ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಿತಾ ಅಮೃತರಾಜ್ ಬರೆದ ಕಥೆ: ಶಂಕರಾಪುರ ಮಲ್ಲಿಗೆ

Last Updated 23 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಸಾಗರ್ ಟಾಕೀಸ್ ನಾಳೆಯಿಂದ ಇನ್ನು ಓಡುವುದಿಲ್ಲವೆಂಬ ಸುದ್ದಿಗೆ ಅದೆಷ್ಟು ಜನರ ಹೃದಯ ಸ್ತಬ್ಧವಾಯಿಯತೋ, ಅದೆಷ್ಟು ಜನರ ಬಾಯಿಗೆ ಗ್ರಾಸವಾಯಿತೋ ಗೊತ್ತಿಲ್ಲ. ಇಷ್ಟು ದಿನ ಆ ಊರಿನ ಜೀವನಾಡಿಯಂತೆ ಕೆಲಸ ಮಾಡಿದ ಚಿತ್ರಮಂದಿರ ಏಕಾಏಕಿ ನಾಳೆಯಿಂದ ಬಾಗಿಲು ತೆರೆಯುವುದಿಲ್ಲ ಅಂದರೆ ಹೇಗಾಗಬೇಡ? ಕಾಪಿ ತೋಟ ಕೆಲಸ ಮುಗಿಸಿ ಮ್ಯಾಟನೀ ಶೋ ನೋಡಲಿಕ್ಕಾಗಿ ಬಂದವರೆಷ್ಟೋ? ಒಂದಾವರ್ತಿಯ ಗದ್ದೆ ಕೆಲಸ ಮುಗಿಸಿ ರವಿಚಂದ್ರನ ಸಿನೇಮಾ ನೋಡಲಿಕ್ಕೆ ನಿಂದವರೆಷ್ಟೋ? ಅದೆಷ್ಟೋ ಪ್ರೇಮಿಗಳಿಗೆ ಸಾಗರ್ ಚಿತ್ರಮಂದಿರವಷ್ಟೇ ಏಕಾಂತ ಸ್ಥಳ. ಯಾವಾಗಲೂ ಗಿಜಿಗಿಜಿ ಜನರಿಂದ ತುಂಬಿರುತ್ತಿದ್ದ, ಅಷ್ಟುದ್ದ ಕ್ಯೂ ನಿಲ್ಲಲು ಒಂದಿಷ್ಟೂ ಬೇಸರಿಸದೆ, ಪರದೆಯ ಮೇಲೆ ಮುಂದೆ ನೋಡಲಿರುವ ನವಿರು ಕ್ಷಣಗಳಿಗೆ ಎಲ್ಲ ಆಯಾಸವನ್ನು ಬದಿಗೊತ್ತಿ ಉದ್ವೇಗದಿಂದ ಕಾಯುತ್ತಿದ್ದ‌ ಚಿತ್ರ ರಸಿಕರು. ಇಷ್ಟೆಲ್ಲಾ ಇದ್ದೂ ಚಿತ್ರಮಂದಿರವನ್ನು ಒಂದು ದಿನವೂ ಬಾಗಿಲು ಹಾಕದಂತೆ ನೋಡಿಕೊಂಡ ಪ್ರೇಕ್ಷಕರಿದ್ದೂ ನಾಳೆಯಿಂದ ಚಿತ್ರ ಮಂದಿರ ತೆರೆಯವುದಿಲ್ಲವೆಂದರೆ..