ಶನಿವಾರ, ಜೂಲೈ 4, 2020
22 °C

ಅಡಿಕೆ ಬೆಳೆಗಾರರಿಂದ ರೈಲುತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಡಿಕೆ ಬೆಳೆಗಾರರಿಂದ ರೈಲುತಡೆ

ದಾವಣಗೆರೆ: ಪ್ಲಾಸ್ಟಿಕ್ ಸ್ಯಾಷೆಯಲ್ಲಿ ಗುಟ್ಕಾ ಮಾರಾಟ ನಿಷೇಧಿಸಿರುವ ಬಗ್ಗೆ ಸುಪ್ರೀಂ ಕೋರ್ಟ್ ಹೊರಡಿಸಿರುವ ಆದೇಶದ ವಿರುದ್ಧ ಸೋಮವಾರ ಜಿಲ್ಲಾ ಅಡಿಕೆ ಬೆಳೆಗಾರರ ಹಿತರಕ್ಷಣಾ ಸಮಿತಿ ಹಾಗೂ ರೈತಪರ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಾಗೂ ರೈಲುತಡೆ ನಡೆಯಿತು.ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಬಸ್, ಟ್ರ್ಯಾಕ್ಟರ್ ಹಾಗೂ ಇತರ ವಾಹನಗಳಲ್ಲಿ ಆಗಮಿಸಿದ ಅಡಿಕೆ ಬೆಳೆಗಾರರು ಜಯದೇವ ವೃತ್ತದಲ್ಲಿ ಸೇರಿ ಮೆರವಣಿಗೆ ಹಾಗೂ ಅಣಕು ಶವಯಾತ್ರೆ ನಡೆಸಿದರಲ್ಲದೆ ತೀರ್ಪು ಮರುಪರಿಶೀಲಿಸುವಂತೆ ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿವಿಧ ರೈತಮುಖಂಡರು, ಅಡಿಕೆ ವರ್ತಕರು ಮಾತನಾಡಿ. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕೇಂದ್ರ ಸರ್ಕಾರವು ಗುಟ್ಕಾ ಮತ್ತು ಪಾನ್ ಮಸಾಲಾಗಳನ್ನು ಪ್ಲಾಸ್ಟಿಕ್ ಸ್ಯಾಷೆಯಲ್ಲಿ ಮಾರಾಟ ಮಾಡುವುದನ್ನು ನಿಷೇಧಿಸಿದೆ. ಇದರಿಂದ ಅಡಿಕೆ ಬೆಳೆಗಾರರ ಮೇಲೆ ನೇರ ಪರಿಣಾಮ ಉಂಟಾಗುತ್ತದೆ. ಬೆಳೆಗಾರರು ಸಂಕಷ್ಟಕ್ಕೊಳಗಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.ಜಯದೇವ ವೃತ್ತದಿಂದ ಮೆರವಣಿಗೆಯಲ್ಲಿ ಸಾಗಿದ ರೈತರು ಹುಬ್ಬಳ್ಳಿ-ಬೆಂಗಳೂರು ಪ್ಯಾಸೆಂಜರ್ ರೈಲನ್ನು ಸುಮಾರು ಅರ್ಧಗಂಟೆ ಕಾಲ ತಡೆದರು. ರೈಲು ಎಂಜಿನ್ ಮೇಲೆ ಹತ್ತಿ ಘೋಷಣೆ ಕೂಗಿದರು. ಪಾಂಡೋಮಟ್ಟಿಯ ಗುರುಬಸವ ಸ್ವಾಮೀಜಿ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಮಾಜಿ ಶಾಸಕರಾದ ವಡ್ನಾಳ್ ರಾಜಣ್ಣ, ಡಿ.ಜಿ. ಶಾಂತನಗೌಡ, ಆವರಗೆರೆ ರುದ್ರಮುನಿ ಇತರರು ಭಾಗವಹಿಸಿದ್ದರು.ಶಿವಮೊಗ್ಗ ವರದಿ: ಇದೇ ವಿಷಯಕ್ಕೆ ಸಂಬಂಧಿಸಿ ಅಡಿಕೆ ಬೆಳೆಗಾರರ ಒಕ್ಕೂಟ ಜಿಲ್ಲಾ ಘಟಕದ ನೇತೃತ್ವದಲ್ಲಿ ರೈತರು ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.ಸೈನ್ಸ್ ಮೈದಾನದಿಂದ ಟ್ರ್ಯಾಕ್ಟರ್ ಮೂಲಕ ಹೊರಟ ಮೆರವಣಿಗೆ ನಗರದ ಅಮೀರ್ ಅಹಮದ್ ವೃತ್ತ, ಗೋಪಿ ವೃತ್ತ, ಮಹಾವೀರ ಸರ್ಕಲ್ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮಾಪನಗೊಂಡಿತು. ನಂತರ ವಕ್ಫ್ ಮಂಡಳಿ ಆವರಣದಲ್ಲಿ ಸಭೆ ನಡೆಸಿದ ಪ್ರತಿಭಟನಾಕಾರರು, ಗುಟ್ಕಾ ಪ್ಲಾಸ್ಟಿಕ್ ಸ್ಯಾಷೆ ನಿಷೇಧವನ್ನು ತೀವ್ರವಾಗಿ ಖಂಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.