ಗುರುವಾರ , ಫೆಬ್ರವರಿ 25, 2021
29 °C
ನಿಗೂಢ ನೇತಾಜಿ-19

ಅಂಥ ನಾಯಕನ ಹೋರಾಟಕ್ಕೆ ಎಂಥ ಗತಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಥ ನಾಯಕನ ಹೋರಾಟಕ್ಕೆ ಎಂಥ ಗತಿ?

ಜನವರಿ 23 ನೇತಾಜಿ ಅವರ 119ನೇ ಜನ್ಮದಿನ. ಯಾವುದೇ ದೇಶ ಅಂಥ ದಿನವನ್ನು ಸಂಭ್ರಮದಿಂದ ಆಚರಣೆ ಮಾಡಿ, ಧೀಮಂತ ವ್ಯಕ್ತಿತ್ವವನ್ನು ನೆನೆಯಬೇಕು. ಆದರೆ, ನಮಗೆ ಸ್ವಾತಂತ್ರ್ಯ ದೊರೆತು 70 ವರ್ಷಗಳಾಗಿವೆಯಷ್ಟೆ; ದೇಶಕ್ಕಾಗಿ ತನ್ನ ಇಡೀ ಬದುಕನ್ನು ನವೆದ ವ್ಯಕ್ತಿಯನ್ನು ಮರೆಯುವಷ್ಟು ಜನರು ಕೃತಘ್ನರಾಗಿರುವುದು ದುರಂತ.‘ಭಾರತದ ಸ್ವಾತಂತ್ರ್ಯ ಹೋರಾಟದ ಕುರಿತು ಬಿಪಿನ್ ಚಂದ್ರ ಬರೆದಿರುವ 600 ಪುಟಗಳ ಕೃತಿಯಲ್ಲಿ ನೇತಾಜಿ ಅವರ ವಿಷಯವಿರುವುದು ಒಂದೂವರೆ ಪುಟ ಮಾತ್ರ. ನೇತಾಜಿ ಹಾಗೂ ಐ.ಎನ್.ಎ. ಮಾಡಿದ ತ್ಯಾಗಗಳಿಗೆ ಬೆಲೆ ಕೊಡದ ನಾವು ಅವಮಾನದಿಂದ ಉರುಳುಹಾಕಿಕೊಳ್ಳಬೇಕು’ ಎಂದು ನಿವೃತ್ತ ಮೇಜರ್ ಜನರಲ್ ಜಿ.ಡಿ. ಬಕ್ಷಿ ಪ್ರತಿಕ್ರಿಯಿಸಿದ್ದರು.ಪ್ರೊ. ಪ್ರಿಯದರ್ಶಿ ಮುಖರ್ಜಿ ಕೂಡ ವಿಷಾದದಿಂದ ನೇತಾಜಿ ಬಗೆಗಿನ ನಿರ್ಲಕ್ಷ್ಯಕ್ಕೆ ಕಾರಣವೇನು ಎಂದು ಹೀಗೆ ಬರೆದಿದ್ದಾರೆ: ‘ಅನೇಕ ಬ್ರಿಟಿಷ್ ಇತಿಹಾಸಕಾರರು ಹಾಗೂ ಸಮಕಾಲೀನ ರಾಜಕಾರಣಿಗಳು ಎರಡನೇ ವಿಶ್ವಯುದ್ಧದ ನಂತರವೂ ಬ್ರಿಟಿಷರು ಭಾರತವನ್ನು ಬಿಟ್ಟುಹೋಗಬೇಕಾಗಿ ಬಂದದ್ದು ನೇತಾಜಿ ಎಂಬ ಒಬ್ಬ ವ್ಯಕ್ತಿಯಿಂದ ಎಂದು ಹೇಳಿದ್ದಾರೆ. ಇತಿಹಾಸದ ಪುಸ್ತಕಗಳಿಂದ ನೇತಾಜಿ ಹೆಸರು ಬಿಟ್ಟುಹೋಗುವಂತೆ ಮಾಡುವಲ್ಲಿ ನೆಹರೂ ಹಾಗೂ ಅವರ ಅನುಯಾಯಿಗಳ ಅಳುಕು ಮುಖ್ಯ ಪಾತ್ರ ವಹಿಸಿದೆ’.ನಾಜಿ ಜರ್ಮನಿ ಹಾಗೂ ಸಾಮ್ರಾಜ್ಯಶಾಹಿ ಜಪಾನ್ ಜೊತೆ ಒಪ್ಪಂದ ಮಾಡಿಕೊಂಡಿದ್ದನ್ನೇ ನೆಪಮಾಡಿ ಬೋಸ್ ವ್ಯಕ್ತಿತ್ವ ಕಳೆಗುಂದುವಂತೆ ಮಾಡಲಾಯಿತು. ಇವತ್ತಿಗೂ ಟೀಕಾಕಾರರು ಬೋಸ್ ಅವರನ್ನು ಅದೇ ಕಾರಣಕ್ಕೆ ತೃಣೀಕರಿಸಿ, ಫ್ಯಾಸಿಸ್ಟ್ ಎಂದು ವರ್ಗೀಕರಿಸಿಬಿಡುತ್ತಾರೆ. ಹಾಗೆ ನೋಡಿದರೆ, ಸೋನಿಯಾ ಗಾಂಧಿ ಅವರ ತಂದೆ ಸ್ಟೆಫಾನೊ ಮೈನೊ, ಮುಸೊಲೋನಿಗೆ ಬದ್ಧರಾಗಿದ್ದ ಫ್ಯಾಸಿಸ್ಟ್ ಶ್ರದ್ಧಾವಂತ. ಎರಡನೇ ವಿಶ್ವಯುದ್ಧದಲ್ಲಿ ಹಿಟ್ಲರ್ ಸೇನೆಯ ಜೊತೆಗೆ ರಷ್ಯನ್ನರ ವಿರುದ್ಧ ಹೋರಾಡಿದವರು. ಇದಕ್ಕೆ ಏನನ್ನೋಣ?ನೇತಾಜಿ ವಿಮಾನ ಅಪಘಾತದಿಂದಲೇ ಮೃತಪಟ್ಟಿದ್ದು ಎಂದು ನಂಬಿಸಲು ಸ್ವಾರ್ಥಪರ ಹಿತಾಸಕ್ತಿಗಳು ಇನ್ನಿಲ್ಲದಂತೆ ಯತ್ನಿಸುತ್ತಾ ಬಂದಿವೆ. 1945ರ ನಂತರ ಅನೇಕ ವರ್ಷ ನೇತಾಜಿ ಬದುಕಿದ್ದರು ಎನ್ನುವುದಕ್ಕೆ ಲಭ್ಯವಿರುವ ಸಾಕ್ಷ್ಯಗಳನ್ನು ಕೂಡ ಈ ಸ್ವಾರ್ಥಿಗಳು ನಿರ್ಲಕ್ಷಿಸುತ್ತಿದ್ದಾರೆ. ‘ನಮ್ಮ ವರದಿಯ ಮೊದಲ ಭಾಗವನ್ನು (ಎ ಭಾಗ) ಮಾತ್ರ ಗಣನೆಗೆ ತೆಗೆದುಕೊಂಡು, ಎರಡನೇ ಭಾಗವನ್ನು ಬಿಟ್ಟೇಬಿಟ್ಟರು. ನಮ್ಮ ಎದುರು ಸಾಕ್ಷಿಗಳನ್ನು ಹೇಳಿದವರ ಅಭಿಪ್ರಾಯಗಳು ಇದ್ದುದು ಎರಡನೇ ಭಾಗದಲ್ಲಿ. ಎರಡನೇ ಭಾಗ ವರದಿಯಾಗಬೇಕೆಂದು ನಾನು ಒತ್ತಿಹೇಳಿದ್ದೆ. ನೆಹರೂ ಅವರ ಉದ್ದೇಶ ಏನಾಗಿತ್ತೆನ್ನುವುದನ್ನು ಇದರಿಂದಲೇ ಅಂದಾಜಿಸಬಹುದು’ ಎಂದು ಶಾ ನವಾಜ್ ಸಮಿತಿಯಲ್ಲಿದ್ದ ಸದಸ್ಯ ಎಸ್.ಎನ್.ಮೈತ್ರ ತಮ್ಮ ಆತ್ಮಕಥೆಯಲ್ಲಿ ಬರೆದಿದ್ದಾರೆ.ಲೂಟಿಯಾದದ್ದು...

ಐ.ಎನ್.ಎ. ನಿಧಿಯನ್ನು ದೋಚುವಷ್ಟರ ಮಟ್ಟಿಗೆ ಮೋಸಗಾರರು ಹದ್ದುಮೀರಿದರೆನ್ನುವುದು ಇನ್ನೊಂದು ದುರಂತ. ಜಪಾನೀಯರಲ್ಲಿ ಅಂಗಲಾಚಕೂಡದು ಎಂದೇ ನೇತಾಜಿ ತಾವಾಗಿಯೇ ದೇಣಿಗೆ ಸಂಗ್ರಹಿಸಿದರು. ಎಲ್ಲಾ ಅಗತ್ಯ ವಸ್ತುಗಳನ್ನು ಸಾಲ ಮಾಡಿ ಖರೀದಿಸಿದರು. ಆಗ್ನೇಯ ಏಷ್ಯಾದಲ್ಲಿದ್ದ ಭಾರತೀಯರು ಉದಾರವಾಗಿ ದೇಣಿಗೆ ಕೊಟ್ಟರು. ಭೂಮಿ, ಬಂಗಾರದ ಒಡವೆಗಳನ್ನು ಕೊಟ್ಟಿದ್ದಷ್ಟೇ ಅಲ್ಲದೆ ತಮ್ಮ ಮನೆಯ ಸದಸ್ಯರನ್ನೇ ನೇತಾಜಿ ಹೋರಾಟಕ್ಕೆ ಬೆಂಬಲದ ರೂಪದಲ್ಲಿ ಕಳುಹಿಸಿಕೊಟ್ಟರು.1944ರ ಆಗಸ್ಟ್ 21ರಂದು ರಂಗೂನ್‌ನಲ್ಲಿ ಸಾರ್ವಜನಿಕ ನಿಧಿ ಸಂಗ್ರಹಣೆ ಸಭೆಯಲ್ಲಿ ಹಿರಾಬೆನ್ ಬೆತಾನಿ ತನ್ನ ಬಳಿ ಇದ್ದ 13 ಚಿನ್ನದ ಕಂಠೀಹಾರಗಳನ್ನು ಕೊಟ್ಟರು. ಅವುಗಳ ಬೆಲೆ ಆಗ 1.5 ಲಕ್ಷ ರೂಪಾಯಿಯಷ್ಟಿತ್ತು. ಬಹು ಕೋಟಿಗಳ ಒಡೆಯ ಆಗಿದ್ದ ಹಬೀಬ್ ಸಾಹಿಬ್ 1 ಕೋಟಿ ರೂಪಾಯಿಗಿಂತ ಹೆಚ್ಚು ಬೆಲೆಬಾಳುತ್ತಿದ್ದ ಆಸ್ತಿಯನ್ನು ನೇತಾಜಿ ಅವರಿಗೆ ನೀಡಿದರು, ರಂಗೂನ್‌ನ ಘನಿಯ ರಾಜ 63 ಲಕ್ಷ ರೂಪಾಯಿ ಬೆಲೆಯ ನಗದು ಹಾಗೂ ವಸ್ತುಗಳನ್ನು ದೇಣಿಗೆಯಾಗಿ ಕೊಟ್ಟರು. ರಂಗೂನ್ ಮೂಲದ ವ್ಯಾಪಾರಿ ವಿ.ಕೆ. ಚೆಲ್ಲಯ್ಯ ನಾದರ್ 42 ಕೋಟಿ ರೂಪಾಯಿ ಹಾಗೂ 2,800 ಚಿನ್ನದ ನಾಣ್ಯಗಳನ್ನು ಆಜಾದ್ ಹಿಂದ್ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟರು. ಇವೆಲ್ಲವೂ ಆಗ ಸುದ್ದಿಪತ್ರಿಕೆಗಳಲ್ಲಿ ವರದಿಯಾಗಿದ್ದ ಸಂಗತಿಗಳು.1945ರಲ್ಲಿ ಸಿಂಗಪುರದಲ್ಲಿದ್ದ ಭಾರತೀಯ ನಿವಾಸಿಗಳು ‘ನೇತಾಜಿ ವಾರ’ವನ್ನು ಅದ್ದೂರಿಯಾಗಿ ಆಚರಿಸಿದರು. ಚಿನ್ನದಲ್ಲಿ ನೇತಾಜಿ ಅವರ ತುಲಾಭಾರ ಮಾಡಲು ನಿರ್ಧರಿಸಿದರು. ಇದು ನೇತಾಜಿ ಅವರನ್ನು ಮುಜುಗರಕ್ಕೆ ಈಡುಮಾಡಿತ್ತು. ಅದೊಂದೇ ವಾರದಲ್ಲಿ 2 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ದೇಣಿಗೆಗಳನ್ನು ಸಂಗ್ರಹಿಸಲಾಗಿತ್ತು. ಐ.ಎನ್.ಎ. ಖಜಾನೆಗೆ 80 ಕೆ.ಜಿ.ಯಷ್ಟು ಚಿನ್ನ ಬಂದು ಸೇರಿತು. ವಜ್ರಗಳು, ಬೆಳ್ಳಿ, ಬೆಲೆಬಾಳುವ ಹರಳುಗಳು ಕೂಡ ದೇಣಿಗೆಯ ರೂಪದಲ್ಲಿ ನಿಧಿ ಸೇರಿದವು. ಭಾರತದ ಸ್ವಾತಂತ್ರ್ಯಕ್ಕಾಗಿ ದೇಶಭಕ್ತ ಭಾರತೀಯರು ಉದಾರವಾಗಿ ನೀಡಿದ ಕಾಣಿಕೆಗಳು ಅವು.ಬಂಗಾರದಿಂದ ತುಂಬಿದ್ದ ನಾಲ್ಕು ಡಬ್ಬಗಳು ಹಾಗೂ ಒಂದಿಷ್ಟು ಹಣವನ್ನು ನೇತಾಜಿ 1945ರ ಆಗಸ್ಟ್‌ನಲ್ಲಿ ಸೈಗೊನ್‌ನಿಂದ ಹೊರಟಾಗ ಒಯ್ದರು. ಬ್ಯಾಂಕಾಕ್‌ನಲ್ಲಿ ಐ.ಎನ್.ಎ. ಯೋಧರಿಗೆ ಆರು ತಿಂಗಳು ಸಂಬಳ ನೀಡಿದರು. ಮುಂದಿನ ಸ್ಥಳದಲ್ಲಿ ತಮ್ಮ ಗುರಿ ಸಾಧನೆಗೆ ಇರಲಿ ಎಂದು ಚಿನ್ನವನ್ನು ಉಳಿಸಿಕೊಂಡಿದ್ದರು. ಹಾಗೆಯೇ ಅವರು ಉಳಿಸಿಹೋದ ನಿಧಿಯು ಅವರು ನಾಪತ್ತೆಯಾದ ನಂತರ ಹೇಗೋ ಕಾಣೆಯಾಗಿಬಿಟ್ಟಿತು. ಆ ಕಾಲದಲ್ಲಿ 75 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ನಿಧಿ ಅದು ಎಂದು ಅಂದಾಜು ಮಾಡಲಾಗಿದೆ.2006ರಲ್ಲಿ ಐ.ಎನ್.ಎ. ಖಜಾನೆಗೆ ಸಂಬಂಧಿಸಿದ ದಾಖಲೆಗಳನ್ನು ಸರ್ಕಾರ ಸಾರ್ವಜನಿಕರಿಗೆ ಒದಗಿಸಿತು. ‘ಹೊರಗಿನವರಿಗೆ ತಿಳಿಯಕೂಡದು’ ಎಂದು ಸಂರಕ್ಷಿಸಲಾಗಿದ್ದ ಪ್ರಧಾನ ಮಂತ್ರಿ ಕಚೇರಿಯ ಕಡತಗಳ ವಿಭಾಗದಲ್ಲಿ ಆ ದಾಖಲೆಗಳು ಇದ್ದವು. ವಿಮಾನ ಅಪಘಾತದ ನಂತರ ಉಳಿದ 11 ಕೆ.ಜಿ. ಚಿನ್ನದ ಕುರಿತು ಮಾತ್ರ ದಾಖಲೆಗಳಲ್ಲಿ ಪ್ರಸ್ತಾಪ ಮಾಡಲಾಗಿತ್ತು. ರಾಯಭಾರಿಗಳ ಕೋಪದ ಪ್ರತಿಕ್ರಿಯೆ ಇದ್ದ ಯಾವುದೇ ವರದಿಗಳೂ ದಾಖಲೆಗಳಲ್ಲಿ ಇರಲಿಲ್ಲ.

ಮುಖರ್ಜಿ ಆಯೋಗವು ತನ್ನ ವರದಿಯಲ್ಲಿ ಪ್ರಧಾನ ಮಂತ್ರಿ ಕಚೇರಿಯ ಅತಿ ಗೋಪ್ಯ ಕಡತದ (ನಂ. 23(11)/56/57/Pಒ) ಕುರಿತು ಪ್ರಸ್ತಾಪಿಸಿತ್ತು.‘ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಟೋಕಿಯೊದಲ್ಲಿದ್ದ ಭಾರತೀಯ ರಾಯಭಾರಿ ಕಚೇರಿಯಿಂದ ಸುಭಾಷ್ ಚಂದ್ರ ಬೋಸ್ ಅವರ ಅಸ್ಥಿಯ ಜೊತೆಗೆ 200 ರೂಪಾಯಿಯ ಸಣ್ಣ ಮೊತ್ತವನ್ನು ಪಡೆದಿತ್ತು’ ಎಂದು ತಿಳಿಸಿತ್ತು. ಹಾಗಿದ್ದರೆ ಅಷ್ಟು ದೊಡ್ಡ ನಿಧಿಯ ಮೊತ್ತ, ಒಡವೆಗಳು ಏನಾದವು?‘ಐ.ಎನ್.ಎ.ಗೆ ನೀಡಿದ ನಗದು ಹಾಗೂ ಒಡವೆಗಳನ್ನು ಒಳಗೊಂಡ ಏಳು ದೊಡ್ಡ ಡಬ್ಬಗಳನ್ನು ನೆಹರೂ ಅವರಿಗೆ ಕಳುಹಿಸಲು ಜಪಾನ್ ನೀಡಿತ್ತು’ ಎಂದು ಐ.ಎನ್.ಎ.ಯಲ್ಲಿ ಹೋರಾಡಿದ್ದ ಯೋಧರು ನನಗೆ ಸಂದರ್ಶನ ನೀಡಿದ ವೇಳೆ ನೆನಪಿಸಿಕೊಂಡಿದ್ದರು. ಜಪಾನ್ ಸರ್ಕಾರವು ಐ.ಎನ್.ಎ ನಿಧಿಯಲ್ಲಿ ನೇತಾಜಿ ಅವರ ನಂಬಿಕಸ್ಥ ಅನುಯಾಯಿಗಳಾಗಿದ್ದ ಅಯ್ಯರ್ ಹಾಗೂ ರಾಮಮೂರ್ತಿ ಅವರಿಗೆ ಕೊಟ್ಟಿತ್ತು. ನೇತಾಜಿ ನಾಪತ್ತೆಯ ನಂತರ ಈ ಇಬ್ಬರೂ ವಂಚನೆ ಮಾಡಿದರು. ನಿಧಿಯ ಮೊತ್ತ ಹಾಗೂ ಬೆಲೆ ಬಾಳುವ ವಸ್ತುಗಳನ್ನು ಅಯ್ಯರ್, ರಾಮಮೂರ್ತಿ, ನೆಹರೂ ಹಾಗೂ ಮೌಂಟ್‌ಬ್ಯಾಟನ್ ಹಂಚಿಕೊಂಡರು ಎಂದು ಪ್ರೊ. ಪ್ರಿಯದರ್ಶಿ ಮುಖರ್ಜಿ ಅಭಿಪ್ರಾಯಪಟ್ಟರು.1947ರ ಡಿಸೆಂಬರ್ 4ರಂದು ಸ್ಥಳೀಯ ಭಾರತೀಯರ ದೂರುಗಳಿಂದಾಗಿ ಟೋಕಿಯೊದಲ್ಲಿದ್ದ ಭಾರತೀಯ ಸಂಧಾನ ಸಮಿತಿಯ ಆಗಿನ ಮುಖ್ಯಸ್ಥ ಸರ್ ಬೆಂಗಾಲ್ ರಾಮ ರಾವ್ ಅವರು ಎಂ.ಇ.ಎ.ಗೆ ಪತ್ರ ಬರೆದರು. ಐ.ಎನ್.ಎ ನಿಧಿಯ ಬೆಲೆ ಬಾಳುವ ವಸ್ತು ಹಾಗೂ ಹಣವನ್ನು ಮೂರ್ತಿ ನುಂಗಿಹಾಕಿದ್ದಾರೆ ಎಂಬ ಸತ್ಯ ಆ ಪತ್ರದಲ್ಲಿ ಇತ್ತು. ಯುದ್ಧಾ ನಂತರದ ಸಂಕಷ್ಟದ ಪರಿಸ್ಥಿತಿಯಲ್ಲೂ ರಾಮಮೂರ್ತಿ ಹಾಗೂ ಅವರ ಕುಟುಂಬ ಐಷಾರಾಮದಿಂದ ಇದ್ದುದನ್ನು ಜಪಾನ್ ಮಾಧ್ಯಮಗಳು ವರದಿ ಮಾಡಿದ್ದವು. 1951 ಹಾಗೂ 1955ರಲ್ಲಿ ಭಾರತೀಯ ರಾಯಭಾರಿಗಳು ಹಾಗೂ ಎಂ.ಇ.ಎ. ಅಧಿಕಾರಿಗಳು ಐ.ಎನ್.ಎ ನಿಧಿಯ ಕುರಿತು ಸಾರ್ವಜನಿಕ ವಿಚಾರಣೆ ನಡೆಯಬೇಕು ಎಂದು ನೆಹರೂ ಅವರಿಗೆ ಎಚ್ಚರಿಕೆ ನೀಡಿದರು. ಅವನ್ನು ಪದೇಪದೇ ನೆಹರೂ ನಿರ್ಲಕ್ಷಿಸಿದರು.ನೇತಾಜಿ ಅವರ ಬಗ್ಗೆ ಸಂಶೋಧನೆ ನಡೆಸಿದ ಸುಭಾಂಶು ರಾಯ್ ಅವರು ಮುಖರ್ಜಿ ಆಯೋಗದ ಎದುರು ಸಾಕ್ಷ್ಯ ನೀಡಿದರು. ಸಿ.ಎಸ್.ಡಿ.ಐ.ಸಿ. (ಕಂಬೈನ್ಡ್ ಸರ್ವಿಸಸ್ ಡೀಟೇಲ್ಡ್ ಇಂಟರಾಗೇಷನ್ ಸೆಂಟರ್-ಇಂಡಿಯಾ) ಮಾಜಿ ಅಧಿಕಾರಿ ಹ್ಯೂ ಟೊಯ್ ಜೊತೆ ಮಾತನಾಡಿದ್ದ ಸುಭಾಂಶು ಆಗ ಸಿಕ್ಕಿದ್ದ ಮಾಹಿತಿಯನ್ನು ಆಯೋಗಕ್ಕೆ ತಿಳಿಸಿದ್ದರು. ಅದರ ಪ್ರಕಾರ ಐ.ಎನ್.ಎ. ನಿಧಿಯನ್ನು 1945ರ ನವೆಂಬರ್‌ನಲ್ಲಿ ನೆಹರೂ ಅವರಿಗೆ ಹಸ್ತಾಂತರಿಸಲಾಗಿತ್ತು. 2002ರಲ್ಲಿ ಅಮೃತಸರದಲ್ಲಿ ಲಕ್ಷ್ಮಿ ಸೆಹಗಲ್ ಕೂಡ ಇದೇ ರೀತಿ ಆರೋಪಿಸಿದ್ದರು.1951ರಲ್ಲಿ ಜಪಾನ್‌ನಿಂದ ಗುಟ್ಟಾಗಿ ಐ.ಎನ್.ಎ. ನಿಧಿಯನ್ನು ಅಯ್ಯರ್ ತಂದರು. ಅದನ್ನು ನೆಹರೂ ಪರಿಶೀಲಿಸಿದ್ದರು. ನೆಹರೂ ಪಂಚವಾರ್ಷಿಕ ಯೋಜನೆಯನ್ನು ಜಾರಿಗೆ ತಂದಾಗ ಅಯ್ಯರ್ ಅವರನ್ನು ಅದರ ಸಮಗ್ರ ಸಾರ್ವಜನಿಕ ಕಾರ್ಯಕ್ರಮದ ಸಲಹೆಗಾರರನ್ನಾಗಿ ನೇಮಿಸಲಾಯಿತು.1978ರಲ್ಲಿ ಆಗಿನ ಜನತಾ ಪಕ್ಷದ ಸಂಸದರಾಗಿದ್ದ ಸುಬ್ರಮಣಿಯನ್ ಸ್ವಾಮಿ ಐ.ಎನ್.ಎ. ಹಣವನ್ನು ನೆಹರೂ ಲಪಟಾಯಿಸಿದ್ದಾರೆ ಎಂದು ನೇರವಾಗಿ ಆರೋಪಿಸಿದ್ದರು. ಆಗಿನ ಪ್ರಧಾನಿ ಮೊರಾರ್ಜಿ ದೇಸಾಯಿ ಅವರಿಗೆ ಪತ್ರವೊಂದನ್ನು ಬರೆದು, ನಿಧಿಯು ನಾಪತ್ತೆಯಾದದ್ದು ಹಾಗೂ ಭಾರತಕ್ಕೆ ಅದನ್ನು ಸೂಕ್ತ ರೀತಿಯಲ್ಲಿ ಹಸ್ತಾಂತರಿಸದೇ ಹೋದದ್ದರ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದರು. ಆನಂತರ ಸಂಸತ್ ಸದನದಲ್ಲಿ ದೇಸಾಯಿ ನಿಧಿಯ ಒಂದು ಭಾಗ ಭಾರತಕ್ಕೆ ಹಸ್ತಾಂತರವಾಗಿದೆ ಎಂದು ಹೇಳಿಕೆ ನೀಡಿದರು. ನೆಹರೂ ಅವರಿಗೆ ನಿಧಿ ತಲುಪಿತು ಎಂಬ ಸಂಗತಿಯನ್ನು ಡಾ. ಸ್ವಾಮಿ ಸ್ಪಷ್ಟಪಡಿಸಿದರು.ಯುದ್ಧ ಸ್ಮಾರಕ

ಐ.ಎನ್.ಎ. ಹುತಾತ್ಮರಿಗೂ ಸಲ್ಲಬೇಕಾದ ಗೌರವ ಸಿಗಲಿಲ್ಲ. 1945ರ ಜುಲೈ 8ರಂದು ಸಿಂಗಪುರದಲ್ಲಿ ಐ.ಎನ್.ಎ. ಹುತಾತ್ಮರ ಸ್ಮಾರಕಕ್ಕೆ ಅಡಿಗಲ್ಲು ಹಾಕಿದರು. ಐ.ಎನ್.ಎ. ಸದಸ್ಯರು ಹಾಗೂ ಜಪಾನ್‌ನ ಉನ್ನತ ಮಟ್ಟದ ಅಧಿಕಾರಿಗಳು ಆ ಸಮಾರಂಭದಲ್ಲಿ ಹಾಜರಿದ್ದರು. ಆಗ ಭಾರತದ ರಾಷ್ಟ್ರಗೀತೆಯನ್ನು ಹಾಡಲಾಯಿತಲ್ಲದೆ ರಾಷ್ಟ್ರಧ್ವಜಾರೋಹಣವನ್ನೂ ಮಾಡಲಾಗಿತ್ತು. ಏಕತೆ (ಇತ್ತೆಫಾಕ್), ನಂಬಿಕೆ (ಎತ್ಮದ್) ಹಾಗೂ ಬಲಿದಾನ (ಕುರ್ಬಾನಿ) ಎಂಬ ಬರಹಗಳಿದ್ದ ಮಾರ್ಬಲ್ ಕಲ್ಲನ್ನು ನೇತಾಜಿ ನೆಟ್ಟಿದ್ದರು. ಧ್ವಜವನ್ನು ಅರ್ಧ ಮಟ್ಟಕ್ಕೆ ಹಾರಿಸಲಾಯಿತು. ಎರಡು ನಿಮಿಷ ಮೌನಾಚರಣೆ ಮಾಡಿ, ಹುತಾತ್ಮರಾದವರ ನೆನಪಿನಲ್ಲಿ ವೃತ್ತಾಕಾರದ ಹೂಮಾಲೆಗಳನ್ನು ಇಡಲಾಯಿತು.1945ರ ಯುದ್ಧದ ನಂತರ ಮೌಂಟ್‌ಬ್ಯಾಟನ್ ಆ ಸ್ಮಾರಕವನ್ನು ಸ್ಫೋಟಕದಿಂದ ನಾಶಪಡಿಸಿದರು. ನೇತಾಜಿ ಹಾಗೂ ಐ.ಎನ್.ಎ. ಬಗ್ಗೆ ಅವರಿಗೆ ಅಂಥ ದ್ವೇಷ ಇತ್ತು. ಸಿಂಗಪುರ, ಜಪಾನ್, ಚೀನಾ ಹಾಗೂ ಮಲೇಷ್ಯಾದ ಜನರು ಬ್ರಿಟಿಷರ ಒತ್ತಡ ಹಾಗೂ ಶಿಕ್ಷೆಯನ್ನು ಮೀರಿಯೂ ಸ್ಮಾರಕದ ಉಳಿದ ಇಟ್ಟಿಗೆಗಳಿಗೇ ಹೂಮಾಲೆಗಳನ್ನು ಅರ್ಪಿಸತೊಡಗಿದರು. ಐ.ಎನ್.ಎ. ಕೀರ್ತಿ ಅಷ್ಟರ ಮಟ್ಟಿಗೆ ಇತ್ತು.ಕೊನೆಗೆ 1995ರಲ್ಲಿ ಸಿಂಗಪುರದ ರಾಷ್ಟೀಯ ಪರಂಪರೆ ಮಂಡಳಿ ಆ ಸ್ಥಳವನ್ನು ಐತಿಹಾಸಿಕ ಪ್ರಾಮುಖ್ಯದ ಜಾಗ ಎಂದು ಗುರುತಿಸಿತು. ಭಾರತೀಯರ ಹಣಕಾಸಿನ ನೆರವಿನಿಂದ ಹೊಸ ಸ್ಮಾರಕವನ್ನು ನಿರ್ಮಿಸಿತು. ಪ್ರಧಾನಿ ಮೋದಿಯವರು ಅದಕ್ಕೆ ಭೇಟಿ ನೀಡಿದರು. ಅದುವರೆಗೆ ನೆಹರೂ ಸೇರಿದಂತೆ ಭಾರತದ ಯಾವ ನಾಯಕ ಕೂಡ ಅಲ್ಲಿಗೆ ಭೇಟಿ ನೀಡಿಯೇ ಇಲ್ಲ.ತಮ್ಮ ಸರ್ವಸ್ವವನ್ನೆಲ್ಲ ಐ.ಎನ್.ಎ.ಗೆ ಧಾರೆ ಎರೆದ ಹಿರಿಯರನ್ನು ಭಾರತ ಸರ್ಕಾರ ನಿರ್ಲಕ್ಷಿಸಿತು. ಬರ್ಮನ್ನರ ಉಪಟಳ ಅನುಭವಿಸಿ, ನಿರಾಶ್ರಿತರಾಗಿ ಅವರೆಲ್ಲಾ ಭಾರತ ತಲುಪುವ ಸ್ಥಿತಿ ಬಂದದ್ದು ದುರಂತವೇ ಸರಿ. ದೇಶಕ್ಕೆ ಸ್ವಾತಂತ್ರ್ಯ ದಕ್ಕಿಸಿಕೊಡಲು ಹೋರಾಡಿದ ಈ ನಿಜವಾದ ನಾಯಕರು ತುತ್ತೂಟ, ಸಣ್ಣ ನೆಲೆಗೂ ಪರದಾಡುತ್ತಿದ್ದಾರೆ. ವೈದ್ಯಕೀಯ ಸೌಲಭ್ಯದಿಂದಲೂ ವಂಚಿತರಾಗಿದ್ದಾರೆ. ಅವರನ್ನೆಲ್ಲಾ ದೇಶ ಮರೆತುಬಿಟ್ಟಿದೆ. ಸ್ವಾತಂತ್ರ್ಯಾ ನಂತರ ಅವರ‍್ಯಾರಿಗೂ ಭಾರತೀಯ ಸೇನೆಯಲ್ಲಿ ಕೆಲಸ ನೀಡಲಿಲ್ಲ. ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಗೆ ಅವರ ಹೆಸರನ್ನೂ ಸೇರಿಸಿಕೊಳ್ಳಲಿಲ್ಲ. ಇದರಿಂದ ಅವರಿಗೆ ಸಿಗಬಹುದಾಗಿದ್ದ ಪಿಂಚಣಿಯೂ ದೊರೆಯದಂತಾಯಿತು.ಮೊದಲ ವಿಶ್ವಯುದ್ಧದಲ್ಲಿ ಹುತಾತ್ಮರಾದ 82 ಸಾವಿರ ಮಂದಿಯ ಹೆಸರುಗಳನ್ನು ದೆಹಲಿಯ ಇಂಡಿಯಾ ಗೇಟ್ ಮೇಲೆ ಬರೆಯಲಾಗಿದೆ. ಅವರೆಲ್ಲರೂ ಬ್ರಿಟಿಷರಿಗಾಗಿ ಮೃತಪಟ್ಟವರು. ಐ.ಎನ್.ಎ. ಪರವಾಗಿ ಹೋರಾಡಿದ ಒಬ್ಬ ಭಾರತೀಯರ ಹೆಸರು ಕೂಡ ಅಲ್ಲಿ ಇಲ್ಲ. ವಿಯೆಟ್ನಾಂ ಯುದ್ಧದಲ್ಲಿ 58 ಸಾವಿರ ಮಂದಿ ಅಮೆರಿಕನ್ನರು ಪ್ರಾಣ ತೆತ್ತರು. ಅಮೆರಿಕದ ವಾಷಿಂಗ್ಟನ್‌ನ ವಿಯೆಟ್ನಾಂ ಯುದ್ಧ ಸ್ಮಾರಕದಲ್ಲಿ ಆಗ ಮೃತಪಟ್ಟ ಪ್ರತಿಯೊಬ್ಬರ ಹೆಸರನ್ನು ಕೆತ್ತಲಾಗಿದೆ. ಆ ಸ್ಮಾರಕಕ್ಕೆ ಬಳಸಿದ ಗ್ರಾನೈಟನ್ನು ಬೆಂಗಳೂರಿನಿಂದ ತರಿಸಿಕೊಂಡಿದ್ದರು. ಐ.ಎನ್.ಎ. ಯೋಧರ ಹೆಸರನ್ನು ಕೆತ್ತಲು ಎಲ್ಲಿಂದ ಕಲ್ಲನ್ನು ತರಬೇಕು? ಅವರಿಗೆ ಗೌರವ ಸೂಚಿಸುವುದಾದರೂ ಎಂದು?ಮಣಿಪುರದ ಮೊಯಿರಂಗ್‌ನಲ್ಲಿ ಒಂದೇ ಒಂದು ನಿರ್ಲಕ್ಷಿತ ಸ್ಮಾರಕ ಐ.ಎನ್.ಎ. ಹೆಸರಿನಲ್ಲಿದೆ. ‘ನಾಗಾಲ್ಯಾಂಡ್ ಹಾಗೂ ಮಣಿಪುರದಲ್ಲಿ ಸಾವಿರಾರು ಐ.ಎನ್.ಎ. ಯೋಧರ ಸಮಾಧಿಗಳಿದ್ದವು. ಆ ಸಮಾಧಿಗಳ ಕಲ್ಲುಗಳನ್ನು ತೆಗೆಸಿ ‘ಅನಾಮಧೇಯ ಯೋಧ’ ಎಂದು ಬರೆಸಿದ ಕಲ್ಲುಗಳನ್ನು ಹಾಕಲಾಯಿತು’ ಎಂದು ಪ್ರಿಯದರ್ಶಿ ಮುಖರ್ಜಿ ಹೇಳಿದ್ದಾರೆ.ನೇತಾಜಿ ಪ್ರಭಾವ

ಭಾರತ ಹಾಗೂ ವಿಶ್ವದ ಇತಿಹಾಸದಲ್ಲಿ ನೇತಾಜಿ ಅವರದ್ದು ಅಚ್ಚಳಿಯದ ನೆನಪು. ವಿಶ್ವದ ನಾಯಕರು ಅವರನ್ನು ಮೆಚ್ಚಿಕೊಂಡಿದ್ದಾರೆ. ಅವರಿಗೆ ಪರ್ಯಾಯವೇ ಇಲ್ಲ. ವಿವಿಧ ಸಿದ್ಧಾಂತಗಳ, ಭಿನ್ನ ಚಿಂತನೆಯ ಹಲವು ನಾಯಕರಿಗೆ ಅವರು ಪ್ರೇರಣೆಯಾಗಿದ್ದಾರೆ. ಗಾಂಧಿ, ಡಿ ವಲೆರಾ, ಅಟ್ಲೀ, ಮುಸಲೋನಿ, ಹಿಟ್ಲರ್, ತೊಜೊ, ಸ್ಟಾಲಿನ್, ಮಾವೊ, ಹೊ ಚಿ ಮಿನ್ ಹೆಸರಿಸಬಹುದಾದ ಅಂಥ ಕೆಲವು ನಾಯಕರು.ಪ್ರವಾದಿಯ ಮಾತಿನಷ್ಟು ನಂಬಿಕೆ, ದಿಟ್ಟತನದ ಸಂಕಲ್ಪ ನೇತಾಜಿ ಅವರದ್ದಾಗಿತ್ತು. ಅವರ ದೇಶಭಕ್ತಿಯ ಬೆಳಕನ್ನು ಐ.ಎನ್.ಎ.ಯ ಪ್ರತಿ ಯೋಧನೂ ಕಂಡಿದ್ದಾನೆ. ಕೆಂಪುಕೋಟೆಯಲ್ಲಿ ವಿಚಾರಣೆ ನಡೆದಾಗ, ಅಲ್ಲಿಗೆ ಬಂದ ಜಪಾನೀಯರು ನೇತಾಜಿ ಹೆಸರು ಪ್ರಸ್ತಾಪವಾದಾಗಲೆಲ್ಲಾ ಎದ್ದು ನಿಂತು ಗೌರವ ಸೂಚಿಸುತ್ತಿದ್ದರು. ಇದು ಅವರ ಹೆಸರಿಗೆ ಇದ್ದ ಘನತೆಗೆ ಸಾಕ್ಷಿ.ಅಂತರರಾಷ್ಟ್ರೀಯ ಸಂಬಂಧಗಳು, ಸೇನಾ ತಂತ್ರ, ಕೈಗಾರೀಕರಣ ಇವೆಲ್ಲದರಲ್ಲಿ ನೇತಾಜಿ ಅವರ ವಿಚಾರಗಳಲ್ಲಿ ಇದ್ದ ದೂರದೃಷ್ಟಿ ಗಮನಾರ್ಹ. ಭಾರತದ ಭವಿಷ್ಯ ಹೀಗೆ ಇರಬೇಕು ಎಂದು ಅವರು ಒಂದು ನಕಾಶೆಯನ್ನೇ ಸಿದ್ಧಪಡಿಸಿದ್ದರು. ‘ಕೈಗಾರಿಕಾ ಕ್ಷೇತ್ರದಲ್ಲಿ ಭಾರತವು ಪಾಶ್ಚಿಮಾತ್ಯದ ದಾರಿಯನ್ನು ಹಿಡಿಯಬೇಕು. ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಬೇರುಗಳನ್ನು ಉಳಿಸಿಕೊಂಡು ಆಧುನಿಕರಾಗಬೇಕು. ವಿಶ್ವದ ಎಲ್ಲೆಡೆ ಏನೇನಾಗುತ್ತಿದೆ ಎಂಬ ಪ್ರಜ್ಞೆ ಸದಾ ಇರಬೇಕು. ತೆರೆದ ಮನಸ್ಸು ನಮ್ಮದಾಗಿರಬೇಕು. ನಮ್ಮ ಇತಿಹಾಸ, ಸಂಸ್ಕೃತಿಯೇ ಬನಿಯಾಗಬೇಕು’ ಎಂದು ನೇತಾಜಿ ಹೇಳಿದ್ದರು. ವಿರೋಧಿಗಳಿಂದ ತುಂಬಿದ ವಿಭಜಿತ ಭಾರತ ಅವರಿಗೆ ಬೇಕಿರಲಿಲ್ಲ. ಏಷ್ಯಾದ ಏಕತೆ ಹಾಗೂ ಅಭಿವೃದ್ಧಿಯ ಕನಸನ್ನು ಅವರು ಕಂಡಿದ್ದರು.ಮುನಿಸಿಪಲ್ ಆಡಳಿತದ ನೀಲಿ ನಕಾಶೆ ಕೂಡ ನೇತಾಜಿ ತಲೆಯಲ್ಲಿ ಇತ್ತು. ‘ಮುನಿಸಿಪಾಲಿಟಿಗಳು ಸ್ವತಂತ್ರವಾಗಿರಬೇಕು’ ಎಂದು ಅವರು ಹೇಳಿದ್ದರು. ಮಹಿಳಾ ಸಮಾನತೆ ಹಾಗೂ ಸ್ಥಾನಮಾನ ಸುಧಾರಣೆಯನ್ನೂ ಅವರು ನಂಬಿದ್ದರು. ಐ.ಎನ್.ಎ.ಯ ಝಾನ್ಸಿ ರೆಜಿಮೆಂಟ್ ಇದಕ್ಕೆ ಉತ್ತಮ ಉದಾಹರಣೆ. ದೇಶವನ್ನು ಒಡೆಯಲು ಬ್ರಿಟಿಷರು ಬಳಸಿದ್ದ ಜಾತಿ, ಧರ್ಮದ ಗೋಡೆಗಳನ್ನು ನೇತಾಜಿ ಕೆಡವಿದ್ದರು. ಭಿನ್ನ ಭಾಷೆ, ಧರ್ಮ, ಜಾತಿ, ವರ್ಗಕ್ಕೆ ಸೇರಿದ 38 ಕೋಟಿ ಭಾರತೀಯರನ್ನು ಸೇರಿಸಬಲ್ಲ ಸಾಮರ್ಥ್ಯ ಅವರದ್ದಾಗಿತ್ತು. ಭಾರತದ ಬಗ್ಗೆ ನೇತಾಜಿ ಅವರ ದೂರದೃಷ್ಟಿಗಳನ್ನು ಪಟ್ಟಿ ಮಾಡುತ್ತಾ ಹೋದರೆ ಅದೇ ಒಂದು ಪುಸ್ತಕವಾದೀತು. ಸ್ವತಂತ್ರ ಭಾರತಕ್ಕೆ ಅವರ ನಾಯಕತ್ವ ಸಿಗದೇಹೋದದ್ದು ದುರದೃಷ್ಟಕರ.‘ನೇತಾಜಿ ಅವರ ಶ್ರೇಷ್ಠ ಹಾಗೂ ಮರೆಯಲಾಗದ ಕೆಲಸವೆಂದರೆ ಎಲ್ಲ ವರ್ಗ ಹಾಗೂ ಜಾತಿಗಳನ್ನು ಮೀರಿದ್ದು. ಅವರು ನಿಜಕ್ಕೂ ಭಾರತೀಯರಾಗಿಯೇ ಕೊನೆವರೆಗೂ ಬದುಕಿದರು’ ಎಂದು ಗಾಂಧೀಜಿ ಆಡಿದ್ದ ಮಾತನ್ನು ನಾವು ನೆನಪಿಸಿಕೊಳ್ಳಬೇಕು. ನೇತಾಜಿ ಹಾಗೂ ಅವರ ಅನುಯಾಯಿಗಳು ಮಾಡಿದ ಹೋರಾಟವನ್ನು ಮರೆತಿರುವ ದೇಶ ತಾನು ಮಾಡಿದ ತಪ್ಪನ್ನು ತಿದ್ದಿಕೊಳ್ಳುವ ಅವಕಾಶವಂತೂ ಇದ್ದೇಇದೆ. ಅದು ಆದರೆ ನೇತಾಜಿ ಸದಾ ಜೀವಂತವಾಗುತ್ತಾರೆ!

(ಮುಗಿಯಿತು)

ಚೂಡಿ ಶಿವರಾಂ ಅವರ ಇ-ಮೇಲ್: 

choodieshivaram@gmail.com

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.