ಯಾಕಿರಬಹುದು? ಯಾರಿಗೂ ಉತ್ತರ ಗೊತ್ತಿಲ್ಲ. ನಾಳೆಯಿಂದ ಚಿತ್ರ ಮಂದಿರ ತೆರೆಯುವುದಿಲ್ಲವೆಂಬ ಸಂಗತಿ ಮೊದಲೇ ‌ಗೊತ್ತಿದ್ದರೆ, ಜನರು ಬಾಗಿಲ ಬಳಿಯೇ ಝಂಡಾ ಊರಿಬಿಡುವರೇನೋ ಅನ್ನುವ ಭಯವಂತೂ ಮಾಲಿಕನಿಗೆ ಇದ್ದೇ ಇತ್ತು ಅನ್ನಿಸುತ್ತದೆ. ಹಾಗಿರುವಾಗ‌ ಆರ್ಥಿಕ ಅಡಚಣೆಯಂತೂ ಖಂಡಿತಾ ಆಗಿರಲಾರದು.‌ ಇದರಿಂದಾಗಿಯೇ ಥಿಯೇಟರಿನ ಮಾಲಿಕ ಅಲ್ಲಿ ಇಲ್ಲಿ ಬಂಗ್ಲೆ, ಜಾಗ ಅಂತ ಬೇರೆ ಬೇರೆ ಉದ್ಯಮಗಳಲ್ಲಿ ತೊಡಗಿಸಿಕೊಂಡದ್ದೂ ಜನರಿಗೆ ಗೊತ್ತೇ ಇದೆ. ಇಷ್ಟಿದ್ದೂ ಅದರಾಚೆಗಿನ ಕಾರಣ ಎಲ್ಲರ ಊಹೆಗೆ ಮೀರಿದ್ದು. ಎಲ್ಲರೂ ಒಂದು ರೀತಿಯಲ್ಲಿ ಮ್ಲಾನವದನರಾಗಿ,‌ ಉತ್ಸಾಹವೇ ಇಲ್ಲದಂತೆ ಕುಳಿತಿರುವಾಗ ಗೋಣಿ ಬೀಡಿನ ರಾಣಿಯಕ್ಕ ಟಾಕೀಸು ಮುಚ್ಚಿದ ಖುಷಿಯಲ್ಲಿ ತುಂಬ ಲವಲವಿಕೆಯಿಂದ ಎದ್ದು ಬಾಗಿಲಿಗೆ ನೀರು ಹಾಕಿ ಸಿನೇಮಾ ಹಾಡು ಗುನುಗುತ್ತಾ, ಗಂಟೆ ಏಳಾದರೂ ಇನ್ನೂ ಏಳದ ಮಗಳಿಗೆ ಎಂದಿಗಿಂತ ನಯವಾಗಿ ಗದರುತ್ತಾ ಕೆಲಸ ಹಚ್ಚಿಕೊಂಡಿದ್ದಳು.

ಒಂಟಿ ಹೆಂಗಸು ರಾಣಿ. ಸ್ವಲ್ಪ ಸುತ್ತು ಕಮ್ಮಿಯಂತಿರುವ ಊರೂರು ತಿರುಬೋಕ ಗಂಡ, ಯಾವಾಗ ಮನೇಲಿ ಇರ್ತಾನೋ, ಯಾವಾಗ ಊರುರೂ ಅಲಿತಾನೋ ಗೊತ್ತಿಲ್ಲ. ಅವನು ಯಾಕೆ ಹೀಗಾದ? ಅವನ ಹಿಂದಿನ ಕತೆ ಏನು? ಒಂದೂ ರಾಣಿಗೆ ಗೊತ್ತಿಲ್ಲ. ಗೊತ್ತಿದ್ದೂ ಅವಳು ಏನೂ ಮಾಡುವ ಹಾಗಿರಲಿಲ್ಲ. ಯಾರಾದರು ಸಿನೇಮಾ ನಿರ್ದೇಶಕನಿಗೆ ಗೊತ್ತಾದರೆ, ಅದರ ಹಿಂದಿನ ರಹಸ್ಯ ಭೇದಿಸಿ, ಒಂದಷ್ಟು ಉಪ್ಪು ಹುಳಿ ಖಾರ ಹಚ್ಚಿ ಸಿನೇಮಾ ಮಾಡಿ ಒಂದು ವಾರ ಓಡಿಸುತ್ತಿದ್ದನೋ ಏನೋ. ತಮ್ಮದೇ ಕತೆಗಳು ಪರದೆಯಲ್ಲಿ ಬರುವುದನ್ನ ದುಡ್ಡು ತೆತ್ತು ನೋಡುತ್ತಾ ಮರುಗುವುದು ಬದುಕಿನ ವಿಪರ್ಯಾಸವೆನ್ನಿಸುತ್ತದೆ.

