ಆಯೋಗಕ್ಕೆ ಮೋದಿ ಸವಾಲು

ಆಸನಸೊಲ್/ಬಾಂಕುಡಾ (ಪಶ್ಚಿಮ ಬಂಗಾಳ) (ಪಿಟಿಐ): ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ ವರ್ತಿಸುತ್ತಿಲ್ಲ ಎಂದು ಗಂಭೀರವಾಗಿ ಆರೋಪಿಸಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ಈ ಆರೋಪದಲ್ಲಿ ತಪ್ಪಿದ್ದರೆ ತಮ್ಮ ವಿರುದ್ಧ ಕ್ರಮಕೈಗೊಳ್ಳಿ ಎಂದು ಸವಾಲು ಹಾಕಿದರು.
ಪಶ್ಚಿಮ ಬಂಗಾಳ, ಬಿಹಾರ ಮತ್ತು ಉತ್ತರ ಪ್ರದೇಶದ ಪಶ್ಚಿಮ ಭಾಗಗಳಲ್ಲಿ ಚುನಾವಣಾ ಸಂದರ್ಭದಲ್ಲಿ ನಡೆದ ಹಿಂಸಾಚಾರ, ಅಕ್ರಮ ಆರೋಪ ಕುರಿತ ದೂರುಗಳ ಬಗ್ಗೆ ಚುನಾವಣಾ ಆಯೋಗದ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪಿಸಿ ಈ ಆರೋಪ ಮಾಡಿದರು.
ಆಸನಸೊಲ್ನಲ್ಲಿ ಭಾನುವಾರ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ‘ನೀವೇಕೆ (ಚುನಾವಣಾ ಆಯೋಗ) ಕ್ರಮ ಕೈಗೊಳ್ಳುತ್ತಿಲ್ಲ? ನಿಮ್ಮ ಉದ್ದೇಶವೇನು? ನಾನು ಹೇಳುತ್ತಿರುವುದರಲ್ಲಿ ತಪ್ಪಿದ್ದರೆ ನನ್ನ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಿ’ ಎಂದರು.
ಏ.30ರಂದು ಗುಜರಾತ್ನ ಗಾಂಧಿ-ನಗರದಲ್ಲಿ ಮತದಾನ ಮಾಡಿದ ಬಳಿಕ ಮತಗಟ್ಟೆ ಆವರಣದಲ್ಲೇ ಪಕ್ಷದ ಚಿಹ್ನೆ ಪ್ರದರ್ಶಿಸಿ, ಪತ್ರಿಕಾಗೋಷ್ಠಿ ನಡೆಸಿದ ಆರೋಪದ ಮೇಲೆ ಮೋದಿ ಅವರ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಪ್ರಕರಣ ದಾಖಲಾಗಿದೆ.
‘ನಿಷ್ಪಕ್ಷಪಾತ ಚುನಾವಣೆ ನಡೆಸುವುದು ಆಯೋಗದ ಜವಾಬ್ದಾರಿ. ಆದರೆ, ಇದನ್ನು ಖಾತರಿಗೊಳಿಸಲು ಆಯೋಗ ವಿಫಲವಾಗಿದೆ. ಪಕ್ಷದ ಅಭ್ಯರ್ಥಿ ಬಾಬುಲ್ ಸುಪ್ರಿಯೊ ಅವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ’ ಎಂದು ಮೋದಿ ದೂರಿದರು.
‘ಪ್ರಜಾತಂತ್ರ ವ್ಯವಸ್ಥೆಯಲ್ಲಿ ಈ ರೀತಿ ಆಗಬಾರದು. ಏ.30ರಂದು ಎಷ್ಟು ತಪ್ಪುಗಳು ನಡೆದವು ಎಂಬುದು ಗೊತ್ತಿದೆ. ಇದು ಇನ್ನೂ ಮುಂದುವರಿಯಬೇಕೇ? ಎಂದು ಪ್ರಶ್ನಿಸಿದರು.
ಮಮತಾಗೆ ಮೋದಿ ಪ್ರತ್ಯುತ್ತರ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ವಿರುದ್ಧ ಮಾಡಿರುವ ಟೀಕೆಗೆ ಬಾಂಕುಡಾದಲ್ಲಿ ನಡೆದ ರ್್ಯಾಲಿಯಲ್ಲಿ ತೀಕ್ಷ್ಣವಾಗಿ ಪ್ರತ್ಯುತ್ತರ ನೀಡಿದ ಮೋದಿ, ‘ನಿಜವಾದ ಹುಲಿಗಳಾಗಿದ್ದರೆ ಶಾರದಾ ಚಿಟ್ ಫಂಡ್ ಹಗರಣದ ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸಿ ಬಡವರಿಗೆ ಹಣ ವಾಪಸು ಕೊಡಿಸುತ್ತಿದ್ದರು’ ಎಂದರು.
ಮೂರು ದಿನಗಳ ಹಿಂದೆ ಮಮತಾ ಬ್ಯಾನರ್ಜಿ ಅವರು ‘ಕಾಗದದ ಹುಲಿಗೂ ನಿಜವಾದ ಪಟ್ಟೆ ಹುಲಿಗೂ ವ್ಯತ್ಯಾಸವಿದೆ’ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು.
‘ದೀದಿ (ಮಮತಾ ಬ್ಯಾನರ್ಜಿ) ಅವರು ಕಾಗದದ ಹುಲಿಗೆ ಹೆದರುತ್ತಿರುವುದು ಆಶ್ಚರ್ಯ! ಈ ಕಾಗದದ ಹುಲಿಯಿಂದ ತಮಗೆ ಹಾನಿಯಾಗುತ್ತದೆ ಎಂದೇನಾದರೂ ದಿಗಿಲುಗೊಂಡಿರುವರೇ? ನಿಜವಾದ ಹುಲಿಯೇ ಅವರ ಮುಂದೆ ಬಂದರೆ ದೀದಿ ಪಾಡೇನು’ ಎಂದು ಮೊನಚು ಪ್ರಶ್ನೆಗಳನ್ನು ಹಾಕಿದ ಹಾಕಿದ ಮೋದಿ, ‘ಯುವ ಸಮುದಾಯ ಈ ರಾಜ್ಯದ ನಿಜವಾದ ಹುಲಿಗಳು’ ಎಂದರು.
ಆಯೋಗ ತಿರುಗೇಟು (ಕೋಲ್ಕತ್ತ) (ಐಎಎನ್ಎಸ್): ಪಶ್ಚಿಮ ಬಂಗಾಳದಲ್ಲಿ ಏ.30ರಂದು ನಡೆದ ಮತದಾನದಲ್ಲಿ ಸಾಕಷ್ಟು ಅಕ್ರಮ ನಡೆದಿರುವುದಾಗಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಆರೋಪಿಸಿರುವುದಕ್ಕೆ ಚುನಾವಣಾ ಆಯೋಗ ನಯದಿಂದಲೇ ತಿರುಗೇಟು ನೀಡಿದೆ.
‘ನ್ಯಾಯಸಮ್ಮತ, ಮುಕ್ತ ಹಾಗೂ ಶಾಂತಿಯುತ ಚುನಾವಣೆ ನಡೆಸುವ ತನ್ನ ನಿಲುವಿಗೆ ಆಯೋಗ ಬದ್ಧವಾಗಿದೆ’ ಎಂದು ಪಶ್ಚಿಮಬಂಗಾಳದ ಮುಖ್ಯ ಚುನಾವಣಾ ಅಧಿಕಾರಿ ಸುನಿಲ್ ಗುಪ್ತಾ ಭಾನುವಾರ ಇಲ್ಲಿ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಯಾವುದೇ ಮತಗಟ್ಟೆ ವಶ, ಮತದಾರರಿಗೆ ತೊಂದರೆ ಅಥವಾ ಇತರ ಕಾನೂನುಬಾಹಿತ ಚಟುವಟಿಕೆಗಳ ಮೂಲಕ ಮತದಾನ ಪ್ರಕ್ರಿಯೆಗೆ ಅಡ್ಡಿಪಡಿಸಿದ ವರದಿಗಳು ಬಂದಿಲ್ಲ ಎಂದು ಅವರು ಹೇಳಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.