ಸೋಮವಾರ, ಮೇ 17, 2021
28 °C

`ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: `ಅಭಿವೃದ್ಧಿ ಮತ್ತು ಪರಿಸರ ಪರಸ್ಪರ ವಿರುದ್ಧವಾಗಿವೆ. ಪ್ರಸ್ತುತ ದಿನಮಾನದಲ್ಲಿ ಬೃಹತ್ ನೀರಾವರಿ, ವಿದ್ಯುತ್ ಯೋಜನೆ ಮತ್ತು ಕೈಗಾರಿಕರಣದಂತಹ ಅಭಿವೃದ್ಧಿ ಹೆಸರಿನಲ್ಲಿ ಪರಸರ ನಾಶವಾಗುತ್ತಿದೆ' ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ.ನಾಯಕ ಹೇಳಿದರು.ನವನಗರದ ಉದ್ಯಾನಗಿರಿಯಲ್ಲಿರುವ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಬುಧವಾರ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

`ಪರಸರ ಮಾಲಿನ್ಯಕ್ಕೆ ಮೂಲ ಕಾರಣ ಜನಸಂಖ್ಯೆ ಏರಿಕೆ. ಅರಣ್ಯ ನಾಶದಿಂದ ಪರಿಸರದಲ್ಲಿ ಉಷ್ಣತೆ ಹೆಚ್ಚುತ್ತಿದೆ. ಉಷ್ಣತೆ ಕಡಿಮೆಗೊಳಿಸಬೇಕಾದರೆ ಅಗತ್ಯ ಗಿಡ-ಮರಗಳನ್ನು ಪ್ರತಿಯೊಬ್ಬರೂ ಉಳಿಸಿ, ಬೆಳೆಸಬೇಕಾಗಿದೆ' ಎಂದರು.`ಅರಣ್ಯ ರಕ್ಷಣೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು ಕಠಿಣ ಕಾಯ್ದೆ, ಕಾನೂನು ಜಾರಿಗೊಳಿಸಿದ್ದರೂ ಜನರಲ್ಲಿ ಜಾಗೃತಿ ಇಲ್ಲದೇ ಹಾಗೂ ಅರಣ್ಯ ಇಲಾಖೆಗೆ ಪೂರ್ಣ ಪ್ರಮಾಣದ ಸಿಬ್ಬಂದಿ ಇಲ್ಲದೇ ಇರುವುದರಿಂದ ಅರಣ್ಯ ರಕ್ಷಣೆ ಸಾಧ್ಯವಾಗುತ್ತಿಲ್ಲ' ಎಂದು ತಿಳಿಸಿದರು.`ಅರಣ್ಯದ ಮೇಲೆ ಒತ್ತಡ'

`ಬಾಗಲಕೋಟೆ ಜಿಲ್ಲೆಯಲ್ಲಿ 14 ಲಕ್ಷ ಆಡು, ಕುರಿಗಳಿವೆ ಮತ್ತು 6 ಲಕ್ಷ ಜಾನುವಾರುಗಳಿವೆ. ಇವುಗಳೆಲ್ಲವೂ ಮೇವಿಗಾಗಿ ಅರಣ್ಯವನ್ನೇ ಅವಲಂಬಿಸಿರುವುದರಿಂದ ಅರಣ್ಯದ ಮೇಲೆ ಒತ್ತಡ ಹೆಚ್ಚಿದೆ' ಎಂದರು.`ಜಿಲ್ಲೆಯಲ್ಲಿ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಜಾರಿಯಲ್ಲಿದ್ದು, ರೈತರು, ಸಾರ್ವಜನಿಕರು ಹಾಗೂ ಸಂಘ, ಸಂಸ್ಥೆಗಳಿಗೆ ಅವರು ಬಯಸುವ ಸಸಿಗಳನ್ನು ರಿಯಾಯಿತಿ ದರದಲ್ಲಿ ಅರಣ್ಯ ಇಲಾಖೆ ನರ್ಸರಿಗಳಿಂದ ನೀಡಲಾಗುತ್ತಿದ್ದು, ಜನತೆ ಇದರ ಸದುಪಯೊಗ ಪಡೆದುಕೊಳ್ಳಬೇಕು' ಎಂದು ಹೇಳಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾಯಾಧೀಶ ವಿ.ವಿ.ಜೋಶಿ ಮಾತನಾಡಿ, `ಅರಣ್ಯ ರಕ್ಷಣೆ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ' ಎಂದರು. `ಕ್ರಿಮಿನಾಶಕ ಬಳಕೆಯಿಂದ ಭೂಮಿಯಲ್ಲಿರುವ ಕ್ರಿಮಿಕೀಟಗಳು ನಾಶವಾಗಿ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ' ಎಂದು ಉದಾಹರಣೆ ಸಹಿತ ವಿವರಿಸಿದರು.ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜಿ. ಪಾಟೀಲ ಮಾತನಾಡಿ, `ಪ್ರತಿಯೊಬ್ಬ ವಿದ್ಯಾರ್ಥಿ ಪರಿಸರ ಪ್ರೇಮಿಯಾಗಬೇಕು, ವಿಶ್ವವಿದ್ಯಾಲಯದ ಆವರಣದಲ್ಲಿ ಒಂದೊಂದು ಸಸಿ ನೆಟ್ಟು ಬೆಳೆಸಬೇಕು' ಎಂದು ಸಲಹೆ ನೀಡಿದರು.

ಅಪರ ಜಿಲ್ಲಾಧಿಕಾರಿ ರುದ್ರಗೌಡ, ತೋಟಗಾರಿಕಾ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಎ.ಬಿ. ಪಾಟೀಲ, ಡೀನ್ ಡಾ. ವೈ.ಕೆ. ಕೋಟಿಕಲ್, ಡಾ. ಎಂ.ಬಿ. ಮೂಡಲಗೇರಿ, ಎಚ್.ಬಿ. ನಾಯಕ, ಚಿದಾನಂದ ಮನ್ಸೂರ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶ್ರೀಶೈಲ ದಿಡ್ಡಿಮನಿ, ಡಾ. ಪಲ್ಲವಿ ಎಚ್.ಎಂ., ಡಾ. ಮಂಜುನಾಥ ಮತ್ತು ಇತರರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.