ಹೀಗಿರುವಾಗ ಇರುವ ಒಬ್ಬಳೇ ಮಗಳ ಭವಿಷ್ಯ ನೆನೆದು ಇರುವ ಒಂದೆಕರೆ ಜಾಗದಲ್ಲಿ ಶಂಕರಾಪುರ ಮಲ್ಲಿಗೆ ಗಿಡ ನೆಟ್ಟು, ಬೆಳ್ಳಂಬೆಳಗ್ಗೆ ಮೊಗ್ಗು ಕಿತ್ತು, ಮಾಲೆ ಮಾಡಿ ಎಂಟು ಗಂಟೆಯ ಭಗವತಿ ಬಸ್ಸಿನ ಡ್ರೈವರ್ ಕೈಯಲ್ಲಿ ಮಲ್ಲಿಗೆ ಅಂಗಡಿಗೆ ತಲುಪಿಸಲು ಹೇಳಿದ ಮೇಲೆ ರಾಣಿಯ ಬದುಕು ಒಂದು ಹಂತಕ್ಕೆ ಬರುವಷ್ಟರ ಹೊತ್ತಿಗೆ ಮಗಳು ಉಮಾ ಹತ್ತನೇ ಈಯತ್ತೆ ಪಾಸು ಮಾಡಿದ್ದು ಆಸುಪಾಸಿನವರ ಇರಿಸುಮುರಿಸಿಗೆ ಕಾರಣವಾಗಿ‌ಬಿಟ್ಟಿತ್ತು. ಟೀಚರಿಗೆ ದಿನಾ ತುಂಡು ಮಲ್ಲಿಗೆ ಕೊಟ್ಟು ಅವರನ್ನೆಲ್ಲ ಬುಟ್ಟಿಗೆ ಹಾಕೊಂಡಿದ್ದಾಳೆ ನೋಡು ಅನ್ನುವ ಕುಹಕ ಬೇರೆ. ‘ಆಡಿದವರ ಬಾಯಿ ಸೀದು ಹೋಗ’ ಅಂತ ಮನದೊಳಗೆ ಶಪಿಸುತ್ತಾ, ಯಾರು ಏನೇ ಹೇಳಿದರೂ ಯಾವುದಕ್ಕೂ ಸೊಪ್ಪು ಹಾಕದೆ ಉಮಾಳನ್ನ ಚಿಕ್ಕೂರಿನ ಜೂನಿಯರ್ ಕಾಲೇಜಿಗೆ ಸೇರಿಸಿಯೇ ಬಿಟ್ಟಳು. ಸರಕಾರಿ ಕಾಲೇಜು ಆದಕಾರಣ ಅಷ್ಟೊಂದು ಖರ್ಚು‌ವೆಚ್ಚ ಬರುವುದಿಲ್ಲ, ಮಗಳ ಬಟ್ಟೆ ಬರೆ ಹೇಗೋ ಹೊಟ್ಟೆ ಬಟ್ಟೆ ಕಟ್ಟಿ ಪೂರೈಸಿದರೆ ಆಯಿತು. ಮಗಳು ಓದಿ ಒಂದು ಸರಕಾರಿ ಕೆಲಸ ಹಿಡಿದು ಬಿಟ್ಟರೆ, ಹೇಳದೆ ಕೇಳದೆ ಊರೂರು ತಿರುಗುವ ಗಂಡನಿಗೂ ಹೇಳದೆ ಜಾಗ ಖಾಲಿ ಮಾಡಿಬಿಡಬೇಕೆಂಬ ಮಹತ್ತರವಾದ ಕನಸು ಅವಳದು.

ಚಿಕ್ಕೂರು ಹೆಸರಿಗೆ ತಕ್ಕಂತೆ ಚಿಕ್ಕದಾದ, ಅತ್ತ‌ ಹಳ್ಳಿಯೂ ಅಲ್ಲದ ಇತ್ತ ಪೇಟೆಯೂ ಅಲ್ಲದ ಚೆಂದದ ಊರು. ಊರಿನ ಹೃದಯ ಭಾಗ ಮಾತ್ರ ಪೇಟೆಯ ಎಲ್ಲಾ ಲಕ್ಷಣಗಳನ್ನು ಹೊಂದಿದೆ ಬಿಟ್ಟರೆ ಚಿಕ್ಕೂರಿನ ಕರೆಮುರೆಯಲ್ಲಿ ಇನ್ನೂ ಕಾಪಿ ತೋಟ, ಅಡಿಕೆ ತೋಟ, ಭತ್ತದ ಗದ್ದೆಗಳು ಉಳಿದುಕೊಂಡಿವೆ. ಚಿಕ್ಕೂರಿನ ಮುಖ್ಯ ಆಕರ್ಷಣೆ ಅಲ್ಲಿಯ ಒಂದು ಕಾಲೇಜು ಮತ್ತೊಂದು ಚಿತ್ರಮಂದಿರ. ಅಬಾಲವೃದ್ದರಾಗಿ ಚಿತ್ರಮಂದಿರದ ಹೊರ ಆವರಣದಲ್ಲಿ ಟಿಕೇಟಿಗಾಗಿ ಕ್ಯೂ ನಿಲ್ಲುವುದ ನೋಡುವುದೇ ಒಂದು ಸೊಬಗು. ಕಾಲೇಜಿನಿಂದ ಹೊರಗೆ ಬರುವಾಗ ಸಿಗುವ ಹಾದಿಯಲ್ಲಿ ಯಾರೆಲ್ಲ ಸಿನೇಮಾ ನೋಡಲು ಬಂದಿದ್ದಾರೆ ಅಂತ ಪತ್ತೆ ಹಚ್ಚಿ ಬಿಡಬಹುದಿತ್ತು. ಕದ್ದು ಸಿನೇಮಾ ನೋಡಲು ಬಂದ ಪರಿಚಯದವರು ಇದ್ದರೆ ಊರಿಡೀ ಗುಲ್ಲಾಗಿ ಬಿಡುತ್ತಿತ್ತು. ಕಾಲೇಜು ಹೋಗುವ ಮಕ್ಕಳಂತೂ ಒಂಭತ್ತು ಗಂಟೆಯ ಬಸ್ಸು ಹತ್ತಿ, ಎಲ್ಲಿಗೆ ಹೋಗುತ್ತಾರೆ? ಕಾಲೇಜಿಗೋ ಅಥವ ಸಿನೇಮಾ ಮಂದಿರಕ್ಕೋ ಅಂತ ಸ್ಪಷ್ಟ ಉತ್ತರ ಸಿಕ್ಕುತ್ತಿರಲಿಲ್ಲ. ಇಂತಹ ಹೊತ್ತಿನಲ್ಲಿ ಗೋಣಿ ಬೀಡುವಿನ‌ ರಾಣಿಯಕ್ಕನ ಮಗಳು ಉಮಾಳು ವ್ಯಾನಿಟಿ ಬ್ಯಾಗ್ ಕೋಸಿ‌ ಕಾಲೇಜಿಗೆ ಹೋಗಲು ಶುರು ಮಾಡಿದ ಮೇಲೆ ಈ ಕತೆ ಶುರುಗೊಂಡದ್ದು. ನಿಯತ್ತಿನಿಂದ ಕಾಲೇಜಿಗೆ ಹೋಗಲು ಶುರು ಮಾಡಿದವಳು ಉಮಾ. ಕಾಲೇಜು ಬಿಟ್ಟರೆ ಮನೆ.‌ ಇರುವ ನಾಕೈದ್ ಚೂಡಿದಾರ್ ಅನ್ನೇ ಒಗೆದು ಮಲ್ಲಿಗೆಯ ಪರಿಮಳಯುಕ್ತ ಕಂಫರ್ಟ್ ಹಾಕಿ, ಅಮ್ಮ‌ ಕೊಟ್ಟ ಒಂದು ತುಂಡು ಶಂಕರಾಪುರ ಮಲ್ಲಿಗೆ ಮುಡಿದು ಸರಿಯಾಗಿ 9 ಗಂಟೆಗೆ ಬಸ್ಸು ಹತ್ತಿದಳೆಂದರೆ ಬಸ್ಸಿಡೀ ಮಲ್ಲಿಗೆ ಪರಿಮಳ. ಕಾಲೇಜು ಮಕ್ಕಳು ಅವಳನ್ನು ಶಂಕರಾಪುರದ ಮಲ್ಲಿಗೆ ಅಂತನೇ ಕಿಚಾಯಿಸುತ್ತಿದ್ದದ್ದು.

ಅವಳ ಕಾಲೇಜಿನಲ್ಲಿ ಕೊನೇ ವರುಷದ ಪದವಿ ಓದುತ್ತಿರುವ ‌ಸಾಗರ್, ಸಾಗರ್ ಟಾಕೀಸಿನ ಭಾವೀ ಮಾಲಿಕ.‌ ‌ಕಾರಿದ್ದರೂ ಸೀದಾ ಸಾದಾ ಅದೇ ಬಸ್ಸಿನಲ್ಲಿ ಬರುವಾತ. ಅದೇಗೋ ಪದೇ ಪದೇ ಒಂದೇ ಸೀಟಿನಲ್ಲಿ ಕೂತು ಅದೂ ಇದೂ ಮಾತಾಡಿ ಉಮಾಳು, ಸಾಗರ್, ಸಿನೇಮಾ ಟಾಕಿಸಿನೊಳಗೆ ಬಂದು ಕೂರುವಷ್ಟರ ಹೊತ್ತಿಗೆ ಮಲ್ಲಿಗೆಯ ಪರಿಮಳದಂತೆ ಸುದ್ದಿ ಚಿಕ್ಕೂರಿಂದ ಹೊರಟು ಗೋಣಿಬೀಡಿನವರೆಗೆ ಬಂದು ನಿಂತಿತ್ತು. ಅರೆಕ್ಷಣ ರಾಣಿಗೆ ನಿಂತ ನೆಲವೇ ಕುಸಿಯುವಂತಾಯಿತು. ಎಲ್ಲಿ ತನಕ ಮಗಳನ್ನ ಸೆರಗಲ್ಲಿ ಕಟ್ಟಿಕೊಂಡಿರಲು ಸಾಧ್ಯ? ಸಾಗರ್, ದೊಡ್ಡ ಶ್ರೀಮಂತ ಕುಳನ ಮಗ. ಆಚೆ ಈಚೆ ತಿರುಗಿಸಿ, ಸಿನೇಮಾ ತೋರಿಸಿ ಮಗಳನ್ನ ನಡು ದಾರಿಯಲ್ಲಿ ಕೈ ಬಿಟ್ಟರೆ? ಯೋಚನೆಗೆ ಎದೆ ಝಗ್ ಎನ್ನುತ್ತದೆ.

ನೋಡು ಉಮಾ.. ಬೆಂಕಿ ಇಲ್ಲದೆ ಹೊಗೆ ಏಳಲಾರದು. ಸುದ್ದಿ ಎಲ್ಲ ಕಡೆ ಈಗಾಗಲೇ ಹಬ್ಬಿದೆ. ನಿನ್ನ ಬದುಕು ನಿರ್ಧರಿಸುವ ಹಂತದಲ್ಲಿ ನೀ ಇದ್ದೀಯ. ಆದರೂ ನಮ್ಮ ಸ್ಥಾನಮಾನ ನೋಡಿ ಮುಂದುವರೆಯಬೇಕು ತಾನೇ? ಇಲ್ಲ, ಸಾಗರ್ ಅಂತವನಲ್ಲ ನನ್ನ ಕೈ ಬಿಡುವುದಿಲ್ಲ ಅಂತ ನನಗೆ ಚೆನ್ನಾಗಿ ಗೊತ್ತಿದೆ. ಇನ್ನೊಂದು ವರುಷಕ್ಕೆ ನನ್ನ ಪದವಿ ಮುಗಿದು ಬಿಡುತ್ತದೆ. ನಂತರ ಅವನನ್ನೇ ಮದುವೆಯಾಗುವುದು. ನಂತರ ನೀ ಹೂ ಕಟ್ಟುವುದೂ ಬೇಡ, ಮಾರುವುದೂ ಬೇಡ. ಅವಳದು ಆತ್ಮವಿಶ್ವಾಸದ ಕಡ್ಡಿ ತುಂಡು ಮಾಡಿದಂತಹ ಮಾತು. ಎಷ್ಟೆಂದರೂ ರಾಣಿಯದು ಹೆತ್ತ ಕರುಳು. ಅವಳ ಎದೆಯ ಮೊರೆತ ನಿಲ್ಲುವುದಿಲ್ಲ. ಇದ್ದ ಗಂಡ ಹೆಸರಿಗೆ ಮಾತ್ರ, ಲೆಕ್ಕಕ್ಕಿಲ್ಲ. ಇರುವ ಒಬ್ಬ ಹೂವಿನಂತಹ ಮಗಳಿಗಾಗಿ ಅವಳು ಹೂ ಕಟ್ಟಿ ಬದುಕು‌ ನಡೆಸುವುದು. ಇಂತಹುದರಲ್ಲಿ ಮಗಳ ಬಾಳು ಬಾಡುವುದನ್ನ ನೋಡಲು ಅವಳು ಮನಸು ಹೇಗೆ ತಾನೇ ಬಯಸೀತು?

