ಮಂಗಳವಾರ, ಮೇ 18, 2021
28 °C

ಅಂತರ್ಜಲ ಉಳಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂತರ್ಜಲದ ದುರ್ಬಳಕೆ ತಡೆಯುವ ವಿಷಯದಲ್ಲಿ ರಾಜ್ಯ ಸರ್ಕಾರದ ನಿಷ್ಕಾಳಜಿ ಹೊಣೆಗೇಡಿತನದ ಪರಮಾವಧಿ. ಅಂತರ್ಜಲ ಅಭಿವೃದ್ಧಿ, ನಿರ್ವಹಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದ ಮಸೂದೆಗೆ ವಿಧಾನ ಮಂಡಲ ಒಪ್ಪಿಗೆ ನೀಡಿ ಆರು ತಿಂಗಳಾದರೂ ಅದನ್ನು ಜಾರಿಗೆ ತರುವ ವಿಷಯದಲ್ಲಿ ಸರ್ಕಾರ ಆಸಕ್ತಿಯನ್ನೇ ತೋರಿಸುತ್ತಿಲ್ಲ.ರಾಜ್ಯದಲ್ಲಿ ಅಂತರ್ಜಲ ದುರ್ಬಳಕೆ ಮಿತಿಮೀರಿದೆ. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಮತ್ತಿತರ ಜಿಲ್ಲೆಗಳ ಭೂಮಿಯಲ್ಲಿ ನೀರೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿ, ಕೈಗಾರಿಕೆ, ದೈನಂದಿನ ಬಳಕೆ ಎಲ್ಲಕ್ಕೂ ಈಗ ಅಂತರ್ಜಲವೇ ಆಧಾರ. ಅನೇಕ ಜಿಲ್ಲೆಗಳಲ್ಲಿ ಸಾವಿರ ಅಡಿ ಆಳದ ಬಾವಿ ಕೊರೆದರೂ ನೀರಿನ ಪಸೆಯೇ ಇಲ್ಲ.

 

ಅಂತರ್ಜಲವನ್ನೆಲ್ಲ ಬಸಿದು ಬಳಸಿಕೊಳ್ಳುವ ದುರಾಸೆಗೆ ಕಡಿವಾಣ ಹಾಕದಿದ್ದರೆ ಜೀವ ಸಂಕುಲಕ್ಕೆ ಉಳಿಗಾಲ ಇಲ್ಲ. ನಿಸರ್ಗದ ಎಚ್ಚರಿಕೆಯ ಗಂಟೆಯನ್ನು ಸರ್ಕಾರ ಮತ್ತು ಜನರು ಗಂಭೀರವಾಗಿ ಪರಿಗಣಿಸಿಲ್ಲ. ಇನ್ನಾದರೂ ಸರ್ಕಾರ ಅಂತರ್ಜಲದ ದುರ್ಬಳಕೆ ತಡೆಯುವ ಮಸೂದೆಯನ್ನು ತುರ್ತಾಗಿ ಜಾರಿಗೆ ತರಬೇಕು.

 

ಅಂತರ್ಜಲ ಸಂರಕ್ಷಣೆಗೆ ಸಂಬಂಧಿಸಿದ ಮಾದರಿ ಮಸೂದೆಯೊಂದನ್ನು ಕೇಂದ್ರ ಸರ್ಕಾರ 2006ರಲ್ಲೇ ಜಾರಿಗೆ ತಂದಿದೆ. ಈ ಮಾದರಿಯಲ್ಲಿ ಎಲ್ಲ ರಾಜ್ಯಗಳೂ ಪ್ರತ್ಯೇಕ ಮಸೂದೆ ಜಾರಿಗೆ ತರುವಂತೆ ಒತ್ತಾಯಿಸುತ್ತಲೇ ಇದೆ. ರಾಜ್ಯದಲ್ಲಿ ಮಸೂದೆ ರಚನೆ ಆಗಿದ್ದರೂ ಅದನ್ನು ಅನುಷ್ಠಾನಕ್ಕೆ ತರುವ ವ್ಯವಸ್ಥೆ ಮತ್ತು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವ ಮಾತುಗಳನ್ನಾಡುತ್ತಿದೆ. ಸರ್ಕಾರದ ವಿಳಂಬ ಧೋರಣೆ ದುರದೃಷ್ಟಕರ.ರಾಜ್ಯದಲ್ಲಿ ಇರುವ ಕೊಳವೆ ಬಾವಿಗಳೆಷ್ಟು ಎಂಬ ಮಾಹಿತಿ ಸರ್ಕಾರದ ಬಳಿ ಇಲ್ಲ. ಈಗ ಕೊಳವೆ ಬಾವಿ ಕೊರೆಸಲು ಯಾರ ಅನುಮತಿಯೂ ಬೇಕಿಲ್ಲ. ಹಣ, ಭೂಮಿ ಇದ್ದವರು ಎಷ್ಟು ಕೊಳವೆ ಬಾವಿಗಳನ್ನಾದರೂ ಕೊರೆಸಬಹುದು.

 

ಬಾವಿ ಕೊರೆಸುವ ಮೊದಲು ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸುವುದೂ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಪ್ರಸ್ತುತ ಬೇಸಿಗೆಯಲ್ಲಿ ರಾಜ್ಯದ ಉದ್ದಗಲದಲ್ಲಿ ಸಾವಿರಾರು ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. ಹೊಸದಾಗಿ ಕೊರೆದ ಬಾವಿಗಳ ಆಳ ಹೆಚ್ಚಿದಂತೆಲ್ಲ ಹಳೆಯ ಕೊಳವೆ ಬಾವಿಗಳಲ್ಲಿ ಕ್ರಮೇಣ ನೀರು ಕಡಿಮೆಯಾಗಿ ನಿಷ್ಪ್ರಯೋಜಕವಾಗುತ್ತವೆ.

 

ಅವುಗಳಿಗೆ ಖರ್ಚು ಮಾಡಿದ ಹಣ ವ್ಯರ್ಥ. ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿ ನೀರಿನ ಮಾರಾಟ ದಂಧೆಯಾಗಿ ಬೆಳೆದಿದೆ. ನೂರಾರು ಅಡಿ ಆಳದ ನೀರಿನಲ್ಲಿ ಪ್ಲೋರೈಡ್, ನೈಟ್ರೇಟ್‌ನಂತ ರಾಸಾಯನಿಕಗಳಿವೆ. ಈ ನೀರು ಬಳಕೆಗೆ ಯೋಗ್ಯವಲ್ಲ. ಪರ್ಯಾಯ ಜಲ ಮೂಲಗಳಿಲ್ಲದೆ ಜನರು ಅದನ್ನೇ ಅನಿವಾರ್ಯವಾಗಿ ಬಳಸುತ್ತಿದ್ದಾರೆ. ಅದರಿಂದ ಆಗುವ ಅನಾಹುತಗಳ ಬಗ್ಗೆ ಜನರಿಗೆ ಅರಿವಿಲ್ಲ.

 

ರಾಜ್ಯ ಸರ್ಕಾರ ಈ ಬೆಳವಣಿಗೆಯನ್ನು ನೋಡಿಕೊಂಡು ಸುಮ್ಮನಿರಲಾಗದು. ಅಂತರ್ಜಲ ಇಡೀ ರಾಜ್ಯದ ಆಸ್ತಿ. ಅದರ ದುರ್ಬಳಕೆ ತಡೆಯಬೇಕು. ಅಷ್ಟೇ ಅಲ್ಲ ಮಳೆ ನೀರನ್ನು ಭೂಮಿಯಲ್ಲೇ ಇಂಗಿಸುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸುವ ಕಾರ್ಯಕ್ರಮಗಳನ್ನು ಇಡೀ ರಾಜ್ಯದಲ್ಲಿ ಜಾರಿಗೆ ತರಬೇಕು.ನೀರಿನ ದುಂದು ಬಳಕೆ ತಡೆಯುವ ಮತ್ತು ಅಂತರ್ಜಲ ಪ್ರಾಮುಖ್ಯತೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಇದು ಸರ್ಕಾರದ ಕೆಲಸವೇ ಆದರೂ ಜನರ ಹಾಗೂ ಪರಿಸರ ಸಂಘಟನೆಗಳ ಸಹಕಾರವೂ ಅದಕ್ಕೆ ಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.