ಸೋಮವಾರ, ಸೆಪ್ಟೆಂಬರ್ 23, 2019
22 °C

ಆನೆ ಪಥದಲ್ಲಿ ಮನುಷ್ಯರ ಹೆಜ್ಜೆಗಳು!

Published:
Updated:

ಮನುಷ್ಯರ ಜಾಗಕ್ಕೆ ಆನೆಗಳು ಬರುತ್ತಿವೆಯೋ? ಆನೆಗಳ ಜಾಗಕ್ಕೆ ನಾವು ಹೋಗಿರುವೆವೊ? ಆನೆಗಳ ದಿನದಂದು ನಮ್ಮನ್ನು ನಾವು ಕೇಳಿಕೊಳ್ಳಬೇಕಾದ ಪ್ರಶ್ನೆಗಳಿವು. ಈ ಪ್ರಶ್ನೆಗಳು ನಿಮ್ಮವೂ ಆಗಿದ್ದರೆ 

---

ಆನೆ ನಡೆದದ್ದೇ ದಾರಿ ಎನ್ನುವ ಮಾತೊಂದಿದೆ. ಗಜಗಾತ್ರ ಹಾಗೂ ಅದರ ದೈತ್ಯ ಶಕ್ತಿಯ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿರುವ ಮಾತಿದು. ಆದರೆ, ವರ್ತಮಾನದ ಪರಿಸ್ಥಿತಿ ನೋಡಿ: ಆನೆಯ ದಾರಿಯಲ್ಲಿ ಬೇರೆಯ ಹೆಜ್ಜೆಗಳು ಕಾಣಿಸಿಕೊಳ್ಳುತ್ತಿವೆ. ತನ್ನ ಖಾಸಗಿತನಕ್ಕೆ, ಬದುಕಿಗೆ ಎದುರಾಗಿ ಕಾಣಿಸುತ್ತಿರುವ ಈ ಹೆಜ್ಜೆಗಳನ್ನು ನೋಡಿ ಕಂಗಾಲಾಗುವ ಸರದಿ ಆನೆಯದ್ದು! ‘ಆನೆಗಳ ಕಾರಿಡಾರ್‌’ನಲ್ಲಿ ಮೂಡುತ್ತಿರುವ ಮನುಷ್ಯನ ಹೆಜ್ಜೆಗಳನ್ನು ನೋಡಿದರೆ, ಎಂಥ ದೈತ್ಯ ಆನೆಯೂ ಬೆಚ್ಚಿಬೀಳಬೇಕು.

ಅಂದಹಾಗೆ, ‘ಆನೆಗಳ ಕಾರಿಡಾರ್‌’ ಎಂದರೇನು? ಸರಳವಾಗಿ, ಆನೆಗಳು ಸಂಚರಿಸುವ ಸ್ವಾಭಾವಿಕ ಮಾರ್ಗವನ್ನೇ ‘ಆನೆ ಪಥ’ ಅಥವಾ ‘ಆನೆ ಮೊಗಸಾಲೆ’ (ಎಲಿಫೆಂಟ್‌ ಕಾರಿಡಾರ್‌) ಎನ್ನಬಹುದು. ಆನೆಗಳ ಕುಟುಂಬ ನೀರು–ಮೇವು ಹುಡುಕಿಕೊಂಡು ಒಂದು ಕಾಡಿನಿಂದ ಇನ್ನೊಂದು ಕಾಡಿಗೆ ಸಂಚರಿಸುತ್ತವೆ. ಒಂದು ವರ್ಷದಲ್ಲಿ ಆನೆಯ ಕುಟುಂಬವೊಂದು ಸಂಚರಿಸಲು 1 ಸಾವಿರ ಚ.ಕಿ.ಮೀ ಹೆಚ್ಚು ಅರಣ್ಯ ಪ್ರದೇಶ ಬೇಕು. ಹೀಗೆ ಸಂಚರಿಸುವ ನಿರ್ದಿಷ್ಟ ಮಾರ್ಗವೇ ‘ಆನೆ ಪಥ’.

ಆನೆ ನಡೆವ ದಾರಿಯಲ್ಲಿ...