ಉಮಾ, ಸಾಗರ್ ಹಾಗೆ ಎಲ್ಲಂದರಲ್ಲಿ ತಿರುಗಿದವರಲ್ಲ. ಬಸ್ಸಿನಲ್ಲಿ ಬಿಟ್ಟರೆ, ಉಳಿದಂತೆ ಭೇಟಿ ಆಗುವುದು ವಾರಕ್ಕೊಮ್ಮೆ ಚಿತ್ರ ಬದಲಾಗುವ ದಿನ ಸಾಗರ್ ಟಾಕಿಸಿನಲ್ಲಿಯೇ. ಉಳಿದಂತೆ ಎಲ್ಲೂ ಯಾರ‌ ಕಣ್ಣಿಗೂ ಬೀಳದಂತ ಒಂದು ಸಂಕೋಚ ಮತ್ತು ಅಂಜಿಕೆಯನ್ನ ಕಾಯ್ದುಕೊಂಡಿದ್ದರು. ಇವರ ಬಂಧ ಎರಡು ವರ್ಷಗಳ ಗಡಿ ದಾಟಿ‌ ಗಟ್ಟಿಗೊಂಡಿದೆ. ಹೀಗಿರುವಾಗ ಅದು ನಿಜವಾದ ಪ್ರೀತಿಯೇ ಅಂತ ಪ್ರಮಾಣಿಕರಿಸಬಹುದು. ಸಾಗರ್ ಈಗಾಗಲೇ ಕಾಲೇಜು ಮುಗಿಸಿ ಅಪ್ಪನ ಉದ್ಯಮದಲ್ಲಿ ಕೈ ಜೋಡಿಸಿರುವಾಗ ಕೆಲಸ ಬಿಟ್ಟು ತಿರುಗುವಷ್ಟು ಅವನಿಗೆ ಪುರುಸೊತ್ತೂ ಇರಲಿಲ್ಲ ಮತ್ತು ಅಂತಹ ಉಢಾಪೆಯ ವ್ಯಕ್ತಿತ್ವವೂ ಅವನದ್ದಾಗಿರಲಿಲ್ಲ. ಅದೇಗೆ ಹೂ ಕಟ್ಟುವವಳ ಮಗಳಿಗೂ, ಸಿನಿಮಾ ಟಾಕೀಸಿನ ಹುಡುಗನಿಗೂ ಪ್ರಣಯ ಶುರುವಾಯಿತೋ, ದೇವರಾಣೆಗೂ ಇವತ್ತಿಗೂ ಯಾರಿಗೂ ಅರ್ಥೈಸಲಾಗದ ಸಂಗತಿ. ಪ್ರೀತಿ ಅನ್ನುವುದು ಎಲ್ಲಿ ಹುಟ್ಟಿ, ಹೇಗೆ ಬೆಳೆಯುತ್ತೋ ಹೇಳಲಾಗದು. ಅದೆಷ್ಟು ಜನ ಇವರ ಪ್ರೀತಿ ಕಂಡು ಕರುಬಿದರೋ, ತಪ್ಪಿಸಲು ನೋಡಿದರೋ. ಅದೇನೇ ಆದರೂ ಇವರಿಬ್ಬರ ಬಂಧವನ್ನು ಯಾರಿಗೂ ಕಡಿಯಲು ಸಾಧ್ಯವಾಗಿರಲಿಲ್ಲ.

ಊರಿಡೀ ಸದ್ದಾದ ಮೇಲೆ, ಸಾಗರ್ ಅಪ್ಪ ಶಂಕರಪ್ಪನರವರಿಗೆ ತಲುಪದೆ ಇರುತ್ತದೆಯೇ? ಇಲ್ಲಿ ತನಕ ಅಪ್ಪ ಮಗ ಈ ವಿಚಾರ ಮಾತಾಡಿಯೇ ಇರಲಿಲ್ಲವಂತೆ. ಮಾತಾಡಿದರೆ ತಾನೇ ವಿಷಯಕ್ಕೆ ಪೀಠಿಕೆ ಹಾಕಿ ಅದಕ್ಕೊಂದು ಮುನ್ನುಡಿ ಬರೆಯುವ ಜವಾಬ್ದಾರಿ ತನ್ನ ಮೇಲೆಯೇ ಬಂದೆರಗುತ್ತದೆ ಅನ್ನುವುದನ್ನ ಅವರು ಬಲ್ಲರು. ಇಲ್ಲೂ ಅವರು ವ್ಯವಹಾರಿಕೆಯ ಜಾಣತನವನ್ನೇ ತೋರಿಸಿ ನಿಭಾಯಿಸಬೇಕಿತ್ತು. ಮಗನ ಸ್ವಭಾವ ಅವರು ಚೆನ್ನಾಗಿ ಬಲ್ಲವರಾದ ಕಾರಣ ತುಂಬಾ ಚಾಲಾಕಿತನದಿಂದ ಸಮಸ್ಯೆಯನ್ನು ಬಗೆಹರಿಸಬೇಕಿತ್ತು. ತಿರುಬೋಕಿ ಅಪ್ಪ,‌ ಹೂ ಮಾರುವ ಅಮ್ಮ ಬೀಗರಾದರೆ ಸಮಾಜದಲ್ಲಿ ಶಂಕರಪ್ಪನವರ ಸ್ಥಾನಮಾನ ಹೇಗಾಗಬೇಡ? ಜನರಿಗೆ ಸಿನೇಮಾ ತೋರಿಸಿ, ಇವರ ಬದುಕೂ ಸಿನೇಮಾ ಕತೆಯಂತಾಯಿತೇ ಅಂತ ಜನ ಆಡಿ ಕೊಳ್ಳ‌ಲಾರರೇ? ಇದನ್ನೆಲ್ಲ ಮಗನ ಮುಂದೆ ಹೇಳಿಕೊಂಡರೆ ಸಮಸ್ಯೆ ಪರಿಹಾರ ಆಗುವುದಕ್ಕಿಂತ ಉಲ್ಭಣಗೊಳ್ಳುವುದೇ ಹೆಚ್ಚು ಅಂತ ಅವರಿಗೆ ಚೆನ್ನಾಗಿ ತಿಳಿದಿದೆ. ಈಗಿನ ಜಮಾನದ ಹುಡುಗ ಅವನು. ಮಗನ ನೋಯಿಸುವ ಹಾಗೂ ಇಲ್ಲ, ನೋಯಿಸದಿರುವ ಹಾಗೂ ಇಲ್ಲ. ಬೆಣ್ಣೆಯಿಂದ ನೂಲು ತೆಗೆದಂತೆ ಸಮಸ್ಯೆಯನ್ನು ಬಗೆಹರಿಸಬೇಕಾದದ್ದು ಅವರ ಮುಂದಿರುವ ಸವಾಲು.

ಯಾರಿಗೂ ಹೇಳದೇ ಕೇಳದೇ ಚಿತ್ರಮಂದಿರಕ್ಕೆ ಬೀಗ ಜಡಿದು ಬಿಟ್ಟರು. ಅದರ ಮುಂದೆ ದೊಡ್ಡದೊಂದು ಬೋರ್ಡ್‌. ಇನ್ನು ಮುಂದೆ ಇಲ್ಲಿ ಚಲನಚಿತ್ರ ಪ್ರದರ್ಶನಗೊಳ್ಳುವುದಿಲ್ಲ. ಶಂಕರಪ್ಪ ಈಗ ಹೊಸ ಊರಿನಲ್ಲಿ ಹೊಸ ಉದ್ಯಮ ಶುರು ಮಾಡಿದ್ದಾರೆಂಬ ಸುದ್ದಿ ಹಳತಾಗುತ್ತ ಬಂತು. ಸಾಗರ್ ಚಿಕ್ಕೂರಿಗೆ ಬಂದದ್ದನ್ನ ಯಾರೂ ಆನಂತರ ನೋಡಲಿಲ್ಲ.

ರಾಣಿಯ ಖುಷಿ ಹೆಚ್ಚು ದಿನ ನಿಲ್ಲಲಿಲ್ಲ. ಟಾಕೀಸು ‌ಮುಚ್ಚಿ ನಿರಾಳ ಆಯ್ತು ಅಂದುಕೊಂಡರೆ, ಅದು ಮತ್ತೊಂದು ಸಮಸ್ಯೆಯನ್ನ ಎಳೆದು ಹಾಕಬಹುದೆಂಬ ಕಲ್ಪನೆ ಅವಳಿಗೆ ಇರಲಿಲ್ಲ. ದಿನ ಕಳೆದಂತೆ ಉಮಾಳ ಅಸಹನೀಯ ಮೌನ ಅವಳನ್ನು ಕೊಲ್ಲತೊಡಗುತ್ತದೆ. ಅವಳ ಜೋತು ಬಿದ್ದ ಕಣ್ಣಾಲಿಗಳು ಹೊರಬಾಗಿಲಿಗೆ ದಿಟ್ಟಿ ನೆಡುವಾಗ ಅವಳ ಒಡಲೊಳಗೆ ಸಂಕಟದ ಸುಯಿಲು. ಕಣ್ಣು ಸೋತ‌ ಮೇಲೆ ಉಮಾ, ಇತ್ತೀಚೆಗೆ ಒಟ್ರಾಸಿ ಮಾತಾಡುತ್ತಾ ಮನೆ ಮನೆ ತಿರುಗಲು ಶುರುಮಾಡಿ, ಹೋದ ಹೋದಲ್ಲೇ ಉಳಿದು ಬಿಡುವುದು ಮಾಮೂಲಿಯಾಗಿದೆ. ಅಪ್ಪನನ್ನು ಬಿಟ್ಟಂತೆ ಮಗಳನ್ನು ಬಿಡಲು ಸಾಧ್ಯವೇ? ಸಂಜೆ ಹೊತ್ತಿನಲ್ಲಿ ಕಾದು ಕಾದು ಮನೆ ಮನೆ ಹುಡುಕಿ ಹೊರಟರೆ, ಯಾರದೋ ಒಬ್ಬರ ಮನೆಯಲ್ಲಿ ಸಿನೇಮಾದ ದುರಂತ ಕತೆಯನ್ನು ಹೇಳುತ್ತಾ ಕೂತು ಬಿಟ್ಟಿರುತ್ತಿದ್ದಳು. ಅಪ್ಪನಂತೆ ಮಗಳಿಗೂ ತಿರುಗುವ ಖಯಾಲಿಯಾ ಅಂತ ಊರು ಮಾತಾಡಿಕೊಂಡಾಗಲೆಲ್ಲಾ ಯಾವ ಟಾಕೀಸು ಮುಚ್ಚಿದ್ದಕ್ಕೆ ಕುಷಿ ಪಟ್ಟಳೋ ಈಗ ಅದೇ ಟಾಕೀಸು ಬಾಗಿಲು ತೆಗೆಯಲಪ್ಪ ಅಂತ ಒಳಗೊಳಗೆ ರಾಣಿ ಊರ ದೇವರಿಗೆ ಮೊರೆಯಿಡುತ್ತಾಳೆ. ಎಲ್ಲಾ ಸರಿ ಹೋದರೆ ಮೈ ತುಂಬ ಮಲ್ಲಿಗೆ ಮಾಲೆ ಇಟ್ಟು ಅಲಂಕರಿಸುವೆ ಅಂತ ಹರಕೆ ಇಡುತ್ತಾಳೆ.

