ಶನಿವಾರ, ಫೆಬ್ರವರಿ 27, 2021
19 °C

ಅಪ್ಪನ ಪ್ರಭಾವಳಿಯಾಚೆ...

ಸಂದರ್ಶನ: ಆನಂದತೀರ್ಥ ಪ್ಯಾಟಿ Updated:

ಅಕ್ಷರ ಗಾತ್ರ : | |

ಅಪ್ಪನ ಪ್ರಭಾವಳಿಯಾಚೆ...

‘ಸಿನಿಮಾ ಮಾಡುವ ಮುನ್ನ ಕೇಳಿದ್ದರೆ ಅಪ್ಪನ ಮಾರ್ಗದರ್ಶನ, ಸಲಹೆ ಸಿಗುತ್ತಿತ್ತು. ಆದರೆ ಅವರ ಪ್ರಭಾವ ಅದರೊಳಗೆ ನುಸುಳಿಬಿಡಬಹುದು. ನನ್ನ ಹಾಗೂ ಅವರ ಪರಿಕಲ್ಪನೆ ಒಂದಕ್ಕೊಂದು ಹೊಂದಾಣಿಕೆ ಆಗದ ಸಾಧ್ಯತೆಯಿದೆ.ಆಗ ನೀವೇ ಕೇಳಬಹುದು– ಹಿಂಗ್ಯಾಕೆ ಅಂತ! ಆ ಕಾರಣಕ್ಕಾಗಿಯೇ ನಾನು ಅಪ್ಪನ ಮಾರ್ಗದರ್ಶನ ಪಡೆಯುವ ರಿಸ್ಕ್ ತೆಗೆದುಕೊಂಡಿಲ್ಲ’. ಯುವ ನಿರ್ದೇಶಕ ಟಿ.ಎಸ್.ಸತ್ಯಜಿತ್ ಅವರ ಮಾತುಗಳಲ್ಲಿ ತಾವು ಸಾಗುತ್ತಿರುವ ದಾರಿಯ ಬಗ್ಗೆ ಸ್ಪಷ್ಟ ನಿಲುವು ಇದ್ದಂತಿತ್ತು.ತಮ್ಮ ತಂದೆ ಟಿ.ಎನ್.ಸೀತಾರಾಮ್ ಅವರ ಪ್ರಭಾವಕ್ಕೆ ಒಳಗಾಗದೇ ತಮ್ಮದೇ ದಾರಿಯಲ್ಲಿ ಸಾಗಬೇಕೆನ್ನುವ ದೃಢ ನಿರ್ಧಾರ ಅವರದು. ‘ಹಿಂಗ್ಯಾಕೆ’ ಸಿನಿಮಾದ ಚಿತ್ರೀಕರಣ ಮುಗಿಸಿರುವ ಸತ್ಯಜಿತ್, ‘ನಮ್ಮದು ಶೇಕಡ ನೂರು ಹಾಸ್ಯಮಯ ಚಿತ್ರ’ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ.ಪ್ರೇಕ್ಷಕರನ್ನು ನಗಿಸುವುದೇ ತಮ್ಮ ಗುರಿ ಎನ್ನುವ ಅವರು, ಈ ಚಿತ್ರಪಯಣದ ಕುರಿತು ‘ಸಿನಿಮಾ ರಂಜನೆ’ ಜತೆ ಅನುಭವ ಹಂಚಿಕೊಂಡರು.

 

*ಹಲವು ವರ್ಷಗಳ ಕಾಲ ಧಾರಾವಾಹಿ ನಿರ್ಮಾಣದಲ್ಲಿ ತೊಡಗಿಕೊಂಡಿದ್ದವರು ಈಗ ದೊಡ್ಡ ತೆರೆಗೆ ಬಂದಿದ್ದೀರಿ...

ಹೌದು. ಈ ಮೊದಲು ‘ಚಿತ್ರಲೇಖ’, ‘ಮುಂಜಾವು’, ‘ಮಳೆಬಿಲ್ಲು’ ಇತರ ಧಾರಾವಾಹಿಗಳ ನಿರ್ಮಾಣ ಕಾರ್ಯದಲ್ಲಿ ಸಾಕಷ್ಟು ಅನುಭವ ಪಡೆದಿದ್ದೇನೆ. ಸಿನಿಮಾ ನಿರ್ದೇಶನ ನನ್ನ ಇನ್ನೊಂದು ಕನಸಾಗಿತ್ತು. ಈಗ ಸಮಯ ಬಂದಿದೆ. ಯುವಕರು ಈ ಕಾಲಘಟ್ಟದಲ್ಲಿ ಎದುರಿಸುತ್ತಿರುವ ವಿಚಿತ್ರ ಸನ್ನಿವೇಶ ಇಟ್ಟುಕೊಂಡು ಸಿನಿಮಾ ಮಾಡಿದ್ದೇನೆ. ಧಾರಾವಾಹಿ ನಿರ್ಮಾಣ–ನಿರ್ದೇಶನದಲ್ಲಿ ಪಡೆದಿದ್ದ ಅನುಭವ ಇಲ್ಲಿ ನೆರವಾಗುತ್ತಿದೆ.

 

*ಧಾರಾವಾಹಿಗೂ ಸಿನಿಮಾಕ್ಕೂ ತುಂಬ ವ್ಯತ್ಯಾಸ ಇದೆಯಲ್ಲವೇ?

ಧಾರಾವಾಹಿಯಲ್ಲಿ ಎಲ್ಲವೂ ತೀರಾ ನಿಧಾನ. ಸಿನಿಮಾ ಚಕಚಕನೇ ಮುಂದೆ ಸಾಗುವ ದೃಶ್ಯಾವಳಿ. ದೃಶ್ಯವನ್ನು ಸ್ವಲ್ಪ ಎಳೆದರೂ ನೋಡುವವನಿಗೆ ಬೋರ್ ಆಗುತ್ತದೆ. ಮೊದಲಿಗೆ ‘ಹಿಂಗ್ಯಾಕೆ’ ಚಿತ್ರಕ್ಕೆ 2*0 ದೃಶ್ಯಗಳನ್ನು ಬರೆದಿದ್ದೆ. ನನ್ನ ಹಿರಿಯ ಸ್ನೇಹಿತ ಸುಬ್ಬು ಅವರಿಗೆ ತೋರಿಸಿದೆ. ಅವರ ಸಲಹೆ ಮೇರೆಗೆ 100 ದೃಶ್ಯಕ್ಕೆ ಕತ್ತರಿ ಹಾಕಿದ್ದೇನೆ.

 

*ಚಿತ್ರದ ಕಥೆ ಏನು?

ಇದು ಇಬ್ಬರು ಹುಡುಗರ ಮಧ್ಯೆ ಸುತ್ತುವ ಕಥೆ. ಮೊದಲೆಲ್ಲ ಬ್ಯಾಂಕ್ ಅಥವಾ ಯಾವುದಾದರೂ ಸರ್ಕಾರಿ ಉದ್ಯೋಗ ಹಿಡಿದರೆ ಅದೇ ಯಶಸ್ಸು ಎಂದು ಭಾವಿಸುತ್ತಿದ್ದರು. ಆದರೆ ಈಗ ಯಶಸ್ಸಿನ ವ್ಯಾಖ್ಯೆ ಸಂಕೀರ್ಣಗೊಂಡಿದೆ. ಕಾರು ಇದ್ದರೂ ಅದು ಯಾವ ಕಾರು? ಮನೆ ಕಟ್ಟಿದರೂ ಅದರ ಡೆಕೋರೇಶನ್ ಹೇಗಿದೆ?ಆತ ಯಾವ ಹೋಟೆಲ್‌ಗೆ ಹೋಗುತ್ತಾನೆ ಇತ್ಯಾದಿ ಪ್ರಶ್ನೆಗಳೊಂದಿಗೆ ಆತನ ವ್ಯಕ್ತಿತ್ವ ರೂಪಗೊಳ್ಳುತ್ತದೆ. ‘ಹಿಂಗ್ಯಾಕೆ’ ಚಿತ್ರದಲ್ಲಿ ನಾಯಕನಿಗೆ ಹಲವರು ಇಂಥ ಸಲಹೆ ನೀಡಿದಾಗ, ಆತ ಅದನ್ನು ಸಾಧಿಸಲು ಮುಂದಾಗುತ್ತಾನೆ. ಜೀವನದಲ್ಲಿ ವೈಫಲ್ಯಗಳನ್ನು ಹೇಗೆ ಎದುರಿಸಬೇಕು ಎಂಬುದೂ ಇದೆ ಇದರಲ್ಲಿ.*ಇಂಥ ಸಿನಿಮಾಗಳು ಸಾಕಷ್ಟು ಬಂದಿವೆ. ಇದು ಹೇಗೆ ವಿಭಿನ್ನ?

ಇದರಲ್ಲಿ ನಾಯಕ–ನಾಯಕಿಗೆ ಹೆಚ್ಚು ಆದ್ಯತೆ ಕೊಟ್ಟಿಲ್ಲ. ಕಥೆ ಹೇಳಿಕೊಂಡು ಹೋಗುವುದಕ್ಕಿಂತ ದೃಶ್ಯಗಳ ಮೂಲಕ ಕಟ್ಟಿಕೊಡಲು ಯತ್ನಿಸಿದ್ದೇನೆ. ಹೆಚ್ಚು ಅವಧಿಯ ದೃಶ್ಯ ಇದರಲ್ಲಿ ಇಲ್ಲ. ನಾಯಕಿ ಸಿನಿಮಾದ ಕೊನೆಕೊನೆಗೆ ಬರುತ್ತಾಳೆ.ಇದು ವೇಗವಾಗಿ ಸಾಗುವ ಚಿತ್ರ. ಹಾಡು ಅಳವಡಿಸಿದರೆ ಅದು ಸಿನಿಮಾವನ್ನು ನಿಧಾನಗೊಳಿಸುತ್ತದೆ, ಬೇರೊಂದು ಭಾವಲೋಕಕ್ಕೆ ಒಯ್ಯುತ್ತದೆ. ಹೀಗಾಗಿ ಹಾಡುಗಳನ್ನು ಹಾಕಿಲ್ಲ.

*ಟಿ.ಎನ್. ಸೀತಾರಾಮ್ ಅವರು ಕಿರುತೆರೆಯಲ್ಲಿ ಪ್ರಸಿದ್ಧ ನಿರ್ದೇಶಕರು. ಅವರ ಮಗ ನಿರ್ದೇಶಿಸುವ ಚಿತ್ರದ ಮೇಲೆ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿರುತ್ತದಲ್ಲವೇ?

ಪ್ರತಿಯೊಬ್ಬನ ಸಾಮರ್ಥ್ಯ ಬೇರೆ ಬೇರೆಯಾಗಿರುತ್ತದೆ. ನನ್ನ ತಂದೆಯ ನೋಟಕ್ಕಿಂತ ನನ್ನ ನೋಟ ಬೇರೆಯಾಗಿರಬಹುದು. ಹೀಗಾಗಿ ಇಬ್ಬರ ದೃಶ್ಯ ಕಲ್ಪನೆಗಳು ವಿಭಿನ್ನವಾಗಿರುತ್ತವೆ.ಪ್ರೇಕ್ಷಕರು ಅದನ್ನು ಗ್ರಹಿಸುತ್ತಾರೆ ಎಂಬ ನಂಬಿಕೆಯಿದೆ. ‘ನಿಮ್ಮ ತಂದೆಯವರ ಧಾರಾವಾಹಿ ನೋಡ್ತೇವೆ, ಚೆನ್ನಾಗಿರ್ತದೆ’ ಎಂದು ಹೇಳುವವರು ಇದ್ದಾರೆ. ಅದರಿಂದ ಸ್ವಲ್ಪ ಮಟ್ಟಿಗೆ ಪ್ರಯೋಜನವಾಗಬಹುದು. ನಮ್ಮ ತಂದೆ ಹಾಗೂ ನಾನು ಯೋಚಿಸುವುದು ಬೇರೆ ಬೇರೆಯಲ್ಲವೇ? ಇದನ್ನು ಪ್ರೇಕ್ಷಕ ಖಂಡಿತ ಗಮನಿಸುತ್ತಾನೆ.

*ಧಾರಾವಾಹಿಗಿಂತ ಸಿನಿಮಾ ನಿರ್ದೇಶನ ಸುಲಭವೇ?

ತಂತ್ರಜ್ಞಾನ ಅಗಾಧವಾಗಿ ಬೆಳೆದಿರುವುದರಿಂದ ಹಲವಾರು ಕೆಲಸಗಳು ಈಗ ಮೊದಲಿಗಿಂತ ಸುಲಭವಾಗಿವೆ. ಈಗಂತೂ ಡಿಜಿಟಲ್ ಯುಗ. ಮೊದಲಾದರೆ ಸಿನಿಮಾ ರೀಲ್‌ಗಳಿಗೆ ಲಕ್ಷಾಂತರ ವೆಚ್ಚವಾಗುತ್ತಿತ್ತು. ಈಗ ಅಷ್ಟೊಂದು ಕಷ್ಟ ಇಲ್ಲ. ಎಷ್ಟು ಬೇಕಾದರೂ ಪ್ರಯೋಗ ಮಾಡಲು ಸಾಧ್ಯವಿದೆ.ಎಷ್ಟು ಹೆಚ್ಚು ಪ್ರಯೋಗ ಮಾಡುತ್ತೀರೋ ಅಂತಿಮವಾಗಿ ಅಷ್ಟು ಒಳ್ಳೆಯ ಪ್ರಾಡಕ್ಟ್‌ ಕೊಡಬಹುದು. ಸೀಮಿತ ಎಂಬುದೇ ಇಲ್ಲ. ಧಾರಾವಾಹಿ ಅಥವಾ ಸಿನಿಮಾ ಎರಡೂ ಅಷ್ಟೇ.

*ಬಣ್ಣದ ಲೋಕದ ಹಾದಿಯನ್ನು ಆಯ್ದುಕೊಳ್ಳಲು ಕಾರಣ?

ಓದಿದ್ದು ಎಂಜಿನಿಯರಿಂಗ್. ಪಠ್ಯಪುಸ್ತಕಗಳ ಮಾಹಿತಿಯನ್ನು ಅನಿಮೇಶನ್ ಮೂಲಕ ತೋರಿಸುವ ಯೋಜನೆ ಮಾಡಿದ್ದೆ. ಅದು ಅಷ್ಟೊಂದು ಕ್ಲಿಕ್ ಆಗಲಿಲ್ಲ.ಬಳಿಕ ಸುಮ್ಮನೇ ಇರದೇ ‘ಬಿ’ ಎಂಬುದೂ ಸೇರಿದಂತೆ ಐದಾರು ಕಿರುಚಿತ್ರ ಮಾಡಿದೆ. ಅವುಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು. ನನ್ನಲ್ಲಿನ ಸೃಜನಶೀಲತೆಯನ್ನೇ ನಂಬಿಕೊಂಡು ಬದುಕಬೇಕೆಂದರೆ ಈ ಮಾಧ್ಯಮವೇ ಒಳ್ಳೆಯದು ಅನಿಸಿತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.