ಭಾನುವಾರ, ಮೇ 9, 2021
25 °C

ಅರಣ್ಯ ಹಕ್ಕುಪತ್ರ ಮಂಜೂರಾತಿಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಡಗೋಡ: ಅನುಸೂಚಿತ ಬುಡಕಟ್ಟುಗಳ ಅಧಿನಿಯಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ಪ್ರತಿ ಕುಟುಂಬಕ್ಕೆ ನಾಲ್ಕು ಹೆಕ್ಟೇರ್ ಭೂಮಿ ಮಂಜೂರು ಮಾಡುವಂತೆ ಆಗ್ರಹಿಸಿ ಸಿದ್ದಿ ವಿಕಾಸ ಹಿತರಕ್ಷಣಾ ಟ್ರಸ್ಟ್ ಹಾಗೂ ಗ್ರೀನ್ ಇಂಡಿಯಾ ಟ್ರಸ್ಟ್‌ನ ಸದಸ್ಯರು ಉಪತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಗುರುವಾರ ಮನವಿ ಸಲ್ಲಿಸಿದರು.ಅರಣ್ಯ ಹಕ್ಕು ಮಾನ್ಯ ಮಾಡುವ ಅಧಿನಿಯಮದಲ್ಲಿ ಅರಣ್ಯದಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರಿಗೆ ಅರಣ್ಯ ಜಮೀನಿನ ಹಕ್ಕು ಪತ್ರ ಕೊಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.ತಾಲ್ಲೂಕಿನಾದ್ಯಂತ ಈಗಾಗಲೇ 137 ಕುಟುಂಬಗಳು ಅರ್ಜಿ ಸಲ್ಲಿಸಿದ್ದು ಕೇವಲ 8 ಜನರಿಗೆ ಹಕ್ಕು ಪತ್ರ ನೀಡಲಾಗಿದೆ. ಸರ್ಕಾರ ನೀಡುವ ಸೌಲಭ್ಯಗಳಿಂದ ಬುಡಕಟ್ಟು ಜನಾಂಗವು ವಂಚಿತವಾಗಿದೆ. ಸರ್ಕಾರ ನಿಗದಿಪಡಿಸಿದ ಎಲ್ಲ ಅರ್ಹತೆಗಳನ್ನು ಹೊಂದಿ ಅವಶ್ಯಕ ದಾಖಲೆಗಳನ್ನು ಸಲ್ಲಿಸಿದ್ದರೂ ಕೇವಲ 8 ಕುಟುಂಬಗಳಿಗೆ ಹಕ್ಕು ಪತ್ರ ನೀಡಿರುವುದು ದುರದೃಷ್ಟಕರ ಎಂದರು.

ಹಕ್ಕುಪತ್ರ ಸಿಗಬೇಕಾದ ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆಯಲ್ಲಿ ವಿಳಂಬ ನೀತಿ ಅನುಸರಿಸಲಾಗಿದೆ ಎಂದು ಸದಸ್ಯರು ದೂರಿದ್ದಾರೆ.ಸರ್ಕಾರ ಕೂಡಲೇ ಬುಡಕಟ್ಟು ಜನಾಂಗದವರ ಅರಣ್ಯ ಹಕ್ಕುಪತ್ರ ನೀಡುವಲ್ಲಿ ವಿಳಂಬ ನೀತಿಯನ್ನು ಸರಿಪಡಿಸಿ ಅರ್ಜಿ ಸಲ್ಲಿಸಿದವರಿಗೆ ಅರಣ್ಯ ಭೂಮಿ ಹಕ್ಕುಪತ್ರ ನೀಡಬೇಕು. ಸರ್ವೇ ಯಾದಿಯಿಂದ ತಪ್ಪಿಹೋದ ಕುಟುಂಬಗಳಿಗೂ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಗ್ರೀನ್ ಇಂಡಿಯಾ ಟ್ರಸ್ಟ್‌ನ ಇಬ್ರಾಹಿಂಸಾಬ್ ಎಂ. ಸಿದ್ದಿ, ಇಮಾಮ್ ಎ.ಕೆ.ಸಿದ್ದಿ, ಫ್ರಾನ್ಸಿಸ್ ಜೂಜೆ, ಸಾವೇರ ಸಂತಾನ ಸಿದ್ದಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.