ಭಾನುವಾರ, ಮಾರ್ಚ್ 29, 2020
19 °C
ಚಿಣ್ಣರ ಚಾವಡಿ 

ಬದುಕಿನ ಪಾಠ

ಅರುಣ್ ಕಿಲ್ಲೂರು Updated:

ಅಕ್ಷರ ಗಾತ್ರ : | |

ಮಿತ್ತಬಾಗಿಲು ಎನ್ನುವ ಗ್ರಾಮದ ಬಳಿ ದೊಡ್ಡ ಕಾಡಿತ್ತು. ಆ ಕಾಡಿಗೆ ಹೊಂದಿಕೊಂಡು ಇರುವೆಗಳ ಗುಂಪೊಂದು ವಾಸ ಮಾಡುತ್ತಿತ್ತು. ಇರುವೆಗಳು ಬಹಳ ಶಿಸ್ತಿನಿಂದ ಪ್ರತಿ ದಿನ ಹಗಲಿನಲ್ಲಿ ಆಹಾರ ಸಂಗ್ರಹಿಸುತ್ತಿದ್ದವು. ತಾವು ಸಂಗ್ರಹಿಸಿ ತರುತ್ತಿದ್ದ ಹೆಚ್ಚುವರಿ ಆಹಾರವನ್ನು ಅವು ದಾಸ್ತಾನು ಇಡುತ್ತಿದ್ದವು. ಮಳೆಗಾಲ ಸಮೀಪಿಸಿತು. ಆಗ ಇರುವೆಗಳ ಹಿರಿಯಜ್ಜಿ ಗುಂಪಿನಲ್ಲಿದ್ದ ಎಲ್ಲ ಇರುವೆಗಳನ್ನು ಕರೆಯಿತು.

‘ಇನ್ನು ಕೆಲವೇ ದಿನಗಳಲ್ಲಿ ಮಳೆಗಾಲ ಪ್ರಾರಂಭ ಆಗುತ್ತದೆ. ಮುಂದಿನ ಆರು ತಿಂಗಳು ಮಳೆ ಸುರಿದರೂ ಸುರಿದೀತು. ಮಳೆ ಬಿಡದೆ ಹೋದರೆ ನಮಗೆ ಆಹಾರ ಸಂಗ್ರಹ ಮಾಡಲು ಆಗುವುದಿಲ್ಲ. ಎಲ್ಲರೂ ಹೊರಗಡೆ ಹೋಗಿ ಸಕ್ಕರೆ, ಅಕ್ಕಿ, ಸಿಹಿ ತಿನಿಸುಗಳನ್ನು ಈಗಿರುವುದಕ್ಕಿಂತ ಹೆಚ್ಚು ಪ್ರಮಾಣದಲ್ಲಿ ತರಬೇಕು. ನಾವು ಆರು ತಿಂಗಳಿಗೆ ಆಗುವಷ್ಟು ಆಹಾರವನ್ನು ದಾಸ್ತಾನು ಮಾಡಬೇಕು’ ಎಂದು ಹೇಳಿತು.

ಹಿರಿಯಜ್ಜಿಯ ಮಾತು ಉಳಿದ ಇರುವೆಗಳಿಗೆ ಅಷ್ಟಾಗಿ ಹಿಡಿಸಲಿಲ್ಲ. ಈ ಬಾರಿ ಅಷ್ಟೊಂದು ಮಳೆ ಬರಲಿಕ್ಕಿಲ್ಲ. ಈಗ ಒಂದಷ್ಟು ಆಹಾರ ದಾಸ್ತಾನು ಮಾಡಿದರೆ ಸಾಕು. ಮಳೆ ಬಿಡುವು ಕೊಟ್ಟು ಬಿಸಿಲು ಬಂದಾಗ ಯಾವುದಾದರೂ ಮನೆಗೆ ದಾಳಿ ಮಾಡಿ ಸಕ್ಕರೆ, ಅಕ್ಕಿ ಸಂಗ್ರಹಿಸಿದರಾಯಿತು ಎಂದುಕೊಂಡವು. ಆದರೆ ಅವು ಯಾವುದೂ ಅಜ್ಜಿ ಇರುವೆಗೆ ಎದುರು ಮಾತನಾಡಲು ಹೋಗಲಿಲ್ಲ. ಪ್ರತಿನಿತ್ಯ ಈ ಹಿಂದೆ ಸಂಗ್ರಹಿಸಿ ತರುತ್ತಿದ್ದ ಪ್ರಮಾಣದಲ್ಲೇ ಅವು ಆಹಾರವನ್ನು ತರತೊಡಗಿದವು.

ಹಿರಿಯಜ್ಜಿ ಇರುವೆ, ಪ್ರತಿನಿತ್ಯ ಸಂಗ್ರಹ ಆಗುತ್ತಿದ್ದ ಆಹಾರ ಪ್ರಮಾಣವನ್ನು ಲೆಕ್ಕ ಹಾಕುತ್ತಿತ್ತು. ಅದಕ್ಕೆ ಇದುವರೆಗೆ ಸಂಗ್ರಹ ಆಗಿದ್ದ ಆಹಾರ ಪ್ರಮಾಣದ ಬಗ್ಗೆ ಸಮಾಧಾನವಾಗಲಿಲ್ಲ.

ಒಂದು ದಿನ ಅದು ಇರುವೆಗಳಿಗೆ, ‘ಇಲ್ಲಿವರೆಗೆ ಆಹಾರ ಸಂಗ್ರಹ ಕಡಿಮೆ ಆಗಿರುವ ಕಾರಣ ಮಳೆಗಾಲದಲ್ಲಿ ಆಹಾರದ ಅಭಾವ ಉಂಟಾಗಬಹುದು. ನೀವೆಲ್ಲರೂ ಆಹಾರ ದಾಸ್ತಾನು ಹೆಚ್ಚಿಸಲು ಗಮನ ಹರಿಸಬೇಕು’ ಎಂದು ವಿನಯದಿಂದಲೇ ತಾಕೀತು ಹೇಳಿತು.

ಈ ಬಾರಿ ಕಿರಿಯ ಇರುವೆಗಳು ಹಿರಿಯಜ್ಜಿಗೆ ಎದುರು ಮಾತನಾಡಿದವು.

‘ಈ ಬಾರಿ ಅಷ್ಟು ಮಳೆ ಬರುವುದಿಲ್ಲ. ಸುಮ್ಮನೆ ಯಾಕೆ ಚಿಂತೆ ಮಾಡುತ್ತೀರಿ. ಮುಂದಿನ ದಿನಗಳಲ್ಲಿ ಆಹಾರ ಸಂಗ್ರಹಿಸಿದರಾಯಿತು’ ಎಂದು ಕೋಪ ವ್ಯಕ್ತಪಡಿಸಿದವು.

ಕಿರಿಯ ಇರುವೆಗಳ ವರ್ತನೆಗೆ ಹಿರಿಯಜ್ಜಿಗೆ ಕೋಪ ಬಂದರೂ ಅದು ತೋರಿಸಿಕೊಳ್ಳಲಿಲ್ಲ. ಏನೂ ಮಾತನಾಡದೆ ಸುಮ್ಮನಾಯಿತು. ಅದು ಕಿರಿಯ ಇರುವೆಗಳಿಗೆ ಪಾಠ ಕಲಿಸಬೇಕೆಂದು ನಿರ್ಧರಿಸಿತು. ಕಿರಿಯ ಇರುವೆಗಳು ಸಂಗ್ರಹಿಸಿದ ಆಹಾರವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಇಟ್ಟಿತು.

ಹಿರಿಯಜ್ಜಿಯ ಮಾತಿನಿಂದ ಎಚ್ಚೆತ್ತುಕೊಂಡ ಇತರ ಇರುವೆಗಳು ಮರುದಿನದಿಂದ ಹೆಚ್ಚು ಆಹಾರ ಸಂಗ್ರಹ ಮಾಡಲು ಆರಂಭಿಸಿದವು. ನಿಧಾನವಾಗಿ ಆಹಾರದ ದಾಸ್ತಾನು ಪ್ರಮಾಣ ಹೆಚ್ಚತೊಡಗಿತು.

ಕೆಲವೇ ದಿನಗಳಲ್ಲಿ ಮಳೆ ಆರಂಭವಾಯಿತು. ಈ ಹಿಂದೆ ಕಂಡು ಅರಿಯದಂತೆ ಧಾರಾಕಾರ ಮಳೆ ಸುರಿಯಲಾರಂಭಿಸಿತು. ಮಳೆಯಿಂದಾಗಿ ಒಂದು ತಿಂಗಳು ಕಳೆದರೂ ಆಹಾರ ಸಂಗ್ರಹಿಸಲು ಇರುವೆಗಳಿಗೆ ಹೊರಗಡೆ  ಹೋಗಲು ಆಗಲಿಲ್ಲ. ಈ ನಡುವೆ ಕಿರಿಯ ಇರುವೆಗಳ ಆಹಾರ ದಾಸ್ತಾನು ಮುಗಿಯುತ್ತಾ ಬಂತು. ಅವುಗಳಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಕೊನೆಗೆ ಬೇರೆ ಉಪಾಯ ಕಾಣದೆ ಅವುಗಳು ಮಳೆಯಲ್ಲಿ ಒದ್ದೆಯಾಗಿ ಆಹಾರ ಸಂಗ್ರಹಿಸಲು ಹೊರಟವು.

ಮಳೆಯ ರಭಸಕ್ಕೆ ಕಿರಿಯ ಇರುವೆಗಳಿಗೆ ಆಹಾರ ಹುಡುಕುವುದು ಕಷ್ಟವಾಯಿತು. ಅವು ಕಷ್ಟಪಟ್ಟು ಹುಡುಕಿದ ಸಕ್ಕರೆ, ತಿನಿಸುಗಳು ದಾರಿ ಮಧ್ಯೆ ಮಳೆಯಿಂದ ಕರಗಿ ಹೋದವು. ಕಿರಿಯ ಇರುವೆಗಳು ಗೂಡು ಸೇರುವ ವೇಳೆಗೆ ಸ್ವಲ್ಪ ಆಹಾರವಷ್ಟೇ ಉಳಿದಿತ್ತು. ಇರುವೆಗಳು ಮಳೆಯಲ್ಲಿ ನೆನೆದು ಚಳಿಯಿಂದ ನಡುಗುತ್ತಿದ್ದವು.

ಕಿರಿಯ ಇರುವೆಗಳ ಪೇಚಾಟವನ್ನು ಹಿರಿಯಜ್ಜಿ ಗಮನಿಸಿತು. ಕಿರಿಯ ಇರುವೆಗಳಿಗೆ ಬುದ್ಧಿ ಹೇಳಲು ಇದು ಸೂಕ್ತ ಸಮಯ ಎಂದು ಅವುಗಳನ್ನು ಹತ್ತಿರ ಕರೆಯಿತು.

‘ನಾನು ಅಂದು ಹೇಳಿದ್ದ ಮಾತು ಕೇಳಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ನೀವು ಮಳೆಯಲ್ಲಿ ಆಹಾರ ಸಂಗ್ರಹಿಸಲು ಹೋಗಿ ಈಗ ನಡುಗುತ್ತಿದ್ದೀರಿ. ಮಳೆಯಿಂದಾಗಿ ನಿಮಗೆ ತಿನ್ನಲು ಬೇಕಾದಷ್ಟು ಆಹಾರ ಸಂಗ್ರಹಿಸಲು ಆಗಲಿಲ್ಲ. ಇರಲಿ, ಈಗ ಬೇರೆ ಇರುವೆಗಳು ಸಂಗ್ರಹಿಸಿ ತಂದ ಆಹಾರದ ದಾಸ್ತಾನಿನಲ್ಲಿ ನಿಮಗೆ ಆಹಾರ ನೀಡುತ್ತೇನೆ. ಮುಂದೆ ಈ ರೀತಿ ಆಗಬಾರದು. ಮಳೆ ಕಡಿಮೆಯಾಗಿ ಬಿಸಿಲು ಬಂದಾಗ ಆಹಾರ ಸಂಗ್ರಹಿಸಿ ತರಬೇಕು’ ಎಂದು ತಾಕೀತು ಮಾಡಿತು. ಕಿರಿಯ ಇರುವೆಗಳಿಗೆ ತಮ್ಮ ತಪ್ಪಿನ ಅರಿವಾಯಿತು. ಇನ್ನು ಮುಂದೆ ಸರಿಯಾಗಿ ನಡೆದುಕೊಳ್ಳುವುದಾಗಿ ಹಿರಿಯಜ್ಜಿಗೆ ಮಾತು ಕೊಟ್ಟವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)