು, ಮನಗಳನ್ನು ತೆರೆದಿಟ್ಟುಕೊಂಡು ಮುಕ್ತವಾಗಿ, ಕೆಸುವಿನ ಎಲೆ ಮೇಲಿನ ನೀರಗುಳ್ಳೆಯಂತೆ ಯಾವುದಕ್ಕೂ ಅಂಟಿಕೊಳ್ಳದೆ ಬದುಕುವುದೇ ಜೀವನದ ಒಟ್ಟು ತಾತ್ಪರ್ಯ. ನನ್ನ ಆಲೋಚನಾ ಕ್ರಮಕ್ಕೆ ತುಕ್ಕು ಹಿಡಿಯಬಾರದೆಂದು ನಾನು ಬದಲಾಗುತ್ತಾ, ಮನೋ ವೈಶ್ಯಾಲ್ಯತೆ ಕಂಡುಕೊಳ್ಳುತ್ತಾ ಹೋದೆ. ನನ್ನ ಪ್ರಕಾರ, ನಾನು ಆಯ್ದ ಮಾರ್ಗವೇ, ಸಹನೀಯವಾಗಿ ಬದುಕುವ ಕ್ರಮ. ಮನುಷ್ಯ ನಿರಂತರವಾಗಿ ವಿಕಸಿತನಾಗುತ್ತಿರಬೇಕು. ಅದೇ, ಸದಾ ಪರಿಪೂರ್ಣತೆಯತ್ತ ಸಾಗುವ ಬದುಕು. ಮೂಲತಃ, ನಾನೇನು ಪರಿಪೂರ್ಣ ಮನುಷ್ಯನಲ್ಲ. ನನ್ನಲ್ಲಿಯೂ ಸಾಕಷ್ಟು ಕೊರತೆಗಳಿದ್ದವು. ಇದನ್ನೆಲ್ಲಾ ನನ್ನ ಆತ್ಮಚರಿತ್ರೆಯಲ್ಲಿ ಪಾರದರ್ಶಕವಾಗಿ ಹೇಳಿಕೊಂಡಿದ್ದೇನೆ. ನಾನು ಹುಟ್ಟಿ ಬೆಳೆದ ತೀರಾ ಸಾಂಪ್ರದಾಯಿಕ ವ್ಯವಸ್ಥೆ ಕಟ್ಟಿಕೊಟ್ಟ ಭ್ರಮೆಗಳಿಂದ ಕಳಚಿಕೊಳ್ಳುತ್ತಾ... ಕಳಚಿಕೊಳ್ಳುತ್ತಾ... ನಾನು ಕಂಡುಕೊಂಡ ಸರಳ ಜೀವನ ಸತ್ಯಗಳನ್ನು, ಬದುಕಿನ ತತ್ವಗಳನ್ನಾಗಿಸಿ, ಸುತ್ತಲಿನ ಜನರಿಗೆ ನನ್ನ ಉದಾಹರಣೆಗಳ ಮೂಲಕವೇ ಹಂಚಿಕೊಂಡವನು. ನನ್ನ ಬಹುತೇಕ ಪಾರದರ್ಶಕ ಜೀವನದ ಹೊರತಾಗಿಯೂ, ಯಾರೂ ನನ್ನನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದಾರೆ ಎಂದು ನನಗೆ ಅನ್ನಿಸುವುದಿಲ್ಲ. ಜನರು ನನ್ನ ವೇಷ ಭೂಷಣವನ್ನಷ್ಟೇ ನಕಲು ಮಾಡಿದರೆ ಹೊರತು, ನನ್ನ ಜೀವನ ಮಾರ್ಗವನ್ನಲ್ಲ. ಇದು ಕೇವಲ ಹೊರನೋಟದ ಪ್ರದರ್ಶನವಾಯಿತೇ ಹೊರತು, ಅಂತರ್ಗತವಾಗಲಿಲ್ಲ’. 

ಅಷ್ಟಕ್ಕೇ ತಾತ ಮೌನವಾದರು, ಏನೋ ಹಳೆಯ ನೆನಪು ಕಾಡಿದಂತೆ. ಸ್ವಲ್ಪ ಹೊತ್ತಿನ ನಂತರ ನಾನೇ ಎಚ್ಚರಿಸಿ ಕೇಳಿದೆ,

‘ತಾತ, ಜನರು ನಿಮ್ಮನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲವೆಂದು ಯಾಕೆ ಅನ್ನಿಸುತ್ತದೆ?’.

ನನ್ನ ಪ್ರಶ್ನೆಗೆ ಕೊಂಚ ವಿಚಲಿತರಾದ ತಾತ, ಸಾವರಿಸಿಕೊಂಡು ಮುಂದುವರಿಸಿದರು.

‘ಅಲ್ಲದೆ ಮತ್ತೇನು? ಯಾವತ್ತೂ ಶಾಂತಿಮಾರ್ಗ ಬಿಡದ ನನಗೆ, ನನ್ನ ಸಮಕಾಲೀನರೊಂದಿಗೆ ಇಲ್ಲದ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಿ ಸಮಾಜದಲ್ಲಿ ಮಾಡಿದ ಬಿರುಕುಗಳು ಇನ್ನೂ ಹಾಗೆಯೇ ಜೀವಂತವಾಗಿವೆ. ಜನರ ಅನುಕೂಲಕ್ಕೆ ತಕ್ಕಂತೆ ಅವುಗಳು ಪುನಃ ಪುನಃ ಜೀವ ಪಡೆಯುತ್ತಿವೆ. ಇದು, ಟಾಗೋರ್, ಅಂಬೇಡ್ಕರ್, ಅಥವಾ ನನ್ನ ಪತ್ನಿಯ ವಿಚಾರದಲ್ಲಿಯೂ ಇರಬಹುದು. ಆದರೆ, ವರ್ತಮಾನ ಕಾಲದಲ್ಲಿ ಹರಿದಾಡುತ್ತಿರುವ ಸುದ್ದಿಗಳಂತೆ ಅಷ್ಟೊಂದು ಸ್ವಾರಸ್ಯಕರ ಅಥವಾ ವಿವಾದಾತ್ಮಕ ವಿಷಯಗಳಾಗಿರಲಿಲ್ಲ. ಹಾಗೆಯೆ, ನನಗೆ ಬ್ರಿಟಿಷ್ ನಾಗರಿಕರು ಕೂಡ ದೇಶ ಬಿಟ್ಟು ಹೋಗಬೇಕೆಂದಿರಲಿಲ್ಲ. ಆದರೆ, ನಮ್ಮನ್ನು ಆಳುವ ಹಕ್ಕು ಅವರಿಗಿಲ್ಲ, ಅಧಿಕಾರ ಹಸ್ತಾಂತರಿಸಬೇಕೆಂಬ ಆಗ್ರಹವಿತ್ತು. ನಮ್ಮ ದೇಶ ಆಳುವ ಹಕ್ಕು ಪರಕೀಯರಿಗಿಲ್ಲ, ಆದರೆ ಅವರು ಇಲ್ಲಿನ ನಾಗರಿಕರಾಗಿ ನಮ್ಮೊಂದಿಗೆ ಸಹಬಾಳ್ವೆ ನಡೆಸಬಹುದೆಂಬ ಅಭಿಮತವಾಗಿತ್ತು. ರಾಷ್ಟ್ರವನ್ನು ಛಿದ್ರಗೊಳಿಸುವ ಹುನ್ನಾರ ಹೂಡಿದ ಶಕ್ತಿಗಳು, ಧರ್ಮದ ಹೆಸರಲ್ಲಿ ದೇಶ ವಿಭಜನೆಗೆ ಒಟ್ಟಾದಾಗ, ಅದು ನನಗೆ ಅತ್ಯಂತ ನೋವಿನ ಕ್ಷಣವಾಗಿತ್ತು. ಅದನ್ನು ತಡೆಯಲು ಶಕ್ತಿ ಮೀರಿ ಪ್ರಯತ್ನಿಸಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಒಟ್ಟಾಗಿ ಹೋರಾಡಿದ ಮಂದಿ, ಧರ್ಮದ ನೆಲೆಯಲ್ಲಿ ಬದ್ಧವೈರಿಗಂತೆ ಹೊಡೆದಾಡಿ, ಲಕ್ಷಾಂತರ ಮಂದಿ ಸತ್ತಾಗ, ನನಗೆ ಸಂಪೂರ್ಣ ಸೋತ ಅನುಭವವಾಗಿತ್ತು. ಇಂದಿಗೂ ಕೂಡ ಕೆಲವು ಮುಸ್ಲಿಮರು ಮತ್ತು ಹಿಂದೂಗಳು, ನಾನೇ ಈ ಮಾರಣಹೋಮಕ್ಕೆ ಕಾರಣವೆನ್ನುತ್ತಾರೆ. ತಪ್ಪು ನನ್ನದಾಗಿರಲಿಲ್ಲ. ಪರಿಸ್ಥಿತಿ ನನ್ನ ಕೈಮೀರಿ, ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕೈಸೇರಿತ್ತು ಎನ್ನುವುದನ್ನು ಅರಿತಿದ್ದ ನನ್ನ ಕಟ್ಟಾ ಅನುಯಾಯಿಗಳೆಂದು ಗುರುತಿಸಿಕೊಂಡವರು ಕೂಡ, ಸಾರ್ವಜನಿಕವಾಗಿ ಹೇಳಿ ನನ್ನ ಸಮರ್ಥನೆಗೆ ನಿಲ್ಲಲಿಲ್ಲ’.

‘ಹೋಗಲಿ ಬಿಡು ತಾತ. ಜನರು ನಿಮ್ಮನ್ನು ಸಮರ್ಥಿಸಿ ಏನಾಗಬೇಕಿದೆ? ನೀವು ಈ ಟೀಕೆಗಳ ಮೀರಿ ಕಾಲಾತೀತವಾಗಿ ಜನರ ಮನಸ್ಸಿನಲ್ಲಿ ಉಳಿದಿದ್ದೀರಿ. ಇದಕ್ಕೆ ಯಾರ ಮನ್ನಣೆಯೂ ಬೇಕಾಗಿಲ್ಲ. ಇಂದಿಗೂ ಕೂಡ, ಈ ನಾಡಿನಲ್ಲಿ ಇನ್ನೊಬ್ಬ ಗಾಂಧಿ ಹುಟ್ಟಿಬಂದಿಲ್ಲ. ನಿಮ್ಮ ತತ್ವಗಳನ್ನು ನಾವು ಸರಿಯಾಗಿ ಅರ್ಥಮಾಡಿಕೊಳ್ಳದಿದ್ದರೂ, ಅವುಗಳೇ ನಮಗಿಂದು ದಾರಿದೀಪ. ಆದರೂ, ಕುತೂಹಲಕ್ಕಾಗಿ ಕೇಳುತ್ತಿದ್ದೇನೆ. ನಿಮ್ಮ ದೃಷ್ಟಿಯಲ್ಲಿ, ಟಾಗೋರ್ ಮತ್ತು ನಿಮ್ಮ ನಡುವಿನ ಸಂಬಂಧ ಹೇಗಿತ್ತು?’

‘ನಾನು ಟಾಗೋರರನ್ನು ಯಾವತ್ತೂ ‘ಗುರುದೇವ್’ ಎಂದೇ ಗೌರವಿಸಿದವನು. ರಾಷ್ಟೀಯ ಹಿತಾಸಕ್ತಿಗೆ ಸಂಬಂಧಿಸಿದಂತೆ, ನಾವಿಬ್ಬರು ಸಾಕಷ್ಟು ಚರ್ಚಿಸಿದ್ದೇವೆ. ನನಗೆ ಹಲವಾರು ವಿಷಯಗಳಲ್ಲಿ ಅವರ ವಿಚಾರಧಾರೆಗಳು ಸಮ್ಮತವಾಗಿದ್ದವು. ಆದರೆ, ಕ್ರಮೇಣ ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರಿಗೆ ಒಡನಾಟ ಹೆಚ್ಚಾದಂತೆ, ವಿಶ್ವಭ್ರಾತೃತ್ವವೊಂದೇ ಸತ್ಯವೆನಿಸಿ, ದೇಶದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟಗಳು ಅರ್ಥಹೀನವೆನಿಸತೊಡಗಿದವು. ಅದರಿಂದಾಗಿ, ಅವರಿಗೆ ನಾನು ಕೈಗೊಂಡ ಅಸಹಕಾರ ಚಳವಳಿ, ಚರಕ ಆಂದೋಲನ ಮತ್ತು ಸ್ವರಾಜ್ ಅಷ್ಟು ಆಕರ್ಷಣೀಯವೆನಿಸಲಿಲ್ಲ. ನಾನು ಕೂಡ ವಿಶ್ವಭ್ರಾತೃತ್ವದಲ್ಲಿ ವಿಶ್ವಾಸ ಇಟ್ಟವನು. ಆದರೆ, ನನ್ನ ರಾಷ್ಟ್ರದ ಸ್ವಾಯತ್ತೆಯನ್ನು ಬಲಿಕೊಟ್ಟು ಅಲ್ಲ. ನನ್ನ ಅನಿಸಿಕೆಯಂತೆ, ತಾನೇ ಮುಳುಗುತ್ತಿರುವ ವ್ಯಕ್ತಿ ಇನ್ನೊಬ್ಬರನ್ನು ರಕ್ಷಿಸಲಾರ. ಅದರಂತೆ, ಮೊದಲು ನನ್ನ ದೇಶದ ಸ್ವಾತಂತ್ರ್ಯ, ಅನಂತರ ವಿಶ್ವ ಪ್ರೇಮವನ್ನು ಪಸರಿಸೋಣ. ಇನ್ನೊಂದು ವಿಚಾರವೆಂದರೆ, ನನ್ನ ರಾಷ್ಟ್ರೀಯತೆಯ ಪರಿಕಲ್ಪನೆ ಬಹುತ್ವದ ತತ್ವಾಧಾರಿತವಾದುದು. ಇದು, ವಿಶ್ವ ಪ್ರೇಮಕ್ಕೆ ವಿನಾಶಕಾರಿಯೂ ಅಲ್ಲ, ಸವಾಲೂ ಅಲ್ಲ. ಬದಲಾಗಿ, ವಿಶ್ವಭ್ರಾತೃತ್ವಕ್ಕೆ ಪ್ರೇರಕವಾದುದು. ಟಾಗೋರ್ ಅಂದುಕೊಂಡಂತೆ, ದೇಶದ ಸ್ವಾತಂತ್ರ್ಯ ಹೋರಾಟ ಬದಿಗಿಟ್ಟು, ವಿಶ್ವಪ್ರೇಮದ ಕುರಿತು ಮಾತನಾಡಲಾಗುವುದಿಲ್ಲ. ಸಮಾನತೆಯನ್ನು ಕಾಯ್ದುಕೊಂಡು, ಭ್ರಾತೃತ್ವದ ಬಗ್ಗೆ ಮಾತನಾಡುವ ಮಟ್ಟಕ್ಕೆ ನಾವು ಬೆಳೆಯಬೇಕು. ಹಾಗಂತ, ನಮ್ಮಿಬ್ಬರ ನಡುವೆ ಯಾವುದೇ ವೈಮನಸ್ಸು ಇರಲಿಲ್ಲ. ನನಗೆ ಅವರು ಪ್ರೀತಿಯಿಂದ ‘ಮಹಾತ್ಮ’ನೆಂದು ಕರೆದರೆ, ಅವರನ್ನು ನಾನು ‘ಗುರುದೇವ್’ ಎಂದೇ ಸಂಬೋಧಿಸುತ್ತಿದ್ದೆ’. 

‘ಸರಿ ತಾತ. ನಿಮ್ಮಿಬ್ಬರ ಮಾರ್ಗ ಬೇರೆ ಬೇರೆ, ಆದರೆ ಗುರಿ ಒಂದೇ ಆಗಿತ್ತು ಎನ್ನುವುದನ್ನು ಹೇಳುತ್ತಿದ್ದೀರಿ. ಒಂದು ವಿಚಾರವೆಂದರೆ, ಇದು ಆ ಕಾಲದಲ್ಲಿ ಅಷ್ಟೊಂದು ವಿವಾದಾತ್ಮಕ ವಿಷಯವಾಗಿರಲಿಕ್ಕಿಲ್ಲ. ಆದರೆ, ಈಗ ವಿಷಯ ರೆಕ್ಕೆಪುಕ್ಕ ಪಡೆದುಕೊಳ್ಳುತ್ತಿದೆ. ನಿಮ್ಮಿಬ್ಬರ ನಡುವೆ ನಡೆದಿರಬಹುದಾದ ಆರೋಗ್ಯಕರ ಚರ್ಚೆಗಳನ್ನು ವಿವಾದಾತ್ಮಕವಾಗಿ ಬಿಂಬಿಸಿ ಕೆಲವು ಜನರು ಪ್ರಾದೇಶಿಕ ಮತ್ತು ಸೈದ್ಧಾಂತಿಕ ನೆಲೆಯಲ್ಲಿ ಬೀದಿ ಜಗಳ ಮಾಡುತ್ತಿದ್ದಾರೆ. ನಿಜ. ಬಿದ್ದಿರುವ ಬೆಂಕಿಯನ್ನು ಆರಿಸುವ ಬದಲು, ಅದರಲ್ಲಿ ಮೈಕಾಯಿಸಿಕೊಳ್ಳುವ ಜನರೇ ಹೆಚ್ಚು. ಅದಕ್ಕಿಂತಲೂ ಹೆಚ್ಚಾಗಿ, ತಾವೇ ಕಿಡಿ ಹೊತ್ತಿಸಿ, ವಿವಾದಗಳನ್ನು ಹಿರಿದಾಗಿಸಿ, ಅದರಿಂದ ತಮ್ಮ ಬೇಳೆ ಬೇಯಿಸಿಕೊಳ್ಳುವ ಮನಸ್ಥಿತಿಯನ್ನು ನಾವು ಇಂದು ಕಾಣುತ್ತೇವೆ. ಇದರಿಂದ, ನಾವು ಸಂಪೂರ್ಣವಾಗಿ ಮುಕ್ತಿ ಪಡೆಯಲು ಸಾಧ್ಯವಾಗುವುದಿಲ್ಲವೇನೋ ಅನ್ನಿಸುತ್ತಿದೆ’. 

ತಾತ ಒಂದು ಕ್ಷಣ ದೀರ್ಘವಾಗಿ ಉಸಿರೆಳೆದುಕೊಂಡರು. ನಮ್ಮಿಬ್ಬರ ನಡುವಿನ ಮೌನವೂ ದೀರ್ಘವಾಗತೊಡಗಿತು. ನಾನೇ ಎಚ್ಚರಿಸಿದೆ.

‘ಸರಿ, ಟಾಗೋರ್ ಮತ್ತು ನಿಮ್ಮ ನಡುವೆ ನಡೆದ ಪತ್ರ ವ್ಯವಹಾರಗಳ ಕುರಿತು ತಿಳಿಸಿ ಹೇಳಿದಿರಿ. ನನಗೆ ಕೊಂಚ ಸ್ಪಷ್ಟತೆ ಸಿಕ್ಕಿದೆಯೆನಿಸುತ್ತಿದೆ. ಅದಕ್ಕಿಂತ ಮೀರಿದ ವಿವಾದ ಮತ್ತು ಈಗಲೂ ಚರ್ಚೆಯಲ್ಲಿರುವ ವಿಷಯವೆಂದರೆ, ಅಂಬೇಡ್ಕರ್ ಮತ್ತು ನಿಮ್ಮ ನಡುವೆ ನಡೆದಿದೆ ಎನ್ನಲಾದ ವಾಗ್ವಾದಗಳು. ಇವುಗಳ ಅಸಲಿಯತ್ತೇನು?’

‘ಹೌದು. ಇಲ್ಲಿ ಲೋಕಕ್ಕೆ ಅರ್ಥವಾಗಿರುವುದಕ್ಕಿಂತ ಅರ್ಥವಾಗಿರದ್ದೇ ಹೆಚ್ಚು. ಅಂಬೇಡ್ಕರ್ ವಯಸ್ಸಿನಲ್ಲಿ ನನಗಿಂತ ಬಹಳ ಚಿಕ್ಕವರು. ಆದರೆ, ಅವರ ಅದಮ್ಯ ಉತ್ಸಾಹ, ಬಿಡದ ಛಲ ಮತ್ತು ಕಾರ್ಯ ತತ್ಪರತೆ ನನಗೆ ಬಹಳ ಹಿಡಿಸಿತು. ಅವರಿಗೆ, ಶತಮಾನಗಳಿಂದ ಮುಂದುವರಿದುಕೊಂಡು ಬಂದಿದ್ದ ಸಾಮಾಜಿಕ ಅನಿಷ್ಟ, ಅಸ್ಪೃಶ್ಯತೆಯನ್ನು ತನ್ನ ಜೀವಿತಾವಧಿಯಲ್ಲಿಯೇ ಕೊನೆಗಾಣಿಸಬೇಕೆಂಬ ಹೆಬ್ಬಯಕೆಯಿತ್ತು. ನಾನು ಗ್ರಹಿಸಿಕೊಂಡಂತೆ, ಅದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಹಿಂದೂ ಸಮಾಜವೆಂದೂ ಜಾತಿಯ ಹೆಸರಲ್ಲಿ ಇಬ್ಭಾಗವಾಗದೆ, ನಮ್ಮ ನಡುವಿನ ಬೇಧ ಭಾವಗಳನ್ನು ಬಗೆಹರಿಸಿಕೊಂಡು ಸಮನ್ವಯತೆ ಸಾಧಿಸಬೇಕೆಂಬುದು ನನ್ನ ಕಳಕಳಿಯಾಗಿತ್ತು. ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನು ಒಟ್ಟುಗೂಡಿಸಲು ನಾನದನ್ನು ಮಾಡಬೇಕಿತ್ತು ಕೂಡ. ಸ್ವಾತಂತ್ರ್ಯ ಚಳವಳಿಗೆ ಎಲ್ಲ ಜಾತಿ, ಧರ್ಮ, ಲಿಂಗಗಳ ಸಾಮರಸ್ಯದ ಭಾಗವಹಿಸುವಿಕೆ ಅಗತ್ಯವಿತ್ತು. ಇದರೊಂದಿಗೆ, ಸಮಾಜದ ತಳಸಮುದಾಯಗಳ ಸಮಸ್ಯೆಗಳನ್ನು ತಳ್ಳಿ ಹಾಕುವಂತಿರಲಿಲ್ಲ. ಆದರೆ, ನನ್ನದು ಅಂಬೇಡ್ಕರ್‌ಗಿಂತ ಭಿನ್ನ ಮಾರ್ಗವಾಗಿತ್ತು. ಮೇಲ್ಜಾತಿಯ ಜನರಲ್ಲಿ ಸಮಾನತೆಯ ಅರಿವು ಮೂಡಿಸದೇ, ಸಮಾಜ ಪರಿವರ್ತನೆ ಅಸಾಧ್ಯವೆನ್ನುವುದು ನನ್ನ ಅನಿಸಿಕೆಯಾಗಿತ್ತು. ಆದರೂ, ಅಂಬೇಡ್ಕರ್ ಹೋರಾಟದ ಕುರಿತು ನನಗೆ ಹೆಮ್ಮೆಯಿದೆ. ಶತಮಾನಗಳ ಕತ್ತಲನ್ನು ಸರಿಸಿ ತನ್ನ ಸಮುದಾಯವನ್ನು ಬೆಳಕಿನೆಡೆಗೆ ಕೊಂಡೊಯ್ಯುವ ಅವರ ಸಾಹಸ ಮೆಚ್ಚುವಂತಹದ್ದು. ವಿಶೇಷವಾಗಿ, ತನ್ನ ಸಂಪೂರ್ಣ ಅನಕ್ಷರಸ್ಥ ಸಮುದಾಯದಲ್ಲಿ ಜಾಗೃತಿ ಮೂಡಿಸಿದ ಪರಿ ವಿಶಿಷ್ಟವಾಗಿತ್ತು. ಇದಕ್ಕೆ ಪೂರಕವಾಗಿ, ಮೇಲ್ಜಾತಿಯ ಜನರಲ್ಲಿ ನಾನು ಸಮಾನತೆಯ ಸಂದೇಶ ಹರಡುವುದು ಅಷ್ಟೇ ಮುಖ್ಯವಾಗಿತ್ತೆಂಬುದು ನನ್ನ ನಂಬಿಕೆಯಾಗಿತ್ತು. ಆದರೆ, ನಾನು ಸಾಕಷ್ಟು ಕೆಲಸ ಮಾಡಿಲ್ಲವೆಂದು ಅಂಬೇಡ್ಕರ್ ಅಪಾರ್ಥ ಮಾಡಿಕೊಂಡಿದ್ದರು. ಅಂಬೇಡ್ಕರ್ ಮತ್ತು ನಾನು ಹಿಡಿದ ಮಾರ್ಗಗಳು ವಿಭಿನ್ನ ಮತ್ತು ಸಮಾನಾಂತರ ದಾರಿಗಳಾಗಿದ್ದವು. ಆ ದಾರಿಗಳೆಂದೂ ಒಂದುಗೂಡದಿದ್ದರೂ, ನಮ್ಮಿಬ್ಬರ ಗುರಿ ಒಂದೇ ಆಗಿತ್ತು. ಅವರೊಬ್ಬ ಮಹಾನ್ ದೇಶಭಕ್ತ ಕೂಡ’. 

ತಾತ ಪುನಃ ನಿಟ್ಟುಸಿರು ಬಿಟ್ಟರು. ನಾನು ಕೂಡ ಯೋಚನೆಯಲ್ಲಿ ಮುಳುಗಿ ಹೋದೆ. ನಿಧಾನವಾಗಿ ಸಾವರಿಸಿಕೊಂಡು ಅವರಲ್ಲಿ ಹೇಳಿದೆ, ‘ಸರಿ, ಒಪ್ಪುತ್ತೇನೆ. ಆದರೆ, ನಿಮ್ಮಿಬ್ಬರ ನಡುವಿನ ವಿಚಾರ ಭಿನ್ನತೆಗಳನ್ನು ಕಂದಕಗಳನ್ನಾಗಿ ಪ್ರಚಾರ ಮಾಡಿದವರಿಗೆ, ನೀವು ಸಮಜಾಯಿಷಿ ಕೊಡಲು ಹೋಗದೆ ಇದ್ದುದು ಯಾಕೆ?’.

‘ಯಾರಿಗೆ ಸಮಜಾಯಿಷಿ ಕೊಡಬೇಕಿತ್ತು, ನಾನು?...ನನ್ನ ಕಾಲದಲ್ಲಿ, ಇಂದಿನಂತೆ ನನ್ನ ಮತ್ತು ಅಂಬೇಡ್ಕರ್ ನಡುವೆ ಕಂದಕಗಳು ಇರಲಿಲ್ಲ. ನಾನು ನನ್ನ ಜೀವನವನ್ನೆಲ್ಲಾ ಸಾರ್ವಜನಿಕ ಕ್ಷೇತ್ರದಲ್ಲಿಯೇ ಕಳೆದವನು. ನನ್ನ ಬದುಕು ಬಹುತೇಕ ಪಾರದರ್ಶಕವಾಗಿತ್ತು. ಹಾಗಾಗಿ, ನನ್ನ ಜನ ನನ್ನನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದಾರೆಂದು ನಂಬಿದ್ದೆ. ಆದರೆ... ಹಾಗಾಗಲಿಲ್ಲ. ಅದರ ಕುರಿತು ನನಗೇನು ಬೇಸರವಿಲ್ಲ. ನನ್ನ ಮತ್ತು ಅಂಬೇಡ್ಕರ್ ನಡುವಿನ ಒಡನಾಟದ ಕುರಿತು ಒಂದಿಷ್ಟು ವಿವರ ನೀಡುವುದಾದರೆ, ನಾನು ಅಂಬೇಡ್ಕರರನ್ನು ಮೊದಲ ಬಾರಿ ಭೇಟಿಯಾಗಿದ್ದು 1931ರಲ್ಲಿ. ಆ ಭೇಟಿ, ನಮ್ಮಿಬ್ಬರ ಭಿನ್ನಾಭಿಪ್ರಾಯಗಳ ನಡುವೆಯೂ ಬಹಳ ಸೌಹಾರ್ದಯುತವಾಗಿ ನಡೆದು ಹೋಯಿತು. ಆಗ, ನಾನು ಅಂಬೇಡ್ಕರ್‌ರಲ್ಲಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದೆ. ಅದಕ್ಕೆ, ಅಂಬೇಡ್ಕರ್, ‘ತನ್ನ ಹೋರಾಟಕ್ಕೆ ಕಾಂಗ್ರೆಸ್ಸಿನಿಂದ ಯಾವುದೇ ಪ್ರೋತ್ಸಾಹ ಸಿಕ್ಕಿಲ್ಲ. ಹಾಗಾಗಿ, ತಾನು ಕೈಗೊಂಡ ಹೋರಾಟವನ್ನು ಪ್ರತ್ಯೇಕವಾಗಿ ಮುಂದುವರಿಸಿಕೊಂಡು ಹೋಗುತ್ತೇನೆ’ ಎಂದು ಹೇಳಿದರು. ಆಗಲೇ, ದೇಶದ ಮುಸ್ಲಿಂ ಸಮಾಜ ಬಹುತೇಕವಾಗಿ ತನ್ನನ್ನು ಬೇರೆಯಾಗಿ ಗುರುತಿಸಿಕೊಂಡಿತ್ತು. ಅದರ ನಡುವೆ ಹಿಂದೂ ಸಮಾಜವೂ ಜಾತಿಯ ಹೆಸರಲ್ಲಿ ಒಡೆದು ಹೋಗುವುದು ನನಗೆ ಒಪ್ಪಿಗೆಯಾಗದ ಮಾತಾಗಿತ್ತು. ಆದರೂ, ಅಸ್ಪೃಶ್ಯತೆಯ ವಿರುದ್ಧ ನಾನು ಕೈಗೊಂಡ ಕ್ರಮಗಳನ್ನು ಅವರಲ್ಲಿ ಹಂಚಿಕೊಂಡೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಅಸ್ಪೃಶ್ಯತೆ ನಿವಾರಣೆಯನ್ನು ಒಂದು ಬಗೆಹರಿಸಬೇಕಾದ ಸಮಸ್ಯೆಯನ್ನಾಗಿ ಸೇರಿಸಿಕೊಳ್ಳಬೇಕೆಂದು ಪಟ್ಟು ಹಿಡಿದಿದ್ದು ನಾನು. ಇದಕ್ಕೆ ಸಾಕಷ್ಟು ಪ್ರತಿರೋಧ ಬಂದಿತ್ತು ಕೂಡ. ಅಸ್ಪೃಶ್ಯತೆ ಒಂದು ಸಾಮಾಜಿಕ ಮತ್ತು ಧಾರ್ಮಿಕ ನೆಲೆಯ ಸಮಸ್ಯೆಯಾಗಿರುವುದರಿಂದ ಇದನ್ನು ರಾಜಕೀಯಗೊಳಿಸಬಾರದೆಂಬುವುದು ನನ್ನ ಅಭಿಪ್ರಾಯವಾಗಿತ್ತು. ಇದರಿಂದಾಗಿ, ನಾವು ಸಹಮತ ಸಾಧಿಸುವುದು ಸಾಧ್ಯವಾಗಿರಲಿಲ್ಲ’. 

‘ಆದರೆ, ತಾತ… ನೀವು ಜಾತಿ ವ್ಯವಸ್ಥೆ ಕಿತ್ತು ಹಾಕಲು ಸಾಕಷ್ಟು ಕೆಲಸ ಮಾಡಿಲ್ಲ, ಇಡೀ ದೇಶಕ್ಕೆ ನಾಯಕನಾಗಿದ್ದ ನೀವು ಮನಸ್ಸು ಮಾಡಿದ್ದರೆ, ಏನೆಲ್ಲಾ ಸಮಾಜ ಸುಧಾರಣೆ ತರಬಹುದಿತ್ತು ಎಂದು ಜನರು ಮಾತನಾಡುತ್ತಿದ್ದಾರಲ್ಲ’.

‘ಹಾಂ. ಹೌದು. ಕೆಲವರು ಹಾಗೆ ಮಾತನಾಡುತ್ತಾರೆ ನಿಜ. ಅವರಿಗೆ ನಿಜಾಂಶ ಗೊತ್ತಿಲ್ಲವಷ್ಟೆ. 1932ರ ಪೂನಾ ಒಪ್ಪಂದದ ನಂತರ ನಾನು ಅಸ್ಪೃಶ್ಯತೆ ವಿರುದ್ಧ ಇಪ್ಪತ್ತೊಂದು ದಿನಗಳ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದೆ. ಆನಂತರದ ನನ್ನೆಲ್ಲಾ ಸಾರ್ವಜನಿಕ ಭಾಷಣಗಳು ಮತ್ತು ದೈನಂದಿನ ಚಟುವಟಿಕೆಗಳು ಜಾತಿ ವ್ಯವಸ್ಥೆಯಿಂದ ಹೊರಬರಬೇಕಾದ ಅಗತ್ಯವನ್ನು ಪುನಃ ಪುನಃ ಒತ್ತಿಹೇಳುತ್ತಿದ್ದವು. ತಳಸಮುದಾಯವರಿಗೆ, ‘ನೀವು ಸ್ವಾಭಿಮಾನದಿಂದ ಬದುಕಿ, ನಿಮ್ಮ ದುಡಿಮೆಗೆ ಸಂಬಳ ಕೇಳಿ, ಹೊರತು ಮೇಲ್ಜಾತಿಯವರ ಎಂಜಲು ಮತ್ತು ಹಳಸಿದ ಊಟ ಸ್ವೀಕರಿಸಬೇಡಿ’ ಎಂದಿದ್ದೆ. ಹಾಗೆಯೇ, ಮೇಲ್ಜಾತಿಯವರಿಗೆ, ‘ನೀವು ಸಮಾನತೆಯ ತತ್ವದ ಮೇಲೆ ಸಮಾಜ ಕಟ್ಟುವ ಕೆಲಸಮಾಡಿ, ಜಾತಿ ಬೇಧ ಮಾಡಬೇಡಿ’ ಎನ್ನುವ ಕರೆ ನೀಡಿದ್ದೆ. ಅನಂತರದ ದಿನಗಳಲ್ಲಿ, ದಲಿತರಿಗೆ ಪ್ರವೇಶವಿಲ್ಲದ ದೇವಾಲಯಗಳಿಗೆ ನಾನು ಭೇಟಿ ನೀಡುವುದನ್ನು ನಿಲ್ಲಿಸಿದೆ. ಮಾತ್ರವಲ್ಲ, ಜಾತಿ ನಿರ್ಮೂಲನೆಗಾಗಿ, ಅಂತರ್ಜಾತಿಯ ವಿವಾಹಗಳ ಆಮಂತ್ರಣಗಳನ್ನಷ್ಟೇ ಸ್ವೀಕರಿಸಿ, ಅವುಗಳಿಗೆ ಹಾಜರಿದ್ದು ಪ್ರೋತ್ಸಾಹಿಸತೊಡಗಿದೆ. ಸ್ವಾತಂತ್ರ್ಯ ಸಿಕ್ಕಮೇಲೆ, ದೇಶದ ಇತಿಹಾಸದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸಿ, ಸ್ವತಂತ್ರ ದೇಶಕ್ಕೆ ಸಮಾನತೆಯ ಹೊಸ ಕಾನೂನು ರಚಿಸಲು, ಅಂಬೇಡ್ಕರ್‌ರನ್ನು ಕಾನೂನು ಸಚಿವರನ್ನಾಗಿಸಲು ನೆಹರುವಿಗೆ ಸಲಹೆ ನೀಡಿದವನು ನಾನೇ. ಮಾತ್ರವಲ್ಲ, ದೇಶದ ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಮುಖ್ಯ ಪಾತ್ರದಲ್ಲಿರಬೇಕೆಂದು ನೋಡಿಕೊಂಡವನು ನಾನು. ನಾನು ಕಂಡುಕೊಂಡಂತೆ, ನನ್ನ ಕಾಲದ ಅತ್ಯಂತ ಮೇಧಾವಿ ವಿದ್ವಾಂಸ ಅಂಬೇಡ್ಕರ್.  ಮಾತ್ರವಲ್ಲ, ಅಪ್ರತಿಮ ದೇಶಭಕ್ತ ಕೂಡ. ಅವರು ಮನಸ್ಸು ಮಾಡಿದ್ದರೆ, ಜಿನ್ನಾ ತರಹ ಪ್ರತ್ಯೇಕ ದೇಶ ರಚನೆಗೆ ಆಗ್ರಹಿಸಬಹುದಿತ್ತು. ಆದರೆ, ಹಾಗೆ ಮಾಡದೇ ದೇಶದ ಚೌಕಟ್ಟಿನಲ್ಲಿಯೇ ಹೋರಾಟ ಮಾಡಿದರು. ಒಟ್ಟಿನಲ್ಲಿ, ಮುಖ್ಯವಾಗಿ ಹೇಳುವುದಾದರೆ, ನನ್ನ ಪ್ರೀತಿಯ ಜೀವನ ತತ್ವಗಳಾದ ಅಹಿಂಸೆ ಮತ್ತು ಶಾಂತಿಗೆ ಉತ್ತಮ ರಾಯಭಾರಿ ಅಂಬೇಡ್ಕರ್. ಅವರಿಗೂ ನನ್ನ ಬಗ್ಗೆ ಅಷ್ಟೇ ಗೌರವವಿತ್ತು ಎಂದು ಕೇಳಿಬಲ್ಲೆ. ಅದನ್ನು ನನ್ನಲ್ಲಿಯೂ ವ್ಯಕ್ತಪಡಿಸಿದ್ದರು. ದೇಶಕ್ಕೆ ನನ್ನ ಅಗತ್ಯವಿದೆ ಮತ್ತು ಪದೇ ಪದೇ ಉಪವಾಸ ಸತ್ಯಾಗ್ರಹ ಮಾಡಬೇಡಿಯೆಂದು ಹೇಳುತ್ತಿದ್ದರು. ಇವಿಷ್ಟೇ, ನಾನು ಅಂಬೇಡ್ಕರ್ ಕುರಿತು ಹೇಳಬೇಕಾದುದು’.

‘ಹಾಂ... ತಾತ, ಇಂದಿನ ನಿನ್ನ ಭಾರತದಲ್ಲಿ, ನೀವಿಬ್ಬರು ಬದ್ಧ ವೈರಿಗಳಂತೆ ಚಿತ್ರಿತರಾಗಿದ್ದೀರಿ. ಜನರು ತಮ್ಮನ್ನು ಪ್ರಚಾರದಲ್ಲಿಟ್ಟುಕೊಳ್ಳಲು ಇತಿಹಾಸವನ್ನು ತಮಗಿಷ್ಟದಂತೆ ತಿರುಚುತ್ತಾರೆ. ಇದರ ಕುರಿತು ಇನ್ನು ಹೆಚ್ಚಿಗೆ ನಾನು ಕೂಡ ಹೇಳಲಾರೆ’. 

ತಾತ ಯೋಚನಾಮಗ್ನರಾಗಿ ನೆಲವನ್ನೇ ದಿಟ್ಟಿಸತೊಡಗಿದರು. ಅಲ್ಲೊಂದು ಪುಟ್ಟ ಇರುವೆ ಎಲ್ಲಾ ಅಡೆತಡೆಗಳನ್ನು ದಾಟುತ್ತಾ ಮೌನವಾಗಿ ಮುನ್ನೆಡೆಯುತ್ತಿತ್ತು. ನಾನೇ ಪುನಃ ಮಾತಿಗೆಳೆದೆ.

‘ತಾತ... ಇನ್ನು ನಿಮ್ಮ ಹೆಂಡತಿ ಕಸ್ತೂರ್‌ ಬಾ ಕುರಿತು ಪ್ರಸ್ತಾಪವಾದಾಗಲೆಲ್ಲಾ, ನೀವೊಬ್ಬ ಪತ್ನಿಪೀಡಕನಂತೆ ಜನ ಮಾತನಾಡುತ್ತಾರಲ್ಲ. ಇದಕ್ಕೆ ನೀವು ಏನು ಹೇಳುತ್ತೀರಿ?’

ತಾತ ಮತ್ತೊಮ್ಮೆ ದೀರ್ಘ ನಿಟ್ಟುಸಿರು ತೆಗೆದುಕೊಂಡು ಮೌನವಾದರು. ಸಿಕ್ಕಿ ಹಾಕಿಕೊಂಡಿದ್ದ ಗಂಟಲು ಸರಿಮಾಡಿಕೊಂಡು ಮೆಲುದನಿಯಲ್ಲಿ ಮಾತು ಮುಂದುವರಿಸಿದರು.

‘ಹೌದು, ನಾನೊಬ್ಬ ಆದರ್ಶ ಗಂಡನೆಂದು ಯಾವತ್ತು ಹೇಳಿಕೊಂಡಿಲ್ಲ. ನಮ್ಮ ಸಮಾಜದಲ್ಲಿರುವ ವೈವಾಹಿಕ ವ್ಯವಸ್ಥೆಗಳ ರೂಪುರೇಷೆಗಳ ಮೂಲಕ ನೋಡುವುದಾದರೆ, ನನ್ನಂತೆಯೇ, ಬುದ್ಧನಾಗಲಿ, ಶ್ರೀರಾಮನಾಗಲಿ ಆದರ್ಶ ಗಂಡಂದಿರಲ್ಲ ಎನ್ನುವುದು ನನ್ನ ಅಭಿಪ್ರಾಯ. ನನ್ನ ಜೀವನ ಧ್ಯೇಯಕ್ಕೆ ತಕ್ಕಂತೆ ಬದುಕುವ ಜೀವನ ಸಂಗಾತಿ ನನಗೆ ಅವಶ್ಯಕತೆಯಿತ್ತು. ಅದಕ್ಕಾಗಿ, ಕಸ್ತೂರ್‌ ಬಾ ಸಾಕಷ್ಟು ಕಷ್ಟ ಪಟ್ಟಳು. ಅದಕ್ಕಾಗಿ, ಅವಳ ಕುರಿತು ನನಗೆ ಅಪಾರ ಗೌರವವಿದೆ. ಬಹಳ ಸಂಪ್ರದಾಯ ಕುಟುಂಬದಲ್ಲಿ ಹುಟ್ಟಿ ಬೆಳೆದ ಅವಳಿಗೆ, ನನ್ನ ನಿರಂತರ ಸಾರ್ವಜನಿಕ ಮತ್ತು ಪಾರದರ್ಶಕ ಬದುಕಿಗೆ ಹೊಂದಿಕೊಳ್ಳುವುದಕ್ಕೆ ಕಷ್ಟವಾಗಿತ್ತು. ಆದರೂ, ತನ್ನೆಲ್ಲಾ ನೋವನ್ನು ನುಂಗಿ ನನಗೆ ಜೊತೆಯಾದಳು. ಅವಳಿಗೆ ತನ್ನ ಮಕ್ಕಳೆಂದರೆ ಅಪಾರ ಪ್ರೀತಿಯಿತ್ತು. ಆದರೆ, ನನ್ನ ಒತ್ತಡದ ಸಾರ್ವಜನಿಕ ಬದುಕಿನಿಂದಾಗಿ, ನಾನಾಗಲಿ, ಅವಳಾಗಲಿ ಮಕ್ಕಳ ಅಗತ್ಯಗಳನ್ನು ಸರಿಯಾಗಿ ಗಮನಿಸಲಾಗಲಿಲ್ಲವೆಂಬ ನೋವು ಅವಳಿಗೆ ಒಳಗೊಳಗೇ ಕಾಡುತ್ತಿತ್ತು. ಅದರ ಅರಿವಿದ್ದೂ ನಾನು ಸುಮ್ಮನಾಗಿದ್ದೆ. ನನಗೆ, ನನ್ನ ದೇಶದ ಸ್ವಾತಂತ್ರ್ಯಸಂಗ್ರಾಮವೊಂದೇ ಕಣ್ಣೆದುರು ಕಾಣಿಸುತ್ತಿತ್ತು. ಜೊತೆಗೆ, ದೇಶದ ಹೆಣ್ಣುಮಕ್ಕಳು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಲು ಪ್ರೇರಣೆಗಾಗಿ, ನಾನು ಕಸ್ತೂರ್‌ ಬಾಳನ್ನು ವೇದಿಕೆಯಲ್ಲಿ ನನ್ನೊಂದಿಗೆ ಕೂರಿಸಿಕೊಳ್ಳುತ್ತಿದ್ದೆ. ಅವಳಿಂದ ಹಲವಾರು ಭಾಷಣಗಳನ್ನು ಕೂಡ ಮಾಡಿಸಿದೆ. ಅವಳು ಚಳುವಳಿಯ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ನೋಡಿಕೊಂಡಿದ್ದೆ. ವಿಶೇಷವಾಗಿ, ಅವಳೂ ಕೂಡ ಜನಸಾಮಾನ್ಯರಂತೆ ಬದುಕಬೇಕಿತ್ತು. ಇದು ಅವಳಿಗೆ ಕೆಲವೊಮ್ಮೆ ಅವಳಿಗೆ ಅಸಹನೆ ಮತ್ತು ನೋವು ತರಿಸಿದ್ದೂ ಇದೆ. ಇದನ್ನೆಲ್ಲಾ ನೋಡಿದ ಜನರಿಗೆ ನಾನು ಪತ್ನಿಪೀಡಕನಂತೆ ಕಂಡಿರಬಹುದು. ಒಂದಂತೂ ನಿಜ. ಸಾಮಾನ್ಯವಾಗಿ, ಹೆಂಡತಿಯರು ತಮ್ಮ ವೃತ್ತಿನಿರತ ಗಂಡಂದಿರು ತಮ್ಮ ಜೊತೆಗೆ ಸಾಕಷ್ಟು ಕಾಲ ಕಳೆಯುವುದಿಲ್ಲ ಅಥವಾ ಸಮಯ ನೀಡುವುದಿಲ್ಲವೆಂಬ ಅಪವಾದ ಮಾಡುವುದನ್ನು ಕೇಳುತ್ತಿರುತ್ತೇವೆ. ಆದರೆ, ನನ್ನ ಮತ್ತು ಕಸ್ತೂರ್‌ ಬಾ ವಿಷಯದಲ್ಲಿ ನಾವಿಬ್ಬರು ಪ್ರತಿ ಕ್ಷಣವೂ ಜೊತೆಯಾಗಿದ್ದೆವು. ನಾನವಳನ್ನು ಪ್ರೀತಿಸುತ್ತಿದ್ದೆ, ಗೌರವಿಸುತ್ತಿದ್ದೆ ಮತ್ತು ಕಾಳಜಿ ಮಾಡುತ್ತಿದ್ದೆ. ಇದಕ್ಕಿಂತ ಇನ್ನೇನು ಹೆಚ್ಚಿಗೆ ಹೇಳಲಾರೆ’. 