ಆನೆ ನಮ್ಮ ರಾಷ್ಟ್ರೀಯ ಪಾರಂಪರಿಕ ಪ್ರಾಣಿ. ಮಾನವನಂತೆಯೇ ಆನೆಯೂ ಸಂಘ ಜೀವಿ. ಕಾಡಾನೆಗಳ ಕೌಟುಂಬಿಕ ಬದುಕು ಮಾತೃಪ್ರಧಾನ ವ್ಯವಸ್ಥೆಯಿಂದ ಕೂಡಿದೆ. ಹಿರಿಯ ಹೆಣ್ಣಾನೆಯೇ ಗುಂಪಿನ ಅಧಿನಾಯಕಿ. ಆಕೆಯ ಸೋದರಿ, ಮಕ್ಕಳು ಆ ಕುಟುಂಬದ ಸದಸ್ಯರು. ಹಲವು ಸೋದರ ಸಂಬಂಧಿ ಗುಂಪುಗಳು ಸೇರಿ ಆನೆಯ ವಂಶವೊಂದು ಜನ್ಮ ತಳೆಯುತ್ತದೆ. ಈ ವಂಶದಲ್ಲಿ 60ರಿಂದ 90 ಆನೆಗಳು ಇರುತ್ತವೆ. ಸದಾಕಾಲ ಚಲಿಸುವುದೇ ಅವುಗಳ ವಿಶಿಷ್ಟ ಗುಣ. ಮರಿಗಳ ಲಾಲನೆ, ಪಾಲನೆ ಮಾಡುವುದು ಚಿಕ್ಕಮ್ಮ ಆನೆಯ ಕೆಲಸ.

ಮನುಷ್ಯರಂತೆ ಆನೆಗಳಲ್ಲೂ ಗಂಡು ಕೊಂಚ ಪುಂಡು ಧೋರಣೆ ಹೊಂದಿರುತ್ತವೆ. ಗಂಡಾನೆ ಮರಿಗಳು ಮಾತೃಪ್ರಧಾನ ವ್ಯವಸ್ಥೆಯ ನೀತಿ–ನಿಯಮ ಪಾಲಿಸುವುದಿಲ್ಲ. ಸುಮಾರು 10 ವರ್ಷ ಪ್ರಾಯ ತಲುಪುವ ವೇಳೆಗೆ ಅವುಗಳು ಅಮ್ಮ, ಚಿಕ್ಕಮ್ಮನ ಅಕ್ಕರೆ ಕಳೆದುಕೊಂಡು ಗುಂಪಿನಿಂದ ಹೊರದೂಡಲ್ಪಡುತ್ತವೆ. ಹವಾಮಾನ ವೈಪರೀತ್ಯ ಹಾಗೂ ನೈಸರ್ಗಿಕವಾಗಿ ಕಾಡುವ ರೋಗಗಳಿಂದ ಪಾರಾಗಿ ಬದುಕುಳಿಯಲು ಸದೃಢ ತಳಿಗಳು ಅತಿಮುಖ್ಯ. ಇಂಥ ಸಂದರ್ಭದಲ್ಲಿ ವನ್ಯಜೀವಿಗಳು ಕಾಡಿನಿಂದ ಇನ್ನೊಂದು ಕಾಡಿಗೆ ತೆರಳಲು ಸಂಪರ್ಕ ದಾರಿಗಳು ಇರಬೇಕು.

ಈ ಸಂಪರ್ಕ ದಾರಿಗಳು ನಾಶವಾದರೆ ಅಥವಾ ಅವುಗಳಲ್ಲಿ ಅಡೆತಡೆ ಉಂಟಾದರೆ ಜೀವಿಗಳು ತಮ್ಮ ತಳಿ ವೈವಿಧ್ಯವನ್ನು ಕಳೆದುಕೊಳ್ಳುತ್ತವೆ. ಆ ಕಾರಣದಿಂದಲೇ ‘ಕಾರಿಡಾರ್‌’ಗಳು ವನ್ಯಜೀವಿಗಳ ವಂಶಾಭಿವೃದ್ಧಿಯಲ್ಲಿ ಪ್ರಧಾನ ಪಾತ್ರವಹಿಸುತ್ತವೆ. ಹರಿದು -ಹಂಚಿಹೋಗಿರುವ ಕಾಡುಪ್ರಾಣಿಗಳ ಆವಾಸಗಳನ್ನು ಒಗ್ಗೂಡಿಸಲು, ಮನುಷ್ಯ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ತಡೆಗಟ್ಟುವಲ್ಲಿ ಕಾರಿಡಾರ್‌ಗಳು ಮಹತ್ವದ ಪಾತ್ರವಹಿಸುತ್ತವೆ. ಆದರೆ, ಪ್ರಸ್ತುತ ಈ ಕಾರಿಡಾರ್‌ಗಳು ಅನೇಕ ಕಾರಣಗಳಿಂದಾಗಿ ತುಂಡುತುಂಡಾಗುತ್ತಿವೆ.

ಆನೆ ಅಪಾಯದ ಅಂಚಿನಲ್ಲಿರುವ ಜೀವಿ. ಕಾಡಾನೆಗಳ ಸಂರಕ್ಷಣೆಯಲ್ಲಿ ಈ ಮೊಗಸಾಲೆಗಳದ್ದು ಪ್ರಧಾನ ಪಾತ್ರ. ಋತುಮಾನಕ್ಕೆ ಅನುಗುಣವಾಗಿ ನೀರು, ನೆರಳು, ಆಹಾರ, ಸಂತಾನೋತ್ಪತ್ತಿಗಾಗಿ ಅರಣ್ಯದಿಂದ ಮತ್ತೊಂದು ಅರಣ್ಯಕ್ಕೆ ಸಾಗಲು ‘ಆನೆ ಪಥ’ ಮಹತ್ವಪೂರ್ಣ ಪಾತ್ರವಹಿಸುತ್ತದೆ. ಇವತ್ತಿನ ಪರಿಸ್ಥಿತಿ ನೋಡಿ– ಅಭಿವೃದ್ಧಿ ಹೆಸರಿನಲ್ಲಿ ‘ಆನೆ ಮೊಗಸಾಲೆ’ಗಳು ಹರಿದು ಹಂಚಿಹೋಗಿವೆ. ಕೆಲವೆಡೆ ಕೃಷಿ ಭೂಮಿಯಾಗಿ ಪರಿವರ್ತನೆಗೊಂಡಿವೆ. ಸಂತ್ರಸ್ತರಿಗೆ ಪುನರ್ವಸತಿ, ಅರಣ್ಯ ನಾಶ, ಒತ್ತುವರಿ– ಈ ಎಲ್ಲದರ ಪರಿಣಾಮ ‘ಆನೆ ಪಥ’ಗಳು ನಲುಗಿವೆ. ಆನೆಗಳು ಸಾಗುವ ಹಾದಿಯಲ್ಲಿ ಅಕ್ರಮ ಗಣಿಗಾರಿಕೆ, ಹೆದ್ದಾರಿಗಳ ನಿರ್ಮಾಣ, ಜಾನುವಾರು ಸಾಕಾಣಿಕೆ, ಗ್ರಾಮೀಣರಿಂದ ಸೌದೆ, ಸೊಪ್ಪು ಸಂಗ್ರಹ– ಹೀಗೆ ಕಾರಿಡಾರ್‌ಗಳ ರೂಪುರೇಷೆ ವ್ಯತ್ಯಯವಾಗಲು ಕಾರಣ ಒಂದೆರಡಲ್ಲ.

ಅವೈಜ್ಞಾನಿಕ ನೀತಿ

ಆನೆಗಳ ಕಾರಿಡಾರ್‌ ವ್ಯಾಪ್ತಿಯಲ್ಲಿ ಶ್ರೀಮಂತರ ವೈಭವೋಪೇತ ಬದುಕಿಗಾಗಿ ರೆಸಾರ್ಟ್‌, ಹೋಂ ಸ್ಟೇಗಳು ತಲೆಎತ್ತಿವೆ. ಪರಿಸರ ಪ್ರವಾಸೋದ್ಯಮದ (ಎಕೊ ಟೂರಿಸಂ) ಹೆಸರಿನಲ್ಲಿ ರೂಪುಗೊಂಡಿರುವ ಅವೈಜ್ಞಾನಿಕ ನೀತಿಗಳಿಂದ ಕಾರಿಡಾರ್‌ಗಳಿಗೆ ದೊಡ್ಡ ಅಪಾಯ ಎದುರಾಗಿದೆ. ಆನೆಗಳ ದಾರಿಯ ಸುತ್ತಮುತ್ತ ಜನವಸತಿ ಪ್ರದೇಶಗಳೂ ಹೆಚ್ಚುತ್ತಿವೆ. ಅವೈಜ್ಞಾನಿಕವಾದ ಬೇಸಾಯ ಚಟುವಟಿಕೆ ಮಿತಿಮೀರಿದೆ. ಅತಿಕ್ರಮಣಕಾರಿ ಸಸ್ಯಪ್ರಭೇದಗಳಿಂದ ಮರಗಿಡಗಳ ಬೆಳವಣಿಗೆ ಕುಂಠಿತಗೊಳ್ಳುತ್ತಿದೆ. ಆಹಾರ ಸರಪಳಿ ತಂಡಾಗಿ ಆನೆಗಳು ದಿಕ್ಕುತಪ್ಪುತ್ತಿವೆ.

ಕಾಡಂಚಿನ ಪ್ರದೇಶ, ಕಾಯ್ದಿಟ್ಟ ಅರಣ್ಯ, ಕಂದಾಯ ಇಲಾಖೆಗೆ ಸೇರಿದ ವಿವಿಧ ಬಗೆಯ ಕಾಡು ಅರಣ್ಯದ ವ್ಯಾಪ್ತಿಗೆ ಸೇರಿಲ್ಲ. ಮತ್ತೊಂದೆಡೆ ಆನೆ ಪಥಗಳು ವಾಣಿಜ್ಯ ಚಟುವಟಿಕೆಗಳಿಗೆ ಸದ್ದಿಲ್ಲದೆ ಬಳಕೆಯಾಗುತ್ತಿವೆ. ಹೀಗಾಗಿ, ಅರಣ್ಯ ಮತ್ತು ಆನೆ ಮೊಗಸಾಲೆಗಳ ನಡುವಿನ ಸಂಪರ್ಕದ ಕೊಂಡಿ ಕಳಚಿದೆ. ಇದರಿಂದ ಮಾನವ ಮತ್ತು ಆನೆಗಳ ನಡುವಿನ ಸಂಘರ್ಷ ಹೆಚ್ಚುತ್ತಿದೆ. ಈ ಸಂಘರ್ಷದಲ್ಲಿ ಪ್ರತಿವರ್ಷ ಸುಮಾರು 50 ಆನೆಗಳು ಹಾಗೂ 200 ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಅಂದಹಾಗೆ, ಈ ‘ಆನೆ ಕಾರಿಡಾರ್‌’ಗಳನ್ನು ಕೇವಲ ಕಾಡಾನೆಗಳು ಮಾತ್ರ ಬಳಸುವುದಿಲ್ಲ. ಹುಲಿ, ಚಿರತೆ, ಕರಡಿ, ಜಿಂಕೆ, ಕಾಡೆಮ್ಮ, ಕೆನ್ನಾಯಿಗಳೂ ಬಳಸುತ್ತವೆ. ಹೀಗಿದ್ದರೂ, ಕಾರಿಡಾರ್‌ಗಳ ಸಂರಕ್ಷಣೆಯಲ್ಲಿ ನಿರೀಕ್ಷಿತ ಪ್ರಗತಿ ಕಂಡುಬರುತ್ತಿಲ್ಲ.

ಆನೆಗಳ ಭವಿಷ್ಯ

ಆನೆ ಗಣತಿ ಪ್ರಕಾರ ಭಾರತದಲ್ಲಿ ಸುಮಾರು 26 ಸಾವಿರ ಆನೆಗಳಿವೆ ಎಂದು ಅಂದಾಜಿಸಲಾಗಿದೆ. ಈ ಪೈಕಿ ದಕ್ಷಿಣ ಭಾರತದಲ್ಲಿ ಸುಮಾರು 12 ಸಾವಿರ ಕಾಡಾನೆಗಳಿವೆ. ಕರ್ನಾಟಕದಲ್ಲಿಯೇ 6 ಸಾವಿರಕ್ಕೂ ಹೆಚ್ಚು ಆನೆಗಳಿವೆ. ಪ್ರತಿದಿನ ಆನೆಯೊಂದು ಪ್ರತಿದಿನ 150ರಿಂದ 200 ಕೆಜಿಯಷ್ಟು ಮೇವು ತಿನ್ನುತ್ತದೆ. ಅದಕ್ಕೆ 200 ಲೀಟರ್‌ಗಳಷ್ಟು ನೀರು ಬೇಕು. ಆನೆಯೊಂದು ಸಂಚರಿಸಲು 450ರಿಂದ 500 ಚ.ಕಿ.ಮೀ. ಅರಣ್ಯ ಪ್ರದೇಶ ಅತ್ಯಾವಶ್ಯಕ.

ಕರ್ನಾಟಕದಲ್ಲಿ ಸರ್ಕಾರದ ಅಧಿಕೃತ ದಾಖಲೆ ಪ್ರಕಾರವೇ 67 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ ಒತ್ತುವರಿಯಾಗಿದೆ. ತಮ್ಮ ಆವಾಸ ಸ್ಥಾನದಲ್ಲಿ ಮಾನವ ನಿರ್ಮಿತ ಒತ್ತಡಗಳಿಂದ ನೆರಳು, ಮೇವಿಗಾಗಿ ಹಾದಿ ತಪ್ಪುವ ಆನೆಗಳು ಕಾಡಿನಿಂದ ನಗರ, ಪಟ್ಟಣ, ಜನವಸತಿ ಹಳ್ಳಿಗಳತ್ತ ನುಗ್ಗುತ್ತವೆ. ಇದರಿಂದ ಮನುಷ್ಯ ಮತ್ತು ಆನೆಗಳ ನಡುವೆ ಸಂಘರ್ಷ ಹೆಚ್ಚುತ್ತಿದೆ. ಸಂಘರ್ಷವು ಇಬ್ಬರಲ್ಲಿ ಒಬ್ಬರ ಸಾವಿನೊಂದಿಗೆ ಅಂತ್ಯ ಕಾಣುತ್ತಿರುವುದು ದುರಂತ. ಪರಿಸರ ಸಂರಕ್ಷಣೆಗಾಗಿ ಅಂತರರಾಷ್ಟ್ರೀಯ ಒಕ್ಕೂಟ (ಐಯುಸಿಎನ್) ಪ್ರಕಟಿಸಿರುವ ವರದಿ ಪ್ರಕಾರ ಆನೆಯು ಅಪಾಯದ ಅಂಚಿನಲ್ಲಿರುವ ಜೀವಿ. ವಿದ್ಯುತ್‌ ಸ್ಪರ್ಶ, ದಂತಕ್ಕಾಗಿ ಆನೆ ಹತ್ಯೆಯಂತಹ ಕೃತ್ಯಗಳು ಮುಂದುವರಿದರೆ ಅಳಿವಿನಂಚಿಗೆ ಸಾಗಿ ಭವಿಷ್ಯದಲ್ಲಿ ನಶಿಸಿಹೋದರೂ ಸೋಜಿಗಪಡಬೇಕಿಲ್ಲ.

ಮೂಲ ನೆಲೆ

ಕರ್ನಾಟಕದ ಮಟ್ಟಿಗೆ ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಜೀವಿಧಾಮ, ಮಲೆಮಹದೇಶ್ವರ ವನ್ಯಜೀವಿಧಾಮ, ಬಿಳಿಗಿರಿರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯ, ಬಂಡೀಪುರ ರಾಷ್ಟ್ರೀಯ ಉದ್ಯಾನ, ಮೈಸೂರು ಜಿಲ್ಲೆಗೆ ಸೇರಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವು ಕನ್ನಡ ನಾಡಿನಲ್ಲಿರುವ ಆನೆಗಳಿಗೆ ಮೂಲ ನೆಲೆ. ದಕ್ಷಿಣ ಭಾರತದಲ್ಲಿ ತಮಿಳುನಾಡು, ಕೇರಳ ಹಾಗೂ ಕರ್ನಾಟಕದ ಪಶ್ಚಿಮಘಟ್ಟಗಳ ಅಂಚಿನವರೆಗೂ ‘ಆನೆ ಕಾರಿಡಾರ್್’ ವಿಸ್ತರಿಸಿದೆ. ರಾಜ್ಯದಲ್ಲಿ ಪಶ್ಚಿಮಘಟ್ಟ ಪ್ರದೇಶ ಆರಂಭವಾಗುವ ಮಲೆಮಹದೇಶ್ವರ ವನ್ಯಜೀವಿಧಾಮದಿಂದ ಆನೆ ಕಾರಿಡಾರ್ ಪ್ರಾರಂಭವಾಗುತ್ತದೆ.

ಇದಕ್ಕೂ ಮೊದಲಿನ ತಮಿಳುನಾಡಿನ ತಳಿ ತಂಡಾ ಅರಣ್ಯ ಪ್ರದೇಶವು ರಾಜ್ಯಕ್ಕೆ ಆನೆಗಳು ಪ್ರವೇಶಿಸುವ ಆರಂಭದ ಮಾರ್ಗ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಕನಕಪುರ ಅರಣ್ಯ ವಲಯ, ಕರಡಿಕಲ್, ಮಲೆಮಹದೇಶ್ವರ ವನ್ಯಜೀವಿಧಾಮ, ಬಿಳಿಗಿರಿರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯ, ಪುಣಜನೂರು, ಕೋಳಿಪಾಳ್ಯ ಆನೆ ಕಾರಿಡಾರ್‌ಗಳ ಮೂಲಕ ಕಾಡಾನೆಗಳು ಸಂಚರಿಸುತ್ತವೆ. ಮುಂದೆ ಸತ್ಯಮಂಗಲ ಹುಲಿ ರಕ್ಷಿತಾರಣ್ಯ, ಮಧುಮಲೈ, ಕೇರಳದ ವೈನಾಡಿನ ಉತ್ತರ ಭಾಗ, ಬ್ರಹ್ಮಗಿರಿ ಅರಣ್ಯ ಪ್ರದೇಶದವರೆಗೆ ಕಾರಿಡಾರ್ ವಿಸ್ತರಿಸಿದೆ.

ಮೊಗಸಾಲೆಗಳ ಕಥೆ–ವ್ಯಥೆ

ಬಹುಮುಖ್ಯವಾಗಿ ಕರ್ನಾಟಕದಲ್ಲಿ ಕರಡಿಕಲ್‌–ಮಹದೇಶ್ವರ, ತಳಿ (ತಮಿಳುನಾಡು ಮತ್ತು ಕರ್ನಾಟಕ ನಡುವೆ ಸಂಪರ್ಕ ಬೆಸೆಯುತ್ತದೆ), ಎಡೆಯರಹಳ್ಳಿ–ದೊಡ್ಡಸಂಪಿಗೆ, ಚಾಮರಾಜನಗರ–ತಲಮಲೈ (ಪರ್ಯಾಯ ಹೆಸರು ಪುಣಜನೂರು– ಕೋಳಿಪಾಳ್ಯ ಕಾರಿಡಾರ್‌), ಚಾಮರಾಜನಗರ–ತಲಮಲೈ–ಮೂಡಳ್ಳಿ (ಪರ್ಯಾಯ ಹೆಸರು ತಲಮಲೈ–ಮೂಡಳ್ಳಿ ಕಾರಿಡಾರ್‌) ಹಾಗೂ ಕಣಿಯನಪುರ– ಈ ಪರಿಸರವನ್ನು ‘ಆನೆ ಕಾರಿಡಾರ್‌’ ಎಂದು ಗುರುತಿಸಲಾಗಿದೆ.

ಬಹುತೇಕವಾಗಿ ಈ ಕಾರಿಡಾರ್‌ಗಳ ಅಗಲ ಮತ್ತು ಉದ್ದ ಕಿರಿದಾಗಿದೆ. ಕಾರಿಡಾರ್‌ನಲ್ಲಿ ಜನವಸತಿ ಹೆಚ್ಚಳ, ಉರುವಲು ಸಂಗ್ರಹ ಮಿತಿಮೀರಿದೆ. ಕಾರಿಡಾರ್‌ಗಳು ಒತ್ತುವರಿಯಾಗಿವೆ. ಆನೆ ಪಥದ ಅಂಚಿನಲ್ಲಿ ಕರಿಕಲ್ಲು ಗಣಿಗಾರಿಕೆಯ ಹಾವಳಿ ಎಲ್ಲೆ ಮೀರಿದೆ. ಭೂಮಿ ಬಗೆದು ಕರಿಕಲ್ಲು ಹೊರತೆಗೆಯಲು ಸಿಡಿಮದ್ದು ಬಳಸಲಾಗುತ್ತದೆ. ಈ ಶಬ್ದಕ್ಕೆ ಆನೆಗಳು ಜನವಸತಿ ಪ್ರದೇಶಗಳತ್ತ ನುಗ್ಗುತ್ತಿವೆ.

ಚಾಮರಾಜನಗರ ಜಿಲ್ಲೆಯಲ್ಲಿಯೇ ನಾಲ್ಕು ಆನೆ ಕಾರಿಡಾರ್‌ ಬರುತ್ತವೆ. ಈ ಪೈಕಿ ಎಡೆಯರಹಳ್ಳಿ – ದೊಡ್ಡಸಂಪಿಗೆ ಕಾರಿಡಾರ್‌ ಬಹುಮುಖ್ಯವಾದುದು. ‘ಬಿಆರ್‌ಟಿ’ ಹುಲಿ ರಕ್ಷಿತಾರಣ್ಯಕ್ಕೆ ಸೇರಿಸುವ ಈ ಕಾರಿಡಾರ್‌ನಲ್ಲಿ ಆನೆಗಳು ಸಾಗಲು ಕೊಳ್ಳೇಗಾಲ – ಸತ್ಯಮಂಗಲ ಹೆದ್ದಾರಿ ಪ್ರದೇಶದಲ್ಲಿನ ಅತಿಯಾದ ಕೃಷಿ ಚಟುವಟಿಕೆ ಅಡ್ಡಿಯಾಗಿದೆ. ಈ ಮೊಗಸಾಲೆಯ ಉದ್ದ ಅರ್ಧ ಕಿ.ಮೀ. ಇದ್ದು, ಅಗಲ 2 ಕಿ.ಮೀ.ನಷ್ಟಿದೆ. 2009ರಲ್ಲಿ ‘ವೈಲ್ಡ್‌ಲೈಫ್‌ ಟ್ರಸ್ಟ್‌ ಆಫ್‌ ಇಂಡಿಯಾ’ ಸಂಸ್ಥೆಯು ಕಾರಿಡಾರ್‌ ಬಳಿ ಒತ್ತುವರಿಯಾಗಿದ್ದ 25 ಎಕರೆ ಕಂದಾಯ ಜಮೀನು ಖರೀದಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿತ್ತು. ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಆನೆಗಳ ಸಂರಕ್ಷಣೆಗೆ ಭೂಮಿ ಖರೀದಿಸಿ ಕೊಟ್ಟ ದಾಖಲೆ ಇದಾಗಿದೆ.

ಚಾಮರಾಜನಗರ–ತಲಮಲೈ ಮೊಗಸಾಲೆ ಸುತ್ತಮುತ್ತ ಏಳು ಹಳ್ಳಿಗಳು ಬರುತ್ತವೆ. ಈ ಮೊಗಸಾಲೆಯ ಉದ್ದ ಕೇವಲ 3,600ರಿಂದ 4,050 ಮೀಟರ್‌ ಇದೆ. ಅಗಲ  40ರಿಂದ 100 ಮೀಟರ್‌. ಮೊಗಸಾಲೆ ವ್ಯಾಪ್ತಿಯಲ್ಲಿ ಜಾನುವಾರು ಹಾವಳಿ, ಕಿರು ಅರಣ್ಯ ಉತ್ಪನ್ನ ಸಂಗ್ರಹ ಹೆಚ್ಚಿದೆ. ‘ಬೆಂಗಳೂರು – ಸತ್ಯಮಂಗಲ ಹೆದ್ದಾರಿ – 209’ ಈ ಕಾರಿಡಾರ್‌ನಲ್ಲಿಯೇ ಹಾದುಹೋಗಿದೆ. ಹೀಗಾಗಿ, ಆನೆಗಳ ಒಡಾಟಕ್ಕೆ ವಾಹನಗಳ ಸಂಚಾರ ಸಂಚಕಾರ ತಂದಿದೆ. ವಾಹನಗಳ ಮಿತಿಮೀರಿದ ವೇಗಕ್ಕೆ ಆನೆ ಸೇರಿದಂತೆ ವನ್ಯಜೀವಿಗಳು ಜೀವ ಕಳೆದುಕೊಂಡಿರುವ ನಿದರ್ಶನಗಳಿವೆ.

ಚಾಮರಾಜನಗರ– ತಲಮಲೈ– ಮೂಡಳ್ಳಿ ಕಾರಿಡಾರ್‌ನ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಈ ಮೊಗಸಾಲೆಯ ಉದ್ದ 1.5 ಕಿ.ಮೀ. ಇದ್ದು, ಅಗಲ ಕೇವಲ 200ರಿಂದ 300 ಮೀಟರ್‌ ಇದೆ. ಈ ಕಾರಿಡಾರ್‌ ಅವಲಂಬಿಸಿರುವ ಹಳ್ಳಿಗಳ ಸಂಖ್ಯೆ ಐದು. ಈ ಎರಡು ಮೊಗಸಾಲೆಗಳು ಚಾಮರಾಜನಗರ ಮತ್ತು ಸತ್ಯಮಂಗಲ ಅರಣ್ಯದ ನಡುವೆ ಆನೆಗಳ ಸಂಪರ್ಕದ ಕೊಂಡಿಯಾಗಿವೆ. ಈ ಕಾರಿಡಾರ್‌ ವ್ಯಾಪ್ತಿಯಲ್ಲಿ ಜನರು ಕಿರುಅರಣ್ಯ ಉತ್ಪನ್ನಗಳ ಸಂಗ್ರಹಕ್ಕಾಗಿ ಬೆಂಕಿ ಹಾಕುವುದು ಹೆಚ್ಚು. ಸೌದೆ ಸಂಗ್ರಹ, ಜಾನುವಾರು ಹಾವಳಿ ಮಿತಿಮೀರಿದೆ.

ಕಣಿಯನಪುರ – ಮಾಯಾರ್‌ ಮೊಗಸಾಲೆಯು ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿದೆ. ಕರ್ನಾಟಕ, ತಮಿಳುನಾಡು ಮತ್ತು ಕೇರಳದ ಅರಣ್ಯ ಪ್ರದೇಶ ಒಳಗೊಂಡು ರಚಿಸಿರುವ ನೀಲಗಿರಿ ಜೈವಿಕ ವಲಯಕ್ಕೆ ಆನೆಗಳ ಪ್ರವೇಶಕ್ಕೆ ಇದೇ ಹೆಬ್ಬಾಗಿಲು. ಈ ಮೊಗಸಾಲೆಯ ಉದ್ದ ಒಂದು ಕಿ.ಮೀ.ನಷ್ಟಿದೆ. ಅಗಲ ಕೇವಲ 0.4 ಕಿ.ಮೀ. ಅತಿಕಿರಿದಾದ ಈ ಪಥದಲ್ಲಿ ಆನೆಗಳ ಸಂಚಾರಕ್ಕೆ ಅಡ್ಡಿಯೇ ಹೆಚ್ಚು. ಮೊಗಸಾಲೆಯ ವ್ಯಾಪ್ತಿಯಲ್ಲಿ ಬರುವ ಕಂದಾಯ ಜಮೀನು ಖರೀದಿಸಿ ‘ಆನೆ ಪಥ’ ವಿಸ್ತರಿಸುವ ಅರಣ್ಯ ಇಲಾಖೆಯ ಪ್ರಯತ್ನ ಆಮೆಗತಿಯಲ್ಲಿ ಸಾಗಿದೆ. ಮಾನವನ ಹಸ್ತಕ್ಷೇಪದಿಂದ ಆನೆ ಕಾರಿಡಾರ್‌ಗಳು ಗುಣಮಟ್ಟ ಕಳೆದುಕೊಳ್ಳುತ್ತಿವೆ. ಮಾನವ ವಿವೇಚನೆ ಜಾಗೃತಗೊಳ್ಳಬೇಕಿದೆ. ಆಗ ಮಾತ್ರ ಕಾರಿಡಾರ್‌ಗಳು ಉಳಿಯಲಿವೆ. ಈ ನಿಟ್ಟಿನಲ್ಲಿ ಸರ್ಕಾರಗಳ ಜವಾಬ್ದಾರಿಯೂ ನಾಗರಿಕರ ನೈತಿಕತೆಯೂ ಹೆಚ್ಚಾಗಬೇಕಿದೆ.

ಕಾಡುಗಳ  ದ್ವೀಪ ಸ್ವರೂಪ

ಮನುಷ್ಯ ಅಲೆಮಾರಿ ಜೀವನ ತ್ಯಜಿಸಿ ಒಂದೆಡೆ ನೆಲೆನಿಂತು ಬದುಕಲು ಆರಂಭಿಸಿದಾಗ ಪರಿಸರದಲ್ಲಿ ಪಲ್ಲಟ ಶುರುವಾಯಿತು. ಅವನ ಪ್ರಗತಿಗೆ ಮೊದಲು ಬಲಿಯಾಗಿದ್ದು ಅರಣ್ಯಗಳು! ಅತಿಹೆಚ್ಚು ಬಗೆಯ ಜೀವಿಗಳನ್ನು ಪೋಷಿಸುವ ಮಾತೃಶಕ್ತಿ ಅರಣ್ಯಗಳಿಗೆ ಇದೆ. ಪ್ರಸ್ತುತ ಅರಣ್ಯಗಳು ದ್ವೀಪ ಸ್ವರೂಪ ಪಡೆದುಕೊಂಡಿವೆ. ಒಂದು ಕಾಡಿನಿಂದ ಮತ್ತೊಂದು ಕಾಡಿಗೆ ಸಂಪರ್ಕವೇ ಇಲ್ಲದಂತಾಗಿದೆ. ಪುನರ್ವಸತಿ ಹೆಸರಿನಡಿ ಅರಣ್ಯ ಭೂಮಿ ಹಾಗೂ ಕಾಡಂಚಿನ ಸಾವಿರಾರು ಎಕರೆ ಕಂದಾಯ ಜಮೀನನ್ನು ಸಂತ್ರಸ್ತರಿಗೆ ಹಂಚಲಾಗಿದೆ.

ಕಾಡಂಚಿನಲ್ಲಿ ವನ್ಯಜೀವಿಗಳ ಉಪಟಳ ಸಹಜ. ತಮಗೆ ಹಂಚಿಕೆಯಾದ ಜಮೀನಿನಲ್ಲಿ ಪುನರ್ವಸತಿ ಪಡೆದವರು ಬೇಸಾಯ ಮಾಡುವುದು ಕಡಿಮೆ. ರಾಜ್ಯದಲ್ಲಿ ಹಲವು ದಶಕಗಳಿಂದಲೂ ಇಂತಹ ಸಾವಿರಾರು ಎಕರೆ ಕಂದಾಯ ಜಮೀನು ಅನುಪಯುಕ್ತವಾಗಿದೆ. ಇಂತಹ ಜಮೀನುಗಳಿಂದ ಜನರಿಗೂ ಉಪಯೋಗವಿಲ್ಲ. ದಶಕಗಳ ಹಿಂದೆ ಈ ಜಮೀನುಗಳು ವನ್ಯಜೀವಿಗಳ ಸಂಚಾರಕ್ಕೆ ಮುಖ್ಯ ಪಥವಾಗಿದ್ದವು. ಸರ್ಕಾರಗಳ ಅವೈಜ್ಞಾನಿಕ ಕ್ರಮಗಳಿಂದ ಕಾರಿಡಾರ್‌ ಪ್ರದೇಶ ಪುನರ್ವಸತಿ ರೂಪದಲ್ಲಿ ಹರಿದು ಹಂಚಿಹೋಗಿದೆ.

ಇದಕ್ಕೆ ಕಣಿಯನಪುರ– ಮಾಯಾರ್‌ ಆನೆ ಮೊಗಸಾಲೆ ವ್ಯಾಪ್ತಿಯ ಕಂದಾಯ ಜಮೀನು ನಿದರ್ಶನವಾಗಿದೆ. ಸಾವಿರಾರು ಎಕರೆ ಕಂದಾಯ ಜಮೀನು ಅರಣ್ಯಗಳು ಬೆಸೆಯಲು ಅಡ್ಡಿಯಾಗಿವೆ. ವನ್ಯಜೀವಿಗಳ ಮಹತ್ವದ ಬಗ್ಗೆ ಜನರಿಂದ ಮನವರಿಕೆ ಮಾಡಿಕೊಟ್ಟು ಸ್ವಯಂಪ್ರೇರಿತವಾಗಿ ಇಂತಹ ಕಂದಾಯ ಜಮೀನು ಪಡೆದು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆದರೆ ಕಾರಿಡಾರ್‌ಗಳು ಹಾಗೂ ವನ್ಯಜೀವಿಗಳ ಸಂರಕ್ಷಣೆ ಸಾಧ್ಯ.

Post Comments (+)