ಭಾನುವಾರ, ಮೇ 16, 2021
22 °C

ಅಪೌಷ್ಟಿಕತೆ: ಪ್ರಮಾಣ ಪತ್ರ ಕಂಡು ಹೈಕೋರ್ಟ್ ಕೆಂಡಾಮಂಡಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಕ್ಕಳಲ್ಲಿ ಅಪೌಷ್ಟಿಕತೆ ಹೋಗಲಾಡಿಸುವುದೇ ತಮ್ಮ ಆದ್ಯ ಕರ್ತವ್ಯ ಎಂದು ಹೈಕೋರ್ಟ್ ಮುಂದೆ ಹೇಳಿಕೊಂಡ ರಾಜ್ಯ ಸರ್ಕಾರದ ಅಧಿಕಾರಿಗಳು, ತಯಾರಕರ ಹೆಸರೇ ಇಲ್ಲದ ಆಹಾರ ಪದಾರ್ಥಗಳನ್ನು ತೋರಿಸಿ ನ್ಯಾಯಮೂರ್ತಿಗಳ ಕೆಂಗಣ್ಣಿಗೆ ಗುರಿಯಾಗಿ ಸುಸ್ತಾದ ಘಟನೆ ಮಂಗಳವಾರ ನಡೆಯಿತು.ಅಪೌಷ್ಟಿಕತೆ ಹೋಗಲಾಡಿಸಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರ ಮುಂದೆ ಈ ಘಟನೆ ನಡೆಯಿತು.`ನಾವು ಒಳ್ಳೆಯ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ನೀಡುತ್ತಿದ್ದೇವೆ~ ಎಂದು ಹೆಮ್ಮೆಯಿಂದ ಹೇಳಿಕೊಂಡ ಸರ್ಕಾರ, ಆಹಾರ ಪದಾರ್ಥದ ಮಾದರಿಯ ಲಕೋಟೆ ಒಂದನ್ನು ನ್ಯಾಯಮೂರ್ತಿಗಳ ಮುಂದಿಟ್ಟಿತು. ಅದನ್ನು ನೋಡುತ್ತಿದ್ದಂತೆ ನ್ಯಾಯಮೂರ್ತಿಗಳು, `ಇದೇನಿದು, ಇದರಲ್ಲಿ ತಯಾರಕರ ಹೆಸರೇ ಇಲ್ಲವಲ್ಲ.ಇದರಲ್ಲಿ ವಿಷ ಬೆರೆಸಿ ನೀಡಿದ್ದರೆ ಯಾರು ಜವಾಬ್ದಾರರು, ಇಂತಹ ಆಹಾರವನ್ನು ಮಕ್ಕಳಿಗೆ ಹೇಗೆ ನೀಡುತ್ತೀರಿ, ನೀವೇನಾದರೂ ಇದನ್ನು ತಿನ್ನುತ್ತೀರಾ, ಯಾರು ತಿನ್ನುತ್ತೀರಿ ಮುಂದೆ ಬನ್ನಿ~ ಎಂದು ಹಾಜರು ಇದ್ದ ಅಧಿಕಾರಿಗಳನ್ನು ಪ್ರಶ್ನಿಸಿದರು.ರಾಜಕೀಯ ಭಾಷಣ!ಅಪೌಷ್ಟಿಕತೆ ಹೋಗಲಾಡಿಸಲು ಸಮಿತಿ ರಚನೆ ಮಾಡಿರುವ ಬಗ್ಗೆ ಸರ್ಕಾರವು ಪ್ರಮಾಣ ಪತ್ರವೊಂದನ್ನು ಕೋರ್ಟ್ ಮುಂದಿಟ್ಟಿತು.ಇದನ್ನು ಗಮನಿಸಿದ ನ್ಯಾಯಮೂರ್ತಿಗಳು ಸಿಟ್ಟಿನಿಂದ, `ಇದೇನಿದು, ರಾಜಕೀಯ ಭಾಷಣದ ಹಾಗೆ ಭರವಸೆಗಳ ಮಹಾಪೂರ ಈ ಪ್ರಮಾಣ ಪತ್ರದಲ್ಲಿ ಇದೆಯಲ್ಲ.

 

ಯಾರನ್ನು ಕೇಳಿ ಈ ಸಮಿತಿ ರಚನೆ ಮಾಡಿದ್ದೀರಿ, ಇದನ್ನು ಮಾಡುವ ಮುನ್ನ ನಮ್ಮ ಸಲಹೆ ಪಡೆದಿದ್ದೀರಾ, ಈ ರೀತಿ ಯರ‌್ರಾಬಿರ‌್ರಿಯಾಗಿ ಸಮಿತಿ ರಚನೆ ಮಾಡಬೇಡಿ ಎಂದು ಈ ಹಿಂದೆಯೇ ನಿರ್ದೇಶಿಸಿದ್ದೆವು. ಅದೇ ತಪ್ಪು ಮರುಕಳಿಸಿದೆ. ಅಪೌಷ್ಟಿಕತೆ ವಿರುದ್ಧ ಹೋರಾಡುತ್ತಿರುವ ಸರ್ಕಾರೇತರ ಸಂಘ ಸಂಸ್ಥೆ ಇತ್ಯಾದಿಗಳನ್ನು ನೀವು ಸಮಿತಿಯಲ್ಲಿ ಸೇರಿಸಿಕೊಂಡಿದ್ದೀರಾ, ಇಲ್ಲ. ಏನೂ ಮಾಡಿಲ್ಲ. ನಿಮಗೆ ಬೇಕಾದವರನ್ನು ಹಾಕಿಕೊಂಡು ಸಮಿತಿ ಮಾಡಿದ್ದೀರಿ.`ಇವತ್ತು ಈ ಪ್ರಕರಣ ಕೋರ್ಟ್‌ನಲ್ಲಿ ಬರಲಿದೆ ಎಂದು ಒಂದು ದಿನ ಮುಂಚೆ ಸಮಿತಿ ರಚನೆ ಆಗಿದೆ. ಅಪೌಷ್ಟಿಕತೆಯಿಂದ ಮಕ್ಕಳು ಸಾಯುತ್ತಿದ್ದಾರೆ. ಮೇಲಿಂದ ಮೇಲೆ ಯೋಜನೆ ರೂಪಿಸುವುದು ಬಿಟ್ಟರೆ ನಿಮ್ಮಿಂದ (ಸರ್ಕಾರದಿಂದ) ಏನೂ ಆಗುತ್ತಿಲ್ಲ. ಯೋಜನೆಗಳೆಲ್ಲ ವಿಫಲ ಆಗುತ್ತಿವೆ.ಈ ಸಮಸ್ಯೆ ಹೋಗಲಾಡಿಸಲು ಬಜೆಟ್‌ನಲ್ಲಿ ಎಷ್ಟು ಹಣ ಮಂಜೂರು ಮಾಡಲಾಗಿದೆ, ಕೇಂದ್ರದಿಂದ ಎಷ್ಟು ಹಣ ಮಂಜೂರು ಆಗಿದೆ ಏನೊಂದೂ ವಿವರಣೆ ಇದರಲ್ಲಿ ಇಲ್ಲ. ಇಂತಹ ಪ್ರಮಾಣ ಪತ್ರದಿಂದ ಏನು ಪ್ರಯೋಜನ~ ಎಂದು ಪ್ರಶ್ನಿಸಿತು.ಈ ಬಗ್ಗೆ ತಾವು ಸರ್ಕಾರದ ಜೊತೆ ಸಮಾಲೋಚನೆ ನಡೆಸುವುದಾಗಿ ಅಡ್ವೊಕೇಟ್ ಜನರಲ್ ಹೇಳಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡಲಾಯಿತು.ಮುಖ್ಯಾಂಶಗಳು* ತಯಾರಕರ ಹೆಸರೇ ಇಲ್ಲದ ಆಹಾರ ಪದಾರ್ಥಗಳ ಪ್ರದರ್ಶನ

* ಸಮಿತಿ ರಚನೆಗೆ ಕೋರ್ಟ್ ಅಸಮಾಧಾನ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.