‘ಹಾಂ... ತಾತ ನಾನೇನೂ ಹೇಳಲಿ...ಆ ತಾಯಿ ತನ್ನ ನೋವನ್ನು ಒಳಗೊಳಗೇ ನುಂಗಿಕೊಂಡು, ಹೊರಗೆ ನಗು ಮುಖವ ತೋರಿಸಿಕೊಂಡ ಹಾಗೆ, ಅವರ ಫೋಟೊಗಳು ಕಾಣಿಸುತ್ತವೆ. ಗಂಡನ ಸಾರ್ವಜನಿಕ ಜೀವನಕ್ಕೆ ಜೊತೆಯಾಗಲು ತನ್ನತನವನ್ನು ತ್ಯಾಗ ಮಾಡಿದ ಮಹಿಳೆಯೆನ್ನಬಹುದು. ಅಲ್ಲವೇ ತಾತ?’

‘ನೀನು ಹಾಗೆಯೇ ಹೇಳಬಹುದು. ನನ್ನ ಪ್ರತಿರೋಧವಿಲ್ಲ. ಒಟ್ಟಿನಲ್ಲಿ, ನಾವು ಸಾಮಾನ್ಯ ಗಂಡ ಹೆಂಡತಿಯರಂತೆ ಬದುಕಲಾಗಲಿಲ್ಲ’.

‘ಸರಿ, ತಾತ. ಅರ್ಥವಾಯಿತು. ಇನ್ನೊಂದು ಬಹಳ ಮುಖ್ಯ ವಿಷಯ. ನಿಮ್ಮ ಕಣ್ಣೆದುರು ನಡೆದ ಭೀಕರ ಹಿಂದೂ-ಮುಸ್ಲಿಂ ಸಂಘರ್ಷ ಮತ್ತು ದೇಶ ವಿಭಜನೆ. ಇಂದಿಗೂ ಹಲವು ಜನರು ನಿಮ್ಮನ್ನೇ ಇವುಗಳಿಗೆ ದೂಷಿಸುತ್ತಾರೆ. ಅದರ ಬೆಂಕಿ ಇನ್ನೂ ಆರಿಲ್ಲ. ಆರುವ ಲಕ್ಷಣಗಳೂ ಕಾಣಿಸುತ್ತಿಲ್ಲ. ಇದಕ್ಕೆ ನಿಮ್ಮದೇನಾದರೂ ಸಮಜಾಯಿಷಿ ಇದೆಯಾ?’

‘ಇದೆ ಮಗಳೇ. ಇದರ ಕುರಿತು ಸಾಕಷ್ಟು ಹೇಳುವುದಿದೆ. ಜಿನ್ನಾ ದೇಶ ವಿಭಜನೆಯ ಪ್ರಸ್ತಾಪವಿಟ್ಟಾಗ ನಾನು ಬಹಳಷ್ಟು ನೊಂದುಕೊಂಡೆ ಮತ್ತು ಅವರ ಮನವೊಲಿಸಲು ಸಾಕಷ್ಟು ಪ್ರಯತ್ನಪಟ್ಟೆ. ಬ್ರಿಟಿಷರು ಮುಸ್ಲಿಂ ಸಂಘಟನೆಗಳ ಬೇಡಿಕೆಗೆ ಮಣಿದುದುರಿಂದ, ಜೊತೆಗೆ, ಇದರಿಂದ ಹಿಂದುಗಳೂ ಕೂಡ ಸಾಕಷ್ಟು ಆಕ್ರೋಶಗೊಂಡಿದ್ದರಿಂದ, ನನ್ನಿಂದ ಮುಂದೆ ನಡೆಯಬಹುದಾದುದನ್ನು ತಡೆಯುವುದು ಅಸಾಧ್ಯವೆನ್ನುವ ಸ್ಥಿತಿ ತಲುಪಿತ್ತು. ಇದರಿಂದ ಆಗಬಹುದಾದ ಮಾರಣ ಹೋಮ ಮತ್ತು ಜನಸಾಮಾನ್ಯರ ಕಷ್ಟನಷ್ಟಗಳನ್ನು ಕಡಿಮೆ ಮಾಡಲೆಂದು, ‘ನೀವು ಇಷ್ಟಪಟ್ಟಲ್ಲಿ ಭಾರತದಲ್ಲಿಯೆ ಉಳಿಯಬಹುದು, ನಿಮ್ಮ ರಕ್ಷಣೆ ಮಾಡುತ್ತೇವೆ’, ಎಂದು ಮುಸ್ಲಿಮರಿಗೆ ಕರೆ ನೀಡಿದೆ. ಅದೇ ರೀತಿ, ಪಾಕಿಸ್ತಾನ ರಚನೆಗೆ ಸಹಾಯವಾಗಲೆಂದು ಹಣಕಾಸಿನ ನೆರವು ಕೂಡ ಘೋಷಿಸಿದೆ. ಆದರೆ, ಇದರಿಂದ ಪರಿಸ್ಥಿತಿ ಶಾಂತವಾಗುವುದರ ಬದಲಾಗಿ ದೇಶ ಹೊತ್ತಿಕೊಂಡು ಉರಿಯಲಾರಂಭಿಸಿತು. ನಾನು ದೇಶದ ಸುತ್ತೆಲ್ಲಾ ಓಡಾಡಿ, ಹಿಂದೂ ಮತ್ತು ಮುಸ್ಲಿಮರಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿದೆ. ಆದರೆ ಏನೂ ಪ್ರಯೋಜನವಾಗಲಿಲ್ಲ. ಮುಂದೆ ಇತಿಹಾಸಕಾರರು ಹೇಳಿಕೊಂಡಂತೆ, ನನ್ನ ಹತ್ಯೆ ನಡೆದ ಮೇಲಷ್ಟೇ ಪರಿಸ್ಥಿತಿ ನಿಯಂತ್ರಣಕ್ಕೆ ಬಂದು ಶಾಂತಿ ನೆಲೆಸಿತು. ಬದುಕ್ಕಿದ್ದ ಗಾಂಧಿ ಸಾಧಿಸಲಾಗದ್ದನ್ನು, ಸತ್ತ ಗಾಂಧಿ ಸಾಧಿಸಿದ. ಒಟ್ಟಿನಲ್ಲಿ, ಈ ಪ್ರಕರಣದಲ್ಲಿ, ನಾನು ಮುಸ್ಲಿಮರಿಗೆ ‘ಹಿಂದೂ ನಾಯಕ’ನಂತೆ ಮತ್ತು ಹಿಂದುಗಳಿಗೆ ‘ಹಿಂದೂ ವಿರೋಧಿ’ಯಂತೆ ಕಂಡುಬಂದೆ. ನಾನೆಂದೂ ಧರ್ಮ ರಾಜಕಾರಣ ಮಾಡಿದವನಲ್ಲ. ನನ್ನ ಸ್ವತಂತ್ರ ದೇಶದಲ್ಲಿ ಭಾವೈಕ್ಯತೆ ಮಂತ್ರವಾಗಬೇಕೆನ್ನುವುದು ನನ್ನ ಕನಸಾಗಿತ್ತು. ಇದಕ್ಕಾಗಿ, ನನ್ನ ದೈನಂದಿನ ಪ್ರಾರ್ಥನೆಯಲ್ಲಿ ಎಲ್ಲಾ ಧರ್ಮಗಳ ಭಜನೆ ನಡೆಯುತ್ತಿತ್ತು. ಅಲ್ಲೆಂದೂ, ಏಕ ಧರ್ಮ ಪ್ರಚಾರಕ್ಕೆ ಅವಕಾಶವಿರಲಿಲ್ಲ. ಎಲ್ಲರ ದೇವರೂ ಒಬ್ಬನೇ. ಹಾಗಾಗಿ, ಎಲ್ಲ ಭಿನ್ನತೆಗಳ ನಡುವೆ ಕೂಡಿ ಬಾಳಬೇಕೆಂದು ಶಕ್ತಿಮೀರಿ ಪ್ರಯತ್ನಪಟ್ಟೆ. ಆದರೆ ಅದು ನನಸಾಗಲಿಲ್ಲ’. 

‘ನೀವು ಹೇಳುವುದು ನಿಜ ತಾತ. ಈಗ ನಮ್ಮ ದೇಶದಲ್ಲಿ ನಡೆಯುತ್ತಿರುವುದೇ ಧಾರ್ಮಿಕ ರಾಜಕಾರಣ. ಇದು ಮುಗ್ದ ಜನರನ್ನು ಬಲಿ ತೆಗೆದುಕೊಳ್ಳುತ್ತಲೇ ಇದೆ. ಇದರಿಂದ ಮುಕ್ತಿ ಪಡೆಯುವ ಸೂಚನೆ ಕಾಣಿಸುತ್ತಿಲ್ಲ’

‘ತಾತ... ಇನ್ನೊಂದು ವಿಷಯ… ನಿಮ್ಮ ಮತ್ತು ಕ್ರಾಂತಿಕಾರಿಗಳ ನಡುವೆ ಯಾಕೆ ಸಮನ್ವಯ ಕಂಡುಕೊಳ್ಳಲಾಗಲಿಲ್ಲ? ಅವರೂ ಕೂಡ ನಿಮ್ಮಂತೆ ದೇಶ ಪ್ರೇಮಿಗಳು. ಸ್ವಾತಂತ್ರ್ಯಕ್ಕಾಗಿ ಜೀವ ತೆತ್ತವರು. ನಿಮಗೆ ಅವರ ತ್ಯಾಗ ಮಹತ್ವದ್ದೆನಿಸಲಿಲ್ಲವೇ? ಈಗಲೂ, ಅವರ ಅಭಿಮಾನಿಗಳು ನಿಮ್ಮನ್ನು ಇದಕ್ಕಾಗಿ ದೂಷಿಸುತ್ತಾರೆ’. 

ತಾತ ತಕ್ಷಣ ತಲೆಯಾಡಿಸಿ, ನನ್ನತ್ತ ಕೈ ಅಡ್ಡ ಹಿಡಿದು ಮಾತು ಮುಂದುವರಿಸಿದರು.

‘ಛೇ, ಛೇ...ನಾನು ಅವರನ್ನೆಂದೂ ಕಡೆಗಣಿಸಿಲ್ಲ. ಅವರ ದೇಶ ಸೇವೆ ಅಪಾರವಾದುದು. ನಾನು ರಕ್ತಪಾತದ ವಿರೋಧಿ. ದೇಶದ ಸ್ವಾತಂತ್ರ್ಯ, ಶಾಂತಿ ಮತ್ತು ಅಹಿಂಸೆಯ ಮೂಲಕವೇ ಸಿಗಬೇಕೆಂಬ ಧ್ಯೇಯಕ್ಕೆ ನಾನು ಬದ್ಧನಾಗಿದ್ದೆ. ಅದರಂತೆಯೇ ಮುಖ್ಯವಾಹಿನಿಯ ಹೋರಾಟ ನಡೆದಿತ್ತು. ಆದರೆ, ಈ ಬಿಸಿರಕ್ತದ ತರುಣರಿಗೆ ಸ್ವಾತಂತ್ರ್ಯ ತ್ವರಿತವಾಗಿ ಸಿಗಬೇಕಿತ್ತು. ನನ್ನ ಮನಃಪರಿವರ್ತನೆಯ ಮಾರ್ಗದಲ್ಲಿ ಅವರಿಗೆ ವಿಶ್ವಾಸವಿರಲಿಲ್ಲ. ಅದಕ್ಕಾಗಿ, ರಕ್ತಪಾತಕ್ಕೂ ಸಿದ್ಧರಾಗಿದ್ದರು. ಅದನ್ನು ನಾನು ಯಾವ ಕಾರಣಕ್ಕೂ ಒಪ್ಪಿರಲಿಲ್ಲ. ಇದರಿಂದ ಅವರು ಹತಾಶೆಗೊಂಡು ತಮ್ಮ ಮಾರ್ಗದಲ್ಲಿ ಮುಂದುವರಿದು ಬದುಕು ಅಂತ್ಯಗೊಳಿಸಿದರು, ಹುತಾತ್ಮರಾದರು. ಅವರ ದೇಶಭಕ್ತಿಗೆ ನನ್ನ ಪ್ರಣಾಮಗಳು’.

ತಾತನಿಗೆ ಚಡಪಡಿಕೆ ಹತ್ತಿಕೊಂಡಂತೆ ಕಾಣಿಸಿತು. ಮುಖದಲ್ಲಿ ಅಸಹನೆ ಎದ್ದುಕಂಡಿತು. ತಕ್ಷಣ ಎದ್ದುನಿಂತು, ‘ಸರಿ ಮಗಳೇ, ಸಾಕಷ್ಟು ಸಮಯವಾಯಿತು. ನೀನಿನ್ನೂ ಹೊರಡು’ ಎಂದು ಹೇಳಿದರು. ಆದರೆ, ನನಗೆ ಇನ್ನೊಂದು ಮಹತ್ವದ ಪ್ರಶ್ನೆಯಿತ್ತು. ಅದನ್ನು ತಡೆಯಲಾರದೆ ಹೇಳಿದೆ, 

‘ತಾತ, ಇನ್ನೊಂದು ಪ್ರಶ್ನೆ. ಕುತೂಹಲ ತಡೆಯಲಾರದೆ ಕೇಳುತ್ತಿದ್ದೇನೆ. ನನಗಿಂದೂ ಉತ್ತರ ಯಾರು ಹೇಳಿಲ್ಲ. ನಿಮ್ಮ ಕಟ್ಟಾ ಅನುಯಾಯಿಗಳು ಕೂಡ.  ಏನಿದು, ನಿಮ್ಮ ಬ್ರಹ್ಮಚರ್ಯ ವ್ರತವನ್ನು ಸಾರ್ವಜನಿಕವಾಗಿ ಪರೀಕ್ಷೆಗೆ ಒಳಪಡಿಸಿದ ವಿಧಾನ?... ಇದರಿಂದ ನೀವು ಸಾಧಿಸಿದ್ದಾದರೂ ಏನು? ಇದರಲ್ಲಿ ತೊಡಗಿಸಿಕೊಂಡ ಎಳೆ ಹೆಣ್ಣುಮಕ್ಕಳ ಮಾನಸಿಕ ಸ್ಥಿತಿ ಹೇಗಿದ್ದಿತ್ತು?  ಒಮ್ಮೆಯಾದರೂ ಯೋಚಿಸಿದ್ದೀರಾ?’

ಮುಂದೆ ಹೋಗಲು ಕಾಲು ಮುಂದಡಿಯಿಟ್ಟಿದ್ದ ತಾತ, ಪುನಃ ಕುಳಿತುಕೊಂಡರು.

