ಭಾನುವಾರ, ಜೂನ್ 20, 2021
21 °C

ಅಪಹರಣ ಪ್ರಕರಣ: ಇಂದು ಎರಡನೇ ಸುತ್ತಿನ ಮಾತುಕತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭುವನೇಶ್ವರ (ಪಿಟಿಐ): ಇಬ್ಬರು ಇಟಲಿ ಪ್ರಜೆಗಳ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾವೊವಾದಿಗಳು ಸೂಚಿಸಿರುವ ಮಧ್ಯವರ್ತಿಗಳು ಹಾಗೂ ಸರ್ಕಾರದ ನಡುವೆ ಗುರುವಾರ ಸಂಜೆ ಮಾತುಕತೆ ಆರಂಭವಾಯಿತು.ನಕ್ಸಲರ ವಶದಲ್ಲಿರುವ ಇಬ್ಬರು ಇಟಲಿ ಪ್ರಜೆಗಳು ಆರೋಗ್ಯದಿಂದ ಇದ್ದಾರೆ ಎಂದು ತಿಳಿಸಿರುವ ಮಧ್ಯವರ್ತಿಗಳು, ಎಲ್ಲಾ 13 ಷರತ್ತುಗಳನ್ನು ಚರ್ಚೆಯ ಸಂದರ್ಭದಲ್ಲಿ ಪ್ರಸ್ತಾಪ ಮಾಡಿದ್ದಾಗಿ ಹೇಳಿದರು.ನಿವೃತ್ತ ಅಧಿಕಾರಿ ಹಾಗೂ ಸಾಮಾಜಿಕ ಕಾರ್ಯಕರ್ತ ಬಿ.ಡಿ.ರ್ಮಾ ಅವರು ಭುವನೇಶ್ವರಕ್ಕೆ ಆಗಮಿಸಿದ ತಕ್ಷಣ ಮಾತುಕತೆ ನಡೆದಿದೆ. ಶರ್ಮಾ ಜತೆಯಲ್ಲಿ ನಾಗರಿಕರ ಹಕ್ಕುಗಳ ಕಾರ್ಯಕರ್ತ ದಂಡಪಾಣಿ ಮೊಹಂತಿ ನಕ್ಸಲರ ಪರವಾಗಿ ಚರ್ಚೆ ನಡೆಸಿದರು.ಇಟಲಿ ಪ್ರಜೆಗಳನ್ನು ಮಾರ್ಚ್ 14ರಂದು ನಕ್ಸಲರು ಅಪಹರಿಸಿದ್ದರು ಎನ್ನುವ ವಿಷಯ ಮಾತುಕತೆ ವೇಳೆ ಬಹಿರಂಗವಾಯಿತು.ಮುಂದಿನ ಸುತ್ತಿನ ಮಾತುಕತೆ ಶುಕ್ರವಾರ ಮುಂದುವರೆಯಲಿದೆ ಎಂದು ದಂಡಪಾಣಿ ಹೇಳಿದರು. ನಕ್ಸಲರ 13 ಬೇಡಿಕೆಗಳ ಪೈಕಿ ಮಾವೊವಾದಿ ಮುಖಂಡ ಸವ್ಯಸಾಚಿ ಪಾಂಡ ಅವರ ಪತ್ನಿ ಶುಭಶ್ರೀ ದಾಸ್ ಹಾಗೂ ಜ್ಞಾನನಾಥ್ ಪಾತ್ರ ಅವರ ಬಿಡುಗಡೆಯೂ ಸೇರಿದ್ದು, ಎರಡು ಪ್ರಮುಖ ಬೇಡಿಕೆಗಳನ್ನು ಈಡೇರಿಸಿದರೆ ಅಪಹೃತರಲ್ಲಿ ಒಬ್ಬರನ್ನು ಬಿಡುಗಡೆ ಮಾಡುವುದಾಗಿ ನಕ್ಸಲರು ತಿಳಿಸಿದ್ದಾರೆ. ಈ ಅಂಶವನ್ನು ಮಾತುಕತೆ ಸಂದರ್ಭದಲ್ಲಿ ಮನವರಿಕೆ ಮಾಡಿದ್ದಾಗಿಯೂ ದಂಡಪಾಣಿ ತಿಳಿಸಿದರು.ಸಂವಹನ ಕೊರತೆ (ನವದೆಹಲಿ ವರದಿ): ಒಡಿಶಾದಲ್ಲಿ ಇಬ್ಬರು ಇಟಲಿ ಪ್ರಜೆಗಳನ್ನು ನಕ್ಸಲರು ಅಪಹರಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ಸಂವಹನದ ಕೊರತೆ ಇದೆ ಎಂದು ಬಿಜೆಡಿ ಮತ್ತು ಬಿಜೆಪಿ ಲೋಕಸಭೆಯಲ್ಲಿ ಆರೋಪಿಸಿದ್ದು, ಈ ಕುರಿತಂತೆ ಗೃಹ ಸಚಿವರು ಸದನದಲ್ಲಿ ಹೇಳಿಕೆ ನೀಡುವಂತೆ ಒತ್ತಾಯಿಸಿದರು.

ಶೂನ್ಯ ವೇಳೆಯಲ್ಲಿ ಬಿಜೆಡಿ ಸದಸ್ಯ ಬಿ.ಮಹತಾಬ್ ವಿಷಯ ಪ್ರಸ್ತಾಪಿಸಿದರು. ಅದಕ್ಕೆ ಬಿಜೆಪಿ ಸದಸ್ಯರೂ ಸಹ ಧ್ವನಿಗೂಡಿಸಿದರು. ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರು ಇದೊಂದು ಗಂಭೀರ ವಿಷಯವಾಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ಸಂವಹನದ ಕೊರತೆ ಇದೆ ಎಂದು ಟೀಕಿಸಿದರು.ವಿಷಯ ಕುರಿತಂತೆ ಸದಸ್ಯರ ಕಳಕಳಿಯನ್ನು ಇಬ್ಬರೂ ಸಚಿವರಿಗೆ ಮನವರಿಕೆ ಮಾಡಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಪವನ್ ಕುಮಾರ್ ಬನ್ಸಾಲ್ ತಿಳಿಸಿದರು.ಮೊದಲೇ ಎಚ್ಚರಿಕೆ ನೀಡಲಾಗಿತ್ತು

ಮಿಲನ್ (ಐಎಎನ್‌ಎಸ್):
ಅಪಹರಣಕ್ಕೊಳಗಾದ ಇಟಲಿಯ ಪ್ರಜೆಗಳಿಗೆ ಮಾವೊವಾದಿ ಉಗ್ರರ ಪ್ರಾಬಲ್ಯ ಇರುವ ಪ್ರದೇಶದಲ್ಲಿ ಸಂಚರಿಸದಂತೆ ಪೊಲೀಸರು ಮೊದಲೇ ಎಚ್ಚರಿಕೆ ನೀಡಿದ್ದರು ಎಂದು ಇಲ್ಲಿನ ಭಾರತೀಯ ಕಾನ್ಸುಲ್ ಜನರಲ್ ಸಂಜಯ ವರ್ಮಾ ತಿಳಿಸಿದ್ದಾರೆ.`ಇಟಲಿಯ ವಿದೇಶಾಂಗ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಯಾಣಿಕರಿಗೆ ನೀಡಿರುವ ಮಾಹಿತಿಯಲ್ಲಿಯು ಈ ಬಗ್ಗೆ ತಿಳಿಸಲಾಗಿತ್ತು. ಆದರೆ, ಇದನ್ನು ಅವರು ಕಡೆಗಣಿಸಿದ್ದರು~ ಎಂದು ಅವರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.