ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತೃಪ್ತ ಗೂಳಿ, ಕತ್ತಿ, ಅಪ್ಪಚ್ಚಿ!

Last Updated 23 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಅತೃಪ್ತ ಎಂಎಲ್‌ಎಗಳು ಹಾಕಿದ ಭಿಕ್ಷೆಯಿಂದ ಮತ್ತೆ ‘ಮುಮ’ ಆಗಿ 22 ದಿನಗಳ ಕಾಲ ಏಕಚಕ್ರಾಧಿಪತಿಯಾಗಿ ಮೆರೆದ ರಾಜಾ ಹುಲಿಗೆ, ಹಿರಿಯ ಸಚಿವರು ಕೆಂಪುಗೂಟದ ಕಾರ್ ಸಿಕ್ಕ ಖುಷಿಯಲ್ಲಿ ನಡುಬಗ್ಗಿಸಿ ಕಾಲಿಗೆ ನಮಸ್ಕರಿಸುತ್ತಿದ್ದನ್ನು ಟೀವ್ಯಾಗ ನೋಡ್ತಾ ಕುಂತಿದ್ದೆ.

‘ರಾಜಕೀಯದಾಗs ತಲೆಗೂದ್ಲಾ ಬೆಳ್ಳಗಾದ ಹಿರ‍್ಯಾರು ಆಡಿಯೋರಪ್ನೋರ್‌ ಕಾಲ್‌ಗೆ ಬೀಳಾಕತ್ತಾರಲ್ಲಾ ಇವ್ಕ ಮಾನಾ ಮರ್ವಾದಿ ಏನೂ ಇಲ್ಲೇನ್ರಿ. ಇವ್ರೆಲ್ಲಾ ಆ ಅತೃಪ್ತರ ಕಾಲ್‌ ತೊಳೆದು ನೀರ್‌ ಕುಡಿಬೇಕಾಗಿತ್ತು’ ಅಂತ ಅರ್ಧಾಂಗಿ ಚಹಾ ತಂದುಕೊಡುತ್ತ ಮೆಲ್ಲನೆ ಉಸುರಿದಳು.

‘ನೀ ಹೇಳೋದು ಖರೆ ಮಾರಾಯ್ತಿ. ಇದೊಂಥರಾ ಕೂಡಿಕಿ ಸರ್ಕಾರ. ಅತೃಪ್ತ, ಅನರ್ಹರ ಮರ್ಜಿ ಒಳ್ಗ ಈ ಸರ್ಕಾರ ಐತಿ. ಜನರಿಂದ ಆಯ್ಕೆಯಾದ ಸರ್ಕಾರಕ್ಕೆ ಇರೋ ಮರ್ವಾದೇನ ಇದ್ಕ ಇಲ್ಲ. ದಕ್ಷಿಣದ ಹೆಬ್ಬಾಗಿಲದಾಗ್ ಮತ್ತ ಕಮಲ ಅರಳಿದ್ರೂ, ಪಕ್ಷದ ಘಟಾನುಘಟಿಗಳು ಈಕಡೆ ತಲಿ ಹಾಕಿ ಮಕ್ಕೊಂಡಿಲ್ಲ. ಇನ್ನೊಂದು ಗುಟ್ಟು ಏನ್‌ ಗೊತ್ತದ ಏನ್‌’ ಎಂದೆ. ‘ಏನ್ರಿ ಅದು’ ಅಂತ ಕಿವಿ ಹತ್ತಿರ ತಂದಳು. ‘ರಾಜಾ ಹುಲಿ’ ಕಾಲಿಗೆ ಬಿದ್ರ ಅದು ಚಾಣಕ್ಯನ ಕಾಲಿಗೆ ಬಿದ್ಹಂಗ್‌ ಆಗ್ತೈತಿ. ಹಿಂದ್‌ ಈ ರಾಜಾ ಹುಲಿ, ಪರಿವರ್ತನಾ ಯಾತ್ರೆ ಉದ್ಘಾಟನಾ ಸಮಾರಂಭದಾಗ ತನಗಿಂತ ಕಿರಿಯ ಚಾಣಕ್ಯನ (ಸಿಂಹದ) ಕಾಲಿಗೆ ಬಿದ್ದಿತ್ತು’ ಎಂದೆ.

‘ಇವತ್ತ ಪೇಪರ್‌ದಾಗ್‌... ಹುಲಿಗಳಿಗಿಲ್ಲ ಅಭಯ ಅಂತ ಸುದ್ದಿ ಬಂದದಲ್ರಿ. ಈ ‘ರಾಜಾ ಹುಲಿ’ಗೂ ಮೂರೂವರೆ ವರ್ಷಗಳ ಅಭಯ ಇದ್ಹಂಗ್‌ ಕಾಣೂದಿಲ್ಲ’ ಅಂದ್ಳು. ‘ರಾಜಕೀಯ ನಿಂಗೂ ಭಾಳ್‌ ಅರ್ಥ ಆಗಾಕತ್ತೈತಿ, ಭಲೆ ಭಾರ್ಯೆ’ ಎಂದು ಬೆನ್ನು ಚಪ್ಪರಿಸೋದಕ್ಕೂ, ‘ಘಾತ್‌ ಆತಲ್ಲೋ ದೋಸ್ತ್‌, ನಮ್ಮ ಬೆಳಗಾವಿ ಸಾವ್ಕಾರರಿಗೆ ಕೈಕೊಟ್ರಲ್ಲಪ್ಪೊ’ ಅಂತ ಬಡಬಡಿಸುತ್ತ ಪ್ರಭ್ಯಾ ಮನಿ ಒಳಗ್‌ ಕಾಲಿಡೋದಕ್ಕೂ ಸರಿ ಹೋಯ್ತು. ಮಾರಿ ಕೆಂಪ್‌ ಮಾಡ್ಕೊಂಡು ಹೆಂಡ್ತಿ ಅಡುಗಿ ಮನಿಗಿ ಓಡಿದ್ಳು.

‘ಬರಬೇಕು, ಬರಬೇಕು ಸಾವ್ಕಾರ‍್ರು, ಅಡ್ಡ ಬಿದ್ದೆ ಧಣಿ’ ಅಂದೆ. ನನ್ನ ಮಾತಿನಲ್ಲಿನ ವ್ಯಂಗ್ಯ ಲಕ್ಷ್ಯಕ್ಕೆ ತೆಗೆದು ಕೊಳ್ದ, ‘ನಮ್ಮ ಸಾವ್ಕಾರ್‌ಗs ಕಿಮ್ಮತ್‌ ಇಲ್ಲದ್ಹಂಗಾಗೇತಿ. ನಿನ್ನ ಸಾವ್ಕಾರ್‌ಗಿರಿಗೆ ಬೆಂಕಿ ಹಾಕಾ’ ಅಂತ ಬೈದ.

‘ನಿಮ್ಮ ಸಾವ್ಕಾರ್‌ಗೆ ಇವತ್ತಲ್ಲ ನಾಳೆ ಸವಡಿ ನೋಡ್ಕೊಂಡು ಮಂತ್ರಿ ಮಾಡ್ತಾರೇಳ್‌’ ಅಂತ ಸಮಾಧಾನಿಸಿದೆ.

‘ಹೋಗೋ ನಿನ್ನ. ಎಲೆಕ್ಷನ್‌ದಾಗ್‌ ಸೋತ ಸವ ದಿಗೇ ಮಂತ್ರಿ ಮಾಡ್ಯಾರ್‌. ಇನ್ನ ಸಾವ್ಕಾರ್‌ಗೆ ಮಂತ್ರಿ ಮಾಡಾಕ್‌ ಇವ್ರಿಗೆ ಸವುಡ್‌ ಸಿಗಬೇಕಲ್ಲ. ಕತ್ತಿ ಕಥೇನ ಮುಗಿಸ್ಯಾರ್‌. ಸಾವ್ಕಾರ್‌ಗೆ ಬಂದಿರೋ ಗತಿ ನೋಡಿದ್ರ ಕತ್ತಿಗೆ ಚಳಿ ಜ್ವರಾ ಬಂದ್ಹಂಗ್‌ ಆಗೇತಿ’ ಎಂದ.

