ಶುಕ್ರವಾರ, ಜುಲೈ 1, 2022
23 °C

ದರಿದ್ರ ದಶಮಗ್ರಹಗಳು!

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

Prajavani

ಎದ್ದು ಮುಖಾ ತೊಳ್ಕೊಂಡ್‌ ಪೇಪರ್‌ ಓದ್ತಾ ಕುತ್ಕೊಂಡಾಗ ಮೊಬೈಲ್‌ ರಿಂಗ್‌ ಕೇಳಿ ‘ಹಲೋ’ ಎಂದರೆ, ಆ ಕಡೆಯಿಂದ ‘ಹಲೋ’ ಬದ್ಲಿಗೆ ‘ಜೈ ಶ್ರೀರಾಂ’ ಅಂತ ಕೇಳಿಸಿತು. ಇದು, ಚೆಡ್ಡಿ ದೋಸ್ತ್‌ ಪ್ರಭ್ಯಾಂದs ದನಿ ಅಂತ ಖಾತ್ರಿ ಆಯ್ತು. ಉಪಾಧ್ಯೆ ಮಾಸ್ತರ್‌ ಸಾಲ್ಯಾಗ್‌ ನಮ್ಮಲ್ಲಿನ ಕೆಲ ದಡ್ಡರ ದಡ್ಡತನ ಬಯಲಾದಾಗಲೆಲ್ಲ ಬೈತಿದ್ದ, ‘ನಿಮ್ಮನ್ನ ಕಂಡ್ರ ನನಗs ಅಂಗಾಲ್‌ದಿಂದ ಹಿಡ್ದು ಅಳ್ಳೆತ್ತಿ ತನ್ಕ ಉರಿತದ’ ಅನ್ನೋ ಮಾತ್‌ ನೆನಪಾತು. ಅದೇ ಸಿಟ್ಟಿನ್ಯಾಗ್, ‘ಲೇ ಮಂಗ್ಯಾನ ಮಗ್ನ, ಇವತ್ತರ ಜೈಶ್ರೀರಾಮ ಅನ್ನೋದನ್ನ ಬಿಟ್ಟು ಹೇ ರಾಮ್ ಅನ್ನಲೇ’ ಎಂದೆ.

‘ಯಾಕ್‌ ಇವತ್ತೇನ್ ಅಂಥಾ ಸ್ಪೆಷಲ್‌ ದಿನಾ’ ಎಂದ. ‘ಲೇ ಬಿಕನಾಸಿ, ಇವತ್ತ ರಾಷ್ಟ್ರಪಿತನ ಜನ್ಮದಿನ ಅಷ್ಟೂ ಗೊತ್ತಿಲ್ಲ ಏನ್’ ಎಂದೆ. ‘ಎಂಥಾ ಘಾತ್ ಆಗ್ತಿತ್ತೊ ದೋಸ್ತ. ನೆನಪ್‌ ಮಾಡಿದ್ದು ಭಾಳ್‌ ಛಲೋ ಆತು. ‘ನಮೋ’ ಸಾಹೇಬ್ರ ಹುಟ್ಟುಹಬ್ಬ ಮರ್ತೇ ಬಿಟ್ಟಿದ್ದೆ. ನೆನಪಿಸಿದ್ದಕ್ಕ ನಿನಗೊಂದು ದೊಡ್ಡ ನಮ(ಮೋ)ಸ್ಕಾರ’ ಎಂದು ಹೇಳುತ್ತಲೇ ಗಲ್ಲ, ಗಲ್ಲ ಬಡಿದುಕೊಂಡ.

‘ಏಯ್‌ ಮಳ್ಳ, ನರೇಂದ್ರ ದಾಮೋದರದಾಸ್‌ ಮೋದಿ ಹೆಸರಿನ ಚಿನ್ನದ ಪಟ್ಟಿಯ ಸೂಟ್‌ ಹಾಕ್ಕೊಂಡು ಮೆರೆದ, ‘ಅಬ್‌ ಕಿ ಬಾರ್‌ ಟ್ರಂಪ್‌ ಸರ್ಕಾರ್‌’ ಅಂತ ಅಮೆರಿಕದಾಗ ಚುನಾವಣಾ ಪ್ರಚಾರ ಮಾಡಿದ, ಟ್ರಂಪಣ್ಣ ಹೆಸರಿಟ್ಟಿರುವ ಹೊಸ ರಾಷ್ಟ್ರಪಿತನ ಹುಟ್ಟುಹಬ್ಬ ಅಲ್ಲಲೇ. ಬರಿಮೈ ಫಕೀರ ಮೋಹನ್‌ದಾಸ್‌ ಕರಮ್‌ಚಂದ್ ಗಾಂಧಿ ಅವರ 150ನೇ ಜನ್ಮ ದಿನಾಲೆ’ ಎಂದು ಬೈದೆ.

‘ಹೇ ರಾಂ, ಅಂದ್ರ ಇವತ್ತ ಡ್ರಾಯ್‌ ಡೇ ಅಂದ್ಹಂಗಾತು’ ಅಂತ ಉದ್ಗಾರ ಎಳೆದ. ‘ಕರ್ಮ, ಕರ್ಮ, ಮುನ್ನಾಭಾಯಿ ಎಂಬಿಬಿಎಸ್‌ ಚಿತ್ರದಾಗಿನ ಡೈಲಾಗ್‌ ಹೇಳಾಕತ್ತಿ ಅಂದ್ರ, ರಾತ್ರಿ ಕುಡಿದ ನಶೆ ಇನ್ನs ಇಳದ್ಹಂಗ್‌ ಕಾಣ್ಸುದಿಲ್ಲ’ ಎಂದೆ.

‘ಅದಿರ‍್ಲಿ, ನಾ ರಾಮನ ಹೆಸರ್‌ ಹೇಳಿದ್ರ, ನಿಂಗ್ಯಾಕ್‌ ಸಿಟ್‌ ಬರ್ತದ’ ಅಂತ ಸಿಟ್ಟಿನಿಂದಲೇ ಕೇಳ್ದಾ.

‘ಸಿಟ್‌ ಬಂದಿಲ್ಲ. ಹೇ ರಾಮ್‌ ಜಪಿಸುವ ದಿನ, ಜೈಶ್ರೀರಾಂ ಬ್ಯಾಡಾ ಅಂದೆ ಅಷ್ಟೆ. ಮೊನ್ನೆ ನಮೋ ಸಾಹೇಬ್ರು, ಅಮೆರಿಕದಾಗ ಭಾಷ್ಣಾ ಬಿಗಿವತ್ನ್ಯಾಗ್‌, ತಾವು ಮರ್ಯಾದಾ ಪುರುಷೋತ್ತಮನ ನಾಡಿನಿಂದ ಬಂದವರು ಅಂತ ಹೇಳ್ಕೊಂಡಿಲ್ಲ. ಬುದ್ಧನ ನಾಡಿನಂವಾ ಅಂತ ವಿಶ್ವಸಂಸ್ಥೆ ವೇದಿಕೆ ಮ್ಯಾಲೆ ಡಂಗರಾ ಬಾರ್ಸ್ಯಾರ್, ಕಿವಿಗೊಟ್ಟು ಕೇಳಿ ಇಲ್ಲ’ ಎಂದೆ.

‘ಏಯ್ ಹಂಗೆಲ್ಲ ಸುಮ್ಮ ಸುಮ್ಮನೆ ‘ನಮೋ’ ಬಗ್ಗೆ ಮಾತಾಡಿದ್ರ ಆಕಾಶಕ್ಕೆ ಉಗಿದ್ಹಂಗ್. ಮಾತಾಡಿದವ್ರ ಮಾರಿ ಮ್ಯಾಗ ಉಗುಳು ಬೀಳ್ತದ ಅಂತ ಮೈಸೂರಿನಲ್ಲಿ ಸಿಂಹ ಗರ್ಜಿಸಿದ್ದು ಕೇಳಿ ಇಲ್ಲ’ ಅಂತ ನೆನಪಿಸಿದ.

‘ಭಟ್ಟಂಗಿತನಾ ಅಂದ್ರ ಅದಪಾ’ ಎಂದೆ. ನನ್ನ ಮಾತ್‌ನ್ಯಾಗಿನ ವ್ಯಂಗ್ಯ ಅರ್ಥವಾಯ್ತೋ ಇಲ್ಲವೋ. ‘ಹೌದ್ ಹೇಳಪಾ’ ಅಂದವನ ಮಾತಿನ್ಯಾಗ್ ಸ್ವಲ್ಪ ಹೊತ್‌ ಮೊದಲಿನ ದಮ್ಮs ಇದ್ದಿರಲಿಲ್ಲ ಅನ್ನೋದು ಮಾತಿನ ಧಾಟಿಯಿಂದ ಗೊತ್ತಾಗಿ ಪಾಪ ಅನಿಸಿತು.

ಅಂವ್ಗ ಹುರುಪು ತುಂಬ್ಸಾಕ್, ‘ದೀಪಾವಳಿಗೆ ಹೊಸಾ ಅಳಿಯ ಮೊದಲ್‌ ಸಲಾ ಮನಿಗೆ ಬರಾಕತ್ತಾನಲ್ಲ, ಬಂಗಾರ ಗಿಂಗಾರ ತಗೊಂಡಿ ಇಲ್ಲ’ ಎಂದೆ. ‘ಅಳಿಯ, ಮನೆ ತೊಳಿಯಾ’ ಎಂದು ತನ್ನಷ್ಟಕ್ಕೆ ಗೊಣಗಿದ್ದು ಕೇಳಿಸ್ತು. ‘ಅವನೊಬ್ಬ ದರಿದ್ರ’ ಎಂದೂ ಹೇಳಿ ನಾಲ್ಗಿ ಕಚ್ಕೊಂಡಿದ್ದೂ ನನ್ನ ಅನುಭವಕ್ಕೆ ಬಂತು.

‘ಯಾಕೋ, ಹೊಸಾ ಅಳಿಯಾಗ್ ಹಂಗ್ಯಾಕ್ ಬೈತಿ’ ಎಂದೆ ಕುತೂಹಲದಿಂದ. ‘ಮದ್ವಿ ಆಗಿ ಇನ್ನೂ ಮೂರು ತಿಂಗಳಾಗಿಲ್ಲ. ದೀಪಾವಳಿಗೆ ಮೊದಲ ಅಳಿಯತನಕ್ ಬಂದ್ರ ಎರಡ್ ತೊಲಿ ಬಂಗಾರ್ ಕೊಡ್ಬೇಕ್ ಅಂತ ಹಟಾ ಹಿಡ್ದಾನ್‌’ ಎಂದ ಬೇಸರದಿಂದ.

‘ಎಲ್ಲಾ ಕಡೆ ಇಂಥಾ ದರಿದ್ರ, ಅನರ್ಹ, ನಾಲಾಯಕ್‌ ಅಳಿಯಂದ್ರ ಇದಾರ್‌ ಅಂತ ಕಾಣಸ್ತದ’ ಎಂದೆ.

‘ನೀ ಯಾರ ಅಳಿಯಂದ್ರ ಬಗ್ಗೆ ಮಾತಾಡಾಕತ್ತಿ’ ಎಂದ. ‘ಏನೂ ಗೊತ್ತಿಲ್ಲದ್ಹಂಗ್ ನಾಟ್ಕಾ ಆಡಬ್ಯಾಡ. ಅನರ್ಹ ಶಾಸಕರೂ ಬಿಜೆಪಿಯ ಮನೆಅಳಿಯಂದಿರು ಇದ್ಹಂಗ್ ಅಂತ ಈಶ್ವರಪ್ಪ ಹೇಳ್ಯಾರ. ಡಿಸಿಎಂ ಲಕ್ಷ್ಮಣ ಸವದಿ ಸಾಹುಕಾರ‍್ರು, ದರಿದ್ರವರ ಹೆಸರ್ ಎತ್ತಿ ಮೂಡ್‌ ಹಾಳ್‌ ಮಾಡಬ್ಯಾಡ್ರೊ ಅಂತ ಬೈದಾರ್‌’ ಎಂದೂ ಸೇರಿಸಿದೆ.

‘ನನ್ನ ಅಳಿಯನ ಬಗ್ಗೆ ಹೇಳ್ಕೊಂಡ್ರ ನನ್ನ ಮರ್ಯಾದೇನs ಹೋಗ್ತೈತಿ. ಯಾರ‍್ದೊ ಮಾತ್‌ ಕೇಳಿ ಲಂಚಾ ತಿನ್ನಾಕ್‌ ಹೋಗಿ ಸಿಕ್ಕಿ ಹಾಕ್ಕೊಂಡ್‌, ಕೆಲ್ಸಾ ಬೊಗ್ಸಿ ಇಲ್ದ ಮನ್ಯಾಗ್‌ ಜಂತಿ ಎಣಿಸ್ಕೋತ್‌ ಕುಂತಾನ. ಕೋರ್ಟ್‌ಗೆ ತಿರಗಾಕತ್ತಾನ್. ನಿನ್ನ ಕಾಲ್ಗುಣ ಸರಿ ಇಲ್ಲಂತ ಮಗಳಿಗೆ ದಿನಾ ಬೈತಾನಂತ’ ಪ್ರಭ್ಯಾ ಬ್ಯಾಸ್ರಾ ಮಾಡ್ಕೊಂಡ.

‘ಮೊನ್ನೆ ಮೋದಿ ಸಾಹೇಬ್ರು ಅಮೆರಿಕಕ್ಕ ಹೋಗಿ ಬಂದ ಬೆನ್ನಲ್ಲೇ, ಟ್ರಂಪಣ್ಣನ ವಿರುದ್ಧ ವಾಗ್ದಂಡನೆಗೆ ಚಾಲನೆ ಸಿಕ್ಕೇದ್‌. ಅದ್ಕೂ ಮೋದಿ ಕಾಲ್ಗುಣನ ಕಾರಣ ಅಂದ್ರ ಯಾರ್ ನಂಬತಾರ್‌. ಅಂದ್ರ, ನಿಂಗೂ ದಶಮಗ್ರಹದ ಕಾಟ ಸುರು ಹಚ್ಕೊಂಡಂಗ್‌ ಕಾಣಸ್ತೈತಿ’ ಎಂದು ರಾಗ ಎಳೆದೆ.

‘ನನ್ನ ಪಾಲಿಗೆ ಅಂವಾ ದರಿದ್ರ ದಶಮಗ್ರಹ ಆಗ್ಯಾನ್‌’ ಎಂದ.

ಅದೇ ಹೊತ್ತಿಗೆ, ಟೀವ್ಯಾಗ್‌ ಹಳೆ ಧಾರಾವಾಹಿಯ ‘ದಂಡಪಿಂಡಗಳು ಇವರು ದಂಡಪಿಂಡಗಳು, ಬಿಎ, ಬಿಎಸ್ಸಿ, ಬಿಕಾಂ ಮಾಡಿ, ಕೆಲಸವೆ ಸಿಗದೆ ದಿನಾ ಅಲೆದಾಡಿ ಎಲ್ಲರ ಕೈಲೂ ಉಗಿಸಿಕೊಳ್ಳುವ ವೇಸ್ಟ್‌ ಬಾಡಿಗಳು... ಹಾಡು ಕೇಳಿಬಂತು. ಮಳೆ ಸಂತ್ರಸ್ತರಿಗೆ ಪರಿಹಾರ ಘೋಷಿಸದ, ಎರಡೂ ಕಡೆ ನಮ್ದೇ ಸರ್ಕಾರ ಅಂತ ಹೇಳ್ಕೊಂಡ್‌ ತಿರುಗುವ ಭಿಕ್ಷುಕ ಮಂತ್ರಿಗಳು, ನಯೇ ಪೈಸೆ ಪರಿಹಾರ ತರದ ಟ್ವಿಟರ್‌ ಸಮರವೀರರೂ ದಂಡಪಿಂಡಗಳು. ರೊಕ್ಕಕ್ಕ ಎಂಎಲ್‌ಎಗಿರಿ ಮಾರ್ಕೊಂಡು, ಬಿಜೆಪಿ ಟಿಕೆಟ್‌ಗಾಗಿ ತಿಪ್ಪರಲಾಗ್‌ ಹಾಕುತ್ತಿರುವವರೂ ವೇಸ್ಟ್‌ ಬಾಡಿಗಳು ಥೂ ಥೂ’ ಎಂದು ಹೇಳಿ, ಪ್ರಭ್ಯಾನ ಪ್ರತಿಕ್ರಿಯೆಗೂ ಕಾಯದೆ ಫೋನ್‌ ಕಟ್‌ ಮಾಡ್ದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು