ಗುರುವಾರ , ಮಾರ್ಚ್ 4, 2021
30 °C
ಪ್ರಣವ್‌ ಮುಖರ್ಜಿ ಆತ್ಮಕತೆ ‘ದ ಟರ್ಬುಲೆಂಟ್ ಇಯರ್ಸ್: 1980–96’ನ ಎರಡನೇ ಭಾಗ ಬಿಡುಗಡೆ

ಅಯೋಧ್ಯೆ ಬಾಗಿಲು ತೆರೆದದ್ದು ರಾಜೀವ್ ತಪ್ಪು ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಯೋಧ್ಯೆ ಬಾಗಿಲು ತೆರೆದದ್ದು ರಾಜೀವ್ ತಪ್ಪು ನಿರ್ಧಾರ

ನವದೆಹಲಿ (ಪಿಟಿಐ): ಅಯೋಧ್ಯೆಯ ವಿವಾದಾತ್ಮಕ ರಾಮಜನ್ಮಭೂಮಿಯಲ್ಲಿ ಇರುವ ದೇವಸ್ಥಾನದ ಬಾಗಿಲು ತೆರೆದದ್ದು ಆಗ ಪ್ರಧಾನಿ ಆಗಿದ್ದ ರಾಜೀವ್‌ ಗಾಂಧಿ ಅವರ ತಪ್ಪು ನಿರ್ಧಾರ ಎಂದು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ.ಪ್ರಣವ್ ಮುಖರ್ಜಿ ಅವರ ಆತ್ಮಚರಿತ್ರೆಯ ಎರಡನೇ ಭಾಗವಾದ ‘ದ ಟರ್ಬುಲೆಂಟ್ ಇಯರ್ಸ್: 1980–96’ ಅನ್ನು ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಗುರುವಾರ ಬಿಡುಗಡೆ ಮಾಡಿದರು. ಬಾಬರಿ ಮಸೀದಿಯ ಧ್ವಂಸ ‘ಸಂಪೂರ್ಣ ನಂಬಿಕೆ ದ್ರೋಹದ ಕೆಲಸ. ಇದರಿಂದ ವಿಶ್ವದ ಎದುರು ದೇಶದ ಘನತೆ ಕುಗ್ಗಿತು’ ಎಂದು ಪುಸ್ತಕದಲ್ಲಿ ಪ್ರಣವ್ ಹೇಳಿದ್ದಾರೆ.ಸಮಾಜದಲ್ಲಿಯ ಅಸಮಾನತೆ ಹೋಗಲಾಡಿಸುವ ಉದ್ದೇಶದ ಮಂಡಲ್ ಆಯೋಗದ ವರದಿ ಜಾರಿ ಸಹ ಸಮಾಜವನ್ನು ಇಬ್ಭಾಗ ಮಾಡಿತು. 1989ರಿಂದ 91ರ ವರೆಗಿನ ಅವಧಿಯಲ್ಲಿ ಬಹಳಷ್ಟು ಹಿಂಸಾಚಾರ ನಡೆಯಿತು ಹಾಗೂ ಸೌಹಾರ್ದಯುತ ಸಮಾಜದಲ್ಲಿ ಕಹಿ ಭಾವನೆ ಹೆಚ್ಚಿ ಕೋಮು ಮತ್ತು ಧರ್ಮಗಳ ಮಧ್ಯೆ ಭಾರಿ ಕಂದಕ ಏರ್ಪಟ್ಟಿತು ಎಂದು ಪುಸ್ತಕದಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.ಶಾಬಾನು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ವ್ಯತಿರಿಕ್ತವಾದ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ರಾಜೀವ್ ತಮ್ಮ ಪ್ರಗತಿಪರ ಧೋರಣೆಗೆ ವಿರುದ್ಧವಾಗಿ ನಡೆದುಕೊಂಡಿದ್ದರು ಎಂದು ಹೇಳಿದ್ದಾರೆ.ಪ್ರಧಾನಿ ಹುದ್ದೆಗೆ ಲಾಬಿ ಮಾಡಲಿಲ್ಲ: ‘ಇಂದಿರಾ ಗಾಂಧಿ ಹತ್ಯೆಯ ನಂತರ ನಾನು ಪ್ರಧಾನಿಯಾಗಲು ಯತ್ನಿಸಿದ್ದೆ. ಆದರೆ ನನಗೆ ಈ ಅವಕಾಶ ನಿರಾಕರಿಸಿ, ರಾಜೀವ್‌ ಗಾಂಧಿ ನನ್ನನ್ನು ಕಡೆಗಣಿಸಿದ್ದರು ಎಂದು ವ್ಯಾಪಕವಾಗಿ ಅಪಪ್ರಚಾರ ಮಾಡಿದ್ದಾರೆ’ ಎಂದು ಪ್ರಣವ್‌ ತಮ್ಮ ಪುಸ್ತಕದಲ್ಲಿ ಬೇಸರ ತೋಡಿಕೊಂಡಿದ್ದಾರೆ.ಅಂದಿನ ಘಟನೆಯನ್ನು ಪ್ರಣವ್‌ ತಮ್ಮ ಪುಸ್ತಕದಲ್ಲಿ ಹೀಗೆ ನೆನಪಿಸಿಕೊಂಡಿದ್ದಾರೆ: ‘ಸಮಯ ಸಾಗುತ್ತಿತ್ತು. ನಾನು ಅವರಲ್ಲಿ ಮಾತನಾಡಲು ಕಾತರನಾಗಿದ್ದೆ. ದಂಪತಿ (ರಾಜೀವ್‌ ಮತ್ತು ಸೋನಿಯಾ) ಜತೆಗೆ ಕುಳಿತಿದ್ದರು. ನಾನು ರಾಜೀವ್‌ ಅವರ ಭುಜವನ್ನು ಮೆಲ್ಲನೆ ಮುಟ್ಟಿದೆ. ಏನೋ ಗಂಭೀರವಾದ ವಿಚಾರ ಚರ್ಚಿಸಲು ಇದೆ ಎಂಬುದು ರಾಜೀವ್‌ ಅವರಿಗೆ ಅರ್ಥವಾಯಿತು.‘ತುರ್ತಾದ ಮತ್ತು ಗಂಭೀರವಾದ ವಿಚಾರವಾದ್ದರಿಂದ ಕೋಣೆಯೊಳಗೆ ಬರುವ ಇತರರಿಗೆ ತಿಳಿಯಬಾರದು ಎಂಬ ಕಾರಣಕ್ಕೆ ರಾಜೀವ್‌ ನನ್ನನ್ನು ಸ್ನಾನದ ಕೋಣೆಗೆ ಕರೆದೊಯ್ದರು. ರಾಜಕೀಯ ಪರಿಸ್ಥಿತಿಯನ್ನು ನಾನು ವಿವರಿಸಿದೆ. ರಾಜೀವ್‌ ಅವರೇ ಪ್ರಧಾನಿ ಆಗಬೇಕು ಎಂದು ಪಕ್ಷದ ಸದಸ್ಯರು ಬಯಸಿದ್ದಾರೆ ಎಂಬುದನ್ನು ಅವರಿಗೆ ನಾನು ಹೇಳಿದೆ. ಪ್ರಧಾನಿಯಾಗಲು ರಾಜೀವ್‌ ಮೊದಲೇ ಒಪ್ಪಿದ್ದರು. ನಾನು ಹೊರಗೆ ಬಂದು ನಿರ್ಧಾರವನ್ನು ಪ್ರಕಟಿಸಿದೆ’ ಎಂದು ಪ್ರಣವ್‌ ಪುಸ್ತಕದಲ್ಲಿ ಬರೆದಿದ್ದಾರೆ.ತಮ್ಮನ್ನು ಸಂಪುಟದಿಂದ ತೆಗೆದು ಹಾಕಿದ್ದು ಮತ್ತು ಪಕ್ಷದಿಂದ ವಜಾ ಮಾಡಿದ್ದರ ಬಗ್ಗೆಯೂ ಪ್ರಣವ್‌ ಬರೆದಿದ್ದಾರೆ. ರಾಜೀವ್‌ ಸುತ್ತ ಇದ್ದವರು ತಮ್ಮ ಬಗ್ಗೆ ಚಾಡಿ ಹೇಳಿದ್ದರು. ಅದನ್ನು ರಾಜೀವ್‌ ನಂಬಿದ್ದರು ಎಂದು ಪ್ರಣವ್‌ ಹೇಳಿದ್ದಾರೆ. ‘ನಾನು ಕೂಡ ತಾಳ್ಮೆ ಕಳೆದುಕೊಂಡು ಹತಾಶನಾಗಿ ನಿರ್ಧಾರ ಕೈಗೊಂಡೆ’ ಎಂದು ಅವರು ಬರೆದಿದ್ದಾರೆ. ಜನನಾಯಕರಲ್ಲ: ತಾವು ಜನ ನಾಯಕರಲ್ಲ ಎಂಬ ವಾಸ್ತವವನ್ನು ಅರ್ಥ ಮಾಡಿಕೊಂಡಿದ್ದರೆ ಪಕ್ಷ ಸ್ಥಾಪಿಸುವ ಸಾಹಸಕ್ಕೆ ಇಳಿಯುತ್ತಿರಲಿಲ್ಲ ಎಂಬುದನ್ನು ಮುಖರ್ಜಿ ಅವರು ಪ್ರಾಮಾಣಿಕವಾಗಿ ಒಪ್ಪಿ ಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ಬಿಟ್ಟವರು ಬೇರೆ ಪಕ್ಷ ಸ್ಥಾಪಿಸಿ ಯಶಸ್ವಿ ಆಗಿದ್ದು ಬಹಳ ಕಡಿಮೆ ಎಂದಿದ್ದಾರೆ.ಒಲ್ಲದ ಮನಸ್ಸಿನಿಂದ ರಾಜಕಾರಣಿ ಆದ ರಾಜೀವ್, 40ನೇ ವಯಸ್ಸಿಗೆ ಅನಿವಾರ್ಯವಾಗಿ ಪ್ರಧಾನಿ ಹುದ್ದೆಗೆ ಏರಿದರು. ಅವರಲ್ಲಿ ಆಧುನಿಕತೆಯ ತುಡಿತವಿತ್ತು, ಬೇಗ ಬಹಳಷ್ಟು ಬದಲಾವಣೆ ತರಬೇಕು ಎಂದು ಬಯಸಿದ್ದರು. ಆದ್ದರಿಂದ ನಮ್ಮಂಥ ಹಳಬರು ಬದಲಾವಣೆಗೆ ಅಡ್ಡಿ ಎಂದು ಭಾವಿಸಿದ್ದರು ಎಂದು ಮುಖರ್ಜಿ ಅವರು ರಾಜೀವ್ ಗಾಂಧಿ ಅವರ ಆರಂಭಿಕ ಆಡಳಿತದ ದಿನಗಳನ್ನು ಮೆಲುಕು ಹಾಕಿದ್ದಾರೆ.ಇಂದಿರಾ ಹತ್ಯೆಯ ನಂತರ ಭುಗಿಲೆದ್ದ ಸಿಖ್ ವಿರೋಧಿ ಹಿಂಸಾಚಾರ ರಾಜೀವ್ ಸರ್ಕಾರಕ್ಕೆ ಅನಿರೀಕ್ಷಿತ ಘಟನೆಯಾಗಿತ್ತು. ಇಂತಹ ಸ್ಥಿತಿಯನ್ನು ಎದುರಿಸಲು ಸರ್ಕಾರ ಸಿದ್ಧವಾಗಿರಲಿಲ್ಲ. ಇದರಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಜೀವ ಮತ್ತು ಆಸ್ತಿಗೆ  ಹಾನಿಯಾಯಿತು ಎಂದು ಪುಸ್ತಕದಲ್ಲಿ ವಿವರಿಸಲಾಗಿದೆ.

*

ಕೆಲವು ಸತ್ಯಗಳು ಎಂದೂ ಬಹಿರಂಗವಾಗವು

ಕೆಲವು ಸತ್ಯಗಳು ತಮ್ಮೊಂದಿಗೇ ಮಣ್ಣಾಗಲಿವೆ ಎಂದು ಪ್ರಣವ್‌ ಮುಖರ್ಜಿ ಹೇಳಿದ್ದಾರೆ. ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅತ್ಯಂತ ಗೋಪ್ಯ ಆಡಳಿತಾತ್ಮಕ ವಿಚಾರಗಳ ಬಗ್ಗೆ ಉದ್ದೇಶಪೂರ್ವಕವಾಗಿಯೇ ಏನನ್ನೂ ಹೇಳಿಲ್ಲ. ಈ ಬಗ್ಗೆ ಇತರ ಅಂಶಗಳನ್ನು ನೋಡಿಕೊಂಡು ಓದುಗರೇ ಒಂದು ನಿರ್ಧಾರಕ್ಕೆ ಬರಬೇಕು ಎಂದು ಹೇಳಿದ್ದಾರೆ.

ವಿನ್‌ಸ್ಟನ್‌ ಚರ್ಚಿಲ್ (ಬ್ರಿಟನ್‌ನ ಮಾಜಿ ಪ್ರಧಾನಿ) ಸೇರಿ ಹಲವು ನಾಯಕರು ತಮ್ಮ ಆತ್ಮಕತೆಯಲ್ಲಿ ಹಲವು ರಾಷ್ಟ್ರೀಯ ರಹಸ್ಯಗಳನ್ನು ಬಹಿರಂಗಪಡಿಸಿದ್ದಾರೆ. ಆದರೆ ತಾವು ಈ ಬಗ್ಗೆ ಸಾಂಪ್ರದಾಯಿಕವಾದ ಧೋರಣೆಯನ್ನೇ ಹೊಂದಿರುವುದಾಗಿ ಪ್ರಣವ್‌ ಹೇಳಿದ್ದಾರೆ. ಸರ್ಕಾರವೇ ಆಗಾಗ ಕಡತಗಳನ್ನು ಬಹಿರಂಗ ಮಾಡುತ್ತದೆ. ಜನರು ಅದರಿಂದ ಸತ್ಯಗಳನ್ನು ತಿಳಿದುಕೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.‘ಡೈರಿ ಪ್ರಕಟಿಸಬಾರದು’: ಡೈರಿ ಬರೆಯುವ ತಮ್ಮ ಹವ್ಯಾಸವನ್ನೂ ಅವರು ಪ್ರಸ್ತಾಪಿಸಿದ್ದಾರೆ. ‘ನನ್ನ ಡೈರಿಯನ್ನು ಎಂದೂ ಬಹಿರಂಗಪಡಿಸಬಾರದು ಎಂದು ಮಗಳಿಗೆ ಹೇಳಿದ್ದೇನೆ. ಅದನ್ನು ಡಿಜಿಟಲ್‌ ರೂಪಕ್ಕೆ ಪರಿವರ್ತಿಸಬಹುದು. ಆದರೆ ಬಹಿರಂಪಡಿಸುವ ಅಗತ್ಯ ಕಂಡರೆ ಸರ್ಕಾರವೇ ಬಹಿರಂಗಪಡಿಸಬೇಕು ಎಂದು ಹೇಳಿದ್ದೇನೆ’ ಎಂದು ಪ್ರಣವ್‌ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.