ಭಾನುವಾರ, ಏಪ್ರಿಲ್ 11, 2021
21 °C

ಅಗಲಿಕೆಯ ಬೆಳ್ಳಿಹಬ್ಬದಲ್ಲಿ ಒಂದಾದ ದಂಪತಿ

ಸುಚೇತನಾ ನಾಯ್ಕ /ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಯುವ ವಯಸ್ಸಿನಲ್ಲಿ ಮುನಿಸಿಕೊಂಡು ಬೇರ್ಪಟ್ಟ ದಂಪತಿಯನ್ನು, ಇಳಿ ವಯಸ್ಸಿನಲ್ಲಿ ಒಂದು ಮಾಡಿದ ಅಪರೂಪದ ಆದೇಶವೊಂದು ಹೈಕೋರ್ಟ್‌ನಿಂದ ಹೊರಬಿದ್ದಿದೆ.`ದಂಪತಿ ಪ್ರತ್ಯೇಕಗೊಂಡು ಎಷ್ಟು           ವರ್ಷಗಳಾದರೇನು, ಒಟ್ಟಿಗೆ ಬಾಳುವ ಇಚ್ಛೆ ಒಬ್ಬರಲ್ಲಿ ಇದ್ದರೆ, ಇನ್ನೊಬ್ಬರ    `ಅಹಂ~ ಆಗಲೀ, ಪ್ರತಿಷ್ಠೆಯಾಗಲೀ     ಅದನ್ನು ತಡೆಯಲಾಗದು~ ಎಂದು ಹೈಕೋರ್ಟ್ ಹೇಳಿದೆ. ಜೀವನದ ಸಂಧ್ಯಾಕಾಲವನ್ನಾದರೂ ಒಟ್ಟಿಗೆ ಕಳೆಯಿರಿ ಎಂದು 25 ವರ್ಷ ಪ್ರತ್ಯೇಕವಾಗಿ ಬಾಳಿದ ದಂಪತಿಗೆ ನ್ಯಾಯಾಲಯ ಹೇಳಿದೆ.ಒಂದು ವರ್ಷ ಸಂಸಾರ ಮಾಡಿ, ಎರಡೂವರೆ ದಶಕಗಳ ಕಾಲ ಪ್ರತ್ಯೇಕವಿದ್ದ ದಂಪತಿಯ ಕಥೆ ಇದು. ಮನೆಬಿಟ್ಟು ಹೋಗಿದ್ದ ಪತ್ನಿ, ಪತಿ ಕರೆದಾಗ ಬಂದಿರಲಿಲ್ಲ. ತಾವು ಬರುವುದಾಗಿ ಪತ್ನಿ ನಂತರದಲ್ಲಿ ಹೇಳಿದರೂ ಪತಿ ಅದಕ್ಕೆ ಒಪ್ಪಲಿಲ್ಲ. ಬದಲಿಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಆದರೆ, ಈಗ ಹೈಕೋರ್ಟ್‌ನಲ್ಲಿ ಸೋತರು. ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎನ್.ಕೆ.ಪಾಟೀಲ್ ನೇತೃತ್ವದ ವಿಭಾಗೀಯ ಪೀಠ ವಜಾ ಮಾಡಿದೆ.        `ಅಹಂ ಬಿಟ್ಟು ಪತ್ನಿಯನ್ನು ಕರೆತಾ~ ಎಂದು ಪತಿಗೆ ಪೀಠ ನಿರ್ದೇಶಿಸಿದೆ.ಘಟನೆಯ ವಿವರ: ಬಳ್ಳಾರಿಯ್ಲ್ಲಲಿ ಸರ್ಕಾರಿ ನೌಕರಿಯಲ್ಲಿರುವ ನರಹರಿ ಹಾಗೂ ಸಾಗರದ ಗೌರಿ (ಹೆಸರು ಬದಲಾಯಿಸಲಾಗಿದೆ) ಅವರ ನಡುವಿನ ದಾಂಪತ್ಯದ ವಿರಸ ಪ್ರಕರಣ ಇದು.1986ರಲ್ಲಿ ಇವರ ವಿವಾಹ ನಡೆದಿದೆ. ಆಗ ಪತಿಗೆ 31 ಹಾಗೂ ಪತ್ನಿಗೆ 29 ವರ್ಷ ವಯಸ್ಸು. ಮದುವೆಯಾದ ಕೆಲವೇ ತಿಂಗಳುಗಳ ದಾಂಪತ್ಯ ಜೀವನ ಇವರದ್ದು. ಚಿಕ್ಕಪುಟ್ಟ ಕಾರಣಗಳಿಗೆ ಇಬ್ಬರಲ್ಲಿಯೂ ವೈಮನಸ್ಸು ಉಂಟಾಗಿ ಅದು ದೊಡ್ಡ ಸ್ವರೂಪ ಪಡೆದು 1987ರಲ್ಲಿ ಪತಿಯ ಮನೆ ಬಿಟ್ಟು ಗೌರಿ ತವರು ಸೇರಿದರು. ಹಲವು ತಿಂಗಳಾದರೂ ಗೌರಿ ಮರಳಿ ಪತಿಯ ಮನೆಗೆ ಬರಲಿಲ್ಲ. ವಾಪಸು ಬರುವಂತೆ ಪತಿ ಹೇಳಿದರೂ ಅದಕ್ಕೆ ಗೌರಿ ಒಪ್ಪಲಿಲ್ಲ.ವಾಪಸು ಬರುವಂತೆ ಪತ್ನಿಗೆ ಆದೇಶಿಸುವಂತೆ ಕೋರಿ ನರಹರಿ ಅದೇ ಸಾಲಿನಲ್ಲಿ ಕೌಟುಂಬಿಕ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಪ್ರಕರಣ ಇತ್ಯರ್ಥಕ್ಕೆ ಬಾಕಿ ಇರುವ ಮಧ್ಯೆಯೇ ಪತಿ ಹಾಗೂ ಅವರ ಪೋಷಕರ ವಿರುದ್ಧ ಗೌರಿ ಕೌಟುಂಬಿಕ ದೌರ್ಜನ್ಯ ಕಾಯ್ದೆ ಅಡಿ ದೂರು ಕೂಡ ದಾಖಲು ಮಾಡಿದರು.ನರಹರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಗೌರಿ ಅವರಿಗೆ    ಕೋರ್ಟ್ ನೋಟಿಸ್ ಜಾರಿ ಮಾಡಿತು. ಅವರು ನ್ಯಾಯಾಲಯದಲ್ಲಿ ಹಾಜರೂ ಆದರು. ಆದರೆ, ಇಬ್ಬರ ನಡುವೆ ಕೋರ್ಟ್‌ನಿಂದ ರಾಜಿಸಂಧಾನ ನಡೆದರೂ ಫಲ ಕಾಣಲಿಲ್ಲ. 

 

ದಂಪತಿ ನಡುವೆ ಒಮ್ಮತ ಬಾರದ ಕಾರಣದಿಂದ ನರಹರಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿತು.

ಪತ್ನಿಗೆ ತಿಂಗಳಿಗೆ ರೂ 750   ಜೀವನಾಂಶ ನೀಡುವಂತೆ ಕೋರ್ಟ್ ಆದೇಶಿಸಿತು.ಪತಿಯ ಮನೆಯವರ ವಿರುದ್ಧ ಗೌರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಎರಡೂ ಕಡೆಗಳವರನ್ನು ಕರೆಸಿದ ನ್ಯಾಯಾಲಯ ಇಬ್ಬರನ್ನೂ ಸಮಾಧಾನಗೊಳಿಸಿ, ಅರ್ಜಿಯನ್ನು ಇತ್ಯರ್ಥಗೊಳಿಸಿತು. ಈ ಎಲ್ಲ ಪ್ರಕ್ರಿಯೆ  ನ್ಯಾಯಾಲಯದಲ್ಲಿ ಮುಗಿದದ್ದು 1993ರಲ್ಲಿ.ಬದಲಾದ ಪತ್ನಿ, ಬೇಡವೆಂದ ಪತಿ: ಇವೆಲ್ಲ ಗಲಾಟೆ ಮುಗಿದ ಮೇಲೆ ಗೌರಿ ಅವರಿಗೆ ಪತಿಯ ಬಳಿ ಹೋಗುವ ಮನಸಾಯಿತು. ಇದಕ್ಕಾಗಿ ಅವರು ಊರಿನ ಪಂಚಾಯಿತಿ ಮೊರೆ ಹೋದರು. ಎರಡೂ ಕುಟುಂಬದವರನ್ನು ಕರೆಯಿಸಿ ಪಂಚಾಯಿತಿ ಸದಸ್ಯರು ಮಾತುಕತೆ ನಡೆಸಿದರು.ತಾವು ಕರೆದಾಗ ಬಾರದ ಪತ್ನಿ ತಮಗೆ ಬೇಡವೇ ಬೇಡ ಎಂದು ನರಹರಿ ಹಟ ಹಿಡಿದರು. ತಮ್ಮನ್ನು ವಾಪಸು ಕರೆಸಿಕೊಳ್ಳುವಂತೆ ಗೌರಿ ಗೋಗರೆದರೂ ಅದಕ್ಕೆ ಒಪ್ಪಲಿಲ್ಲ. ಪತ್ನಿಯಿಂದ ಕಾನೂನುಬದ್ಧವಾಗಿ ಬೇರ್ಪಡುವ ಇಚ್ಛೆ ಮಾಡಿದ ಅವರು ವಿಚ್ಛೇದನ ಕೋರಿ 2004ರಲ್ಲಿ ಕೌಟುಂಬಿಕ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು.

ತಮಗೆ ವಿಚ್ಛೇದನ ಬೇಡವೆಂದು ಗೌರಿ ಕೋರ್ಟ್‌ನಲ್ಲಿ ಪಟ್ಟುಹಿಡಿದರು. ಆದುದರಿಂದ ನರಹರಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾ ಮಾಡಿತು.ಆದರೆ, ಪತ್ನಿಯನ್ನು ವಾಪಸು ಕರೆಸಿಕೊಳ್ಳಲು ಇಚ್ಛಿಸದ ನರಹರಿ, ಕೌಟುಂಬಿಕ ಕೋರ್ಟ್ ಅರ್ಜಿಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದರು. `ಹಲವು ವರ್ಷಗಳಿಂದ ಪತಿಯನ್ನು ಸೇರಲು ಪತ್ನಿ ಇಚ್ಛಿಸುತ್ತಿದ್ದರೂ ಇದಕ್ಕೆ ನರಹರಿಯವರ ಅಹಂ ತಡೆ ಒಡ್ಡಿದೆ. ದಾಂಪತ್ಯದಲ್ಲಿ ಈ ರೀತಿಯ ಪ್ರತಿಷ್ಠೆ ಸಲ್ಲದು~ ಎಂದು ಪೀಠ ಆದೇಶದಲ್ಲಿ ಉಲ್ಲೇಖಿಸಿದೆ. ಈಗ ಗೌರಿ ಅವರಿಗೆ 55  ಹಾಗೂ ನರಹರಿಯವರಿಗೆ 57 ವರ್ಷ ವಯಸ್ಸು. `ಈ ವಯಸ್ಸಿನಲ್ಲಿಯೂ ಕಾದಾಟ ಸಲ್ಲದು. ನಿಮ್ಮನ್ನು ಸೇರಲು ಇಷ್ಟು ಸುದೀರ್ಘ ಅವಧಿಯ ವರೆಗೆ ಗೌರಿ ಅವರು ಹೋರಾಟ ನಡೆಸಿದ್ದಾರೆ. ಈಗಲಾದರೂ ಅಹಂ ಬಿಟ್ಟು ಅವರನ್ನು ಕರೆತನ್ನಿ~ ಎಂದು ನರಹರಿಯವರಿಗೆ ನ್ಯಾಯಮೂರ್ತಿಗಳು ಬುದ್ಧಿಮಾತು ಹೇಳಿದರು.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.