ಇದೆಲ್ಲದರ‌ ನಡುವೆ ರಾಣಿಯ ದಿನಚರಿಯಲ್ಲಿ ಮಾತ್ರ ಯಾವ ವ್ಯತ್ಯಾಸವೂ ಇರುವುದಿಲ್ಲ. ಯಾಂತ್ರಿಕವಾಗಿ ಹೂ ಮಾಲೆ ಕಟ್ಟುತ್ತಾ ಅಪ್ಪನಿಗೂ, ಮಗಳಿಗೂ ಮೆಟ್ಟು ಬಾಗಿಲಲ್ಲಿ ಕೂತು ದಾರಿ ಕಾಯುತ್ತಾ ಇರುವುದು ವರುಷಗಳಿಂದ ನಡೆದೇ ಇದೆ. ಮಗಳ ಕತೆ ಹೀಗಾಗುವುದರ ಹಿಂದಿನ ಕಾರ್ಯ ಕಾರಣ ಗೊತ್ತಿರುವಾಗ,‌ ತಿರುಬೋಕಿ ಗಂಡನ ಹಿಂದಿರುವ ಕಾರಣ ಗೊತ್ತಿಲ್ಲದ ಸಮಸ್ಯೆ ಅವಳ ಕಣ್ಣ‌ಮುಂದೆ ಬಂದು ನಿಂತಂತಾಗಿ ಏಕಾಏಕಿ ಅವಳಿಗೆ ಗಂಡನ ಬಗ್ಗೆ ವಿಪರೀತ ಮರುಕ ಹುಟ್ಟುತ್ತದೆ. ಯಾಕೋ ಇವರಿಬ್ಬರನ್ನು ಸರಿ ಮಾಡಲಾದರೂ ನಾನು ಬದುಕಬೇಕೆಂಬ ಹುಕಿ ಹುಟ್ಟಿ, ಒಳ ಬಂದು ದೇವರಿಗೆ ದೀಪ ಹಚ್ಚುತ್ತಾಳೆ. ಉಳಿದ ಮಲ್ಲಿಗೆ ದಂಡೆಯನ್ನ ದೇವರಿಗೆ ಇಟ್ಟು ಬಂದಾಗ ಹೇಳ ತೀರದ ಯಾವುದೋ ಪ್ರಶಾಂತತೆ ಅವಳ ಮೊಗದಲ್ಲಿ.

ಅಮ್ಮಾ…ಅಪ್ಪ ಸಿಕ್ಕರು ನೋಡು..ಉಮಾ, ಅಪ್ಪನನ್ನು‌ ಹುಡಕಲೆಂದೇ ಹೋದವಳಂತೆ ಕರೆದುಕೊಂಡು ಒಳ ಬಂದಿದ್ದಾಳೆ. ರಾಣಿ ಉದ್ವೇಗದಿಂದ ಓಡಿ ಕದ ನೂಕಿ ಚಿಲಕ ಹಾಕುತ್ತಾಳೆ. ಹಚ್ಚಿಟ್ಟ‌ ದೀಪ ಮನೆ ತುಂಬಾ ಬೆಳಕು ಕೊಡುವಂತೆ ಬೆಳಗುತ್ತದೆ. ಮಲ್ಲಿಗೆಯ ಕಂಪು ಹಿತವಾಗಿ ಹರಡತೊಡಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT