ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದನವೆಂಬ ಬಡವರ ದುಃಸ್ವಪ್ನಗಳು

Last Updated 25 ಮಾರ್ಚ್ 2019, 6:27 IST
ಅಕ್ಷರ ಗಾತ್ರ

1996 ಇಸ್ವಿ. ಅದೊಂದು ಮಾಮೂಲಿ ದಿನ. ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಮೋಳೆ ಗ್ರಾಮದ ವಿಠೋಬ ಎಂಬ ಬಡರೈತನ ಹಟ್ಟಿಯಲ್ಲಿ ಆತಂಕದ ನಡುವೆಯೂ ಸಂಭ್ರಮ ಮನೆಮಾಡಿತ್ತು. ಆತಂಕವೇನೆಂದರೆ ಅವನ ಮೂರನೇ ಮಗ ಭೀಮಪ್ಪ ಮಿಲಿಟರಿಗೆ ಆಯ್ಕೆಯಾಗಿದ್ದ. ಏನು ಕಷ್ಟವೋ... ಯುದ್ಧ, ದಂಗೆ, ಗಲಾಟೆಯಲ್ಲಿ ಏನಾದರೂ ಹೆಚ್ಚು ಕಡಿಮೆಯಾದರೆ ಎನ್ನುವ ಆತಂಕ ಒಂದೆಡೆಯಾದರೆ, ಆಗಲೋ ಈಗಲೋ ಮುರಿದುಬೀಳಬಹುದಾಗಿದ್ದ ತನ್ನ ಸಣ್ಣ ಗುಡಿಸಲಿನಿಂದ ಹೊರಬಂದು ಒಂದು ಚಿಕ್ಕ ಮನೆ ಕಟ್ಟಿಕೊಳ್ಳಬಹುದೆಂಬ ಕನಸಿಗೆ ಜೀವ ಬಂದಂತಹ ಸಂಭ್ರಮ.

ವಿಠೋಬನದು ಕೂಡು ಕುಟಂಬ. ನಾಲ್ಕೂಮಕ್ಕಳು ಕೂಲಿ ಮಾಡಿ ಬದುಕಬೇಕಿತ್ತು. ಇದ್ದುದರಲ್ಲೇ ಭೀಮಪ್ಪ ಮನೆ ಕೆಲಸ, ಕೂಲಿ ಕೆಲಸ ಮುಗಿಸಿ ಕಷ್ಟಬಿದ್ದು ಏಳನೇ ತರಗತಿ ಪಾಸು ಮಾಡಿದ್ದ. ನಂತರ ಓದು ಅರ್ಧಕ್ಕೆ ನಿಲ್ಲಿಸಿ ಸೈಕಲ್ ಮೇಲೆ ಮಾವು, ಪೇರಳೆ, ನೇರಳೆ ಮಾರುತ್ತ ಊರೂರು ತಿರುಗುತ್ತಿದ್ದ. ಅವನಿಗೆ ಇಪ್ಪತ್ತು ವರ್ಷ ತುಂಬುವಷ್ಟರಲ್ಲಿ ಅವನ ಓರಗೆಯವರಿಬ್ಬರು ಮಿಲಿಟರಿ ಸೇರಿ ಮನೆಗೆ ಸಂಬಳ ಕಳಿಸುವುದು ನೋಡಿ, ಇವನಿಗೂ ಮಿಲಿಟರಿ ಸೇರಬೇಕೆಂಬ ಆಸೆ ಹುಟ್ಟಿತೇನೋ...

ಶ್ರಮದಿಂದ ದಕ್ಕಿದ ಆರೋಗ್ಯ ಹಾಗೂ ಏಳನೇ ತರಗತಿಯಲ್ಲಿ ಓದಿದ ಸರ್ಟಿಫಿಕೇಟು, ಕಣ್ಣುಗಳಲ್ಲಿ ಅರೆಪಾವು ಕನಸು ಬಿಟ್ಟರೆ ಹೇಳಿಕೊಳ್ಳುವಂತದ್ದೇನೂ ಅವನಲ್ಲಿರಲಿಲ್ಲ. ವಾರಕ್ಕೊಮ್ಮೆ ಹಣ್ಣುಗಳ ಸಗಟು ವ್ಯಾಪಾರಕ್ಕೆಂದು ಬೆಳಗಾವಿಗೆ ಹೋಗುತ್ತಿದ್ದ. ಹೀಗೊಮ್ಮೆ ಬೆಳಗಾವಿಗೆ ಹೋದವನಿಗೆ ಯಾರೋ ಭರ್ತಿಯ ಬಗ್ಗೆ ಹೇಳಿರಬೇಕು, ದೈಹಿಕ–ಲಿಖಿತ ಪರೀಕ್ಷೆ ಪಾಸು ಮಾಡಿ ಮಿಲಿಟರಿ ಸೇರಿದ.

‘ಲಡಾಯಿಯೇನಾದರೂ ಆದರ ಮಗನ ಹೆಣಾನೂ ಬರಾಂಗಿಲ್ಲೋ, ಬರೆ ಅವರು ಹಾಕ್ಕೊಳ್ಳುವ ಅರಿವಿ ಕೊಟ್ಟು ಕಳಿಸಿ ಅಲ್ಲೇ ಮಣ್ಣ ಮಾಡ್ತಾರೋ ಇಠ್ಯಾ’ ಅಂತ ನಮ್ಮಪ್ಪನಿಗೆ ಊರವರು ಮಾತಾಡಿದ್ದು ಇನ್ನೂ ಚೆನ್ನಾಗಿ ನೆನಪಿದೆ. ಅಂದಹಾಗೆ ಆ ವಿಠೋಬನ ಕೊನೆಯ ಮಗ ನಾನು. ನಾನಾವಾಗ ಮೂರನೇ ತರಗತಿಯಲ್ಲಿ ಓದುತ್ತಿದ್ದೆ. ದೊಡ್ಡವರೆಲ್ಲ ಕೂಲಿಗೆ ಹೋಗುತ್ತಿದ್ದುದರಿಂದ ನನ್ನ ಓದಿಗೆ ಅಷ್ಟೇನೂ ಕಷ್ಟವಿರಲಿಲ್ಲ.

ಮಗನನ್ನು ಮಿಲಿಟರಿಗೆ ಕಳಿಸಿದ್ದು ಮನೆಯವರಿಗೆಲ್ಲ ಆತಂಕದ ಸಂಗತಿಯಾಗಿತ್ತು. ಆದರೆ ಅದಕ್ಕಿಂತ ಹೆಚ್ಚಾಗಿ ಸರಕಾರಿ ಸಂಬಳದಿಂದ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದೆಂಬ ಆಸೆ ಬಹಳವಾಗಿತ್ತು. ಸಾಲು ಸಾಲು ಬರಗಾಲ, ಕೈ ಕೊಡುವ ಬೆಳೆ, ತುಂಬಿದ ಮನೆಯ ಹೊಟ್ಟೆ ತುಂಬಿಸಿಕೊಳ್ಳುವುದು ಸವಾಲಿನ ಕೆಲಸವೇ ಆಗಿತ್ತು. ದಿನನಿತ್ಯ ಕೂಲಿ ಸಿಗುತ್ತದೆ ಎಂಬ ಯಾವ ಗ್ಯಾರಂಟಿಯೂ ಇಲ್ಲ. ಹೀಗಾಗಿ ಏಳನೇ ತರಗತಿ ಓದಿದ ನಮ್ಮಣ್ಣನಿಗೆ ಸಿಗಬಹುದಾದ ಏಕೈಕ ಕೆಲಸವೆಂದರೆ ಸೈನ್ಯ ಸೇರಿ ಜವಾನನಾಗುವುದು. ಆ ಕಾಲಕ್ಕೆ ನಮ್ಮ ಮನೆಯ ವಾತಾವರಣಕ್ಕೆ ದೇಶಪ್ರೇಮ, ದೇಶಭಕ್ತಿ, ದೇಶಸೇವೆಗಳೆಲ್ಲ, ಹಾಗೆಂದರೆ ಏನು ಎನ್ನುವ ಅರ್ಥವಾಗದ ಕಠಿಣ ಪದಗಳು.

ಅಣ್ಣ ಕಷ್ಟಬಿದ್ದು ಆರು ತಿಂಗಳ ತರಬೇತಿ ಪಡೆದರು. ಮೊದಲ ಪೋಸ್ಟಿಂಗ್ ಭೋಪಾಲ್‌ನಲ್ಲಿ ಆಯಿತು. ವಾರಕ್ಕೊಂದೋ ಎರಡು ಪತ್ರ ನಿಯಮಿತವಾಗಿ ಬರುತ್ತಿದ್ದವು. ಅಕ್ಷರ ತಿಳಿಯದ ನಮ್ಮಮ್ಮ ಓದಿದ ಪತ್ರಗಳನ್ನೇ ನಾಲ್ಕೈದು ಬಾರಿ ನನ್ನಿಂದ ಓದಿಸುತ್ತ ಕಣ್ಣೀರಾಗುತ್ತಿದ್ದಳು. ಸೇನೆಗೆ ಸೇರಿದ ಆರಂಭದಲ್ಲಿ ಅಣ್ಣ ಮಿಲಿಟರಿ ಯುನಿಫಾರ್ಮಿನಲ್ಲಿ ತೆಗೆಸಿಕೊಂಡ ಫೋಟೊ ಕಳುಹಿಸಿದಾಗಲಂತೂ ಆ ಪೋಸ್ಟ್‌ಕಾರ್ಡ್‌ ಸೈಜಿನ ಎರಡು ಮೂರು ಫೋಟೊಗಳನ್ನು ತಲೆದಿಂಬಿನಡಿಯಲ್ಲಿಟ್ಟು ಮಲಗುತ್ತಿದ್ದಳು. ಅವನು ಮಿಲಿಟರಿ ಸೇರಿದ ಸುದ್ದಿ ಕೇಳಿ ಅವಳೆಷ್ಟು ಅಧೀರಳಾಗಿದ್ದಳೆಂದರೆ, ಒಂದೊಂದು ಸಲ ಊಟ ಕೆಲಸ ಬಿಟ್ಟು ಕತ್ತಲಕೋಣೆಯಲ್ಲಿ ಬಿಕ್ಕುತ್ತಿದ್ದಳು. ನನಗೆ ಇದೆಲ್ಲ ತಮಾಷೆಯೆನಿಸುತ್ತಿತ್ತು. ನನಗೆ ಪುಸ್ತಕಗಳಿಗೆ ಬಟ್ಟೆಗೆ ಆಗ ಯಾವ ತೊಂದರೆಯೂ ಇರಲಿಲ್ಲವಾದ್ದರಿಂದ ಅಣ್ಣ ಕೆಲಸಕ್ಕೆ ಸೇರಿದ್ದು ಖುಷಿಯೇ ಆಗಿತ್ತು.

ಆಗಿನ ಕಾಲದಲ್ಲಿ ಟಿ.ವಿ.ಗಳಿರಲಿಲ್ಲ. ನಮ್ಮೂರಿನ ಪಂಚಾಯಿತಿ ಆಫೀಸಿಗೆ ಪತ್ರಿಕೆ ಬರುತ್ತಿತ್ತು. ಉಳಿದಂತೆ ಸಾಯಂಕಾಲ ‘ಧಾರವಾಡ ಆಕಾಶವಾಣಿ ಕೇಂದ್ರ’ದಿಂದ ಬರುವ ವಾರ್ತೆಗಳು ನಮ್ಮ ಸುದ್ದಿಯ ಮೂಲಗಳು. ಅಕಸ್ಮಾತ್ತಾಗಿ ಗಡಿಯಲ್ಲಿ ಯುದ್ಧ‌ದ ಸಂದರ್ಭ, ಕಾಶ್ಮೀರದ ಕೊಳ್ಳದಲ್ಲಿ ರಕ್ತಪಾತ ಅನ್ನುವ ಸುದ್ದಿಗಳಿದ್ದರೆ ನಾನು ಆತಂಕದಿಂದ ಕೇಳಿಸಿಕೊಳ್ಳುತ್ತಿದ್ದೆ. ಅವ್ವನಿಗೆ ವಾರ್ತೆಗಳು ಕೂಡ ಅರ್ಥವಾಗುತ್ತಿರಲಿಲ್ಲ. ಮತ್ತು ಅಪ್ಪಿತಪ್ಪಿಯೂ ನಾನು ಇಂತಹ ದುಗುಡಗಳನ್ನು ಯಾರೊಂದಿಗೂ ಹೇಳಿಕೊಳ್ಳುತ್ತಿರಲಿಲ್ಲ. ಏನಾದರೂ ಈ ತರಹದ ಗುಸುಗುಸು ಮಾತುಗಳು ಅವ್ವ ಕೇಳಿಸಿಕೊಂಡರಂತೂ ಮುಗಿದೇಹೋಯಿತು. ಗೊಳೋ ಅಂತ ಅಳು ಶುರುವಿಟ್ಟುಕೊಳ್ಳುತ್ತಿದ್ದಳು. ಹೀಗಾಗಿ ಆದಷ್ಟು ನಾವು ಮನೆಯವರು ಇಂತಹ ಗಾಳಿಸುದ್ದಿಗಳನ್ನು ದೂರವೇ ಇಡುತ್ತಿದ್ದೆವು. ಆದರೆ ನಾವು ಕೂಡಾ ಆತಂಕದಲ್ಲೇ ದಿನ ದೂಡುತ್ತಿದ್ದೆವು. ವಾರಕ್ಕೊಮ್ಮೆ ಅವನ ಪತ್ರ ಬಂದಾಗ ಮನೆಯವರೆಲ್ಲ ಒಟ್ಟಿಗೆ ಕುಳಿತು ಪತ್ರ ಓದಿ ಖುಷಿಪಡುತಿದ್ದೆವು. ಆರು ತಿಂಗಳಿಗೊಮ್ಮೆ ರಜೆ ಪಡೆದು ಮಿಲಿಟರಿಯ ದೊಡ್ಡದಾದ ಕಪ್ಪು ಟ್ರಂಕ್‌ ಹೊತ್ತುಕೊಂಡು ಬರುವಾಗ ನಮ್ಮಣ್ಣ ನಮ್ಮ ಮನೆತನದ ಎಲ್ಲ ಕಷ್ಟಗಳ ಭಾರ ಹೆಗಲಮೇಲೆ ಹೊತ್ತುಬರುವ ದೇವಮಾನವನಂತೆ ಕಾಣಿಸುತ್ತಿದ್ದ. ಮತ್ತು ಈ ಸಂಭ್ರಮದ ದಿನಗಳು ಕೇವಲ ಹದಿನೈದು ದಿನ, ಹೆಚ್ಚೆಂದರೆ ಒಂದು ತಿಂಗಳಿರುತ್ತಿದ್ದವು. ರಜೆ ಮುಗಿದು ವಾಪಾಸು ಹೋಗುವಾಗ ಮನೆಯವರೆಲ್ಲ ಅಕ್ಷರಶಃ ಬಿಕ್ಕಿ ಬಿಕ್ಕಿ ಅಳುತ್ತಿದ್ದೆವು.

ಈ ಎಲ್ಲ ಸಂಕಟ–ಸಂಭ್ರಮದ ಮಧ್ಯೆಯೇ ನಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಿತು. ಅಣ್ಣನ ಮದುವೆಯಾಯಿತು, ಮಕ್ಕಳಾದವು. ಅವನ ಸಂಬಳದ ಉಳಿಕೆ ದುಡ್ಡಿನಲ್ಲಿ ಹೊಲದಲ್ಲಿ ಬಾವಿ ಕೊರೆದೆವು. ವರ್ಷಕ್ಕೆರಡು ಬೆಳೆ ಬೆಳೆಯುವಂತಾಯಿತು. ನಾನೂ ಓದಲು ಧಾರವಾಡಕ್ಕೆ ಹೋಗುವಂತಾಯಿತು. ಅಣ್ಣ–ಅತ್ತಿಗೆ, ಮಕ್ಕಳು ಆಗ ಗ್ವಾಲಿಯರ್‌ನಲ್ಲಿದ್ದರು.

ಅದು 1999ನೇ ಇಸವಿ. ಇದ್ದಕ್ಕಿದ್ದಂತೆ ಕಾರ್ಗಿಲ್ ಯುದ್ಧ ಶುರುವಾಗಿಬಿಟ್ಟಿತು.

ಊರಿನ ತುಂಬೆಲ್ಲ ಯದ್ಧದ ಪುಕಾರು ಎದ್ದಿತು. ಪತ್ರಿಕೆ, ರೇಡಿಯೊ, ಟಿ.ವಿ.ಗಳಲ್ಲೆಲ್ಲ ಯುದ್ಧದ ಸುದ್ದಿ. ಈ ಹೊತ್ತು ಹತ್ತು ಜವಾನರು ಹುತಾತ್ಮರಾದರು, ಮರುದಿನ ನಲವತ್ತು ಜನ, ಮಾರನೆಯ ದಿನ ನೂರು... ಹೀಗೆ ಹುತಾತ್ಮ ಯೋಧರ ಕಳೇಬರಗಳು ಶವಪೆಟ್ಟಿಗೆಯಲ್ಲಿ ಮೆರವಣಿಗೆ ಹೊತ್ತು ಬಂದಾಗ ಊರು ಅಕ್ಷರಶಃ ಕಣ್ಣೀರಾಗುತ್ತಿತ್ತು. ಇವೆಲ್ಲ ಎಲ್ಲೋ ದೂರದಲ್ಲಿ ನಡೆಯುತ್ತಿದ್ದವಾದುದರಿಂದ ಅವ್ವನಿಗೆ ಈ ಸುದ್ದಿ ಗೊತ್ತಾಗುತ್ತಿರಲಿಲ್ಲ. ಆದರೆ ಯಾವಾಗ ಪಕ್ಕದೂರು ನವಲೀಹಾಳಿನ ಯೋಧನ ಶವಪೆಟ್ಟಿಗೆ ಬಂತೋ ನಮ್ಮವ್ವ ಧರಾಶಾಹಿಯಾದಳು.

ನಮ್ಮೂರು ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿನ ಯುವಕರ ಏಕೈಕ ಕನಸೆಂದರೆ ಮಿಲಿಟರಿ ಸೇರುವುದು. ಅದು ಬದುಕುಳಿಯುವ ಅನಿವಾರ್ಯತೆಯೋ ದೇಶಪ್ರೇಮವೋ – ಇದು ಹೀಗೆ ಎಂದು ಧೈರ್ಯವಾಗಿ ಹೇಳಲಾರೆ. ಹೀಗಾಗಿ ಇಲ್ಲಿಯ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಊರಿಗೆ ನೂರಾರು ಯೋಧರು. ನಿವೃತ್ತ ಯೋಧರು, ಅಥವಾ ಅದರ ಕನಸಿನಲ್ಲಿ ತಯಾರಾಗುತ್ತಿರುವ ಯುವಕರಿದ್ದಾರೆ.

ಅತ್ತಿಗೆ–ಮಕ್ಕಳನ್ನು ಬಿಟ್ಟು ಅಣ್ಣ ಕಾಶ್ಮೀರದ ಗಡಿಗೆ ಹೋದ. ಯುದ್ಧ ತೀವ್ರಗತಿಯಲ್ಲಿ ನಡೆದಿತ್ತು. ಸಾಲು ಸಾಲು ಶವಗಳು ಊರೂರು ತಲುಪುತ್ತಲಿದ್ದವು. ಕರ್ನಾಟಕದಲ್ಲೇ ಸುಮಾರು ಇಪ್ಪತ್ತು ಯೋಧರು ಹುತಾತ್ಮರಾದರೆಂಬುದು ನನ್ನ ಅಂದಾಜು. ಅಣ್ಣನ ಹೆಣದ ದಾರಿ ಕಾಯುವವರಂತೆ ನಮ್ಮನೆಯ ಎಲ್ಲರ ಮುಖಗಳಲ್ಲಿ ಕಳವಳದ ಛಾಯೆಯನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿತ್ತು. ಅವ್ವನ ಸಮಾಧಾನ ಮಾಡುತ್ತ ಅತ್ತಿಗೆ, ಅತ್ತಿಗೆಯನ್ನು ಸಮಾಧಾನ ಮಾಡುತ್ತ ನಾವು... ಮತ್ತು ಅಂಗಳದಲ್ಲಿ ಆಡುತ್ತಿರುವ ಎರಡು ಮಕ್ಕಳನ್ನು ಹೇಗೆ ಸಮಾಧಾನಪಡಿಸುವುದು? ಯುದ್ಧವೆಂದರೇನೆಂದು ಮಕ್ಕಳಿಗೆ ತಿಳಿಹೇಳುವುದು ಹೇಗೆ?

ದೇವರು ದೊಡ್ಡವನಿದ್ದ. ನಮ್ಮ ಅಣ್ಣ ಕಾರ್ಗಿಲ್ ಕದನದಲ್ಲಿ ಭಾಗವಹಿಸಿ ಯಾವುದೇ ಅವಘಡಗಳಿಲ್ಲದೆ ಸುರಕ್ಷಿತವಾಗಿಯೇನೋ ಬಂದ. ಆದರೆ ಇದನ್ನು ನಾನು ಖುಷಿಪಡುವುದು ಹೇಗೆ? ನಮ್ಮ ಅಣ್ಣಂದಿರಂತಹ, ದೇಶದ ಸುಮಾರು ಐದುನೂರು ಸೈನಿಕರು ಹುತಾತ್ಮರಾಗಿದ್ದರು. ಎಷ್ಟೋ ಜನ ಕೈಕಾಲು ಕಳೆದುಕೊಂಡು ಶಾಶ್ವತ ಅಂಗವಿಕಲರಾಗಿ ಮಾಸಿಕ ಪಿಂಚಣಿಯ ನೆರವಿನಲ್ಲಿ ಮತ್ತೆ ಎಂದಿನ ಬಡತನದ ಬಾಳು ಬದುಕುತ್ತಿದ್ದರು.

ಇದೆಲ್ಲ ನೆನಪಾಗಲು ಕಾರಣವೇನೆಂದರೆ, ಸದ್ಯ ದೇಶದಲ್ಲಿ ಕೇಳಿಬರುತ್ತಿರುವ ಯುದ್ಧದ ಮಾತುಗಳು. ಯುದ್ಧ ಸರಿಯೋ ತಪ್ಪೋ ಎನ್ನುವುದು ಇಲ್ಲಿ ನನ್ನ ವಿಶ್ಲೇಷಣೆಯಲ್ಲ. ಅದು ಪ್ರಭುತ್ವಕ್ಕೆ ಬಿಟ್ಟ ವಿಚಾರ. ಯಾವ ಯುದ್ಧಗಳೂ ಯಾವ ಪ್ರಜೆಯ ಅಪೇಕ್ಷೆಯ ಮೇರೆಗೆ ನಡೆಯುವುದೂ ಇಲ್ಲ, ನಿಲ್ಲುವುದೂ ಇಲ್ಲ. ಆದರೆ ಯುದ್ಧವೊಂದು ಬಡ ಕುಟುಂಬದ ಮೇಲೆ ತಂದೊಡ್ಡುವ ಭಯಾನಕ ದುಃಸ್ವಪ್ನಗಳು ಹೇಗಿರುತ್ತವೆಯೆಂದು ಹೇಳುವುದಷ್ಟೇ ನನ್ನ ಬರಹದ ಉದ್ದೇಶ.

ಗಡಿಯಾಚೆಗಿನ, ಪಾಕಿಸ್ತಾನ ನೆಲದ ಸೈನಿಕರಿಗೂ ತಂದೆ, ತಾಯಿ, ಮಡದಿ, ಮಕ್ಕಳು ಇರಬಹುದಲ್ಲವೇ? ಅಲ್ಲಿಯೂ ನಮ್ಮ ಅಣ್ಣನಂತೆ ಕೇವಲ ಬಡತನ ನೀಗಲು ಮಿಲಿಟರಿ ಸೇರಿದವರು ಇರುವರಲ್ಲವೇ?

ಗಡಿಗಳು ಅಳಿಸಿಹೋಗಲೆಂದು ಆಶಿಸುವ ನಾನು ಇಲ್ಲಿ ಮೂರ್ಖನಂತೆ ಕಾಣುವುದಾದರೆ...

ನಾನು ಮೂರ್ಖನಾಗಿಯೇ ಇರುವುದಕ್ಕೆ ಇಷ್ಟಪಡುವೆ.

**

ತಾರೀಕು ಬದಲಾಗಿದೆ. ಭೀಮಪ್ಪ ಈಗ ನಿವೃತ್ತ. ಆದರೆ, ಅವನ ಮಗ ಮಹೇಶ ಈಗ ಮಿಲಿಟರಿ ಸೇರಿದ್ದಾನೆ. ವ್ಯತ್ಯಾಸವಿಷ್ಟೇ, ಅಣ್ಣ ಪತ್ರ ಬರೆಯುತ್ತಿದ್ದ, ಮಹೇಶನ ಕೈಲಿ ಕೀ ಪ್ಯಾಡಿನ ಮೊಬೈಲ್ ಇದೆ.

ಗಡಿಗಳೂ ಹಾಗೆಯೇ ಇವೆ, ಒಂದಿಂಚೂ ಆಚೀಚೆ ಸರಿದಾಡದೆ ಬೇಲಿಗಳು ಇನ್ನಷ್ಟು ಬಿಗಿಯಾಗಿವೆ. ಅದರ ಜೊತೆಗೆ ಗೋಡೆಗಳೂ ಕೂಡ. ಆಗ ಅಣ್ಣನಿಗೆ ಕಾರ್ಗಿಲ್, ಮಹೇಶನಿಗೆ ಈಗ ಪುಲ್ವಾಮಾ. ಈ ಪುಲ್ವಾಮಾ ಎಂಬ ವಿಚಿತ್ರ ಹೆಸರಿನ ಊರು ಈ ಭೂಮಿಯ ಯಾವ ದಿಕ್ಕಿಗಿರುವುದೆಂದು ನನ್ನಾಣೆಗೂ ನನ್ನ ಅತ್ತಿಗೆಗೆ ಗೊತ್ತಿಲ್ಲ. ಆದರೆ ಅದೇ ತಾಯಿಕರುಳು, ಅವವೇ ಸಂಕಟಗಳು ತಲೆಮಾರಿನಿಂದ ತಲೆಮಾರಿಗೆ, ರಾಜ್ಯಗಳಳಿದರೂ ರಾಜರು ಉರುಳಿದರೂ.

ನನ್ನ ಊರು ಇರುವುದು ಮಹಾರಾಷ್ಟ್ರದ ಗಡಿಯಿಂದ ಕೇವಲ 2 ಕಿ.ಮೀ. ದೂರದಲ್ಲಿ. ಅಲ್ಲಿ ಭರಪೂರ ಬರಗಾಲಗಳು. ಹಾಸಿ ಹೊಚ್ಚಿ ಹೊದ್ದರೂ ಮಿಗುವ ಬಡತನ. ಇಲ್ಲಿನ ನೂರಾರು ಹಳ್ಳಿಗಳಿಗೆ ಆ ಕಾಲಕ್ಕೆ ಯಾರೂ ಹೆಣ್ಣು ಕೊಡುತ್ತಿರಲಿಲ್ಲ. ಕಾರಣವಿಷ್ಟೇ, ಎಲ್ಲಿ ತಮ್ಮ ಮಗಳು ದೂರದಿಂದ ನೀರಬಿಂದಿಗೆಯ ಹೊತ್ತು ಹೊತ್ತೇ ಸವೆದುಹೋದಾಳೆಂಬ ಕಾಳಜಿ. ಈಗ ಪರಿಸ್ಥಿತಿ ಸ್ವಲ್ಪ ಬದಲಾಗಿದೆ. ಯಥೇಚ್ಛ ನೀರಿದೆ, ಬೇಸಿಗೆಯ ಹೊರತುಪಡಿಸಿ. ಅರ್ಧ ಮರಾಠಿ, ಅರ್ಧ ಕನ್ನಡ ಬೆರೆತ ಭಾಷೆಯ ವಿಶಿಷ್ಟ ಸೊಗಡಿನ ಸೊಲ್ಲಿದೆ. ಇವರಿಗೆಂದಿಗೂ ನಾನು ಕನ್ನಡಿಗ, ನಾನು ಮಹಾರಾಷ್ಟ್ರಿಗ ಎನ್ನಿಸುವ ಭೇದ ಕಂಡಿಲ್ಲ. ‘ಟೈಮೆಷ್ಟಾತು’ ಅಂತ ಕೇಳಿದರೆ, ‘ಬಾರಾ’ ಅನ್ನುತ್ತಾರೆ. ಬೆಳಗಾವಿ ಗಡಿ ಸಮಸ್ಯೆಯೊಂದು ಇವರ ಪ್ರಜ್ಞೆಯಲ್ಲೇ ಇಲ್ಲ.

ನನಗನ್ನಿಸುವ ಹಾಗೆ, ಈ ಭಾಷೆ, ದೇಶ, ಗಡಿ, ಭೇದವೆನ್ನುವುದು ತುಸು ಓದಿದ ನನ್ನಂತಹವನಿಗೆ ಮಾತ್ರ. ಸಂವಿಧಾನ ಒಪ್ಪಿಕೊಂಡ ಮೇಲೆ state ಒಪ್ಪಿಕೊಳ್ಳಲೇಬೇಕು ಬಿಡಿ. ಆದರೆ ಇಲ್ಲಿ ನಾನು ಹೇಳಲು ಹೊರಟಿರುವುದು ಅದಲ್ಲ. ನಾನಿರುವ ಊರಿನ ಸುಮಾರು ನಲವತ್ತು–ಐವತ್ತು ಹಳ್ಳಿಗಳ ಪ್ರತಿಯೊಬ್ಬರ ಮನೆಯಲ್ಲಿ ಒಬ್ಬೊಬ್ಬ ಯೋಧರಿದ್ದಾರೆ. ಯೋಧರೆಂದರೆ ಸಿಪಾಯಿ, ಬಹಳವೆಂದರೆ ಲ್ಯಾನ್ಸ್‌ ನಾಯಕ ಹುದ್ದೆಯಂತಹ ಕೆಳಹಂತದ ಸ್ಥಾನದಲ್ಲಿರುವವರು. ಇವರಿಗೆ ಮಿಲಿಟರಿ ಸೇರುವ ಏಕೈಕ ಆಕರ್ಷಣೆಯೆಂದರೆ ಸಂಬಳ. ಎಸ್ಸೆಸ್ಸೆಲ್ಸಿ, ಪಿಯುಸಿ ಓದಿದವರಿಗೆ ಇಷ್ಟು ಸಂಬಳ (25–30 ಸಾವಿರ ರೂಪಾಯಿ) ಬೇರೆ ಎಲ್ಲಿ ಕೊಡಲು ಸಾಧ್ಯ?

ಈಗೀಗ ದೈಹಿಕ ದೃಢತೆಯಿಲ್ಲದವರು ಟೀಚರ್ ಆಗುತ್ತಿದ್ದಾರೆ. ಈ ಯುವಕರಿಗೆ ಕಣ್ಣು ತುಂಬ ಕನಸುಗಳಿವೆ, ಆದರೆ ಹೆಚ್ವಿನ ವ್ಯಾಸಂಗಕ್ಕೆ ಅನುಕೂಲಕರ ಪರಿಸರವಿಲ್ಲ. ಜೂಜಾಡುವ ಮಳೆಯ ನಂಬಿ ಕೃಷಿ ಮಾಡಿ, ಸಾಲ ಮಾಡಿ, ನೇಣಿಗೆ ಹೋಗುವ ಬದಲು, ಹೆಂಡತಿ–ಮಕ್ಕಳು, ಮುದಿ ತಾಯಂದಿರು ಖುಷಿಯಾಗಿರಲೆಂದು ಅನಿವಾರ್ಯವಾಗಿ ಹೆಗಲಿಗೆ ಬಂದೂಕು ಹಾಕುತ್ತಾರೆ. ಬಂದೂಕು ಹಾಕಿದ ಮೇಲೆ ದೇಶ ಕಾಯಲೇಬೇಕು, ಎದುರಾಳಿಯನ್ನು ಹೊಡೆಯಲೇಬೇಕು. ಮತ್ತು ದೇಶಪ್ರೇಮವೆಂಬ ಕೆಚ್ಚನ್ನು ಎದೆಯಲ್ಲಿ ಕಾಪಿಡಲೇಬೇಕು.

ನಿಮಗೆ ತಮಾಷೆಯೆನಿಸಬಹುದು, ನನ್ನ ಸಹಪಾಠಿಯೊಬ್ಬ ಸೈನ್ಯಕ್ಕೆ ಸೇರಿದ್ದ. ಅವನೆಷ್ಟು ಸಂಭಾವಿತ ಮುಗ್ಧನೆಂದರೆ, ಒಂದು ಇರುವೆಯನ್ನೂ ಜೀವಮಾನದಲ್ಲಿ ಸಾಯಿಸದವನು. ‘ಹೆಣ್ತಮ್ಮ’ ಅಂತ ರೇಗಿಸಿಕೊಂಡವನೇ ಮುಂದೆ ಕಾರ್ಗಿಲ್‌ನ ಗಡಿಯಲ್ಲಿ ಹುತಾತ್ಮನಾದ. ಅವನ ಸ್ಮಾರಕ ನಮ್ಮೂರ ಪಕ್ಕದ ನವಲಿಹಾಳವೆಂಬ ಚಿಕ್ಕ ಊರಿನಲ್ಲಿದೆ. ಈ ಸೀಮೆ ದಾಟುವಾಗಲೆಲ್ಲ ನನ್ನ ಕಣ್ಣುಗಳು ತೇವವಾಗುತ್ತವೆ. ಬೇರೆಯವರ ವಿಷಯ ಬಿಡಿ, ನನ್ನ ಅಣ್ಣನ ಮಗ ಮಹೇಶ ಈಗ ‘ಬಿಎಸ್‌ಎಫ್‌’ನ ಜವಾನ. ಮೊನ್ನೆ ತಾನೆ ರಾಜಸ್ಥಾನದಲ್ಲಿ ಡ್ಯೂಟಿ ರಿಪೋರ್ಟ್‌ ಮಾಡಿಕೊಂಡವನು, ಕಳೆದ ಮೂರು ದಿನಗಳಿಂದ ಅವನ ಫೋನು ನಾಟ್ ರೀಚಬಲ್. ಬಹುಶಃ, ಅವನು ಗಡಿಭಾಗದಲ್ಲಿ ನಿಯೋಜಿತನಾಗಿರಬೇಕು. ನಾನು ಅರ್ಥ ಮಾಡಿಕೊಳ್ಳಬಲ್ಲೆ – ಅವನು ಯೋಧ, ಅವನಲ್ಲದೆ ದೇಶದ ಗಡಿ ಯಾರು ಕಾಯಬೇಕು? ಆ ಬಗ್ಗೆ ನನಗೆ ಹೆಮ್ಮೆಯಿದೆ. ಆದರೆ ಮನೆಯಲ್ಲಿ ಎರಡು ಪುಟ್ಟ ಕಂದಮ್ಮಗಳು ಇದ್ಯಾವುದರ ಅರಿವಿಲ್ಲದೆ ಅಂಗಳದಲ್ಲಿ ಆಟ ಆಡುತ್ತಿವೆ. ಅವ್ವ ಒಲೆಯ ಮುಂದೆ ಉರಿಯುತ್ತಿದ್ದಾಳೆ. ನಾಳೆಯೋ ನಾಡಿದ್ದೋ ಕಣ್ಣಿನ ಆಪರೇಷನ್ ಮಾಡಿಸಿಕೊಳ್ಳಬೇಕಾದ ಅಪ್ಪ, ‘ದಂಗಿ ಕಡಿಮಿ ಆಗಲಿ ಆಮ್ಯಾಲ ಆಪರೇಷನ್ ಮಾಡಿಸಿದರಾಯ್ತು’ ಅಂತ ಹಾಸಿಗೆ ಹಿಡಿದಿದ್ದಾನೆ.

ಪ್ರಸಕ್ತ ಸಂದರ್ಭದಲ್ಲಿ ಯುದ್ಧ ‘ಬೇಡ’ವೆಂದರೆ ನಾನು ದೇಶದ್ರೋಹಿ, ಸ್ವಾರ್ಥಿಯಾಗುತ್ತೇನೆ. ‘ಬೇಕು’ ಅಂದರೆ ಹಿಂಸೆಗೆ ಪ್ರಚೋದಿಸಿದಂತಾಗುತ್ತದೆ. ನಾನಿಲ್ಲಿ ಅಲಿಪ್ತ. ಯುದ್ಧದ ತೀರ್ಮಾನವನ್ನು ಪ್ರಭುತ್ವ ಮಾಡುತ್ತದೆ. ಸಂಘರ್ಷದ ನೆಲದಲ್ಲಿನ ನನ್ನ ಮಗ ಮಹೇಶ ಅಥವಾ ಅವನಂತಹ ಅಣ್ಣತಮ್ಮಂದಿರು ಸುರಕ್ಷಿತವಾಗಿ ಮನೆಗೆ ಬರಲಿ ಎಂದು ದೇವರಿಗೆ ತುಪ್ಪದ ದೀಪ ಹಚ್ಚುವ, ಹರಕೆ ಹೊರುವಷ್ಟು ಬಲವನ್ನು ಭಾರತಾಂಬೆ ನನಗೆ ನೀಡಲಿ ಎಂದಷ್ಟೇ ನಾನು ಪ್ರಾರ್ಥಿಸಬಲ್ಲೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT