ಶನಿವಾರ, ಜೂನ್ 19, 2021
21 °C

ಅಂಗನವಾಡಿಗಳ ಮಹತ್ವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಪೌಷ್ಟಿಕತೆ ಎಂಬುದು ರಾಷ್ಟ್ರೀಯ ಅವಮಾನ ಎಂದು ಪ್ರಧಾನಿ ಮನಮೋಹನ್‌ಸಿಂಗ್ ಇತ್ತೀಚೆಗೆ ಹೇಳಿದ್ದರು. ಅಪೌಷ್ಟಿಕತೆಯ ನಿವಾರಣೆಗೆ ರಾಷ್ಟ್ರದ ಬಹುಮುಖ್ಯ ಸಾಧನ ಐಸಿಡಿಎಸ್ (ಸಮಗ್ರ ಶಿಶು ಅಭಿವೃದ್ಧಿ ಸೇವಾ ಕಾರ್ಯಕ್ರಮ) ಕಾರ್ಯಕ್ರಮ. 1975ರಲ್ಲಿ ಆರಂಭವಾದ ಈ ಕಾರ್ಯಕ್ರಮದ ಭಾಗವಾಗಿ ಅಂಗನವಾಡಿ ಕೇಂದ್ರಗಳನ್ನು ರಾಷ್ಟ್ರದಾದ್ಯಂತ ಆರಂಭಿಸಲಾಗಿದೆ.

 

ಆದರೆ, ಅಂಗನವಾಡಿ ಕಾರ್ಯಕರ್ತೆಯರ ವೇತನ, ಅಂಗನವಾಡಿಗಳಲ್ಲಿ ನೀಡಲಾಗುವ ಆಹಾರ, ಅಂಗನವಾಡಿಗಳು ಕಾರ್ಯ ನಿರ್ವಹಿಸುತ್ತಿರುವ ಕಟ್ಟಡಗಳ ದುಃಸ್ಥಿತಿ - ಹೀಗೆ ಅನೇಕ ರೀತಿಯ ಸಮಸ್ಯೆಗಳಿವೆ. ಈ ಎಲ್ಲದರ ನಡುವೆಯೇ ಹೊಸದಾಗಿ 1,141 ಅಂಗನವಾಡಿ ಕೇಂದ್ರಗಳನ್ನು ರಾಜ್ಯಕ್ಕೆ ಕೇಂದ್ರ ಸರ್ಕಾರ ಮಂಜೂರು ಮಾಡಿದೆ.ವಾಸ್ತವವಾಗಿ, 1156 ಕೇಂದ್ರಗಳ ಆರಂಭಕ್ಕೆ ರಾಜ್ಯ ಪ್ರಸ್ತಾವ ಸಲ್ಲಿಸಿತ್ತು. ಆದರೆ ಕೇಂದ್ರದ ಒಪ್ಪಿಗೆ ಸಿಕ್ಕಿರುವುದು 1,141 ಕೇಂದ್ರಗಳಿಗೆ. ಇವುಗಳಲ್ಲಿ 232 ಅಂಗನವಾಡಿ ಕೇಂದ್ರಗಳಿಗೆ ಜನರೇ ಬೇಡಿಕೆ ಸಲ್ಲಿಸಿದ್ದರು. ಹೊಸ ಅಂಗನವಾಡಿ ಕೇಂದ್ರಗಳು ಆರಂಭವಾಗುವುದು ಸ್ವಾಗತಾರ್ಹ ಸಂಗತಿ.ಆದರೆ ಇವುಗಳಿಗೆ ಕಟ್ಟಡಗಳೆಲ್ಲಿ ಎಂಬ ಪ್ರಶ್ನೆಗೆ ಸುಲಭ ಉತ್ತರವಿಲ್ಲ. ಏಕೆಂದರೆ ಈಗಾಗಲೇ ರಾಜ್ಯದಲ್ಲಿ 63,377 ಅಂಗನವಾಡಿ ಕೇಂದ್ರಗಳಿದ್ದು, ಈ ಪೈಕಿ ಸ್ವಂತ ಕಟ್ಟಡಗಳಿರುವುದು 35 ಸಾವಿರ ಕೇಂದ್ರಗಳಿಗೆ ಮಾತ್ರ ಎಂಬುದು ಈ ಸಮಸ್ಯೆಯ ಮತ್ತೊಂದು ಮುಖವನ್ನು ತೋರುತ್ತದೆ.   ಸ್ವಂತ ಕಟ್ಟಡ ಇರದ ಅನೇಕ ಅಂಗನವಾಡಿ ಕೇಂದ್ರಗಳು ಯುವಕ -ಯುವತಿಯರ ಮಂಡಳಿ, ಮಹಿಳಾ ಮಂಡಳಿ, ಸಮುದಾಯ ಭವನ, ಗ್ರಾಮಪಂಚಾಯ್ತಿ ಕಟ್ಟಡ - ಹೀಗೆ ಎಲ್ಲೆಂದರಲ್ಲಿ ಕಾರ್ಯನಿರ್ವಹಿಸುತ್ತಿವೆ. ಸರ್ವ ಶಿಕ್ಷಣ ಅಭಿಯಾನ ಯೋಜನೆ ಅಡಿ ಶಾಲೆಗಳಿಗೆ ಕಟ್ಟಡಗಳನ್ನು ನಿರ್ಮಿಸಿಕೊಡಲಾಗುತ್ತದೆ. ಹಾಗೆಯೇ ಅಂಗನವಾಡಿ ಕೇಂದ್ರಗಳಿಗೂ ಸ್ವಂತ ಕಟ್ಟಡಗಳನ್ನು ನಿರ್ಮಿಸಲು ಸಲ್ಲಿಸಿರುವ ಪ್ರಸ್ತಾವಗಳ ಬಗ್ಗೆ ಸರ್ಕಾರದ ಗಂಭೀರ ಪರಿಶೀಲನೆ ತುರ್ತು ಅಗತ್ಯ.ಆಗಲೋ ಈಗಲೋ ಬೀಳಬಹುದಾದ ಕಟ್ಟಡಗಳು, ಬಾಡಿಗೆ ದುಡ್ಡು ಭರಿಸಲು ಅಸಾಧ್ಯವಾದಂತಹ ಬಾಡಿಗೆ ಕಟ್ಟಡಗಳು ಅಥವಾ ಯಾವುದೋ ಒಂದು ಜಗುಲಿಯೂ  ಅಂಗನವಾಡಿಗಳಾಗಿರುವ ವಿಪರ್ಯಾಸಗಳಿವೆ. `ಅಂಗಳದ ಆಶ್ರಯ~ಎಂಬಂತಹ ಅರ್ಥವಿರುವ ಅಂಗನವಾಡಿ ಕೇಂದ್ರಗಳ ಈ ದುಃಸ್ಥಿತಿ ವಿಪರ್ಯಾಸದ್ದು. ಜೊತೆಗೆ ಅಂಗನವಾಡಿಗಳೆಂದು ಎಂತಹದೋ ಕಟ್ಟಡ ಕಟ್ಟಿಬಿಟ್ಟರೆ ಸಾಲದು, ಮಕ್ಕಳಿಗೆ ಆಕರ್ಷಕ ಎನಿಸುವ ಮಾದರಿಯ ಕಟ್ಟಡಗಳನ್ನು ನಿರ್ಮಿಸುವತ್ತ ಸರ್ಕಾರ ಗಮನ ಹರಿಸಬೇಕಿದೆ.ಈ ಮಧ್ಯೆ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ನಿವೃತ್ತಿ ವಯಸ್ಸು ನಿಗದಿ ಮಾಡಿದ ನಂತರ ಸುಮಾರು ಎರಡು ಸಾವಿರ ಹುದ್ದೆಗಳು ಖಾಲಿ ಇವೆ. ಈಗ ಸರ್ಕಾರ ಪ್ರಕಟಿಸಿರುವ ಹೊಸ ಕೇಂದ್ರಗಳಿಗೂ ನೇಮಕಗಳಾಗಬೇಕಿವೆ.ಇಷ್ಟೆಲ್ಲಾ ಸಮಸ್ಯೆಗಳ ವರ್ತುಲಗಳಲ್ಲಿ ಸಿಲುಕಿರುವ ಅಂಗನವಾಡಿ ವ್ಯವಸ್ಥೆಗೆ ಕಾಯಕಲ್ಪ ಅಗತ್ಯ. ಮಕ್ಕಳ ಪೌಷ್ಟಿಕತೆ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಈ ಯೋಜನೆಯ ಸಾರ್ವತ್ರೀಕರಣಕ್ಕೆ ಮೂಲಸೌಕರ್ಯಗಳನ್ನು  ಸಮರ್ಪಕ ರೀತಿಯಲ್ಲಿ ಒದಗಿಸುವುದು ಸರ್ಕಾರದ ಕರ್ತವ್ಯ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.