ಶನಿವಾರ, ಜೂನ್ 19, 2021
27 °C

ಆದಿವಾಸಿಗಳಿಗೆ ಸ್ವಾವಲಂಬನೆಯ ಹಾದಿ ರೂಪಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆದಿವಾಸಿಗಳಿಗೆ ಸ್ವಾವಲಂಬನೆಯ ಹಾದಿ ರೂಪಿಸಿ

ಮೈಸೂರು: ತಲೆತಲಾಂತರದಿಂದ ಅರಣ್ಯವನ್ನೇ ನಂಬಿಕೊಂಡು ಬೆಳೆದ ಬುಡಕಟ್ಟು ಜನರಿಗೆ ಸ್ವಾವಲಂಬನೆಯ ಹಾದಿ ಬೇಕು. ಅವರ ಕೈಯಿಂದ ಕೆಲಸ ಕಿತ್ತುಕೊಳ್ಳುವಂತಹ ಅಥವಾ ಅವರನ್ನು ಅವಲಂಬಿತರನ್ನಾಗಿ ಮಾಡುವಂತಹ ಯೋಜನೆಗಳು ಬೇಡ ಎಂದು ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥಾಪಕ ಡಾ.ಆರ್. ಬಾಲಸುಬ್ರಮಣ್ಯ ಹೇಳಿದರು.ಕೇಂದ್ರ ಗೃಹ ಸಚಿವಾಲಯ ಹಾಗೂ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಆಶ್ರಯದಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಫೆಬ್ರುವರಿ 28 ರಿಂದ ನಡೆಯುತ್ತಿರುವ 4ನೇ ಆದಿವಾಸಿ ಯುವ ವಿನಿಮಯ ಕಾರ್ಯಕ್ರಮಕ್ಕೆ ಬಂದಿರುವ ವಿವಿಧ ರಾಜ್ಯಗಳ 500 ಯುವಕ-ಯುವತಿಯರೊಂದಿಗೆ ನೆಹರು ಯುವ ಕೇಂದ್ರವು ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.`ಸರ್ಕಾರದ ಯೋಜನೆಗಳಲ್ಲಿ ಹಲವು ಕೊರತೆ, ನ್ಯೂನತೆಗಳು ಇವೆ. ಆದರೆ ಅದೇ ವ್ಯವಸ್ಥೆಯಲ್ಲಿಯೇ ಇರುವ ಉತ್ತಮ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ  ಆದಿವಾಸಿ ಜನರು ಸೇರಬೇಕು. ಅಂತಹ ಸಾಧನೆಯನ್ನು ಹಲವು ಯುವಕ ಯುವತಿಯರು ಮಾಡಿದ್ದಾರೆ. ಆದಿವಾಸಿಗಳಿಗೆ ಯಾವಾಗಲೂ ಕೊಟ್ಟು ಗೊತ್ತು. ಪಡೆದು ಗೊತ್ತಿಲ್ಲ. ಆದರೆ ಈಗ ಮತ್ತೊಮ್ಮೆ ಅವರು ಕೊಡುಗೈ ಜನರಾಗಿ ಬೆಳೆಯಬೇಕು~ ಎಂದು ಮಾರ್ಮಿಕವಾಗಿ ನುಡಿದರು.`ಅಂತ್ಯೋದಯ ಕಾರ್ಡ್ ಮೂಲಕ ಬುಡಕಟ್ಟು ಜನರಿಗೆ ಪಡಿತರ ವಿತರಿಸುವ 3.5 ಲಕ್ಷ ಕೋಟಿ ರೂಪಾಯಿ ಯೋಜನೆ ಇದೆ. ಈ ಯೋಜನೆಯಲ್ಲಿ ಹಾಡಿಗಳಲ್ಲಿ ಪಡಿತರ ಅಂಗಡಿಯನ್ನು ಪಡೆದು ಅದನ್ನು ನಿಭಾಯಿಸುವ ನಟರಾಜ್, ನರ್ಸ್ ತರಬೇತಿ ಪಡೆದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಬುಡಕಟ್ಟು ಜನರ ಸೇವೆ ಮಾಡುತ್ತಿರುವ ಜಯಮ್ಮ ಮತ್ತು ರಾಜಕೀಯದಲ್ಲಿರುವ ಮೀಸಲಾತಿಯ ಸದುಪಯೋಗ ಮಾಡಿಕೊಂಡು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿರುವ  ಸೋಲಿಗ ಜನಾಂಗದ ಕೇತಮ್ಮ ಅವರ ಸಾಧನೆ ಎಲ್ಲರಿಗೂ ಮಾದರಿ~ ಎಂದು ವಿವರಿಸಿದರು.`ಇಂತಹ ಕಾರ್ಯಕ್ರಮಗಳು ಗಿರಿಜನರ ಹಾಡಿಗಳಲ್ಲಿಯೇ ನಡೆಯಬೇಕು. ಇದರಿಂದ ಹೊರಗಿನಿಂದ ಬಂದ ಆದಿವಾಸಿಗಳೊಂದಿಗೆ ಹಾಡಿಗಳ ಗಿರಿಜನರು ಹೆಚ್ಚಿನ ವಿಚಾರ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅದೇ ಸಂದರ್ಭದಲ್ಲಿ ಇಲ್ಲಿಯ ಹಾಡಿಗಳ ಸಮಸ್ಯೆ, ಜೀವನಶೈಲಿಗಳನ್ನು ಅಧ್ಯಯನ ಮಾಡಲು ಹೊರಗಿನಿಂದ ಬಂದವರಿಗೂ ಸಾಧ್ಯವಾಗುತ್ತದೆ~ ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಅಡಗೂರು ಎಚ್. ವಿಶ್ವನಾಥ್, `ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆದಿವಾಸಿಗಳ ಕಲ್ಯಾಣಕ್ಕಾಗಿ ಕೋಟ್ಯಂತರ ರೂಪಾಯಿಗಳನ್ನು ವಿನಿಯೋಗಿಸುತ್ತಿವೆ. ಅದರ ಸದುಪಯೋಗವನ್ನು ಜನರು ಪಡೆಯಬೇಕು. ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಆದಿವಾಸಿಗಳಿಗಾಗಿಯೇ ಕ್ರೀಡಾ ಶಾಲೆಯೊಂದನ್ನು ಆರಂಭಿಸಲಾಗಿತ್ತು. ಬುಡಕಟ್ಟು ಜನರಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವ ಯೋಜನೆ ಅದಾಗಿತ್ತು~ ಎಂದು ತಿಳಿಸಿದರು.ಮುಖ್ಯ ಅತಿಥಿ ಸಂಸದ ಆರ್.ಧ್ರುವನಾರಾಯಣ ಮಾತನಾಡಿ `ಆದಿವಾಸಿಗಳಿಗಾಗಿ ಸರ್ವ ಶಿಕ್ಷಣ ಆಭಿಯಾನ ಮತ್ತು ಆರೋಗ್ಯ ಮಿಷನ್ ಕಾರ್ಯಕ್ರಮಗಳನ್ನು ಚಾಮರಾಜನಗರ ಜಿಲ್ಲೆಯಲ್ಲಿ ಉತ್ತಮವಾಗಿ ಅನುಷ್ಠಾನಗೊಳಿಸಲಾಗಿದೆ. ಅಲ್ಲಿಯ ಜನಸಂಖ್ಯೆಯ ಶೇ 45ರಷ್ಟು ಬುಡಕಟ್ಟು ಜನರು ಇದ್ದಾರೆ. ಅವರ ಕಲ್ಯಾಣಕ್ಕಾಗಿ ಹಲವು ಯೋಜನೆಗಳು ಜಾರಿಯಲ್ಲಿವೆ~ ಎಂದರು.ನೆಹರು ಯುವ ಕೇಂದ್ರದ ಸಂಯೋಜಕ ನಟರಾಜ್ ಸ್ವಾಗತಿಸಿದರು. ಆರ್. ನಟರಾಜನ್. ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಬಿ.ಪಿ.ಮಂಜುನಾಥ್, ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಎಂ.ನಂಜುಂಡಸ್ವಾಮಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಡಾ.ಶಿವರಾಂ, ಡೀಡ್ ಸಂಸ್ಥೆಯ ನಂಜುಂಡಯ್ಯ, ಪ್ರೊ.ವಸಂತಮ್ಮ, ಬಿ.ಟಿ.ನಾಯಕ್ ಮತ್ತಿತರರು ಹಾಜರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.