ನನ್ನನ್ನೇ ಒಂದು ಕ್ಷಣ ದಿಟ್ಟಿಸಿ, ಹೇಳಿದರು,

‘ಹೌದು. ನೀನು ಒಳ್ಳೆಯ ಪ್ರಶ್ನೆ ಕೇಳಿದೆ. ನಾನಾಗಿಯೇ ಹೇಳಿಬಿಡಬೇಕಿತ್ತು. ವಿಶೇಷವಾಗಿ, ನನ್ನ ಈ ಸತ್ವಪರೀಕ್ಷೆಯಿಂದ ಕೆಲವು ಹಿತೈಷಿಗಳಿಗೆ ಕೋಪ ಬಂದಿರುವುದು ಸಹಜ. ಆದರೆ, ಅವರಿಗೆ ನನ್ನ ಉದ್ದೇಶ ಅರ್ಥವಾಗಲೇ ಇಲ್ಲ. ಒಂದು ವೇಳೆ ಗೊತ್ತಾಗಿದ್ದರೆ, ಪರಿಸ್ಥಿತಿಯೇ ಬದಲಾಗುತ್ತಿತ್ತು. ನಾನು ಮೂಲತಃ ಬ್ರಹ್ಮಚರ್ಯದಲ್ಲಿ ನಂಬಿಕೆ ಇಟ್ಟವನು. ಕಸ್ತೂರ್‌ ಬಾ ಬದುಕಿದ್ದಾಗಲೇ ಅವಳ ಸಮ್ಮತಿಯೊಂದಿಗೆ ಬ್ರಹ್ಮಚರ್ಯ ದೀಕ್ಷೆ ತೆಗೆದುಕೊಂಡಿದ್ದೆ. ನನ್ನ ಪ್ರಕಾರ ಕಾಮವನ್ನು ಜಯಿಸಿದವನು ಜಗತ್ತಿನಲ್ಲಿ ಎಲ್ಲವನ್ನೂ ಸಾಧಿಸಬಲ್ಲ. ನನ್ನ ಚಳವಳಿಗಳು ಅಪೇಕ್ಷಿತ ಫಲ ನೀಡದಿರಲು ನನ್ನ ಮನುಷ್ಯ ಸಹಜ ಚಂಚಲತೆಗಳೇ ಕಾರಣವೆನ್ನುವುದು ನನ್ನ ನಂಬಿಕೆಯಾಗಿತ್ತು. ಅವುಗಳನ್ನು ಮೀರಬೇಕೆಂದು ಈ ಪ್ರಯೋಗಗಳನ್ನು ಮಾಡಿದ್ದೆ. ಈ ಘಟನೆಗಳಾದಾಗ ನನ್ನ ಪತ್ನಿ ಕಸ್ತೂರ್‌ ಬಾ ಬದುಕಿರಲಿಲ್ಲ. ನನಗೂ ಸಾಕಷ್ಟು ವಯಸ್ಸಾಗಿತ್ತು. ಹಾಗಾಗಿ, ಚಿಕ್ಕ ಹೆಣ್ಣುಮಕ್ಕಳೊಂದಿಗೆ ಕಾಮಕ್ರೀಡೆಯಾಡುವ ಪ್ರಶ್ನೆಯೇ ಮೂಡುವುದಿಲ್ಲ. ಅದೊಂದು ಸ್ವಪ್ರಯೋಗವಷ್ಟೇ. ಆ ಪರೀಕ್ಷೆಗೆ ನಾನು ಆಯ್ದುಕೊಂಡ ಹೆಣ್ಣುಮಕ್ಕಳು ನನ್ನ ಪರಿಚಯದವರು ಮತ್ತು ಸಾಕಷ್ಟು ಆಪ್ತರು ಕೂಡ. ನಾನು ಯಾಕೆ ಚಿಕ್ಕವಯಸ್ಸಿನ ಹೆಣ್ಣುಮಕ್ಕಳನ್ನು ಆಯ್ಕೆ ಮಾಡಿದೆನೆಂದರೆ, ಎಷ್ಟು ಚಿಕ್ಕ ವಯಸ್ಸಿನ, ಆಕರ್ಷಕ ಹೆಣ್ಣು ದೇಹಗಳ ಪಕ್ಕದಲ್ಲಿ ಮಲಗಿದ್ದರೂ ನನ್ನ ದೇಹ ಉದ್ರೇಕವಾಗುವುದಿಲ್ಲ ಎನ್ನುವುದನ್ನು ಸಾಧಿಸಬೇಕಿತ್ತು. ಹಾಗೆಯೇ, ಪರೀಕ್ಷೆಗೆ ನನ್ನನ್ನು ಒಡ್ಡಿಕೊಂಡು ಯಶಸ್ವಿಯಾದೆ. ಇದರಿಂದ ಆಗಿರುವ ಎಲ್ಲ ತಪ್ಪು ಅಭಿಪ್ರಾಯಗಳಿಗೆ ನನ್ನ ಕ್ಷಮೆ ಇರಲಿ. ಮೊಮ್ಮೊಕ್ಕಳ ವಯಸ್ಸಿನ ಹೆಣ್ಣುಮಕ್ಕಳೊಂದಿಗೆ ನಾನು ಅಶ್ಲೀಲವಾಗಿ ನಡೆದುಕೊಂಡಿಲ್ಲ. ಅವರು ಕೂಡ ನನ್ನನ್ನು ತಾಯಿಯ ಸ್ಥಾನದಲ್ಲಿಟ್ಟಿದರು. ಆ ಹೆಣ್ಣು ಮಕ್ಕಳು ಸ್ವತಃ ಒಪ್ಪಿಯೇ, ಈ ಪರೀಕ್ಷೆಯಲ್ಲಿ ನನ್ನ ಜೊತೆಯಾಗಿದ್ದರು. ಇದಕ್ಕಿಂತ ಬೇರೇನೂ ಹೇಳಲು ನನಗೆ ತೋಚುತ್ತಿಲ್ಲ’. 

‘ಆದರೂ... ನನಗೆ ನಿಮ್ಮ ಈ ಪರೀಕ್ಷೆ ಅಷ್ಟೊಂದು ಒಪ್ಪಿಗೆಯೆನಿಸುತ್ತಿಲ್ಲ. ನನಗನಿಸುವಂತೆ, ಆ ಹೆಣ್ಣುಮಕ್ಕಳು ನಿಮಗೆ ಭಯಗೊಂಡು, ಪ್ರತಿಭಟಿಸಲಾಗದೆ ಒಪ್ಪಿಕೊಂಡಿರಬೇಕಷ್ಟೆ. ಮುಂದೆ, ಅವರ್ಯಾರು ಸ್ವಂತ ಸಂಸಾರ ನಡೆಸಿದ ಉದಾಹರಣೆಗಳಿಲ್ಲ ಅಲ್ಲವೇ?’

‘ಹೌದೇ? ನಾನೆಂದೂ ಇದರ ಕುರಿತು ಆಲೋಚಿಸಿರಲಿಲ್ಲ. ನನ್ನ ಮಾತಿಗೆ ಪ್ರತಿರೋಧಿಸದೆ ಆ ಹೆಣ್ಣು ಮಕ್ಕಳು ಒಪ್ಪಿಕೊಂಡಿದ್ದರಿಂದ ನನ್ನ ಪ್ರಯೋಗಗಳು ನಿರ್ವಿಘ್ನವಾಗಿ ಮುಂದುವರಿದವು. ಇವೆಲ್ಲಾ ಪಾರದರ್ಶಿಯವಾಗಿ ಮತ್ತು ಸಾರ್ವಜನಿಕವಾಗಿ ನಡೆದವು. ಇದರಿಂದಾಗಿ, ನನ್ನ ಸ್ವನಿಯಂತ್ರಣದ ಸತ್ವಪರೀಕ್ಷೆ ಯಶಸ್ವಿಯಾಗಿ ನಡೆದು ಹೋಯಿತು. ಆ ಹೆಣ್ಣು ಮಕ್ಕಳಿಗೆಲ್ಲಾ ನಾನು ಅಜ್ಜನ ಸ್ಥಾನದಲ್ಲಿದ್ದು ಅವರ ಮುಂದಿನ ಜೀವನಕ್ಕೆ ವ್ಯವಸ್ಥೆ ಮಾಡಿದ್ದೆ. ಅವರೆಲ್ಲಾ ನನ್ನ ಜೀವನ ಮಾರ್ಗವನ್ನು ಒಪ್ಪಿಕೊಂಡವರು. ಇಲ್ಲಿ ಒತ್ತಾಯಕ್ಕೆ ಆಸ್ಪದವಿರಲಿಲ್ಲ. ಅದಕ್ಕಿಂತ ಇನ್ನೇನೂ ಹೆಚ್ಚಿಗೆ ಹೇಳಲಾರೆ’. 

ತಾತ ಮೌನವಾದರು. ಆ ಮೌನ, ನನ್ನನ್ನೂ ಆವರಿಸತೊಡಗಿತು. ನಾನು ಇನ್ನೇನೂ ಕೇಳುವುದಿರಲಿಲ್ಲ. ಹಾಗಾಗಿ, ಹೊಸ ವಿಚಾರಗಳಿಗಾಗಿ ತಡಕಾಡುತ್ತಾ, ಒಂದು ಕ್ಷಣ ಕಣ್ಣು ಮುಚ್ಚಿ ಕುಳಿತು, ಅವರ ಮಾತನ್ನೇ ಅವಲೋಕನ ಮಾಡತೊಡಗಿದೆ. ತಕ್ಷಣ ಏನೂ ನೆನಪಾದಂತೆ ಅನ್ನಿಸಿ, ಕೇಳಬೇಕೆಂದು ಕಣ್ಣು ತೆರೆದು ಅವರತ್ತ ಮುಖ ಮಾಡಿದರೆ, ಅಲ್ಲಿ ಅವರಿರಲಿಲ್ಲ. ಅರೆ! ಎಲ್ಲಿ ಹೋದರು, ಈ ತಾತ? ಸುಮಾರು ಒಂದು ಘಂಟೆಯ ಕಾಲ ನನ್ನೊಂದಿಗೆ ಲೋಕಾಭಿರಾಮವಾಗಿ ಮಾತನಾಡಿದ ತಾತ, ತಕ್ಷಣ ಅದು ಹೇಗೆ ಕಣ್ಮರೆಯಾದರು? ಅದೂ...ಸದ್ದು ಗದ್ದಲವಿಲ್ಲದೆ! ಏನಿದು ಅಚ್ಚರಿ! ಅಂದರೆ... ಇಲ್ಲಿಯವರೆಗೆ ನಡೆದಿರುವ ನಮ್ಮ ಮಾತುಕಥೆಗಳೆಲ್ಲಾ ಭ್ರಮೆಯೇ? ಸಾವರಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾಯಿತು. ವಾಸ್ತವಕ್ಕೆ ಬಂದು ನಿಧಾನವಾಗಿ ಮನೆಯತ್ತ ಹೆಜ್ಜೆ ಹಾಕಲಾರಂಭಿಸಿದೆ. ಪಾರ್ಕಿನ ಗೇಟನ್ನು ದಾಟಿ ಅದನ್ನು ಮುಚ್ಚಲೆಂದು ಹಿಂತಿರುಗಿ ನೋಡಿದರೆ, ಗಾಂಧಿಯ ಪ್ರತಿಮೆ ಎಂದಿನಂತೆಯೇ ಮೌನವಾಗಿ ನಿಂತಿತ್ತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು