ಶನಿವಾರ, ಜನವರಿ 18, 2020
20 °C

ಅಕ್ರಮ ಮರಳುಗಾರಿಕೆ ನಿಯಂತ್ರಣಕ್ಕೆ ಅರೆಸೇನಾಪಡೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ‘ಜಿಲ್ಲೆಯಲ್ಲಿ ಅಕ್ರಮ­ವಾಗಿ ನಡೆಯುತ್ತಿರುವ ಮರಳುಗಾರಿಕೆ ನಿಯಂತ್ರಣಕ್ಕೆ ಮುಂದಾಗುವ ಅಧಿಕಾರಿ­ಗಳ ಮೇಲೆ ಹಾಗೂ ವರದಿ ಮಾಡಲು ತೆರಳುವ ಸುದ್ದಿ ಮಾಧ್ಯಮ­ದವರ ಮೈ ಮೇಲೆ ವಾಹನವನ್ನೇ ಚಲಾಯಿಸುವ ದುಷ್ಕೃತ್ಯಕ್ಕೆ ಮುಂದಾಗುವ ಶಕ್ತಿಗಳನ್ನು ಮಟ್ಟಹಾಕಲು ಅಗತ್ಯಬಿದ್ದರೆ ಅರೆಸೇನಾಪಡೆ ನಿಯೋಜಿಸಲು ಹಿಂದೇಟು ಹಾಕುವುದಿಲ್ಲ’

ಹೀಗೆಂದು ಹೇಳಿದ­ವರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಆರ್‌. ಪಾಟೀಲ.ನಗರದ ಜಿಲ್ಲಾ ಪಂಚಾಯ್ತಿ ಸಭಾಂಗ­ಣದಲ್ಲಿ ಬುಧವಾರ ನಡೆದ ಚಾಲುಕ್ಯ ಉತ್ಸವ ಪೂರ್ವಸಿದ್ಧತೆ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ, ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ತಡೆಯಲು ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಏಕೆ ಎಂಬ ಮಾಧ್ಯಮದವರ ಪ್ರಶ್ನೆಗೆ ತಮ್ಮ ಎಂದಿನ ಬದ್ಧತೆ ಪ್ರದರ್ಶಿಸುವ ಭರದಲ್ಲಿ ಸಚಿವರು ಅರೆಸೇನಾಪಡೆ ತರಿಸುವು­ದಾಗಿ ಹೇಳುವ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿಸಿದರು.ಅಕ್ರಮ ಮರಳುಗಾರಿಕೆಯಲ್ಲಿ ಪ್ರಭಾವಿ ರಾಜಕಾರಣಿಗಳ ಕೈವಾಡ ಇರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ‘ದೊಡ್ಡ ದೊಡ್ಡ ಮಾಫಿಯಾಗಳ ಹಿಂದೆ ದೊಡ್ಡ ದೊಡ್ಡ ರಾಜಕಾರಣಿಗಳ ಕೈವಾಡವಿರು­ವುದು ಸಹಜ. ಆದರೆ, ಜಿಲ್ಲೆಯಲ್ಲಿ ಅದೆಷ್ಟೇ ದೊಡ್ಡ ರಾಜಕಾರಣಿಯಿರಲಿ, ಅಧಿಕಾರಿ ಇರಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸುತ್ತೇನೆ ಎಂದರು.ಈ ಸಂದರ್ಭದಲ್ಲಿ ಶಾಸಕ ಎಚ್‌.ವೈ. ಮೇಟಿ, ಗೋವಿಂದ ಕಾರಜೋಳ, ಬಿ.ಬಿ. ಚಿಮ್ಮನಕಟ್ಟಿ, ಸಚಿವೆ ಉಮಾಶ್ರೀ, ಜಿಲ್ಲಾಧಿಕಾರಿ ಮನೋಜ್‌ ಜೈನ್‌, ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ಇದ್ದರು.

ಪ್ರತಿಕ್ರಿಯಿಸಿ (+)