‘ಕತ್ತಿಗಷ್ಟ ಅಲ್ಲಲೇ, ಗೂಳಿಗೂ ಮಂತ್ರಿಗಿರಿ ತಪ್ಪಿದ ಜ್ವರಾ ಬಂದಾವ್‌. ಜ್ವರದ ಬಿಸಿಯೊಳ್ಗ, ಬಿಜೆಪಿ ಸೇರಿ ತಪ್ ಮಾಡ್ದೆ ಅಂತೆಲ್ಲ ಬಡಬಡಿಸೇದ. ಗೂಡಿನ್ಯಾಗ್‌ ಇರೋ ಹಕ್ಕಿ ಬಿಟ್ಟು, ಹಾರಿ ಹೋಗೊ ಹಕ್ಕಿಗಳಿಗೆ ಮಂತ್ರಿ ಮಾಡ್ಯಾರಂತ ಅಪ್ಪಚ್ಚು ರಂಜನ್‌ ಅಲವತ್ತುಕೊಂಡಿರುವಾಗ ಗೂಳಿ, ಕತ್ತಿ ಯಾವ ಲೆಕ್ಕ. ಆಡಿಯೋರಪ್ನೋರು ‘ಮುಮ’ ಆಗೋದರ ಬಗ್ಗೆ ರಕ್ತದಾಗ್ ಬರ‍್ದು ಕೊಡಾಕ್‌ ಮುಂದಾಗಿದ್ದ ರೇಣುಕಾಚಾರ್ಯ, ಸಂತ್ರಸ್ತರಿಗಾಗಿ ಮೊಣಕಾಲುದ್ದದ ನೀರಿನಲ್ಲಿ ಹುಟ್ಟು ಹಾಕುವ ಕೆಲಸಕ್ಕಷ್ಟ ಲಾಯಕ್‌ ಆಗಿರೋಹಂಗ್‌ ಕಾಣಸ್ತೈತಿ’ ಎಂದೆ.

‘ನೀ ಏನರ್ ಅನ್ನಪಾ. ಹಿಂದಿನ ಮೈತ್ರಿ ಸರ್ಕಾರದಲ್ಲಿನ ಅತೃಪ್ತರ ಸಾಲಿಗೆ ಈಗ ಹೊಸ ಅತೃಪ್ತರೂ ಸೇರ್ಕೊತಾರ. ಬಿಜೆಪಿ ಸೇರಿ ತಪ್ ಮಾಡ್ದೆ ಅಂತ ಗೂಳಿ ಗುಟುರು ಹಾಕಿರೋದು ಇಂದಲ್ಲ ನಾಳೆ ಅತೃಪ್ತ ಅಂತರ್‌ಪಿಶಾಚಿಗಳಿಗೂ ಮನದಟ್‌ ಆದ್ರ ಈ ಸರ್ಕಾರಕ್ಕೂ ಉಳಿಗಾಲ ಇಲ್ಲ ಬಿಡು’ ಎಂದೆ.

‘ಹಂಗೆಲ್ಲಾ ಹೇಳಬ್ಯಾಡೊ ಕರಿನಾಲಿಗಿಯವ್ನ’ ಅಂತ ಬೈದ.

‘ನನ್ನ ಮಾತ್ ಕೇಳಿ ಎದಿ ಒಡ್ಕೊಬ್ಯಾಡಾ. ನಿಮ್ಮ ಸಾವ್ಕಾರ್‌ಗೆ ಸದ್ಯಕ್ಕೆ ಮಂತ್ರಿಗಿರಿ ಸಿಕ್ಕಿರಲಿಕ್ಕಿಲ್ಲ ಒಪ್ಕೊತೀನಿ. ದೇಶದ ಸಾವ್ಕಾರ್‌ಗಳಿಗೆ ಕಿಮ್ಮತ್‌ ಕೊಡಾಕ್‌ ಮರಿಬಾರ‍್ದು. ಅವರೆಲ್ಲಾ ಸಂಪತ್ತು ಸೃಷ್ಟಿಸೋ ಜನಾ. ಅವ್ರಿಗೆ ಮರ್ಯಾದೆ ಕೊಡಬೇಕು’ ಅಂತ ‘ನಮೋ’ ಸಾಹೇಬ್ರು ದೆಹಲಿಯ ಲಾಲ್‌ ಕಿಲ್ಲಾದ ಮ್ಯಾಲಿಂದ್ ಫರ್ಮಾನ್‌ ಹೊರಡಿಸಿರೋದು ಕಿವಿಗೆ ಬಿದ್ದೈತಿಲ್ಲ. ಹಿಂದೊಮ್ಮೆ ತನ್ನ ಮೈಯ್ಯಾಗ್‌, ಗುಜರಾತ್‌ನ ವ್ಯಾಪಾರಿಗಳ ರಕ್ತ ಹರೀತದ ಅಂತ ಹೇಳಿದವರ ಬಾಯ್ಯಾಗ ಈಗ ಬಡವರ ಬಗ್ಗೆ ಮಾತ್‌ ಬಂದ್‌ ಆಗ್ಯಾವ್‌. ಸಾವ್ಕಾರರ ಹೊಗಳೋದು ಜೋರಾಗಿ ನಡ್ದದ’ ಎಂದೆ.

‘ನಮೋ ಸಾಹೇಬ್ರು ಈಗ ಹೊಸಾ ಭಾರತದ ಕನ ಸನ್ನ ನನಸ್‌ ಮಾಡಾಕ್‌ ಹೊಂಟಾರ್‌ ನೆನಪ್ ಇಟ್ಕೊ ಮಗನ’ ಎಂದ.

‘ಎಲ್ಲಿ ಅದಲೇ ವಿಕಾಸ್‌. ಬಿಸ್ಕಿಟು, ಕಾರ್‌ ಕೊಳ್ಳೊವ್ರ ಸಂಖ್ಯೆ ಕಡಿಮಿ ಆಗೇದ್. ಇಡೀ ಅರ್ಥ ವ್ಯವಸ್ಥಾ ನರಾ ಕಟ್‌ ಮಾಡ್ದೋರ್‌ ಥರಾ ಅಡ್ಡಡ್ಡ ಮಲಗಾಕತ್ತೈತಿ’ ಎಂದೆ.

‘ಕಾಶ್ಮೀರ್‌ ಬಗ್ಗೆ ದೊಡ್ಡ ನಿರ್ಧಾರ ತಗೊಂಡು ಎಲ್ಲಾ ಕಡೆಯಿಂದ ಭೇಷ್‌ ಅನಿಸಿಕೊಂಡಾರ್‌. ಇನ್ನ ಮ್ಯಾಲೇರ ಅವ್ರ ಬಗ್ಗೆ ಬಯ್ಯೋದನ್ನ ನಿಲ್ಸು, ಜೈ ಮೋದಿ’ ಅಂತ ಪ್ರಭ್ಯಾ ಮಾತಿನ ಹಳಿ ತಪ್ಪಿಸಿದ.

ಮರ್ಯಾದಾ ಪುರುಷೋತ್ತಮ ರಾಮನ ಮರ್ಯಾ ದೆಯನ್ನ ಮೂರು ಕಾಸಿಗೆ ಹರಾಜು ಹಾಕಿದ್ದ ಭಗವಾನ್‌ ಸೇರಿದಂತೆ ಟೀಕಾಕಾರರಾದ ಶತ್ರುಘ್ನ ಸಿನ್ಹಾ, ಜೈರಾಂ ರಮೇಶ್‌, ಸಿಂಘ್ವಿ, ಈಗ ‘ಜೈ ಮೋದಿ’ ಅಂತ ಹೊಸಾ ಭಜನೆ ಶುರು ಹಚ್ಕೊಂಡಾರ. ಅಂಥಾದ್ರಾಗ್‌ ನಿನ್ನಂಥ ಭಟ್ಟಂಗಿಗಳು ಜೈ ಅನ್ನೋದ್ರಾಗ್‌ ಹೊಸಾದೇನೂ ಇಲ್ಲಲೆ ಮಂಗ್ಯಾನ ಮಾರಿಯವ್ನ’ ಅಂತ ಬೈಯ್ಯುತ್ತಲೇ ಟೀವಿ ಆಫ್‌ ಮಾಡಿ ಚಹಾ ಕುಡ್ಯಾಕ್‌ ಅವನನ್ನ ಕರಕೊಂಡು ಪಕ್ಯಾನ ಅಂಗಡಿ ಕಡೆ ಹೊಂಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT